ಗೊರೂರು ಶಿವೇಶ್ ಅವರು ಬರೆದ ಸುಲಲಿತ ಪ್ರಬಂಧ ‘ಪಿ .ಆರ್.ಓ ಡೈರಿಯಲ್ಲೊಂದು ಪುಟ’

ಪ್ರತಿ ವರ್ಷ ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಸರ್ಕಾರಿ ನೌಕರರು ಅದರಲ್ಲೂ ಅಧ್ಯಾಪಕ ವೃಂದದವರು ಮತ್ತೊಂದು ಹಬ್ಬಕ್ಕೆ ಸಜ್ಜಾಗಲೇಬೇಕು. ಅದುವೇ ಚುನಾವಣಾ ಹಬ್ಬ. ಗ್ರಾಮ ಪಂಚಾಯಿತಿ ,ತಾಲೂಕು, ಜಿಲ್ಲಾ ಪಂಚಾಯಿತಿ, ನಗರಸಭೆ ,ಪುರಸಭೆ, ಕೋಆಪರೇಟಿವ್ ಸೊಸೈಟಿಗಳ ಚುನಾವಣೆ ,ಎಂಎಲ್ಸಿ ಚುನಾವಣೆ ,ಹೀಗೆ ಪ್ರತಿ ವರ್ಷ ಒಂದಲ್ಲ ಒಂದು ಚುನಾವಣೆ ಅವರಿಗೆ ಅನಿವಾರ್ಯ.ಮೊದಲೆಲ್ಲ ಅಕ್ಟೋಬರ್ ನಿಂದ ಆರಂಭಿಸಿ , ಮೇ ವರೆಗೆ ನಡೆಯುತ್ತಿದ್ಚ ಚುನಾವಣೆಗಳು ಇತ್ತೀಚೆಗೆ ಏಪ್ರಿಲ್, ಮೇ ತಿಂಗಳಲ್ಲೇ ನಡೆಯುತ್ತಿವೆ.

ಎರಡು ದಿನಗಳ ಕಾಲ ಹೊಸ ಪರಿಸರದಲ್ಲಿ ಹೊಸ ಸಹೋದ್ಯೋಗಿಗಳೊಂದಿಗೆ ಕರ್ತವ್ಯ ನಿರ್ವಹಿಸಬೇಕಾದ ಅಧ್ಯಕ್ಷಾಧಿಕಾರಿ ಪಿ ಆರ್ ಓ ಹುದ್ದೆಯನ್ನು ಬಹಳಷ್ಟು ಸಂದರ್ಭದಲ್ಲಿ ಮಾಡ್ತೀರಾ ಎಂದು ಕೇಳಿದರೆ ಎಲ್ಲರೂ ನಮ್ರವಾಗಿ ನಿರಾಕರಿಸುವವರು. ಚುನಾವಣಾ ಆಯೋಗದ ‘ಆದೇಶ’ದ ‘ಆಗಮ’ದ ನಂತರ ‘ಲೋಪ’ವಿಲ್ಲದೆ ಕಾನೂನುಬದ್ಧ ರೀತಿಯಲ್ಲಿ ಮುಗಿಸಬೇಕಾದ ಹೊಣೆ ಆತನಿಗೆ ಹೆಚ್ಚು ಇರುವುದರಿಂದ ಚುನಾವಣೆ ಎಂಬುದು ಚುನಾವಣಾ ಆಯೋಗ ಮತ್ತು ಮತದಾರರ ನಡುವೆ ನಾವು ನಡೆಸುವ ಸಂಧಿ ಕಾರ್ಯವಾಗಿದ್ದು ಆದೇಶ ಆಗಮ ಹಾಗೂ ಲೋಪ ಸಂಧಿಗಳ ಸಂಯೋಗ ಎಂದೇ ಪರಿಚಯದ ಕನ್ನಡದ ಅಧ್ಯಾಪಕರು ಹೇಳುತ್ತಿದ್ದರು.

ಸ್ಟಾಫ್ ರೂಂನಲ್ಲಿ ಕುಳಿತು ಹರಟೆ ಹೊಡೆಯುತ್ತಿರುವಂತೆ ತಾಲೂಕು ಕಚೇರಿಯಿಂದ ಬಂದ ಆದೇಶ ಪ್ರತಿಗಳನ್ನು ಪ್ರಾಂಶುಪಾಲರು ತಾವು ಸ್ವೀಕರಿಸದೆ ನೇರವಾಗಿ ಎಲ್ಲರನ್ನು ಕರೆಸಿ, ನೇರವಾಗಿ ಜಾರಿ ಮಾಡಲು ಬಂದವರ ಕೈಯಿಂದಲೇ ನೇರವಾಗಿ ವಿತರಿಸುವರು. ಕಾರಣ” ಏನ್ ಸಾರ್( ಮೇಡಂ),ನೀವು ಸ್ವಲ್ಪ ಅವರಿಗೆ ಹೇಳಬಹುದಲ್ವಾ, ಷರಾ ಹಾಕಿ ವಾಪಸ್ ಕಳಿಸಬಹುದಲ್ವಾ “ಎಂದು ತಮಗೆ ಆಗಿರುವ ಹಾರ್ಟ್ ಆಪರೇಷನ್ ಕಿಡ್ನಿ ಸ್ಟೋನ್ ಇಲ್ಲವೇ ಹೈ ಬಿಪಿ ಮುಂತಾದವುಗಳ ವಿವರಣೆಯಿಂದ ತಪ್ಪಿಸಿಕೊಳ್ಳಲು ಮಾಡುವ ಉಪಾಯವಿದು. ತಮ್ಮ ಕಷ್ಟದ ಪ್ರವಚನ ಆರಂಭಿಸುತ್ತಿರುವಂತೆ ಸರ್ ನೀವು ನೇರವಾಗಿ ತಾಲೂಕು ಇಲ್ಲವೇ ಡಿ ಸಿ ಆಫೀಸಿಗೆ ಹೋಗಿ ಅಲ್ಲೇ ಏನಾದರೂ ಮಾಡಿ ಕ್ಯಾನ್ಸಲ್ ಮಾಡಿಕೊಳ್ಳಿ ಸರ್ ಎಂದು ನಿರ್ಲಿಪ್ತವಾಗಿ ಒಮ್ಮೊಮ್ಮೆ ಕರುಣೆಯಿಂದ ” ನನಗೆ ನಿಮ್ಮ ಕಷ್ಟ ಗೊತ್ತು, ಆದರೆ ನಾನು ಏನು ಮಾಡಕ್ಕಾಗಲ್ಲ, ನೀವು ಅಲ್ಲಿಗೆ ಹೋಗಿ ಬಗೆಹರಿಸಿಕೊಳ್ಳಿ” ಎಂದು ಕೈ ತೊಳೆದುಕೊಳ್ಳುತ್ತಾರೆ. ಕೆಲವರ ಕೋಪ ಅಲ್ಲಿಗೂ ತಣ್ಣಗಾಗದೆ ಲಿಸ್ಟ್ನಲ್ಲಿ ತಮ್ಮ ಹೆಸರನ್ನು ಸೇರಿಸಿ ಕಳಿಸಿದ್ದಕ್ಕೆ ಪ್ರಿನ್ಸಿಪಾಲರನ್ನು ದೂರುತ್ತಾ ಹೊರಗೆ ಬಂದರೆ ಇನ್ನು ಕೆಲವರು ಯಾವ ರೀತಿ ಇಲ್ಲವೇ ಯಾರ ಕೈಯಿಂದ ಡಿಸಿಗೆ ಪ್ರಭಾವ ಬೀರಿ ತಾವು ಕರ್ತವ್ಯದಿಂದ ಬಚವಾಗಬಹುದೆಂದು ಯೋಚನೆ ಮಾಡುತ್ತಿರುತ್ತಾರೆ.ಇನ್ನು ಉಳಿದ ಸ್ಟಾಫ್ ಮೆಂಬರ್ ಗಳಲ್ಲಿ ಆದೇಶ ಬಾರದೇ ಇರುವ ಒಬ್ಬಿಬ್ಬರ ಮೇಲೆ ‘ಈತ ಏನೋ ಹಿಕ್ಮತ್ ನಡೆಸಿದ್ದಾನೆ. ಮೊನ್ನೆ ತಾಲೂಕ್ ಆಫೀಸ್ ಹತ್ರ ಸುತ್ತ ಬೇಕಾದರೆ ಅನ್ಕೊಂಡೆ’ ಅಂತಲೋ ಇಲ್ಲವೇ ‘ಅವರ ಅತ್ತೆಯ ಅಣ್ಣನ ಮಗ ಎಸಿ, ಅವರ ಕೈಯಲ್ಲಿ ಹೇಳಿ ಕ್ಯಾನ್ಸಲ್ ಮಾಡಿಸಿಕೊಂಡಿರಬಹುದು’ ಗುಮಾನಿ ಪಡುತ್ತಾರೆ .

ಅದು ಆ ಕ್ಷಣದ ಉದ್ವೇಗ .ಒಂದು ದಿನ ಕಳೆಯುತ್ತಿರುವಂತೆ ಮತ್ತೆ ಸ್ಟಾಪ್ ರೂಮಲ್ಲಿ ತಮ್ಮ ಹಿಂದಿನ ರಸವತ್ತಾದ ಚುನಾವಣಾ ಪ್ರಸಂಗಗಳನ್ನು ಮೆಲುಕು ಹಾಕುತ್ತಿರುತ್ತಾರೆ .ಇದರಿಂದ ನಾನು ಏನು ಹೊರತ್ತಲ್ಲ. 37 ವರ್ಷಗಳ ಸುದೀರ್ಘ ಅಧ್ಯಾಪಕ ವೃತ್ತಿಯ ಅನುಭವದಲ್ಲಿ 30ಕ್ಕೂ ಹೆಚ್ಚು ಬಾರಿ ಅಧ್ಯಕ್ಷಾ ಧಿಕಾರಿಯ ಕರ್ತವ್ಯವನ್ನು ನಿರ್ವಹಿಸಿದರೂ ಪ್ರತಿಬಾರಿಯೂ ಬರೆದಿದ್ದರೆ ಸಾಕು ಎಂದುಕೊಂಡರೂ ಬಂದಾಗ ಆ ಎರಡು ದಿನಗಳನ್ನು ಕಳೆಯುವುದು ಹೇಗೆಂಬ ಚಿಂತೆ ಮೂಡುತ್ತದೆ. ಚುನಾವಣೆ ನಡೆಯುವ ಏಳರಿಂದ ಐದು ಗಂಟೆ ಒಮ್ಮೊಮ್ಮೆ ಆರು ಗಂಟೆಯ ಉದ್ವೇಗದ ಅವಧಿ ಒಂದೆಡೆಯಾದರೆ ಮತ್ತೊಂದು ಹಿಂದಿನ ರಾತ್ರಿ ಇಡೀ ದಿನ ಅಲ್ಲಿ ಕಳೆಯಬೇಕಾದ ಅನಿವಾರ್ಯತೆಯ ಯೋಚನೆಯೇ ಚಿಂತೆಗೀಡು ಮಾಡುತ್ತದೆ .ಚುನಾವಣೆಯ ಅವಧಿ ,ಅಲ್ಲಿ ಕ್ಷಣಕ್ಷಣಕ್ಕೂ ಬದಲಾಗುವ ಚಿತ್ರಗಳು ನಮ್ಮ ಸಂದರ್ಭೊಚಿತ ಪರಿಹಾರ, ದಕ್ಷತೆ ,ಸಮಯ ಪ್ರಜ್ಞೆಗೆ ಸವಾಲಾಗಿ ನಿಂತ ಪ್ರಸಂಗಗಳು ಮತ್ತೊಂದು ಪ್ರಬಂಧಕ್ಕೆ ವಿಷಯವಾಗಬಹುದು. ಈಗ ನಾನು ಹೇಳುವ ಹೊರಟಿರುವುದು ಆ ಹಿಂದಿನ ದಿನ ಹೋಗಿ ಮಾರನೇ ದಿನ ಹೊರಟು ಬರುವವರೆಗೆ ಎದುರಿಸಬೇಕಾದ ಇತರೆ ಸನ್ನಿವೇಶಗಳನ್ನು.

ಪ್ರಿಸೈಡಿಂಗ್ ಆಫೀಸರ್ ಎಂಬ ಪದವಿಯನ್ನು ಕನ್ನಡದಲ್ಲಿ ಅಧ್ಯಕ್ಷಾಧಿಕಾರಿ ಎಂದು ಮಾಡಿರುವುದು ಚುನಾವಣಾ ಅಧಿಕಾರಿಗಳ ತಂಡದ ಅಧ್ಯಕ್ಷ ಎಂಬ ಕಾರಣಕ್ಕೆ ಇರಬಹುದು. ಬಹುತೇಕ ಚುನಾವಣೆಯ ಸಂದರ್ಭದಲ್ಲಿ ಸಮವಯಸ್ಕರ ಇಲ್ಲವೇ ಅನುಭವದಲ್ಲಿ ಹಿರಿಯರಾದ, ಕೆಲವೊಮ್ಮೆ ಮನೆತನದ ಹಿನ್ನೆಲೆಯಲ್ಲಿ ಸಾಕಷ್ಟು ಸ್ಥಿತಿವಂತರು, ರಾಜಕೀಯವಾಗಿ ಪ್ರಭಾವಿಗಳು ಆದವರೊಂದಿಗೆ ಅನಿವಾರ್ಯವಾಗಿ ಜೊತೆಗಾರರಾಗಬೇಕಾದ ಪರಿಸ್ಥಿತಿ.

ಪ್ರತಿ ಕ್ಷೇತ್ರದ ಚುನಾವಣೆಯ ವಿಧಿ ವಿಧಾನಗಳು ಕ್ಷೇತ್ರದ ರಿಟರ್ನಿಂಗ್ ಆಫೀಸರ್ ನ ದಕ್ಷತೆ ಆಸಕ್ತಿ ಸೃಜನಶೀಲತೆಗೆ ಮಾದರಿಯಾಗಿರುತ್ತದೆ. ಹೊಸದಾಗಿ ಎಸಿ ತಹಶೀಲ್ದಾರ್ ರಾದವರು ತಮ್ಮ ಉತ್ಸಾಹ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಈ ಅವಕಾಶ ಬಳಸಿಕೊಂಡರೆ ಈಗಾಗಲೇ ಹತ್ತಾರು ಚುನಾವಣೆಗಳನ್ನು ಮಾಡಿದವರು ಸನ್ನಿವೇಶಗಳ ಸೂಕ್ಷ್ಮತೆಯನ್ನು ಹೇಗೆ ನಿರ್ವಹಿಸಬಹುದೆಂಬ ಕೌಶಲ್ಯವನ್ನು ಮನದಟ್ಟು ಮಾಡುವರು. ನಿವೃತ್ತ ಅಂಚಿಗೆ ಬಂದ ಕೆಲವರಂತೂ ತಮ್ಮ ಕಿರಿಯ ಅಧಿಕಾರಿಗಳಿಗೆ ಈ ಕರ್ತವ್ಯವನ್ನು ಬಿಟ್ಟು ತಾವು ಬರಿ ಸಹಿ ಹಾಕುವುದಕಷ್ಟೇ ಸೀಮಿತವಾಗಿರುವುವರು.

ಅಂತೆಯೇ ಅಧ್ಯಕ್ಷಾಧಿಕಾರಿಗಳ ಪದವಿಯನ್ನು ಕೆಲವರು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಇತರರ ಮೇಲೆ ಅಧಿಕಾರ ಚಲಾಯಿಸಿ ಕರ್ತವ್ಯ ನಿರ್ವಹಿಸುವವರಾದರೆ ಮತ್ತೆ ಕೆಲವರು ಎ ಪಿ ಆರ್ ಓ ಮತ್ತು ಪೋಲಿಂಗ್ ಆಫೀಸರ್ ಗಳಿಗೆ ಪೂಸಿ ಮಾಡಿ ,ಹೊಗಳಿ ಅವರಿಂದಲೇ ಸಂಪೂರ್ಣ ಕಾರ್ಯಗಳನ್ನು ನಿರ್ವಹಿಸುವಂತಹ ಛಾತಿ ಉಳ್ಳವರು. ಉಳಿದಂತೆ ಬಹಳಷ್ಟು ಜನ ತಾವು ಭಾರ ಹೊತ್ತು ಇತರರಿಗೂ ಹೊರಿಸುವವರು.

ವೃತ್ತಿಯ ಆರಂಭದ ಕೆಲ ವರ್ಷಗಳು ಕಳೆದಿದ್ದವು. ಬೆಳಗ್ಗೆ ಸಂತೆಗೆ ಹೊರಟ ನಮ್ಮ ತಂದೆಯವರನ್ನು ಕಳಿಸಲೆಂದು ಬಸ್ ಸ್ಟ್ಯಾಂಡ್ನಲ್ಲಿ ನಿಂತಿದ್ದೆ .ಆಗಲೇ ನಮ್ಮ ಸಹೋದ್ಯೋಗಿ ಒಬ್ಬರು ಬೃಹತಾಕಾರದ ಸೂಟ್ ಕೇಸ್ ಒಂದು ಕೈಯಲ್ಲಿ , ಏರ್ ಬ್ಯಾಗು ಹೆಗಲ ಮೇಲೆ ಹಾಕಿಕೊಂಡು ಕೈಚೀಲ ಒಂದನ್ನು ಹಿಡಿದು ಬಂದಿದ್ದಾರೆ. “ಇದೇನು ಸರ್ ಇಷ್ಟು ಬೇಗನೆ ಕೋಳಿ ಕೂಗುವುದಕ್ಕಿಂತ ಮುಂಚೆ ಹೊರಟಿದ್ದೀರಿ ” ಅಂದೆ “ಈ ಬಸ್ ಬಿಟ್ರೆ ಆರು ಕಾಲು ಬಸ್ಸು. ಅದೇನಾದ್ರೂ ರಶ್ ಆಗಿ ಬಂದ್ರೆ ಇನ್ನು ಇರೋದೇ ಎಂಟು ಗಂಟೆ ಬಸ್ಸು. ಅಲ್ಲಿ ಎಂಟು ಗಂಟೆಗೆ ಕರೆಕ್ಟಾಗಿ ಇರಬೇಕಪ್ಪ ಅದಕ್ಕೆ ಬೇಗನೆ ಹೊರಟಿದ್ದೀನಿ” ಎಂದರು. ಅವರನ್ನು ಹಾಗೆ ನೋಡಿದೊಡನೆ ಚುನಾವಣೆಯ ಕಾವು ಕೊಂಚ ನನಗೂ ಏರಲಾರಂಬಿಸಿತು. “ಅದು ಸರಿ ಸರ್, ಇದೇನು ಸರ್ ಇಷ್ಟೊಂದು ಲಗೇಜ್” ಎಂದೆ.” “ಒಂದು ದಿನಕ್ಕೆ ಬೇಕಾಗಿರುವ ಬಟ್ಟೆ ಬರೆ ಟವಲ್ಲು ಸೂಟ್ಕೇಸ್ ನಲ್ಲಿದೆ. ಹ್ಯಾಂಡ್ ಬ್ಯಾಗ್ ಬ್ಯಾಲೆಟ್ ಪೇಪರ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು. ಇನ್ನೊಂದು ಕೈ ಬ್ಯಾಗಿನಲ್ಲಿ ಬ್ರೆಡ್ಡು, ರಸ್ಕು, ಸೇಬು, ಬಾಳೆಹಣ್ಣು, ಒಗ್ಗರಣೆ ಪುರಿ ಕುರುಕಲು ತಿಂಡಿ ಅಕಸ್ಮಾತ್ ಏನಾದ್ರೂ ಊಟ ತಿಂಡಿ ಸರಿಯಾಗಿ ಸಿಗದ್ದಿದ್ರೆ ಅಂತ ಮನೆಯವರು ಮಾಡಿಕೊಟ್ಟಿದ್ದಾರೆ” ಎಂದರು. ಅರೆರೆರೆ ಇವರೇನು ಎಲೆಕ್ಷನ್ ಮಾಡಲು ಹೋಗುತ್ತಿದ್ದಾರೋ ಅಥವಾ ಪಿಕ್ನಿಕ್ ಹೋಗುತ್ತಿದ್ದಾರೋ ಅನ್ನಿಸಿತು. ಹ್ಯಾಂಡ್ ಬ್ಯಾಗನಲ್ಲಿ ಒಂದು ಟವಲ್, ಲುಂಗಿ ಒಂದು ಟಿ-ಶರ್ಟ್, ಬ್ರಷ್, ಸೋಪನ್ನು ಹಾಕಿಕೊಂಡು ಹೊರಟ್ಟಿದ್ದ ನನಗೆ ಅವರ ರೀತಿ ಗಾಬರಿ ಮೂಡಿಸಿತು. ಊಟ ತಿಂಡಿ ಎಲ್ಲಾ ಅಲ್ಲೇ ಸಿಗುತ್ತಲ್ಲ , ಸರ್ ಅಂದೆ. ಇರ್ಲಿ ,ಸನ್ನಿವೇಶ ಏನಾಗುತ್ತೋ ಗೊತ್ತಿಲ್ಲ ಎಂದರವರು.

ಚುನಾವಣೆಯ ಕಾವಿನ ಅರಿವಿಲ್ಲದ ನಾನು ಈಗ ಗಡಿಬಿಡಿ ಮಾಡಿ ಹೊರಟೆ. ಮಸ್ಟರಿಂಗ್ ಕೇಂದ್ರಕ್ಕೆ ಹೋಗುವಷ್ಟರಲ್ಲಿ 10 ಗಂಟೆ .ತಡವಾಗಿರಬಹುದು ಎಂದು ನೋಡಿದರೆ ಆಗಿನ್ನು ಬೇರೆ ಬೇರೆ ತಾಲೂಕುಗಳಿಂದ ಬಸ್ಸುಗಳಲ್ಲಿ ಬಂದು ಇಳಿಯುತ್ತಿದ್ದ ಸಿಬ್ಬಂದಿಗಳಿಗೆ ತಂಡವನ್ನು ಸೇರಿಕೊಳ್ಳುವಂತೆ ಕೆಲವರು ಕೂಗಿ ಕೂಗಿ ಕರೆಯುತ್ತಿದ್ದರೆ ಮೈಕ್ ಹಿಡ್ದು ಮಾರ್ಗದರ್ಶನ ನೀಡುವವರು ‘ ಬೇಗ ಬೇಗ ತಿಂಡಿ ತಿಂದು ತಂಡವನ್ನು ಸೇರಿಕೊಳ್ಳಬೇಕೆಂದು’ ಮಾರ್ಗದರ್ಶನ ನೀಡುತ್ತಿದ್ದರು. ಸರಿ, ತಿಂಡಿ ತಿನ್ನೋಣ ಎಂದು ತಾಲೂಕಛೇರಿಯ ಹಿಂಭಾಗದ ಶಾಮಿಯಾನದ ಬಳಿಗೆ ಧಾವಿಸಿದರೆ ಆಗಲೇ ತಿಂಡಿಗಾಗಿ ಹಲವಾರು ಜನ ಮುಗಿಬಿದ್ದಿದ್ದರು .ಅಲ್ಲಿ ಹೋಗಿ ನಿಂತರೆ ಕೆಲವರು ಅಡಿಕೆ ಪಟ್ಟೆಯ ತಟ್ಟೆಗಾಗಿ ಕಿತ್ತಾಡುತ್ತಿದ್ದರೆ, ಇತ್ತ ಪಲಾವಿನ ದೀಕ್ಷ ಹಿಡಿದವನ ಬಳಿ ಒಬ್ಬರ ಕೈಯ ಮೇಲೆ ಇನ್ನೊಬ್ಬರು ತಮ್ಮ ತಟ್ಟೆಯನ್ನು ಹಿಡಿದಿದ್ದಾರೆ . ಬಡಿಸುವವನಾದರೂ ನೀಡಿದ ತಟ್ಟೆಗಳಿಗೆ ಪಲಾವಿನ ಸರ್ಫೇಸ್ ಮೇಲೆ ಸ್ಪರ್ಶಿಸಿ ಎಷ್ಟು ಸಿಗುತ್ತೋ ಅಷ್ಟು ತೆಗೆದು ಹಾಕ್ತಾ ಇದ್ದಾನೆ. ಇನ್ನು ಸ್ವಲ್ಪ ಹಾಕಿ ಸರ್ ಎಂಬ ಪ್ರಶ್ನೆಗೆ ಅವರು ‘ಎಂಟು ನೂರು ಜನಕ್ಕೆ ಆರ್ಡರ್ ಕೊಟ್ಟಿದ್ದಾರೆ . ಇಲ್ಲಿ ನೋಡಿದ್ರೆ ಒಂದುವರೆ ಸಾವಿರ ಜನ ಇದ್ದಾರೆ ಯಾರಿಗೆ ಹಾಕೋದು ಯಾರಿಗ್ ಬಿಡೋದು.’ ಅಲ್ಲಿ ನೋಡಿದರೆ ಚುನಾವಣಾ ಸಿಬ್ಬಂದಿಗಳು ,ಅಧಿಕಾರಿಗಳು ,ಟೆಂಪೋ ಇತರೆ ವಾಹನಗಳ ಡ್ರೈವರ್ ಗಳು , ತಮ್ಮ ಹೆಂಡತಿ ಅಪ್ಪ ಅಮ್ಮ ರನ್ನು ಕಳಿಸಲು ಬಂದವರು, ಚುನಾವಣೆ ಕುತೂಹಲಕ್ಕೆ ಬಂದವರು ,ನಮ್ಮೂರಿನ ಬೂತಿಗೆ ಯಾರನ್ನು ಹಾಕಿದ್ದಾರೆ ಅಂತ ವಿಚಾರಿಸಲು ಬಂದವರು ಎಲ್ಲರೂ ಸೇರಿ ಜನಸಂಖ್ಯೆ ದುಪ್ಪಟ್ಟಾಗಿತ್ತು. ತಿಂಡಿ ಖಾಲಿಯಾಗಿತ್ತು. ಸರಿ ಸಮೀಪದಲ್ಲಿ ಇದ್ದ ಹೋಟೆಲ್ ಕಡೆಗೆ ಧಾವಿಸಿದರೆ ಅಲ್ಲೂ ತಿಂಡಿಯೆಲ್ಲ ಮುಗಿದು ಚಿತ್ರಾನ್ನ ಒಂದು ಮಾತ್ರ ಉಳಿದಿತ್ತು. ಸಿಕ್ಕಿದ್ದೇ ಶಿವಾ ಎಂದು ಜಮಾಯಿಸಿದ್ದಾಯಿತು .

ಎಪಿಆರ್ ಒ ಲೇಡಿ. ಮೊದಲೇ ತರಬೇತಿ ಸಭೆಯಲ್ಲಿ ಪರಿಚಯವಾಗಿದ್ದರು . ‘ನಮಗೆ ಹಾಕಿರುವ ಬೂತ್ ಬಾರ್ಡರ್ ಸರ್,,ನಮ್ದೆ ಲಾಸ್ಟ್ ಬೂತ್ ಮುವ್ವತ್ತು ಕಿಲೋಮೀಟರ್ ಆಗ್ಬೋದು ಸಾರ್’ ಅಂದ್ರು. ಅವರ ಮಾತಿನಲ್ಲಿ ನಿರಾಶೆ ಇಣಿಕಿತು . ಆಕೆಯ ಜೊತೆಯಲ್ಲಿ ಬಂದಿದ್ದ ಆಕೆಯ ಗಂಡ ನನ್ನನ್ನು ಕೇಳಲು ಬೇಡವೋ ಎಂದು ಅನುಮಾನಿಸುತ್ತ” ಸರ್ ಮೇಡಂ ಬೆಳಿಗ್ಗೆ ಬೂತ್ ಹತ್ರ ಬಂದ್ರೆ ಆಗಲ್ವಾ ಸಾರ್ ” ಎಂದರು “ಅದೇಗಾಗುತ್ರಿ ಅಲ್ಲಿ ಬರೆಯೋದು ತುಂಬಾ ಇರುತ್ತೆ . ಒಂದಿನ ಸ್ವಲ್ಪ ರಿಸ್ಕ್ ಆಗುತ್ತೆ, ಅಡ್ಜಸ್ಟ್ ಮಾಡ್ಕೊಳ್ಳಿ” ಅಂದೆ.

ಮೈಕ್ ಲ್ಲಿ ಹೋಗಿ ಇತರೆ ಪೋಲಿಂಗ್ ಅಧಿಕಾರಿಗಳನ್ನು ಕೂಗಿ ಕರೆದು ಶಾಮಿಯಾನದ ಅಡಿಗೆ ಬಂದು ಕುಳಿತರೆ ಅಲ್ಲಿಗೆ ಬಂದು ತಮ್ಮ ಮುಖದರ್ಶನ ಮಾಡಿದ ಅವರಿಬ್ಬರೂ ಶಿಕ್ಷಕ ಮಿತ್ರರು, ಅಕ್ಕ ಪಕ್ಕದ ಹಳ್ಳಿಯ ಶಾಲೆಯವರು . ತಮ್ಮ ಬ್ಯಾಗುಗಳನ್ನು ನಮ್ಮದರ ಜೊತೆ ಇಟ್ಟು “ಒನ್ ನಿಮಿಷ ಬರ್ತಿವಿ ಸರ್ “ಎಂದು ಹೇಳಿ ಹೊರಟರು . ನಿಜ ಚುನಾವಣೆಯಲ್ಲಿ ಆತಂಕ ಎಂಬುದು ಇಳಿಕೆಯ ಕ್ರಮದಲ್ಲಿ ಇರುವುದನ್ನು ನಾನು ಗಮನಿಸಿದ್ದೇನೆ ಎಂದರೆ ಪಿ ಆರ್ ಓ ಗೆ ಶೇಕಡ 100 ಎಂದುಕೊಂಡರೆ ಎಪಿ ಅರ್ ಓ ಅದು ಶೇ 50 ಇತರೆ ಪೋಲಿಂಗ್ ಆಫೀಸರ್ಸ್ಗಳಿಗೆ ಅದು ಶೇಕಡ 25ರಷ್ಟು ಇರಬಹುದು. ಮತ ಕೇಂದ್ರದಲ್ಲಿ ಅವಘಡಗಳು ನಡೆದರೆ ಎಲ್ಲರೂ ಒಟ್ಟಿಗೆ ಅದನ್ನು ಅನುಭವಿಸಬೇಕಾದ ಪರಿಸ್ಥಿತಿ ಇದ್ದರೂ ಸಂಬಂಧಪಟ್ಟಂತೆ ಪ್ರಿಸೈಡಿಂಗ್ ಅಧಿಕಾರಿಯೆ ಉತ್ತರ ನೀಡಬೇಕಾದದ್ದು ಆತಂಕಕ್ಕೆ ಕಾರಣ . ನಿರ್ವಹಣೆ ಮಾಡುವವರು ಅವರೇ ಆದರೂ ಉತ್ತರಿಸಬೇಕಾದವರು ಅಧ್ಯಕ್ಷಾಧಿಕಾರಿಯ ಕೆಲಸ ಎಂಬುದು ಅವರ ನಂಬಿಕೆ . ಉದಾಹರಣೆಗೆ ಬ್ಯಾಲೆಟ್ ಪೇಪರ್ಗಳು ಸರಿಯಾಗಿದೆ ಎಂದು ಎಣಿಸಲು ಕೊಟ್ಟರೆ ಎಲ್ಲವನ್ನು ಲೆಕ್ಕ ಮಾಡಿದ ನಂತರ “ಸರ್, ನೀವು ಒಂದು ಸರಿ ಚೆಕ್ ಮಾಡಿ ಹೆಂಗಾದ್ರೂ ಆಗ್ಲಿ ಒಂದೊಂದು ನಂಬರು ಮಿಸ್ಸಾಗ್ಬಿಟ್ಟಿರುತ್ತೆ .ಆಗ ನಿಮ್ದೇ ತಲೆ ಹೋಗೋದು” ಎಂದು ಹೆದರಿಕೆ ಹುಟ್ಟಿಸಿ, ಏಕೆಂದರೆ ಉತ್ತರ ಕೊಡಬೇಕಾದರು ನೀವು ಎಂದು ಕಾರಣ ತಿಳಿಸುತ್ತಾರೆ.

ಅವರು ಹೋದವರು ಅವರ ಸ್ನೇಹಿತರೊಡನೆ ಅವರಿಗೆ ಅಲಾಟ್ ಆಗಿರುವ ಜಾಗ ವಿಚಾರಿಸಿ ಹಿಂದೊಮ್ಮೆ ತಾವೇನಾದರೂ ಅಲ್ಲಿ ಕಾರ್ಯ ನಿರ್ವಹಿಸಿದ್ದರೆ ಆ ಊರಿನ ಚುನಾವಣಾ ಇತಿಹಾಸ ಮತ್ತು ಭೌಗೋಳಿಕ ವ್ಯಾಪ್ತಿ ರಾತ್ರಿ ಮತ್ತು ಹಗಲು ಅವರಿಗೆ ದೊರಕಬಹುದಾದ ಸಾಮಾನ್ಯ ಸವಲತ್ತುಗಳು, ವಿಶೇಷ ಸವಲತ್ತುಗಳು ಎಲ್ಲವನ್ನು ಪರಸ್ಪರ ಹಂಚಿಕೊಂಡು ಬಂದು ಸರಿ ಸರ್ , ಮೆಟೀರಿಯಲ್ ತರೋಣ ಬನ್ನಿ ಅಂತ ಹೇಳಿ ಕರೆದರು. . ಮತ ಪತ್ರ ಹಾಗೂ ಚುನಾವಣಾ ಸಾಮಗ್ರಿಗಳನ್ನು ತಂದದಾಯಿತು. ಮತಪತ್ರಗಳನ್ನು ನೋಡಿದೊಡನೆ ” ಸರ್ ಒಂದು ಸಾವಿರಕ್ಕೂ ಹೆಚ್ಚು ಇದೆ ಸಾರ್ ವೋಟು ನಮ್ಮ ಕೈಯಲ್ಲಿ ಮಾಡಕ್ಕಾಗಲ್ಲ ಇನ್ನೊಬ್ಬರನ್ನ ಕರ್ಕೊಂಡು ಬನ್ನಿ, ರಿಸರ್ವ್ ಪಟ್ಟಿಯಲ್ಲಿ ತುಂಬಾ ಜನ ಇದ್ದಾರೆ , ಊಟ ಮಾಡಿಕೊಂಡು ಬರುತ್ತೇವೆ, ನೀವು ಬನ್ನಿ ಮೇಡಂ “ಎಂದು ಮತ್ತೆ ಮಾಯವಾದರು .ಅವರು ವಾಪಸ್ ಬರುವಷ್ಟರಲ್ಲಿ ಇತರೆ ತಂಡದವರು ಆಗಲೇ ತಮ್ಮ ಸಾಮಗ್ರಿಗಳನ್ನು ಹೊತ್ತು ಬಸ್ಸಿನೆಡೆಗೆ ಧಾವಿಸುತ್ತಿದ್ದಾರೆ. ಹೊತ್ತಾಯಿತು ಎಂದು ಊಟದ ಮನೆ ಕಡೆಗೆ ಧಾವಿಸಿದರೆ ಆಗಲೇ ಹಪ್ಪಳ ಪಲಾವು ಬಜ್ಜಿ ಎಲ್ಲವೂ ಕರಗಿ ಬರಿ ಅನ್ನ ಸಾರು ಮಾತ್ರ ಉಳಿದಿದೆ .ಆತಂಕಕ್ಕೆ ಅದು ಕೂಡ ಸೇರುತ್ತಿಲ್ಲ. ಆ ತರುಣ ರಿಟರ್ನಿಂಗ್ ಅಧಿಕಾರಿಗಂತೂ ನಮ್ಮನ್ನೆಲ್ಲ ಎರಡು ಗಂಟೆ ಒಳಗೆ ಎಲ್ಲರೂ ನಿಮ್ಮ ನಿಮ್ಮ ಪೋಲಿಂಗ್ ಸ್ಟೇಷನ್ ನ ಲ್ಲಿರಬೇಕು ಎಂದು ಆಣತಿಯಿತ್ತಿದ್ದಾರೆ. ನಾನು ಮತ್ತೊಬ್ಬರನ್ನು ಕರೆದುಕೊಂಡು ಬಂದು ಅವರು ಇವರು ಎಲ್ಲಾ ಹತ್ತಿ ಬಸ್ ಹೊರಡುವಷ್ಟರಲ್ಲಿ ಮೂರು ಗಂಟೆ.

ಬಸ್ನಲ್ಲಿ ಬಂದು ಕುಳಿತವರಗಾಗಲೇ ಗಂಭೀರತೆ ಮೂಡಿತು. ರೂಟ್ ಆಫೀಸರ್ ಬಂದು ಪ್ರತಿ ಬೂತ್ ಅಲಾಟ್ ಆಗಿರುವ ಪೊಲೀಸರು ಬಂದಿದ್ದಾರೆ ಎಂದು ವಿಚಾರಿಸ ತೊಡಗಿದ. ನಮ್ಮ ಬೂತಿಗೆ ಒಬ್ಬರು ದಫೇದಾರ್ ಒಬ್ಬರು ಪೊಲೀಸರ ಜೊತೆಗೆ ಮತ್ತೊಬ್ಬರು ಚುನಾವಣಾ ವೀಕ್ಷಕರನ್ನು ಕೂಡ ಹಾಕಿರುವುದು ನಮ್ಮ ಪೋಲಿಂಗ್ ಬೂತ್ ನ ಹಾಜರಾತಿಯಿಂದ ತಿಳಿಯಿತು. ಎಲ್ಲರೂ ಹತ್ತಿದ್ದಾರೆ ಎಂದು ಖಚಿತಪಡಿಸಿಕೊಂಡ ರೂಟ್ ಆಫೀಸರ್ ಬಸ್ ಹೊರಡಲು ಸೂಚಿಸುವಷ್ಟರಲ್ಲಾಗಲೇ ಮೂರುವರೆ ದಾಟಿತು. ಬಸ್ಸಿನಲ್ಲಿ ಅಲ್ಲೊಬ್ಬರು ಇನ್ನೊಬ್ಬರು ಪರಿಚಿತರು .ಅಲ್ಲಿ ಎಲ್ಲಾ ಬೂತಿಗೆ ಒಬ್ಬ ಪೊಲೀಸ್, ಒಬ್ಬ ಹೋಂ ಗಾರ್ಡ್ ಇದ್ದರೆ ನಮಗೇನು ಈ ರೀತಿ ವಿಶೇಷ ಅಂದುಕೊಂಡೆ. ಏನಾದರೂ ಸೆನ್ಸಿಟಿವ್ ಬೂತೆ! . ಎದೆ ನಡುಗಿತು.

ಬಸ್ಸು ಒಂದೊಂದೇ ಹಳ್ಳಿಯನ್ನು ಪ್ರವೇಶಿಸಿ ಶಾಲೆಯ ಬಳಿ ಹೋಗುವಾಗ ಮೂರ್ನಾಲ್ಕು ಬಾರಿ ಹಿಂದೆ ಮುಂದೆ ಎಡ ಬಲ ಎಳೆದಾಡಿ ಬೂತಿರಿಸಿರುವ ಶಾಲೆಯ ಬಳಿ ಹೋಗಿ ಅವರನ್ನೆಲ್ಲ ಇಳಿಸಿ ನಮ್ಮ ಬೂತಿಗೆ ಬರುವಷ್ಟರಲ್ಲಿ ಐದು ದಾಟಿತ್ತು. ಶಾಲೆಯ ಆವರಣದಲ್ಲಿ ಆ ಊರಿನ ವಾಟರ್ ಮ್ಯಾನ್ ಜೊತೆ ಶಾಲೆಯ ಹುಡುಗರು ಕುತೂಹಲದಿಂದ ಕಾದಿದ್ದರು. ನೋಡಿದರೆ ನಾವುಎಂಟು ಜನ ಚುನಾವಣೆ ಕೆಲಸಕ್ಕೆ ಬಂದಿದ್ದೇವೆ. ವಾಟರ್ ಮನ್ ಈಗ ಡಿ ಗ್ರೂಪ್ ನೌಕರ .ಸ್ವಲ್ಪ ಟೀ ಕಾಫಿಗೆ ವ್ಯವಸ್ಥೆ ಮಾಡಪ್ಪ ಅಂತ ಹೇಳಿ ಚುನಾವಣಾ ಪ್ರಪತ್ರಗಳ ಮೇಲೆ ಮತಗಟ್ಟೆಯ ಸಂಖ್ಯೆ ಮತ್ತು ಇನ್ನಿತರ ವಿವರಗಳನ್ನು ತುಂಬಲಾರಂಬಿಸಿದವು. ಅಷ್ಟರಲ್ಲಿ ಒಬ್ಬಾತ ಎಂಟ್ರಿ ಕೊಟ್ಟ. ಎಲ್ಲರ ಊರು, ಕೆಲಸಗಳ ವಿವರವನ್ನ ತಿಳಿದುಕೊಂಡು ಸಾರ್, ಇದು ಅತಿ ಸೂಕ್ಷ್ಮ ಪ್ರದೇಶ .ಕಳೆದ ಬಾರಿ ಗಲಾಟೆ ಆಗಿ ಪೊಲೀಸ್ ವ್ಯಾನ್ ಬಂದು ಭೂತವನ್ನು ತೆಗೆದುಕೊಂಡು ಹೋಗಿದ್ದಾರೆ ಸ್ವಲ್ಪ ಜೋಪಾನವಾಗಿರಿ ಸರ್ ಅಷ್ಟಕ್ಕೂ ಬಿಡದೆ ನನ್ನನ್ನು ಆಚೆ ಕರೆದು ಈ ಊರಲ್ಲಿ ಕೆಲವರು ಊಟಕ್ಕೆ ಮದ್ದಾಕ್ತಾರೆ ಸರ್ ಸ್ವಲ್ಪ ಹುಷಾರು ಎಂದು ತಲೆಯಲ್ಲಿ ಹುಳ ಬಿಟ್ಟು ಮಾಯವಾದ. ಶಾಕ್ ಆಗಿದ್ದ ಕೈ ಯೋಚನೆಯಿಂದ ನಿಧಾನವಾಯಿತು. ಅಷ್ಟರಲ್ಲಿ ನಮ್ಮ ಎಪಿಆರ್ ಒ ಅವರ ಯಜಮಾನರು ಬಂದದ್ದನ್ನು ಕಂಡು ಸರ್ ಹೊರಡಲೇ ಎನ್ನುವ ರೀತಿಯಲ್ಲಿ ಆಕೆ ನನ್ನನ್ನು ನೋಡಿದರು. “ಫಾರಂ ಆದರೂ ತುಂಬಿ ಹೋಗಿ ಮೇಡಂ, ಇನ್ನೂ ಬ್ಯಾಲೆಟ್ ಪೇಪರ್ ಗೆ ಸಹಿ ಬೇರೆ ಮಾಡಿಲ್ಲ” ಎಂದು ನಾನು ನುಡಿಯುತ್ತಿರುವಂತೆ ಹೋಗ್ಲಿ ಬಿಡಿ ಸಾರ್ , ನೀವು ಹೋಗಿ ಮೇಡಂ, ಆದರೆ ಬೆಳಗ್ಗೆ ಬೇಗ ಬನ್ನಿ ಮೇಡಂ ಎಂದು ನನ್ನ ಕಡೆ ತಿರುಗಿ ಮಕ್ಕಳಿರೋರು, ನಾವು ಮಾಡಿಕೊಡ್ತೀವಿ ಬಿಡಿ ಸರ್ ಎಂದು ಅಭಯವನಿತ್ತರು, ಇಬ್ಬರು ಗೆಳೆಯರು .ಸರಿ ,ನೀವು ಬರೆಯಿರಿ ಎಂದು ಕೊನೆಯ ಗಳಿಗೆಯಲ್ಲಿ ನಮ್ಮೊಡನೆ ಸೇರಿದ್ದ ನಿವೃತ್ತಿಯ ಹತ್ತಿರಕ್ಕೆ ಬಂದಿದ್ದ ಹೆಡ್ ಮಾಸ್ಟರ್ ನ ಕರೆದೆ. ಸರ್ ಬರೋ ಅರ್ಜೆಂಟಲ್ಲಿ ಕನ್ನಡಕ ಬಿಟ್ಬಂದ್ಬಿಟ್ಟಿದ್ದೀನಿ ಸರ್..ಅದಿಲ್ಲದಿದ್ರೆ ಏನು ಬರೆಯೋಕ್ಕಾಗಲ್ಲ ಸರ್.” ಎಂದರಾತ. ಹಾಗಾದ್ರೆ ನಾಳೆ ಏನು ಮಾಡ್ತೀರಿ ನೀವು? ಎಂದು ನಾನು ಪ್ರಶ್ನಿಸಿದಕ್ಕೆ ಬೆರಳಿಗೆ ಇಂಕ್ಹಾಕ್ತೀನಿ ಬಿಡಿ ಸರ್ ಎಂದು ಅವರೇ ಮಾಡಬೇಕಾದ ಕೆಲಸದ ಸ್ವ ಘೋಷಣೆ ಮಾಡಿಕೊಂಡರು.

ಒಬ್ಬರನ್ನು ಬರೆಯಲು ಕರೆದುಕೊಂಡು ಇನ್ನೊಬ್ಬರಿಗೆ ಬ್ಯಾಲೆಟ್ ಪೇಪರ್ ನ ಹಿಂಭಾಗದಲ್ಲಿ ವಿಭಿನ್ನ ಚಿನ್ಹೆ (ಡೆಸ್ಟಿನ್ಗ್ ವಿಶ್ ಮಾರ್ಕ್ನ) ಒತ್ತಲು ತಿಳಿಸಿದೆ .ಕೊಡಿಸರ್ ಚಿಂದಿ ಉಡಾಯಿಸೋಣ ಎನ್ನುತ್ತಾ ಬೆಂಚಿನ ಆ ಬದಿಗೆ ಒಂದು ಕಾಲು ಮತ್ತು ಈ ಬದಿಗೆ ಒಂದು ಕಾಲನ್ನು ಹಾಕಿಕೊಂಡು ಮಧ್ಯಕ್ಕೆ ಮತಪತ್ರವನ್ನು ಹಿಡಿದು ನಾಲಿಗೆಯಿಂದ ಬೆರಳನ್ನು ಒದ್ದೆ ಮಾಡಿಕೊಂಡು ಸರ ಸರ ಬಡಿಯಲಾರಂಭಿಸಿದರು.ಐದೇ ನಿಮಿಷಕ್ಕೆ “ಕೊಡಿ ಸರ್ ಇನ್ನೊಂದು “ಎಂದರು .ನಾನು ಆತ ಕೊಟ್ಟ ಮತಪತ್ರಗಳ ಬಂಡಲ್ ನೋಡಿದರೆ ಮತಪತ್ರದ ಹಿಂದಕ್ಕೆ ಸೀಲು ಹಾಕುವ ರಭಸದಲ್ಲಿ ಅದರ ಶಾಯಿಯೆಲ್ಲ ಅದರ ಮುಂದಿನ ಮತಪತ್ರದ ಮೇಲಿನ ಅಭ್ಯರ್ಥಿಗಳ ಚಿಹ್ನೆಯ ಮೇಲೆ ಬಿದ್ದಿದೆ .ಗಾಬರಿಯಿಂದ” ಏನ್ರಿ ನೀವು ಮಾಡಿರೋದು” ಎಂದೆ .”ಏನಾಗಿದೆ ಸರ್?””.ಅಭ್ಯರ್ಥಿಗಳ ಚಿಹ್ನೆ ಮೇಲೆಲ್ಲ ಇಂಕ್ ಬಿದ್ದಿದೆ ಅಲ್ರಿ, ನಾಳೆ ಯಾರಾದರೂ ನೋಡಿ ಮೊದಲೇ ಒತ್ತಿ ಬಿಟ್ಟಿದ್ದಾರೆ ಅಂದ್ರೆ ಏನ್ರೀ ಮಾಡೋದು”? “ಅಯ್ಯೋ ಸಾರ್ !ಈಗೇನ್ ಮಾಡೋದು ಸರ್? ಗೊತ್ತಾಗುತ್ತೆ ಅಂತೀರಾ? ಹೊಸ ಪ್ಯಾಡ್ ಅಲ್ವಾ ಸರ್ ಇಂಕ್ ಜಾಸ್ತಿ ಹಾಕಿದ್ದಾರೆ. ಅದಕ್ಕೆ ಹೀಗಾಗಿದೆ” ಅಂತ ತಾಲೂಕು ಆಫೀಸ್ ನವರನ್ನೇ ದೂರಿದರು. ಸರಿ ಆ ಕೆಲಸ ಬಿಡಿ ಹೊರಗಡೆ ಹೋಗಿ 100 ಮೀಟರ್ ಆಚೆಗಿರೋ ಗಡಿ ಗುರುತಿಸಿ, ರೆಡ್ ಫ್ಲಾಗ್ ಹಾಕಿ ಅಲ್ಲಿ ಅಭ್ಯರ್ಥಿಗಳ ಪಟ್ಟಿ ಅಂಟಿಸಿ ಎಂದರೆ ನಾಳೆ ಬೆಳಗ್ಗೆ ಮಾಡೋಣ ಸರ್ ಈಗ ಹಾಕಿದ್ರೆ ಯಾರಾದ್ರೂ ಕಿತ್ಕೊಂಡು ಹೋಗ್ತಾರೆ. ಎಲ್ಲದಕ್ಕೂ ರೆಡಿಮೇಡ್ ಉತ್ತರ . ಹೊಸಬನಾದ ನನಗೆ ಟೆನ್ಶನ್ ಆದರೆ ಈಗಾಗಲೇ ಹತ್ತಾರು ಚುನಾವಣೆಗಳನ್ನು ಮಾಡಿರುವವರಿಗೆ ಇವೆಲ್ಲವೂ ಮಾಮೂಲು .

ಅಷ್ಟರಲ್ಲಿ ಇಬ್ಬರು ಬಂದರು ಸರ್ ಏನಾದ್ರೂ ತಗೋತೀರಾ ? ನಾನು ಉತ್ತರಿಸುವಷ್ಟರಲ್ಲಿ ಯಾವುದೋ ಎಲೆಕ್ಷನ್ ಬ್ರಾಂಡ್ ಆದರೆ ಬೇಡ ,ಸ್ಟ್ಯಾಂಡರ್ಡ್ ಇದ್ದರೆ ತಗೋಂಡು ಬಾ ಉತ್ತರ ಮೂಲೆಯಿಂದ ಬಂತು. ನಾನು ರೀ, ಚುನಾವಣೆ ಮುಗಿಸುದ್ರೆ ಸಾಕಾಗಿದೆ ,ಊಟ ಕೊಡಿ ಸಾಕು, ಇನ್ನೇನು ಬೇಡ” ಸಿಡುಕಿದೆ .ಆಗ ಆತ “ಊಟಕ್ಕೆ ಚಿಕನ್ ಇದೆ. ಎಲ್ಲರಿಗೂ ಆಗುತ್ತಾ ಅಲ್ವಾ ಸರ್”.ನಾನು ಎಲ್ಲರ ಮುಖ ನೋಡಿದೆ. ನಿವೃತ್ತಿಯ ಅಂಚಿಗೆ ಬಂದಿದ್ದ ರಂಗಪ್ಪ ಹುಳಿ ಮುಖ ಮಾಡಿ” ಸರ್ ಇವತ್ತು ಗುರುವಾರ ನಾನು ನಾನ್ ವೆಜ್ ತಿನ್ನಲ್ಲ ಸರ್” .”ಹೊರಗಡೆ ಬಂದಾಗ ಅದಕ್ಕೆಲ್ಲ ಎಕ್ಸೆಪ್ಶನ್ ಇದೆ ಬಿಡಿ ” ಮೂಲೆಯಿಂದ ತೋರಿ ಬಂದ ಪ್ರಶ್ನೆಗೆ.”ಇಲ್ಲ ಸಾರ್, ನಮ್ಮನೆಯವರಂತೂ ಒಂದು ಒಪ್ಪತ್ತು ಉಪವಾಸ ಎಂದರು .ವೆಜ್ಜ್ ಸಾಂಬರ್ ಯಾರು ಮಾಡಿಲ್ವೇನಪ್ಪ ನನ್ನ ಪ್ರಶ್ನೆಗೆ” ಇಲ್ಲ ಸಾರ್ ಊರಿಗೆ ಊರೇ ಇವತ್ತು ನಾನ್ ವೆಜ್ “ಆತನ ಮಾತನ್ನು ಸಾಕ್ಷಿಕರಿಸುವಂತೆ ಊರಿನ ಎಲ್ಲ ಮನೆಗಳಲ್ಲಿ ಆಗಲೇ ಹಾಕಿದ್ದ ಕೋಳಿ ಮಸಾಲೆ ಘಮಲು ಮೂಗಿಗೆ ಅಡರಿತು. ಈಗೇನು ಮಾಡೋದು ಪ್ರಶ್ನಿಸಿದೆ. .”ನೀವು ಉಣ್ಣಿ ಸರ್ ,ನನಗೇನು ಬೇಜಾರಿಲ್ಲ, ಏನು ಸಿಗ್ಲಿಲ್ಲ ಅಂದ್ರೆ ಒಂದ್ ಸ್ವಲ್ಪ ಮಜ್ಜಿಗೆ ತಂದು ಬಿಡಪ್ಪ ಸಾಕು”. ಎಲ್ಲರೂ ಭರ್ಜರಿ ಊಟ ಮಾಡಿ ಅವರೊಬ್ಬರು ಮಜ್ಜಿಗೆ ಊಟ ಮಾಡಿದರೆ ಹೇಗೆ ?”ಎಲ್ಲಾದರೂ ಸಿಗಬಹುದು , ಅಕ್ಕ ಪಕ್ಕದ ಮನೆಯಲ್ಲಿ ವಿಚಾರಿಸು” ಎಂದು ಕಳಿಸಿದೆ. ಪೋಲಿಸಿನವರಲ್ಲಿ ಒಬ್ಬರು ಐದಾರು ಚಾಪೆ ಬೇಕಪ್ಪ ಮರಿದಲೆ ತಾ ಎಂದರೆ ಇನ್ನೊಬ್ಬರು ನನಗೆ ದಿಂಬಿಲ್ಲದೆ ನಿದ್ದೆ ಬರಲ್ಲ ಎಂದಾಗ ನೋಡ್ತೀನಿ ಸಾರ್, ಅತ್ತ ಹೋಗುತ್ತಿದ್ದಂತೆ ನಿಧಾನವಾಗಿ ಬಂದ ಮೈಕ್ರೋ ಅಬ್ಸರ್ವರ್” ಕಳೆದ ಸಾರಿ 90 ಪರ್ಸೆಂಟ್ ಆಗಿತ್ತಂತೆ, ಒಂದು 80% ಸೈನ್ ಹಾಕಿರಿ ಸರ್” ಎಂದು ಸಲಹೆ ನೀಡಿದರು. ನಾನು ಸೀಲು ಸಹಿ ಹಾಕುತ್ತಿರುವಂತೆ ರಾತ್ರಿ 9:30 ದಾಟಿತು.

. ಸರ್ ನನಗೆ ಗ್ಯಾಸ್ಟಿಕ್, ಊಟ ಮಾಡ್ಲಿಲ್ಲ ಅಂದ್ರೆ ರಾತ್ರಿ ನಿದ್ದೆ ಬರಲ್ಲ ಸರ್ ಎಂದರು ರಂಗಪ್ಪನವರು, ಸರಿ ಸರ್, ನೀವು ಡ್ಯೂಟಿ ಕ್ಯಾನ್ಸಲ್ ಮಾಡಿಸಿಕೊಳ್ಳದಲ್ವಾ ? .”ಅಯ್ಯೋ ಮೂರ್ ದಿವಸ ತಿರುಗಾಡಿದೆ ಸರ್ ಮಾಡ್ತೀನಿ ಮಾಡ್ತೀನಿ ಅಂತ ಮಾಡ್ಲಿಲ್ಲ “. ಕೆಲ ಸಮಯ ಕಳೆಯಿತು. ಊಟ ಮಾಡೋಣ ಬನ್ನಿ ಸಾರ್ . ಅಷ್ಟರಲ್ಲಿ ಊಟಕ್ಕೆ ಕರೆ ಬಂತು. ಊಟಕ್ಕೆ ಕುಳಿತ ಎಲ್ಲರ ತಟ್ಟೆಗೆ ಮುದ್ದೆ ಬಿತ್ತು. ಸಾಹೇಬ್ರಿಗೆ ನೋಡ್ ಹಾಕಪ್ಪ. ಮೂಲೆಯಿಂದ ಯಾರು ರೆಕಮೆಂಡ್ ಮಾಡಿದರು. ಆತ ಎರಡು ಬಾರಿ ಸಟ್ಟುಗವನ್ನು ಒಳಗಡೆ ಆಡಿಸಿದರೆ ತುಂಡುಗಳೆ ಬರುತ್ತಿಲ್ಲ. ಸಾರ್ ಪೀಸ್ ಎಲ್ಲ ಮುಗ್ದ್ ಹೋಗ್ಬಿಟ್ಟಿದೆ ,ಉರೊಳಿಕೆ ಕಳಿಸಿ ತರ್ಸಣೊವೆ . ಎಂದ .ಅವನ ಜೊತೆ ಬಂದಿದ್ದವ “ಎಲ್ಲಾ ಊಟ ಮಾಡು ಮಲಗವ್ರೆ “ತಕ್ಷಣ ಉತ್ತರಿಸಿದ .”ಏನಿದೆ ಅದೇ ಬಡಸಪ್ಪ, ಅದೇ ಸಾಕು . ಮತ್ತೇನು ಬೇಡ” ಉತ್ತರಿಸಿದೆ.

ಮೈಕ್ರೋ ಅಬ್ಸರ್ವರ್ ಬ್ಯಾಗಿನಿಂದ ಬೆಡ್ ,ಪಿಲ್ಲೋ ಕವರ್ ತೆಗೆದು ಗಾಳಿ ಊದಲು ಆರಂಭಿಸಿದರು. “ನಾನಂತೂ ಪ್ರತಿದಿನ ಏಳರಿಂದ ಎಂಟು ಗಂಟೆ ನಿದ್ದೆ ಮಾಡ್ಲೇಬೇಕು ಸರ್ ಇಲ್ಲ ಅಂದ್ರೆ ತಲೆನೇ ಓಡಲ್ಲ” ಎಂದರು .ಎಲ್ಲರೂ ಉದ್ದಕ್ಕೆ ಮೂರು ಚಾಪೆ ಹಾಸಿ ಮಲಗಿದರೆ ಇಬ್ಬರು ಮೂರು ಬೆಂಚುಗಳನ್ನು ಸೇರಿಸಿ ಮತದಾನದ ರಟ್ಟನ್ನೇ ಅಡಿಗೆ ಹಾಕಿ ತಮ್ಮ ಬ್ಯಾಗುಗಳನ್ನೇ ದಿಂಬನ್ನಾಗಿ ಮಾಡಿಕೊಂಡು ಸೃಜನಶೀಲತೆಯನ್ನು ಮೆರೆದು ನಿದ್ದೆಗೆ ಜಾರಿದರು.

ನನಗೂ ನಿದ್ದೆ ಬರದು . ಸಂಜೆ ಬಂದಿದ್ದವ ಬೇರೆ ಸೆನ್ಸಿಟಿವ್ ಎಂದು ತಲೆಗೆ ಹುಳ ಬಿಟ್ಟು ಹೋಗಿದ್ದ. ಅತ್ತ ಇತ್ತ ಹೊರಳಾಡುತ್ತಾ ಸಮಯ ನೋಡುತ್ತಿದ್ದರೆ ಅದು ಹೋಗುತ್ತಲೇ ಇಲ್ಲ. ಹಾಗಾಗಿ ಊರೊಳಗೆ ಜೀಪುಗಳು ಬರುವ ಸದ್ದು. ಅದು ಬಂದೊಡನೆ ಒಮ್ಮೆಲೆ ಕೇಳಿ ಬರುತ್ತಿದ್ದ ಊರ ಜನರ ಓ ಎನ್ನುವುದರ ಜೊತೆಗೆ ನಾಯಿ ಬೊಗಳುವ ಸದ್ದು .ಜಂಪು ಹತ್ತಿತ್ತು. ಅಷ್ಟರಲ್ಲಿ “ಸಾರ್ “, ರಂಗಪ್ಪನವರ ದನಿ “ಏಳಿ ಸರ್ ಕೆರೆ ಕಡೆ ಹೋಗೋಣ” ಉಳಿದವರೆಲ್ಲ ಸಣ್ಣಗೆ ಗೊರಕೆ ಹೊಡೆಯುತ್ತಾ ನಿದ್ದೆಗೆ ಜಾರಿದ್ದರು. ಹೊರಗೆ ಬಂದರೆ ಇನ್ನೂ ಹೊರಗೆ ಕತ್ತಲು, . ಹೇಗೆ ಹೋಗೋದು ಸರ್ ಬ್ಯಾಟರಿನೂ ಇಲ್ಲ .

ಮೊಬೈಲ್ ಟಾರ್ಚನ್ನು ಆನ್ ಮಾಡಿ ಎರಡು ಮೇಣದಬತ್ತಿ ಹಿಡಿದು ಹೊರಟೆವು. ಕೆರೆ ಬಳಿಗೆ ಬಂದಾಗ ಕ್ಷೀಣವಾದ ಬೆಳಕು. ಎಲ್ಲಿ ಸರ್ ಕೆರೆ ಅಂತೀರಾ ನೀರೆ ಕಾಣಿಸ್ತಾ ಇಲ್ಲ ಮಧ್ಯದಲ್ಲೆಲ್ಲೋ ನೀರು ಕಾಣಿಸ್ತಾ ಇದೆ ಬನ್ನಿ ಎಂದು ಕೆರೆ ಇಳಿದು ನೀರನ್ನು ಅರಸುತ್ತ ಮುಂದೆ ಸಾಗಿದರೆ ಕಾಲು ಪುಸಕ್ ಎಂದು ಕೆಳಗಿಳಿಯಿತು. ಕಾಲು ಮೇಲೆ ಎಳೆಯಲು ಪ್ರಯತ್ನಿಸಿದೆ. ಚಪ್ಪಲಿಯ ಉಂಗುರ ಮತ್ತು ಪಟ್ಟಿ ಕಿತ್ತು ಕಾಲು ಮೇಲೆ ಬಂತು. ಅಯ್ಯೋ ಕರ್ಮವೇ ಎಂದು ಚಪ್ಪಲಿಯನ್ನ ಕೈಯಲ್ಲಿ ಹಿಡಿದು” ಹೀಗೆನಪ್ಪ ಮಾಡೋದು ಬರಿ ಕಾಲಲ್ಲೇ ಪ್ರಿಸೈಡಿಂಗ್ ಆಫೀಸರ್ ನ ಕೆಲಸ ನಿರ್ವಹಿಸಬೇಕಲ್ಲ” ಎಂದು ಯೋಚಿಸುತ್ತಾ ಚಿಂತಿತನಾದೆ. ಚುನಾವಣೆಗಿಂತ ಈಗ ಈ ವಿಷಯ ತಲೆ ಕೊರೆಯಲಾರಂಭಿಸಿತು. ನನ್ನ ಸ್ಥಿತಿ ನೋಡಿದ ಆಗ ತಾನೇ ಎದ್ದಿದ್ದ ಒಬ್ಬರು “ಸರ್ ಬೆಳಕರಿಯವರ್ಗು ಕಾಯ್ ಬೇಕು ಈ ಕತ್ತಲೆಯಲ್ಲಿ ಯಾಕೆ ಹೋದ್ರಿ ಸರ್ “ಎಂದರು . ಎಪಿಆರ್ ಓ ಮೇಡಂ ಆಗ್ಲೇ ಬಂದಿದ್ದರು. ಅಷ್ಟರಲ್ಲಿ ಮಲಗಿದ್ದ ಸ್ನೇಹಿತರು ಒಬ್ಬೊಬ್ಬರಾಗಿ ಎದ್ದು ಕುಳಿತರು. ಆ ಕ್ಷಣಕ್ಕೆ ನನಗೆ ಈ ಚಪ್ಪಲಿಯದ್ದೆ ಚಿಂತೆ . “ಯಾಕೆ ಅಷ್ಟು ವರಿ ಮಾಡ್ತೀರಾ, ಈ ಮೊಳೆ ಒಡೆದು ಹಾಕ್ಕೊಳ್ಳಿ ಸರ್ “ಎಂದು ಮತದಾನದ ಗೌಪ್ಯತೆಗಾಗಿ ತಂದಿದ್ದ ರಟ್ಟನ್ನು ಟೇಬಲ್ ಗೆ ಬಂಧಿಸುವ ಚುಚ್ಚುವ ಮೊಳೆಯನ್ನು ತಂದು ಕೊಟ್ಟರು ಶಿಕ್ಷಕ ಮಿತ್ರರು . ‘ಅದರಲ್ಲಿ ಮುಂದೆ ಎರಡು ಹಿಂದೆ ಎರಡು ಮೊಳೆಗಳನ್ನು ಕಲ್ಲಿನಿಂದ ಕುಟ್ಟಿ ಹಾಕ್ಕೊಳ್ಳಿ ಸಾರ್’. ಎಂದರು. ಮೊಳೆ ಹೊಡೆದು ಚಪ್ಪಲಿಯನ್ನು ಅಣಿಗೊಳಿಸಿದೆ.ಆ ಕ್ಷಣಕ್ಕೆ ನನ್ನ ತಲೆಯಲ್ಲಿದ್ದ ದುಗುಡವೆಲ್ಲವೂ ಕರಗಿ ಆನಂದ ಒಡಮೂಡಿತು. “ಥ್ಯಾಂಕ್ಯು ವೆರಿ ಮಚ್” ಎಂದೆ ಮಾಸ್ತರರಿಗೆ ಕೃತಜ್ಞತೆಯಿಂದ . ಆ ಕ್ಷಣ ಒಮ್ಮೆಲೇ ಉತ್ಸಾಹ ಮೂಡಿದಂತಾಗಿ” ಬಾರಪ್ಪ ಚುನಾವಣೆ ಏಜೆಂಟರನ್ನು ಕರಿ “ಎಂದು ಮತಪೆಟ್ಟಿಗೆ ತಯಾರಿಸಲು ಸಿದ್ದನಾದೆ.

0
    0
    Your Cart
    Your cart is emptyReturn to Shop