ಕವಿತೆಗಳು

ಜಬೀವುಲ್ಲಾ ಎಂ. ಅಸದ್ ಅವರು ಬರೆದ ಕವಿತೆ ‘ನಾನೊಮ್ಮೆ ಮಹಾವೃಕ್ಷವಾಗಿದ್ದೆ’

ಅಂದು…
ಒಂದು ಸಣ್ಣ ಬೀಜವಾಗಿ
ಮಣ್ಣಿನ ಕಣಕಣಕಣಗಳ ನಡುವೆ ಅಡಗಿ
ಕಾಲಾಂತರದಿ ಧ್ಯಾನಿಸಿ
ಮುಗಿಲ ಮೇಘ ತುಡಿದು
ಹನಿಹನಿದು ಮಳೆಯಾಗಿ ಇಳೆಗೆ ಸುರಿದು
ಜೀವ ಅಂಕುರಿಸಿ, ಮೊಳಕೆಯಾಗಿ
ಭುವಿಯ ಅಂತರಾಳದಿ
ಬೇರಿನ ವೈಭವ ಮಾಗಿ
ಮಹಾವೃಕ್ಷವಾಗಿದ್ದೆ ನಾನು

ಹೂ ಮುಡಿದು, ಹಣ್ಣು ಹಡೆದು
ಜೀವರಾಶಿಗಳಿಗೆ ಆಸರೆಯಾಗಿ
ದಣಿದ ದೇಹಗಳಿಗೆ ನೆರಳಾಗಿ
ಇಳೆಗೆ ಮಳೆಯ ಕರೆವ ಕರವಾಗಿ
ನಿಮ್ಮೆಲ್ಲರ ಜೀವಕೆ ಉಸಿರ ತುಂಬುವ
ಪ್ರಕೃತಿಯಾಗಿದ್ದೆ ನಾನು

ಇಂದು…
ಎಲ್ಲರ ಸ್ವಾರ್ಥಕ್ಕೆ ಸರಕಾಗಿ
ನಿಮ್ಮ ಮನೆಗಳ ಕಿಟಕಿ, ಬಾಗಿಲು
ಕುರ್ಚಿ, ಮೇಜು, ಮಂಚಗಳಾಗಿ
ಸೌದೆ, ಉರುವಲು
ಮತ್ತೇನೇನೋ ಆಗಿ

ನಾ ಜೀವಂತವಿರುವಾಗಲೇ
ಕೊಡಲಿ ಪೆಟ್ಟು ಕೊಟ್ಟಿರಿ
ನನಗೂ ಜೀವವಿದೆಯೆಂದು ಚೀರಿದರೂ
ಕೇಳಿಸಿಕೊಳ್ಳದೆ ಹೋದಿರಿ
ಗರಗಸದಿ ಕೊರೆದು ಹಿಂಸಿಸಿದಿರಿ
ಭೂಮಿ ಆಗಸದ ನನ್ನ ನಂಟನ್ನು ಕಳಚಿ
ಯಂತ್ರಗಳ ಬಳಸಿ
ಉರುಳಿಸಿ ಬಿಟ್ಟಿರಿ

ಎಲೆಎಲೆಯನ್ನು ಬಿಡಲಿಲ್ಲ
ಬೇರನ್ನೂ ಉಳಿಸಲಿಲ್ಲ
ಅಷ್ಟು ಸಾಲದೆಂಬಂತೆ
ತುಂಡು ತುಂಡಾಗಿ ಕತ್ತರಿಸಿ
ಮೊಳೆ ಹೊಡೆದಿರಿ
ಕಸವಾಗಿಸಿ ಎಸೆದಿರಿ
ಬೆಂಕಿಗೆ ಸುಟ್ಟು ಬೂದಿಯಾಗಿಸಿದಿರಿ
ನನ್ನೊಟ್ಟಿಗೆ ಏನೆಲ್ಲಾ ಮಾಡಿದಿರಿ
ಎಷ್ಟೆಲ್ಲಾ ವಿಕೃತಿ ಮೆರೆದಿರಿ

ನಾಳೆಯೂ ನಾನು ಇರುವೆ
ಕಡಿದರು, ಸುಟ್ಟರೂ
ನೋವಾಗದ ಕೇವಲ ಕೊರಡಾಗಿ
ಬಾಗಿಸಿದಂತೆ ಬಾಗಿ
ನಿಮ್ಮ ಸ್ವಾರ್ಥಕ್ಕೆ ಶರಣಾಗಿ
ಮನುಜಕುಲದ ಬಳಕೆಯ
ಕೇವಲ ವಸ್ತುವಾಗಿ
ಇರುವೆನೆಂದರೆ ಇರುವೆನಷ್ಟೇ
ಜೀವವಿಲ್ಲದ, ಆತ್ಮವಿಲ್ಲದ
ಶವವಾಗಿ…

ನೀವು ಮರೆಯಬಹುದು
ಈಗಾಗಲೇ ಮರೆತಿರಲುಬಹುದು
ಆದರೆ ನನಗಿನ್ನೂ ನೆನಪಿದೆ
ನಾನೊಮ್ಮೆ ಮಹಾವೃಕ್ಷವಾಗಿದ್ದೆ

SHANKAR G

View Comments

Recent Posts

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago