ಮನೋಜ್. ಎನ್. ಜವಳಿ ಅವರು ಬರೆದ ಕತೆ ‘ಬೈಕಿನ ಭೂತ’

ಕಾವೇರಿ ಕಲ್ಲೇಶನಿಗೆ “ರೀ ಆ ಸುಬ್ಬಣ್ಣನ ಕಥೆ ಏನ್ರೀ ಮಾಡಿದ್ರಿ? ಕೊಟ್ಟಿರೋ ದುಡ್ಡು ಕೇಳಿದ್ರಾ ಇಲ್ಲಾ ?” ಎಂದಳು.  “ಏ ನಾನು ದುಡಿದು ತಂದು ಹಾಕೋಲ್ವಾ ಮನೆ ನಡೆಸೋದು ನನಗೆ ಗೊತ್ತಿಲ್ಲ ಅನ್ನೋ ತರ ಪ್ರತಿಯೊಂದಕ್ಕೂ ಮೂಗು ತೂರುಸ್ತೀಯಲ್ಲ , ಏನು ಎಲ್ಲ ನಿನ್ನೆದುರಿಗೆ ವ್ಯವಹಾರ ಮಾಡ್ಬೇಕೇನು ? ನನಗೆ ಅಷ್ಟೂ ಜವಾಬ್ದಾರಿ ಇರೋಲ್ವೇನು?” ಎಂದು ದಬಾಯಿಸಿದ .

“ಅಯ್ಯಾ..ಅದಕ್ಯಾಕೆ ಒಳ್ಳೆ ದೆವ್ವ ಮೈಮೇಲೆ ಬಂದಂಗೆ ಆಡ್ತೀರಾ? ಕೇಳಿದ್ರಾ ಇಲ್ವಾ ಅಂತ ಕೇಳ್ದೆ ಅಷ್ಟೇ .”

“ಇಷ್ಟು ದಿನ ಇಲ್ಲದ್ದು ಈಗ್ಯಾಕೆ ನಿನಗೆ ಅದರ ಬಗ್ಗೆ?”

“ಮತ್ತೆ ಅವಯ್ಯ ಯಾವಾಗ ನೋಡಿದ್ರೂ ದುಡ್ಡಿಲ್ಲ ದುಡ್ಡಿಲ್ಲ ಅಂತ ಹೇಳ್ತಾ ಇದ್ನಲ್ಲ ಈಗೊಂದು ವಾರದಿಂದ ನೋಡಿದ್ದೀರೇನು ಅವರ ಹಾರಾಟನ ?”

“ಯಾಕೇ ಏನಾಯ್ತೆ?”

“ನೀವು ಐದು ದಿನ ಊರಲ್ಲಿರಲಿಲ್ಲಲ್ವಾ ..ಆಯಾಪ್ಪಂಗೆ ಅದೇನು ಸಿಕ್ಕೈತೋ ಏನೋ ಅದೇನು ಹಾರಾಟ ಗೊತ್ತಾ?, ಮೊನ್ನೆ ಆಯಾಪ್ಪ ಯಾವ್ದೋ ಊರು ಹತ್ರ ನಡ್ಕೊಂಡು ಹೋಗ್ತಾ ಇದ್ದಾಗ ದುಡ್ಡು ಸಿಕ್ತಂತೆ ಜೊತೆಗೆ ಯಾವ್ದೋ ಬೈಕ್ ಕೂಡ ಸಿಕ್ತಂತೆ, ಆಯಾಪ್ಪ ಅದನ್ನೆಲ್ಲ ತಾನೇ ತಗೊಂಡು ಬಂದಿದ್ದಾನಂತೆ .ಸಿಕ್ಕಿರೋ ದುಡ್ಡಲ್ಲಿ ಹೆಂಡತಿ ಮಕ್ಕ್ಳು ಎಲ್ರಿಗೂ ಹೊಸ ಬಟ್ಟೆ ತಗೊಂಡು ಅವರ ಮನೆ ಮುಂದೆ ಶೀಟ್ ಹಾಕ್ಸಿದಾನೆ.ಮೊನ್ನೆ ಆ ಬೈಕ್ ಪೂಜೆ ಮಾಡಿಸ್ಕೊಂಡು ಹೋಗೋಕೆ ಗುಡಿಗೆ ಬಂದಿದ್ರು ಅವರ ಹೆಂಡತಿ ,ಮಕ್ಕಳು ಎಲ್ಲ ಏನು ಹಾರಾಡ್ತಾ ಇದ್ರು ಗೊತ್ತಾ? ನಾನು ಅಲ್ಲಿಗೆ ಹೋದ್ರು ನನ್ನ ಮಾತಾಡಿಸಲಿಲ್ಲ ,ಬಾರೀ ದೌಲತ್ತು ಅವರಿಗೆ ಅದಕ್ಕೆ ಈಗ ದುಡ್ಡು ಐತೆ ಅಂತ ಗೊತ್ತಲ್ಲ ಈಗೇನು ಹೇಳ್ತಾರೆ ನೋಡೋಣ ಆಕಸ್ಮಾತ್ ದುಡ್ಡು ಖಾಲಿಯಾಗಿದೆ ಅಂದ್ರೆ ಆ ಬೈಕ್ ತಗೊಂಡು ಬರ್ರಿ ಹೇಗೂ ಅವರು ನಲವತ್ತು ಸಾವಿರ ದುಡ್ಡು ಕೊಡ್ಬೇಕು ತಾನೇ ಹೋಗಿ.”

“ನನಗೀಗ ತುಂಬಾ ಕೆಲಸ ಇದೆ ನನಗೆ ಬಿಡುವಿದ್ದಾಗ ಹೋಗ್ತೀನಿ ಬಿಡೇ.”

“ನಾನು ಹೋಗಿ ಕೇಳಿ ಬರ್ಲಾ?”

ಕಲ್ಲೇಶ ಕೈಮುಗಿದು “ಅಮ್ಮ ತಾಯಿ ಆ ಕೆಲಸ ಮಾತ್ರ ಮಾಡಬೇಡ ಕಣಮ್ಮ,ದುಡ್ಡು ಬೇಕಾದ್ರೆ ನಾನೇ ಕೇಳ್ಕತೀನಿ.ನೀನು ಅಷ್ಟು ರಿಸ್ಕ್ ತಗೋಬೇಡ.ಹೋದ ಸಾರಿ ದುಡ್ಡು ಕೇಳ್ಕೊಂಡು ಬರ್ತೀನಿ ಅಂತ ಹೋಗಿ ನೀನು ಮತ್ತೆ ಆ ಸುಬ್ಬಣ್ಣನ ಹೆಂಡತಿ ಇಬ್ರು ರಸ್ತೆಯಲ್ಲೇ ನಿಟ್ಟಿಲ್ಲದಂಗೆ ಜುಟ್ಟು ಹಿಡ್ಕೊಂಡು ಹಂದಿ ನಾಯಿ ತರ ಕಿತ್ತಾಡಿ ಊರೆಲ್ಲ ನೋಡೋ ಹಂಗೆ ಮಾಡಿದ್ರಲ್ಲಮ್ಮ .”

“ಅಯ್ಯೋ ಅವಾಗ ನಾನೇನು ಅಂದಿರ್ಲಿಲ್ಲ ಅವಳೇ….” ಅಷ್ಟರಲ್ಲೇ ಕಲ್ಲೇಶ ನಿನ್ನ ಹಳೇ ಪುರಾಣ ನನಗೆ ಬೇಡ ನನಗೆ ಕೆಲಸ ಇದೆ ಎಂದು ಹೇಳಿ ಎದ್ದು ಹೊರಟೇ ಹೋದ.

ಕಾವೇರಿ ಪಿಟಿ ಪಿಟಿ ಎನ್ನುತ್ತಾ ಅಡುಗೆ ಮನೆಗೆ ಹೋದಳು.

ಕಲ್ಲೇಶ ಮರುದಿನ ಸುಬ್ಬಣ್ಣನ ಮನೆಗೆ ಹೋಗಿ ಸಾಲ ಕೇಳಿದಾಗ ನಿರೀಕ್ಷೆಯಂತೆಯೇ ಅವನು ದುಡ್ಡು ಖಾಲಿಯಾಗಿಬಿಟ್ಟಿತು ಎಂದುಬಿಟ್ಟ.ಕಲ್ಲೇಶ ಈ ಉತ್ತರವನ್ನು ಮೊದಲೇ ನಿರೀಕ್ಷಿಸಿದ್ದರಿಂದ ಬೈಕ್ ಕೇಳಬೇಕು ಎಂದು ಮನದಲ್ಲಿ ಯೋಚಿಸುತ್ತಿರುವಾಗ ಸುಬ್ಬಣ್ಣನೇ ಈ ಬೈಕ್ ತೆಗೆದುಕೊಂಡು ಹೋಗಿ ನಲವತ್ತು ಸಾವಿರಕ್ಕಿಂತ ಜಾಸ್ತಿನೇ ಬಾಳುತ್ತೆ. ಅಸಲು ಬಡ್ಡಿ ಎಲ್ಲ ಬರುತ್ತೆ ಎಂದು ಹೇಳಿಬಿಟ್ಟ. ಹಿಂದಿನ ದಿನ ಹೆಂಡತಿ ರಾತ್ರಿ ಊಟಕ್ಕೆ ಕುಳಿತಾಗ ಆ ಬೈಕಿನ ವರ್ಣನೆ ಕೇಳಿ ದುಡ್ಡಿಗಿಂತ ಬೈಕ್ ಮೇಲು ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದ.ಅದೂ ಅಲ್ಲದೆ ಕಲ್ಲೇಶನೇ ಇಷ್ಟರಲ್ಲಿ ಒಂದು ಬೈಕ್ ಕೊಳ್ಳಬೇಕೆಂದುಕೊಂಡಿದ್ದ ಈಗ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎನ್ನುವ ಹಾಗೇ ಸುಬ್ಬಣ್ಣನೇ ಬೈಕ್ ಕೊಟ್ಟುಬಿಟ್ಟ .ಮತ್ತೇನು ತಕರಾರು ಮಾಡದೇ ತೆಗೆದುಕೊಂಡು ಹೋದ ಕಲ್ಲೇಶನನ್ನು ಕಂಡು ಸುಬ್ಬಣ್ಣನೂ ಖುಷಿಗೊಂಡ. ಕಲ್ಲೇಶ ಸುಬ್ಬಣ್ಣನಿಗೆ ಬಹುಷಃ ಬುದ್ದಿಯೇ ಇಲ್ಲ ಅಸಲು ಬಡ್ಡಿ ಸೇರಿಸಿದರೂ ಸಹ ಜಾಸ್ತಿನೇ ಆಗುತ್ತೆ ಆದರೂ ಬೈಕ್ ಕೊಟ್ಟುಬಿಟ್ಟ .ಬಕ್ರ ಸರ್ಯಾಗೇ ಬಿದ್ದಿದೆ ಎಂದುಕೊಂಡನಾದರೂ ವಾಸ್ತವವಾಗಿ ಯಾರು ಬಿದ್ದರೆನ್ನುವುದು ಅವನ ಅರಿವಿಗೆ ಬರಲಿಲ್ಲ .

ಕಲ್ಲೇಶನ ಹೆಂಡತಿ ಕಾವೇರಿ ಬೈಕ್ ಕಂಡು ಹಿರಿ ಹಿರಿ ಹಿಗ್ಗಿದಳು .ಅಂದು ಇದೇ ಬೈಕ್ ಪೂಜೆ ಮಾಡಿಸಿಕೊಂಡು ಬರಲು ಸುಬ್ಬಣ್ಣನ ಕುಟುಂಬ ಬಂದಾಗಿನ ಸಂಧರ್ಭ ನೆನೆದು ಅವರನ್ನು ಶಪಿಸಿದಳು.ಕಲ್ಲೇಶ ದೇವಸ್ಥಾನಕ್ಕೆ ಪೂಜೆ ಮಾಡಿಸಿಕೊಂಡು ಬರಲು ಹೋದ,ಹಿಂದೆಯೇ ಕಾವೇರಿ ಇಬ್ಬರೂ ಮಕ್ಕಳನ್ನು ಕರೆದುಕೊಂಡು ಹೋದಳು. ಬೈಕ್ ಪೂಜೆ ಮಾಡಿಸಿಕೊಂಡು ಅದರಲ್ಲಿಯೇ ಕುಟುಂಬ ಸಮೇತ ಮನೆಗೆ ಬಂದರು .

“ನೋಡ್ರಿ ವಾರದ ಹಿಂದೆ ಈ ಬೈಕ್ ಅವರ ಹತ್ರ ಇತ್ತು ಈಗ ನಮ್ಮ ಹತ್ರ ಬಂತು ಅದೇನು ಹಾರಾಟ ಅವರದ್ದು ಈಗ ಹಾರಾಡಲಿ “ಕಲ್ಲೇಶ ಮೌನವಾಗಿದ್ದ .

“ರೀ ಆ ಸುಬ್ಬಣ್ಣ ಪೂಜೆ ಮಾಡಿಸ್ಕೊಳೋಕೆ ಬಂದಾಗ ಕೂಡ ಪೂಜಾರಪ್ಪ ಬೈಕಿಗೆ ಆರತಿ ಬೆಳಗೋಕೆ ಬಂದಾಗ ದೀಪ ಆರಿತ್ತು. ಇವತ್ತು ಹಂಗೆ ಆಯ್ತಪ್ಪ .”

“ಹೊರಗಡೆ ತಾನೇ ಮತ್ತೆ ಗಾಳಿಗೆ ಆರಿರುತ್ತೆ ಅಷ್ಟೇ ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ತೀಯ ?” ಎಂದು ಅದರ ಬಗ್ಗೆ ನಂಬಿಕೆಯಿರದ ಕಲ್ಲೇಶ ಅವಳನ್ನು ಸುಮ್ಮನಾಗಿಸಿದ.

ಎರಡು ದಿನ ಎಲ್ಲವೂ ಸರಿಯಿತ್ತು. ಒಂದು ದಿನ ರಾತ್ರಿ ಕಲ್ಲೇಶ ಪಕ್ಕದ ಹಳ್ಳಿಯಿಂದ ವಾಪಸ್ಸು ಬರುತ್ತಿದ್ದ . ಅದಾಗಲೇ ಗಂಟೆ ಎಂಟೋ ಹತ್ತೋ ಆಗಿತ್ತು .ಕಾವೇರಿ ಹಾಗೂ ಸೀತಮ್ಮ ಕಲ್ಲೇಶನ ದಾರಿ ಕಾಯುತ್ತಿದ್ದರು. ಕಲ್ಲೇಶ ಬರುವಾಗ ತನ್ನ ಬೈಕನ್ನು ಯಾರೋ ಜಗ್ಗಿ ಎಳೆದು ನಿಲ್ಲಿಸಿದಂತೆ ಆಗಿ ಬೈಕ್ ನಿಲ್ಲಿಸಿಬಿಟ್ಟ. ಆಮೇಲೆ ಎಷ್ಟೋ ಹೊತ್ತು ಪ್ರಯತ್ನ ಪಟ್ಟ ಬಳಿಕವೇ ಬೈಕ್ ಸ್ಟಾರ್ಟ್ ಆದದ್ದು.ಯಾರು ಎಳೆದು ನಿಲ್ಲಿಸಿದರು ಎಂದು ಗೊತ್ತೇ ಇಲ್ಲ. ಮತ್ತೆ ಹೋಗುವಾಗ ಬೈಕಿನ ಹಿಂದುಗಡೆ ಯಾರೋ ಕುಳಿತಂತೆಯೇ ಭಾಸವಾಗುತ್ತಿತ್ತು .ಮಿರರ್ ನಲ್ಲಿ ನೋಡಿದಾಗ ಯಾರೂ ಇರಲಿಲ್ಲ .

ಒಂದೆರಡು ದಿನವಾದ ಬಳಿಕವೂ ಇದೇ ಅನುಭವವಾಯ್ತು. ಆದರೆ ಅದನ್ನು ಹೆಚ್ಚು ತಲೆಗೆ ಹಚ್ಚಿಕೊಳ್ಳಲಿಲ್ಲ . ಕಲ್ಲೇಶ ಎರಡು ಮೂರು ದಿನ ಯಾವುದೋ ಊರಿಗೆ ಹೋಗಿ ರಾತ್ರಿ ವಾಪಸ್ಸು ಬಂದಾಗ ಸದಾ ಗದ್ದಲವೇ ತುಂಬಿರುತ್ತಿದ್ದ ಮನೆಯಲ್ಲಿಂದು ಸ್ಮಶಾನ ಮೌನ ಆವರಿಸಿತ್ತು.ಮನೆಯಲ್ಲಿ ಯಾರು ಇಲ್ಲವೇನೋ ಎಂದುಕೊಂಡು ಬಾಗಿಲ ಬಳಿ ನೋಡಿದರೆ ಅವರ ಚಪ್ಪಲಿಗಳೆಲ್ಲಾ ಹಾಗೇ ಇವೆ .ಬಹುಷಃ ಅತ್ತೆ ಸೊಸೆಗೆ ಒಳ್ಳೆ ಬುದ್ದಿ ಬಂದಿದೆ ಎಂದುಕೊಂಡು ಬಾಗಿಲು ಬಡಿದರೆ ಉತ್ತರವೇ ಇಲ್ಲ. ಎರಡು ಮೂರು ಬಾರಿ ಬಡಿದು ಸಿಟ್ಟಿನಿಂದ ಕಾವೇರಿಯನ್ನು ಕೂಗಿದಾಗಲೇ ಬಂದು ತೆರೆದದ್ದು . ಒಳಗೆ ಹೋಗಿ ನೋಡಿದಾಗ ಅಚ್ಚರಿಗೊಂಡ. ಸೀತಮ್ಮ ,ಮಕ್ಕಳು ಎಲ್ಲರೂ ಮೂಲೆ ಹಿಡಿದು ಸುತ್ತ ಎರಡು ಚಪ್ಪಲಿ ಹಾಗೂ ಪೊರಕೆಗಳನ್ನು ಹಾಕಿಕೊಂಡು ದೇವರ ಫೋಟೋ ಹಿಡಿದುಕೊಂಡು ಕೂತುಬಿಟ್ಟಿದ್ದಾರೆ.

ಏನಾಯ್ತು ಎಂದು ಕೇಳಿದಾಗ ಕಾವೇರಿ ಭಯದಿಂದಲೇ ಎಲ್ಲವನ್ನು ಹೇಳಿದಳು.

ಕಲ್ಲೇಶ ಅಂದು ಸಂಜೆ ಊರಿಗೆ ಹೋದ ನಂತರ ಕಾವೇರಿ, ಸೀತಮ್ಮ ಹಾಗೂ ಮಕ್ಕಳು ಊಟ ಮುಗಿದ ಬಳಿಕ ಕಾವೇರಿ ಹಾಗೂ ಮಕ್ಕಳು ಒಳಗೆ ಮಲಗಿದರೆ ಸೀತಮ್ಮ ಸೆಕೆಯೆಂದು ಹೊರಗಡೆ ಬಾಗಿಲ ಬದಿಯಲ್ಲಿ ಹಾಕಿದ ಮಂಚದ ಮೇಲೆ ಮಲಗಿದ್ದರು.

ಮಧ್ಯರಾತ್ರಿಯ ಹೊತ್ತಿನಲ್ಲಿ ನಿದ್ರೆಯಿಲ್ಲದೆ ಹೊರಳಾಡಿ ಆಗ ತಾನೇ ನಿದ್ರೆಯ ಮಂಪರಿನಲ್ಲಿದ್ದ ಸೀತಮ್ಮರನ್ನು ಎಚ್ಚರಗೊಳಿಸಿದ್ದು ಅವರ ಕಿವಿಗೆ ಬಿದ್ದ ಬೈಗುಳಗಳು.ಯಾರೋ ಜಗಳ ಮಾಡಿಕೊಂಡು ತನ್ನ ನಿದ್ರೆಯನ್ನು ಹಾಳು ಮಾಡುತ್ತಿದ್ದಾರೆಂದು ಶಪಿಸುತ್ತಾ ಎದ್ದ ಅವರಿಗೆ ಯಾವ ಗದ್ದಲವೂ ಕೇಳಿಸದಾಯಿತು. ಊರೆಲ್ಲ ನಿಶ್ಯಬ್ದದಿಂದ ಮಲಗಿದೆ. ಹಾಗಾದರೆ ನನಗೆ ಕೇಳಿಸಿದ್ದು ಏನು ಎಂದು ಯೋಚಿಸುತ್ತ ಎದ್ದು ಬಂದು ಸುತ್ತ ಮುತ್ತ ನೋಡಿ ಯಾರೂ ಇಲ್ಲದ್ದನ್ನು ಕಂಡು ಮತ್ತೆ ಮಲಗಿದರು.ಮತ್ತೆ ಬೈಗುಳಗಳು ಕೇಳಿಸತೊಡಗಿದವು!! ಆದರೆ ಈ ಬಾರಿ ಮೊದಲಿಗಿಂತಲೂ ಸ್ಪಷ್ಟವಾಗಿ ಕೇಳಿಸುತ್ತಿದ್ದವು. “ಯೇ ಮುದುಕಿ ಹೆಂಗ್ ಮಲಗಿದೀಯಲ್ಲೇ ,ಸಾಯಿ ಹೋಗೆ ನೀನು ನಾಳೇನೇ ಸಾಯ್ತೀಯ ಕಣೇ “ಎಂಬ ಗೊಗ್ಗರು ಸ್ವರದಲ್ಲಿ ಕೇಳಿಸಿದ ಮಾತುಗಳು ಸೀತಮ್ಮರನ್ನು ಕುಪಿತಗೊಳಿಸಿದವು. “ಯಾವನೋ ಅದು ಧೈರ್ಯ ಇದ್ರೆ ಎದುರಿಗೆ ಬಾರಲೇ ನನ್ನ ಬೈತೀಯ” ಎಂದು ನಡುರಾತ್ರಿಯಲ್ಲಿಯೇ ಸೀತಮ್ಮ ಅಬ್ಬರಿಸಿದರು.”ಏನೇ ಮಾಡ್ತೀಯ ” ಎಂಬ ಸ್ವರ ಮತ್ತೆ ಕೇಳಿದಾಗ ಸೀತಮ್ಮ ಇನ್ನೂ ಕೆರಳಿದರು. ಆ ಧ್ವನಿ ಬಂದ ದಿಕ್ಕಿನ ಕಡೆಯಿದ್ದದ್ದು ಮಾತ್ರ ಬೈಕ್ ಒಂದೇ .ಸೀತಮ್ಮ ದಿಟ್ಟಿಸಿ ನೋಡಿದಾಗ ಕರ್ರಗಿನ ಆಕೃತಿಯೊಂದು ಬೈಕಿನ ಮೇಲೆ ಕುಳಿತಂತೆ ಕಂಡಿತು. ಚಪ್ಪಲಿ ಹಿಡಿದುಕೊಂಡು ಅತ್ತ ಎಸೆದರು. ಮತ್ತೂ ಕೇಳಲಾರದ ಬೈಗುಳಗಳು ಬೈಕಿನ ಕಡೆಯಿಂದ ಬಂದವು. ತಕ್ಷಣ ಲೈಟ್ ಹಾಕಿದಾಗ ಬೈಕ್ ಬಿಟ್ಟು ಬೇರೇನೂ ಕಾಣಲಿಲ್ಲ . ಈಗ ಸೀತಮ್ಮರಿಗೆ ನಿಜವಾಗಿಯೂ ಭಯವಾಗಿ ಅದರ ಹತ್ತಿರ ಹೋದೊಡನೆಯೇ ಲೈಟ್ ಆನ್ ಆಗಿ ಮತ್ತೆ ಆಫ್ ಆಯಿತು.ಯಾರೋ ವಿಕಾರವಾಗಿ ನಗುವಂತೆ ಕೇಳಿಸಿದಾಗ ಸೀತಮ್ಮ ಬೊಬ್ಬಿಡುತ್ತಾ ಬಾಗಿಲು ಬಡಿದು ಸೊಸೆಯನ್ನು ಏಳಿಸಿದರು. ಕಾವೇರಿ ಅರೆ ನಿದ್ರೆಯಲ್ಲಿ ಬಂದು ಬಾಗಿಲು ತೆರೆದು ಏನೆಂದು ವಿಚಾರಿಸಿದಾಗ ಸೀತಮ್ಮ ಎಲ್ಲವನ್ನೂ ಹೇಳಿದರು.

ಕಾವೇರಿಯೂ ಧೈರ್ಯವಂತೆ ಅತ್ತೆ ಹೇಳಿದ್ದು ಅದೆಷ್ಟು ಕೇಳಿಸಿತೋ ಗೊತ್ತಿಲ್ಲ ನಿದ್ದೆಗಣ್ಣಿನಲ್ಲಿ ಸುಮ್ಮನೆ ಆ ಬೈಕಿನ ಬಳಿ ಹೋದಳು .ಇವಳು ಅತ್ತ ಹೋದದ್ದೇ ತಡ ಬೈಕಿನ ಲೈಟ್ ಮತ್ತೊಮ್ಮೆ ಆನ್ ಆಫ್ ಆಗಿ ಹಾರನ್ ಕೇಳಿಸಿತು.”ನೀನು ಬೇರೆ ಬಂದ್ಯಾ ನಿನ್ನು ಬಿಡಲ್ಲ ಕಣೇ “ಎಂಬಾ ಕರ್ಕಶ ಧ್ವನಿ ಕಿವಿಗೆ ಬಿದ್ದಾಕ್ಷಣ ಅವಳ ನಿದ್ರೆ ಎಲ್ಲಾ ಜರ್ರನೆ ಇಳಿದು ಹೋಗಿ ಹಿಂದಕ್ಕೆ ಓಡಿದಳು .ಬೈಕ್ ಮತ್ತೊಮ್ಮೆ ಸರ್ರನೇ ಮುಂದಕ್ಕೆ ಬಂತು ಯಾರೂ ಅದನ್ನು ಓಡಿಸದೆಯೇ ಅದು ಮುಂದಕ್ಕೆ ಬಂದದ್ದು ನೋಡಿ ಅತ್ತೆ ಸೊಸೆ ಇಬ್ಬರೂ ಸಹ ಹೆದರಿ ಓಡಿ ಹೋಗಿ ಬಾಗಿಲು ಹಾಕಿಕೊಂಡರು. ನಂತರ ಕೂಡ ಪದೇ ಪದೇ ಬಾಗಿಲು ಬಡಿಯುವುದು, ವಿಕಾರವಾಗಿ ನಗುವುದು ,ಕಿರುಚುವುದು ಕೇಳುತ್ತಲೇ ಇತ್ತು. ಅತ್ತೆ ಸೊಸೆ ಇಬ್ಬರೂ ಮೂಲೆ ಹಿಡಿದು ಕೂತರು.ರಾತ್ರಿ ಪೂರ್ತಿ ಹಾಗೆಯೇ ಕುಳಿತು ಯಾವಾಗ ನಿದ್ರೆ ಹೋದರೋ ಅವರಿಗೇ ಗೊತ್ತು. ಮರುದಿನವೂ ಅದೇ ಮುಂದುವರಿದಿತ್ತು.ಈ ಬಾರಿ ಕಿಟಕಿಗಳೆಲ್ಲ ಬಡಿದುಕೊಳ್ಳುವುದು ಮನೆಯಲ್ಲಿನ ಸಾಮಾನುಗಳು ಇದ್ದಕ್ಕಿದ್ದಂತೆ ಬೀಳುವುದು,ಬಾಗಿಲು ಜೋರಾಗಿ ಬಡಿಯುವುದು ಮುಂದುವರಿಯುತ್ತಲೇ ಇತ್ತು .ಆದ್ದರಿಂದಲೇ ಇಂದು ಬಾಗಿಲು ಹಾಕಿಕೊಂಡು ಕುಳಿತುಬಿಟ್ಟಿದ್ದರು.

ಕಲ್ಲೇಶನಿಗೆ ಇವರು ಹೇಳುತ್ತಿರುವುದರಲ್ಲಿ ಪೂರ್ಣ ನಂಬಿಕೆ ಬರಲಿಲ್ಲ.ಮರುದಿನ ರಾತ್ರಿ ಬೈಕಿನಲ್ಲಿ ಎಲ್ಲಿಗೋ ಹೋಗಿ ಬರುವಾಗ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ನಾಯಿ ಅಡ್ಡಬಂದ ತಕ್ಷಣ ನಿಲ್ಲಿಸಿದ. ಆಗ ಅವನಿಗೆ ಆದ ಅನುಭವ ಮಾತ್ರ ಭಯಾನಕ. ಹಿಂದುಗಡೆ ಯಾರೋ ಕುಳಿತಿದ್ದಾಗ ಬ್ರೇಕ್ ಹಾಕಿದ ತಕ್ಷಣ ಹೇಗೆ ಮುಂದಕ್ಕೆ ಡಿಕ್ಕಿ ಹೊಡೆಯುವರೋ ಅದೇ ರೀತಿಯ ಅನುಭವವಾಯಿತು. ಯಾರದೋ ದೇಹ ಸ್ಪರ್ಶಿಸಿದಂತೆ, ಯಾರೋ ತನ್ನ ಕಿವಿಯ ಬಳಿ ಉಸಿರಾಡುತ್ತಿರುವಂತೆ ಭಾಸವಾಯಿತು. ಧೈರ್ಯ ಮಾಡಿ ಮಿರರ್ ನಲ್ಲಿ ತನ್ನ ಹಿಂದಿನ ದೃಶ್ಯ ಕಂಡ. ಅದನ್ನು ನೋಡಿಯೂ ಅವನು ಉಳಿದದ್ದೇ ಹೆಚ್ಚು. ಯಾರೋ ಒಬ್ಬ ವ್ಯಕ್ತಿ ಇವನ ಹಿಂದೆಯೇ ಕುಳಿತಿದ್ದಾನೆ. ಅವನ ಮುಖವಂತೂ ವಿಕಾರ!! ಬಾಯಿಂದ ರಕ್ತ ಇಳಿಯುತ್ತಲೇ ಇತ್ತು. ಕಣ್ಣುಗಳಂತೂ ಭಯಾನಕ. ಬೆಚ್ಚಿಬಿದ್ದು ಬೈಕ್ ಬಿಟ್ಟು ಓಡೋಡಿ ಬಂದ. ಮನೆಗೆ ಬಂದು ಬಾಗಿಲು ಹಾಕಿಕೊಂಡ. ಹೆಂಡತಿ ಹಾಗೂ ತಾಯಿಗೆ ದಿಕ್ಕೇ ತೋಚಲಿಲ್ಲ.

ಮತ್ತೆ ಯಾರೋ “ಕಲ್ಲೇಶ..ಕಲ್ಲೇಶ.” ಎಂದು ಕೂಗಿದ ಹಾಗಾದಾಗ ಅವನು ಬಂದು ಬಾಗಿಲು ತೆರೆದು ನೋಡಿದಾಗ ಯಾರೂ ಇರಲಿಲ್ಲ.ಆದರೆ ಆ ಬೈಕ್ ಮಾತ್ರ ಮನೆ ಮುಂದೆ ಬಂದು ನಿಂತಿತ್ತು.ನನ್ನ ಬಿಟ್ಟು ಎಲ್ಲಿಗೆ ಹೋಗ್ತೀಯೋ ಎಂದು ಗೊಗ್ಗರು ದನಿಯಲ್ಲಿ ಕಿರುಚಾಟ ಕೇಳುತ್ತಿತ್ತು.

ಮರುದಿನ ಇವರ ಕಿವಿಗೆ ಇನ್ನೊಂದು ವಿಷಯವೂ ತಿಳಿದಿತ್ತು,ಆ ಸುಬ್ಬನ ಮನೆಮುಂದೆ ಕೂಡ ನಾಲ್ಕೈದು ದಿನ ಹೀಗೆ ಗಲಾಟೆ ಕೇಳಿಸುತ್ತಿತ್ತು ಎಂದು ಅವನ ಪಕ್ಕದ ಮನೆಯವರೂ ಸಹ ಹೇಳಿದರು.
ಈಗ ಕಲ್ಲೇಶನದು ಮೈ ಪರಚಿಕೊಳ್ಳುವ ಪರಿಸ್ಥಿತಿ.ತಾನೇ ಒಪ್ಪಿ ತಕರಾರು ತೆಗೆಯದೆ ಬೈಕ್ ತೆಗೆದುಕೊಂಡು ಬಂದು ಈಗ ಹೋಗಿ ಕೇಳಿದರೆ ಯಾರಾದರೂ ನೋಡಿದವರು ಏನೆಂದಾರು? ನಾನು ಅವನು ಸೊಲ್ಲೆತ್ತದೆ ಕೊಟ್ಟಾಗಲೇ ಅನುಮಾನ ಪಡಬೇಕಿತ್ತು, ಈಗ ಬಾಯಿ ಬಡಿದುಕೊಂಡರೆ ಏನು ಪ್ರಯೋಜನ ಎಂದು ತನ್ನನ್ನು ಪರಿಸ್ಥಿತಿಯನ್ನು ಹಳಿದುಕೊಂಡ.

ಸೀತಮ್ಮ “ನಮ್ಮ ದುಡ್ಡು ಹೋದರೂ ಚಿಂತೆಯಿಲ್ಲ ಆ ಹಾಳಾದ ಬೈಕನ್ನ ಹೋಗಿ ಎಲ್ಲಾದ್ರೂ ಹಾಕಿ ಬಾರಪ್ಪ.ಆಮೇಲೆ ನಿನ್ನ ಎಲ್ಲೋ ಹೋದಾಗ ಖೂನಿ ಮಾಡಿದರೆ ಏನು ಗತಿ.” ಎಂದು ಬುದ್ದಿ ಹೇಳಿದರು.
ತಮಗೆ ಎಂಥ ಮೋಸ ಮಾಡಿದರಲ್ಲ ಎಂದು ಕಾವೇರಿ ಸುಬ್ಬಣ್ಣನ ಮನೆಯ ಮುಂದೆ ಹೋಗಿ ಹೀನಾಮಾನ ಬೈದು ಬಂದಿದ್ದಳು. ಅವನ ತಾಯಿ ಅದೆಲ್ಲಿಗೋ ಹೋಗಿ ಪೂಜೆ ಮಾಡಿಸಿಕೊಂಡು ಬಂದು ನಿಂಬೆ ಹಣ್ಣನ್ನು ಕೈಗೆ ಇಟ್ಟು ಅದನ್ನು ಏನು ಮಾಡಬೇಕು ಎಂದು ಕಲ್ಲೇಶನಿಗೆ ಹೇಳಿದಳು.

ಕಲ್ಲೇಶ ಅದರಂತೆ ಜೇಬಿನಲ್ಲಿ ನಿಂಬೆ ಹಣ್ಣು ಕುಂಕುಮವನ್ನೆಲ್ಲ ಇಟ್ಟುಕೊಂಡು ಅಮಾವಾಸ್ಯಯ ರಾತ್ರಿ ಓಡಿಸಿಕೊಂಡು ಊರಾಚೆಯ ಸ್ಮಶಾನದ ಬಳಿ ಹೋದ. ಪಕ್ಕದಲ್ಲಿಯೇ ಹಳ್ಳವಿತ್ತು. ಇಂದು ಬೈಕಿನಿಂದ ಯಾವ ಸಮಸ್ಯೆಯೂ ಆಗಲಿಲ್ಲ.ಅದನ್ನು ನಿಲ್ಲಿಸಿ ಪೂಜೆ ಮಾಡಿ ಕುಂಕುಮ ಎಲ್ಲ ಅದಕ್ಕೆ ಹಾಕಿ ಒಂದು ಮೊಟ್ಟೆಯನ್ನೂ ಸಹ ಅಲ್ಲೇ ಒಡೆದು ಹಾಕಿದ ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಿ ಆ ಬೈಕನ್ನು ಸುಟ್ಟುಬಿಟ್ಟ. ನಂತರ ಅಲ್ಲೇ ಇದ್ದ ಹೊಂಡದೊಳಕ್ಕೆ ಅದರ ಕಳೇಬರ ಹಾಕಿ ಬಂದ.

ಎರಡು ಮೂರು ದಿನಗಳ ಕಾಲ ನೋಡಿದರೂ ಯಾವ ಸಮಸ್ಯೆಯೂ ಬರಲಿಲ್ಲ.ಈಗ ಎಲ್ಲರೂ ನಿರಾಳರಾದರು.ಎಲ್ಲರೂ ನಿಶ್ಚಿಂತೆಯಿಂದ ಮಲಗಿದರು. ಮರುದಿನ ಬೆಳಗ್ಗೆ ಹೆಂಡತಿಯ ಬೊಬ್ಬಿಡುವಿಕೆಗೆ ಎಚ್ಚರಗೊಂಡ ಕಲ್ಲೇಶ ಹೊರಗಡೆ ಬಂದು ನೋಡಿ ಹೌಹಾರಿದ .ನಿನ್ನೆ ತಾನೇ ಸುಟ್ಟು ಹಾಕಿದ ಬೈಕು ಏನೂ ಆಗಿಯೇ ಇಲ್ಲವೆಂಬಂತೆ ಅವರ ಅಂಗಳದಲ್ಲಿ ಬಂದು ನಿಂತಿತ್ತು!

ಮನೋಜ್. ಎನ್. ಜವಳಿ
ಎಂ. ಬಿ. ಬಿ. ಎಸ್ ವಿದ್ಯಾರ್ಥಿ
ನಾಯಕನಹಟ್ಟಿ, ಚಳ್ಳಕೆರೆ.

0
    0
    Your Cart
    Your cart is emptyReturn to Shop