ಶ್ರಾವಣದ ಮಳೆ ಸುರಿಯುತ್ತಲೇ ಇತ್ತು ಅಜ್ಜಿ ಮುಸ್ಸಂಜೆಯ ದೀಪವ ಹಚ್ಚಿ ‘ಶ್ರೀಮದ್ ನಾರಯಣ ಗೋವಿಂದೋ, ಗೋವಿಂದ’ ಎಂದಳು. ಕೋಣೆಯಲ್ಲಿ ಮಲಗಿದ್ದವನಿಗೆ ವಾಂತಿ ಭೇದಿಯಾಗುತ್ತಲೇ ಇತ್ತು,ಅಜ್ಜಿ ‘ವಾರ’ ಮಾಡುತಿದ್ದಳು. ಅಜ್ಜ ನೇಗಿಲ ಹೊತ್ತುಕೊಂಡು ಗದ್ದೆಯ ಕಡೆ ನಡೆದೆಬಿಟ್ಟ. ಒಮ್ಮೆ ‘ ವ್ಹ್ಯಾ ‘ ಎಂದು ಇನ್ನೊಮ್ಮೆ ‘ಬ್ಹ್ಯಾ’ ಎಂದು ಮನೆತುಂಬಾ ಗಲೀಜು ಮಾಡಿಬಿಟ್ಟೆ. ದೇವರ ಪೋಟೋಗಳ ಒಣಬಟ್ಟೆಯಲ್ಲಿ ಒರೆಸಿ,ಕಂಚು ತಾಮ್ರದ ಗಂಟೆ, ಮಂಗಳಾರತಿ ತಟ್ಟೆ,ಧೂಪದ ಕುಣಿಕೆ,ದೀಪಾಲೆ ಕಂಬಗಳು,ಉದ್ಧರಣೆ ಹಾಗೂ ಕಳಸವನ್ನು ಹುಣಸೇಕಾಯಿ ಮತ್ತು ರಂಗೋಲಿಪುಡಿ ಬಳಸಿ ಉಜ್ಜಿ ಫಳಫಳ ಹೊಳೆಯುವಂತೆ ಮಾಡಿದ್ದಳು, ನೆಲಕ್ಕೆ ಕೊಟ್ಟಿಗೆಯ ಹಸುವಿನ ಸಗಣಿಯ ತಂದು ಒರೆಸಿದ್ದಳು. ಮನೆ ಮುಂದೆ ಹಾಕಿದ್ದ ರಂಗೋಲಿ ದ್ರೋಣನ ಚಕ್ರವ್ಯೂಹದಂತೆ ಕಾಣುತಿತ್ತು.
ಬಿಲ್ವ,ತುಳಸಿ,ದಾಸವಾಳ,ದೇವಕಣಿಗಲೆ,ತುಂಬೆ,ಲಕ್ಕಿಸೊಪ್ಪುಗಳ ಸುವಾಸನೆ ಮನೆಯ ತುಂಬಾ ಹರಡುತ್ತಲೇ ಇತ್ತು! ಸಂಕಟ ತಡೆಯಲಾಗದೆ ‘ ಯವ್ವೋ ! ಎಂದೆ’ ಕೇಳಿಸಿಕೊಂಡವಳು ‘ ಏನಾ ಏನಾಯ್ತೋ , ಲೋ ಹನುಮ’ ಎಂದಳು. ನಿತ್ರಾಣನಾಗಿ ನೆಲದ ಮೇಲೆ ಬಿದ್ದಾಗ ಜೋರಾಗಿ ಅರಚಿಬಿಟ್ಟಳು ನಾನು ಸಾವಿನ ತೀರಕ್ಕೆ ಹೋದಂತೆ. ಇವಳ ಅರಚುವಿಕೆ ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಏನಾಯಿತು ಎಂದು ಕೇಳಿ ಊರಿನ ಪೂಜಾರಿಯ ಕರೆಸಿ ‘ ಗಾಳಿ ಬಿಡಿಸಿದರು’ ಜಪ್ಪಯ ಅಂದ್ರು ಮೈಯೊಳಗಿನ ಬಿಸಿ ಕಡಮೆಯಾಗಲೇ ಇಲ್ಲ. ಬಲಗಾಲಿಗೆ ಕಬ್ಬಿಣವ ಕಾಯಿಸಿ ಸುಟ್ಟರೂ,ವರಣ ತೆಗ್ದು ಎಸೆದರೂ,ತುಳಸಿ ತೀರ್ಥವ ಕುಡಿಸಿದರೂ ಜ್ವರ ನೂರು ಪಟ್ಟಾಯಿತು. ದೃಷ್ಟಿ ಏನಾದರೂ ಆಗಿರಬಹುದೆಂದು ‘ಕಲಂಜರ’ ಹಾಕಿ ಹೊಕ್ಕಳಕ್ಕೆ ಮಸಿ ಬಳಿದಳು ಜ್ವರ ಅವಳ ಮಾತಿಗೆ ಜಗ್ಗಲಿಲ್ಲ. ಭಯ ಬಿದ್ದಳು ‘ ಅಯ್ಯೋ ತಿರುಪತಿಯ ತಿಮ್ಮಪ್ಪ ಮೋಸ ಮಾಡಿದ್ಯಲೋ’ ಎಂದು ದೇವರ ಪೋಟೋದ ಮುಂದೆ ಅತ್ತಳು.
ನಮ್ಮೂರಿನಿಂದ ಸಿಟಿಯಲ್ಲಿರುವ ಆಸ್ಪತ್ರೆಗೆ ಸುಮಾರು ಹನ್ನೆರಡು ಕಿಲೋಮೀಟರ್ನಷ್ಟು ಎತ್ತಿನಗಾಡಿಯ ಮೇಲೆಯೇ ಹೋಗಬೇಕಿತ್ತು, ಒಂದು ಬಸ್ ಬಿಟ್ಟರೆ ಮತ್ಯಾವ ವಾಹನಗಳ ಸಂಚಲನೆ ಇರಲಿಲ್ಲ. ಈಗೀನ ತರಹ ಹಳ್ಳಿಗಳಲ್ಲಿ ಕಾರು,ಟ್ರಾಕ್ಟರ್,ಆಟೋಗಳು ಬಂದಿರಲಿಲ್ಲ. ಮನೆಯ ಪಕ್ಕದಲ್ಲಿನ ದೊಡ್ಡದಾದ ಕೆರೆಯ ತಂಢಿ ಬಡಿಯುತ್ತಲೇ ಇತ್ತು. ತುಟಿಗಳೆರಡು ಸೀದು ಹೋದವು, ಕಾಲು ಕೈಗಳು ನಿಗರಿದವು,ಏನೇನೋ ಬಾಯಲ್ಲಿ ಮಾತುಗಳು ಬರುತಿದ್ದವು. ಶ್ರಾವಣದ ಮೊದಲ ವಾರ ಅಜ್ಜಿ ಉಪವಾಸವ ಮಾಡಿ ‘ದೇವರಿಗೆ ಎಡೆಯಿಟ್ಟು’ ಮನೆದೇವರನ್ನು ನೆನೆದು ಸುಮಾರು ಸಂಜೆ ಐದುಗಂಟೆಗೆ ಪ್ರಸಾದವನ್ನು ತಿನ್ನುತಿದ್ದಳು ಯಾವುದು ತಪ್ಪಿದರೂ ಅವಳ ಈ ‘ವಾರ’ ತಪ್ಪುತಿರಲಿಲ್ಲ. ಯಾರಾದರೂ ಗದ್ದೆಯ ಕಡೆ ಹೋಗುವವರ ಕಂಡರೆ ಕೂಗಿ ‘ ಅಯ್ ಅಲೇ ನಮ್ಮೊರು ಗದ್ದೆತವ ಅವ್ರೆ ,ಬೇಗ್ನೆ ಮನೆಗೆ ಬರೋಕೆ ಹೇಳ್ರಪಾ, ಹನುಮಂತನಿಗೆ ಹೋಗೋ ಬರೋ ಜೀವ ಆಗದೆ’ ಎಂದು ಕೋಣೆಯ ಕಿಟಕಿಯಲ್ಲಿಯೆ ಅರಚಿದಳು. ಯಾರಾದರೂ ‘ಮಾಟ ಮಂತ್ರ’ ಏನಾದರೂ ಮಾಡಿಬಿಟ್ಟರೋ ಏನೋ ‘ ಸುಮಾರು ಹೆಣ್ಣುಗಳ ಹಿಂದೆ ಹುಟ್ಟವ, ನನ್ನ ಮಗಳು ಗಂಡೆ ಬೇಕೆಂದು ಹೆತ್ತವಳು ಥೂ ದರಿದ್ರವಳೆ’ ಎಂದು ನನ್ನಮ್ಮನಿಗೂ ಬೈದಳು. ಊರಿನ ಪೂಜಾರಿ ಬಂದು ಊ- ಬತ್ತಿ ಮಂತ್ರಿಸಿ ಕೊಟ್ಟ, ತಾಯಿತ ಕಟ್ಟಿದ ಜ್ವರ ‘ಜುಮ್’ ಅನ್ನಲಿಲ್ಲ. ಅಜ್ಜ ಗದ್ದೆಯಿಂದ ಆರು ಬಿಟ್ಟು ಬರಲೇ ಇಲ್ಲ. ನೋಡಿ ನೋಡಿ ಸಾಕಾದ ಅಜ್ಜಿ ಊರ ದೇವತೆಯ ಶಾಸ್ತ್ರ ಕೇಳಲು ಹೋದಳು.
‘ ಏನೇ ಮಗಳೆ ಇವಾಗ ನೆನಪಾದ್ನ, ನನ್ನ ಗಂಟು ಬಾಕಿ ಅದ್ಯಾಲೇ. ನಮ್ಮಣ್ಣನ ಕುಲದ ಮಗನವನು ಅವನ ಪೂಜೆ ಪುರಸ್ಕಾರ ಮಾಡ್ದೆ ಇದ್ದಿರಲೇ ,ತಿರುಪತಿಯ ಹರಕೆ ಕಟ್ಟಬಾರದೆನೆ’ ಎಂದು ಪೂಜಾರಿ ಅರಚಿದನಂತೆ.
‘ತಪ್ಪಾಯಿತು ಕಣವ್ವಾ ,ಮಗೀನ ಉಳಿಸಿಕೊಡವ್ವಾ ನಿನ್ ದಮ್ಮಯ್ಯಾ ಅಂತೀನಿ ಕಣವ್ವಾ ‘ ಎಂದೆಲ್ಲ ಬೇಡಿ ತುಂಬಿದರಬಿ ನೀರು ಹಾಕು ಎಲ್ಲ ಸರಿ ಹೋಗುತ್ತದೆ ಒಂದೆರಡು ರೂಪಾಯಿ ತಪ್ಪಿನ ಹರಕೆ ಕಟ್ಟೆಂದು ಹೇಳಿ ಕಳಿಸಿದ. ರಾತ್ರಿಯೆಲ್ಲ ಜ್ವರದ ಕಾವಿನಿಂದ ನರಳಿದೆ, ಯಾವ ಯಂತ್ರ, ತಂತ್ರಗಳಿಂದಲೂ, ಹರಕೆ, ಪೊರೆಕೆಯಿಂದ ಬಡಿದರೂ ಜ್ವರ ಬಿಟ್ಟು ಹೋಗಲಿಲ್ಲ.
ನಮ್ಮ ಊರಿನಲ್ಲಿ ಐನೋರುಮನೆಯ ತಮ್ಮಣ್ಣಯ್ಯನೆಂಬ ಮನೆಕೆಲಸದವನಿದ್ದ. ಅವನಿಗೆ ಎಂಥಾ ಕಾಯಿಲೆಗಳೂ ಬಂದರೂ ಗುಣಪಡಿಸುವ ಚಾತುರತೆಯನ್ನು ಪಡೆದುಕೊಂಡಿದ್ದ. ಮೂಳೆ ಮುರಿದರೆ ಪಟ್ಟು ಹಾಕಿ ಮೂರು ನಾಲ್ಕು ತಿಂಗಳುಗಳಲ್ಲಿ ಮುರಿದ ಮೂಳೆಗಳ ಕೂರಿಸುತಿದ್ದ,ನರಗಳು ಏನಾದರೂ ಜಾರಿಕೊಂಡಿದ್ದರೆ ನಿಧಾನವಾಗಿ ಹುಳುಕು ತೆಗೆಯುತಿದ್ದ. ನರವೈದ್ಯದ ಜೊತೆಗೂ ಗೋವೈದ್ಯ, ಬಾಲವೈದ್ಯ, ವಿಷವನ್ನು ಶಮನ ಮಾಡುವ ಅದೇನೋ ಗಿಡಮೂಲಿಕಗಳ ಅವನ ಗುಡಿಸಿಲಿನ ತುಂಬಾ ನೇತುಹಾಕಿದ್ದ. ಬಂದವರಿಗೆ,ನೋಡಿದವರಿಗೆ ಇವನ ಹುಚ್ಚಾಟವ ನೋಡಿದರೆ ಯಾರೋ ಪೆದ್ದನಂತೆ ಕಾಣುತ್ತಾನೆ ಎಂದರೂ ಅವನ ಈ ವೈದ್ಯಕೀಯ ಪೋಷಣೆ ಎಂದೂ ಯಾರಿಗೂ ಅಪಾಯವಾಗಿರಲಿಲ್ಲ. ಒಂದು ದಿನ ಬಾಣಂತನಕ್ಕೆ ಬಂದಿದ್ದ ದೊಡ್ಡಮ್ಮನ ಮಗಳ ಹಸುಗೂಸಿಗೆ ‘ರಚ್ಚೆ’ ಹಿಡಿಯದಂತೆ ಬಜೆಯ ಜಜ್ಜಿ ಜೇನುತುಪ್ಪದ ಜೊತೆ ಕೊಟ್ಟ ಮೇಲೆ ಮಗು ಸುಮ್ಮನೆ ಮಲಗಿದ್ದನ್ನು ಕಂಡು ಎಲ್ಲರೂ ಇವನ ಕೈಗುಣವೇ ಸರಿ ಎಂದು ಹೊಗಳಿದ್ದರು. ಕರು ಅಡ್ಡವಾಗಿ ತಿರುಗಿಕೊಂಡ ಚೊಚ್ಚಲ ಹಸುವಿನ ಡಿಲಿವರಿಯನ್ನು ಕೂಡ ತನ್ನ ಕೈ ಬೆರಳುಗಳಿಂದ ಆಡಿಸಿ ಕರು ನೇರವಾಗಿ ತಿರುಗಿಕೊಂಡು ಬರಲು ಅದೇನೇನೋ ಇದ್ಯೆಯ ಕಲಿತಿದ್ದ. ಇವನೇನು ಎಂಬಿಬಿಎಸ್ ಓದಿರದಿದ್ದರು ವಿಜ್ಞಾನದ ವಿಷಯಗಳಲ್ಲಿ ಸಾವಿರಾರು ಪುಟಗಳಷ್ಟು ಬರೆಯಬಹುದಾದ ಜ್ಞಾನವಿತ್ತು. ಸಸ್ಯಜ್ಞಾನದ ಜೊತೆಗೆ ಪ್ರಾಣಿವಿಜ್ಞಾನವನ್ನು ಚೆನ್ನಾಗಿ ಅರಿತಿದ್ದ. ಕೈಯಲ್ಲಿ ತುಂಡು ಬೀಡಿಯ ಸೇದುತ್ತಾ ಉದ್ದನೆಯ ಉರಿಮೀಸೆಯ ಜೊತೆಗೆ ಕುಳ್ಳನೆಯ ದೇಹದ ಕೆಂಪು ಬಣ್ಣದ ಮನ್ಮಥನಂತೆ ಕಂಡರೂ ಮದುವೆಯಾಗದೆ ಉಳಿದಿದ್ದು ಒಂದು ದೊಡ್ಡ ಕತೆಯೇ ಇದೆ.
‘ಏನಣ್ಣ ತಮ್ಮಣ್ಣ , ಯಾಕೋ ಮದ್ವೆ ಆಗ್ಲಿಲ್ಲ’ ಅಂದ್ರೆ.
‘ ಏನ್ಮೋಡೋದು ಸಾಮಿ, ನನ್ ಹಣೆಯಲ್ಲಿ ಬರೆದಿಲ್ಲ ಆ ಹೆಣ್ಣನ್ನ? ಆದ್ರೂ ಮದ್ವೆಯೇ ಸಾಧನೆಯಲ್ಲ. ಜಗತ್ತು ಇಸಾಲವಾಗ್ತದೆ ಈಗ ನೋಡಿ ಈ ಪ್ರಾಣಿ ಪಕ್ಷಿಗಳ ಬದುಕು, ಎಲ್ಲಿಯಾದರೂ ನಿಂತ ಬದುಕೆ, ನಂದು ಹಂಗೆಯಾ? ‘ಎನ್ನುತಿದ್ದ.
ಕೆಲವರಿಗೆ ಇವನು ಹೇಳಿದ್ದು ಅರ್ಥವಾಗದೆ ಈ ಹುಚ್ಚನ ಸಹವಾಸವೇ ಬೇಡವೆಂದು ದೂರಸರಿಯುತಿದ್ದರು. ಒಬ್ಬನೆ ದಾರಿಯುದ್ದಕ್ಕೂ ಅದೇನೇನೋ ಮಾತನಾಡಿಕೊಂಡು ತಿರುಗುವುದನ್ನು ಕಂಡವರು, ‘ ಲೇಯ್ ತಮ್ಮಣ್ಣ ಏನೋ ಮಾತನಾಡ್ತ ಇದ್ಯಾ ‘ ಎಂದು ಕೇಳಿದರೆ ಈ ನೆಲದ ಜೊತೆಯೆ ಮಾತನಾಡ್ತ ಇದೀನಿ ಎಂದು ಹೇಳಿಬಿಡುತಿದ್ದ. ಅವನ ಗುಡಿಸಿಲಿನ ತುಂಬಾ ಬರೀ ಗೆಡ್ಡೆ,ಎಲೆ,ಹೂ ಚೊಟ್ಟು, ಕಾಂಡ,ಬೇರುಗಳ ರಾಶಿಯೆ ಹಾಕಿದ್ದ. ಅಜ್ಜಿ ಅಜ್ಜ ಬಾರದನ್ನು ನೋಡಿ ಈ ತಮ್ಮಣ್ಣನ ಕರೆದುಕೊಂಡು ಬಂದು ವೈದ್ಯ ಮಾಡಿಸಿದರು. ಕೈನಾಡಿಯ ಮುಟ್ಟಿ ‘ ಇಜ್ವರ ವಿಪರೀತವಾಗಿದೆ, ತಡಿ ಬಂದೆ ಅಮ್ನೋರೆ’ ಎಂದು ಹೊರಟವನು ಅದ್ಯಾವುದೋ ಮರದ ತೊಗಟೆಯ ತಂದು ಕೈಬಾಚಿಯಿಂದ ಚಚ್ಚಿ ಚಚ್ಚಿ ಅದರ ರಸವನ್ನು ಒಂದು ಬಟ್ಟಲಿಗೆ ಸೊಸಿಕೊಂಡು ‘ ಕುಡಿ ಇಲ್ಲಿ ನೋಡು, ಆ ಅನ್ನು ‘ಆ’ ಅನ್ನು ಎಂದ. ಇನೇನು ಹತ್ತಾರು ಹನಿ ಬೀಳುವಷ್ಟರಲ್ಲಿ ಬಾಯೆಲ್ಲ ಕಹಿ ತುಂಬಿ ಒಂದು ರೀತಿಯ ಕಷ್ಟವಾದಾಗ ಉಗಿದುಬಿಟ್ಟೆ. ಇದನ್ನು ಕಂಡವನು ನನ್ನೆರಡು ಕೈಗಳನ್ನು ಬಿಗಿಯಾಗಿ ಇಟ್ಟುಕೊಂಡು ‘ಬಿದಿರಿನ ಸಣ್ಣ ಕೊಟ್ಟೆ’ಯಲ್ಲಿ ಒಂದೆ ಗುಟ್ಟುಕಿಗೆ ಸುರಿದುಬಿಟ್ಟ. ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿ ಚೀಪು ಎಂದ. ಇವತ್ತು ಇಜ್ವರ ಬಿಡಲಿಲ್ಲ ಅಂದ್ರೆ ನಾಳೆ ಬತೀನಿ ಮತ್ತೆ ಕಷಾಯದ ಜೊತೆ ಎಂದಿದ್ದನ್ನು ಕೇಳಿಸಿಕೊಂಡ ನಾನು ಮತ್ತೆ ಬೇಡ ಆ ನರಕ ಎಂದುಕೊಂಡು. ಕೆಲ ನಿಮಿಷಗಳು ಕಳೆದ ಮೇಲೆ ಅಜ್ಜಿ ಬಿಸಿಮುದ್ದೆಯೊಂದಿಗೆ ಮೆಣಸಿನ ಸಾರು ಮಾಡಿ ಬಿಸಿಬಿಸಿಯಾಗಿಯೆ ನಾಲಿಗೆ ಸುಟ್ಟು ಹೋಗುವಂತೆ ತಿನ್ನಿಸಿಬಿಟ್ಟಳು. ಮೈಯೆಲ್ಲ ಬೆವರಿ ಸ್ನಾನದ ಮನೆಯಲ್ಲಿ ಕುಳಿತಿರುವಂತೆ ಭಾಸವಾಯಿತು. ಬೆಳ್ಗೆ ಅವನು ಬರುವುದು ಬೇಡ ಅಂದುಕೊಂಡೆ ಮಲಗಿದೆ, ಎದ್ದು ನೋಡಿದರೆ ಅವನು ನಮ್ಮ ಮನೆಯ ಮುಂದೆಯೆ ಇದಿದ್ದು ಕಂಡು ಇನ್ನು ಭಯವಾಯಿತು ಎಲ್ಲಿ ದನಗಳಿಗೆ ಗಂಜಿ ಕುಡಿಸುವಂತೆ ನನಗೂ ಕೊಟ್ಟೆಯಲ್ಲಿ ಕೆಡಗಿ ಕುಡಿಸುವನೋ ಎಂದು. ನನ್ನ ಅಸಹಾಯಕ ಕಣ್ಣುಗಳು ಅವನ ಕಡೆ ನೋಡಿದವು. ಮೈ ಭಾರ ಇಳಿದಿತ್ತು,ಸ್ವಲ್ಪ ನಿಶ್ಯಕ್ತಿಯಂತೆ ಕಂಡರೂ ಎದ್ದು ಓಡಾಡುವಷ್ಟು ಸ್ಥೈರ್ಯವಾಯಿತ್ತಲ್ಲ ಎಂದು ಅಜ್ಡಿ ಸಮಾಧಾನಮಾಡಿಕೊಂಡಳು. ತಮ್ಮಣ್ಣ ಏನೋ ಮತ್ತಷ್ಟು ಗಿಡಮೂಲಿಕೆಯ ರಸವ ಕೊಟ್ಟು ‘ ಚೇತರಿಸಿಕೊಂಡವ್ನೆ ಅಮ್ನೋರೆ, ಇವತ್ತು ಈ ಕಷಾಯ ಕುಡಿಸಿಬಿಡಿ’ ಎಂದು ಹೊರಟುಹೋದ.
ಇತ್ತ ನಾನು ಎದ್ದು ಓಡಾಡಿಕೊಂಡು ಆರೋಗ್ಯದಿಂದ ಇರುವಾಗ, ಒಂದು ದಿನ ಶ್ರಾವಣದ ಶನಿವಾರ ಅಜ್ಜಿ ನನಗೆ ಕಚ್ಚೆಪಂಚೆಯುಡಿಸಿ ಕೈಯಲ್ಲಿ ಗರುಡಗಂಭ,ಭವನಾಶಿ,ಸೌಗಂಧಿಕ ಪುಷ್ಪದ ಆಂಜನೇಯನ ಮೂರ್ತಿ, ಬಾನಕಿ ಬೋಸಿ,ಜಾಗಟೆ,ಶಂಖು ಇತ್ಯಾದಿಗಳನ್ನು ಎರಡು ಕೈಗಳಿಗೆ ಹಾಗೂ ಜೋಳಿಗೆಗೆ ತುಂಬಿ.’ ಊದು ದಾಸಯ್ಯ ನಿನ್ನ ಶಂಖ ಜಾಗಟೆಯ’ ಎಂದಳು.
ಮೈಸೂರಿನ ಪೇಟ ತೊಟ್ಟು , ಕರಿಯ ಕೋರ್ಟು, ಇದರ ಜೊತೆಗೆ ಭಿಕ್ಷೆ ಬೇಡಿ ಬಾ ಎಂದಿದ್ದನ್ನು ಕಂಡು ನಾನು ಹೋಗುವುದಿಲ್ಲ ಎಂದು ಹಠ ಮಾಡಿದೆ. ‘ ಅಲ್ಲೋ ಕಂದಮ್ಮ ಆವತ್ತು ಜ್ವರ ಬಂದಾಗ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತುಕೊಂಡಿದಿದ್ದೆ, ಮನೆದೇವರ ಬಗ್ಗೆ ಏನು ಹೇಳಬಾರದು, ನಡಿ ನಡಿ ಎಂದು ತಿಮ್ಮಪ್ಪನ ಪೂಜೆಗೆ ಕಳುಹಿಸಿದಳು. ಇಜ್ವರಕ್ಕೂ ಪೂಜೆಗೂ ಸಂಬಂಧವೆ ಇಲ್ಲ ಎನಿಸಿದಾಗ ತಮ್ಮಣ್ಣನ ಗಿಡಮೂಲಿಕೆಯ ವೈದ್ಯದಿಂದಲ್ಲವೆ ನಾನು ಗುಣಮುಖವಾಗಿದ್ದು ಎಂದುಕೊಂಡು ಮನೆಮನೆಗೂ ಪೂಜೆಗೆ ಹೋಗದೆ ನಮ್ಮೂರಿನ ಕೆರೆಯ ಮೇಲೆ ಮೈಸೂರಿನ ಪೇಟವ ತೆಗ್ದು ಬೀಸಾಕಿ,ಶಂಖ ಜಾಗಟೆ, ಬೋಸಿ,ಭವನಾಶಿಗಳ ಏರಿಯ ಮೇಲೆ ಇಟ್ಟು . ಕೆರೆಗೆ ಕಲ್ಲುಗಳ ಎಸೆಯುತ್ತ ನೀರೊಳಗಿನ ಪ್ರಪಂಚವ ನೋಡುತ್ತಲೇ ಮೈಮರೆತೆ.