ಸಿಟ್ಟುಸುಣ್ಣ ಬಯಸಿ ಬಂದು
ನಾಲಿಗೆಗೆ ತಗುಲಿ ಸುಟ್ಟು ಕೊಂಡಿದೆ
ಜಗಳಕ್ಕಿಳಿದ ಅಹಂಕಾರವೆಲ್ಲ ಹರಿದು ಬಂದು
ರುಚಿ ಇಲ್ಲದ ಸತ್ಯವ ಬೇಯಿಸಿಕೊಂಡಿದೆ
ಬಯಲಲ್ಲಿ ಬಿದ್ದ ಬಣ್ಣ
ಮುಪ್ಪಾಗಿ ದೇಹವ ಒಣಗಿಸಿ
ತಸ್ಕರನ ಬಳಿ ಹೋಗಿ
ನ್ಯಾಯದ ಅಧ್ಯಾಯವನು ಓದಿಸಿಕೊಳ್ಳುತ್ತಿದೆ
ಬಯಲಸುಣ್ಣ ಅಂಗಾಂಗಕ್ಕೆ ತಗುಲಿ
ಉಸಿರ ಕೊಳ್ಳಲು ಸರ್ವಾಧಿಕಾರಿಗೆ
ಉಘೇ ಉಘೇ ಎಂದು ಕಿರುಚಿ
ಆ ಬಳಗದ ಬಾಯಿಯ ಒಣಗಿಸಿಕೊಳ್ಳುತ್ತಿದ್ದಾರೆ
ಸುಡುವ ಸಮಯ ಭಾವನೆಗಳ ಸುಟ್ಟಂತೆ
ನೆಟ್ಟ ಸಸಿಯೊಂದು ತನ್ನನ್ನೆ ಜರಿದುಕೊಳ್ಳುತ್ತಿದೆ
ಸಮಾಧಿಗೆ ಭೇಟಿ ನೀಡುವ ಉಸಿರು
ದೇಹದ ಮೇಲೆ ಬದುಕ ಬರೆ ಎಳಿದೀತೇ!?
ಹಗಲು ರಾತ್ರಿಯಲಿ ಓದಿದ ಇತಿಹಾಸವನು
ಅಕ್ಷರಕೆ ಕರೆಕೊಟ್ಟು ಪ್ರತಿಭಟಿಸಲಾದೀತೇ!?
ನಕ್ಕಾಗ ಬಿದ್ದ ನಗುವೆಲ್ಲವು
ಹೊಲದ ಬದಿಯಲ್ಲಿ ಹೂವಾಗಿ ಅರಳೀತೆ?
ಕಣ್ಣು ಕುಕ್ಕುವ ಕನಸುಗಳೆಲ್ಲವು
ಎಚ್ಚರಿಸಲು ಭಯವ ಎದೆಗೆ ನಾಟಿಸೀತೆ!?
ಬಯಲಿಗೆ ಬಿದ್ದ ಬಣ್ಣ
ಬದುಕಲಿ ಹೊಕ್ಕ ಸಿಟ್ಟುಸುಣ್ಣ
ಜೀವನ ಶೈಲಿಯನು ಬದಲಿಸೀತೆ!?
ದೂರದಲೇ ನಿಂದು ನಿಂದಿಸೀತೆ!?