ಈ ದಶಕದ ಸಮಕಾಲೀನ ಸಾಹಿತ್ಯ ಪರಂಪರೆ! – ಶಂಕರ್ ಸಿಹಿಮೊಗ್ಗೆ

ಕುಪ್ಪಳಿಯಲ್ಲಿ ನಡೆದ ಕಾಜಾಣ ಕಾವ್ಯ ಕಮ್ಮಟ

‘ಸಾಹಿತ್ಯದ ಉದ್ದೇಶ ರಕ್ತವನ್ನು ಶಾಹಿಯನ್ನಾಗಿ ಮಾಡುವುದು’, ಇಪ್ಪತ್ತನೆಯ ಶತಮಾನದ ಪ್ರಮುಖ ಇಂಗ್ಲಿಷ್ ಕವಿಗಳಲ್ಲಿ ಒಬ್ಬರಾದ ಟಿ.ಎಸ್. ಎಲಿಯಟ್ ಸಾಹಿತ್ಯದ ಬಗ್ಗೆ ಹೀಗೆ ಹೇಳುತ್ತಾನೆ. ಈ ಸಾಲುಗಳ ವ್ಯಾಖ್ಯಾನವನ್ನು ನಾವು ಹೇಗೂ ಮಾಡಬಹುದು; ಕವಿ ಇಲ್ಲಿ ಬದುಕಿನ ಅನುಭವದ ಕಾವ್ಯವನ್ನು ಅಕ್ಷರಗಳಿಗೆ ಇಳಿಸಬೇಕು, ಮತ್ತು ಬರೆಯಲು ಬಳಸಿದ ಶಾಹಿಯೇ ಓದುಗನಿಗೆ ರಕ್ತದಂತೆ ಗೋಚರಿಸಬೇಕು, ಅಷ್ಟು ಪ್ರಖರವಾಗಿ ನಮ್ಮ ಬರವಣಿಗೆ ಇರಬೇಕು ಎನ್ನುತ್ತಾನೆ. ಆಧುನಿಕ ಸಾಹಿತ್ಯ ಪರಂಪರೆ ಬೆಳೆದಂತೆ ಅದರ ಬೇರುಗಳು ಎಲ್ಲೆಡೆಗೆ ಹರಡಿ ಎಲ್ಲಾ ವರ್ಗದ ಜನರನ್ನು ತಲುಪಿ ಅವರಿಗೂ ಬರವಣಿಗೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಣೆ ನೀಡುತ್ತಿದೆ. ನವೋದಯ, ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯಗಳನ್ನು ಓದಿಕೊಂಡು ಸಾಹಿತ್ಯದಲ್ಲಿ ತೊಡಗಿಕೊಂಡವರದು ಒಂದು ವರ್ಗದವರಾದರೆ ಇದ್ಯಾವುದನ್ನು ಓದಿಕೊಳ್ಳದ, ಸಾಹಿತ್ಯದ ಯಾವ ಹಿನ್ನೆಲೆಯು ಇರದ ಅನೇಕರು ಇಂದು ತಮ್ಮ ಅನುಭವಗಳನ್ನೇ ಕತೆ ಕಾವ್ಯವಾಗಿ ಬರೆಯುತ್ತಿದ್ದಾರೆ, ಇಂತವರದ್ದು ಇನ್ನೊಂದು ವರ್ಗ ಎನ್ನಬಹುದು.

ಒಂದು ಕಾಲದಲ್ಲಿ ಅಕಾಡೆಮಿಕ್ ಆಗಿ ಕನ್ನಡ ಓದಿದದವರಿಗೆ ಮಾತ್ರ ಸೀಮಿತವಾಗಿದ್ದ ಬರವಣಿಗೆ ಇಂದು ಅಲಂಕಾರಿಕ ವಸ್ತುಗಳನ್ನು ಮಾರುವ ಅಂಗಡಿಯ ಹುಡುಗನಿಂದ ಹಿಡಿದು ಸಣ್ಣ ಹೋಟೆಲ್ ನಡೆಸುವವರು ಕೂಡ ತಮ್ಮ ದಿನನಿತ್ಯದ ಅನುಭವವನ್ನು ಕಾವ್ಯವಾಗಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಕಾಲಘಟ್ಟದಲ್ಲಿ ಸಾಹಿತ್ಯ ಬೇರೆ ಬೇರೆ ರೂಪಗಳಲ್ಲಿ ಆರಂಭಗೊಂಡರು ಕ್ರಮೇಣವಾಗಿ ಪ್ರಖರತೆಯನ್ನು ಪಡೆದುಕೊಳ್ಳುತ್ತಿದೆ. ಈ ದಾರಿಯಲ್ಲಿ ಅದು ಹಿರಿಯರಿಂದ ಫೇಸ್‌ಬುಕ್‌ ಬರೆಹ ಎಂದು ನಿರ್ಲಕ್ಷ್ಯಕ್ಕೆ ಒಳಗಾದರು ಹೆಚ್ಚು ಜನರನ್ನು ತಲುಪುತ್ತಿರುವುದನ್ನು ಕಡೆಗಣನೆ ಮಾಡಲು ಸಾಧ್ಯವಿಲ್ಲ, ಸದಾಕಾಲವೂ ಹೋಲಿಕೆಯಲ್ಲಿ ತೊಡಗಿಕೊಳ್ಳುವ ಕೆಲವು ಹಿರಿಯ ಸಾಹಿತಿಗಳು ಹೊಸತಲೆಮಾರಿನ ಕಾವ್ಯ ಮತ್ತು ಕತೆಯ ಹೊಸ ಆಯಾಮಗಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ ಎಂದರು ತಪ್ಪಾಗಲಾರದು. ಕೆಲವರು ಕಾವ್ಯದಿಂದ ಆರಂಭಿಸಿದ್ದರು ಕೊನೆಗೆ ತಮ್ಮ ಗಟ್ಟಿಯಾದ ನೆಲೆಯನ್ನು ಕತೆ ಮತ್ತು ಕಾದಂಬರಿ ಬರೆಯುವುದರಲ್ಲಿ ಕಂಡುಕೊಂಡಿದ್ದಾರೆ.

ಹೊಸ ತಲೆಮಾರಿನ ಬರೆಹಗಾರರಿಗೆ ಇರುವ ಬಹುದೊಡ್ಡ ಸವಾಲೆಂದರೆ ಸಿದ್ಧಾಂತದ ಸ್ಪಷ್ಟತೆ. ಆರಂಭದಲ್ಲಿ ನಮಗೆ ಯಾವುದೇ ಸಿದ್ಧಾಂತದ ಹಂಗಿಲ್ಲ ಎನ್ನುತ್ತಿದ್ದ ಅನೇಕ ಹೊಸ ತಲೆಮಾರಿನ ಬರೆಹಗಾರರು ತಮ್ಮ ಬರವಣಿಗೆಯಲ್ಲಿ ತಮಗರಿವಿಲ್ಲದಂತೆಯೇ ಒಂದು ಸಿದ್ಧಾಂತದ ಮಾರ್ಗ ಹಿಡಿದಿರುವುದನ್ನು ಕಂಡುಕೊಂಡಿದ್ದಾರೆ. ಈ ಹಿಂಜರಿಕೆಗೆ ಬಹುಮುಖ್ಯ ಕಾರಣ ಎಲ್ಲಿ ಯಾರೊಂದಿಗೆ ಗುರುತಿಸಿಕೊಂಡರೆ ಅವಕಾಶಗಳ ಬಾಗಿಲು ತೆರೆಯುವುದಿಲ್ಲವೋ ಎಂಬ ಭಯ ಮತ್ತು ಇಂತವರೊಂದಿಗೆ ಯಾವಾಗ ಎಷ್ಟು ಪ್ರಮಾಣದಲ್ಲಿ ಗುರುತಿಸಿಕೊಂಡರೆ ಪ್ರಶಸ್ತಿ ಮತ್ತೊಂದು ಮಗದೊಂದು ಸಿಗಬಹುದು ಎಂಬ ಆಸೆಯು ಇರಬಹುದು. ಕಳೆದ ಒಂದು ದಶಕದಲ್ಲಿ ಕತೆ ಕಾವ್ಯವನ್ನು ಗಂಭೀರವಾಗಿ ಸ್ವೀಕರಿಸಿ ಅಷ್ಟೇ ಶಕ್ತವಾಗಿ ಬರೆಯುವ ಅನೇಕ ಬರೆಹಗಾರರು ಯಾವುದೇ ಪ್ರಶಸ್ತಿ ಪದಕಗಳ ಹಿಂದೆ ಹೋಗದೆ ಬರವಣಿಗೆಯಲ್ಲಿ ಏಳಿಗೆ ಕಂಡವರು ಇದ್ದಾರೆ, ಹಾಗೆ ಬರವಣಿಗೆಯ ಆರಂಭದ ಒಂದೆರಡು ವರ್ಷಗಳಲ್ಲಿಯೇ ಪ್ರಭಾವಗಳ ಕಾರಣಕ್ಕಾಗಿ ಪ್ರಶಸ್ತಿಗಳನ್ನು ಪಡೆದುಕೊಂಡು ಬರವಣಿಗೆಯ ದೃಷ್ಟಿಯಿಂದ ಸತ್ತವರು ಅನೇಕರಿದ್ದಾರೆ. ಸಾಹಿತ್ಯ ವಲಯದಲ್ಲಿ ಒಂದು ಮಾತಿದೆ; “ಈಗಿನ್ನೂ ಚೆನ್ನಾಗಿ ಬರೆಯುವವರ ಹಾಳುಗೆಡವಬೇಕೆ?, ಅವರಿಗೊಂದು ಪ್ರಶಸ್ತಿ ಕೊಡಿಸಿಬಿಡಿ ಸಾಕು” ಎಂದು. ಕಳೆದ ಒಂದು ದಶಕದಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡ ಹಲವರು ಬರವಣಿಗೆಯಲ್ಲಿ ಏಳಿಗೆ ಕಾಣದಿರುವುದನ್ನು, ಕೆಲವು ಹಿರಿಯರು ಕಾರ್ಯಕ್ರಮಗಳ ವೇದಿಕೆಗಳಲ್ಲಿ ಹೇಳುವುದನ್ನು ಮರೆಯುವುದಿಲ್ಲ. ಹೀಗಾಗಿ ಪ್ರಶಸ್ತಿಗಳ ತಲೆಭಾರದಿಂದ ತಪ್ಪಿಸಿಕೊಳ್ಳುವುದು ಕೂಡ ಹೊಸ ತಲೆಮಾರಿನ ಬರೆಹಗಾರರ ಮುಂದೆ ಇರುವ ಒಂದು ದೊಡ್ಡ ಸವಾಲು.

ಲೇಖಕ ಶಂಕರ್ ಸಿಹಿಮೊಗ್ಗೆ

ಸಾಮಾಜಿಕ ಜಾಲತಾಣದ ದಿನಗಳಲ್ಲಿ ಅಭಿವ್ಯಕ್ತಿಸಿ ಅನೇಕ ಮಾರ್ಗಗಳಿಂದ ಜನರನ್ನು ತಲುಪಬಹುದಾದರು, ಬೆನ್ನು ತಟ್ಟುವ, ಬರೆದಿರುವುದನ್ನು ತಿದ್ದುವ, ವೇದಿಕೆಯಲ್ಲಿ ಅವಕಾಶ ಕೊಡುವ ಒಂದು ಶಕ್ತಿ ನಮ್ಮೊಡನೆ ಇರಲೇಬೇಕು. ಈ ನಿಟ್ಟಿನಲ್ಲಿ ಗಮನಿಸಿದಾಗ ಸಮಕಾಲೀನ ಸಾಹಿತ್ಯವನ್ನು ಗಟ್ಟಿಯಾಗಿ ಬೆಳೆಸುವ ದಿಕ್ಕಿನಲ್ಲಿ ಕೆಲವು ಸಂಸ್ಥೆಗಳು ತಮ್ಮದೆಯಾದ ಕೊಡುಗೆಯನ್ನು ಕನ್ನಡಕ್ಕೆ ನೀಡಿವೆ. ಗೆಳೆಯರುಗಳೇ ಗುಂಪಿನಲ್ಲಿ ಸೇರಿಕೊಂಡು ಕಾವ್ಯದ ಓದು ಚರ್ಚೆಯಂತಹ ಕೆಲಸಗಳಲ್ಲಿ ತೊಡಗಿಕೊಂಡಿರುವಾಗ ಆರಂಭವಾಗಿದ್ದೆ ಕಾಜಾಣ ಎನ್ನುತ್ತಾರೆ ಕವಿಗಳಾದ ಡಾ. ಬೇಲೂರು ರಘುನಂದನ್, ಕಾಜಾಣವು ವಿಶೇಷವಾಗಿ ಸಮಕಾಲೀನ ಕಾವ್ಯದ ದೃಷ್ಟಿಯಿಂದ ನೋಡುವುದಾದರೆ ಕಳೆದ ಒಂದು ದಶಕದಿಂದ ತನ್ನದೆ ಆದ ಕೆಲಸವನ್ನು ಮಾಡಿಕೊಂಡು ಬಂದಿದೆ. ಕಾಜಾಣ ಕಾವ್ಯ ಕಮ್ಮಟದ ಮೂಲಕ ರಾಜ್ಯದ ಬೇರೆ ಬೇರೆ ಊರುಗಳಲ್ಲಿ ಕಾರ್ಯಕ್ರಮ ಆಯೋಜಿಸಿ, ಅಲ್ಲಿ ಈ ತಲೆಮಾರಿನವರ ಕಾವ್ಯದ ಬಗ್ಗೆ ಸಂವಾದ ನಡೆಸಿದೆ, ಹೊಸ ತಲೆಮಾರಿನ ಕಾವ್ಯವನ್ನು ಕಾಜಾಣ ಕಾವ್ಯ ಪುರಸ್ಕಾರ ನೀಡುವ ಮೂಲಕ ಗುರುತಿಸುತ್ತಿದೆ. ಕುಪ್ಪಳಿಯ ಕಾಜಾಣ ಕಾವ್ಯ ಕಮ್ಮಟದ ಅನುಭವಗಳು ಅಲ್ಲಿನ ಕವಿಶೈಲ ಮತ್ತು ಕವಿಮನೆಯ ನಂಟಿನೊಂದಿಗೆ ಬೆಸೆದುಕೊಂಡು ಮತ್ತಷ್ಟು ಅವಿಸ್ಮರಣೀಯವಾಗಿಸಿವೆ ಎನ್ನುತ್ತಾರೆ ಪಾಲ್ಗೊಂಡ ಶಿಬಿರಾರ್ಥಿಗಳು.

ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್‌ವರ್ತ್ ಪ್ರಕಾರ ಎಲ್ಲಾ ರೀತಿಯ ಜ್ಞಾನದ ಆರಂಭ ಮತ್ತು ಅಂತ್ಯವೇ ಕಾವ್ಯ; ಇದು ಮನುಷ್ಯನ ಹೃದಯದಂತೆ ಅಮರವಾಗಿರುತ್ತದೆ ಎನ್ನುತ್ತಾನೆ. ಹಾಗೆ ಕಾಲ ಬದಲಾದಂತೆ ಕಾವ್ಯ ರೂಪುಗೊಳ್ಳುವ ಕಾರಣ, ಸಂದರ್ಭ, ಮತ್ತು ಬದುಕಿನ ಅಭದ್ರತೆಗಳು ಬೇರೆ ಬೇರೆ ಇರಬಹುದು. ಟೀ ಮಾರುವ ಹುಡುಗನಿಂದ ಹಿಡಿದು ಇಂಜಿನಿಯರ್ ಡಾಕ್ಟರ್ಗಳು ಇಂದು ಕಾವ್ಯವನ್ನು ಪ್ರಖರವಾಗಿ ಬರೆಯುತ್ತಾ ಇದ್ದಾರೆ. ಜಾಲತಾಣದ ಇಂದಿನ ದಿನಗಳಲ್ಲಿ ಪ್ರೋತ್ಸಾಹಿಸುವ ರೂಪಗಳು ಕೂಡ ಬೇರೆ ಬೇರೆಯಾಗಿವೆ. ಕೆಲವು ಸಾಹಿತ್ಯದ ಗುಂಪುಗಳು ಆನ್ಲೈನ್ ಮೂಲಕ ಕವಿಗೋಷ್ಠಿಗಳನ್ನು ಏರ್ಪಡಿಸಿ ಕವಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿವೆ. ಈ ನಿಟ್ಟಿನಲ್ಲಿ ಗಮನಿಸಿದಾಗ ಕವಿಗಳಾದ ಸೂರ್ಯಕೀರ್ತಿಯವರ ಮಿಂಚುಳ್ಳಿ ಪ್ರಕಾಶನ, ಕವಯತ್ರಿ ವಿಶಾಲ ಆರಾಧ್ಯರವರ ಅಲ್ಲಮ ಪ್ರಕಾಶನ, ಮತ್ತು ಸುಮೀತ್ ಮೇತ್ರಿಯವರ ಸುಗಮ ಗುರುತಿಸುವಂತಹ ಕೆಲಸಗಳನ್ನು ಮಾಡಿಕೊಂಡು ಬಂದಿವೆ.

ಹೊಸ ತಲೆಮಾರಿನ ಬಹುತೇಕರು ಕತೆ, ಕವಿತೆ ಬರೆಯುವುದರಲ್ಲಿ ತೊಡಗಿಕೊಂಡಂತೆ, ವಿಮರ್ಶೆ ಮತ್ತು ಕಾದಂಬರಿ ಬರೆಹದಲ್ಲಿ ತೊಡಗಿಕೊಂಡಿಲ್ಲ ಎನ್ನಬಹುದು, ವಿಮರ್ಶೆಯ ದೃಷ್ಟಿಯಿಂದ ನೋಡಿದರೆ ಯುವ ವಿಮರ್ಶಕರ ಸಂಖ್ಯೆ ಬಹಳ ಕಡಿಮೆ ಇದೆ. ಇದಕ್ಕೆ ಮುಖ್ಯ ಕಾರಣ ಓದಿನ ಧ್ಯಾನದಲ್ಲಿ ಹೊಸ ತಲೆಮಾರಿನವರು ವಿಫಲರಾಗುತ್ತಿದ್ದಾರ ಎಂದೆನಿಸುತ್ತದೆ, ಮತ್ತು ಇದಕ್ಕೆ ಆಳವಾದ ಅಧ್ಯಯನದ ಕೊರತೆಯು ಇರಬಹುದು. ‘ಸಣ್ಣ ಕಥೆ ಎಂದರೆ ಅದೊಂದು ಪ್ರೇಮ ಪ್ರಕರಣ, ಕಾದಂಬರಿ ಎಂದರೆ ಅದೊಂದು ಮದುವೆ’ ಎನ್ನುತ್ತಾಳೆ ಅಮೆರಿಕಾದ ಲೇಖಕಿ ಲಾರಿ ಮೂರ್. ಹೌದು ಕಾದಂಬರಿ ಬರೆಹ ದೀರ್ಘವಾದ ಸಮಯವನ್ನು ಬೇಡುತ್ತದೆ, ಅಲ್ಲಿ ನೂರಾರು ಪಾತ್ರಗಳು ಬರುತ್ತವೆ. ಕಾದಂಬರಿ ಬರೆಹವನ್ನು ಸರಿದೂಗಿಸಿಕೊಂಡು ಹೋಗುವುದು ಒಂದು ಸವಾಲೇ ಸರಿ. ಸಮಕಾಲೀನ ಬರೆಹಗಾರರಲ್ಲಿ ಈ ತಾಳ್ಮೆಯ ಕೊರತೆ ಇರುವ ಕಾರಣಕ್ಕಾಗಿಯೋ ಏನೋ ಬಹಳಷ್ಟು ಜನ ಕಾದಂಬರಿ ಬರೆಹದಲ್ಲಿ ತೊಡಗಿಕೊಳ್ಳದೆ ಇರಬಹುದು.

ಕಥೆಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಗಮನಿಸಿದರೆ, ಕಥಾಕೂಟ ಕತೆಗಾರರಿಗೆ ಕಥೆಗಳನ್ನು ಬರೆಯಲು ಉತ್ತೇಜಿಸಿದರೆ, ಗಲಾಟೆ ಗಂಧರ್ವರು ತಂಡದ ಕಥೆ ಹೇಳ್ತಿವಿ ಬನ್ನಿ, ಮತ್ತು ಗ್ರಾಮೀಣ ಸಾಹಿತ್ಯ ವೇದಿಕೆಯ ಕಥೆ ಓದು ಕಾರ್ಯಕ್ರಮಗಳು ಕಥೆಗಳನ್ನು ಓದುಗರಿಗೆ ತಲುಪಿಸುತ್ತಿವೆ. ಹಾಗೆಯೇ ಛಂದ ಪುಸ್ತಕ ನಡೆಸುವ ‘ಕಥಾ ಕಮ್ಮಟ’ ಕಾರ್ಯಕ್ರಮವು ಕನ್ನಡ ಕಥಾ ಪ್ರಪಂಚಕ್ಕೆ ಹೊಸ ಬಗೆಯ ದಾರಿಗಳನ್ನು ತೋರಿಸುವ ಕೆಲಸವನ್ನು ಮಾಡುತ್ತಿದೆ. ಹಿರಿಯ ಲೇಖಕಿ ಎಂ.ಆರ್. ಕಮಲ ಅವರು ನಡೆಸಿಕೊಡುತ್ತಿದ್ದ ‘ಮಾತುಕತೆ’ ಕಾರ್ಯಕ್ರಮವು ಹಲವಾರು ಸಾಹಿತ್ಯದ ಚಿಂತನೆಯ ವಿಷಯಗಳನ್ನು ಫೇಸ್‌ಬುಕ್‌ ಮೂಲಕ ಲಕ್ಷಾಂತರ ಜನರಿಗೆ ತಲುಪಿಸಿದೆ. ಈ ಮೂಲಕ ನಾಡಿನ ಮೂಲೆ ಮೂಲೆಯಲ್ಲಿಯು ಬಹುತೇಕರು ಕನ್ನಡ ಸಾಹಿತ್ಯ ಪರಂಪರೆಯನ್ನು ತಮ್ಮದೆ ದಾಟಿಯಲ್ಲಿ ಬೆಳೆಸಿಕೊಂಡು ಬರುವ ಕೆಲಸವನ್ನು ಮಾಡುತ್ತಿದ್ದಾರೆ.

“ಪುಸ್ತಕ ಉದ್ಯಮವು ಮಾರಾಟವನ್ನು ಉತ್ತೇಜಿಸಲು ಸಾಹಿತ್ಯದ ಬಹುಮಾನಗಳನ್ನು ಕಂಡುಹಿಡಿದಿದೆ ವಿನಃ, ಅರ್ಹತೆಯನ್ನು ಪುರಸ್ಕರಿಸಲು ಅಲ್ಲ” ಎನ್ನುತ್ತಾನೆ ಇಂಗ್ಲೆಂಡಿನ ಲೇಖಕ ಮೈಕೆಲ್ ಮೊರ್ಕಾಕ್. ಇದೆ ರೀತಿಯಾಗಿ ಪ್ರಶಸ್ತಿ ಪುರಸ್ಕಾರಗಳ ತಲೆ ಭಾರದಿಂದ ತಪ್ಪಿಸಿಕೊಳ್ಳುವ ಬರೆಹಗಾರರು ಬರವಣಿಗೆಯಲ್ಲಿ ಏಳ್ಗೆ ಕಾಣುತ್ತಾರೆ ಎನ್ನುವುದು ಕೆಲವು ಹಿರಿಯರ ಅಭಿಪ್ರಾಯವಾದರು, ಪ್ರಶಸ್ತಿ ಪುರಸ್ಕಾರಗಳು ಬರೆಯಲು ಮತ್ತಷ್ಟು ಹುಮ್ಮಸ್ಸನ್ನು ಕೊಡುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಕೂಡ ಅಷ್ಟೇ ಸತ್ಯ. ಅಕಾಡೆಮಿ ಪ್ರಶಸ್ತಿಗಳ ನಡುವೆ ಹತ್ತಾರು ಖಾಸಗಿ ಪ್ರಶಸ್ತಿಗಳು ಇಂದು ಹುಟ್ಟುಕೊಂಡಿವೆ. ಕಾವ್ಯ ಪುರಸ್ಕಾರ ಮತ್ತು ಕಥಾ ಬಹುಮಾನಗಳ ಮೂಲಕ ಹೊಸ ತಲೆಮಾರಿನವರನ್ನು ಉತ್ತೇಜಿಸುತ್ತಿದ್ದರು, ಬಹುತೇಕ ಪ್ರಶಸ್ತಿಗಳು ಒಂದಷ್ಟು ಮೊತ್ತ ಮತ್ತು ಫಲಕವನ್ನು ಕೊಟ್ಟು ಪುಸ್ತಕ ಪ್ರಕಟಣೆಯಂತಹ ಮಹತ್ವದ ಜವಾಬ್ದಾರಿಯನ್ನು ಕವಿ ಮತ್ತು ಕಥೆಗಾರರ ತಲೆಯ ಮೇಲೆ ಹಾಕುತ್ತಿವೆ. ಇದಕ್ಕೆ ಹೊರತಾಗಿ ನೋಡಿದರೆ ಕಾವ್ಯದ ವಿಚಾರದಲ್ಲಿ ಅಲ್ಲಮ ಪ್ರಕಾಶನವು ಪುಸ್ತಕ ಪ್ರಕಟಣೆಯ ಜೊತೆಗೆ ಅಲ್ಲಮ ಕಾವ್ಯ ಪುರಸ್ಕಾರ ಪಡೆದ ಕವಿಯನ್ನು ಗೌರವಿಸಿ ಕಾರ್ಯಕ್ರಮ ಮಾಡಿದರೆ, ಛಂದ ಪುಸ್ತಕವು ಕೂಡ ದೊಡ್ಡ ಮೊತ್ತದ ಹಣವನ್ನು ಬಹುಮಾನವಾಗಿ ಕಥೆಗಾರರಿಗೆ ನೀಡಿ, ಕಥಾ ಸಂಕಲನವನ್ನು ಪ್ರಕಟಿಸಿ ಅಚ್ಚು ಕಟ್ಟಾದ ಕಾರ್ಯಕ್ರಮವನ್ನು ಮಾಡುತ್ತಿದೆ. ಈ ಮೂಲಕ ಅನೇಕ ಖಾಸಗಿ ಸಂಸ್ಥೆಗಳು ಸಣ್ಣ ಸಣ್ಣ ತೊರೆಗಳಾಗಿ ಕನ್ನಡ ಸಾಹಿತ್ಯ ಪರಂಪರೆಯನ್ನು ಕಟ್ಟುವ ಕೆಲಸವನ್ನು ತಮ್ಮದೆಯಾದ ಮಾರ್ಗದಲ್ಲಿ ಮಾಡುತ್ತಿವೆ.

———————————————————–

ಅಭಿಪ್ರಾಯಗಳು:

ಕವಿ ಬಿದಲೋಟಿ ರಂಗನಾಥ್

ಸಮಕಾಲಿನ ಸಾಹಿತ್ಯ ಹೆಚ್ಚು ಉತ್ಕೃಷ್ಟದ ಫಸಲಾಗಿದೆಯಾದರೂ ಅದಕ್ಕೆ ಸ್ಪಂದಿಸಿ ಬೆನ್ನೆಲುಬಾಗಿ ನಿಲ್ಲುವ ಮನಸುಗಳು ಕಾಣುತ್ತಿಲ್ಲ. ಕವಿ ತಕ್ಷಣದ ಸಮಾಜದ ಓರೆ ಕೋರೆಗಳನ್ನು ತಿದ್ದುವ ದಾರಿಯಲ್ಲಿ ನಡೆದರೂ ಸೊಪ್ಪಾಕದ ಕೆಲವು ಮನಸುಗಳ ನಡುವೆ ಸಮಕಾಲಿನ ಸಾಹಿತ್ಯ ಕೊರಗುತ್ತಿದೆ. ಅಭಿವ್ಯಕ್ತಿಸುವ ಸ್ವತಂತ್ರವೇ ಕಿತ್ತುಕೊಳ್ಳುವ ಸಮಾಜದ ನಡುವೆ ನಿಂತು ಜೀವಿಸುತ್ತಿದ್ದೇವೆ. ಅದರ ನಡುವೆಯೂ ಕೆಲವೊಂದು ಸಮಕಾಲಿನ ಕವಿ ಗೆಳೆಯರ ಜೀವಮಿಡಿತದ ಸದ್ದು ಕೆಟ್ಟ ಸಮಾಜದ ವ್ಯವಸ್ಥೆ ವಿರುದ್ದ ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮ ಸಮಾಜ ನಿರ್ಮಾಣದ ಕೂಗಿಗೆ ಸಮಕಾಲಿನ ಸಾಹಿತ್ಯ ದನಿ ಎತ್ತಬೇಕಾಗಿದೆ.

– ಬಿದಲೋಟಿ ರಂಗನಾಥ್
ಕವಿ, ತುಮಕೂರು
——————————

ರಂಗಕರ್ಮಿ ಡಾ. ಬೇಲೂರು ರಘುನಂದನ್

ಸಾಮಾಜಿಕ ಜಾಲಾತಾಣಗಳು ಮುಖ್ಯನೆಲೆಗೆ ಬಂದಿರುವ ಕಾಲಘಟ್ಟದಲ್ಲಿ ಕಳೆದ ಒಂದು ದಶಕದಿಂದಲೂ ಅನೇಕರು ಕಾವ್ಯವನ್ನು ಬರೆಯುತ್ತಿದ್ದಾರೆ, ಹೀಗಾಗಿ ಸಮಕಾಲೀನ ಸಂದರ್ಭ ಮತ್ತು ಯುವಕಾವ್ಯ ಬಹಳ ಮುಖ್ಯವಾದ ಸಂಗತಿ. ಕಾವ್ಯದ ದನಿಗೆ, ಕವಿತೆಯ ಅಭಿವ್ಯಕ್ತಿಗೆ, ರಚನೆ ಶೈಲಿ ಭಾಷೆ ಮತ್ತು ಕಾವ್ಯ ಪರಂಪರೆಗೆ ಸಂಬಂಧಪಟ್ಟಂತೆ ಚರ್ಚೆ ಮತ್ತು ಅನುಸಂಧಾನದ ಅಗತ್ಯವಿದೆ ಎಂದೆನಿಸಿ ಕಾಜಾಣದ ಮೂಲಕ ಕಳೆದ ಒಂದು ದಶಕದಿಂದಲೂ ಕಾವ್ಯ ಕಮ್ಮಟ, ಸಂವಾದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಈ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ. ಎಂದಿಗಿಂತಲೂ ಕೂಡ ಈ ಹೊತ್ತು ಕವಿತೆಗಳ ಬಗ್ಗೆ ಮಾತು ಚರ್ಚೆಯ ಅಗತ್ಯ ಬಹಳ ಮುಖ್ಯವಾಗಿದೆ, ಏಕೆಂದರೆ ಕಾವ್ಯ ಬರೆಯುವವರ ಸಂಖ್ಯೆಯು ಹೆಚ್ಚಿದೆ.

– ಡಾ. ಬೇಲೂರು ರಘುನಂದನ್
ಕನ್ನಡ ಸಹಾಯಕ ಪ್ರಾಧ್ಯಾಪಕರು
————–

ಕವಿ ಸೂರ್ಯಕೀರ್ತಿ

ಕಾವ್ಯದ ಸ್ವರೂಪ ಕಾಲದಿಂದ ಕಾಲಕ್ಕೆ ಸಮಕಾಲೀನವಾಗುತ್ತದೆ. ಇಂಥ ಸಂದರ್ಭದಲ್ಲಿ ಮಿಂಚುಳ್ಳಿ ಪ್ರಕಾಶನದಿಂದ ಹಲವಾರು ಕವಿಗೋಷ್ಠಿ ಮತ್ತು ಹಳಗನ್ನಡ ಓದು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿದ್ದೆವು. ಯುವಕವಿಗಳಿಗೆ ಪ್ರೋತ್ಸಾಹ ನೀಡಲು ‘ಮಿಂಚುಳ್ಳಿ ಕಾವ್ಯ ಬಹುಮಾನ’ ಸ್ಪರ್ಧೆಯನ್ನು ಏರ್ಪಡಿಸಿದ್ದೆವು. ಹೊಸ ಆಲೋಚನೆಯೊಂದಿಗೆ ನಮ್ಮ ಪ್ರಕಾಶನದ ಮೂಲಕ ಸೃಜನಶೀಲ ಕೃತಿಗಳನ್ನು ತರಲು ಮುಂದಾಗಿದ್ದೇವೆ.

– ಸೂರ್ಯಕೀರ್ತಿ
ಕವಿ, ಮಿಂಚುಳ್ಳಿ ಪ್ರಕಾಶನ
—————————————-

ವಿಮರ್ಶಕಿ ಅನುಸೂಯ ಯತೀಶ್

ಇದು ಸಾಹಿತ್ಯ ರಚನೆಯ ಪರ್ವಕಾಲ. ಕಥೆ, ಕವನ, ಕಾದಂಬರಿ, ಚುಟುಕು, ನಾಟಕ ಸೇರಿದಂತೆ ವಿಭಿನ್ನ ಸಾಹಿತ್ಯ ಪ್ರಕಾರಗಳಲ್ಲಿ ಹೊಸ ಪ್ರಯೋಗಕ್ಕೆ ಇಂದಿನ ತಲೆಮಾರು ಅತ್ಯಂತ ಆಸ್ಥೆಯಿಂದ ತೊಡಗಿಸಿಕೊಂಡು ತಮ್ಮ ಭಾವನೆಗಳನ್ನು, ಚಿಂತನೆಗಳನ್ನು ಪ್ರಕಟಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಯಾರನ್ನೊ ಓಲೈಸಲು ಅಥವಾ ಮನರಂಜನೆಗಾಗಿ ವೈಯಕ್ತಿಕ ನೆಲೆಯಲ್ಲಿ ಮಾತ್ರ ಬಿಂಬಿಸದೆ ಸಾಮಾಜಿಕ ಒಳಿತನ್ನು ಬಯಸುವ ಸಾಹಿತ್ಯ ಸೃಷ್ಟಿಗಾಗಿ ಅವರ ಹೃದಯ ಮಿಡಿಯಬೇಕಿದೆ. ತಪ್ಪುಗಳನ್ನು ಕಂಡಾಗ ನಿರ್ದಾಕ್ಷಿಣ್ಯವಾಗಿ ಖಂಡಿಸುವ ಪ್ರಯತ್ನಗಳು ಸಾಗಬೇಕು. ಸಮಾಜದಲ್ಲಿನ ಅಸ್ವಸ್ಥತೆಯ ಮೂಲಗಳಾದ ಜಾತಿ, ಮತ, ಧರ್ಮ, ಲಿಂಗ ಬೇಧ, ಶೋಷಣೆಗಳೆಂಬ ರೋಗಕ್ಕೆ ವೈಚಾರಿಕತೆ, ಆಲೋಚನೆ, ಹುಡುಕಾಟ, ಪ್ರಶ್ನಿಸುವಿಕೆಯಂತಹ ಮುಲಾಮು ಹಚ್ಚಿ, ಹೊಸ ತಲೆಮಾರು ಆರೋಗ್ಯಕರವಾದ ಯುಗ ಪರಿವರ್ತನೆಗೆ ನಾಂದಿ ಹಾಡಬೇಕು.

– ಅನುಸೂಯ ಯತೀಶ್
ವಿಮರ್ಶಕಿ, ನೆಲಮಂಗಲ

0
    0
    Your Cart
    Your cart is emptyReturn to Shop