ಸವಿತಾ ನಾಯ್ಕ ಮುಂಡಳ್ಳಿ ಅವರು ಬರೆದ ಕವಿತೆ ‘ದಾಳ’

ಯಾರೋ ಉರುಳಿಸಿದ ದಾಳಕೆ
ಬಲಿಯಾಗದಿರು ಮರುಳೇ
ಬೀಸಿ ಎಸೆದ ದಾರ ಸುತ್ತಿ
ತಿರುಗಿಸಿತು ಗರಗರನೆ ಎತ್ತಿ

ಅತೃಪ್ತ ಮನಸ್ಸುಗಳಿಗೆ
ದಾಸನಾಗದಿರು ಆಯುಧವಾಗಿ
ಸಿಪ್ಪೆಯಂತೆ ತಿಪ್ಪೆಗೆಸೆದು
ತಿರುಳ ತಿಂದು ತೇಗುವರು

ಸ್ವಂತಿಕೆ ಇಲ್ಲದ ಚಿತ್ತವೇ
ವಶವಾಗದಿರು ದುರುಳತೆಗೆ
ಶವವ ಸುತ್ತಿ ಎತ್ತಿದಂತೆ
ಸಾಗಿಸುತಿಹರು ಮಸಣದೆಡೆಗೆ

ಯಾರೋ ನೀಡಿದ ಅಣತಿಗೆ
ಮಾರಿಕೊಳ್ಳದಿರು ಮನವ
ವಿವೇಚನೆಯ ದಾರಿ ಮುಗಿದರೆ
ಎಂದಿಗೂ ಸಿಗದು ಆತ್ಮ ಸುಖ

ಅಸ್ಮಿತೆಯ ಹುಡುಕಾಟವೇ
ಹೆದರದಿರು ಜನಜಂಗುಳಿಗೆ
ಸದ್ದು ಗದ್ದಲಕೆ ಕಿವುಡಾದರೆ
ದಕ್ಕುವುದು ಸ್ಥಿತಪ್ರಜ್ಞತೆ

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
Ashok hosamani
28 July 2023 15:13

ಅದ್ಭುತ ಕವಿತೆ

0
    0
    Your Cart
    Your cart is emptyReturn to Shop