1
ಇಲ್ಲಿ
ಕೆಲಸವು ಮೈಮುರಿದು ಬಿದ್ದಿದೆ
ದುಡಿದಷ್ಟು ಹೊಟ್ಟೆ ತುಂಬತ್ತದೆ
ಬಣ್ಣ ಬಣ್ಣದ ಕನಸುಗಳು ಕಣ್ಣಿಗೆ
ಹೂತೋಟಗಳಿಂದ ಬಣ್ಣ ಬಣ್ಣದ ಸೌಧಗಳಿಂದ
ಕಣ್ಮನ ಸೆಳೆಯುವುದನ್ನು
ಯಾರು ಅಲ್ಲಗೆಳೆಯಲಾಗುವುದಿಲ್ಲ
ಇಲ್ಲಿ
ನೀರು ನಗುವುದನ್ನು
ಹಾಡು ಬೆವರುವುದನ್ನು
ಪ್ರೀತಿ ಬೆತ್ತಲಾಗುವುದನ್ನು
ಕತ್ತಲೆಯು ಕಳೆಗಟ್ಟುವುದನ್ನು
ಸಂತೋಷದ ಕ್ಷಣವೆಂದು ಕಲಿಸಲಾಗುತ್ತದೆ
ಇಲ್ಲಿ
ಸಮಯವು ಹಣದ ಮೈ ಪಡೆದಿದೆ
ಗುಣವು ಮಾನವನ ಹೃದಯ ಬಿಟ್ಟು
ಫ್ರಿಜ್ಜಿನಲ್ಲಿ ಇಟ್ಟು ಬಳಸುವ ಪದಾರ್ಥಗಳಂತೆ
ಅವಕಾಶಕ್ಕೆ ಆಹಾರವಾಗುತ್ತದೆ
ಬಯಕೆಯ ಒತ್ತಡ ಹೆಚ್ಚಾದಾಗ
ಕುಕ್ಕರಿನ ಹಾಗೆ ಕೂಗಿ ನೋವುಗಳ ಹೊರ ಹಾಕುವುದನ್ನು
ಟಿಕೆಟ್ ಖರೀದಿಸಿ ನೋಡುವ ಸಿನಿಮಾದಂತೆ ಪ್ರದರ್ಶಿಸಲಾಗುತ್ತದೆ
ಇಲ್ಲಿ
ಕಣ್ಣಿಗೆ ಗೊತ್ತು ನೀರಿನ ದುಃಖ
ರೆಪ್ಪೆಗಳಿಂದ ಮೈ ಸವರುವುದು
ತನ್ನ ಹೊಟ್ಟೆಯ ಮೇಲೆ ಸುರುವಿಕೊಂಡು
ದುಃಖ ಮರೆಸುವುದನ್ನು ತರಬೇತಿ ಕೊಡಿಸಲಾಗುತ್ತದೆ
ನಗುವೆಂಬ ಕನ್ಯೆಯೊಡನೆ ಸದಾ ಸರಸವಾಡುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ
2
ಇಲ್ಲಿ
ಹೆಣ್ಣಿನ ಸ್ವರಕ್ಕೆ ಸೋತ ಪುರುಷ
‘ಅಲೆಕ್ಸಾಳ’ ಮೊರೆ ಹೋಗಿದ್ದಾನೆ
ತಾನು ಹೇಳಿದ್ದನ್ನು ಕೇಳುವ ಹಾಗೆ
ತನಗೆ ಬೇಕಾದನ್ನು ಕೊಡುವ ಹಾಗೆ
ಸ್ವಿಚ್ ಒತ್ತಿದರೆ ಹೊಂತ್ತಿಕೊಳ್ಳುವ ಬಲ್ಬಿನ ಹಾಗೆ
ಕರುಳನ್ನು ಯಂತ್ರಕ್ಕೆ ಮಾರಿಕೊಂಡಿದ್ದಾನೆ
ಇಲ್ಲಿ
ಕಾರಾಗೃಹಗಳು, ಆಸ್ಪತ್ರೆಗಳು, ಹಾಸ್ಟೆಲ್ ಗಳಾಗಿ
ಮಾರ್ಪಾಡಾಗಿವೆ
ನೆಲ,ಬಟ್ಟೆ, ಕಟ್ಟಡ, ಪಾತ್ರೆ, ಕುರ್ಚಿ, ಮೇಜು ಮುಖವಾಡ, ದೇಹ ಎಲ್ಲವೂ
ಇಲ್ಲಿ ಬಾಡಿಗೆಗೆ ದೊರೆಯುತ್ತದೆ
ಇಲ್ಲಿ
ಬಾಂಧವ್ಯಗಳು ಬಾಣಲೆಯಲ್ಲಿ ಬೇಯುವ
ಫಾಸ್ಟ್ ಫುಡ್ ನ ಹಾಗೆ
ಬಯಕೆಯಾದಾಗ ಮಾತ್ರ ಬೆಸೆಯುವ
ಮೊಬೈಲ್ ಟವರ್ ಗಳ ಹಾಗೆ
ಗಾಣಕ್ಕೆ ಕಟ್ಟಿದ ಎತ್ತು ಸುತ್ತಿ ಸುತ್ತಿ ಸೋಲುವ ಹಾಗೆ
ಎಲ್ಲದಕ್ಕೂ ಸುಂಕ ಕಟ್ಟಿಸುತ್ತಾರೆ
ಮಾತ್ರೆಗಳಿಗೆ ಟಾನಿಕುಗಳಿಗೆ ಮನುಷ್ಯನನ್ನು ಬ್ಯಾಂಕುಗಳಾಗಿ ಮಾರ್ಪಡಿಸಲಾಗುತ್ತಿದೆ
ಇಲ್ಲಿ
ನಿಂತು ತಿನ್ನುವುದನ್ನು
ಬಟ್ಟೆ ನೋಡಿ ಯೋಗ್ಯತೆ ನಿರ್ಧರಿಸುವುದನ್ನು
ಮೊಬೈಲಿನ ಅಂಕಿಗಳಿಂದ ಹಣ ತುಂಬುವುದನ್ನು ಕದಿಯುವುದನ್ನು,
ಸುಳ್ಳು ಹೇಳುವುದನ್ನು
ಕಾನೂನು ಪಾಲಿಸುವ ಟ್ರಾಫಿಕ್ಕಿನ ವಾಹನಗಳಂತೆ
ಈರುಳ್ಳಿಗೆ ಸುತ್ತಿದ ಸಿಪ್ಪೆಗಳ ಹಾಗೆ ಮನಸ್ಸಿಗೆ ಅಂಟಿಸಲಾಗುತ್ತದೆ.
3
ಇಲ್ಲಿ
ರಸ್ತೆಗಳು ಚರಂಡಿಗಳು ಫುಟ್ಬಾತ್ ಗಳು
ವರ್ಷಕ್ಕೆ ನಾಲ್ಕು ಬಾರಿ
ಆಪರೇಷನ್ ಮಾಡಿಸಿಕೊಂಡು ನರಳುವುದನ್ನು
ಅಭ್ಯಾಸ ಮಾಡಿಸಲಾಗುತ್ತದೆ
ತಾಳ್ಮೆಯ ಪಾಠಗಳನ್ನು ರಸ್ತೆಗಳಲ್ಲಿ
ಶುಲ್ಕ ರಹಿತವಾಗಿ ಕಲಿಸಲಾಗುತ್ತದೆ
ಇಲ್ಲಿ
ವ್ಯಾಪಾರವೇ ಮನುಷ್ಯರ ಲಕ್ಷಣ
ಗೆರೆಮೀರಿದ ರಂಗೋಲಿಯ ಹಾಗೆ
ಮೈ ಮನದ ಗುರುತುಗಳು
ಜಾಹೀರಾತುಗಳಿಂದ ಹೊಸ ಹುಟ್ಟು ಪಡೆದು
ಅಡುಗೆಮನೆ ಸೇರುವ ವಸ್ತುಗಳ ಹಾಗೆ ಬಾಂಧವ್ಯಗಳನ್ನು ಟಿವಿ ಪರದೆಗಳಿಂದ
ಹೃದಯಕ್ಕೆ ದಾಟಿಸಲಾಗುತ್ತದೆ
ಇಲ್ಲಿ
ನಾಮಕರಣ, ಆರತಕ್ಷತೆ, ಮದುವೆ
ಮೊದಲ ರಾತ್ರಿ,ಕೊನೆ ಪ್ರಯಾಣ ಎಲ್ಲಾ ಸಿದ್ಧತೆಗಳನ್ನು
ಹೊರಗುತ್ತಿಗೆ ಕೊಡಲಾಗುತ್ತದೆ
ಸಂಸ್ಕೃತಿ ಟೈರಿಗೆ ತುಂಬಿದ ಗಾಳಿಯ ಹಾಗೆ
ಇವೆಂಟ್ ಮ್ಯಾನೇಜ್ಮೆಂಟ್ ಗಳೆಂಬ ಪ್ರಹಸನಗಳ ಪ್ರಾಕ್ಟೀಸ್ ಮಾಡಿಸಲಾಗುತ್ತದೆ
ಇಲ್ಲಿ
ಕೆಲಸವನ್ನು ಸಮಯಕ್ಕೆ ಅಡವಿಡಲಾಗಿದೆ
ಬೆಳಗಾದರೆ ಜೀತದಾಳುಗಳಾ ಲೆಂಕಿಗರ ಹಾಗೆ ಕಟ್ಟಡಗಳಿಂದ ಕಟ್ಟಡಗಳ ಕಡೆಗೆ ಓಡುತ್ತಾರೆ
ವಾಹನಗಳಿಗೆ ಮೈತುರುಕಿ, ಬೆವರಿನ ಸ್ನಾನದಲ್ಲಿ
ಸೆಂಟು ಸಿಂಪಡಿಸುವ ಹಬ್ಬಕ್ಕಾಗಿ
ನೋಟುಗಳನ್ನು ನೋಡುವ ತಿಂಗಳ ಜಾತ್ರೆಗಾಗಿ
ಅನ್ನದ ಹಾಡನ್ನು ಹಾಡಿಸಲಾಗುತ್ತದೆ.