ಅಕ್ಷರಗಳು ಎದೆಯಿಂದ
ಅಳಿಸಿಹೋಗಿ ಬಹಳ ದಿನಗಳೇ
ಆದವು..
ಈ ಮೊದಲು ಇರುಳೆಂದರೇ
ಕಣ್ತುಂಬ ಅಕ್ಷರಗಳೇ ಅವನ
ನಗು, ಪಿಸುಮಾತು, ಬೈಗುಳ
ತುಟಿಯ ಕೊಂಕು ಹೀಗೆ..
ಅಕ್ಷರಗಳ ಸಾಲು ಸಾಲು
ಎದೆಗಿಳಿದು ಜಾವಕ್ಕೊಂದರಂತೆ
ಕವಿತೆಗಳು ಕನಸಾಗಿ ಕಣ್ತುಂಬಿಕೊಳ್ಳುತ್ತಿತ್ತು
ಈಗಲೂ ಇರುಳಾಗುತ್ತದೆ
ಅವನೂ ಸಹ ನೆನಪಾಗುತ್ತಾನೆ
ಮೊದಲು ಮಾತು ಕಸಿದು ಕೊಂಡಿದ್ದು,
ನಂತರ ನಗು, ನಿದ್ದೆ,ಬಕಾಸುರನವನು
ಎದೆಯ ಅಕ್ಷರಗಳನ್ನು ಬಿಡದೆ ಬಾಚಿಕೊಂಡು
ಸದ್ದಾಗದಂತೇ ತೇಗುತ್ತಾನೆ
ಖಾಲಿತನದ ಖುಷಿಯಲ್ಲೇ
ಕವಿತೆ ಕಳಿದದ್ದು ಆಹ್ಲಾದವೆನಿಸುತ್ತದೆ
ಈಗ ಅವನ ಪಲ್ಲಂಗದಲ್ಲಿ
ದಿನಕ್ಕೆ ನೂರಾರು ಕವಿತೆಗಳು
ಬಣ್ಣ ಬಳೆದುಕೊಂಡು ಅರಳುತ್ತವೆ
ಅದನ್ನು ಇನ್ನೊಬ್ಬಳ
ಎದೆಗಿಳಿಸುತ್ತಿದ್ದಾನೆ..
ಬಹಶಃ ಅವನೂ ಮುಂದೊಮ್ಮೆ
ನನ್ನಂತೆ ಖಾಲಿ ಎದೆಯಾಗುತ್ತಾನೆ
ರಾತ್ರಿಗಳ ಕಣ್ಣಲ್ಲಿ ಕನಸು ತಮಸ್ಸಿನ
ಹಾದಿಗಿಳಿದಾಗ ….
ಮತ್ತು ಮತ್ತೊಂದು
ಎದೆಗಳಿಗಿಳಿದು ದೋಚುತ್ತಾ
ಹೊಸದೊಂದು ಸಂಕಲನದ
ಸಿದ್ಧತೆ ನಡೆಸುತ್ತಾನೆ..!!