ಕಾಡುವ ಗುರಿಯ
ಸೇರಲು ಬಯಸಿದೆ,
ಕತ್ತಲ ರಾತ್ರಿಯಲಿ.
ಎತ್ತ ನೋಡಿದರು ನೀರು,
ದಾರಿ ತೋಚದು.
ಎಷ್ಟು ಹೊತ್ತು
ಕಾದು ಕೂರಲಿ,
ದಾರಿ ತೋರುವವರು
ಬರುವವರೆಂದು.
ನಾನೆ ಹಚ್ಚಿದೊಂದು ಅಣತೆ
ತೇಲಿ ಬಿಟ್ಟೆ,
ಹರಿಯುವ ನದಿಯಲಿ,
ದಾರಿ ತೋರಲು.
ದೋಣಿ ಏರಿ ಕುಳಿತೆ,
ಒಬ್ಬಂಟಿ ಪಯಣಿಗ,
ನಾ ಸಾಗಿದ್ದೆ ದಾರಿ.
ಈ ಒಬ್ಬಂಟಿ ಪಯಣಿಗನಿಗೆ,
ಜೋತೆಯಾಯಿತು
ನೀಲಿ ಆಕಾಶ.
ಇಣಕಿ ನೋಡುತ್ತಿದ್ದವು,
ಮೋಡದ ಮರೆಯಲಿ
ಅವಿತಿದ್ದ ನಕ್ಷತ್ರಗಳು.
ಅಣತೆಯ ಬೆಳಕಿಗೆ
ಆಕರ್ಷಣೆಗೊಂಡು,
ಗುಯ್ ಗುಟ್ಟುತ್ತಿದ್ದವು ಕೀಟಗಳು.
ದೋಣಿ ಸಾಗಿತು,
ಕಾಡುವ ಗುರಿ ಏನೆಂಬುದ
ಕಲ್ಪನೆ ಇಲ್ಲದೆ.
ಸ್ಪಷ್ಟತೆಯಿಲ್ಲದ
ಕತ್ತಲ ರಾತ್ರಿಯಲಿ
ಅಲೆದು, ಅಲೆದು,
ಸಾಕಯ್ತು ಎನ್ನುವಷ್ಟರಲ್ಲಿ.
ಹರಿಯುವ ನದಿಯಲಿ
ತೇಲಿ ಬಿಟ್ಟ ಹಣತೆ,
ಯಾವುದೆ ಗುರಿ ತಲುಪಿಸದೆ
ಹಾರಿ ಹೋಯ್ತು ನಡುದಾರಿಯಲಿ.
ಎತ್ತ ನೋಡಿದರು ಕತ್ತಲು,
ಪಯಣ ಮುಂದುವರಿಸಲು
ಸಹನೆ ತೋರದ ಮನ.
ಸಂಯಮದಿ ಬೀಸುತ್ತಿರುವ
ತಂಪಾದ ಗಾಳಿ,
ಜಾರಿಸಿತು ಘಾಡ ನಿದ್ರೆಗೆ.
ಎಲ್ಲಿಂದಲೂ ಆವರಿಸಿತು
ಕಣ್ಣು ಕುಕ್ಕುವ ಬೆಳಕು,
ಕಣ್ತೆರೆದು ನೋಡಿದರೆ
ನಾ ಮಲಗಿದ್ದೆ,
ನನ್ನ ಮನೆಯಲ್ಲಿ.
ಕಾಡುವ ಗುರಿ,
ಗುರಿಯಾಗೆ ಉಳಿಯಿತು.