ಒಮ್ಮೊಮ್ಮೆ ನೀನು ಹಿಮಪಾತದಂತೆ
ಗೋಚರಿಸುತ್ತಿ,
ಒಮ್ಮೊಮ್ಮೆ ಜ್ವಾಲಾಮುಖಿಯಂತೆ
ಏಕೆಂದು ಅರಿಯುವ ಹಠ ನನಗಿಲ್ಲ
ಹಿಮ ಹಾಗೂ ಬೆಂಕಿ ಎರಡನ್ನೂ
ನನ್ನ ಮೇಲೆ ಸುರಿದುಕೊಂಡಿರುವೆ
ಅವು ಎಲ್ಲವನ್ನೂ ಸಹಿಸುವ
ಎಲ್ಲವನ್ನೂ ಪ್ರೀತಿಸುವ
ದಾರಿಯನ್ನು ಕಾಣಿಸಿವೆ
*ಕವಿ ವಿಜಯಲಕ್ಷ್ಮೀ ಸತ್ಯಮೂರ್ತಿ*
ಮನಸ್ಸು ಕುಗ್ಗಿ ಶಿಥಿಲಗೊಂಡಾಗ
ಪ್ರೀತಿಯ ಜ್ವಾಲಾಮುಖಿ ನೀನಾಗಿ
ಸ್ಫೋಟಿಸುತ್ತೀ ನನ್ನೊಳಗೆ
ಸುಡು ನೋವಿಗೆ ಹಿಮಮಣಿಯಾಗಿ
ಉದುರುತ್ತಾ ಹೋಗುತ್ತೀ
ಮೇಲಿಂದ ಮೇಲೆ ಜಾರುತ್ತಾ ನನ್ನೊಳಗೆ
ವಿಸ್ಮಯ ಎನಿಸಿಬಿಡುವುದು ನನಗೆ
ಕೆಂಡದುಂಡೆಗಳ ಜೊತೆಗೆ
ಹಿಮದ ಮಣಿಗಳನ್ನೂ ಜೊತೆಯಾಗಿ
ಹುದುಗಿಸಿಕೊಂಡಿರುವುದರ ಗುಟ್ಟನ್ನು
ರಟ್ಟು ಮಾಡುವುದಾದರೂ ಹೇಗೆ?
ಈ ಅಸಲೀಯತ್ತು
ಯಾರಿಗೆ ತಿಳಿಯಲು ಸಾಧ್ಯ
ಆ ರಂಗಾದ ಜಗತ್ತು ನೀನೇ ಎಂಬುದು