ಕವಿತೆಗಳು

ವಿಷ್ಣು ಆರ್. ನಾಯ್ಕ ಅವರು ಬರೆದ ಕವಿತೆ ‘ಸಾಧನೆಯ ದಾರಿ’

ಏಳು.. ಎದ್ದೇಳು ಚಾತಕ ಪಕ್ಷಿ
ಮೊದಲ ಮಳೆ ಹನಿಗೆ ಬಾಯ್ದೆರೆದು
ಜಾಡ್ಯಗಳ ಕಿತ್ತೆಸೆದು
ಪುಚ್ಚ ಬಿಚ್ಚು
ಗರಿಗರಿಯ ಗೂಡು ಬಿಟ್ಟು
ಕನಸುಗಳ ಕಣ್ಣುಕಟ್ಟು
ಸಿಡಿಲು, ಮಿಂಚುಗಳ ವಾದ್ಯ, ಬೆಳಕಲಿ ಮಿಂದು
ಮಾರ್ದನಿಯಿಟ್ಟು
ಸಿಡಿಲಾಗಿ ಮೊಳಗಲಿ ಸಾಧನೆಯ ಕೆಚ್ಚು

ಸಾಧನೆಯಾಗಸದ ತುಂಬ
ನಿನ್ನದೆ ಹೆದ್ದಾರಿ
ಗಮಿಸು ‘ಭೀಮ ಪರಾಕ್ರಮ’ದ ದಾರಿ
ಅಡೆತಡೆಗಳನೆಲ್ಲ ಮೀರಿ
ಕೋಟಿ ಸೂರ್ಯ ಪ್ರಭೆಯ ಬೀರಿ
ಸಾಗು…ಸಾಗು..ಸಾಗೂ…
ನೀ ಮುಂದಕೆ
ನಿನ್ನ ಭೂತದ ನೋವು ,ನಿರಾಶೆ, ಹತಾಶೆ
ಎಲ್ಲ ಕಿತ್ತೆಸೆದು ಸಾಗು
ನಿನ್ನ ಮೊಗ್ಗಾದ ಕನಸುಗಳಿಗೆ
ಹನಿಸು ಪ್ರೇಮದ ನೀರು
ಊರು ಶಕ್ತಿಯ ಬೇರು
ಹೀರು ಪಾತಾಳದ ಸುಧೆಯ ನೀರು
ಗಗನವೇ ತವರೂರು
ಏರು…ಏರು….ಏರೂ…
ನೂಕು ‘ಶಂಕೆ’ಯ ತೇರು

ನಿನಗೆ ಪ್ರೇರಕರುಂಟು
ಮಾರ್ಗದರ್ಶಕರುಂಟು
ಗಂಗೆಯ ಬುವಿಗಿಳಿಸಿದ ‘ಭಗೀರಥ’ರುಂಟು
ಕನಸುಗಳಿಗೆ ಕನಸು ‘ಕಡ’ಕೊಟ್ಟ
ಭವ್ಯ ಸಾಧಕರುಂಟು
ನಿನ್ನ ಹಾರುವಿಕೆ ಭೂಮಿಯ ಹತ್ತಿರಕ್ಕೋ..
ಸಾಧನೆಯ ಉತ್ತರಕ್ಕೋ…!
ಮಾರ್ಗ ನಿನ್ನದೇ… ಮನಸು ನಿನ್ನದೇ..!
ಸಾಗು ಮುಂದಕೆ ಹಾರು.. ಗುರಿಯೇರು…
ಆಯ್ಕೆ ನಿನ್ನದು ಮುದ್ದು ಹಕ್ಕಿ
ಆದರೆ…
ನೀ ಸಾಗುವ ಹಾದಿ ಎಷ್ಟು
ದುರ್ಗಮವೇ ಇರಲಿ…
ಒಮ್ಮೆ ಕ್ರಮಿಸಿಬಿಡು
ಕಲ್ಲು ಮುಳ್ಳುಗಳ ಮಧ್ಯೆ
ನಡೆದು ಗುರಿ ಸೇರಿ ನಿಂತು
ಆನಂದ ಭಾಷ್ಪ ಸುರಿಸಿಬಿಡು
ನಿನ್ನ ಸಾಗುವ ಹಾದಿ
ಭವಿತವ್ಯದ ಜೀವಕ್ಕೆ
‘ರಾಜ ಮಾರ್ಗ’ವಾಗಿ
ನಿನ್ನ ಹೆಜ್ಜೆಯ ಮೇಲೆ ಹೆಜ್ಜೆಗಳುದಿಸಲಿ
ನಲುಗಿದ ಜೀವಕೆ ಕಾರುಣ್ಯವುದಿಸಲಿ

– ವಿಷ್ಣು ಆರ್. ನಾಯ್ಕ
ಶಿಕ್ಷಕರು, ಜಿಡ್ಡಿ, ಸಿದ್ದಾಪುರ.

SHANKAR G

Share
Published by
SHANKAR G

Recent Posts

ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ “ನುಡಿಗಳ ಅಳಿವು” ವಿಮರ್ಶಾ ಸಂಕಲನಕ್ಕೆ ೨೦೨೪ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…

55 years ago

ಡಿಸೆಂಬರ್ 7, ಶನಿವಾರದಂದು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ

ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…

55 years ago