ಅಹಂಕಾರದ ಮಾಯೆ ಈ ಕಾಯ,
ಗತ್ತಿಂದ ಬೀಗ ಬೇಡ,ತಾತ್ಕಾಲಿಕ ಈ ಕಾಯ,
ಅತಿ ಸೂಕ್ಷ್ಮ,ನಿಗೂಢ ಮಣ್ಣ ಈ ಕಾಯ.
ಮಣ್ಣ ಧೂಳು ಕಣ,ಈ ಕಾಯ,
ಜೋರು ಗಾಳಿ ಬೀಸಿದರೆ,ತಪ್ಪುವುದು ಆಯ,
ಮಣ್ಣಲ್ಲಿ ಮಣ್ಣಾಗುವ,ಧೂಳು ಕಣ ಕಾಯ,
ಮಣ್ಣಾಗುವ ಮುನ್ನ,ಎಚ್ಚರ ಕಣೋ ಕಾಯ,
ಇದ್ದಾಗ ನಾನು ನನ್ನದೆಂದು ಎದೆಗಪ್ಪುವರು,
ಸತ್ತಾಗ ಅತ್ತು ಎದೆಗಪ್ಪಿ,ಮಣ್ಣು ಮಾಡುವರು,
ಜೊತೆಗಾರೂ ಬರಲ್ಲ,ನಿನ್ನದೆಲ್ಲಾ ನಂದೆನ್ನುವರು,
ಮೂರು ದಿನ ಶೋಕವೆಂದು,ಮರೆವರು
ಕಾಯವೆಂಬ ಕೆಡುವ ಕ್ಷೀರಕೆ, ಪ್ರೀತಿ ಭಕ್ತಿಯ
ಹನಿ ಮಜ್ಜಿಗೆ,ಸೇರಿಸಿ,ಸೇವೆಯ ಕಡಗೋಲಿಂದ
ಆಧ್ಯಾತ್ಮವೆಂಬ ಬೆಣ್ಣೆಯನು ಕಡೆದು,
ಸಾಧನೆಯ ಬೆಂಕಿಯಲಿ ಸಂಸ್ಕರಸಿ,
ಕಾಯತ್ಮ ಶುದ್ಧಿಗೊಳಿಸೋ ಖಾದರ ಲಿಂಗ