ವಿಮರ್ಶೆಗಳು

ಕೊಟ್ರೇಶ್ ಅರಸೀಕೆರೆಯವರು, ಶ್ರೀದೇವಿ ಕಳಸದ ಅವರ ‘ಯಂಕ್ ಪೋಸ್ಟ್’ ಪುಸ್ತಕದ ಬಗ್ಗೆ ಬರೆದಿರುವ ‘ಒಂದು ಕೃತಿ ಟಿಪ್ಪಣಿ’

ಕೃತಿ: ಯಂಕ್ ಪೋಸ್ಟ್
ಲೇಖಕಿ: ಶ್ರೀದೇವಿ ಕಳಸದ
ಪ್ರಕಾಶನ: ಮನೋಹರ ಗ್ರಂಥ ಮಾಲಾ, ಧಾರವಾಡ
ಬೆಲೆ:140
ಪುಟ: 112

ಈ ಕೃತಿಯನ್ನು ಓದಿ, ಕೃತಿ ಪರಿಚಯ ಮಾಡೋಣ ಅಂತ ಮತ್ತೆ ಕೈಗೆತ್ತಿಕೊಳ್ಳುವ ಈ ಹೊತ್ತಿನಲ್ಲಿ ಹೊರಗೆ ಜೋರು ಮಳೆ. ಕೃತಿ ಓದಿ ಕೆಳಗಿಟ್ಟಾಗಲೂ ಮನದ ತುಂಬಾ ಜೋರು ಮಳೆ. ಯಾವುದೋ ತಲ್ಲಣ, ಹೇಳಿಕೊಳ್ಳಲಾಗದ ಅವ್ಯಕ್ತಭಾವ. ಒಂದು ಬಾರಿ ಹೆಣ್ಣಾಗಿ ಅನುಭವಿಸಿ ಹೊರ ಬಂದ ಭಾವ ಕಾಡಿತು.ವಯಕ್ತಿಕವಾಗಿ ಇತ್ತೀಚೆಗೆ ನಾನು ಓದಿದ ಸಣ್ಣ ಕಥೆಗಳ ಕೃತಿಗಳಲ್ಲಿ ಮನಸ್ಸಂತೋಷಪಡಿಸಿದ, ಒಂದು ಸಾರ್ಥಕ ಭಾವ ಮೂಡಿಸಿದ ಕೃತಿ ಶ್ರೀದೇವಿ ಕಳಸದ ಅವರ ಕೃತಿ ‘ ಯಂಕ್ ಪೋಸ್ಟ್ ‘ . ಕೇಂದ್ರ ಸಾಹಿತ್ಯ ಅಕಾಡೆಮಿ ಕೃತಿ ಓದಿದ ಅನುಭವ ಮೂಡಿತು ಎಂದರೆ ತಪ್ಪಾಗಲಾರದು.

ಈ ಕೃತಿ ಒಟ್ಟು ಹತ್ತು ಕಥೆಗಳ, ಒಟ್ಟಾರೆ 112 ಪುಟದ ಕೃತಿ.ಲೇಖಕಿ ಮತ್ತು ಪ್ರಕಾಶಕರು ಹೇಳಿದಂತೆ ಕನ್ನಡದ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇತ್ತೀಚೆಗೆ ಸಣ್ಣ ಕಥೆಗಳ ಸ್ಪರ್ಧೆಯ ಹಾವಳಿಯಿಂದಾಗಿ fast food ತಂತ್ರಗಾರಿಕೆಯನ್ನು ನೀವು ಗಮನಿಸಿರಬಹುದು. ಈ fast food ತಂತ್ರಗಾರಿಕೆಗೂ, ವೆಬ್ ಸೀರಿಸ್ಗಳಿಗೂ ಯಾವ ವ್ಯತ್ಯಾಸ ಇದೆ? ಈ ಎಲ್ಲಾ ಬೆಳವಣಿಗೆಗಳ ಮಧ್ಯದಲ್ಲಿ ತಮ್ಮ ಪಾಡಿಗೆ ತಮ್ಮ ಕೊಡುಗೆ ಕೊಡುತ್ತಿರುವ ಮಯೂರ, ತುಷಾರ, ಪತ್ರಿಕೆಗಳ ಸಾಪ್ತಾಹಿಕ ಪುರವಣಿಗೆಗಳಿಗೆ ಕನ್ನಡದ ಓದುಗನ ಕೃತಜ್ಞತೆ ಇರುತ್ತದೆ.ಈ ನಿಟ್ಟಿನಲ್ಲಿ ಬಂದ ಕಥೆಗಳು ಈ ಯಂಕ್ ಪೋಸ್ಟ್ ಕೃತಿಯ ಕಥೆಗಳು .ನಿಜಕ್ಕೂ ಸಣ್ಣ ಕಥೆಗಳ ಪರಂಪರೆಯನ್ನು ಮುನ್ನೆಡೆಸಲು ಮತ್ತು ಭರವಸೆಯೊಂಬುದಿದೆ ಎಂದು ಖಾತ್ರಿ ಮಾಡುತ್ತಿದೆ.

ಸಣ್ಣ ಕಥೆಗಳಿಗಿರಬಹುದಾದ ಮಾನದಂಡವೇನು? ಎಂಬ ಪ್ರಶ್ನೆ ಕಥೆಗಾರರಿಗೆ ಉಬ್ಬೇರಿಸುವಂತೆ ಮಾಡುವುದಾದರೂ ಒಳ್ಳೆಯ ಓದುಗನಲ್ಲಿ ಈ ಪ್ರಶ್ನೆ ನಿಜವಾಗಿಯೂ ಆಳದಲ್ಲಿರುತ್ತದೆ ಎಂಬುದು ಒಬ್ಬ ಓದುಗನಾಗಿ ನನ್ನ ಭಾವನೆಯಾಗಿದೆ.ನಾವೆಲ್ಲ ತಿಳಿದಿರುವಂತೆ ಕಥಾ ನಿರೂಪಣೆ ದಾಟಿ, ಸ್ಥಳೀಯ ಭಾಷೆ, ಆ ಕಾಲಘಟ್ಟದ ಆಚಾರ -ವಿಚಾರ, ಪರಿಸರ , ನುಡಿಗಟ್ಟುಗಳ ಬಳಕೆ
ಬಹು ಮುಖ್ಯವಾದುದು ಎಂದು ನಾನು ಭಾವಿಸುತ್ತೇನೆ. ಈ ಎಲ್ಲಾ ಅಂಶಗಳು ಈ ಕೃತಿಯಲ್ಲಿದೆ ಎಂದು ಖಂಡಿತವಾಗಿ ಹೇಳಬಲ್ಲೆ.

ಇನ್ನೂ ಕಥಾವಸ್ತು ; ಎಲ್ಲಾ ಕಥೆಗಳಲ್ಲಿಯೂ ಬಹಳ ಸಶಕ್ತವಾಗಿದೆ. ಇಲ್ಲಿ ಕಥೆಗಾರ್ತಿ ಕಥೆಗಳ ನಿರೂಪಿಸುತ್ತಲೇ ಓದುಗರನ್ನು ಕೂಡ ಹೆಣ್ಣಿನ ಒಂದು ಮನಸ್ಥಿತಿಯಲ್ಲೇ ಓದುವಂತೆ ಮಾಡುತ್ತಾರೆ. ಒಂದೊಂದು ಸಣ್ಣ ಸಣ್ಣ ಸಂಗತಿ, ಪಾತ್ರಗಳು , ಅಳಲು- ಸಂತೋಷ, ದುಗುಡ ಒಮ್ಮೆಲೆ ಆವರಿಸಿ ಕಥಾ ಪಾತ್ರಗಳ ಜತೆ ಓದುಗ ಒಂದಾಗುತ್ತಾನೆ.

ಮೊದಲ ಕಥೆ ‘ಉಣಕಲ್ ತಂತ್ರ ಸೀಳಿದ ರಾಕೆಟ್ ‘ ನಿಂದ ಹಿಡಿದು ಕೊನೆಯ ಕಥೆ ಶೀರ್ಷಿಕೆಯ ‘ ಯಂಕ್ ಪೋಸ್ಟ್ ‘ ಕಥೆಯವರೆಗೂ ಕಥಾವಸ್ತು, ನಿರೂಪಣೆಯ ತಂತ್ರಗಾರಿಕೆ ಒಂದು ರೀತಿ ಬೆಚ್ಚಿಬೀಳಿಸುವಲ್ಲಿ, ಕಥೆಯೆಂಬುದು ಓದುಗನ ಆಳದಲ್ಲಿ ಮೂಡುವ ರೀತಿಯೇ ಸೊಗಸಾಗಿದೆ.

ಉಣಕಲ್ ತಂತ್ರ ಸೀಳಿದ ರಾಕೆಟ್ ಕಥೆಯನ್ನು ಗಮನಿಸುವಾಗ,ಒಂದು ಕಡೆ ವಾಸಿಸುವ ಕುಟುಂಬಗಳ ನಡುವಿನ ಬಾಂಧವ್ಯ ಎಲ್ಲಾ ಜಾತಿ ಪಂಗಡ ಮೀರಿದ ಮತ್ತು ಅದರಲ್ಲಿ ಅಂಥ ವಿಶೇಷವೇನಿಲ್ಲವೆಂಬುದು, ನಮ್ಮ ನಡುವಿನ ಬದುಕು, ಜೀವನ ಹೇಗಿತ್ತು ಎಂಬುದು ಪ್ರಜ್ಞಾವಂತ ಓದುಗನ ಗಮನಕ್ಕೆ ಬರುತ್ತದೆ.ಮತ್ತೆ ಈ ಕಥೆಯಲ್ಲಿ ಮುಖ್ಯವಾದ ಹೆಣ್ಣಿನ ಬದುಕು, ಆ ತಲ್ಲಣವ ಕಥೆಯಲ್ಲಿ ನಿರೂಪಿಸಿದ ಬಗೆ, ಆ ಸಣ್ಣ ಸಣ್ಣ ಕವಿತೆಗಳಲ್ಲಿನ ವಿಷಾದ. ……ನಿಜಕ್ಕೂ ಹೆಣ್ಣೊಬ್ಬಳು ಮಾತ್ರ ಬರೆಯಬಹುದಾದ ಕಥೆ.ಉಳಿದಂತೆ ಎಲ್ಲಾ ಕಥೆಗಳಲ್ಲೂ ಹೆಣ್ತನದ ಪ್ರಜ್ಞೆ, ಬದುಕು, ಶೋಷಣೆಯ ಚಿತ್ರಣಗಳನ್ನು, ತಣ್ಣನೆಯ ಕ್ರೌರ್ಯವನ್ನು ಕಥೆಗಾರ್ತಿ ಬಿಚ್ಚಿಡುವಾಗ ಮನಸ್ಸು ವಿಷಾದದೊಳಗೆ ಮುಳುಗುತ್ತದೆ.

ಈ ಕೃತಿಯಲ್ಲಿನ ಪಾತ್ರಗಳಲ್ಲಿ ಮೇಲಸ್ತರದ, ಕೆಳಸ್ತರದ ಬದುಕೇ ಆಗಲಿ ಹೆಣ್ಣಿನ ಸ್ಥಾನಮಾನ ಒಂದೇ ರೀತಿಯದು ಮತ್ತು ಶೋಷಣೆಯ ಮಜಲುಗಳು ಮಾತ್ರ ಭಿನ್ನ ಎಂದು ಕಥೆಗಾರ್ತಿ ನಿರೂಪಿಸುತ್ತಾ ಹೋಗುತ್ತಾಳೆ.ಬ್ರಾ ಕಳಚಿಟ್ಟ ಒಂದು ದಿನ’ ಕಥೆಯಲ್ಲಿ ಹೊರಗೆ ದುಡಿಯುವ ಮಹಿಳೆಯ ಸಂಕಷ್ಟ,, ಕುಟುಂಬ ಶೋಷಣೆ, ಸ್ವಾತಂತ್ರ್ಯ…ಇದರ ನಡುವೆಯೂ ದಿಟ್ಟತನ ತೋರುವ ಹರಿದ್ವರ್ಣಾ ಳ ಪಾತ್ರ ಸಾಕಷ್ಟು ಕಾಡುತ್ತದೆ.ಮತ್ತೊಂದು ವಿಶಿಷ್ಟ ಕಥೆ’ ಶಾಕಾಂಬರಿ ಮಹಾತ್ಮೆ’. ಒಂದು ವಿಕ್ಷಿಪ್ತ ಮನಸ್ಥಿತಿಯ ಬಡತನದಲ್ಲಿ ಬೆಳೆದ ಹುಡುಗಿಯ ಕಥೆ. ಆಕೆಯ lesbian ಮನಸ್ಥಿತಿ ಮತ್ತು ಒಂದು ಕೊಳಚೆ ಪ್ರದೇಶದ, ಬಡತನದ ವಾತಾವರಣ ಓದುತ್ತಾ ಕೊನೆಗೆ ಒಂದು ನಿಟ್ಟುಸಿರು……ಎಲ್ಲಕ್ಕಿಂತ ಮುಖ್ಯವಾಗಿ ಇದು ಮನೋವೈಜ್ಞಾನಿಕ ಕಥೆ……ಪರಿಸರ, ಬಾಲ್ಯ,ಬೆಳೆದುಬಂದ ರೀತಿ ಮತ್ತು ಇವೆಲ್ಲ ಕಾರಣವಾಗುವ ವ್ಯಕ್ತಿಯ ಮನಸ್ಥಿತಿ……ಓದಿದ ನಂತರವೂ ಮನಸ್ಸು ಕಾಡುತ್ತದೆ.

ಇಲ್ಲಿನ ಎಲ್ಲಾ ಸ್ತ್ರೀ ಪ್ರಜ್ಞೆಯ, ಬದುಕಿನ, ಬದುಕಿನ ವಾಸ್ತವತೆಯನ್ನು ಬಿಡಿಬಿಡಿಯಾಗಿ ತೆರೆದಿಡುವ ಕಥೆಗಾರ್ತಿಯ ಕಥಾ ವೈಶಿಷ್ಟ್ಯ, ಭಾಷೆಯ standard ಬಹುಮುಖ್ಯವಾಗಿ ಗಮನಸೆಳೆಯುತ್ತದೆ.ಈ ಕಾರಣದಿಂದಲೇ ಅತ್ಯುತ್ತಮ ಕಥೆಗಳ ಕೃತಿಯಾಗಿದೆ. ಈ ಕೃತಿಯ ಶೀರ್ಷಿಕೆಯಲ್ಲಿನ ಹೆಸರಿನ ಕಥೆ ‘ಯಂಕ್ ಪೋಸ್ಟ್’ ಕೂಡ ಮನೋವೈಜ್ಞಾನಿಕ ಕಥೆ. ಸಹಜವಾಗಿ ಹೆಣ್ಣು ಮತ್ತು ಗಂಡಿನ, ಕುಟುಂಬದ ಅನೇಕ ಗುಟ್ಟಿನ ಪ್ರಸಂಗ ಮತ್ತು ಇದರ ಅನೇಕ ಮಜಲುಗಳನ್ನು ಕಟ್ಟಿಕೊಡುವ ರೀತಿ ಮೆಚ್ಚಿಗೆಯಾಗುತ್ತದೆ.

ಒಂದೆರೆಡು ಮಾಮೂಲಿ ಕಥೆಗಳು ಇವೆ.ಅದು ಕಲೆಯ ಹೆಸರಿನಲ್ಲಿ ಹೆಣ್ಣು ಶೋಷಣೆಗೊಳಲ್ಪಡುವ ಕಥೆ ‘ಸವಾಲು ಜವಾಬ್’ , ಮಾಯಾಧರನ ಹುಳಿದ್ರಾಕ್ಷಿ’ ಕಥೆಗಳೂ ಇವೆ. ಚಿಕನ್ ಪಕೋಡ ಎಂಬ ಕಥೆ ತನ್ನ ನಿರೂಪಣೆ ದಾಟಿಯಿಂದ ಬೆಚ್ಚಿಬೀಳಿಸಿದರೆ ‘ಶಿರಗುಪ್ಪಿ’ ಎಂಬ ಕಥೆ ಭಾಷಾ ಸೊಗಡು ಮತ್ತು ಹೆಣ್ಣು ಕೂಡ ಗಂಡಿನಂತೆ ಶೋಷಕಿಯಾಗಬಲ್ಲಳು ಮತ್ತು ಒಂದು ಪ್ರೇಮದಿಂದ ವಂಚಿತನಾದ ಗಂಡಸಿನ ಕಥೆ.ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕವಾಗಿ ಒಳ್ಳೆಯ ಕೆಲಸ ಮಾಡುತ್ತಿರುವ , ನಮ್ಮೂರುಗಳಲ್ಲೂ ಇರಬಹುದಾದ ಅನೇಕ ವ್ಯಕ್ತಿಗಳನ್ನು ನೆನಪಿಸುತ್ತದೆ. ಒಟ್ಟಿನಲ್ಲಿ ಈ ಕೃತಿ ಓದುಗನ ಪ್ರಜ್ಞೆ ವಿಸ್ತರಿಸುವ, ಸಾಮಾಜಿಕ ಜವಾಬ್ದಾರಿ, ಲಿಂಗಪ್ರಜ್ಞೆಯ ಅನೇಕ ಒಳ್ಳೆಯ ಅಂಶಗಳನ್ನು ಕೊಡಮಾಡಿದೆ ಎಂಬುದೇ ಸಂತೋಷಕರವಾದದ್ದು, ಆರೋಗ್ಯಕರವಾದುದ್ದು.ಇದು ಕೃತಿಯ ಗೆಲುವಾಗಿದೆ.

ಆದರೂ…….

ಈ ಕೃತಿಯಲ್ಲಿನ ಕಥೆಗಳಿಗೆ ಭಾಷೆಯೇ ಜೀವವಾದಂತೆ ತೋರಿದರೂ, ಭಾಷೆಯ ಬಳಸುವ ತಂತ್ರಗಾರಿಕೆ ಹೊಸ ಓದುಗನನ್ನು ಕೃತಿಯಿಂದ ದೂರ ಇಡುತ್ತದೆ ಎಂದರೆ ತಪ್ಪಾಗಲಾರದು. ಇಷ್ಟೊಂದು ಕ್ಲಿಷ್ಟಕರ ನಿರೂಪಣೆ ಬೇಕಾ? ಎಂದು ಒಮ್ಮೆ ಕಾಡುತ್ತದೆ. ಕನ್ನಡದ ಭಾಷೆಗೆ ತನ್ನದೇ ಆದ ಸೌಂದರ್ಯ ಇದೆ. ಅದು ಪ್ರತಿ ಮೊದಲ ಓದುಗನ ಸ್ವತ್ತಾಗಬೇಕು. ಓದಿನ ಬಗ್ಗೆ ಓದುಗನಿಗೆ ಪ್ರೀತಿ ಹುಟ್ಟಿಸಬೇಕೇ ಹೊರತು ಕೃತಿ Art Movieಗಳಂತಾಗಬಾರದು. ಓದುಗ ಸೋಲಬಾರದೆಂಬ ಪ್ರಜ್ಞೆ ಲೇಖಕನಿಗೆ ಇರಬೇಕು.

ಈ ಕೃತಿ ಓದಿದ ಈ ಸಮಯದಲ್ಲಿ ನನ್ನ ಮುಂದೆ ಮಾಸ್ತಿಯವರ ಸಣ್ಣ ಕಥೆಗಳ ಕೃತಿ ಇದೆ, ಕೊಡಗಿನ ಗೌರಮ್ಮ ನ ಕಥೆಗಳ ಕೃತಿ ಇದೆ. ಕನ್ನಡದ ಸ್ತ್ರೀ ಪ್ರಜ್ಞೆಯ ಗುರುತಾಗಿರುವ ಅಕ್ಕನ ಕೃತಿ ಯೂ …….12 ನೇ ಶತಮಾನದ ವಚನಗಳು, ಸ್ವಾತಂತ್ರ್ಯ ಪೂರ್ವದಲ್ಲೇ ಬರೆದ ಗೌರಮ್ಮನ ಕಥೆಗಳನ್ನು ಇನ್ನೂ ನಾವು ಸರಾಗವಾಗಿ ಓದಿಸಿಕೊಳ್ಳುತ್ತಿವೆಯೆಂದರೆ ಭಾಷಾ ಸರಳತೆಯ ಸೌಂದರ್ಯವೇ ಕಾರಣವಾಗಿದೆ.

ಈ ಕೃತಿ ಪ್ರಕಟಿಸಿದ ಮನೋಹರ ಗ್ರಂಥ ಮಾಲಾ ಪ್ರಕಾಶನಕ್ಕೆ ಲೇಖಕಿಯ ಜೊತೆಗೆ ನನ್ನ ಅಭಿನಂದನೆಗಳು ಸಲ್ಲುತ್ತದೆ.

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago