ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಅರಿವೇ ಗುರು’

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು” ಎಂಬಂತೆ ಎಲ್ಲಾ ಮಕ್ಕಳಿಗೂ ಹೆತ್ತ ತಂದೆ ತಾಯಿಯೇ ಮೊದಲ ಗುರುವಿನ ಸ್ಥಾನವನ್ನು ತುಂಬಿರುತ್ತಾರೆ. ನಂತರ ಮನೆಯಲ್ಲಿರುವ ಇತರ ಸದಸ್ಯರು, ಅಂದರೆ ಅಣ್ಣ, ಅಕ್ಕ, ಅಜ್ಜ, ಅಜ್ಜಿ ಹೀಗೆ ಅಕ್ಷರ ಕಲಿಸಿದ ಹಾಗೂ ಸರಿ ತಪ್ಪು ತಿಳಿಸಿ ನಮ್ಮನ್ನು ತಿದ್ದಿದ ಪ್ರತಿಯೊಬ್ಬರೂ ನಮ್ಮ ಗುರುವಿನ ಸ್ಥಾನದಲ್ಲೇ ನಿಲ್ಲುತ್ತಾರೆ.

ನಮ್ಮ ಬಾಳಿನಲ್ಲಿ ಅಜ್ಞಾನದ ಅಂಧಕಾರವನ್ನು ತೊಡೆದು, ಜ್ಞಾನದ ಬೆಳಕನ್ನು ನೀಡುವ ಪ್ರತಿಯೊಬ್ಬರೂ ಕೂಡ ನಮ್ಮ ಗುರುವೇ ಆಗಿರುತ್ತಾರೆ. ಹಾಗೆಯೇ ನಮ್ಮ ಬದುಕಿನಲ್ಲಿ ಸರಿ ತಪ್ಪನ್ನು ಗುರುತಿಸಿ ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವ ಪ್ರತಿಯೊಬ್ಬ ವ್ಯಕ್ತಿ ಕೂಡ ನಮ್ಮ ಗುರುವೇ ಆಗಿರುತ್ತಾರೆ.

ತನಗೆ ನೋವಾದಾಗ ಜೋರಾಗಿ ಅತ್ತು, ಮರುಕ್ಷಣವೇ ಅದನ್ನು ಮರೆತು ಕೇಕೆ ಹಾಕಿ, ನಕ್ಕು ಮುಖ ಅರಳಿಸುವ ಪುಟ್ಟ ಮಗು, ನಮಗೆ ಬದುಕಿನಲ್ಲಿ ನೋವುಗಳನ್ನು ಮರೆತು ನಗುತ್ತಾ ಮುಂದೆ ಸಾಗಬೇಕು ಎಂದು ತಿಳಿಸುವ ಗುರು. ಹಾಗೆಯೇ ಸಾಗುತ್ತಿರುವ ಹಾದಿಯಲ್ಲಿ ದ್ವಂದ್ವಗಳು ಎದುರಾಗಿ, ಎತ್ತ ಸಾಗುವುದೆಂದು ತಿಳಿಯದೇ ನಿಂತಾಗ ದಾರಿ ತೋರಿಸುವ ಸ್ನೇಹಿತರು, ಇಲ್ಲವೇ ಪರಿಚಿತರು ಕೂಡ ನಮ್ಮ ಗುರುವಿನಂತೆ.

ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುವು ಕೂಡ ನಮಗೆ ಜೀವನದ ಮೌಲ್ಯವನ್ನು ಹೇಳಿಕೊಡುವ ಗುರು.ಪ್ರತಿ ದಿನ, ಪ್ರತಿ ಕ್ಷಣ, ನಾವು ಪ್ರಕೃತಿಯಿಂದ ಕಲಿಯುವ ವಿಚಾರ ಇದ್ದೇ ಇರುತ್ತದೆ. ಪ್ರಕೃತಿ ಹೇಗೆ ಯಾವುದೇ ಭೇಧಭಾವವಿಲ್ಲದೆ, ಯಾವುದೇ ಹಂಗಿಲ್ಲದೇ, ಮೋಹಕ್ಕೆ ಒಳಗಾಗದೆ ತನ್ನ ಪಾಡಿಗೆ ತಾನು ತನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿರುತ್ತದೆಯೋ, ಹಾಗೆಯೇ ನಾವು ಕೂಡ, ಪ್ರತಿಯೊಂದಕ್ಕೂ ಮನಸ್ಸನ್ನು ಕೆಡಿಸಿಕೊಳ್ಳದೇ, ಜೀವಿಸುವ ಕಲೆಯನ್ನು ಪ್ರಕೃತಿಯಿಂದ ಕಲಿಯಬೇಕು. ಪ್ರಕೃತಿಯಲ್ಲಿರುವ ಪ್ರತಿ ವಸ್ತುವಿನಲ್ಲೂ ನಮಗೆ ಬದುಕಿನ ಪಾಠ ಇರುತ್ತದೆ.

ಎಷ್ಟೇ ಅಡೆತಡೆಗಳು ಬಂದರೂ, ಅಣೆಕಟ್ಟನ್ನೇ ಕಟ್ಟಿದರೂ, ನೀರು ತನ್ನ ಹರಿಯುವ ಗುಣವನ್ನು ಹೇಗೆ ನಿಲ್ಲಿಸದೆಯೇ ಸಮುದ್ರವನ್ನು ಸೇರುವವರೆಗೂ ಹರಿಯುತ್ತಲೇ ಇರುತ್ತದೆಯೋ, ಹಾಗೆಯೇ ನಮ್ಮ ಬದುಕಿನಲ್ಲಿ ಕಷ್ಟನಷ್ಟಗಳ ಅಡೆತಡೆ ಬಂದರೂ, ನಾವು ನದಿಯಂತೆ ಸಾಗಿ ಗುರಿ ಎಂಬ ಸಮುದ್ರವನ್ನು ಸೇರಬೇಕು.
ಹೀಗೆ ಪ್ರತಿಯೊಂದರಲ್ಲೂ ನಾವು ಗುರುವನ್ನು ಕಾಣುವ, ಪಾಠವನ್ನು ಕಲಿಯುವ ಸಂಸ್ಕಾರವಿದ್ದಾಗ ಕಲಿಕೆಗೆ ಇತಿಮಿತಿ ಇರುವುದಿಲ್ಲ. ಹಾಗೆಯೇ ಎಲ್ಲದರೊಳಗೂ ಪಾಠವನ್ನು ಕಲಿಯುವ ಮನಸ್ಸು, ಗುರುವನ್ನು ಕಾಣುವ ಭಕ್ತಿ ನಮಗಿರಬೇಕು ಅಷ್ಟೇ.

ಗುರು ತೋರಿದ ದಾರಿಯಲ್ಲಿ ಸಾಗಿ ಅದರಲ್ಲಿ ಯಶಸ್ಸು ಸಿಕ್ಕಾಗ, ದಾರಿ ತೋರಿದ ಗುರುವನ್ನು ಮರೆಯದೇ ಇರುವವರೇ ನಿಜವಾದ ಶಿಷ್ಯರು. ಒಳ್ಳೆಯ ಕೆಲಸ, ಕೆಟ್ಟ ಕೆಲಸ, ಇತ್ಯಾದಿ ಎಲ್ಲಾ ಕೆಲಸಗಳಿಗೂ ಒಬ್ಬ ಗುರು ಇರುತ್ತಾನೆ. ಕಳ್ಳರಿಗೂ ಒಬ್ಬ ಗುರು ಇರುತ್ತಾನೆ, ಉತ್ತಮವಾದ ಗುರು, ಉತ್ತಮ ಹಾದಿಯನ್ನು ತೋರಿಸಿದರೆ, ಕೆಟ್ಟ ಗುರು ಕೆಟ್ಟ ದಾರಿಯನ್ನು ತೋರಿಸುತ್ತಾನೆ. ಪರಿಣಾಮ ಕೆಟ್ಟದಾಗಿಯೇ ಇರುತ್ತದೆ. ಹಾಗಾಗಿ ನಾವು ಸರಿಯಾದ ಗುರುವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಮಗೆ “ಅರಿವೇ ನಿಜವಾದ ಗುರು”. ಏಕೆಂದರೆ ಒಳ್ಳೆಯ ಹಾಗೂ ಕೆಟ್ಟದರ ಅರಿವು ನಮಗಿದ್ದರೆ ನಾವು ಒಳ್ಳೆಯ ಗುರುವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ಒಳ್ಳೆಯ ಹಾದಿಯಲ್ಲೇ ಸಾಗುತ್ತಾ, ಒಳ್ಳೆಯ ಗುರಿ ಮುಟ್ಟುತ್ತೇವೆ. ಅಂತಹ ಸಂಸ್ಕಾರ ನಮ್ಮ ಸುತ್ತ ಮುತ್ತಲ ಪರಿಸರದಿಂದ ಬರುತ್ತದೆ. ಹಾಗಾಗಿ ಗುರು ಎಂದರೆ ಅವರು ಕೇವಲ ನಾಲ್ಕು ಅಕ್ಷರಗಳನ್ನು ಹೇಳಿಕೊಡುವ ವ್ಯಕ್ತಿಯಾಗಿರದೇ, ಜೀವನದ ಮೌಲ್ಯ ಹಾಗೂ ಸರಿಯಾಗಿ ಬದುಕುವ ದಾರಿಯನ್ನು ಹೇಳಿಕೊಡುವ ಪ್ರತಿಯೊಬ್ಬರೂ ನಮಗೆ ಗುರುವಿನ ಸ್ಥಾನದಲ್ಲೇ ನಿಲ್ಲುತ್ತಾರೆ. ಅಂತಹಾ ಗುರುವಿಗೆ ಸದಾ ಭಕ್ತಿಯಿಂದಲಿ ನಮಿಸೋಣ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop