ಪುಸ್ತಕ: ಈ ಮಳೆಗಾಲ ನಮ್ಮದಲ್ಲ
ಕವಿ: ಚಲಂ ಹಾಡ್ಲಹಳ್ಳಿ
ಪ್ರಕಾಶನ: ಹಾಡ್ಲಹಳ್ಳಿ ಪಬ್ಲಿಕೇಷನ್
ಬೆಲೆ: ೧೨೦
ಪುಟಗಳು: ೧೨೦
ಹುಟ್ಟು ಮತ್ತು ಸಾವುಗಳ ನಡುವೆ ನಮ್ಮ ಬಾಳ ಸಂತೆಯಲ್ಲಿ ಈ ಸಮಾಜಕ್ಕೆ ಏನನ್ನಾದರೂ ಬಿಟ್ಟು ಹೋಗಬೇಕು. ಅದು ಚಿರಕಾಲ ನೆನಪಿನಲ್ಲಿ ಉಳಿಯಬೇಕು. ಉಳಿದದ್ದು ಕಾಡಬೇಕು. ಕಾಡಿದ್ದು ಹೃಧ್ಯವಾಗಬೇಕು. ಅಂತಹ ಅದ್ಭುತ ಶಕ್ತಿ ಇರುವುದು ಕಲೆಗಳಿಗೆ ಮಾತ್ರ. ಜೀವನವನ್ನು ಸಂಭ್ರಮವಾಗಿಸುವ ಇಂತಹ ಕಲಾ ಪ್ರಕಾರಗಳಲ್ಲಿ ಸಾಹಿತ್ಯವು ಒಂದು. ಇದಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಭಾವನೆಗಳಿಗೆ ಪ್ರತಿಕ್ರಿಯಿಸುವ ಮತ್ತು ಅಭಿವ್ಯಕ್ತಪಡಿಸುವ ಸಾಮರ್ಥ್ಯವಿದ್ದರೆ ಅಲ್ಲೊಂದು ಸಾಹಿತ್ಯ ಪ್ರಕಾರ ಜನ್ಮ ತಾಳುತ್ತದೆ. ಬಲಿತ ತೆನೆಗಳಾದರೆ ಹೆಚ್ಚು ಸಾರವನ್ನು, ಸತ್ವವನ್ನು ಹೀರಿಕೊಂಡು ಓದುಗರನ್ನು ಭಾವುಕರನ್ನಾಗಿಸುತ್ತದೆ. ಇಂತಹ ತನ್ನಯತೆಯಲ್ಲಿ ಓದುಗರನ್ನ ಬಂಧಿಸುವ ಶಕ್ತಿ ಇರುವುದು ಕಾವ್ಯಕ್ಕೆ ಎಂಬುದು ಒಪ್ಪಿತ ನುಡಿ.
ಕವಿ: ಚಲಂ ಹಾಡ್ಲಹಳ್ಳಿ
ಮನದ ಭಾವನೆಗಳಿಗೆ ಸುಲಭವಾಗಿ ಜೀವ ತುಂಬುವ ಮಾಧ್ಯಮವೆಂದರೆ ಕಾವ್ಯ. ಇದು ಬಹುಬೇಗ ಜನರ ಮನಮನವರಿಸಿಕೊಳ್ಳುವ ಲಾಲಿತ್ಯ ಪೂರ್ಣ ಪ್ರಕಾರವಾಗಿದೆ. ಇಂತಹ ಕಾವ್ಯ ಪ್ರಕಾರವನ್ನು ತಮ್ಮ ಬರಹದ ಮಾಧ್ಯಮವನ್ನಾಗಿಸಿಕೊಂಡ ಅನೇಕ ಕವಿಗಳಲ್ಲಿ ಹಾಸನದ ಚಲಂ ಹಾಡಹಳ್ಳಿ ಕೂಡ ಒಬ್ಬರು. ಇವರು ಹಿರಿಯ ಲೇಖಕರಾದ ನಾಗರಾಜ ಹಾಡ್ಲಹಳ್ಳಿ ಅವರ ಪುತ್ರರಾಗಿದ್ದು ಬಾಲ್ಯದಿಂದಲೂ ಸಾಹಿತ್ಯಿಕ ವಾತಾವರಣದಲ್ಲಿ ಬೆಳೆದವರು. ವೃತ್ತಿಯಲ್ಲಿ ಕೃಷಿಕರಾಗಿದ್ದು ರಂಗಭೂಮಿ ಮತ್ತು ಸಾಹಿತ್ಯ ಇವರ ನೆಚ್ಚಿನ ಕ್ಷೇತ್ರಗಳಾಗಿವೆ. ಜೇನುಗಿರಿ ಪತ್ರಿಕೆ ಮತ್ತು ಹಾಡ್ಲಹಳ್ಳಿ ಪಬ್ಲಿಕೇಶನ್ ಸಂಪಾದಕರಾಗಿಯೂ ಕೆಲಸ ನಿರ್ವಹಿಸುತ್ತಿರುವ ಇವರು ‘ಪುನರಪಿ” ಮತ್ತು ‘ಎಲ್ಲಾ ಮೀನುಗಳು ಗಾಳಕ್ಕೆ ಸಿಕ್ಕುವುದಿಲ್ಲ’ ಎಂಬ ಕಥಾ ಸಂಕಲನಗಳನ್ನು ‘ಅವಳ ಪಾದಗಳು’, ‘ಈ ಮಳೆಗಾಲ ನಮ್ಮದಲ್ಲ’ ಎಂಬ ಕಾವ್ಯ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.
‘ಈ ಮಳೆಗಾಲ ನಮ್ಮದಲ್ಲ’ ಈ ಕವನ ಸಂಕಲನದಲ್ಲಿ ಒಟ್ಟು 58 ಕವಿತೆಗಳಿದ್ದು ಒಂದಕ್ಕಿಂತ ಮತ್ತೊಂದು ವಿಭಿನ್ನ ನೆಲೆಯಲ್ಲಿ ರೂಪುಗೊಂಡಿವೆ. ಕಾವ್ಯ ಕಟ್ಟುವ ಕವಿಯು ಅದಕ್ಕೆ ಶೀರ್ಷಿಯನ್ನು ನೀಡುತ್ತಾನೆ. ಆ ಶಿರೋನಾಮೆ ಕವಿತೆಯ ಜೀವಾಳವಾಗಿದ್ದು ಇಡೀ ಕವಿತೆ ಏನನ್ನು ಹೇಳಲು ಹೊರಟಿದೆ ಎಂದು ಸುಲಭವಾಗಿ ಗ್ರಹಿಸಲು ನೆರವಾಗುತ್ತದೆ. ಆದರೆ ಹಿಂದೆ ಶೀರ್ಷಿಕೆಯನ್ನೇ ನೀಡದೆ ಕವಿತೆಯನ್ನು ಬರೆದ ಪರಂಪರೆ, ನಿದರ್ಶನಗಳು ನಮ್ಮಲ್ಲಿ ಉಂಟು. ಅಂತಹ ಸಾಲಿಗೆ ಕವಿ ಚಲಂ ಹಾಡ್ಲಹಳ್ಳಿಯವರು ಕೂಡ ಈ ಮಳೆಗಾಲ ನಮ್ಮದಲ್ಲ ಸಂಕಲನದ ಮೂಲಕ ಸೇರ್ಪಡೆಯಾಗಿದ್ದಾರೆ. ಇಲ್ಲಿರುವ ಕವಿತೆಗಳಿಗೆ ಶೀರ್ಷಿಕೆಯ ಹಂಗಿಲ್ಲ. ಇಂತಹ ಧೈರ್ಯ ಮಾಡಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು, ತನ್ನ ಕವಿತೆಗಳನ್ನು ಸವಾಲಿಗೊಡ್ಡಿಕೊಂಡಿರುವ ಅವರ ಹೆಜ್ಜೆ ಗುರುತು ಮೆಚ್ಚುವಂಥದ್ದು. ಇದು ಲೇಖಕನಿಗೆ ಕ್ಲಿಸ್ಟ ಪ್ರಯೋಗವಾಗಿದರೇ ಸಹೃದಯನಿಗೆ ಕವಿ ಭಾವವನ್ನು ದಕ್ಕಿಸಿಕೊಳ್ಳಲು ವೈವಿಧ್ಯಮಯ ನೆಲೆಗಳು ದೊರಕುತ್ತವೆ.
ವಿಮರ್ಶಕಿ ಅನುಸೂಯ ಯತೀಶ್
ಚಲಂ ಅವರ ಕಾವ್ಯಗಳಿಗೆ ಅನುರಣನ ಶಕ್ತಿ ಇದೆ, ಇವರ ಕವಿತೆಗಳು ಪ್ರಕೃತಿ ಸಂವೇದನೆಗಳಲ್ಲಿ ಅದ್ದಿ ತೆಗೆದ ಕಾವ್ಯ ಕೃಷಿಯಾಗಿವೆ. ಬಹಳ ಮುಖ್ಯವಾಗಿ ಗಿಡ, ಮರ, ನದಿ, ಬೆಟ್ಟ, ಮಳೆ, ಕಾಡು, ತೋಟಗಳ ವರ್ಣನೆ ಭಾವತೀವ್ರತೆಯಲ್ಲಿ ಓದುವರನ್ನು ತಾಕುವಂತಿವೆ. ಚಲಂ ಅವರ ಕವಿತೆಗಳ ಅರ್ಥ ಭಾವಗಳ ಲಯಗಾರಿಕೆಯಲ್ಲಿ ಬನಿಯು ಮಿಡಿತಗೊಂಡು ಕಾವ್ಯದ ಸೊಬಗನ್ನ ಇಮ್ಮಡಿಗೊಳಿಸಿವೆ. ಇವರ ಕಾವ್ಯಗಳ ವಿಶಿಷ್ಟತೆ ಎಂದರೆ ಕವಿಯಲ್ಲಾಗಲಿ, ಕವಿತೆಯಲ್ಲಾಗಲಿ ಎಲ್ಲೂ ನಿರ್ಲಿಪ್ತತೆ ಪ್ರಕಟಗೊಳ್ಳುವುದಿಲ್ಲ. ಅವರ ಲೇಖನಿ ಸದಾ ನೊಂದವರ ಪರವಾಗಿ, ಧಮನಿತರ ಬೆಂಗಾವಲಾಗಿ , ಶೋಷಿತರ ದನಿಯಾಗಿ ಹೋರಾಡುವಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತವೆ. ನಮ್ಮ ಸಮಾಜದ ಬಹುದೊಡ್ಡ ಅಸ್ವಸ್ಥತೆ ಎಂದರೆ ಕಷ್ಟದಲ್ಲಿರುವವರ ಬಿಕ್ಕುಗಳಿಗೆ ಸಾಂತ್ವನದ ಹಸ್ತ ಚಾಚದಿರುವುದು. ಇದಕ್ಕೆ ಇಂದಿನ ಬಹುತೇಕ ಕವಿಗಳು ಹೊರತಾಗಿಲ್ಲ. ಈ ನೆಲೆಯಲ್ಲಿ ಅವಲೋಕಿಸಿದಾಗ ಚಲಂ ಅವರು ಆ ವರ್ಗದಿಂದ ಬೇರ್ಪಟ್ಟು ಸಮಾಜದ ಕವಿಯಾಗಿ ಕಾಣುತ್ತಾರೆ. ಸಮಾಜಮುಖಿ ಆಲೋಚನೆಗಳು ಇವರ ಕವಿತೆಗಳ ಜೀವ ದ್ರವ್ಯವಾಗಿವೆ. ಇಲ್ಲಿ ಕವಿಗೆ ತಾನು ಏನು ಹೇಳುತ್ತಿರುವೆ ಎಂಬ ಸ್ಪಷ್ಟ ನಿಲುವು ಇದೆ. ಸಂಕೀರ್ಣವಾದ ವಿಷಯವನ್ನು ಸರಳಗೊಳಿಸಿ ಹೇಳುವ ಕಲಾತ್ಮಕತೆಯು ಇದೆ. ಎಲ್ಲಾ ಕಾಲಘಟ್ಟಗಳಲ್ಲೂ ಕವಿಗೆ ಬಹು ಮುಖ್ಯವಾದ ಸಾಮಾಜಿಕ ಹೊಣೆಗಾರಿಕೆ ಇದ್ದೇ ಇರುತ್ತದೆ. ಅದು ಆಯಾ ಸಂದರ್ಭಕ್ಕನುಣವಾಗಿ ಕವಿಯನ್ನು ಕಾಡಿ ಬರೆಸಿಕೊಳ್ಳುತ್ತದೆ. ಅಂತಹ ಸಾಮಾಜಿಕ ಬದ್ಧತೆ ಕವಿ ಗಿರುವುದು ಈ ಸಂಕಲನದಲ್ಲಿ ಗೋಚರಿಸುತ್ತದೆ. ಚಲಂ ಹಾಡ್ಲಹಳ್ಳಿ ಅವರು ಸುಮಾರು 25 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ದುಡಿದವರು. ಅವರಿಗೆ ಸಾಮಾಜಿಕ ಸಮಸ್ಯೆಗಳ ಅರಿವು ಸಾಕಷ್ಟಿದೆ. ಅವರು ಸಮಾಜವನ್ನು ಹತ್ತಿರದಿಂದ ಕಂಡವರಾಗಿದ್ದು ಅನುಭವದ ಮೂಸೆಯಿಂದ ಕವಿತೆಗಳನ್ನು ರಚಿಸಿದ್ದಾರೆ. ಜನಸಮುದಾಯ ಎದುರಿಸುತ್ತಿರುವ ಸಂಕಟಗಳು ಕವಿಯ ಸ್ವಯಂ ಅನುಭವಗಳೇ ಆಗಿರಬೇಕೆಂದಿಲ್ಲವಾದರೂ ಅನುಭವವು ಇದ್ದಾಗ ಕಾವ್ಯ ಮತ್ತಷ್ಟು ಸಶಕ್ತವಾಗಿರುತ್ತದೆ. ಸಾಮಾಜಿಕ ಸಂವೇದನೆಗಳಿಗೆ ತನ್ನನ್ನು ಮುಕ್ತವಾಗಿ ತೆರೆದುಕೊಳ್ಳುವ ಗುಣವು ಕವಿಗೆ ಇರುವುದು ಬಹಳ ಮುಖ್ಯ. ಆಗ ಸಮಾಜದ ನೋವು ಕವಿಯ ನೋವಾಗುತ್ತದೆ. ಸಮಾಜದ ಅಭದ್ರತೆ ಕವಿಯನ್ನು ಹನಿಗಣ್ಣಿನಲ್ಲಿ ಮುಳುಗುವಂತೆ ಮಾಡಿದೆ. ಆದುದರಿಂದ ಕವಿ ಸಮಾಜದ ಒಂದು ಭಾಗವಾಗಿ ಜನರ ನಡುವೆ ಬದುಕಬೇಕು ಅಂತಹ ಗುಣಗಳನ್ನು ಇವರು ಧಾರೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಮಳೆಗಾಲ ನಮ್ಮದಲ್ಲ ಕವನ ಸಂಕಲನದ ಕವಿತೆಗಳು ಸಾಕ್ಷಿ ಹೇಳುತ್ತವೆ. ಚಲಂ ಬರಹದ ಮಾನವೀಯ ಮುಖವಿಲ್ಲಿ ಮಿಳಿತವಾಗಿದೆ. ಇದರಿಂದಲೇ ಇವರ ಕಾವ್ಯ ವಸ್ತುಗಳು ಬಿಗುವಿನತ್ತಾ ಸಾಗಿವೆ. ಇಲ್ಲಿರುವ ಕವಿತೆಗಳು ಕರ್ತೃವಿನ ಕಾವ್ಯ ಶಕ್ತಿಯ ಅಗಾಧತೆಯನ್ನು, ಅನನ್ಯತೆಯನ್ನು ತೆರೆದಿಡುತ್ತವೆ.
ಕಾವ್ಯವೆಂದರೆ ಕೇವಲ ಶಬ್ದಗಳನ್ನು ಹಿಡಿದಿಡುವುದಲ್ಲ. ತನ್ನನ್ನು ಕಾಡಿದ ವಸ್ತುವನ್ನು ಒಂದು ಸೊಗಸಾದ ಭಾವ ಬಂಧನದಲ್ಲಿ ಒಟ್ಟುಗೂಡಿಸಬೇಕು. ಇದಕ್ಕೆ ಅಕ್ಷರಗಳು ಮಾಂತ್ರಿಕ ರೂಪದಲ್ಲಿ, ಶಬ್ದ ಚಮತ್ಕಾರಿಕೆಯಲ್ಲಿ ಪುಟಿದೇಳಬೇಕು. ಆಗ ಆ ಕಾವ್ಯದಲ್ಲಿ ಬಲಿತ, ನಿಪುಣತೆಯ ಅಭಿವ್ಯಕ್ತಿ ಮೂಡುತ್ತದೆ. ಅಂತಹ ಸಾಮರ್ಥ್ಯ ಕವಿ ಚಲಂ ಅವರಿಗೆ ಇರುವುದು ಇಲ್ಲಿ ಗೋಚರಿಸುತ್ತದೆ. ಮತ್ತು ವ್ಯವಸ್ಥೆಯ ಅನಾಚಾರಗಳನ್ನು ಕವಿ ಎಗ್ಗಿಲ್ಲದೆ ಯಾವುದೇ ಮುಲಾಜಿಗೆ ದಾಸನಾಗದೆ ಪ್ರಶ್ನಿಸುತ್ತಾ ಹೋಗಿದ್ದಾರೆ.
ಇವರ ಕಾವ್ಯ ಸಂರಚನೆ ವಿಶಿಷ್ಟವಾಗಿದ್ದು ಇವು ಸುದೀರ್ಘವಾದ ಕವಿತೆಗಳಾಗಿವೆ. ಆದರೂ ಏಕತಾನತೆಯಿಂದ ಮುಕ್ತವಾಗಿ ಓದುಗರ ಮನಸ್ಸನ್ನ ಪ್ರಫುಲ್ಲವಾಗಿ ಅರಳಿಸುವ ಕಸುವುದಾರಿಕೆ ಈ ಕವಿತೆಗಳಲ್ಲಿ ಅಡಕವಾಗಿದೆ. ಪ್ರತಿಯೊಂದು ಪ್ಯಾರವು ಸ್ವತಂತ್ರವಾದ ಅರ್ಥವನ್ನು ಕಟ್ಟಿಕೊಡುವ ಮೂಲಕ ಮುಂದೆ ಚಲಿಸುತ್ತ ಸಮಗ್ರತೆಯನ್ನು ತೆರೆದಿಡುತ್ತವೆ. ಹೊಸ ನಿರೀಕ್ಷೆಗಳನ್ನು ಆಶಯಗಳನ್ನು ಹೊಸೆಯುವ ಈ ಕವಿ ಕಾವ್ಯ ಕ್ಷೇತ್ರದಲ್ಲಿ ಬಹು ಭರವಸೆಯನ್ನು ಹುಟ್ಟು ಹಾಕುವ ಎಲ್ಲ ಲಕ್ಷಣಗಳು ಈ ಮಳೆಗಾಲ ನಮ್ಮದಲ್ಲ ಸಂಕಲನದ ಮೂಲಕ ರುಜುವಾತು ಮಾಡಿಕೊಂಡಿರುತ್ತಾರೆ.
ಇಲ್ಲಿನ ಕೆಲವು ಕವಿತೆಗಳು ಗಪದ್ಯದ ರೂಪದಲ್ಲಿದ್ದರೂ ವರದಿಯಾಗಿ ಭಾಸವಾಗದಂತೆ ಮೃದು ಮಧುರವಾಗಿ, ನವಿರು ಸ್ಪರ್ಶ ಪಡೆದಿವೆ. ರೂಪಕ ಮತ್ತು ಪ್ರತಿಮೆಗಳ ಗೋಜಿಗೆ ಹೋಗದೆ ತನ್ನ ಮನೋಗತವನ್ನು ಶಬ್ದ ಲಾಲಿತ್ಯದಿಂದ ಸಹಜವಾಗಿ ಬಂಧಿಸಿದ್ದಾರೆ. ಪ್ರಯುಕ್ತ ಕವಿತೆಗಳು ಓದುಗರಿಗೆ ಸುಲಭವಾಗಿ ಧಕ್ಕುತ್ತವೆ. ಅಭಿವ್ಯಕ್ತಿಯ ನೆಲೆಯಲ್ಲಿ ನೋಡಿದಾಗ ತುಂಬಾ ಪ್ರಬುದ್ಧ ಕವಿತೆಗಳು ಜೀವ ತಿಳಿದಿವೆ.
‘ಕವಿತೆ ಎಂದರೆ ಭಾವದ ಭಾಷೆ’ ಎನ್ನುವ ಕವಿಯು ‘ಎದೆಯ ಭಾಷೆ ಮತ್ತು ಹೃದಯದ ಭಾಷೆಗಳ ಅಭಿವ್ಯಕ್ತಿಯೇ ಅವರ ಕಾವ್ಯ’ ಎನ್ನುತ್ತಾರೆ. ಅವರು ಮೆದುಳಿನಿಂದ ಯೋಚಿಸಿ ಕಾವ್ಯ ಕಟ್ಟುವುದಿಲ್ಲ. ಇದಕ್ಕೆ ಅವರು ನೀಡುವ ಸಕಾರಣ ಮೆದುಳಿನಿಂದ ಯೋಚಿಸಿ ಬರೆದರೆ ಪ್ರಜ್ಞಾಪೂರ್ವಕವಾದ ಕಾವ್ಯ ಸೃಷ್ಟಿಯಾಗುತ್ತದೆ. ಆಗ ಅಲ್ಲಿ ನೈಜತೆ ಮಾಯವಾಗಿ ಮುಖವಾಡ ಆ ಸ್ಥಳವನ್ನು ಆಕ್ರಮಿಸುತ್ತದೆ. ಪ್ರಾಮಾಣಿಕತೆ ಹೃದಯದ ಸೊತ್ತಾಗಿರುವದರಿಂದ ನನ್ನ ಕವಿತೆಗಳು ವಾಸ್ತವಿಕತೆಗಳ ಪ್ರತೀಕಗಳಾಗಿವೆ ಎಂಬುದು ಇವರ ಮನದಿಂಗಿತ. ಕಾವ್ಯ ಸೃಷ್ಟಿಯ ಬಗ್ಗೆ ಇರುವ ಜಿಜ್ಞಾಸೆಯ ಬಗ್ಗೆ ಚಲಂ ಅವರು ಚರ್ಚಿಸುತ್ತಾ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಿ ಚಿಂತಿಸಿ ಬರೆಯದೇ ಹೋದರೆ ಕವಿ ಅಪಾಯಗಳನ್ನು ದಾಖಲಿಸುತ್ತಾನೆ ಎಂಬ ವಿಚಾರವನ್ನು ಇವರು ವಿರೋಧಿಸುವುದಿಲ್ಲ. ಅದನ್ನು ಬರೆಯುವ ಕವಿಗಳ ಆಯ್ಕೆಗೆ ಬಿಟ್ಟು, ಇವರು ಮಾತ್ರ ಭಾವಯಾನದಲ್ಲಿ ವಿಹರಿಸುತ್ತಾರೆ. ಅದರ ಪ್ರತಿರೂಪವೇ ಈ ಮಳೆಗಾಲ ನನ್ನದಲ್ಲ ಕವನ ಸಂಕಲನ. ಆದರೆ ಇವರ ಕವಿತೆಗಳು ಕೇವಲ ಭಾವಾವೇಶದ ಅಭಿವ್ಯಕ್ತಿಗಳಂತೆ ನನಗನಿಸದು. ಅಲ್ಲಿ ಪ್ರಜ್ಞಾವಂತಿಕೆಯು ಕಾಣುತ್ತದೆ.
ಕಾವ್ಯ ಎಂಬುದು ಒಂದೇ ಪ್ರಕಾರವಾದರೂ ಎಲ್ಲರ ಶೈಲಿ, ವಿನ್ಯಾಸ, ಅಭಿವ್ಯಕ್ತಿ, ಭಾವದೊನಲು ಒಂದೇ ತೆರನಾಗಿರದು. ಒಂದೇ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡು ಹಲವು ಕವಿಗಳು ಕಾವ್ಯ ರಚಿಸಿದರೂ ಎಲ್ಲರ ಭಾವಾಭಿವ್ಯಕ್ತಿ ಒಂದೇ ತರನಾಗಿ ಪ್ರಕಟಗೊಳ್ಳದೆ ವಿಭಿನ್ನತೆಗಳಿಗೆ ನಾಂದಿ ಹಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕವಿಯಾದವನಿಗೆ ಕಾವ್ಯ ಕ್ಷೇತ್ರದಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳಲು ಪರಂಪರೆಯ ಹಿನ್ನೆಲೆಯನ್ನು ಅರಿತು, ಸಮಕಾಲಿನ ವಸ್ತು ಸ್ಥಿತಿಗಳ ಮೇಲೆ ಬೆಳಕು ಚೆಲ್ಲುತ್ತ, ಭವಿಷ್ಯದ ನಿರೀಕ್ಷೆಗಳನ್ನು ಈಡೇರಿಸುವ ಹೊಸ ಕನಸುಗಳನ್ನು ಹೊಸೆಯುವುದು ಹಿಂದಿನ ಕಾಲಮಾನಕ್ಕೆ ತೀರ ಅಗತ್ಯವಾಗಿದೆ. ಆ ದೃಷ್ಟಿಯಿಂದ ನೋಡಿದಾಗ ಇವರ ಕಾವ್ಯಗಳು ಸಾರ್ವತ್ರಿಕ ಪ್ರಸ್ತುತತೆಯನ್ನು ಪ್ರತಿಪಾದಿಸುವ ಎಲ್ಲಾ ಲಕ್ಷಣಗಳನ್ನು ಧಾರಣೆ ಮಾಡಿಕೊಂಡಿವೆ. ಸಹಬಾಳ್ವೆ ಮತ್ತು ಸಮಾನತೆಯ ಹೂವು ಅರಳಿಸುವ ಆಶಯ ಕವಿಯದು. ಜನಪರ ಕಾರ್ಯಗಳ ಪರಮೋಚ್ಚ ಸ್ತರಗಳನ್ನರಸಿ ಸಂಬಂಧಿಸಿದ ವ್ಯವಸ್ಥೆ, ವ್ಯಕ್ತಿ, ಪ್ರಾಧಿಕಾರಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂಬ ಉತ್ಕಟ ಅಭಿಲಾಷೆಯನ್ನು ಕವಿ ಪ್ರಕಟಿಸುತ್ತಾರೆ.
ಸಮಾಜವಾದಿ ಶಕ್ತಿಗಳು ತಮ್ಮ ಅಟ್ಟಹಾಸದಿಂದ ಮುಗ್ಧ ಜನರ ಜೀವನದೊಂದಿಗೆ ಕಣ್ಣ ಮುಚ್ಚಾಲೆ ಆಟ ಆಡದಂತೆ ಎಚ್ಚರಿಕೆಯ ಸಂದೇಶ ನೀಡುವ ಕೆಲವು ಕವಿತೆಗಳು ಅವರ ಸಾಮಾಜಿಕ ಕಳಕಳಿಯನ್ನು ಪ್ರತಿನಿಧಿಸುತ್ತವೆ. ಹೊಸ ತಲೆಮಾರಿನ ಕವಿಯಾದ ಚಲಂ ಅವರ ಕಾವ್ಯಗಳು ಚಲನಶೀಲವಾಗಿದ್ದು ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ ಮತ್ತು ಪ್ರಯೋಗಾಶೀಲತೆಗಳಿಂದ ಸಿದ್ದ ಮಾರ್ಗಕ್ಕಿಂತ ವಿಭಿನ್ನವಾಗಿ ಕಾರ್ಯಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತವೆ. ಸಮಾಜದ ಅಸಹಾಯಕತೆಗೆ ಕವಿ ಮನಸು ತೀವ್ರವಾಗಿ ಪ್ರತಿಸ್ಪಂದಿಸಿದೆ. ಇದರ ಪ್ರತಿರೂಪವೇ ಇಲ್ಲಿನ ಕವಿತೆಗಳು. ಕವಿ ತನ್ನಂತರಂಗದಲ್ಲಿ ಕಡೆದು ರಚಿಸಿದ ಕಾವ್ಯ ಶಿಲ್ಪಗಳು ಪ್ರಸಕ್ತ ವಿದ್ಯಮಾನಗಳ ಅಪೇಕ್ಷೆಗಳಾಗಿಯೂ ನಿರೂಪಿತವಾಗಿವೆ. ಸಾಮಾಜಿಕ ಬಿಕ್ಕಟ್ಟುಗಳು ಈ ನೆಲಕ್ಕೆ ಹೊಸದಲ್ಲ. ಅವು ಕೇವಲ ಗತಕಾಲದ ಶಿಶುಗಳು ಮಾತ್ರವಲ್ಲ, ವರ್ತಮಾನದ ಯೌವನಕ್ಕೆ ಮೇಲ್ಪಂಕ್ತಿ ಹಾಡುತ್ತವೆ. ಭವಿಷ್ಯಕ್ಕೆ ಚಲಿಸುವುದಿಲ್ಲ ಎಂದು ನಿಡುಸುಯ್ಯುವ ಭರವಸೆಯ ದೀಪ್ತಿಯು ಕಾಣುತ್ತಿಲ್ಲ. ಹಾಗಾಗಿ ಚಲಂರಂತ ಕವಿಗಳು ಕಾಲಕಾಲಕ್ಕೆ ಉದಯಿಸಲೇಬೇಕು. ಅವುಗಳ ನಿವಾರಣೆಗಾಗಿ ತಮ್ಮ ಲೇಖನಿಯನ್ನು ಖಡ್ಗವಾಗಿ ಜಳಪಿಸಲೇಬೇಕು ಎಂಬುದು ಸರ್ವಜನ ಮಾನ್ಯ ನುಡಿಯಾಗಿದೆ.
ಚಲಂ ಅವರ ಈ ಮಳೆಗಾಲ ನನ್ನದಲ್ಲ ಕವಿತೆಗಳಲ್ಲಿ ನಂಬಿಕೆಗಳಿಗೆ ಬೀಳುವ ಪೆಟ್ಟಿನ ಅರಿವಿದೆ. ನಿರಾಕಾರ ಮಾಯೆಯಾಗಿ ಹೆಣ್ಣು ಕವಿಯನ್ನು ಕಾಡಿದ್ದಾಳೆ. ಬದುಕಿನ ಲೆಕ್ಕಾಚಾರವಿದೆ. ವಿಶ್ವಾಸಗಳಿಸುವ ಹಂಬಲವಿದೆ. ಜಾತಿ ಧರ್ಮಗಳ ಮೇಲಾಟದ ನೋವಿದೆ. ಖಡ್ಗ ಝಂಗಿಸಿ ನೆತ್ತರಹರಿಸುವ ಕ್ರೌರ್ಯಕ್ಕೆ ಕವಿಯ ಆಕ್ರೋಶವಿದೆ. ಯಾಂತ್ರಿಕ ಬದುಕಿನಲ್ಲಿ ಮನೆ ಮನಸುಗಳು ಪ್ರೀತಿ ಖಾಲಿಯಾಗುತ್ತಿರುವ ಕುರುಹುಗಳಿವೆ. ಸಾವಿನ ಸಮಯದಲ್ಲಿ ಜನರು ತೋರುವ ಮುಖವಾಡಗಳಿಗೆ ಅಸಹ್ಯ ಚಾಟಿಯಿದೆ. ಅಮಾಯಕ ಹೆಣ್ಣಿನ ಮನೋಗತವಿದೆ. ಶ್ರಮಜೀವಿಗಳಿಗೆ ಹಬ್ಬ ಆಚರಣೆಗಳು ಕಾಯಕ ರೂಪದಲ್ಲಿ ಇರುತ್ತವೆಂಬ ವಾಸ್ತವಿಕತೆಯ ಅರಿವಿದೆ. ತಿಂದವರಿಗೆ ಅಜೀರ್ಣದ ಚಿಂತೆಯಾದರೆ ಹಸಿದವರಿಗೆ ಒಡಲುರಿಯ ಈ ಬೇನೆ ಹೇಗೆಲ್ಲ ಕಾಡುತ್ತದೆ ಎಂಬ ಉದಾಹರಣೆಗಳಿವೆ. ಬಾಳ ಯಾನದ ಹಲವು ಹಂತಗಳ ಜವಾಬ್ದಾರಿಗಳನ್ನು ಪರಿಚಯಿಸುತ್ತವೆ. ನಲ್ಲೆಯ ನೆನೆದು ಭಗ್ನ ಪ್ರೇಮಿಯ ವಿಷಾದವಿದೆ. ಪ್ರೇಮಿಗಳ ಸರಸ ಸಲ್ಲಾಪದ ಸವಿ ಕ್ಷಣಗಳಿವೆ. ಫೇಸ್ಬುಕ್ ನ ಲೈಕ್ ಕಮೆಂಟ್ಗಳ ಅವಾಂತರಗಳನ್ನು ಬಿಂಬಿಸುವ ಹಾಸ್ಯಾವಳಿ ತುಂಬಾ ಸೊಗಸಾಗಿ ಮೂಡಿಬಂದಿದೆ. ಬದುಕಿನ ಸವಾಲುಗಳ ಸರಪಳಿಯ ಕೊಂಡಿಯಿದೆ. ಗಡಿಯಲ್ಲಿ ನಡೆಯುವ ಯುದ್ಧಗಳ ಬಗ್ಗೆ ಬೇಸರವಿದೆ. ಸೈನಿಕರು ಮತ್ತು ಅವರ ಕುಟುಂಬದ ಹಿತಾಸಕ್ತಿಯಿದೆ. ಜಗತ್ತನ್ನು ಕಾಡುವ ರೋದನೆ ಇದೆ. ಪ್ರೀತಿಯ ಪರಾಕಾಷ್ಟೆಯಿದೆ. ಬರಹದ ಹಂಬಲ ಏನಾಗಿರಬೇಕೆಂಬ ತುಡಿತವಿದೆ.ಪ್ರಶ್ನಿಸುವ ಹಕ್ಕಿನ ಹುಡುಕಾಟವಿದೆ. ಯೌವ್ವನದ ಹಸಿ ಬಿಸಿ ಬಯಕೆಗಳ ರಮ್ಯ ಸಾಲುಗಳಿವೆ. ಮಾತಿನಿಂದ ಬೆರಗು ಮಾಡುವ ಜನರ ಲಂಪಟತನ ಕಳಚುವ ಸಾಲುಗಳಿವೆ. ಒಬ್ಬರೊಳಗೆ ಒಬ್ಬರು ಭಾವನಾತ್ಮಕವಾಗಿ ಬಂಧಿಯಾಗುವ ರೋಮಾಂಚನವಿದೆ. ಸುಖ ದುಃಖಗಳ ಸಮ್ಮಿಲನವಿದೆ. ಜನರ ನೋವು ಕವಿಯ ಕಾವ್ಯವಾಗಬೇಕೆ ವಿನಹ ಬರೀ ನಲಿವಷ್ಟೇ ಅಲ್ಲಾ ಎಂಬ ಕಿವಿ ಮಾತಿದೆ. ಏಕಾಗ್ರತೆ ಸಾಧಿಸುವ ತಂತ್ರಗಳು, ಸಮಾಜದ ನೋವು ಸಂಕಟಗಳಿಗೆ ಆಸರೆ ಇದೆ. ಪ್ರೀತಿಯ ಲೆಕ್ಕಾಚಾರದ ಅನಾವರಣವೂ ಇದೆ. ಬದುಕಿನ ಚಡಪಡಿಕೆಗಳಿವೆ. ಅನುಮಾನ ಬಿತ್ತುವ ಅತೃಪ್ತ ಮನಸ್ಸುಗಳಿಗೆ ಅಸಹ್ಯವು ಇದೆ. ಮಳೆಗಾಲದ ಪ್ರೇಮಿಗಳ ಪ್ರೇಮಗಾನವಿದೆ. ಹೀಗೆ ಕವಿಯನ್ನ ವಿಭಿನ್ನ ವಸ್ತುಗಳು ಕಾಡಿಸಿ ರಚಿಸಿಕೊಂಡು ಈ ಮಳೆಗಾಲ ನಮ್ಮದಲ್ಲ ಕವನ ಸಂಕಲನದಲ್ಲಿ ಬಂಧಿಯಾಗಿವೆ.
ಒಂದಷ್ಟು ವಿಶ್ಲೇಷಣೆ ಮಾಡುವುದಾದರೆ
‘ಎಲ್ಲರ ಕೈಯಲ್ಲೂ
ಖಡ್ಗ ಬಡಿಗೆ ಬರ್ಜಿ
ಬಂದೂಕ ತ್ರಿಶೂಲಗಳಿವೆ
ಹೀಗೆ ಎಂತೆಂತವೋ
ಆಯುಧಗಳನಿಡಿದು
ಕಟ್ಟುವ ಮಾತನಾಡುತ್ತೇವೆ
ಆದರೆ ಹೊಡೆಯುವ ಕೆಲಸಗಳಾಗುತ್ತವೆ
ಆ ಎಲ್ಲಾ ಕೈಗಳಿಗೂ
ನೇಗಿಲು ಪುಸ್ತಕ ಚರಕ
ತಕ್ಕಡಿ ಮಗ್ಗ ಲೇಖನಿಗಳ ಕೊಡಬೇಕಾಗಿದೆ’
ಈ ಕವಿತೆ ಬುದ್ದ, ಗಾಂಧಿ ಕಂಡ ಶಾಂತಿಯ ಬೀಡಾಗಿ ನಾಡನ್ನು ನೋಡ ಬಯಸುತ್ತದೆ. ಎಲ್ಲರ ಕೈಯಲ್ಲೂ ಆಯುಧಗಳಿವೆ ಎನ್ನುವುದು ಜನ ಸತ್ಯ, ಶಾಂತಿ, ಸಹನೆ,ಪ್ರೀತಿ, ಸ್ನೇಹಗಳನ್ನು ಮರೆತು ದ್ವೇಷ, ಅಸೂಯೆ, ಮತ್ಸರಗಳಿಂದ ಕ್ರೌರ್ಯವೆಸಗಿ ರಕ್ತಪಾತ ನೋಡಲು ಸನ್ನದ್ಧರಾಗಿದ್ದಾರೆ. ಇದೆಲ್ಲವನ್ನು ತ್ಯಜಿಸಲು ಜನರಿಗೆ ಅಕ್ಷರ ಜ್ಞಾನದ ಪ್ರಣತಿ ಬೆಳಗಿಸಬೇಕು. ಖಾಲಿ ಕುಳಿತ ಮನಸ್ಸು ವಿದ್ವಂಸಕ, ವಿಚಿಧ್ರಕಾರಿ ಆಲೋಚನೆಗಳಿಗೆ ತುಡಿಯುತ್ತದೆ ಇದೆಲ್ಲವನ್ನು ತಡೆಯಲು ನಾವು ಅವರನ್ನು ಕೆಲಸದಲ್ಲಿ ತೊಡಗಿಸಬೇಕು, ಶಾಂತಿಯ ಜಾಗೃತಿ ಮೂಡಿಸಬೇಕು ಎಂಬುದು ಕವಿಯ ಹಂಬಲವಾಗಿದೆ.
‘ಈ ಊರಿನ ನನ್ನ ಜನ
ಇಷ್ಟೊಂದು ಗಾಢವಾಗಿ
ನಿದ್ರೆಗೆ ಜಾರಿದ್ದಾರೆ
ಮಾತುಗಳನ್ನುಳಿಸಿಕೊಂಡು
ಬಹುಶಃ ನಿಮ್ಮೂರಿನಲ್ಲೂ
ನಮ್ಮ ಉಳಿದ ಮಾತುಗಳಿರಬಹುದು’
ಈ ಕವಿತೆ ಜನರ ಅಜಾಗೃತಿಯನ್ನು, ಪ್ರಜ್ಞಾ ಹೀನ ಸ್ಥಿತಿಯನ್ನು, ಬೇಜವಾಬ್ದಾರಿತನವನ್ನು, ಸೋಗಲಾಡಿತನವನ್ನು ಸಂಕೇತಿಸುತ್ತದೆ. ‘ಗಾಢವಾಗಿ ನಿದ್ರೆಗೆ ಜಾರಿದ್ದಾರೆ’ ಎನ್ನುವ ರೂಪಕವು ತಮ್ಮ ಕರ್ತವ್ಯಗಳಿಗೆ ಬೆನ್ನು ತೋರಿ, ತಮ್ಮ ಮುಂದಿನ ಭವ್ಯ ಭವಿಷ್ಯದ ಭರವಸೆಗಳನ್ನು ಕಾಲಿನಿಂದ ಒದ್ದು ನಿರಾಳವಾಗಿ ಜೀವಿಸುತ್ತಿದ್ದಾರೆ ಎಂಬ ನಿರಾಶವಾದ, ಹತಾಶೆ, ಅಸಹಾಯಕತೆಯು ಕವಿತೆಯಲ್ಲಿ ಮಾರ್ವಿಕವಾಗಿ ಅಭಿವ್ಯಕ್ತಗೊಂಡಿದೆ.
‘ಅರೆ ಸರಿಯಾಗಿ ನೋಡುತ್ತೇನೆ
ನನ್ನವರು ಯಾರು ಇಲ್ಲ
ಎಲ್ಲರನ್ನೂ ಕಳಕೊಂಡ ಮೇಲೆ ಸತ್ತೆನಾ
ಸತ್ತ ಮೇಲೆ ಎಲ್ಲರನ್ನೂ ಕಳೆಕೊಂಡೆನಾ
ಬಾಡಿಗೆಗೆ ಬಂದವರ ಅಳು ಮಾತ್ರ
ಪಡೆದ ಹಣಕ್ಕೆ ಪ್ರಾಮಾಣಿಕವಾಗಿದೆ’
ಕಳೆಬರದ ಸ್ವಗತ ಭಾವವನ್ನ ಕವಿಯಿಲ್ಲಿ ಚಿತ್ರಿಸಿದ್ದಾರೆ. ಕೊರೊನಾ ಬಾಂಧವ್ಯಗಳ ಮಹತ್ವವನ್ನು, ಸಾವಿನ ಸುತ್ತಲಿನ ತಾತ್ವಿಕತೆಯನ್ನು ಜನರರಿವಿಗೆ ತಂದಿತು. ಸತ್ತ ನಂತರ ಸಂಬಂಧಗಳು ದೂರವಾಗುತ್ತವೆ ಎನ್ನುತ್ತಿದ್ದ ಕಾಲವಿಂದು ಮಾಯವಾಗಿ ಬದುಕಿರುವಾಗಲೇ ಎಲ್ಲರಿಂದ ದೂರವಿದ್ದು ಅನಾಥ ಬದುಕು ನಡೆಸುವುದೇ ಈ ಕವಿತೆಯ ಜೀವದ್ರವ್ಯವಾಗಿದೆ. ಎಲ್ಲರನ್ನೂ ಕಳೆದುಕೊಂಡ ಮೇಲೆ ಸತ್ಯೆನಾ? ಅಥವಾ ಸತ್ತ ಮೇಲೆ ಎಲ್ಲರನ್ನು ಕಳೆದುಕೊಂಡೆನಾ? ಎಂಬುದು ಶತಕೋಟಿ ಡಾಲರ್ ಪ್ರಶ್ನೆಯಾಗಿದೆ. ಬಹುಶಃ ಈ ದಿನಮಾನಗಳಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಹೆಣದ ಮುಂದೆ ಕೂತವರಲ್ಲಿ ಮುಖ್ಯವಾಗಿ ಬಾಡಿಗೆ ಪಡೆದು ಅಳಲು ಬಂದವರು ಪ್ರಾಮಾಣಿಕರು ಎನ್ನುವಲ್ಲಿ ಒಬ್ಬರ ಸಾವು ಅಗಲಿಕೆ ಕಣ್ಣೀರನ್ನು ತರಿಸುವ ಶಕ್ತಿಯನ್ನು ಕಳೆದುಕೊಂಡಿದೆ ಎಂಬ ಸತ್ವಹೀನ ಸಂಬಂಧಗಳ ಅನಾವರಣ ಇದಾಗಿದೆ. ಆಧುನಿಕರಣದ ಕೂಸುಗಳಾಗಿ ನಮ್ಮವರು ಸತ್ತಾಗ ಅಳಲು ಹಣ ಕೊಟ್ಟು ಜನರನ್ನು ಕರೆಸುವಷ್ಟರ ಮಟ್ಟಿಗೆ ನಮ್ಮ ಕೌಟುಂಬಿಕ ಬದುಕು ಹೀನಾಯ ಸ್ಥಿತಿಗೆ ತಲುಪಿರುವುದು ಕವಿಗೆ ತುಂಬಾ ದುಃಖ ತಂದಿದೆ.
‘ನಿನ್ನ ಹೊಕ್ಕಳ ಸುಳಿಗೆ
ಯಾವತ್ತಿನಂತೆ ಸುಲಿಗೆಯ ಚಾಳಿ
ನಿಶೆಯ ಸಾಗರದಂತ
ಕಣ್ಣುಗಳಿಗೆ
ನಿರಂತರ ಬೇಟೆಯ ಚಟ’
ಅದೆಷ್ಟು ಕವಿಗಳ ಕಾವ್ಯ ಹೆಣ್ಣಿನ ಹೊಕ್ಕಳ ಸುಳಿಯೊಳಗೆ ಈಜಿಲ್ಲ ಹೇಳಿ ? ಆ ರಮ್ಯ ಸಾಲುಗಳನ್ನ ಮೋಹಕವಾಗಿ ಕಟ್ಟಿಕೊಡುವ ಕವಿ ಅವಳ ಕಣ್ಣನ್ನು ನಿಶೆಯ ಮಾದಕತೆಗೆ ಸಾಗರದ ರೂಪಕದಲ್ಲಿ ಹೋಲಿಸುತ್ತ ನನ್ನನ್ನ ಸೆಳೆಯಲು ತುಡಿಯುವ ಅವಳ ಕಾತುರವನ್ನು ವರ್ಣಿಸಿದ್ದಾರೆ. ಯುವ ಕವಿಯ ಮನಸ್ಸು ಯೌವ್ವನದ ಬಯಕೆಗಳ ಸುತ್ತ ಸುತ್ತಿರುವುದು ಈ ಕವಿತೆಯಲ್ಲಿ ಬಿಂಬಿತವಾಗಿದೆ.
‘ಸಂತೋಷದ ದಿನಗಳು ಹೆಚ್ಚಾದಾಗ ಇರಲಿ ತಗೋ ಎಂದು
ನೋವಿನ ಮಾತ್ರೆಗಳ ಕೊಟ್ಟರು
ಮಾತ್ರೆಗಳದ್ದು ಗೊತ್ತಲ್ಲ ಅಭ್ಯಾಸವಾದರೆ ಹೆಚ್ಚೆಚ್ಚು
ಡೋಸ್ ಕೇಳುತ್ತದೆ’.
ಕವಿಯ ಪ್ರತಿಮೆಗಳ ಬಳಕೆ ಹಾಗೂ ಅಭಿವ್ಯಕ್ತಿಗೆ ಈ ಕವಿತೆ ಮಾದರಿಯಾಗಿದೆ. ಸಂತೋಷ ಮತ್ತು ದುಃಖದ ಅನಾವರಣ ಮಾಡುವ ಕವಿತೆ ಇದು. ನಮ್ಮ ಸುಖ ಸಂತೋಷ ಸಂಭ್ರಮ ಬೇರೆಯವರ ಕಣ್ಣು ಕುಕ್ಕಿ, ಅದಕ್ಕೆ ಕಲ್ಲು ಹಾಕಿ ನಮ್ಮನ್ನು ದುಃಖದಲ್ಲಿ, ಕಷ್ಟದಲ್ಲಿ ಮುಳುಗಿಸುವುದನ್ನ ಕವಿಯಿಲ್ಲಿ ನೋವಿನ ಮಾತ್ರೆಗಳ ಕೊಟ್ಟರು ಎಂದಿದ್ದಾರೆ. ಒಮ್ಮೆ ಕಷ್ಟ ಎಡತಾಕಿದರೆ ಪದೇ ಪದೇ ನಮ್ಮನ್ನಾವರಿಸಿಕೊಳ್ಳುತ್ತವೆ ಎಂಬ ಭಾವವಿಲ್ಲಿ ವ್ಯಕ್ತವಾಗಿದೆ.
‘ನನ್ನ ಬೆನ್ನ ಮೇಲಿನ ಬೆರಳುಗಳ ಮಾತನ್ನು ನಿನ್ನ ಕಿವಿಯಲ್ಲಿ ಹೇಳುತ್ತೇನೆ
ನಿನ್ನ ಮಾತು ನಿನಗೇ ಕೇಳಿ
ರೋಮಾಂಚಿತಳಾಗದಿದ್ದರೆ ಕೇಳು’
ಈ ಕವಿತೆ ಯೌವ್ವನದ ವಾಂಛೆಯನ್ನ ಕುರಿತುದ್ದಾಗಿದೆ. ಪ್ರೇಮಿಗಳಿಬ್ಬರ ಸರಸ ಸಲ್ಲಾಪದ ಸುಮಧುರ ಕ್ಷಣಗಳ ಬಣ್ಣನೆ ಇದು. ಹೆಣ್ಣು ಗಂಡುಗಳ ಸಾಂಗತ್ಯದ ರೋಮಾಂಚನಕಾರಿ ಗಳಿಗೆ ತುಂಬಾ ಭಾವನಾತ್ಮಕವಾಗಿ, ತನು ಮನಗಳು ಪುಳಕಗೊಳ್ಳುವಂತೆ ರಚಿತವಾಗಿವೆ.
‘ನೀ ಅವಳನ್ನು ಕಟ್ಟಿ ಹಾಕಿದ್ದೆಯಾ? ಹೌದು ಯುವರ್ ಹಾನರ್
ಅವಳೆಲ್ಲೇ ಹೋದರು
ಕಣ್ಗಾವಲು ಹಾಕಿ ಪಹರೆ ಕಾಯುತ್ತಿದ್ದೆ
ಅದು ಕಟ್ಟಿದಂತೆ ಅನಿಸಿರಲಿಲ್ಲ
ಪ್ರತಿ ಕ್ಷಣ ನಾ ಅವಳ ಜೊತೆಗಿರುವ
ಚಂದದ ಪ್ರಯತ್ನ ಎಂದು ನಂಬಿದ್ದೆ
ಅವಳು ಅಕ್ಷರಶಃ ಬಂಧಿಯಾಗಿದ್ದಳು’
ಈ ಕವಿತೆ ನನ್ನನ್ನು ಬಹುವಾಗಿ ಸೆಳೆಯಿತು. ಅತಿಯಾದ ಪ್ರೀತಿಯು ಉಸಿರು ಕಟ್ಟುತ್ತದೆಂಬ ಸಂದೇಶದ ಮೂಲಕ ‘ಅತಿಯಾದರೆ ಅಮೃತವು ವಿಷ’ ಎಂಬ ಗಾದೆ ಮಾತನ್ನು ನೆನಪಿಸುತ್ತದೆ. ಪ್ರೀತಿ ಪ್ರಫುಲ್ಲವಾಗಿ ಅರಳಿ ಸ್ವತಂತ್ರವಾಗಿ ಹಕ್ಕಿಯಂತೆ ವಿಹರಿಸಬೇಕು. ಪರಸ್ಪರರ ಭಾವನೆಗಳಿಗೆ ಬೆಲೆ ಇರಬೇಕು. ಪ್ರೀತಿಯ ನೆಪದಲ್ಲಿ ನಮ್ಮ ಆಶಯಗಳನ್ನು ಅವರ ಮೇಲೆ ಒತ್ತಾಯಪೂರ್ವಕವಾಗಿ ಹೇರಬಾರದೆಂಬ ಕಿವಿ ಮಾತನ್ನ ಈ ಕವಿತೆ ಹೊತ್ತು ತಂದಿದೆ.
‘ಮುಗುಳು ನಗುವಿನ ಚೆಲುವೆಗೆ ಒಂದು ಲೈಕು
ಕಮೆಂಟಿಸಲು ಪದ ಹುಡುಕುವ ಹೊತ್ತಿಗೆ
ನೈಸ್ ಕ್ಯೂಟ್ ಚಂದಗಳು ಪದಗಳ ಕೊಲೆಗೈದಿವೆ
ಲೈಕ್ ಅಷ್ಟೇ ಉಳಿದಿವೆ’
ಈ ಕವಿತೆ ಈ ಸಾಮಾಜಿಕ ಜಾಲತಾಣಗಳಲ್ಲಿನ ಲೈಕ್ ಕಮೆಂಟುಗಳ ಲಾಭಿಯನ್ನು ಕುರಿತು ಮಾತನಾಡುತ್ತದೆ. ಕೆಲವೊಮ್ಮೆ ಬರಹಕ್ಕಿಂತ ಫೋಟೋಗಳೇ ಹೆಚ್ಚು ಲೈಕ್ ಗಿಟ್ಟಿಸುತ್ತವೆ ಎನ್ನುವುದನ್ನು ಕೂಡ ಇಲ್ಲಿ ಗುರುತು ಮಾಡುತ್ತದೆ. ಬಹಳ ಮುಖ್ಯವಾಗಿ ಈ ಸಾಲುಗಳು ಕನ್ನಡ ನಿಘಂಟಿನ ಸುಂದರ ಪದ ಪ್ರಯೋಗಗಳ ಬಗ್ಗೆ ತನ್ನ ದನಿ ಎತ್ತುವ ಮೂಲಕ ಭಾಷೆಯ ಸದ್ಬಳಕೆಗೆ ಅಗ್ರಹಿಸುತ್ತದೆ.
‘ಏನು ಅರಿಯದ ಕೂಸು
ತಾಯಿಯ ರೋಧನೆ
ಮುದ್ದು ಹೆಂಡತಿಯ ನಿಟ್ಟುಸಿರು
ಆಯಾ ಮನೆಯಲ್ಲಿ ಕರಗಿ ಹೋಗುತ್ತವೆ
ನೀವು ಯುದ್ಧ ಮಾಡಿಬಿಡಿ’
ಯುದ್ಧಗಳು ಸಂಭವಿಸುವ ಕುರಿತು ಕವಿಯ ಅಸಮಾಧಾನವಿಲ್ಲಿ ವ್ಯಕ್ತವಾಗಿದೆ. ಸೈನಿಕರು ತನ್ನವರನ್ನೆಲ್ಲ ಬಿಟ್ಟು ದೇಶವನ್ನ ಹಗಲಿರುಳು ಕಾಯುತ್ತಾ ಹೆಮ್ಮೆಯ ಬದುಕು ಸಾಗಿಸುವರು. ಆದರೆ ಯುದ್ಧಗಳು ಆ ಕುಟುಂಬಗಳಲ್ಲಿರುವ ಅಲ್ಪ ಸ್ವಲ್ಪ ಶಾಂತಿಯನ್ನು ಕಿತ್ತುಕೊಂಡು ಬಿಡುತ್ತವೆ. ಯುದ್ಧ ಮಾಡಿ ನೋವಿನ ಛಾಯೆಯಲ್ಲಿ ಸೈನಿಕನ ಹೆಂಡತಿ ಮಕ್ಕಳು ತಂದೆ ತಾಯಿಯರ ನಿಟ್ಟಿಸಿರಿಗೆ ನಾಂದಿ ಹಾಡಬೇಡಿ. ಶಾಂತಿ ಸಮಾಧಾನದಿಂದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಿ ಎಂದು ಕವಿ ಆಶಿಸುತ್ತಾರೆ. ಆದರೆ ದೇಶದ ರಕ್ಷಣೆ, ಏಕತೆ, ಸಮಗ್ರತೆ ವಿಷಯದಲ್ಲಿ ಯುದ್ಧಗಳು ಅನಿವಾರ್ಯ ಎಂಬುದನ್ನು ಕೂಡ ಕವಿಯಿಲ್ಲಿ ಮರೆಯುವಂತಿಲ್ಲ.
‘ಜಗತ್ತು ಕಣ್ಣೀರಿಗಾಗಿ
ಹಸಿದಷ್ಟು ದಾಹಗೊಂಡಷ್ಟು
ಮತ್ಯಾವುದಕ್ಕೂ ತಹತಹಿಸಿದ್ದಿಲ್ಲ
ಹೆಸರು ಕಣ್ಣೀರಷ್ಟೇ
ಹೃದಯದ ಮೂಲಕ ಇಡೀ
ದೇಹದಲ್ಲಿ ಸಂಚರಿಸುತ್ತದೆ
ಹೆಸರು ಕಣ್ಣೀರಷ್ಟೇ’
ಕಣ್ಣೀರು ಜನರ ಸಂತೋಷ, ಕಷ್ಟ, ಯಾತನೆಗಳ ಪ್ರತೀಕವಾಗಿದೆ. ಜಗತ್ತು ಕಣ್ಣೀರಿಗಾಗಿ ಹಸಿದಷ್ಟು ದಾಹಗೊಂಡಷ್ಟು ಎನ್ನುವಲ್ಲಿ ಜಗತ್ತಿನಲ್ಲಿ ಇರುವಂತಹ ಕಷ್ಟ ನೋವು ಎಂಬ ಭಾವವಿಲ್ಲ ಅಡಕವಾಗಿದೆ. ಮನುಷ್ಯನಿಗೆ ನೋವಾದಾಗ ಅವನ ಹೃದಯ ಪ್ರತಿಕ್ರಿಯಿಸುತ್ತದೆ ಎಂಬ ಭಾವವನ್ನ ಬಿಂಬಿಸಿದ್ದಾರೆ.
‘ಯಾಕೆ …. ?
ಅನ್ನುವ ಪ್ರಶ್ನೆ
ಅಸ್ತಿತ್ವ ಕಳೆದುಕೊಂಡು
ಯಾವುದೋ ಕಾಲವಾಯಿತು
ಮತ್ತೆದೇ ತಪ್ಪು ಮತ್ತದೇ ಪ್ರಶ್ನೆ’
ಈ ಸಾಲುಗಳು ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುತ್ತವೆ. ಇಂದಿನ ದಿನಗಳಲ್ಲಿ ತಪ್ಪನ್ನು ಪ್ರಶ್ನಿಸುವಂತಿಲ್ಲ. ಹಣ, ಐಶ್ವರ್ಯ, ಅಧಿಕಾರ, ಅಂತಸ್ತು, ಪ್ರಭುತ್ವಗಳ ಪ್ರಭಾವದ ಕೈ ಮೇಲಾಗಿ ಎಲ್ಲರ ಬಾಯಿಗೂ ಬೀಗ ಬಿದ್ದಿದೆ. ಅನ್ಯಾಯ ಕಣ್ಣ ಮುಂದಿದ್ದರೂ ಮೂಖ ಪ್ರೇಕ್ಷಕರಾಗಿರಬೇಕಾದ ಅಸಹಾಯಕತೆಯನ್ನ ಇದು ಎತ್ತಿ ಹಿಡಿಯುತ್ತದೆ. ಹಾಗಿದ್ದಾಗ ನಾವು ನಿಜಕ್ಕೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜೀವಿಸುತ್ತಿದ್ದೇವಾ? ಎಂಬ ಪ್ರಶ್ನೆಯೊಂದು ಮೆದುಳಿನಲ್ಲಿ ಅನುರಣಿಸುತ್ತದೆ.
‘ಎಲ್ಲೋ ಏನೋ ಘಟಿಸಿದ್ದಕ್ಕೆ
ನನ್ನದಲ್ಲದ ಕಾರಣಕ್ಕೆ
ಪದೇ ಪದೇ ಬೆಲೆ ತೆರುತ್ತಲೇ ಸಾಗಿದ್ದೇನೆ
ಹೋಗುತ್ತಾ ಹೋದಂತೆ
ಮತ್ತಲ್ಲಿಗೆ ಬಂದು ನಿಲ್ಲುತ್ತೇನೆ’
ಬದುಕು ಒಂದು ವೃತ್ತದಂತೆ ಎತ್ತ ಚಲಿಸಿದರೂ ಬಂದು ಮತ್ತದೇ ಬಿಂದುವನ್ನು ಸಂಧಿಸುತ್ತೇವೆ ಎಂಬುದು ಬದುಕಿನ ಕುರಿತಾದ ತಾತ್ವಿಕ ಚಿಂತನಾ ಲಹರಿಯಾಗಿದೆ. ಗಟಿಸಿದ ಘಟನೆಗಳಿಗೂ, ವ್ಯಕ್ತಿಗೂ ನಡುವೆ ಯಾವುದೇ ಸಂಬಂಧವಿಲ್ಲದಿದ್ದರೂ ಅವನು ಸಮಾಜದ ಮುಂದೆ ತಪ್ಪಿತಸ್ಥನಾಗಿಯೇ ಕಾಣುತ್ತಾನೆ. ಒಮ್ಮೆ ಬಂಧಿಯಾದರೆ ಸಾಕು ‘ಬಾವಿಗೆ ಬಿದ್ದವನಿಗೆ ಆಳಿಗೊಂದು ಕಲ್ಲು’ ಎಂಬಂತೆ ಅವನ ಮೇಲೆ ಹೊಡೆತ ಬೀಳುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
‘ಹೋಮಾಲೆ ಕಟ್ಟುವುದ
ಮರೆತ ದಿನಗಳಲ್ಲಿ
ಪ್ರೀತಿಯ ಹನಿಗಳನ್ನ
ಪೋಣಿಸುವುದು ಕಷ್ಟ’
ಹೂ ಎಂಬುದು ಸುಂದರವಾದ ಭಾವನೆಗಳನ್ನು ಸೃಷ್ಟಿಸುವ ಜೀವ ವೈವಿಧ್ಯದ ಭಾಗ. ಆದರೆ ಜನರು ಹೂ ಬೆಳೆದು ಅದನ್ನ ಚಂದದ ಮಾಲೆ ಮಾಡುವುದನ್ನು ಬಿಟ್ಟು ಹೊಸಕಿ ಹಾಕುತ್ತಿದ್ದಾರೆ ಎಂಬುದು ಕವಿಯ ಮನದಿಂಗಿತ. ಅಂತಹ ಮನಸ್ಥಿತಿಯ ಜನರಲ್ಲಿ ಪ್ರೀತಿಯನ್ನು ಹುಟ್ಟು ಹಾಕುವುದಾದರೂ ಹೇಗೆ ಎಂಬ ಪ್ರಶ್ನೆಯೊಂದನ್ನು ಕವಿ ಇಲ್ಲಿ ಎತ್ತಿದ್ದಾರೆ.
‘ಏನೇನೋ ಬರೆದು ಮುಗಿಸಿದ್ದಾಯಿತೆಂದು ಬೀಗುವಂತಿಲ್ಲ ಬೇಸರಿಸುವಂತೆಯೂ ಇಲ್ಲ
ಮತ್ತೆ ಮತ್ತೆ ಬರೆಸುವವರು ಸಿಗುತ್ತಲೇ ಇರುತ್ತಾರೆ’
ಕವಿ ಇಲ್ಲಿ ಕಾವ್ಯ ವಸ್ತುವಿನ ಬಗ್ಗೆ ಹೇಳುತ್ತಿದ್ದಾರೆ. ಪ್ರೀತಿ, ಸಂತೋಷ, ನೋವು, ದುಃಖ, ವಿರಹ, ಅಗಲಿಕೆ, ಬಡತನ, ನಿರುದ್ಯೋಗ, ದೇಶಭಕ್ತಿ, ಐಕ್ಯತೆ ಕುರಿತು ಬರೆದವೆಂದ ಮಾತ್ರಕ್ಕೆ ಕಾವ್ಯ ವಸ್ತುಗಳು ಮುಗಿಯುವುದಿಲ್ಲ ಅವು ಬೇರೊಂದು ರೂಪದಲ್ಲಿ ಬರಹಗಾರರನ್ನು ಕಾಡಿ ಬರೆಸಿಕೊಳ್ಳುತ್ತವೆ ಅಂತಹ ವಾತಾವರಣವನ್ನು ಸೃಷ್ಟಿಸುವ ಜನರಿದ್ದಾರೆ ಎಂಬುದು ಕವಿ ಮನದ ನುಡಿಯಾಗಿದೆ.
‘ಅಮ್ಮ ನಿನಗೇನು ಬೇಕು
ಅಂತ ಕೇಳಿದರೆ
ಆಗ ಮಾತ್ರ ನಗುತಿದ್ದಳು
ನಾನು ಅಲ್ಲಿ ನನ್ನ ಮಿತಿಯನ್ನು
ಹುಡುಕಬೇಕಿತ್ತು’
ಅಮ್ಮ ಎಂಬುದು ಜಗತ್ತಿನ ವೈಶಿಷ್ಟ್ಯ ಪೂರ್ಣ ಜೀವ. ಶಿಶುವನ್ನು ಗರ್ಭದೊಳಗೆ ಬಿತ್ತಿಕೊಂಡಂದಿನಿಂದ ತನ್ನ ಬದುಕಿನ ಕೊನೆ ಕ್ಷಣದವರೆಗೂ ತನ್ನ ಮಗುವಿಗಾಗಿ ದುಡಿಯುತ್ತಾಳೆ, ದಣಿಯುತ್ತಾಳೆ. ಇಲ್ಲಿ ಯಾವುದೇ ಸ್ವಾರ್ಥವಿರುವುದಿಲ್ಲ ಅವಳು ನಿತ್ಯ ತನ್ನ ಮಕ್ಕಳ ಶ್ರೇಯಸ್ಸನ್ನು ಬಯಸುತ್ತಾಳೆ ವಿನಃ ತನಗಾಗಿ ಪ್ರೀತಿಯ ಹೊರತಾಗಿ ಏನನ್ನು ಬೇಡುವುದಿಲ್ಲ. ಅಮ್ಮನಿಗೆ ಏನು ಬೇಕೆಂದರೆ ಅವಳು ನಗುತ್ತಾಳೆ ಎಂಬಲ್ಲಿ ಎಲ್ಲವನ್ನು ಅವಳೇ ಕೊಟ್ಟಿರುವಾಗ ಅವಳಿಗೆ ಕೊಡಲು ತನ್ನನ್ನೇನಿದೆ ಎಂಬ ಆತ್ಮಾವಲೋಕನ ಮಾಡಿಸುತ್ತದೆ.
‘ದೊಂಬಿ ಗಲಭೆ ಕೊಲೆಗಳು
ನಡೆಯುವುದು ಸಾಮಾನ್ಯ ವಾಗಿರುವ
ಈ ದಿನಗಳಲ್ಲಿ
ಪ್ರೀತಿ ವಿಶ್ವಾಸ ಸ್ನೇಹ ಸಾಮರಸ್ಯ
ನಂಬಿಕೆ ಕಳೆದುಕೊಂಡಂತೆ ಕಾಣುತ್ತವೆ’
ಈ ಕವಿತೆ ಓದುಗರನ್ನು ಒಂದಷ್ಟು ಚಿಂತನೆಗಚ್ಚುತ್ತದೆ. ದೊಂಬಿ, ಗಲಭೆ, ಕೊಲೆಗಳಂತಹ ಅಪರಾಧ ಕೃತ್ಯಗಳನ್ನೆಸಗುವ ಜನರ ನಡೆಗೆ ಕವಿ ಮನಸ್ಸು ನೊಂದಿದೆ. ಸಾಮರಸ್ಯ ಪ್ರೀತಿಗೆ ಬೆಲೆ ಇಲ್ಲದಂತಾಗುವ ಸಮಾಜದ ಮುಂದಿನ ಗತಿಯ ಬಗ್ಗೆ ಕವಿ ಕಳವಳಗೊಂಡಿದ್ದಾರೆ. ಭಾವಿ ಭವಿಷ್ಯತ್ತನ್ನು ನೆನೆದು ಕವಿ ಕಣ್ಣೀರಿಡುತ್ತಾರೆ. ಇಂತಹ ಕವಿತೆಗಳು ಜನತೆಯಲ್ಲಿ ಸಕಾರಾತ್ಮಕ ಬದಲಾವಣೆ ತಂದರೆ ಕವಿತೆಗೂ ಒಂದು ಸಾರ್ಥಕತೆ ದಕ್ಕುತ್ತದಲ್ಲವೇ?
‘ಆಗ ತಾನೆ
ಚಿಗುರೊಡೆದು ಧುಮ್ಮಿಕ್ಕುವ
ಯೌವ್ವನದ ದಿನಗಳಲ್ಲಿ
ಪಕ್ಕ ಲೆಕ್ಕಾಚಾರದವಳ ಜೊತೆ ಪ್ರೀತಿಯಾಗಿತ್ತು’
ಈ ಕವಿತೆ ಇಂದಿನ ದಿನಮಾನಕ್ಕೆ ಪ್ರಸ್ತುತವಾಗಿದೆ. ಪ್ರೀತಿಯೆಂದರೇ ಎರಡು ಮನಸ್ಸುಗಳ ಸಮ್ಮಿಲನ, ಭಾವನಾತ್ಮಕ ಅನುಬಂಧ, ಪರಸ್ಪರರ ಸಮರ್ಪಣೆ, ಒಬ್ಬರ ಆಸೆ ಅಭಿಲಾಷೆಗೆ ಮತ್ತೊಬ್ಬರು ಜೊತೆಯಾಗುವುದು. ಆದರಿಂದು ಲೆಕ್ಕಾಚಾರವಾಗಿ ಗೋಚರಿಸುತ್ತದೆ. ಅದನ್ನ ಕವಿಯು ತುಂಬಾ ಅರ್ಥಪೂರ್ಣವಾಗಿ ಕವಿತೆಯಾಗಿಸಿದ್ದಾರೆ. ಪ್ರೀತಿಯಲ್ಲೂ ಹೆಚ್ಚು ಕಡಿಮೆ ಎಂಬ ಭಾವವು ಆವರಿಸಿದೆ. ಈ ಪ್ರೀತಿಯಿಂದ ತನಗೆ ಏನು ಲಾಭ ಅವನ ದುಡಿಮೆ, ಆಸ್ತಿ ಅಂತಸ್ತು, ಸ್ಥಾನಮಾನಗಳ ತಕ್ಕಡಿಯಲ್ಲಿ ಅವಳ ಪ್ರೀತಿಯನ್ನು ವ್ಯವಹಾರಿಕವಾಗಿ ನೋಡುತ್ತಾ ನೈಜ ಪ್ರೀತಿಯ ಮರೆಯುವುದನ್ನ ಇಲ್ಲಿ ಚಿತ್ರಿಸಲಾಗಿದೆ.
‘ಬಡತನವನ್ನು ಹೊದ್ದ
ದುಬಾರಿ ಮನುಷ್ಯ
ಬೇಗನೆ ಮುಗಿದು ಹೋಗುತ್ತಾನೆ
ಆ ದುಬಾರಿ ಕನಸುಗಳು
ದುಬಾರಿ ಯೋಚನೆಗಳು’
ಇಲ್ಲಿ ಬಡವರ ಕನಸುಗಳು ನನಸಾಗದೆ ಮರೀಚಿಕೆಯಾಗಿರುವ ಆತಂಕ ಭಾವವಿದೆ. ಬಡತನವನ್ನು ಹೊದ್ದವನು ಬೇಗನೆ ಮುಗಿದು ಹೋಗುತ್ತಾನೆ ಎಂದರೆ ಅವನ ಭರವಸೆಗಳು ಕುಸಿಯುತ್ತವೆ, ಆಶಾಸೌಧ ನೆಲಸಮವಾಗುತ್ತದೆ, ಹತಾಶೆ ಮನವನಾವರಿಸುತ್ತದೆ, ಆತ್ಮವಿಶ್ವಾಸ ಪಾತಾಳಕ್ಕಿಳಿಯುತ್ತದೆ. ಅವನ ದುಬಾರಿ ಕನಸುಗಳು ಯೋಚನೆಗಳು ಕೈಗೆ ನಿಲುಕದವು ಎಂಬುದನ್ನು ಸರಳವಾಗಿ ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ.
‘ಸೋಗು ಹಾಕುತ್ತಾನೆ
ತೊಂದರೆಗೆ ಸಿಲುಕಿದವನಂತೆ ನಟಿಸಿ
ರಮಿಸಿ ಸಮಾಧಾನ ಮಾಡುವಂತೆ ಒತ್ತಾಯಿಸುತ್ತಾನೆ
ನಿನ್ನ ಬದುಕಿಗೆ ಬೇಕಾದ
ಬೇಲಿಯನ್ನು ಹಾರಲು ಹೊಂಚುತ್ತಾನೆ
ಮೇಯುವ ಬುದ್ಧಿಯವನಾಗಿ ಬದಲಾಗಿದ್ದಾನೆ’
ಈ ಕವಿತೆ ಪೊಳ್ಳು ಮಾತುಗಳಿಂದ ಹೆಣ್ಣನ್ನು ನಂಬಿಸಿ ಅವಳ ಸರ್ವಸ್ವವನ್ನು ಸೂರೆ ಮಾಡಲು ಹವಣಿಸುವ ಕಪಟ ಪ್ರೇಮಿಯನ್ನು ಕುರಿತು ಬರೆದ ಜಾಗೃತಿ ಗೀತೆಯಾಗಿದೆ. ಹೆಣ್ಣು ಮಕ್ಕಳು ಮುಖವಾಡಿಗಳು ಮತ್ತು ನೈಜ ಪ್ರೇಮಿಗಳನ್ನು ಸರಿಯಾಗಿ ಗುರುತಿಸದೆ ಮೋಸ ಹೋಗಬಾರದೆಂಬ ಸ್ತ್ರೀ ಸಂರಕ್ಷಣೆಯ ದಾರಿಯಲ್ಲಿ ಈ ಕವಿತೆ ಸಾಗಿದೆ.
‘ಯಾರಾದರೂ
ನನ್ನ ಕುರಿತು ಮಾತನಾಡುವಾಗ
ಅಹಂಕಾರಿ ಎಂದರೆ
ಎದೆಗುಂದ ಬೇಡ ಗೆಳತಿ
ಸಣ್ಣದೊಂದು ಬೀಜ ತಂದಿರುತ್ತಾರೆ
ಸಣ್ಣದಾದರೂ ಸರಿಯೇ ಅದು
ಚಿಗುರಲಿಕ್ಕೆ ನೀನೇ ನೀರೆಯಬೇಕು’
ಈ ಕವಿತೆ ನಲ್ಲ ನಲ್ಲೆಗೆ ಹೇಳುವ ಕಿವಿ ಮಾತನ್ನ ಗರ್ಭಿಕರಿಸಿಕೊಂಡಿದೆ. ಪ್ರೀತಿಯನ್ನ ಛಿದ್ರಗೊಳಿಸಲು ಏನೆಲ್ಲ ಕುತಂತ್ರಗಳನ್ನು ಹೆಣೆಯುತ್ತಾರೆ ಎಂಬ ಅರಿವಿರುವ ಪ್ರಿಯತಮ ಅವುಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಲು ಪ್ರಿಯತಮೆಗೆ ಅರಿವು ಮೂಡಿಸುತ್ತಾನೆ. ತನ್ನ ಬಗ್ಗೆ ಹೇಳುವ ಅಸತ್ಯಗಳನ್ನು ನಂಬದಿರಲು ನಲ್ಲೆಗೆ ಓಲೈಸುತ್ತಾನೆ. ಇಲ್ಲಿ ಬಹಳ ಮುಖ್ಯವಾದ ವಿಚಾರವನ್ನು ಮುನ್ನಡೆಗೆ ತರುತ್ತಾರೆ. ಅದೇನೆಂದರೆ ಒಂದು ಕಿಡಿ ಹತ್ತಿ ಉರಿಯಲು ಗಾಳಿಯ ಸಂಪರ್ಕ ಎಷ್ಟು ಮುಖ್ಯವೋ ಹಾಗೆ ಅನುಮಾನದ ಮಾತುಗಳಿಂದ ನಂಬಿಕೆಯ ಪೈರು ಚಿಗುರಿಸಲು ನಲ್ಲೆಯೇ ನೀರೆರೆಯಬೇಕು ಎನ್ನುವಲ್ಲಿ ಅವರ ಚಾಡಿ ಮಾತುಗಳನ್ನು ನಂಬದಿದ್ದರೆ ಅವರ ಪ್ರಯತ್ನಗಳು ವಿಫಲವಾಗಿ ನಮ್ಮ ಬಾಂಧವ್ಯ ಸುರಕ್ಷಿತವಾಗಿ ಸುಭದ್ರವಾಗಿ ಇರುತ್ತದೆಂಬುದು ಕವಿ ಭಾವವಾಗಿದೆ.
‘ನಿದ್ದೆ ಬಾರದ ಆ ರಾತ್ರಿಗೆ
ಅವಳೀಗಲೂ
ನಿನ್ನ ನೆನಪಲ್ಲೇ ಇದ್ದಾಳೆ ಎಂದು ಸಾಂತ್ವನ ಹೇಳಿದೆ
ಸುಳ್ಳಿಗದೆಷ್ಟು ಶಕ್ತಿ ಇದೆಯೆಂದರೆ
ನಿಜಕ್ಕೂ ಗಾಢವಾಗಿ
ನಿದ್ದೆಯಾವರಿಸಿತು’
ಇದು ಪ್ರೀತಿಯ ಪರಾಕಾಷ್ಟೆಯನ್ನು ಹಾಗೂ ಅವಳ ಮೋಸದ ವ್ಯೂಹವನ್ನು ಭೇದಿಸುವ ಕವಿತೆ. ಅತಿಯಾಗಿ ನಲ್ಲೆಯನ್ನು ನಂಬಿಕೊಂಡು ನಿತ್ಯ ಕನವರಿಸುವ, ಅವಳಿಗಾಗಿ ಚಡಪಡಿಸುವ ಮನಸ್ಸನ್ನ ನಲ್ಲ ಸಮಾಧಾನ ಮಾಡಿಕೊಳ್ಳುವ ಬಗೆಯಿದು, ಅವನ ಪ್ರೇಮ ಸೌಧಕ್ಕೆ ಕೊಳ್ಳಿ ಇಟ್ಟು ಅವನನ್ನು ತ್ಯಜಿಸಿ ಹೋದರು ನಲ್ಲೆಯ ಗುಂಗಿನಲ್ಲೇ ಮನಸ್ಸು ಅವಳನ್ನು ಹಂಬಲಿಸುವಾಗ ಹೇಳಿದ ಸುಳ್ಳು ಅವಳನ್ನು ಸಂತೈಸಿದೆ.
‘ನಮ್ಮ ಪ್ರೀತಿಗೆ
ವಾಸ್ತವದ ನೆಲಕಟ್ಟಿದೆಯಾ
ಅಂತ ಯೋಚಿಸುವಾಗ ಈ ಕಾಲದಲ್ಲಿ
ಅದ್ಯಾವನೋ ಪಕೀರ
ಪ್ರೀತಿ ಒಂದು ಸುಂದರ ಭ್ರಮೆಯೆಂದು ಹೇಳುತ್ತಾ ತಿರುಗುತ್ತಿದ್ದಾನೆ’
ಪ್ರೀತಿ ವಾಸ್ತವದ ನೆಲೆಗಟ್ಟಿನಲ್ಲಿ ಭದ್ರವಾಗಿ ನೆಲೆ ನಿಲ್ಲುವ ಭಾವನೆ ಎಂದು ನಂಬಿದ್ದರೂ, ಕಾಲ ಎಷ್ಟು ಬದಲಾದರೂ, ಜನ ಇನ್ನೂ ಅದನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಿಲ್ಲವೆಂಬ ಕಟು ಸತ್ಯವನ್ನು ಪ್ರಕಟಿಸುವ ಕಾವ್ಯವಿದು. ಇಂದು ಪ್ರೀತಿ ಎನ್ನುವುದು ಜನರಿಗೆ ಭ್ರಮೆಯಂತೆ ಭಾಸವಾಗುತ್ತಿದೆ ಎಂಬುದನ್ನು ಫಕೀರನ ಮಾತಿನ ಮೂಲಕ ನಿರೂಪಿಸಿದ್ದಾರೆ.
‘ಒಂದೇ ಮಾತು ಒಂದೇ ಒಂದು
ಯಾವ ಕಾರಣಕ್ಕೂ
ಮಾತು ಮುಗಿಯುವ ಮುನ್ನ
ಮಧ್ಯೆ ಎದ್ದು ಹೋಗಿ ಬಿಡಬೇಡಿ
ಇದು ಏನಿಲ್ಲವೆಂದರೂ
ನೂರು ವರ್ಷಗಳ ಮೌನ’
ಇಲ್ಲಿ ಮಾತು ಎನ್ನುವುದು ಬೇಡಿಕೆ ಕನಸು ಸಹಾಯವನ್ನು ಪ್ರತಿನಿಧಿಸುತ್ತದೆ. ಇವು ಈಡೇರಲು ನೂರಾರು ವರ್ಷಗಳೇ ಬೇಕಾಗಬಹುದು. ಅದುವರೆಗೂ ತಾಳ್ಮೆಯಿಂದ ತಮ್ಮ ಅಹವಾಲುಗಳನ್ನು ಕೇಳುವ ಕಿವಿಯನ್ನ ಕವಿ ಹುಡುಕುತ್ತಿದ್ದಾರೆ. ಮೌನ ನಿಶ್ಯಬ್ದತೆಯನ್ನು ಹುಡುಕುತ್ತಿದೆ ಎನ್ನುವ ಕವಿ ತನ್ನ ಮನಸ್ಸಿನ ಭಾವನೆಗಳನ್ನ ಪೂರ್ಣವಾಗಿ ಕೇಳಲು ವಿನಂತಿಸುತ್ತಾರೆ.
‘ಬೇಸರಿಸಿಕೊಂಡಿರಿ….?
ಬರೀ ನೋವಿನ ಕುರಿತು ಬರೆಯುವೆನೆಂದು
ಯಾವ ಹೊಸ ಗಾಳಿ ಹೊಸ ಬೆಳಕು
ಗರ್ಭ ಧರಿಸಲು ವಿಫಲವಾಗಿರುವ
ಸಮಯದಲ್ಲಿ ಖುಷಿಯ ಕುರಿತು ಬರೆದನಾದರೆ ನನ್ನ ಮಾನಸಿಕ ಸ್ಥಿತಿ
ಸೀಮಿತವಿಲ್ಲವೆಂದೆ ಅರ್ಥ’
ಈ ಮೇಲಿನ ಸಾಲುಗಳು ಖುಷಿಯ ಸಮಯಕ್ಕಿಂತ ದುಃಖದ ಪಾಲೇ ಜೋರಾಗಿದೆ ಎಂದು ನಿರೂಪಿಸುತ್ತದೆ. ಹೊಸ ಗಾಳಿ ಬೀಸುವ ವಿಚಾರಗಳು, ಚೈತನ್ಯ ತುಂಬುವ ಸಂಗತಿಗಳು, ಹುರುಪು, ಲವಲವಿಕೆ, ಸ್ಪೂರ್ತಿಯನ್ನು ಬಿತ್ತುವ ಆಶಾವಾದಗಳು ಕಾಣದಿದ್ದಾಗ ಬರೆಯಲು ಉಳಿಯುವುದು ಕೇವಲ ನೋವಿನ ವಿಚಾರ ಎನ್ನುವ ಕವಿ ಎಲ್ಲರು ದುಃಖದಲ್ಲಿದ್ದಾಗ, ಖುಷಿಯನ್ನೇ ಕಾಣದಿದ್ದಾಗ ಅದನ್ನು ಕುರಿತು ಬರೆಯುವುದು ಮಾನಸಿಕ ಆರೋಗ್ಯವಂತನ ಲಕ್ಷಣವಲ್ಲ ಎಂದು ಹೇಳುವ ಮೂಲಕ ಏನಾದರೂ ಹೊಸದು ಮೂಡಲೆಂದು ಆಶಿಸುತ್ತಾರೆ.
‘ಒಂದು ವಯಸ್ಸು ಅಂದರೆ
ಆಯಸ್ಸಿಗೊಂದು ಭಾಗದಲ್ಲಿ
ಮಾಗಬೇಕು
ಹಿಂದಿನ ಗಾಯಗಳು ಮಾಯುವಂತೆ
ವಯಸ್ಸನ್ನ ನಿಭಾಯಿಸುವುದು
ತಿಳಿಯದೆ ಹೋದರೆ
ಸಿಕ್ಕವರಿಗೆಲ್ಲ ಗಾಯವನ್ನುಂಟಿಸುತ್ತಾ
ಬದುಕು ಸವಿಸಬೇಕಾಗುತ್ತದೆ’
ಈ ಕವಿತೆ ಮನುಷ್ಯನಿಗೆ ವಯಸ್ಸಾದಂತೆ ಪರಿಪಕ್ವವಾಗುತ್ತಾ ಸಾಗಬೇಕು ಎಂಬುದರ ಪ್ರತಿಕವಾಗಿದೆ. ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಎದುರಾಗುವ ಅನುಭವಗಳು ನಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಎಂಬುದು ಕವಿಯ ಆಶಯವಾಗಿದೆ. ಗಾಯಗಳು ಎಂಬ ರೂಪಕ ಸವಾಲುಗಳನ್ನು ಪ್ರತಿನಿಧಿಸುತ್ತಾ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ನಮ್ಮ ಜೊತೆಗೆ ನಮ್ಮ ಜೊತೆಗಿರುವವರು ತೊಂದರೆಗೆ ಒಳಗಾಗುವರೆಂಬುದನ್ನ ವಿವರಿಸುತ್ತದೆ.
‘ಗಟ್ಟಿಗೊಳ್ಳದ ನೆಲೆಯಲ್ಲಿ ನಿಂತು
ವಿಶ್ವಾಸಕ್ಕಾಗಿ ಕಾತರಿಸುವುದು
ವ್ಯವಹಾರಿಕ ಸಮಾಜದಲ್ಲಿ
ನಿಷಿದ್ಧ
ಆದರೆ ಯಾರು ಹಾಗಂತ
ಹೇಳಿಕೊಡುವುದಿಲ್ಲ’
ಈ ಕವಿತೆ ವಿಶ್ವಾಸಾರ್ಹತೆಯ ಕುರಿತು ಚರ್ಚಿಸುತ್ತದೆ. ನಾವು ಯಾರನ್ನಾದರೂ ನಂಬಬೇಕಾದರೆ ಅವರ ಬಗ್ಗೆ ನಮಗೆ ಸಂಪೂರ್ಣ ಅರಿವಿರಬೇಕು ಎನ್ನುವಲ್ಲಿ ಕವಿಯ ಇಂದಿನ ಸಮಾಜ ಪ್ರತಿಯೊಂದನ್ನೂ ವ್ಯವಹಾರಿಕ ನೆಲೆಯಲ್ಲಿ ನೋಡುತ್ತದೆ. ಭಾಂದವ್ಯ ಸ್ನೇಹ ಪ್ರೀತಿಗಳನ್ನೆಲ್ಲ ಅಡವಿಟ್ಟು ಈ ಜನರ ಮಧ್ಯೆ ವಿಶ್ವಾಸವನ್ನು ಬಯಸುವುದು ಹೇಗೆ ಸಾಧ್ಯ ಅದನ್ನು ಚಲಂ ಅವರು ಇಲ್ಲಿ ನಿಷಿದ್ಧ ಎಂದಿರುವುದು. ಇದು ಅವರವರ ಅನುಭವಕ್ಕೆ ಬರಬೇಕೆ ವಿನಃ ಯಾರು ಹೇಳಿ ಕಲಿಸುವುದಲ್ಲ ಎನ್ನುವುದು ಕವಿ ಭಾವ.
ಒಟ್ಟಿನಲ್ಲಿ ಚಲಂ ಹಾಡ್ಲಹಳ್ಳಿಯವರ ಈ ಮಳೆಗಾಲ ನಮ್ಮದಲ್ಲ ಕವನ ಸಂಕಲನ ವಿಶಿಷ್ಟವಾದ ಅಭಿವ್ಯಕ್ತಿ ದೃಷ್ಟಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಯೋಗ್ಯವಾದ ಗುಣ ಲಕ್ಷಣಗಳನ್ನು ಹೊಂದಿದೆ. ಇಂತಹ ಕೃತಿಯನ್ನು ರಚಿಸಿದ ಕವಿ ಚಲಂ ಹಾಡ್ಲಹಳ್ಳಿಯವರಿಗೆ ಅವರ ಮುಂದಿನ ಕಾವ್ಯ ಕೃಷಿಗೆ ಶುಭ ಹಾರೈಕೆಗಳು.