ಸುತ್ತುತ್ತವೆ ಗಾಲಿಗಳು ಕಾಲ ಬದಲಾದಂತೆ
ಇಲ್ಲಾ ಬದಲಾಗುತ್ತವೆ ಕಾಲಗಳು ಗಾಲಿ ತಿರುಗಿದಂತೆ
ಅಡ್ಡಗಾಲು ಹೊಡೆಯುತ್ತಾ ಸೀಟು ಏರುವ ಸೈಕಲ್ಲು
ಕಿರ್ ಕಿಟಾರ್ ಕಿರ್ ಎನ್ನುವ ಟಿವಿಎಸ್,ಲೂನಾ
ಬಡ್ ಬಡ್ ಬಡ್ ಎಂದು ದಾರಿ ನಡುಗಿಸುವ ರಾಯಲ್ ಎನ್ಫೀಲ್ಡ್
ತಿರುಗುತ್ತವೆ ಬದುಕುಗಳು
ಚಲಿಸುತ್ತವೆ ರಸ್ತೆಗಳು ಮೇಲಿನದ್ದು ಕೆಳಗೆ
ಕೆಳಗಿನದು ಮೇಲೆ
ಎಲ್ಲವೂ ಕಲಬೆರಕೆ
ಬದುಕು ಮಾತ್ರ ಪ್ರತ್ಯೇಕ
ಬದಲಾಗುತ್ತವೆ ಬಂಡಿಯ ಅಳಲು
ತುಂಬಿಕೊಂಡು ತರಕಾರಿ ಹಂಪಲು
ಚಳಿ ಗಾಳಿ ಮಳೆ ಬಿಲಿಸು
ದೇವರು ದಿಂಡಿರು
ಓದಿದ್ದೆಲ್ಲವು ಪೊಟ್ಟಣ ಕಟ್ಟಲಿಕ್ಕೆ
ಅಳಲು ಬಂಡಿ ನಡೆಸಲಿಕ್ಕೆ
ಬರೆಯುತ್ತವೆ ಕೈಗಳು
ಹುದುಗಿ ಹೋದ ಕತೆಗಳನು
ತಲೆಮಾರಿಗುಂಟ ಮೆಲ್ಲ ಮೆಲ್ಲನೆ ಗಿರಕಿ ಹೊಡೆಯುವುದನ್ನು
ಹಸಿವ ಹೊತ್ತು ತಳ್ಳುವುದನ್ನು
ಮಣ ಮಣ ಬರೆಯುತ್ತವೆ
ಸೊರ್ ಸೊರ್ ಕಾಫಿ ಹೀರುತ್ತಾ
ಕಾಪಿ ಮಾಡುತ್ತವೆ ಅಚ್ಚುಕಟ್ಟಾಗಿ
ಹೇಳುತ್ತವೆ ಸುದ್ದಿ ಬಳಸಿ
ಸುದ್ದಿ ಬಳಸಿ ಸುದ್ದಿ ತಿಳಿಸಿ
ಮತ್ತದೇ ಗಾಲಿ ತಿರುಗಿದಂತೆ
ತಿರುಗ ಮುರುಗ
ಆದರೆ ಬದುಕಲಿಲ್ಲ ಬದುಕಲಿಲ್ಲ