ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಬಂದ ಸಾಮಾಜಿಕ ಸಮಸ್ಯೆಯನ್ನು ತೋರಿಸುವ ಚಿತ್ರ ಪಾಲಾರ್. ಇದರ ಕತೆಯ ರಚನೆ ಜತೆಗೆ ಸಿನಿಮಾವನ್ನು ನಿರ್ದೇಶಿಸಿದವರು ಜೀವ ನವೀನ್. ಸಿನಿಮಾದ ನಾಯಕಿಯಾಗಿ ಉಮಾ ವೈ. ಜಿ, ನಾಯಕ ನಟನಾಗಿ ತಿಲಕ್ ಎ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಪರದೆಯ ಹಿಂದೆ ಇನ್ನೂ ಬಹಳ ಜನ ಕೆಲಸ ಮಾಡಿದ್ದಾರೆ.
ಈ ಸಿನಿಮಾವು ದಂತಕತೆಯಲ್ಲ. ನೈಜ್ಯ ಘಟನೆಗಳನ್ನು ಆಧಾರಿಸಿ ಮಾಡಿರೋದು. ಭಾರತದಲ್ಲಿ ಬೇರೂರಿ ನಿಂತಿರುವ ಜಾತಿವ್ಯವಸ್ಥೆ, ತಾರತಮ್ಯ, ವರ್ಗಪ್ರಜ್ಞೆ, ಬಲ ಉಳ್ಳವರು ತಳ ಸಮುದಾಯವನ್ನು ತುಳಿಯುವುದು ಈ ಸಿನಿಮಾದಲ್ಲಿ ಕಾಣಬಹುದು.
ಮೊದಲಿಗೆ ಸಿನಿಮಾ ಆರಂಭ ವಾಗುವುದು ಇಬ್ಬರು ಪ್ರೇಮಿಗಳ ಮಾತುಗಳಿಂದ. ಅವರಿಬ್ಬರು ಒಬ್ಬರನೊಬ್ಬರು ಬಿಟ್ಟಿರುವುದಕ್ಕೆ ಆಗುವುದಿಲ್ಲ. ಹಾಗಾಗಿ ಬೇರೆ ಕಡೆ ಹೋಗಿ ಮದುವೆ ಆಗೋಣ ಅನ್ನೊ ಮಾತುಗಳು, ಅವಳು ಮೇಲ್ಜಾತಿ ಎನಿಸಿಕೊಂಡವರ (ಗೌಡ) ಮಗಳು. ಈತ ತಳ ಸಮುದಾಯದ ಹುಡುಗ. ಹಳ್ಳಿಗಳಲ್ಲಿ ತಳ ಸಮುದಾಯದವರನ್ನು ಒಳಗಡೆ ಸಹ ಬಿಟ್ಟುಕೊಳ್ಳುವುದಿಲ್ಲ, ಮುಟ್ಟಿಸಿಕೊಳ್ಳುವುದೂ ಇಲ್ಲ. ಹೀಗಿದ್ದ ವಾತಾವರಣದಲ್ಲಿ ಅವರಿಬ್ಬರು ಬೇರೆ ಕಡೆ ಹೋಗುತ್ತಾರೆ (ಓಡಿಹೋಗುತ್ತಾರೆ) . ಹೋಗುವಾಗ ಆಕೆಯು ಒಂದಿಷ್ಟು ಚಿನ್ನವನ್ನು ತಂದಿರುತ್ತಾಳೆ. ಆದರೆ, ಆತ ಹೇಳುತ್ತಾನೆ ಬೇಡ ಚಿನ್ನ ನಿಮ್ಮ ಮನೆಯಲ್ಲಿ ಇಟ್ಟು ಬಾ ಎಂದು. ಈಗ ಹೋದರೆ ನಾನು ನೀನು ಸಿಕ್ಕಿಕೊಳ್ಳುತ್ತೀವಿ, ಇವರು ನನ್ನನ್ನು ನಿನ್ನನ್ನು ಇಬ್ರನ್ನೂ ಬಿಡಲ್ಲ ಎಂದು ಹೇಳುತ್ತಾಳೆ.
ಮರುದಿನ ಬೆಳಿಗ್ಗೆ ಆ ಊರಿನ ಗೌಡನಿಗೆ ಓಡಿಹೋಗಿರುವ ಸುದ್ದಿ ಗೊತ್ತಾಗುತ್ತದೆ. ತನ್ನ ಮಗಳು ತಳ ಸಮುದಾಯದ ಜೊತೆಗೆ ಓಡಿ ಹೋಗಿದ್ದಾಳೆ ಎಂಬುದೆ ಅವನಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಗೌಡನ ಕಡೆಯವರು ಆ ಹುಡುಗನ ತಂದೆಯನ್ನು ಎಳೆದಾಡಿಕೊಂಡು ತಂದು ನಿಲ್ಲಿಸುತ್ತಾರೆ. ಅನಕ್ಷರಸ್ಥರಾದ ಇಬ್ಬರು ದಂಪತಿಗಳಿಗೆ ಏನು ತಿಳಿಯುವುದಿಲ್ಲ. ನಿನ್ನ ಮಗ ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಅಂತಾ ಹೇಳಿ ಬೈಯುವುದು, ಬೆದರಿಸಿವುದು, ಹೊಡೆಯುವುದು, ಎಲ್ಲವನ್ನು ಮಾಡಿದರು ಗೌಡನಿಗೆ ಸಮಾಧಾನ ಆಗುವುದಿಲ್ಲ.
ಇಂತ ಸ್ಥಿತಿಯಲ್ಲಿಯೂ ಅವನಿಗೆ ಇವರ ಹೊಲದ ಮೇಲೆ ಕಣ್ಣು. ಇದೆ ಸರಿಯಾದ ಸಮಯ ಅಂತಾ ಹೇಳಿ ಖಾಲಿ ಪೇಪರ್ ಮೇಲೆ ಸಹಿಹಾಕಿಸಿಕೊಳ್ಳುತ್ತಾನೆ(ಗೌಡ). ಏನು ತಿಳಿಯದ ಇಬ್ಬರು ಸಹ ಹೆಬ್ಬೆಟ್ಟು ಒತ್ತಿ ಬಿಡುತ್ತಾರೆ. ಈ ದೃಶ್ಯ ನೋಡಿ ನನಗೆ ಪ್ರಶ್ನೆ ಬಂದಿದ್ದು ಅವರ ಆಸ್ತಿ ಕಬಳಿಸುವಾಗ ಅಡ್ಡಬಾರದ ಯಾವ ಜಾತಿಯು ಅವರ ಜೊತೆ ಸಂಬಂಧ ಬೆಳೆಸುವಾಗ, ಜೊತೆಗೆ ಕೂಡಲಿಕ್ಕೆ, ಯಾಕೆ ಜಾತಿ ಅಡ್ಡ ಬರುತ್ತೆ?
ನಮಗೆ ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತಾರು ವರ್ಷಗಳಾದರು ಇನ್ನು ಸಹ ಈ ಜಾತಿವ್ಯವಸ್ಥೆ ಇನ್ನು ಕೊನೆಗಂಡಿಲ್ಲ. ಇದೊಂದು ಶೋಚನೀಯ ಸಂಗತಿ. ಪ್ರತಿ ದಿನವೂ ಇಂತಹ ಹಲವಾರು ಘಟನೆಗಳು ನಡೆಯುತ್ತವೆ. ದಲಿತರು/ತಳ ಸಮುದಾಯದವರು ಅಂತಾನೇ ತುಳಿತಕ್ಕೆ, ಶೋಷಣೆಗೆ ಒಳಪಡುತ್ತಾರೆ. ಎಷ್ಟೆಲ್ಲ ತಂತ್ರಜ್ಞಾನ ಮುಂದುವರಿದರು ಜಾತಿಯ ಮೌಢ್ಯತೆ ಇನ್ನು ಹೋಗಿಲ್ಲ. ಸಮಾಜ ಮುಂದುವರಿಯ ಬೇಕಾದರೆ, ಸಮಾನತೆ (ಲಿಂಗದಲ್ಲಿಯು ಮತ್ತು ಜಾತಿಯಲ್ಲಿ) ಇರಬೇಕು. ಈಗ ಪ್ರಸ್ತತ ನಡೆಯುತ್ತಿರುವ ಸುದ್ದಿಗಳನ್ನು ನೋಡಿದರೆ ಭಯವಾಗುತ್ತದೆ. ಜಗ್ಗಿನಲ್ಲಿ ದಲಿತರಿಬ್ಬರು ನೀರು ಕುಡಿದಿದ್ದಾರೆ ಅನ್ನೊ ಕಾರಣಕ್ಕೆನೇ ಕೊಲೆಗಳಾಗುತ್ತವೆ ನಮ್ಮ ದೇಶದಲ್ಲಿ. ಚಿಕ್ಕ ಮಗು ಶಾಲೆಯಲ್ಲಿ ಇಟ್ಟಿರುವ ನೀರಿನ ಮಡಿಕೆಯನ್ನು ಮುಟ್ಟಿದರೆ ಶಿಕ್ಷಕನೇ ಆ ದಲಿತ ಮಗು ಸಾಯುವ ತರ ಥಳಿಸುತ್ತಾನೆ, ಗಡ್ಡ ಬಿಟ್ಟಿದ್ದಾರೆಂದು ಹಲ್ಲೆಗಳು ನಡೆಯುತ್ತವೆ, ಹೀಗೆ ಹೇಳುತ್ತಾ ಹೋದರೆ ಸಾಲುಗಳು ಮುಂದುವರಿಯುತ್ತದೆ.
ಈ ಸಿನಿಮಾವನ್ನು ಗಮನಿಸಿದರೆ ಅಲ್ಲಿರುವ ಜಾತಿಯ ತಾರತಮ್ಯ, ವರ್ಗ, ಇವುಗಳ ಬಗ್ಗೆ ಗೊತ್ತಾಗುತ್ತದೆ. ನಟಿಯು ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸಿ, ಅವಳ ಹಾಡಿಗೆ ಬಹುಮಾನವೂ ಬರುತ್ತೆ. ಆದರೆ ಅಲ್ಲಿಯೂ ಮೇಲ್ಜಾತಿ ಎಂದು ಕರೆಸಿಕೊಳ್ಳುವವ ಬಂದು ಜಗಳ ಮಾಡುತ್ತಾನೆ. ಅವಳ ತಂದೆ ಗ್ರಾಮ ಪಂಚಾಯತಿಯ ಅಧ್ಯಕ್ಷನಾದರು. ಆತನನ್ನು ಹೊಡೆದು ಅವಮಾನ ಮಾಡಿ ಕಳಿಸುತ್ತಾರೆ (ಇವರ ಊರಿನ ಗೌಡರು). ಅಂದರೆ ಗೌಡನ ಮನೆಯಲ್ಲಿ ಸಿನಿಮಾ ನಾಯಕಿಯ ತಂದೆ ಕೆಲಸ ಮಾಡುತ್ತಿರುತ್ತಾನೆ. ಆಗ ಗ್ರಾಮ ಪಂಚಾಯತಿ ಅಧ್ಯಕ್ಷರಾಗಲು ತಳ ಸಮುದಾಯಕ್ಕೆ ಸರ್ಕಾರವು ಆದೇಶ ಕೊಡುತ್ತದೆ. ಗೌಡನಿಗೆ ಅಧಿಕಾರ ತನ್ನ ಕೈ ತಪ್ಪಿ ಹೋಗಬಾರದೆಂದು, ತನ್ನ ಬಳಿ ಕೆಲಸ ಮಾಡುತ್ತಿದ್ದ ಆತನನ್ನು ನಿಲ್ಲಿಸುತ್ತಾನೆ. ಆದ್ರೆ ಗೆದ್ದ ಮೇಲೆ ಅವರದ್ದೇ ಆಡಳಿತ ನಡೆಯುತ್ತದೆ. ದಲಿತರಿಗೆ ಸರ್ಕಾರವು ಏನೇ ಸೌಕರ್ಯ, ಅವಕಾಶಗಳು ಕೊಟ್ರೂ ಇಂಥವರು ತಲುಪಬೇಕಾದವರಿಗೆ ತಲುಪಲು ಬಿಡುವುದಿಲ್ಲ ಎಂಬುದಕ್ಕೆ ಈ ಸಿನಿಮಾನೇ ಸಾಕ್ಷಿ. ದಲಿತರು ಹೆಸರಿನ ಲಿಸ್ಟ್ ನಲ್ಲಿರುತ್ತಾರೆ ಅಷ್ಟೇ. ಆದರೆ ಅಧಿಕಾರ ನಡೆಸುವವರು ಮೇಲ್ಜಾತಿಯೆಂದು ಕರೆಸಿಕೊಳ್ಳುತ್ತಾರೆ. ಇಲ್ಲಿಯೂ ದಲಿತರನ್ನು ಹೇಗೆ ತುಳಿಯುತ್ತಾರೆ ಎಂಬುದನ್ನು ಗಮನಿಸಬಹುದು.
ಮುಂದೆ ಸಿನಿಮಾ ನಾಯಕ ಮತ್ತು ನಾಯಕಿಯು ಪ್ರೀತಿಸಿ ಮದುವೆಯಾಗುತ್ತಾರೆ. ಅದಕ್ಕು ಮುಂಚೆ ಆತ ಜೈಲಿಗೆ ಹೋಗಿ ಬಂದಿರುತ್ತಾನೆ. ಏಕೆಂದರೆ, ತನ್ನ ಅಣ್ಣನು ಆ ಊರಿನ ಗೌಡನ ಮಗಳನ್ನು ಪ್ರೀತಿಸಿ ಓಡಿಹೋಗಿದ್ದ. ಆಮೇಲೆ ಸುಮಾರು ವರ್ಷಗಳು ಕಳೆದ ಬಳಿಕ ಮರಳಿ ಅವರಿಬ್ಬರೂ ಮನೆಗೆ ಬರುತ್ತಾರೆ. ಆತ ತನ್ನ ತಂದೆ-ತಾಯಿಗೆ ಕ್ಷಮಿಸಿ ಬಿಡು ಎಂದು ಇಬ್ಬರು ಕೇಳುತ್ತಾರೆ. ಅದನ್ನು ಆತನ ತಂದೆ-ತಾಯಿ ಮನ್ನಿಸಿ ಖುಷಿಯಿಂದ ಬರಮಾಡಿಕೊಳ್ಳುತ್ತಾರೆ. ಅದೇ ರಾತ್ರಿ ಆತನ ಹೆಂಡತಿಗೂ ತನ್ನ ತವರು ಮನೆಗೆ ಹೋಗಬೇಕು ಅವರಿಗೆ ಕ್ಷಮೆ ಕೇಳಬೇಕು, ಅವರು ನಮ್ಮನ್ನು ಕ್ಷಮಿಸುತ್ತಾರೆ ಎನ್ನುವ ಭರವಸೆ ಅವಳಲ್ಲಿ ಇತ್ತು. ಹಾಗೇ ತನ್ನ ತವರು ಮನೆಗೆ ಹೋಗುತ್ತಾರೆ. ಆಗ, ಗೌಡನು ತನ್ನ ಮನೆಯಲ್ಲಿಯೂ ಬಿಟ್ಟುಕೊಳ್ಳುವುದಿಲ್ಲ, ಹೊರಗಡೆಯೇ ತನ್ನ ಮಗಳನ್ನು, ಅಳಿಯನ್ನು ಕೊಚ್ಚಿ ಹಾಕುತ್ತಾರೆ. ಸಾವಿನ ಸುದ್ದಿ ತಿಳಿದ ಆತನ ತಮ್ಮ ಒಂದು ಕೊಲೆ ಮಾಡುತ್ತಾನೆ. ನಂತರ ಪೋಲಿಸ್ ಠಾಣೆಯಲ್ಲಿದ್ದು, ಸರಿಯಾದ ಸಾಕ್ಷಿಗಳು ಇಲ್ಲದೇ ಇರುವುದರಿಂದ ಆತ ಮತ್ತೆ ಹೊರಗೆ ಬರುತ್ತಾನೆ. ಆಮೇಲೆ ಮದುವೆ ಆಗುತ್ತಾನೆ. ದುರದೃಷ್ಟವಶಾತ್ ಅದೇ ರಾತ್ರಿ ಆತನ ಕೊಲೆಯಾಗುತ್ತೆ.
ಜಾತಿ ಅನ್ನೊ ವಿಷಯ ಬಂದ್ರೆ ಜೀವಕ್ಕ ಜೀವ ತರ ಇರುವ ತಂದೆಯು ಕೊಲೆ ಮಾಡುವ ಹಂತಕ್ಕೆ ಬರುತ್ತಾನೆ ಎಂದರೆ ನಮ್ಮ ಸಮಾಜದಲ್ಲಿ ಜಾತಿ ವಿಷವೂ ಎಷ್ಟು ಗಟ್ಟಿಯಾಗಿ ಬೇರೂರಿದೆ ಎಂಬುದು ನೋಡಬಹುದು.
ಕೊನೆಗೆ ಅವಳು ಅನ್ಯಾಯವನ್ನು ಮೆಟ್ಟಿ ನಿಂತು ಹೋರಾಟದ ಹೆಜ್ಜೆ ಇಟ್ಟಿದ್ದು, ಆ ಧೈರ್ಯ, ಆ ದಿಟ್ಟ ತನ ತುಂಬಾ ಇಷ್ಟ ಆಯಿತು. ಹೀಗೆ ತುಳಿತಕ್ಕೆ ಒಳಪಟ್ಟವರು ಎದೆಗಟ್ಟಿಮಾಡಿ ನಿಂತರೆ ಅದಕ್ಕೆ ನ್ಯಾಯ ಸಿಗಬಹುದು ಎನ್ನುವ ಕಿಚ್ಚು ಕಂಡುಬಂತು. ಹೋರಾಟ ಮಾಡಿ ಜೈಲಿಗೆ ಹಾಕಿಸುತ್ತಾಳೆ. ಶಿಕ್ಷೆ ಆಗುತ್ತೆ. ತದನಂತರ, ಗೌಡನೂ ಜೈಲಿಂದ ಹೊರಗೆ ಬರುತ್ತಾನೆ. ಅವಳು ಗೌಡನನ್ನು ಕೊಲೆ ಮಾಡುತ್ತಾಳೆ ಅಲ್ಲಿ ಒಂದು ಅನ್ಯಾಯದ ಕಿಡಿ ಎದ್ದು ಕಾಣಿಸುತ್ತದೆ. ಸಿನಿಮಾದಲ್ಲಿನ ದೃಶ್ಯಗಳನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ತಳ ಸಮುದಾಯದವರು ಸಿಡಿದ್ದೆದ್ದರೆ ಯಾವ ರೀತಿ ಇರುತ್ತೆ ಅಂತಾ ಈ ಸಿನಿಮಾದಲ್ಲಿ ನಾನು ಕಂಡೆ.