ಇತ್ತೀಚಿಗೆ ನಾನು ಓದುತ್ತಿರುವ ಅನೇಕ ಲೇಖನ,ಪುಸ್ತಕಗಳಲ್ಲಿ ಲೇಖಕಿ ಶ್ರೀಮತಿ ಸುಧಾಮೂರ್ತಿ ಕೃತಿಗಳೇ ಬಹುಪಾಲು.ಅವರ ಬಹುಪಾಲು ಕೃತಿಗಳು ಸಾಮಾಜಿಕ ಕಳಕಳಿಯ ಜೊತೆ,ಮಹಿಳೆಯರ ಬವಣೆಗಳ ಮೇಲೆ ಬೆಳಕು ಚೆಲ್ಲುವಂತಹವು.ಅವರ ಅನುಭವ ವೇಧ್ಯ,ಬರವಣಿಗೆಯ ಓಘ ಸುಲಭವಾಗಿ ಎಲ್ಲರೂ ಅರ್ಥೈಸಿಕೊಳ್ಳುವಂತಹುದೇ ಆಗಿರುತ್ತದೆ.
ಸುಧಾ ಅಮ್ಮನ “ಋಣ” ಕಾದಂಬರಿಯ ಬಗ್ಗೆ ಅವರೇ ಹೇಳಿರುವಂತೆ;- “ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಸಿಗದಂತಹ ಭಾಗವ್ವನಂಥಹ ಸಾವಿರಾರು ಭಾರತೀಯ ಸ್ತ್ರೀಯರಿಗೆ ಕಂಬನಿಯ ಅರ್ಪಣೆ” ಎಂದಿದ್ದಾರೆ.
ನಿಜ ಕೃಷ್ಣತೀರದ “ಶೂರ್ಪಾಲಿ” ಊರಿನ ಭಾಗಿರಥಿ ಅನಾಥೆಯಾಗಿ, ಸೋದರಮಾವನಾದ ಪೋಸ್ಟ್ ಮಾಸ್ಟರ್ ತಮ್ಮಣನ ಮನೆಯಲ್ಲಿ ಬೆಳೆದವಳು. ಬಾಗಿಯಾಗಿದ್ದ, ಭಾಗೀರಥಿ ಭಾಗವ್ವಳಾದಳು.ಸಂಸಾರದಲ್ಲೂ ಮತ್ತೊಬ್ಬರ ಮಾತಿಗೆ ಕಟ್ಟುಬಿದ್ದು ,ಮಿಥ್ಯವೇ ಸತ್ಯವಾಗಿ,ಎಲ್ಲಾ ನೋವು ನುಂಗಿ, ಮಗ ಶಂಕರ ಮಾಸ್ತರನ ಕೆಲಸದ ಊರಾದ ಶಿಗ್ಗಾವಿಯಲ್ಲಿ, ನೋವು ಅಡವುಗಚ್ಚಿ ಅನಾಥಳಾಗಿ ಬದುಕುತ್ತಿದ್ದವಳು ‘ಭಾಗವ್ವಾ’. ಇದು ಕೃತಿಯ ಮಧ್ಯ ಭಾಗದಲ್ಲಿ ಬರುವ ಕಾದಂಬರಿಯ ಎಳೆ.
ಕಾದಂಬರಿಯ ಎಳೆ ಆರಂಭವಾಗುವುದೇ, ಬೆಂಗಳೂರಿನ ನಿವಾಸಿ,ಬ್ಯಾಂಕ್ ಉದ್ಯೋಗಿ ವೆಂಕಟೇಶನಿಗೆ ,ಹುಬ್ಬಳಿಗೆ ಟ್ರಾನ್ಸಫರ್ ಆಗುವವುದರಿಂದ. ಬ್ಯಾಂಕ್ ಉದ್ಯೋಗಿ ವೆಂಕಟೇಶರ ಕುಟುಂಬವೆಂದರೆ ಶ್ರೀಮತಿ ಶಾಂತಿ&ಶ್ರೀವೆಂಕಟೇಶ ಮತ್ತವರ ಮಕ್ಕಳಾದ ಸಾಫ್ಟ್‌ವೇರ್ ನ ರವಿ ಮತ್ತು ,ಬಡವರ ಸೇವೆಗಾಗಿಯೇ ಎಂ.ಬಿ.ಬಿ.ಎಸ್.ಓದುತ್ತಿರುವ ಮಗಳು ಗೌರಿ.
ಹಾಗೆ ನೋಡಿದರೆ ವೆಂಕಟೇಶರಿಗೆ ಕೆಲಸದ ಅಗತ್ಯವೇ ಇಲ್ಲ.ಮನೆಯ ವ್ಯವಹಾರವೆಲ್ಲಾ ಪತ್ನಿ ಶಾಂತಿಯದೇ. ಶಾಂತಿ ತನ್ನ ತಂದೆ ಸೂರ್ಯನಾರಾಯಣರಾಯರಂತೆ ಪಕ್ಕಾ ವ್ಯವಹಾರಸ್ಥೆ. ಲೆಕ್ಕಚಾರವೇ ಅವಳ ಉಸಿರು. ಶಾಂತಿಯಂತೆ ಅವರ ಮಗ ರವಿ,ವ್ಯವಹಾರ ಚತುರ.ಆದರೆ ಮಗಳು ಗೌರಿ,ಮೃದು ಧೋರಣೆ. ತಂದೆ-ಮಗಳು ಇಬ್ಬರೂ ಒಂದೇ.ಭಾವನೆಗಳಿಗೆ ಬೆಲೆಕೊಡುವರು. ಒಲ್ಲದ ಮನಸ್ಸಿನಿಂದ ಹುಬ್ಬಳ್ಳಿಗೆ ಹೋದ ,ಬ್ಯಾಂಕ್ ಉದ್ಯೋಗಿ ವೆಂಕಟೇಶರಿಗೆ “ಹುಬ್ಬಳ್ಳಿಯು,ತನ್ನ ಜೀವನದ ಪ್ರಮುಖ ತಿರುವು ಇದಾಗುವುದೆಂದು, ತನ್ನ ತಂದೆಯಾದ ಜೆ.ಎಸ್.ಮಾಧವರಾಯರ ತಾಯಿ ಇಂದಿರಮ್ಮಳ ಅಸಹಾಯಕವಾದ ಅಮಾಯಕತೆ ,ಅಜ್ಜಿ ಚಂಪಕ್ಕಳ ಇನ್ನೊಂದು ನಿಲುವು ಗೊತ್ತೇ ಆಗುವುದಕ್ಕೆ ಅವಕಾಶವಾಗುವುದೆಂದು ಗೊತ್ತಿರಲಿಲ್ಲ. ಯಾವುದೇ ಒಂದು ಋಣದ ಎಳೆಯೇ ಅವರನ್ನು ಇಲ್ಲಿಗೆ ಮಾಡಿತು.
ಹುಬ್ಬಳಿಯ ವಾಸ್ತವ್ಯ , ಗೌರಿ ಸ್ನೇಹಿತೆದೆಯಾದ, ಅನಂತಪಾಟೀಲರ ಮನೆಯಲ್ಲಿ. ಒಮ್ಮೆ ಅವರ ಒತ್ತಾಯಕ್ಕೆ ಬೆಲೆಕೊಟ್ಟು, ಅವರ ಸಂಬಂಧಿಕರ ಮಗನ ಉಪನಯನಕ್ಕಾಗಿ ಶಿಗ್ಗಾವಿಗೆ ಕರೆದೊಯ್ಯಿತು ಅವರ ಋಣ. ಶಿಗ್ಗಾವಿ ಜನ ಅವರರನ್ನು ,” ಶಂಕರ ಮಾಸ್ತರ”ಎಂದೇ ಕರೆದಿದ್ದು, ಹಾಗೆಯೇ ಗುರುತಿಸಿದ್ದು, ಎಲ್ಲಾ ಪದರಪದರ ಘಟನೆಗಳು,ಮಾತುಗಳು,ಬ್ಯಾಂಕರ್ ವೆಂಕಟೇಶ ಅವರನ್ನು, ಅವರಿಗೆ ಗೊತ್ತಿಲ್ಲದ, ರಕ್ತ ಸಂಬಂಧ ಎನ್ನವ ಋಣದ ಹಿಂದೆ ಹೊಗುವಂತೆ ಮಾಡಿತು. ಶಿಗ್ಗಾವಿಯ ಉಪನಯನಕ್ಕೆ ಉಡುಗೊರೆ ಕೊಡಲು,ಬೆಳ್ಳಿಯ ಅಂಗಡಿಗೆ ಹೋದಾಗ,ಅಲ್ಲಿನ ಮಾಲಿಕರು ವೆಂಕಟೇಶರನ್ನು ನೋಡಿ ‘ಮಾಸ್ತರ’ ಎಂದಿದ್ದು, ಓಣಿಯ ಅನೇಕ ಜನರೂ ಗುರುತು ಹಿಡಿದು ಮಾತನಾಡಿಸಿದ್ದು, ಹುಬ್ಬಳಿಯಲ್ಲೂ, ಅನೇಕ ಅಂಗಡಿಯಲ್ಲೂ ಅನೇಕರು ಇವರನ್ನು ಶಂಕರಮಾಸ್ತವರಾಗಿಯೇ ಕರೆದಿದ್ದು, ಇವರ ಆಶ್ಚರ್ಯಕ್ಕೆ ಕಾರಣವಾಗಿ ಅದರ ಜಾಡು ಹಿಡಿದು ಹೊರಟಾಗ , ಅವರಿಗೆ ಸಿಕ್ಕವರೇ ‘ಭಾಗವ್ವ’.
ಅದನ್ನೇ ತಿಳಿದುಕೊಳ್ಳಲು, ವೆಂಕಟೇಶರಾಯರು ಭಾಗವ್ವನನ್ನು ಕಾಣಲು ಶಿಗ್ಗಾವಿಗೆ ಹೋದ ದಿನ, ಅನಿರೀಕ್ಷಿತವಾಗಿ ಶಂಕರಮಾಸ್ತರರ ತಂದೆಯ ವರ್ಷದ ಕಾರ್ಯ. ಅಲ್ಲಿನ ಮನೆಯಾದರೂ ಎಂಥದು? ಬಡತನವೇ ಮೈವೆತ್ತಿ ತಾಂಡವವಾಡುತ್ತಿತ್ತು. ಆದರೂ ಅಲ್ಲಿನ ಶ್ರದ್ದೆ,ಗೌರವಕ್ಕೆ ಬಡತನವಿರಲಿಲ್ಲ. ಅಲ್ಲಿ ಅವರ ಕಿವಿಗೆ ಬಿದ್ದ ,ಆ ಹೆಸರುಗಳ ಸ್ತೋತ್ರ ಪಠಣದಿಂದ ಇವರು ಚಕಿತಾರಾದರು. ಕಾರಣ ಅವರ ತಂದೆ ಹೆಸರು ಸೇತುಮಾಧವನಾಗಿದ್ದು ,ಇಲ್ಲಿ ಸೇತುಶರ್ಮ ಆಗಿತ್ತು.ಉಳಿದಂತೆ ಅಜ್ಜ,ಮುತ್ತಜ್ಜನ ಹೆಸರು ಎಲ್ಲಾ ಒಂದೇ!!!
ನಂತರ ವೆಂಕಟೇಶರಾಯರು ತಾನೂ,ಶಂಕರಮಾಸ್ತವರ ಪರಿಪೂರ್ಣ ಹೋಲಿಕೆ ಹೇಗೆ ಸಾದ್ಯ ಎಂದು ಕೇಳಿದಾಗ ಏನೂ ಹೇಳಿಯಾಳು.? ಭಾಗವ್ವನಿಗೆ ನಿಜಕ್ಕೂ ಗೊತ್ತಿರಲಿಲ್ಲ. ವೆಂಕಟೇಶರಾಯರೇ, ತನ್ನ ಪತಿ ಸೇತುಮಾಧವರ(ಮಾಧವರಾಯರು) ೨ನೇ ಪತ್ನಿಯ ಮಗನೆಂದು ಸಹ. ಅಸಲಿಗೆ ಭಾಗವ್ವನಿಗೆ,ತನ್ನ ಗಂಡನಿಗೆ ೨ನೇ ಮದುವೆ ಮಾಡಿಸಿದ್ದೇ ಗೊತ್ತಿರಲಿಲ್ಲ. ಎಲ್ಲಾ ರಹಸ್ಯ ಗೊತ್ತಿರುವ ವ್ಯಕ್ತಿ ವೆಂಕಟೇಶರು ಮಾತ್ರ.ಭಾಗವ್ವನ ಬದುಕಿನ ಒಂದೊಂದೇ ಎಳೆ ಬಿಡಿಸುತ್ತಾ ಇರುವಾಗ, ಅಲ್ಲಿ ತಿಳಿದಿದ್ದು,ಅಸಹಾಯಕಿ ಭಾಗವ್ವಳಿಗಾದ ಅನ್ಯಾಯ. ಸೇತುಮಾಧವರು ಸೇತುಶರ್ಮರಾಗಿ ಭಾಗವ್ವಳನ್ನು ಮದುವೆಯಾಗಿದ್ದವರು. ಆದರೆ ಶಿಗ್ಗಾವಿಯಲ್ಲಿ ಅವರು ಬದುಕಿದ್ದಾಗಿನಿಂದ ಶ್ರಾದ್ಧ ಅವರಿಗಾಗುತ್ತಿತ್ತು. ಕಾರಣ ಭಾಗವ್ವ ಗರ್ಭಿಣಿಯಾಗಿದ್ದಾಗ,ಪತಿ ರೈಲು ದುರಂತದಲ್ಲಿ,ಸಾವಿಗೀಡಾಗಿದ್ದ (ಸುಳ್ಳು)ಸುದ್ದಿ. ಅದು ಮರಾಠಿ ಪತ್ರಿಕೆಯಲ್ಲಿ ಬಂದಿದ್ದ ತುಂಡನ್ನು ಭಾಗವ್ವ ತೆಗೆದಿರಿಸಿದ್ದಳು.ತನ್ನ ನೋವಿನ ಕಥೆ ಹೇಳಿ, ಆ ಪತ್ರಿಕಾ ತುಂಡನ್ನು ತೋರಿಸಿ ಹೇಳಿದಳು “ನಮ್ಮ ದೇಶದಾಗ ಯಾವ ಹೆಂಗಸು ಎಂದೂ ಸುಳ್ಳಾ ಗಂಡ ಇಲ್ಲ ಅಂತಾ ಹೇಳೋದಿಲ್ಲ,ಗಂಡನಿಂದ ದೂರ ಇದ್ರೂ,ಗಂಡ ಛಲ್ಲಿದ್ರೂ ಚಿಂತಿಲ್ಲ,ಕುಂಕುಮ ಹಚ್ಚಿಕೊಂಡು ಮಂದಿಯೊಳಗ ಮುತೈದಿ ಅನಿಸ್ಕೊಳ್ಳಾಕ ಪ್ರಯತ್ನ ಮಾಡ್ತಳ.ಅಂಥದ್ರಾಗ ಪೇಪರ್ ನ್ಯಾಗ ಬಂದ ಸುದ್ದಿ ಸುಳ್ಳೇನು? ಅದನ್ನ ನಂಬದಂಗ ಇರದನ ಆಗ್ತದೇನೂ?”, ಎಂದು ಪತ್ರಿಕಾಸುದ್ದಿಯನ್ನು ನಂಬಿ,ಅದರಂತೆ ಬಾಳತೊಡಗಿದಳು.
ಗಂಡ ಸೇತುಶರ್ಮನು ತೀರ್ಥಯಾತ್ರಗೋ,ಪ್ರವಾಸಕ್ಕೋ ಹೋದಾಗ ಅತ್ತೆ ಚಂಪಕ್ಕಳಿಂದ ಮನೆಯಿಂದ ಹೊರದೂಡಲ್ಪಟ್ಟಳು. ಕಾರಣ ಅವಳ ದೊಡ್ಡದಾದ ಗರ್ಬಿಣಿ ಹೊಟ್ಟೆಯನ್ನು ನೋಡಿ, ಜನರಾಡುತ್ತಿದ್ದ ಕೆಟ್ಟ ಮಾತಿಗೆ ಅವಳು ಬಲಿಯಾದಳು.ಹಸುವಿನ ಸ್ವಭಾವದ ಸೊಸೆ ಮಾತು ನಂಬದ, ಅತ್ತೆ ಚಂಪಕ್ಕ ಜನರ ಕೆಟ್ಟ ಮಾತು ಕೇಳಿ,ಅವಳನ್ನು ವಿಚಾರಿಸದೇ ಗರ್ಭಿಣಿ ಸೊಸೆಯನ್ನು ಅನಾಥೆಯಾಗಿಸಿದಳು. ಸೋದರಮಾವನ ಮನೆಗೆ ಬಂದ ಭಾಗವ್ವ ಅಲ್ಲೂ ಅನಾಧರಕ್ಕೆ ಒಳಗಾದಳು. ಇಲ್ಲಿದ್ದಾಗಲೇ ಗೊತ್ತಾದ ಸುದ್ದಿಯೇ ಪತ್ರಿಕೆಯ ರೈಲು ದುರಂತದಲ್ಲಿ ಭಾಗವ್ವಳ ಗಂಡನ ದುರಂತದ ಸುದ್ದಿ. ನಂತರ ಸೋದರಮಾವನ ಮನೆಯಿಂದ ಹೊರಬಂದು, ಧಾರವಾಡ ಶಿಗ್ಗಾವಿಯಲ್ಲಿ ನೆಲೆನಿಂತು, ಮಗನನ್ನು ಶಂಕರಮಾಸ್ತರನ್ನಾಗಿಸಲು ಸಫಲಳಾದಳು.
ಆದರೆ ನಿಜ ವಿಷಯವೆಂದರೆ, ಭಾಗವ್ವನ ಸೇತುಶರ್ಮನು ರೈಲು ದುರಂತದಲ್ಲಿ ಬದುಕುಳಿದಿದ್ದು. ನಂತರ ದಿನಗಳಲ್ಲಿ ತಾಯಿಯ ಕಣ್ತಪ್ಪಿಸಿ ಮಾಧವರಾಯರು, ಪತ್ನಿ ಭಾಗವ್ವಳಿರುವ ಊರು ಶೂರ್ಪಾಲಿಗೆ ಕಾಳಜಿ, ಪ್ರೀತಿಯಿಂದ ಪತ್ರ ಬರೆದರು. ಜೊತೆಗೆ ದುಡ್ಡು ಕಳಿಸಿದ್ದರು. ಆದರೆ ಮನಿ ಆರ್ಡರ್ ವಾಪಾಸ್ ಬಂದಿತ್ತು. ಅವಳಿದ್ದರೆ ತಾನೇ ಅಲ್ಲಿ.ಹೆಂಡತಿಗಾಗಿ ಹುಡುಕಾಡಿದಾಗ, ಭಾಗವ್ವಾ ತನಗೆ ಹೋರಿಸಿದ ಅಪವಾದದ ದುಃಖ ತಾಳದೇ ನದಿಹಾರಿ ಆತ್ಮಹತ್ಯೆ ಮಾಡುಕೊಂಡಳೆಂಬ ಸುದ್ದಿ ತಿಳಿದುಬಂದಿತು.ಅದರೆ ಅವರು ಊರೇ ಬಿಟ್ಟು ಶಿಗ್ಗಾಂವಿಗೆ ಬಂದಿದ್ದರು. ನಂತರ ೨ ನೇ ಮದುವೆಗೆ ಒಪ್ಪಿಗೆ ಕೊಟ್ಟು, ಇಂದಿರಮ್ಮನನ್ನು ಮದುವೆಯಗಾ ವೆಂಕಟೇಶರಾಯರ ತಂದೆಯಾದನು.ಹಾಗಾಗಿಯೇ ಒಂದೇ ಹೋಲಿಕೆ, ಶಿಗ್ಗಾಂವಿಯ ಶಂಕರ ಮಾಸ್ತರರಿಗೂ, ಬೆಂಗಳೂರಿನ ವೆಂಕಟೇಶ ರಾಯರಿಗೆ. ನಂತರ ವೆಂಕಟೇಶರಾಯರು,ಭಾಗವ್ವನಲ್ಲಿ, ಅವರ ಮದುವೆಯ ನೆನಪಿನ ಯಾವುದಾದರೂ ವಸ್ತು ಇದೆಯೇ ? ಎಂದು ಕೇಳಿದಾಗ , ಮದುವೆಯ ಸಮಯದಲ್ಲಿ ,ತನ್ನ ತಂದೆ,ಅವರ ಹೆಸರಾದ ಭಗಿರಥರಾಯರ ಬೆರಳುಂಗುರವನ್ನೇ ಕೊಟ್ಟಿದ್ದಾಗಿ, ಅದರ ಮೇಲೆ, ‘ಭ’ ಎಂದು ಸಂಸ್ಕೃತದಲ್ಲಿ ಬರೆದುದುಬಿದೆ ಎಂದು ಹೇಳಿದಳು.
ಅದೇ ಇಲ್ಲಿ ಭಾಗವ್ವಳಿಗಾದುದು?? ಅವಳ ಅಸಹಾಯಕತೆಯನ್ನು ತಮ್ಮ ದಾಳವಾಗಿಸಿ, ಅನಾಥೆಯಾಗಿಸಿದ್ದು ಅನ್ಯಾಯ. ತಂದೆ-ತಾಯಿಲ್ಲದ ತಬ್ಬಲಿ ಎಂಬ ತಾತ್ಸರವೇ? ಅಥವಾ ಅತ್ತೆ ಚಂಪಕ್ಕನಿಗೆ,ತನ್ನ ಸೊಸೆ ಭಾಗವ್ವಾ ಮದುವೆಯಾಗಿ ಬಂದಾಗ, ಏನೂ ಹೊತ್ತು ತಂದಿರಲಿಲ್ಲವೆಂಬ ಅಸಮಧಾನದ ಕಿಡಿಯೇ? ಭಾಗವ್ವಳ ಸಾಧು ಸ್ವಭಾವದ ಅಸಹಾಯಕತೆಯೇ? ಅಂತೂ ಭಾಗವ್ವ ತನ್ನ ಹದಿನಾರನೇ ವಯಸ್ಸಿನಿಂದ, ಹಲ್ಲುಬಿದ್ದು ವಯಸ್ಸಾದರೂ,ಬಡತನದ ಬೇಗೆಗೆ,ತನ್ನ ನಿಸ್ಸಹಾಯಕತೆಗೆ ಕೊರಗದೇ, ಯಾರನ್ನೂ ದೂರದೇ,ಯಾರಿಗೂ ಕೈಚಾಚದೇ ,ಮಗನಿಗೆ ಬೆನ್ನೆಲುಬಾಗಿ ಬದುಕಿದಳು.
ಕಥೆ ಕೇಳಿ ವ್ಯಥಿತರಾದ ವೆಂಕಟೇಶರಾಯರೇ ನಂತರ ಮಗಳು ಗೌರಿಯೊಂದಿಗೆ ಹಣದ ಸಹಾಯವನ್ನು ಮಾಡುವರು. ಆದರೆ ಇದಕ್ಕೆ ಮನೆಯವರು ಯಾರೂ ಒಪ್ಪುವುದಿಲ್ಲ.ಆದರೆ ಶಂಕರ ಮಾಸ್ತರರ ಅಸಹಾಯಕ ಪರಿಸ್ಥಿತಿ ನೋಡಿದ್ದ ವೆಂಕಟೇಶರಾಯರಿಗೆ, ಖಂಡಿತಾ ಸಹಾಯ ಮಾಡಲೇಬೇಕಿತ್ತು. ತನ್ನ ಮಗಳು, ಗೌರಿಯೊಂದಿಗೆ ಸಮಾಲೋಚಿಸಿ, ಸಹಾಯ ಮಾಡಹೊರಟರು. ಇದು ತಂದೆಯ ಋಣ ಸಂಧಾಯವಾಗಲೆಂದೇ? ಖಂಡಿತಾ ಗೊತ್ತಿಲ್ಲ.
ಭಾಗವ್ವಳು ತನ್ನ ಮಗ ಶಂಕರಮಾಸ್ತರರ ತದ್ರೂಪಿ,ವೆಂಕಟೇಶರಾಯರಿಗೂ ಸಹ ತನ್ನ ಮಗನಿಗೂ ಈ ವಿಷ್ಯ ತಿಳಿಬಾರದೆಂದು ಹೀಗೆ ಹೇಳುತ್ತಾಳೆ, ” ಈ ಎದಿ ಒಳಗಿನ ಸುದ್ದೀನ ಶಿವನ ಸಾಕ್ಷಿ ಯಾರೂ ಕೇಳಿಯೂ ಇಲ್ಲ,ಇವತ್ತಿನ ವರ್ಗೂ ಯಾರ ಮುಂದ ಹೇಳಿಲ್ಲ.ನೀವು ಜುಲ್ಮಿ ಮಾಡಿ ಕೇಳ್ದಾಗ ಅಂತಃಕರಣದಿಂದ ಕೇಳೋ ಒಬ್ಬ ಮನುಷ್ಯನಿದ್ದಾನಲ್ಲ ಅಂತ ಹೇಳಿದೆ.ಯಾವ ಜನ್ಮದ ಋಣ ಇತ್ತೋ ಏನೋ.ನಿಮ್ಮ ಮುಂದ ಹೇಳಬೇಕನ್ನಿಸ್ತು.ಶಂಕರಾಗ ತಾನು ತಂದಿ ಸತ್ತ ಮ್ಯಾಲ, ಹುಟ್ಟಿದ್ದು ಮಾತ್ರ ನೆನಪಿತ್ತು.ಆದ್ರ ಅವರ ತಂದಿ ನನ್ನ ಯಾವ ಕಾರಣಕ್ಕ ಸಾಯೋಕ್ಕಿಂತ ಮುಂಚೆ ಬಿಟ್ರು ಅದನ್ನ ಹೇಳಿಲ್ಲ.ಅವನ್ಗ ತಂದಿ ಮ್ಯಾಲ ಭಕ್ತಿ ಇದ. ಶ್ರಾದ್ಧ ತಪ್ದ ಮಾಡ್ತಾನಾ.ನನ್ನ ಬಿಟ್ರೆ ಅದು ನನ್ನ ಮಗನಿಗೆ ತಿಳಿಬಾರ್ದು, ಅಷ್ಟು ನೆಡೆಸಿಕೊಡ್ರಿ” .ಅಂತ ಕೈ ಜೋಡಿಸಿದ ಗೌರವಾನ್ವಿತೆ ಭಾಗವ್ವ. ದೇವರೂ, ಮಾನವರು ಮಾಡಿದ ಅನ್ಯಾಯವನ್ನು ವಿನೀತಳಾಗಿ ಸ್ವೀಕರಿಸಿ, ಮಗನಿಗಾಗಿ ,ತನ್ನ ಜೀವನವನ್ನೇ ಗಂಧದಂತೆ ತೇಯ್ದು ಮಗ ಶಂಕರನನ್ನು ಸಲುಹಿದ ಭಾಗವ್ವ ,ಆಗಾಗ ನೆನಪಾಗುವ ಜೀವ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…