ಡಾ.ಎಚ್.ಎಸ್. ಸತ್ಯನಾರಾಯಣ ಅವರು ಬರೆದ ವಿಮರ್ಶೆ ‘ಟ್ರಂಕು ತಟ್ಟೆ ಓದಿದಾಗ’

ಗುರುಪ್ರಸಾದ್ ಕಂಟಲಗೆರೆಯವರ ‘ಟ್ರಂಕು ತಟ್ಟೆ’ ಎಂಬ ಹಾಸ್ಟೆಲ್ ಅನುಭವದ ಕಥನ ಇತ್ತೀಚಿನ ಮುಖ್ಯ ಕೃತಿಗಳಲ್ಲೊಂದು. ದಟ್ಟವಾದ ತಾಜ ಮಾದರಿಯ ಅನುಭವಗಳಿಗೆ ಅಕ್ಷರದ ಪರಿವೇಷ ತೊಡಿಸಿರುವ ಈ ಪುಸ್ತಕ ದುಡಿಯುವ ವರ್ಗದವರ ಮಕ್ಕಳ ಅಕ್ಷರ ಕಲಿಕಾ ಪಯಣದ ಮುಳ್ಳಿನ ದಾರಿಯನ್ನೂ ನಮ್ಮ ಸಾರ್ವಜನಿಕ ಹಾಸ್ಟೆಲ್ಲುಗಳ ದುಃಸ್ಥಿತಿಯನ್ನೂ ಸಮಾಜ ಕಲ್ಯಾಣ ಇಲಾಖೆಯ ಕಡು ಬೇಜವಬ್ದಾರಿತನವನ್ನೂ ಒಟ್ಟಾಗಿ ಕಾಣಿಸುತ್ತ ಈಗಲೂ ಅಷ್ಟೇನೂ ಸುಧಾರಿಸದ ನಮ್ಮ ವಿದ್ಯಾರ್ಥಿನಿಲಯಗಳ ಸ್ಥಿತಿಯನ್ನು ಸಂಯಮದ ಭಾಷೆಯಲ್ಲಿ ನಿರೂಪಿಸುತ್ತದೆ. ಓದುವಾಗ ಎಲ್ಲಿಯೂ ಪ್ರಾಮಾಣಿಕತೆಗೆ ಭಂಗವೊದಗದ ಬಗೆಯಲ್ಲಿ ತಮ್ಮ ಅನುಭವಗಳನ್ನು ಹೇಳಲು ಗುರುಪ್ರಸಾದರಿಗೆ ಸಾಧ್ಯವಾಗಿರುವುದು ಬರಹ ಮತ್ತು ಬದುಕಿನ ಬಗೆಗಿನ ಅವರ ಪ್ರಾಮಾಣಿಕ ಕಾಳಜಿಯ ಫಲವೇ ಆಗಿರುವುದು ಈ ಕೃತಿಗೊಂದು ಘನತೆಯನ್ನು ಪ್ರಾಪ್ತವಾಗಿಸಿದೆ.

ಸಿದ್ಧಲಿಂಗಯ್ಯನವರ ಊರುಕೇರಿ ಪ್ರಕಟವಾದಾಗ ಅದು ಮರಾಠಿಯಲ್ಲಿ ಪ್ರಸಿದ್ಧವಾದ ಉಚಲ್ಯಾ, ಅಕ್ರಮನಾಶಿನಿ, ಬಲೂತ, ಉಪರಾ ಮುಂತಾದ ಆತ್ಮಕಥೆಗಳನ್ನು ಅನುಸರಿಸಿ ಬಂದ ಬರಹವೆಂದು ಎಸ್.ಎಲ್. ಭೈರಪ್ಪನವರು ವ್ಯಂಗ್ಯವಾಡಿದ್ದರು. ಆದರೆ ಊರುಕೇರಿಯ ಮೂರು ಭಾಗಗಳು ಕರ್ನಾಟಕದ ದಲಿತರ ಬದುಕಿನ ಘೋರ ಚರಿತ್ರೆಯನ್ನು, ಸಾಂಸ್ಕೃತಿಕ ಚರಿತ್ರೆಯನ್ನು ಗಾಢವಾಗಿ ದಾಖಲಿಸುವುದರೊಂದಿಗೆ ಊರು ಮತ್ತು ಕೇರಿಯ ನಡುವಿನ ಅಂತರವನ್ನೂ ತರತಮ ಭಾವವನ್ನೂ ಪರಿಣಾಮಕಾರಿಯಾಗಿ ಚಿತ್ರಿಸುವುದರ ಮುಖೇನ ಇದು ಕನ್ನಡದ ಕವಿಯೊಬ್ಬ ಮಾತ್ರ ಬರೆಯಬಲ್ಲ ವಿಶಿಷ್ಟವಾದ ಬರಹವೆನಿಸಿತು. ಈ ಮಾದರಿಯನ್ನು ಅನುಸರಿಸಿ ಕೆಲವು ಕೃತಿಗಳು ಪ್ರಕಟಗೊಂಡು ಯಶಸ್ಸನ್ನೂ ಸಾಧಿಸಿದವು. ಊರುಕೇರಿ ಕೇವಲ ಗೋಳಿನ ಕಥೆಯಾಗದೆ, ಬಡವರ ನಗುವಿನ ಶಕ್ತಿಯನ್ನು ನಾಡಿಗೆ ಕಾಣಿಸಿತು. ಗುರುಪ್ರಸಾದ್ ಕಂಟಲಗೆರೆಯವರ ಹಾಸ್ಟೆಲ್ ಅನುಭವ ಕಥನವನ್ನು ಓದುವಾಗ ನಮಗೆ ಮೊದಮೊದಲು ಸಿದ್ಧಲಿಂಗಯ್ಯನವರ ಬರಹದ ನೆನಪಾಗುವುದಾದರೂ ಅದರ ನೆರಳಿನಲ್ಲಿ ಈ ಕೃತಿ ರಚಿತಗೊಂಡಿಲ್ಲವೆಂಬುದು ಓದುಗನ ಅನುಭವಕ್ಕೆ ಬಹುಬೇಗ ಬರುತ್ತದೆ. ಹಾಸ್ಟೆಲಿನಲ್ಲಿ ಓದಿದ ಈ ಕೃತಿಯ ಲೇಖಕರೊಬ್ಬರ ಅನುಭವ ಇದಾಗಿರದೆ, ಒಂದು ಸಮುದಾಯದ ದನಿಯಾಗಿರುವುದೇ ಈ ಬರಹದ ಯಶಸ್ಸಿಗೆ ಮುಖ್ಯವಾದ ಬಲ ತಂದಿದೆ. ಸಮೂಹ ಜೀವನದ ವಿವರಗಳಿಂದ ರಚಿತಗೊಂಡ ಈ ವಿಶಿಷ್ಟವಾದ ಕೃತಿಯು ಸಾಮಾಜಿಕ ಚರಿತ್ರೆಯ ಭಾಗವಾಗಿಯೂ ಒಂದು ವಿಶೇಷ ಸ್ಥಾನವಿರುತ್ತದೆ.

‘ಟ್ರಂಕು ತಟ್ಟೆ’ಯು ಅದ್ಭುತ ರೂಪಕದ ತಲೆಬರಹ. ಯಾವ ಮೂಲಭೂತ ಸೌಕರ್ಯವೂ ಇಲ್ಲದ ಹಳ್ಳಿಯಿಂದ, ಅದರಲ್ಲೂ ಕಡುಬಡತನದ ಹಿನ್ನೆಲೆಯಿಂದ ಬಂದ ತಳಸಮುದಾಯದ ಅಕ್ಷರದ ಕನಸುಗಣ್ಣಿನ ಹುಡುಗನ ಪಯಣಕ್ಕೆ ಹಾಸ್ಟೆಲಿನಲ್ಲಿ ದೊರೆವ ಯಾರೋ ಬಳಸಿ ಬಿಟ್ಟುಹೋದ ಟ್ರಂಕು ಒಂದು ನೆಲೆಯಾಗಿ ಕಂಡರೆ, ಊಟಕ್ಕೆಂದು ದೊರೆವ ತಟ್ಟೆ ಶತಶತಮಾನಗಳ ಹಸಿವಿಗೆ ತುಸು ಸಾಂತ್ವನ ಹೇಳುವ ಸಂಗಾತಿಯಂತಿದೆ. ಅಕ್ಷರದ ಬೆಳಕಿನತ್ತ ಸಾಗುವ ಕನಸುಗಣ್ಣಿನ ಮುಗ್ಧ ಸ್ನಿಗ್ಧ ಮನದ ಬಾಲರ ಹಾಯಿದೋಣಿಯಾಗಿವೆ. ಈ ಟ್ರಂಕು-ತಟ್ಟೆಗಳೆರಡೂ ಹಿಂದಿನವರು ಬಳಸಿದ ಬಳುವಳಿ ಮಾತ್ರವಾಗದೆ, ಹಾಸ್ಟೆಲ್ ವಾಸದ ಬಳುವಳಿಯಾಗಿಯೂ ಕಾಣಿಸುವುದು ಸಹಜವೆನಿಸುತ್ತದೆ. ಸಮಾಜ, ಸರ್ಕಾರದ ಉಪೇಕ್ಷೆ ಎಷ್ಟು ಸಂಕಟಗಳ ಮೂಲಕ್ಕೆ ಕಾರಣವಾಗಿದೆಯೆಂಬುದು ಇಡೀ ಕೃತಿಯ ಸ್ಥಾಯಿಭಾವವಾಗಿದೆ. ಮತ್ತು ಅದನ್ನು ಮೀರುವ, ದಾಟುವ ಛಲಗಾರಿಕೆಯೊಂದು ಬಹುಬಗೆಯಲ್ಲಿ ಅಗೋಚರವಾಗಿ ಕೃತಿಯುದ್ದಕ್ಕೂ ಚಾಲ್ತಿಯಲ್ಲಿದೆ.

ಪ್ರಾಥಮಿಕ ಹಂತದಿಂದ ಕಾಲೇಜು ಹಂತದವರೆಗಿನ ವಿವಿಧ ಹಂತಗಳಲ್ಲಿ ವಿದ್ಯಾರ್ಥಿನಿಲಯದ ಚಿತ್ರಣಗಳನ್ನು ಲೇಖಕರು ದಾಖಲಿಸಿದ್ದಾರೆ. ಓದು ಮುಗಿಸಿ, ಕೆಲಸ ಪಡೆದು ಒಂದು ನೆಲೆ ಕಂಡ ಮೇಲೆ ಒಟ್ಟಾಗಿ ಹಾಸ್ಟೆಲ್ ಅನುಭವವನ್ನು ನೆನೆದು ನಗುವಾಗಿನ ಮನಸ್ಥಿತಿಯಲ್ಲಿ ಈ ಕಥನ ಹುಟ್ಟಿರುವುದರಿಂದ ಬಾಲ್ಯದಿಂದ ಅನುಭವಿಸಿದ ಎಲ್ಲ ಪರದಾಟಗಳು ಹಸಿಹಸಿಯಾಗಿ ಕಾಣಿಸಿಕೊಳ್ಳದೆ ಮಾಗಿ ಪಕ್ವಗೊಂಡು ದಾಖಲಾಗಿವೆ.ಅಪ್ಪನ ಕೈಹಿಡಿದುಕೊಂಡು ದನದ ಕೊಟ್ಟಿಗೆಯಂತಹ ಹಾಸ್ಟಿಲಿಗೆ ಹೊರಟ ಈ ಪಯಣ ಬಾಲ್ಯದಲ್ಲೇ ಕಂಡ ಅನೇಕ ಅಪಸವ್ಯಗಳನ್ನು ಕಾಣುತ್ತಾ ಸಾಗುತ್ತದೆ. ರಿಪೇರಿ ಮಾಡಿಸಿಕೊಟ್ಟ ಟ್ರಂಕು, ಮಾಸಲು ಹೊದಿಕೆ, ಅರೆಹೊಟ್ಟೆಯ ಊಟ, ಸ್ನಾನಕ್ಕಿರಲಿ ಉಂಡಾಗ ಕೈ ತೊಳೆಯಲೂ ನೀರಿಲ್ಲದ ಸ್ಥಿತಿ, ಮಲ ವಿಸರ್ಜನೆಯ ಪರದಾಟ, ಅಡುಗೆಯವರ, ವಾರ್ಡನ್ನರ ವರ್ತನೆ, ಸಹಪಾಠಿಗಳ, ಸಹಜೀವಿಗಳ ಮನೋಲೋಕ ಎಲ್ಲದರ ಚಿತ್ರಣವೂ ಸ್ತಬ್ಧಚಿತ್ರಗಳಂತೆ ಮೆರವಣಿಗೆ ಹೊರಡುತ್ತವೆ. ಹೊಸ ಕಟ್ಟಡಕ್ಕೆ ಹಾಸ್ಟೆಲ್ಲನ್ನು ವರ್ಗಾಯಿಸಿದಾಗ ಮಕ್ಕಳು ನೀರಿನ ಮನೆಯನ್ನು, ಶೌಚಾಲಯವನ್ನು ಕಂಡು, ಉಪಯೋಗಿಸುವ ಬಗೆಯಲ್ಲೇ ಅವುಗಳಿಲ್ಲದಾಗಿನ ಸ್ಥಿತಿಯಿಂದ ಹೊರಬಂದ ಖುಷಿಯನ್ನು ಲೇಖಕರು ಕಾಣಿಸಿರುವ ಬಗೆ ಸೊಗಸಾಗಿದೆ. ಮುಂದೆ ಗೆಳೆಯನೊಂದಿಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದ ಹಾಸ್ಟೆಲಿನಲ್ಲಿ ಹೊಟ್ಟೆತುಂಬ ಚಪಾತಿ ತಿನ್ನುವವರೆಗಿನ ಹಂತ ಕೂಡ ಆರಂಭದಿಂದ ಅಂತ್ಯದವರೆಗೆ ಸುಧಾರಿತ ಅನುಕ್ರಮವನ್ನು ಸೂಚಿಸುತ್ತದೆ.

ತಾನು ತನ್ನ ಸಮುದಾಯ ಸಮಾಜದ ಉಪೇಕ್ಷೆಯನ್ನು ಅನುಭವಿಸಿದ ಪರಿಯ ಕುರಿತಾದ ಸ್ವಾನುಕಂಪವಾಗಲೀ ಮರುಕ ವಿಷಾದಗಳಾಗಲೀ ಎಲ್ಲಿಯೂ ಈ ಕೃತಿಯಲ್ಲಿ ನೋಡಲಾರೆವು. ಬದಲಿಗೆ ಒಂದು ನಿಟ್ಟುಸಿರಿನ ಗಾಢ ವಿಷಾದದ ಪ್ರಬಂಧ ಧ್ವನಿಯನ್ನು ಓದುಗರೆದೆಗೆ ಹಾಯಿಸುವಲ್ಲಿ ಈ ಬರಹ ಯಶಸ್ವಿಯಾಗಿದೆ. ಏರುದನಿಯಿಲ್ಲದ ಪ್ರತಿಭಟನೆ ಕೂಡ ಮಂಜುಗಡ್ಡೆಯಿಂದ ಸಮಾಜದ ತಲೆಗೆ ಬಾರಿಸಿದಂತೆ ಕಾಣುತ್ತದೆ. ಯಾವುದನ್ನೂ ಯಾರನ್ನೂ ನಿಂದಿಸದ, ವೈಭವೀಕರಿಸದ, ಅನುಸರಿಸದ, ಅನುಕರಿಸದ ನಿರಾಡಂಬರವಾದ ಶೈಲಿ ಇಲ್ಲಿನ ಬರವಣಿಗೆಯನ್ನು ನಿಯಂತ್ರಿಸಿದೆ. ಮುಗ್ಧತೆಯನ್ನು ಉಳಿಸಿಕೊಂಡೂ ಪ್ರತಿರೋಧವನ್ನು ಸಾಧ್ಯವಾದೆಡೆಯಲ್ಲೆಲ್ಲಾ ದಾಖಲಿಸುವ ಲೇಖಕರ ನಿಲುವಿಗೆ ಪೂರಕವಾದ ಬರವಣಿಗೆಯ ಓಘ ಈ ಕೃತಿಯನ್ನು ಕೆಳಗಿಡದಂತೆ ಓದಸುತ್ತದೆ.

ಟ್ರಂಕು, ತಟ್ಟೆಯನ್ನು ಓದಿ ಮುಗಿಸಿದ ಮೇಲೆ ಲೇಖಕರ ಸಂಬಂಧಿ ಅಣ್ಣ ಅರೆಕಾಲಿಕ ಉಪನ್ಯಾಸಕ ಉದ್ಯೋಗಿಯಾದರೂ ಎಲ್ಲ ತಮ್ಮಂದಿರ ವಿಚಾರದಲ್ಲಿ ತೋರುವ ಅಂತಃಕರಣ, ಕೃತಿಕಾರರ ಅಕ್ಕನ ಘನತೆಯ ವಿದ್ಯಾರ್ಥಿ ಜೀವನ, ದಸಸಂ ಲೀಡರುಗಳು ಮುಂತಾದವರೆಲ್ಲ ನಮ್ಮ ನೆನಪಿನಲ್ಲಿ ಅಚ್ಚಳಿಯದಂತೆ ದಾಖಲಾಗುತ್ತಾರಾದರೂ ಇಲ್ಲಿ ಬರುವ ಅಪ್ಪ ಮಾತ್ರ ಓದುಗರ ಮನದಲ್ಲಿ ಎತ್ತರದ ಪಾತ್ರವಾಗಿ ಆವರಿಸಿಕೊಳ್ಳುತ್ತಾನೆ. ಸಾಲ ಶೂಲದ ನೋವಿನಲ್ಲೂ ಅಕ್ಷರಕ್ಕೆ ಮಕ್ಕಳನ್ನು ಅಂಟಿಸಲು ಆತ ತೋರುವ ಛಲದ ಉತ್ಕಟತೆ ಅದ್ಭುತವಾದುದು. ಚಿಕ್ಕನಾಯಕನಹಳ್ಳಿಯ ಖಾಸಗಿ ಶಾಲೆಗೆ ಸೇರಿಸುವಾಗ ಮಗ ಇಂಗ್ಲಿಷ್ ಮೀಡಿಯಂನಲ್ಲೇ ಓದಬೇಕೆಂದು ಹಠ ಹಿಡಿಯುವ ಆತ ತನಗೆ ದಕ್ಕದ ಬದುಕಿನ ಮತ್ತೊಂದು ಆಯಾಮವನ್ನು ಮಗನಿಗೆ ದಕ್ಕಿಸಿಕೊಡುವ ಭಗೀರಥನಂತೆ ಕಾಣುತ್ತಾನೆ. ಮೊದಲೇ ಹೇಳಿದಂತೆ ಇದು ಕೇವಲ ಕೃತಿಕಾರರೊಬ್ಬರ ಬದುಕಿನ ಕಥೆಯಲ್ಲ. ಇಂತಹ ಅಗಣಿತ ಮಕ್ಕಳ, ಅಗಣಿತ ತಂದೆತಾಯಿಯರ ಅಕ್ಷರದ ಕನಸಿನ ಮೂರ್ತ ರೂಪ. ಗುರು ಪ್ರಸಾದ್ ಕಂಟಲಗೆರೆಯವರು ಈ ಕೃತಿ ರಚಿಸುವ ಮೂಲಕ ತಮ್ಮ ತಲೆಮಾರಿನ ಅನೇಕ ಲೇಖಕರಿಗೆ ಸ್ಪೂರ್ತಿಯಾಗಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುವೆ.

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
_ಬೀರಪ್ಪ ಡಿ.ಡಂಬಳಿ,ಕೋಹಳ್ಳಿ
9 June 2023 10:56

ಅಭಿನಂದನೆಗಳು…ಚೆನ್ನಾಗಿದೆ ಲೇಖನ.!

0
    0
    Your Cart
    Your cart is emptyReturn to Shop