ಅವನು, ಅವಳ ಬರುವಿಕೆಗಾಗಿ, ತುಂಬ ಹೊತ್ತಿನಿಂದ ಕಾಯುತ್ತಿದ್ದ. ಚಡಪಡಿಕೆಯಿಂದಾಗಿ,ಶತಪಥ ತುಳಿಯುತ್ತಿದ್ದ. ಅವಳು ಬಂದ ಹಾಗೆ ಮಾಡುತ್ತಿದ್ದಳು, ಆದರೆ ಬರುತ್ತಿರಲಿಲ್ಲ. ಕರೆದರೆ, “ಈಗ ಬಂದೆ”, “ಇಗೋ ಬಂದೆ”, “ಬಂದೆ ಬಿಟ್ಟೆ” ಅನ್ನುತ್ತಿದ್ದಳು, ಆದರೆ ಬರುತ್ತಿರಲಿಲ್ಲ. ಹತ್ತಿರ, ಹತ್ತಿರ ಬರುತ್ತಿದ್ದಳು, ಆದರೆ ಕೈಯಿಟ್ಟರೆ, ಕೊಸರಿಕೊಂಡು ಹೋಗುತ್ತಿದ್ದಳು.
ರಮಿಸಲು ಹೋದರೆ ದೂರಾಗುತ್ತಿದ್ದಳು. ಮುದ್ದಿಸಲು ಸೆಳೆದರೆ, ನಾಚಿ ನೀರಾಗುತ್ತಿದ್ದಳು. ಕತ್ತಲೆಯಂತೆ ಅಸ್ಪಷ್ಟವಾಗುತ್ತಿದ್ದಳು. ಮಗ್ಗುಲಿಗೆ ಬರುತ್ತಿರಲಿಲ್ಲ,ಕೈ ಹತ್ತುತ್ತಲೇ ಇರಲಿಲ್ಲ. ಇಡಿಯಲು ಹೋದರೆ, ಎಲ್ಲೋ ಒಂದು ಕಡೆ ಸಿಕ್ಕಂತೆ ಮಾಡುತ್ತಿದ್ದಳು, ಆದರೆ ಪೂರ್ಣವಾಗಿ ದಕ್ಕುತ್ತಿರಲಿಲ್ಲ. ಕೂಡಿಸಿ ಬರೆಯಲು ಹೋದರೆ, ಸೋರಿ ಹೋಗುತ್ತಿದ್ದಳು. ಚಿತ್ರಿಸಲು ಹೋದರೆ, ಚಿತ್ತಾರ ಮೂಡುತ್ತಲೇ ಇರಲಿಲ್ಲ. ಅವಳ ಕನವರಿಕೆಯಲಿ, ಕಾತರಿಕೆಯಲ್ಲಿ ಅವನು ಕನಲಿ ಹೋಗಿದ್ದ.
ಅವನು ಮಾಡುವ ಪ್ರಯತ್ನವೆಲ್ಲ ಮಾಡಿ ಸೋತಿದ್ದ.ಪ್ರಸವಕ್ಕೆ ಕಾತರಿಸಿದ,ಬಸಿರು ಹೆಂಗಸಿನಂತಾಗಿದ್ದ. ಅವಳ ಗುಂಗಿನಲ್ಲೇ ನಿದ್ದೆಯ ಮಂಪರಿಗೆ ಜಾರಿದ್ದ.
ಮಧ್ಯರಾತ್ರಿ ಕಳೆಯುವ ವೇಳೆಗೆ ಏನೋ ಹೊಳೆದಂತಾಗಿ, ದಢಾರನೆ ಎದ್ದು ಕುಳಿತ. ಯಾವುದೋ ಹೊಳವು ಸಿಕ್ಕಂತಾಗಿತ್ತು. ಕತ್ತಲೆಯಲ್ಲಿಂದ ಎದ್ದು ದೀಪ ಮುಡಿಸಿದ. ಕರೆಯದೆ, ಕೈಚಾಚಿದ, ನಿರಮ್ಮಳವಾಗಿ ಬಂದು ತೆಕ್ಕೆಗೆ ಬಿದ್ದಳು. ಕಾಡಿಸದೆ, ಮುದ್ದಿಸಿಕೊಂಡಳು.
ಅವಳೇ ಕೈಹಿಡಿದು ದಾರಿ ತೋರಿಸುತ್ತಾ ಮುನ್ನೆಡೆಸಿದಳು.ಅವನು,ಅವಳನ್ನು ಹಿಂಬಾಲಿಸುತ್ತಾ ಹೋದ. ಕೈ ಇಟ್ಟಲೆಲ್ಲ ಪ್ರತಿಮೆಯಾಗ ತೊಡಗಿದಳು. ಬರೆದಿದ್ದೆಲ್ಲ ಉಪಮೆಯಾಗತೊಡಗಿತು. ಬೆಣ್ಣೆಯಂತೆ ಕರಗಲಾರಂಭಿಸಿದಳು. ಮಲ್ಲಿಗೆಯಂತೆ ಘಮಿಸಲಾರಂಭಿಸಿದಳು.
ಅವನೂ ಮುಂದುವರೆಯುತ್ತಲೇ ಹೋದ. ದೀರ್ಘ ಸಮಯದವರೆಗೆ ಕ್ರಿಯೆಯಲ್ಲಿಯೇ ಇದ್ದ, ಅಂತ್ಯದಲ್ಲಿ ಸ್ಕಲಿಸಿದ. ಪರಿ ಪೂರ್ಣ ತೃಪ್ತಿಗೊಂಡ. ತನ್ನೆದುರಿಗೆ, ತೆರೆದಿದ್ದ ಅವಳನ್ನೊಮ್ಮೆ ಅಡಿಯಿಂದ ಮುಡಿಯವರೆಗೂ ನೋಡಿದ. ಸಂತೋಷದಿಂದ ಮುಗುಳ್ನಕ್ಕ. ಅವಳನ್ನು ಅಲ್ಲಿಯೇ ಬಿಟ್ಟು, ಅವನು ನಿದ್ರೆಗೆ ಜಾರಿದ, ಬಿಡುಗಡೆಯ ಭಾವದೊಂದಿಗೆ. ಬೆಳಗಿನ ಜಾವಕ್ಕೆ ಯಾವಾಗಲೋ, ಅವಳು ಎದ್ದು ಹೋಗಿದ್ದಳು.
ಅಂದ ಹಾಗೆ, ಹೇಳುವುದು ಮರೆತ್ತಿದ್ದೆ, ಅವನು ಕವಿ, ಮತ್ತವಳು ಕವಿತೆ.