ಸುರೇಶ ಕಲಾಪ್ರಿಯಾ ಗರಗದಹಳ್ಳಿ ಅವರು ಬರೆದ ಕವಿತೆ ‘ನೇಸರ ಸೊಬಗು’

ಕತ್ತಲೋಡಿತು ಬೆಳಕು ಮೂಡಿತು
ದಿನಪ ಮೂಡಿದ ಸೂಚನೆ
ಮೃಗ ಖಗ ಸಕಲ ಕುಲಕೆ
ಹೊಟ್ಟೆ ತುಂಬುವ ಯೋಚನೆ

ರಂಗುರಂಗಿನ ಕಿರಣ ಹಾಸಿ
ಬೆಳಕ ನಗೆಯನು ಚೆಲ್ಲಿದ
ಜಗದ ಒಳಿತಿಗೆ ಬಂದನೆಂಬುದ
ಗ್ರಹಿಸಿ ಎದ್ದನು ಬಲ್ಲಿದ

ಸಸ್ಯಕಾಶಿಯ ಅಡುಗೆ ಕೋಣೆಗೆ
ಶಕ್ತಿ ತುಂಬಿದ ದಿನಕರ
ಸುಮವ ಸೋಕಿ ಸಿಹಿಯ ಹೀರಿ
ಗೆದ್ದು ಬೀಗಿದ ಮಧುಕರ

ಗೂಡ ತೊರೆದು ಪಕ್ಷಿ ಸಂಕುಲ
ಕಾಳ ಹೆಕ್ಕುತ ನಡೆಯಲು
ಕಾದು ಕುಳಿತ ಮರಿಗಳೆಲ್ಲಾ
ಬಾಯ ತೆರೆದು ಮುಕ್ಕಲು

ಆವಿ ಸೆಳೆದು ಮಳೆಯ ತರಲು
ಬೇಕೇ ಬೇಕು ನೇಸರ
ಭಾರಿ ಸೆಕೆಯು ಎನುವುದೊಂದೇ
ಎಲ್ಲರೊಳಗೂ ಬೇಸರ

ತಾನೂ ಬೆಳಗಿ ಸೋಮನನ್ನೂ
ಇರುಳ ಬೆಳಕಾಗಿ ಬೆಳಗಿಸಿ
ಮಕ್ಕಳೆಲ್ಲರ ಮಾಮ ಅವನು
ಎನುವ ಭಾವವ ಮೂಡಿಸಿ

ಜಗದ ಚಲನೆಗೆ ಬೇಕೇ ಬೇಕು
ಸೂರ್ಯನೆಂಬೋ ಗೆಳೆಯನು
ಇಲ್ಲವೆಂಬುದ ನೆನೆದರೊಮ್ಮೆ
ತಾಳಲಾಗದು ನೋವನು

ಚಂದಾದಾರರಾಗಿ
ವಿಭಾಗ
5 ಪ್ರತಿಕ್ರಿಯೆಗಳು
Inline Feedbacks
View all comments
ಸಂಜೀವ ಈಶಾಪೂರ
30 June 2023 11:35

ತುಂಬಾ ಸೊಗಸಾಗಿದೆ ಗೆಳೆಯ

ಸುರೇಶ ಕಲಾಪ್ರಿಯಾ
30 June 2023 14:02

ಧನ್ಯವಾದಗಳು ಗೆಳೆಯ

Shantalingappa Patil
30 June 2023 10:44

ಚೆನ್ನಾಗಿದೆ 👍

ಸುರೇಶ ಕಲಾಪ್ರಿಯಾ
30 June 2023 09:50

ಮೊಟ್ಟಮೊದಲಿಗೆ ಮಿಂಚುಳ್ಳಿ ಬಳಗಕ್ಕೆ ಧನ್ಯವಾದಗಳು.. ಮಿಂಚುಳ್ಳಿಯಲ್ಲಿ ಪ್ರಕಟವಾದ ಚೊಚ್ಚಲ ಬರಹವಿದು. ನನ್ನ ಕವಿತೆಗೆ ಸ್ಥಾನ ನೀಡಿದ ಮಿಂಚುಳ್ಳಿಗೆ ಆಭಾರಿ 🙏🙏

ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ
30 June 2023 09:31

ಚೆನ್ನಾಗಿದೆ. ಅಭಿನಂದನೆಗಳು.

0
    0
    Your Cart
    Your cart is emptyReturn to Shop