ಹಾಗೇ ನೋಡಿದ್ರೆ ತಕ್ಷಣ ಏನೂ ಗೊತ್ತಾಗೋಲ್ಲ-
ಜರೂರು ಬೇಕು ಒಂದು ಸೂಕ್ಷ್ಮಾವಲೋಕನ
ಒಂದು ಕನ್ನಡಕ + ಜೊತೆಗೆ ಅಂತರ್ದೃಷ್ಟಿಯು
ಪ್ಲಸ್ಸು-ಮಜಬೂತಾದ ಜೀವನ-ದರ್ಶನವೂ
ಇದೇ ರಸ್ತೆ ಏಳನೇ ಮನೆಯಲ್ಲೇ ಮೊನ್ನೆ ಹೆರಿಗೆ-
ಅದೇ ದಿನ ಹೆಚ್ಚು ಕಡಿಮೆ ಅದೇ ಗಳಿಗೆ-
ಅದೇ ಮನೆ ಎದುರಿಗೇನೇ-ಆಯಿತೊಂದು ಸಾವು ;
ಇದೀಗ ಕನ್ನಡಕ + ಇತ್ಯಾದಿ ತಾವು ಧರಿಸಿ-ಭರಿಸಬೇಕು
ನೋಡಿ…ನೋಡೀ…ನೋಡಿದಷ್ಟೂ ಪರದೆಗಳೇ
ಒಂದರ ಬೆನ್ನ ಹಿಂದೆ ಇನ್ನೊಂದು-ಅದರ ಹಿಂದೆ ?
ಆ…ಅದರ ಹಿಂದೆ ಇನ್ನೊಂದು-ಇನ್ನೊಂದರ್ಹಿಂದೆ !
ತೊಗೋಳಿ…ಮತ್ತೆ…ಮತ್ತೊಂದು-ಮಗದೊಂದು
ಅರೆರೆ…ಇದೇನ್ರಿ ! ಇಗೋ ನೋಡಿ ಅದರ ಹಿಂದೆ
ಇದು ಮುಗಿಯಲ್ಲ-ಇನ್ನೊಂದಿದೆ ಅದರೊಳಗಡೆಯೆ
ಒಳಗಡೆಯೇನು-ಒಂದೊಳಕೋಣೆ-ಮಂಚದ ಮೇಲೆ ?
ಮಲಗಿಬಿಟ್ಟಿದಾರೆ-ಏಳೋದ ಮರೆತು-ಚಿರಶಾಂತಿಯೇ !
ಆಹಾ ನೋಡಿ…ಆ…ಆ…ಒಂದು ಕಣ್ಣು-ಹೌದು-ಕಣ್ಣು !!
ಎಂಟೂ+ ದಶಕ-ಎಷ್ಟೋಂದು ಕಾಣ್ಕೆ-ಒಂದದ್ಭುತವು
ಆ…ಕಣ್ಣಿನೊಳಗೆ ಏನು ಮಹತ್ತು…ಕಂಡುಬಿಡ್ತು ?
ಇದೇನಿದು!…’ಬಿಡ್ತು’–ಅನ್ನಿ–ಹಾಗೆ ಹೇಳಬಾರ್ದು !
ಅದೇ…ಆ….ಅವರು ಪರಂಧಾಮಯ್ಯನೋರು !
ಈಗಾ- ‘ಪರಂಧಾಮ’-ನ್ನೇ ಸೇರಿಬಿಟ್ಟೋರು !
ಸ್ವಲ್ಪವೇ ಮುಂಚೆ-ಪರಂಧಾಮವನ್ನೈದಿದೋರು
ಹಾಗೆಲ್ಲಾ ನಗಬಾರದೂ ! ಎರಡೂ ಕಣ್ಣ ಮುಚ್ಬೇಕಿತ್ತು !
ಮುಚ್ಚೋಕ್ಮುಂಚೆ ಏನ್ನೋಡ್ತಿದ್ರು / ಕೇಳ್ಬಾರದೇನೂ ?
ನಗ್ಬೇಡ !–please–ಅದನ್ನವರ್ನೇ ಕೇಳ್ಬೇಕು !
ಪರಂದೂ ಮಾಮ ಬಹಳ / ಶ್ಯಾನೇ… ನೋಡ್ದೋರು
ನೋಡಿದ್ದೆಲ್ಲಾ ಯಾರಿಗೂ ಏನೂ ಹೇಳ್ದೆ ಹೋಗಿಬಿಟ್ಟರು
ಒಳಗೆ ನೋಡು–ಏನಾದ್ರೂ ಬರೆದಿಟ್ಟಿದಾರೇನು
ಅವರ ಕಣ್ಣೊಳಗಲ್ಲಾ-ಹಿಂದೆ-ಹಿಂದಿನ ರೂಮೊಳಗೆ !
ಇರಲಿಬಿಡು…ನೋಡಿದ್ದೆಲ್ಲಾ ಬರೆಯಕ್ಕಾಗಿರಲ್ಲಾ
ಬರೆದಿರೋರೆಲ್ಲಾ ಪೂರ್ತಿ ನೋಡಿರೋದಿಲ್ಲಾ
ಏನೂ ನೋಡದೇ ಇರೋರೂ ಇದ್ದಾರಲ್ಲಾ
ಜೊತೆಗೆ ಏನೂ ಬರೀದೇ ಇರೋರೂ ಇದ್ದಾರಲ್ಲಾ
ನೋಡ್ದೆ–ಬರೀದೆ…ಬರಿದೆ ಸುಮ್ಮನಿದ್ದಾರಲ್ಲಾ
ನೋಡ್ಲೇ ಬೇಕಾ…ಬರೆಯದೆ…ಸುಮ್ಮನಿರದೆ
ನೋಡಿ…ಬರೆದು..ಹಾಗೇ…ಸುಮ್ಮನಿರಬಾರದೇ
ಏನೂ ಮಾಡದೆ ಸುಮ್ನಿದ್ದು ಹೋಗ್ಬಾರದೇ ?
ಪರಂಧಾಮಯ್ಯನೋರ ವಿಷಯ ಬಿಟ್ಟು ಬಿಡಿ
ಇದ್ರು-ಇನ್ನಿಲ್ಲ-ಈಗ-“ಬಿಟ್ಟ ಕಣ್ಣು-ತೆರೆದ ಬಾಯಿ”
ಬದುಕಿನ ಪರದೆ-ಪದರಗಳ ಲೆಕ್ಕ ಯಾರಿಗ್ಗೊತ್ರಿ ?
ಸಿಗೋದಿಲ್ಲ… ಬರಿಗಣ್ಣಿಗೆ…ಒಟ್ಟದರ ಮೊತ್ತ
ಲೆಕ್ಕ ನಿಲ್ಲೋಲ್ಲಾ-ಏನಿದೆ…ಏನಿದೆ…ಅದರ್ಹಿಂದೇನಿದೆ
ಹಿಂದೆಯಿದೆ ಖಂಡಿತಾ-ಏನೂ ?ಇನ್ನೊಂದು-‘ಹಿಂದೆ’
it is a-“wall”-which can be seen through
& through…forever but unseen enough
‘ಮೆಟಾಫಿಸಿಕ್ಸ್’-ಒಂದು ಪದ-ಅದಲ್ಲಿದೆಯೇ-?
ಈವರೆಗೂ ಕಾಣದೋನೂ ಅಲ್ಲಿರಬಹುದೇ -?
ಹೋದ್ವಾರದ ಪ್ರವಚನದ ತತ್ವ ಅಲ್ಲಿರಬಹುದೇನ್ರಿ-?
ಇಲ್ಲಿ ಮುಗಿದ ಹೋದ ಜೀವಗಳೆಲ್ಲವುಗಳ ವಿಳಾಸ-
ಈ ಪರದೆ-ಪದರಗಳ ಹಿಂದೆ !!!-“ಅವನ-ಸದ್ವಿಲಾಸ” !
ಪರಂಧಾಮಯ್ಯನೋರು ಆ-“ಅವನನ್ನು”-ಕಂಡಿದ್ದರೇ..
ಹುಡುಕ್ತಿದ್ದದ್ದು ಸಿಕ್ಕಿಬಿಟ್ಟು ಕೂಡಲೇ-ಹೋಗ್ಬಿಟ್ಟರೇ!!
ಪದ-ಪದರ-ಪರದ(ಪರದೆ)-ಗಳ ಹಿಂದೆ ಹೋದರೆ-
-ನೋಡ್ರಿ ! ಕಳ್ಕೊಂಡೀರಿ ನಿಮ್ಮ ಮನೆಯ ವಿಳಾಸವೇ !!
ಕಂಡದ್ದರ ಹಿಂದೆ…ಅದರ್ಹಿಂದೆ…ಇನ್ನದರಹಿಂದೆ-
ಏನಾದರೂ ಒಂದಲ್ಲ ಒಂದು ಇದ್ದಿರಬಹುದಲ್ಲವೇನ್ರೀ
ಸದ್ಯಕ್ಕೀಗ ಆ…ಹೂ…ಆ-“ಒಂದಕ್ಕೆ”-ನೋಡಿ-ನಿನ್ತುಬಿಟ್ರು
ಒಂದನ್ನು ಒಡೀತಾ ಹೋಗಿ…ಮತ್ತೆ ಆ ಚೂರನ್ನು-
-ಚೂರಾದ ಮಗದೊಂದು ಚೂರನ್ನೂ ಇನ್ನೊಂದು-
-ಸಣ್ಣ… ಅತಿ…ಸಣ್ಣ…ಚೂರು-ಅಣುವಷ್ಟು ಸೈಜು !
ಇನ್ನದರ ಚೂರಿಲ್ಲ-“ಅದು ಚೈತನ್ಯ”-ಅಂದೇ ಬಿಟ್ಟರು !!!
ದಿವಂಗತ ಪರಂಧಾಮಯ್ಯನೋರು ಅದ ಕಂಡಿದ್ದರ ?
ದಿವಂಗತರಾಗೋರೆಲ್ಲಾ-“ಆ…ಅದ”-ಕಂಡೇ ಹೋಗಿರ್ತಾರ-
ನೋಡೀ ಸರ್!–ಹೆಚ್ಚು–“ಕಣ್ಣಲ್ಲೇ ಪ್ರಾಣ ಹೋಗಿರೋರು”-!
ಸಾವೆಲ್ಲೇ ಆಗಲಿ…ಹೇಗೇ ಇರಲಿ…ಜನ ಒಂದೇ ಹೇಳೋದು-
“ಕಣ್ಣಲ್ಲಿ ಪ್ರಾಣ ಹೋಗಿದೆ”-ಯಥಾವತ್ ಸ್ಟೇಟ್-ಮೆಂಟು!
ಇದೆಲ್ಲವಿರಲಿ-ಆ-ನವಜಾತನ್ನ ನೋಡಕ್ಕೆ-ಓಡೋಡಿ ಬನ್ನಿ-
ಯಾವುದೇ ಮಗು ಎಲ್ಲೇ ಹುಟ್ಟಲಿ-ನೋಡೋದಕ್ಕೆ ಹೋಗಿ !!