ಕವಿತೆಗಳು

ಉಮಾದೇವಿ ಬಾಗಲಕೋಟೆ ಅವರು ಬರೆದ ಎರಡು ಕವಿತೆಗಳು

1

ಕೊನೆಯಿರದ ಪ್ರಶ್ನೆ

ಒಂದೊಮ್ಮೆ ಆಗಸದಿ
ಸರಿರಾತ್ರಿ ಬಾನಿನಲಿ
ಅರಳುತಿಹ ಬಾಲ್ಯದಲಿ
ಎಣೆಸುತ್ತ ಕೇಳಿದೆ ಚುಕ್ಕೆಗಳೆಷ್ಟೊ?
ಕಣ್ಣರಳಿಸಿ ಹುಬ್ಬೇರಿಸಿ
ಮೈದಡವಿ ಕೈಹಿಡಿದು
ಹೇಳಿದೆ ನೀನು ಲಕ್ಷ ಕೋಟಿ.
ಸೂರ್ಯನಡಿ ಶಾಖ ,
ಚಂದಿರನ ತಂಪು,
ಬಾನ ಕಡಲಿನ ಆಳ
ಕಾಡು-ಬೆಟ್ಟಗಳ ಬಣ್ಣ ಸಾಗಿದ್ದವು ಪ್ರಶ್ನೆಗಳು
ಜೊತೆಗಿದ್ದವು ನಿನ್ನುತ್ತರಗಳು.
ಕಾಲ ಸಾಗಿತು ಬಾಲ್ಯ ಸರಿಯಿತು
ಇಂದೂ ಇವೆ ಪ್ರಶ್ನೆಗಳು
ಚುಕ್ಕಿಯಂದದಿ ಲಕ್ಷಕೋಟಿ
ಆದರೆ ನೀನೇ ಇಲ್ಲ
ಅದಕುತ್ತರಗಳೂ ಇಲ್ಲ..
ಬದುಕಿನಾಟದ
ಸಹಪಯಣದಲಿ ಸಾಗಿ
ಹುಡುಕುತಿದೆ ಮನವಿಂದೂ
ಸ್ಪಂದಿಸುವ ಮನಕಾಗಿ.
ಸತ್ಯವದು ಪಯಣ ಸಾಗಿದೆ
ಗುರಿ ಇರದ ಬಾಳ ದಾರಿಗೆ
ಹೆಗಲೇರಿದ ಬದುಕ ಹೊತ್ತು
ತುಂಬುತಲಿ ಕರುಳ ಕುಡಿಗಳ ತುತ್ತು
ಕರ್ತವ್ಯದ ಕರೆ ಕೂಗಿ ಕೂಗಿ
ಹುಸಿನಗುವು ಮೊಗದಲಿ ತೂಗಿ
ದಣಿದ ದೇಹದ ನಡುವೂ ಬಾಗಿ
ಅದೇ ಭಾನು, ಅದೇ ಬಾನು,
ಶಶಿ ತಾರೆಗಳೆಲ್ಲ ಮಿನುಗುತಿರಲು
ಇಂದೂ ಇವೆ ಪ್ರಶ್ನೆಗಳು
ಜೊತೆಗೆ ನೀನೂ ಇಲ್ಲ
ಅದಕುತ್ತರಗಳೂ ಇಲ್ಲ..
ಹೊಸ ಮೊಳಕೆ ಗಿಡವಾಗಿ
ಗಿಡ ಬೆಳೆದು ಮರವಾಗಿ
ಹಸಿರೆಲೆಗಳ ನಡುವೆ ಹಣ್ಣೆಲೆಯು ಬಾಗಿ
ಟೊಂಗೆಗಳು ಹರಡಿ ಹಲವು
ಆಳದಲಿ ಗಟ್ಟಿ ಬೇರಿನ ಒಲವು
ಗಾಳಿ,ಮಳೆ,ಬಿಸಿಲೆನ್ನದೆ
ಕಾಯ್ದು ಕಾಪಾಡಿದ ಬನದಿ
ಒಂದೊಂದು ಹೂ ನಕ್ಕು ಕರೆಯುತಿರಲು
ಕಾಡಿದ ನೆನಪು ಕತ್ತಲ ದೀಪ
ಸಾರ್ಥಕ ಬಾಳಿಗೊಂದು ನೆಪ
ಸಾಗಿದೆ ಇರುಳಿನೆಡೆ ಬದುಕು
ಎಲ್ಲವೂ ಮಸುಕು ಮಸುಕು.
ಮಾಡಿದ ಕಾರ್ಯಗಳೆಷ್ಟು
ಕೊಡವಿಕೊಂಡೆದ್ದ ಬೆಳಗುಗಳೆಷ್ಟು
ಇಂದೂ ಇವೆ ಪ್ರಶ್ನೆಗಳು
ಜೊತೆಗೆ ನೀನಿಲ್ಲ…
ಪ್ರಶ್ನೆಗೆ ಕೊನೆಯಿಲ್ಲ..

2

ರಾಣಿವಾಸದಾಣೆ

ನಿನ್ನೊಲುಮೆ ಅರಮನೆಯ
ರಾಣಿಯಾಗಲೊಲ್ಲೆ
ನಿನ್ನೊಂದು ಹೆಜ್ಜೆಯಡಿ
ಧೂಳಾಗಿ ಜೊತೆ- ಸಾಗಿ
ತೂರಿಬಂದ ಗಾಳಿಗೆ
ಹಾರಿಹೋಗದೆ ನಿನಗಂಟಿ
ಕಳೆಯಾದೆ, ಕೊಳೆಯಾದೆ,
ಕ್ಷಮೆಯಿರಲಿ…
ನನ್ನಿನಿಯ ನಿನ್ನಂತರಂಗದ
ಪಿಸುಮಾತಿಗೆ ಕಿವಿಯಾಗಿ
ಮೌನಕ್ಕೆ ಧ್ವನಿಯಾಗಿ
ಕರಿನೆರಳ ಕತ್ತಲೆಗಂಜಿ
ನಿನ್ನ ಕಣ್ಬೆಳಕ ವಿದ್ಯುಲ್ಲತೆಯಾಗಿ
ಹೊರಹೊಮ್ಮುವಾಗ ನಾ
ಸ್ವಾರ್ಥಿಯಾದೆ ಕ್ಷಮೆಯಿರಲಿ..
ನಿನ್ನೊಲುಮೆ ಸಾಗರದಿ
ಜೋಡಿ ತೆರೆಯಾಗಿ ಜೊತೆ ಸಾಗಿ
ಆವಿಯಾಗುವ ಭಯದಿ
ನಿನ್ನ ಬೆವರ ಪಸೆಯಾಗಿ
ಮೈಮನವೆಲ್ಲ ಹರಡಿ
ನಿನ್ನನಲ್ಲ..ನಿನ್ನಾತ್ಮವ ಬಯಸಿ
ನಾ ಸ್ವಾರ್ಥಿಯಾದೆ.
ಕ್ಷಮೆಯಿರಲಿ..

SHANKAR G

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago