ಕರ್ಕಶವಾದ ಧ್ವನಿಯೊಂದು ,ತಲೆಯ ಮೇಲೆ ಮೊಟಕುತ್ತಾ..
“ನೀರವ ರಾತ್ರಿಯಲ್ಲೇಕೆ ಮುಸು ಮುಸು ಮುಸಲಧಾರೆ. ನಡೆ ಎದ್ದು. ನಾವೀಗ ವಾಯುವಿಹಾರ ಮಾಡುವ ಸಮಯ. ಎಲ್ಲಾದರೂ ನಾಲಗೆಯ ರುಚಿಗಿಷ್ಟು ರುಧಿರ ಹತ್ತುವುದೆಂದು ನೋಡಬೇಕು ” ಎಂದು ಕೈ ಹಿಡಿದಿಳೆಯಿತು.
ತಿರುಚುಗಾಲಲ್ಲಿ ಕಾಲು ಚಾಚಿ ಕುಳಿತಿದ್ದ ಕಾಲನ್ನು ಎಳೆದುಕೊಳ್ಳುವ ಪ್ರಯತ್ನದಲ್ಲಿ ಸೋತ ಫಾತೀಮಾ ನೊಂದ ದನಿಯಲ್ಲಿ ಉಸುರಿದಳು…..
“ಏ ಬೇಟಿ, ನನಗ ನಡು ಬಿದ್ದು ತಿಂಗಳಾಯಿತು. ಹೀಗೇ ಅರ್ಧ ಮಲಗಿಕೊಂಡೇ ಕಾಲ ಕಳೆಯಬೇಕು. ಇರು ನಂದು ಬೇಟಾ ಬರೋ ಹೊತ್ತು. ಅವನೇ ನನಗ ತಿನ್ನಿಸಬೇಕು. ಇವತ್ತು ಬಾಂಗಡಿ ಮೀನ ಸಾರು ಮಾಡಂತ ಸೊಸೆಗೆ ಹೇಳುತ್ತಿದ್ದ…ಇರು ಅದರಲ್ಲೇ ನಿನಗೂ ಕೊಟ್ಟೇನು” ಎಂದಳು.
ಗಹಗಹಿಸಿ ನಗುತ್ತಾ ” ಏ ಮುದುಕಿ, ಏನು ಕನಸ ಕಾಣಕತ್ತಿ. ನಿನ್ನ ಸೊಸಿ ಮಾಡಿದ ಮೀನ ಸಾರನ್ನು ಗಬಗಬ ಅಂತ ತಿಂದು ಇಲ್ಲಿ ಬಂದು ವಕ್ಕರಿಸಿರುವೆ. ನಮಗಾ ಇಲ್ಲಿ ಜಾಗ ಇಲ್ಲ. ಅಲ್ಲಾ ಈ ಮನುಷ್ಯರಿಗೆ ತಿಳಿವಲ್ಲದ.. ಹೀಂಗ ಬಾಜು ಬಾಜೂನೇ ತಂದು ಮಲಗಿಸಿ ಹೋಗ್ಯಾರಲ್ಲ. ನಾವಾರ ಉಸಿರಾಡಬೇಕು ಹೆಂಗ “….?
ಫಾತಿಮಾಳ ಅಳು ಜೋರಾಯಿತು. “ಗಂಟಲಾಗ ಮೀನಿನ ಮುಳ್ಳು ಚುಚ್ಚಿ ಉಸಿರಾಡೋಕೆ ಕಷ್ಟ ಆಗಿ ಉಸಿರೇ ನಿಂತು ಹೋಯಿತು” ಎಂದು ಮಗನ ಕಿವಿಗೆ ಹೇಳುತ್ತಿದ್ದ ಮಾತುಗಳು ಶೂಲದಂತೆ ಇರಿದವು. ಅರವತ್ತಕ್ಕೆ ಬಿದ್ದು ಮೂಲೆ ಸೇರಿದ ನನ್ನನು ನೋಡಿಕೊಳ್ಳಲು ಆಗದೆ ಮೀನೊಳಗೆ ವಿಷವಿಟ್ಟ ಸೊಸೆ. ಸತ್ತಾಗ ಆ ಮಗ ಅದನ್ನು ನಂಬಿಕೊಂಡು ಕಣ್ಣೀರು ಹಾಕಿ ಗೋರಿಯಾಗಿಟ್ಟ. ಹೇ ಅಲ್ಲಾ….. ಎಂದು ಹಣೆಹಣೆ ಬಡಿದುಕೊಂಡಳು.
“ಯಾ ದೇವ್ರೂ ಬರಾಕಿಲ್ಲ. ನಾವು ಮಾಡಿದ ಕರ್ಮ ನಾವೇ ಉಣ್ಣಬೇಕು. ಸರಿ ಬಿದ್ದಿರು ಇಲ್ಲೇ. ನಾ ಏನಾರ ಸಿಗುತ್ತಾ ಅಂತ ನೋಡಿ ಬರ್ತೀನಿ”… ಎಂದು ಎದ್ದಳು ರಂಗೀಲಾ.
ಥಟ್ಟನೇ ಅವಳ ಕೈ ಹಿಡಿದ ಜೋಗಿ ” ಏಯ್ ರಂಗೀ ಒಬ್ಬಾಕಿನೇ ಹೋಗಬೇಡ. ಕುಟುಕರ ಸಂತೆನೇ ಇರುತ್ತೆ. ನಡೀ ನಾನೂ ಬರ್ತೀನಿ” ಎಂದ.
” ಹೂಂ ,,, ಬಿಡು ನನ್ನ. ಅವರ ರಕ್ತನ ಹೀರಿ ಬರ್ತೀನಿ” ಎಂದು ಹೂಂಕರಿಸಿದಳು.
“ನನ್ನ ಮಾತು ಕೇಳು ರಂಗೀ. ನಾ ಆ ಕರಾಳ ದಿನಗಳನ್ನು ಮರೆಯೋಕೆ ಹೆಂಗಾದೀತು. ಜೋಡಿ ಹಕ್ಕಿಯಂತೆ ಹಾರಾಡಿಕೊಂಡಿದ್ದ ನಮ್ಮನ್ನ ಕ್ಷಣಾರ್ಧದಲ್ಲಿ ಮುಗಿಸಿಹಾಕಿದರು. ನಮ್ಮ ಕರುಳ ಕುಡಿ ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ತಿಳಿದು ಆಸ್ತಿಗಾಗಿ ನನ್ನ ಬಂಧುಗಳೇ ಕೊಲೆಮಾಡಿಬಿಟ್ಟರು. ಸಾವಲ್ಲಿ ನಾವೇನೋ ಒಂದಾದೆವು. ಆದರೆ ಏನೂ ಅರಿಯದ ಕಂದ…..ಹೊರಬರುವ ಮೊದಲೇ ಚಾಕುವಿನ ಇರಿತಕ್ಕೆ ಹೆದರಿ ಉಸಿರು ನಿಲ್ಲಿಸಿಬಿಟ್ಟಿತು”.
ಇದೆಲ್ಲಾ ನೆನೆದು ರಂಗೀಲಾ ದಂಪತಿಗಳು ಫಾತಿಮಾಳ ಕಾಲ ಬುಡದಲ್ಲಿಯೇ ಕುಸಿದು ಅಳುತ್ತಾ ಕುಳಿತವು.
ಫಾತಿಮಾಳ ಅಳುವಿಗೆ ಜೊತೆಯಾಗಿರುವಾಗಲೇ ಕಣ್ಣುಜ್ಜಿಕೊಂಡು, ಕೆಮ್ಮುತ್ತಾ ರಾಹುಲ್ ಇವರೆಡೆಗೆ ಬಂದ. ಹದಿನೆಂಟರ ಸುಂದರ ತರುಣ. ಆಗತಾನೆ ಮೀಸೆ ಚಿಗುರೊಡೆದು ಮುದ್ದಾಗಿ ಕಾಣಿಸುತ್ತಿದ್ದ. ಫಾತಿಮಾ ಅವನೆಡೆಗೆ ಕರುಣೆಯಿಂದ ನೋಡಿದಳು.
“ನಿನಗೇನಾಗಿತ್ತೋ …ಈ ವಯಸ್ಸಿಗೆ ಇಲ್ಲಿಗೆ ಬರಲು”
“ಕೊರೋನಾ ಪಾಸಿಟಿವ್ ಅಂತ ಆಸ್ಪತ್ರೆಗೆ ದಾಖಲು ಮಾಡಿದರು. ಅಷ್ಟೇ ಮರುದಿನ ನಾ ಇಲ್ಲಿದ್ದೆ ” ಎಂದು ಕೆಮ್ಮಲು ಪ್ರಾರಂಭಿಸಿದ.
“ನಮಗೂ ಕೊರೋನಾ ಗಾಳಿ ಬೀಸಿದರೆ ಕಷ್ಟ. ವಸಿ ದೂರಾನೇ ಇರು ಬೇಟಾ…ಮೊದಲೇ ನೂರೆಂಟು ರೋಗ ಎಂದು ತೊದಲಿದಳು “.
ಕೆಮ್ಮುತ್ತಾ ಹಿಂದೆ ಸರಿದ ರಾಹುಲ್ ನ ನೋಡಿ ತೆವಳುತ್ತಾ ಬಂದ ಹುಡುಗಿಯೊಬ್ಬಳು” ಈ ಡೋಲೋ ಮಾತ್ರೆ ತಗೋ” ಎಂದು ಕೈಯಲ್ಲಿ ನೀರು ಮಾತ್ರೆ ಹಿಡಿದು ಬಂದಳು .
“ಈ ಮಾತ್ರೆ ಇಷ್ಟು ಹೊತ್ತಲ್ಲಿ ನಿನಗ್ಯಾರು ಕೊಟ್ಟರು. ಅಷ್ಟಕ್ಕೂ ಇಷ್ಟು ಚಿಕ್ಕ ವಯಸ್ಸಿಗೇ ನಿಂದೇನು ಕಥೆ….ನಮ್ಮಜೊತೆ “ಎಂದು ಜೋಗಿ ಕೇಳಿದ.
ನನ್ನ ನೋಡಿದರೆ ಗೊತ್ತಾಗಲ್ಲವ ಅಣ್ಣ. ಈ ಸ್ಟೆತಾಸ್ಕೋಪ್, ಬಿಳಿ ಉಡುಪು ಧರಿಸಿ ಬರೋರು ಯಾರು. ಡಾಕ್ಟರ್ ತಾನೆ. ನಾನು ಡಾಕ್ಟರ್ ರಾಖಿ ಎಂದು ಕೋಟಿನಲ್ಲಿ ಕೈಯಿಳಿಸಿದಳು. ಮುಖವೆಲ್ಲಾ ಸಿಟ್ಟಿನಿಂದ ಕುದಿಯಲು ಪ್ರಾರಂಭಿಸಿತು.,… “ಈ ಮಾತ್ರೆನ ನಮ್ಮ ಆಸ್ಪತ್ರೆಯ ಪೇಶೆಂಟ್ ಮುಂದೆ ಇಟ್ಟಿದ್ದರು. ತಗೊಂಡು ಬಂದೆ..ತಗೋ ರಾಹುಲ್” ಎಂದು ಕೈಚಾಚಿದಳು. ಅದೆಲ್ಲಾ ಪುಡಿಪುಡಿ ಯಾಗಿತ್ತು.
“ಅಯ್ಯೋ ಇದನ್ನು ಹೇಗೆ ನುಂಗೋದು” ಎಂದ. ಬಿಕ್ಕಳಿಸಿ ಕುಸಿದುಬಿಟ್ಟಳು. ಎಲ್ಲಾ ಸೇರಿ ಅವಳನ್ನು ಎತ್ತಿಕೊಂಡು ಗೋರಿಯ ಮೇಲೆ ಮಲಗಿಸಿದರು. ಪ್ರಜ್ಞೆಯನ್ನೇ ಕಳೆದುಕೊಂಡ ಅವಳನ್ನು ಗಾಳಿ ಹಾಕಿ, ನೀರು ಚಿಮುಕಿಸಿ ಪ್ರಜ್ಞೆ ಮರಳುವವರೆಗೂ ಕಾಯ್ದರು.
“ಬಿಡ್ರೋ ನನ್ನ ಬಿಡ್ರೋ ನನ್ನ” ಎಂದು ಎಲ್ಲರ ಕೈ ಕಿತ್ತೊಗೆದಳು.
“ಸಮಾಧಾನ ಮಾಡಿಕೋ ರಾಖಿ ಕಣ್ ಬಿಡು” ಎಂದು ಸಂತೈಸಿದರು.
ಡಾಕ್ಟರ್ ರಾಖಿ ಬಹಳ ಚಿಕ್ಕ ವಯಸ್ಸಿಗೇ ಗೋಲ್ಡ್ ಮೆಡೆಲ್ ತೆಗೆದುಕೊಂಡು ವೈದ್ಯಕೀಯ ವೃತ್ತಿ ಆರಂಭಿಸಿದ್ದಳು. ಆರುಜನ ಇಂಜಿನಿಯರ್ ಗುಂಪೊಂದು ಇವಳಿಗೆ ಪರಿಚಯವಾಗಿತ್ತು. ಸ್ನೇಹ ತುಂಬಾನೇ ಚೆನ್ನಾಗಿತ್ತು. ಒಂದು ದಿನ ಸ್ನೇಹಿತನಿಗೆ ಆರಾಮ ಇಲ್ಲ ಎಂದು ಕರೆ ಬಂತು. ದೌಡಾಯಿಸಿ ಹೋದ ರಾಖಿಯನ್ನು ವಿವಸ್ತ್ರಗೊಳಿಸಿ, ಕಾದ ಕೆಂಡವನ್ನು ತಣ್ಣಗಾಗಿಸಿಕೊಂಡಿದ್ದರು. ಮನಬಂದಂತೆ ಪರಚಿದ್ದರು, ಸಿಗರೇಟಿಂದ ಮೃದುವಾದ ದೇಹವನ್ನು ಸುಟ್ಟಿದ್ದರು. ಅಂಗಾಂಗವನ್ನೆಲ್ಲಾ ಜಜ್ಜಿ ಬಜ್ಜಿ ಮಾಡಿದ್ದರು. ಸಾಲದೆಂಬಂತೆ ದೇಹವನ್ನು ಕೊಯ್ದು ಬಚ್ಚಲಮನೆಯಲ್ಲಿ ರಕ್ತವನ್ನು ತೊಳೆದು, ಅವಳನ್ನು ಕತ್ತರಿಸಿ ತುಂಡು ಮಾಡಿ ಅಡುಗೆ ಮಾಡಿ ಸ್ನೇಹಿತರಿಗೆ, ಉಳಿದದ್ದು ನಾಯಿಗೆ ಹಾಕಿ ಅವಳ ಗುರುತೇ ಸಿಗದಂತೆ ನೋಡಿಕೊಂಡಿದ್ದರು. ಮುಕ್ತಿಯೇ ಸಿಗದ ಇವಳ ಆತ್ಮ ಅವರ ಸಾವಿಗೆ ಕಾಯುತ್ತಾ ಕುದಿಯುತ್ತಿತ್ತು.
ಇವಳ ಕಥೆ ಅಲ್ಲಿರುವ ಬಿಳಿ ಹೃದಯಗಳಲ್ಲಿ ಸಂಚಲನ ಮೂಡಿಸಿತು. ಗೋರಿಗಳ ಆತ್ಮಗಳು ಎಂದಾದರೂ ಖುಷಿ ಪಟ್ಟಿದ್ದು ಉಂಟಾ. ತೃಪ್ತಿಯಿಂದ ಸಾಯುವವರು ಬಹಳ ಅಪರೂಪ. ಅಲ್ಲಿನ ಗೋರಿಗಳು ಬಾಯಿಬಿಟ್ಟವು. ನೊಂದ ಹೆಣ್ಣು ಗಂಡು ಜೀವಗಳೆಲ್ಲಾ ಸಾಂತ್ವನ ಹೇಳಿದವು. “ನಾವು ಪ್ರತಿಕಾರ ತೀರಿಸಿಕೊಳ್ಳಲು ಕೈಜೋಡಿಸುವೆವು. ಒಂದು ಒಳ್ಳೆಯದು ಅಂತ ಇದ್ದ ಮೇಲೆ ಕೆಟ್ಟದ್ದೂ ಇರುವುದು. ಪಾಪಿಗಳು ಮಾತ್ರ ಚಿರಾಯು. ನಾವು ಪುಣ್ಯವಂತರು. ಲೋಕಯಾತ್ರೆ ಬೇಗ ಮುಗಿಸಿ ಇಲ್ಲಿದ್ದೇವೆ ಅಷ್ಟೇ. ಆ ಶಿವ ನಮಗೂ ಶಿವನೇ.
ಕೋರ್ಟ್ ನ್ಯಾಯ ಕೊಡುವುದು. ಆದರೆ ಸತ್ಯಗಳನ್ನು ಪರಿಶೀಲಿಸಿ ಸಾಕ್ಷಿ ಸಿಗುವವರೆಗೂ ಕಾಯುವುದು. ಆದರೆ ಸಾಕ್ಷಿಯನ್ನೇ ನುಂಗಿದ ಇಂತಹ ಕಾಮುಕರಿಗೆ ಕಾಣದ ಶಕ್ತಿಗಳು ಪಾಠ ಕಲಿಸುತ್ತವೆ. ಅದಕ್ಕೆ ನಾವೇ ಸಾಕ್ಷಿ ” ಎಂದು ರಾಖಿಯ ಕೈಮೇಲೆ ಪ್ರಮಾಣ ಮಾಡಿದೆವು. ಗೋರಿಗಳ ಕಥೆ ಹಾಡಾಗುವ ಸಮಯ ಬಂದಾಯಿತು.