ಬಾ ಒಳಗೆ,
…………………….
ಈ ಏಕಾಂತ, ಕಾಡುವ ಒಂಟಿತನ,
ತೀರದ ಬೇಸರ
ಸಾಕಾಗಿತ್ತು
ಈ ಮೌನ ಅಸಹನೀಯವಾಗಿತ್ತು
ನೀ ಬಂದದ್ದು ಒಳ್ಳೆಯದಾಯಿತು
ಅದು, ಆ ಆರಾಮ ಕುರ್ಚಿಯಲ್ಲಿ
ಕೂರಬೇಡ
ಅಲ್ಲಿ ನನ್ನ ನೆನಪುಗಳು ವಿರಮಿಸುತ್ತಿವೆ
ನಗದಿರು, ಸುಳ್ಳಲ್ಲ!
ಅಲ್ಲಿ ಕೂತಾಗಲೆಲ್ಲಾ
ಅವು ನನ್ನನ್ನು ರಮಿಸುತ್ತವೆ
ಜೀವಕೆ ಹಾಯೆನಿಸುತ್ತದೆ
ಗತದ ಕ್ಷಣಗಳು
ಮರುಜೀವ ಪಡೆದು
ಮುಂದೆ ನಿಂತಂತೆ ಭಾಸವಾಗುತ್ತದೆ
ನನ್ನ ಮಾತುಗಳಿಂದ ನಿನಗೀಗ
ನಗೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು
ಗೊತ್ತು ನನಗೀಗ
ನೀ ಹುಚ್ಚು ಎಂದುಕೊಂಡರೂ ಸರಿಯೇ
ಆದರೂ ನಗದಿರು
ಕನಿಷ್ಠಪಕ್ಷ ನನ್ನ ಮುಂದಾದರೂ
ಭಯ ನನಗೆ
ಎಲ್ಲಿ ನಿನ್ನ ನಗು ನನ್ನನ್ನವರಿಸಿ
ನಾ ನಗಲು ಪ್ರೆರೇಸುವುದೋ ಎಂದು
ನೋವ ಮರೆಸಿ
ಹೌದು, ಭಯ ನನಗೆ
ಎಲ್ಲಿ ನನ್ನ ಮನಸ್ಸನ್ನಾಳುತ್ತಿರುವ
ಆ ಆಗಂತುಕ ನೋವುಗಳು
ಕಂಬಳಿ ಹುಳು ಚಿಟ್ಟೆಯಾಗಿ ಹಾರಿಹೋದಂತೆ
ಕಂಬನಿಗಳಾಗಿ ರೂಪಾಂತರಿಸಿ
ಕರಗಿ ಇಲ್ಲವಾಗುವ
ಇಲ್ಲವೇ ಬಿಟ್ಟಹೋಗುವ
ಭಯ ನನಗೆ
ನೋವುಗಳು ಇದ್ದಷ್ಟು ಕಾಲ
ನಾನು ಬದುಕಿರುವೆ
ಅವು ಇಲ್ಲವಾದರೆ
ನಾನು ಸಾಯುವೆ
ಹಾಗಾಗಿ ಇಲ್ಲಿ, ಈ ಕೋಣೆಯಲ್ಲಿ
“ಯಾರೂ ನಗಬಾರದು”
ಎಂಬ ನಿಯಮ ಹೇರಿರುವೆ
ಕ್ಷಮಿಸು ನನ್ನನು
ನೀ ಬಂದದ್ದು ಒಳ್ಳೆಯದಾಯಿತು
ಘನಿಭವಿಸಿದ ಈ ಸಮಯ ಕರಗಲು
ಜೊತೆಯೊಂದು ಬೇಕಿತ್ತು
ನಿಜಕ್ಕೂ
ನೀ ಬಂದದ್ದು ಒಳ್ಳೆಯದಾಯಿತು