ಕೃತಿ : ಜನಪರ ರಾಜಕಾರಣಿ ವೈ.ಕೆ. ರಾಮಯ್ಯ
ಲೇಖಕರು: ಡಾ.ಹಿ.ಚಿ. ಬೋರಲಿಂಗಯ್ಯ
ಬೆಲೆ: 180 ರೂಪಾಯಿ
ಪ್ರಕಾಶಕರು: ವಿಕಸನ ಪ್ರಕಾಶನ
ಡಾ. ಹಿ. ಚಿ. ಬೋರಲಿಂಗಯ್ಯ ಅವರು ಬರೆದಿರುವ ಜನಪರ ರಾಜಕಾರಣಿ ವೈ. ಕೆ. ರಾಮಯ್ಯ ಕೃತಿಯನ್ನು ಓದಿದೆ. ತತ್ವನಿಷ್ಠ ರಾಜಕಾರಣಿಯಾಗಿ, ನೇರ ನಡೆ-ನುಡಿಗಳಿಗೆ ಹೆಸರಾಗಿರುವ ಶ್ರೀ ವೈ. ಕೆ. ರಾಮಯ್ಯನವರು ನ್ಯಾಯವಾದಿಯಾಗಿ, ಶಾಸಕರಾಗಿ, ಸಚಿವರಾಗಿ ನಾಡಿಗೆ ಸಲ್ಲಿಸುತ್ತಿರುವ ಸೇವೆಯ ಬಗ್ಗೆ ಈ ಕೃತಿ ಸವಿವರವಾಗಿ ನಮಗೆ ತಿಳಿಸಿಕೊಡುತ್ತದೆ.
ಹೇಮಾವತಿ ನದಿ ನೀರನ್ನು ತುಮಕೂರು ನಗರ ಮತ್ತು ಜಿಲ್ಲೆಗೆ ತರುವಲ್ಲಿ ಭಗೀರಥ ಪ್ರಯತ್ನ ನಡೆಸಿ ಸಫಲರಾದವರು ವೈ. ಕೆ. ರಾಮಯ್ಯನವರು, ವಿವೇಕಕ್ಕೆ ವಿಚಾರಕ್ಕೆ ಹೆಸರಾದ ಶ್ರೀ ರಾಮಯ್ಯನವರು ಕವಿ ಕುವೆಂಪುರವರ ವಿಚಾರಧಾರೆಯನ್ನು ಆರಾಧನಾ ಮನೋಭಾವದಿಂದ ಒಪ್ಪಿಕೊಂಡವರು. ಬುದ್ಧ ಬಸವಣ್ಣ ಮತ್ತು ಅಂಬೇಡ್ಕರರ ತತ್ವ, ಆದರ್ಶಗಳಲ್ಲಿ ಶ್ರದ್ಧೆಯುಳ್ಳ ಸೌಜನ್ಯಶೀಲರು ಎಂಬುದನ್ನು ಈ ಕೃತಿಯಲ್ಲಿ ನಾವು ಕಾಣಬಹುದಾಗಿದೆ. ರೇಷ್ಮೆ ಸಚಿವರಾಗಿ, ರೇಷ್ಮೆ ಬೆಳವಣಿಗೆಯ ಬಗ್ಗೆ ರೇಷ್ಮೆ ಬೆಳೆಗಾರರಿಗೆ ನ್ಯಾಯ ಒದಗಿಸಲು ತಮ್ಮ ಜೀವನವನ್ನು ಸಾಕಷ್ಟು ವರ್ಷ ಮಡುಪಾಗಿಟ್ಟು ಸತತ ಅಧ್ಯಯನದಿಂದ ದಕ್ಷಿಣ ಕರ್ನಾಟಕದಲ್ಲಿ ರೇಷ್ಮೆ ಬೆಳೆಯನ್ನು ಬೆಳೆದು, ರೈತರು ತಮ್ಮ ಜೀವನೋಪಾಯವನ್ನು ನಡೆಸಲು ಸಾಧ್ಯವಾಗಿರುವುದಕ್ಕೆ ವೈ.ಕೆ. ರಾಮಯ್ಯನವರ ಹೆಸರನ್ನು ಹೇಳಲೇಬೇಕಾಗುತ್ತದೆ. ಹಾಗಾಗಿ ಇವರನ್ನು ಅನೇಕ ಜನರು “ರೇಷ್ಮೆ ರಾಜ” ಎಂದೇ ಕರೆಯುತ್ತಿದ್ದರು.
ರೇಷ್ಮೆಕೃಷಿ ಅಧ್ಯಯನಕ್ಕಾಗಿ ಜಪಾನ್ ಮತ್ತು ಕೊರಿಯಾ ದೇಶಗಳಲ್ಲಿ ಪ್ರವಾಸ ಕೈಗೊಂಡು, ಅಲ್ಲಿನ ಅನೇಕ ತಂತ್ರಜ್ಞಾನವನ್ನು ಕರ್ನಾಟಕದಲ್ಲಿ ಅಳವಡಿಸುವ ಬಗ್ಗೆ ಸಾಕಷ್ಟು ಕೆಲಸವನ್ನು ರೈತರ ಮೂಲಕ ಮಾಡಿಸುವಲ್ಲಿ ಯಶಸ್ವಿಯಾದವರು ವೈ. ಕೆ. ರಾಮಯ್ಯನವರು. ಚೀನಾದಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುವ ಬಗ್ಗೆ ಸಾಕಷ್ಟು ಹೋರಾಟ ಮಾಡಿ ಕೇಂದ್ರ ಸರ್ಕಾರದ ಗಮನವನ್ನು ಸೆಳೆದಿದ್ದರು. ರೈತರಿಗೆ ಕಚ್ಚಾ ರೇಷ್ಮೆಗೂಡು ಮಾರಾಟಕ್ಕೆ ಬೋನಸನ್ನು ಕೊಡಿಸುವಲ್ಲಿ ಯಶಸ್ವಿಯಾದ ವೈ. ಕೆ. ರಾಮಯ್ಯನವರನ್ನು “ಬೋನಸ್ ರಾಮಯ್ಯ” ಎಂತಲೂ ಕರೆಯುತ್ತಿದ್ದರು.
ಭ್ರಷ್ಟ ಅಧಿಕಾರಿಗಳಿಗೆ, ಭ್ರಷ್ಟಾಚಾರ ಮಾಡುವವರಿಗೆ, ರಾಜಕೀಯ ಪುಢಾರಿಗಳಿಗೆ, ಸೋಮಾರಿಗಳಿಗೆ ಸಿಂಹ ಸ್ವಪ್ನವಾಗಿದ್ದ ರಾಮಯ್ಯ ಅನೇಕರಿಗೆ “ಜಗಳಗಂಟ ರಾಮಯ್ಯ” ಎಂದೇ ಕರೆಸಿಕೊಂಡಿದ್ದರು. ಕುಣಿಗಲ್ ಮತ್ತು ಹುಲಿಯೂರುದುರ್ಗದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರಾಗಿ ಗೆದ್ದು ಅನೇಕ ಜನಪರ ಕೆಲಸಗಳನ್ನು ಮಾಡುವಲ್ಲಿ ವೈ. ಕೆ. ರಾಮಯ್ಯನವರ ಕೆಲಸವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಹಾಗಾಗಿ ಅವರನ್ನು “ಜನಪರ ರಾಜಕಾರಣಿ” ಎಂದು ಹೇಳುವುದರಲ್ಲಿ ಅತಿಶಯೋಕ್ತಿಯಲ್ಲ.
ಹುಲಿಯೂರುದುರ್ಗ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆಗೋಸ್ಕರ ಮರ ಗಿಡ ಸಸಿಗಳನ್ನು ನೆಡಿಸುವ ಮೂಲಕ ರೈತರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಿದವರು ವೈ.ಕೆ. ರಾಮಯ್ಯನವರು ಹಾಗಾಗಿ ಆ ಸಮಯದಲ್ಲಿ ಅನೇಕ ಜನರು ಇವರನ್ನು “ಪರಿಸರ ರಾಮಯ್ಯ” ಎಂಬುದಾಗಿಯೂ ಕರೆದಿದ್ದಾರೆ. ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ವೈ. ಕೆ. ರಾಮಯ್ಯನವರು ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಅವರದೇ ಆದ ಸ್ಥಾನ ರೂಪುಗೊಳ್ಳಲು ಅವರ ಕ್ರಿಯಾಶೀಲತೆ ಮತ್ತು ಸಂವೇದನಾಶೀಲತೆಗಳು ಕಾರಣ ಎಂದರೆ ತಪ್ಪಾಗಲಾರದು. ಪರಿಸರ ಕಾಳಜಿ, ದುರ್ಬಲರ ಏಳಿಗೆ, ಗ್ರಾಮೀಣ ಜನಪರ ನಿಲುವು, ಸಮಾಜವನ್ನು ಕಾಡುವ ಎಲ್ಲಾ ವಿಧದ ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ವೈ.ಕೆ. ರಾಮಯ್ಯನವರಲ್ಲಿ ಇತ್ತು ಎಂದು ಅನೇಕರು ಈಗಲೂ ನೆನಪಿಸಿಕೊಳ್ಳುತ್ತಾರೆ.
ತೋಟಗಾರಿಕಾ ಸಚಿವರಾಗಿಯೂ ಕೂಡ ವೈ. ಕೆ. ರಾಮಯ್ಯನವರು ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಮತ್ತು ಕುಂಟುತ್ತಿದ್ದ ಗೃಹ ಮಂಡಳಿಯ ಅಧ್ಯಕ್ಷರಾಗಿ ಇವುಗಳಿಗೆ ಹೊಸ ಚೇತನವನ್ನು ಕೊಟ್ಟಂತವರು. ರೇಷ್ಮೆ ಇಲಾಖೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ವೈ. ಕೆ. ರಾಮಯ್ಯನವರು ಮಾದರಿ ಬಿತ್ತನೆ ಕೋಟಿ ಕಟ್ಟಡಗಳು ಮತ್ತು ಗೂಡಿನ ಮಾರುಕಟ್ಟೆಗಳು, ಚಾಕಿ ಕೇಂದ್ರಗಳು ಕರ್ನಾಟಕ ರಾಜ್ಯದ ತುಮಕೂರು, ರಾಮನಗರ, ಮಾಗಡಿ, ಹುಲಿಯೂರುದುರ್ಗ, ಕುಣಿಗಲ್ ಮುಂತಾದ ಕಡೆ ತೆರೆಯುವಲ್ಲಿ ಹೆಚ್ಚು ಶ್ರಮ ವಹಿಸಿದವರು.
ನ್ಯಾಯವಾದಿಗಳಾಗಿ ಸುಮಾರು 10 ವರ್ಷಗಳ ಕಾಲ ದುಡಿದು ಅಪಾರ ಜ್ಞಾನವನ್ನು ಸಂಪಾದಿಸಿಕೊಂಡಿದ್ದ ವೈ. ಕೆ. ರಾಮಯ್ಯನವರು ರಾಜಕೀಯ ಕ್ಷೇತ್ರದಿಂದ ಯಾವುದೇ ನಯಾ ಪೈಸೆಯನ್ನು ಬಯಸದೆ ರೈತರ, ಕೃಷಿಕರ ಏಳಿಗೆಗೆ ದುಡಿದ ವೈ. ಕೆ. ರಾಮಯ್ಯ ಕ್ಷೇತ್ರದ ಅಪರಂಜಿಯೇ ಸರಿ.
ದೇವೇಗೌಡರು, ಎಂ ವೀರಪ್ಪ ಮೊಯಲಿ, ರಾಮಕೃಷ್ಣ ಹೆಗಡೆಯವರು, ಎಸ್ ಎಂ ಕೃಷ್ಣ, ಅಂಬರೀಶ್, ಹೆಚ್.
ಸಿ. ಶ್ರೀಕಂಠಯ್ಯ, ಜೆ.ಎಚ್. ಪಟೇಲ್, ವೀರಕುಮಾರ್ ಎ ಪಾಟೀಲ್, ಬಿ.ಜಿ. ಬಣಕಾರ್, ಬಿ.ಎಲ್. ಶಂಕರ್ ಹುಚ್ಚು ಮಾಸ್ತಿಗೌಡ ಇವರುಗಳ ನಡುವೆ ಇದ್ದುಕೊಂಡು ಎಲ್ಲರ ಉಪಯೋಗವನ್ನು ಪಡೆದು ಕ್ಷೇತ್ರಕ್ಕೆ ನ್ಯಾಯ ಒದಗಿಸಿದವರು ವೈ. ಕೆ. ರಾಮಯ್ಯನವರು. ವೈ. ಕೆ. ರಾಮಯ್ಯನವರು ತಮ್ಮ ಭಾಷಣಗಳಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಅನೇಕ ಕಗ್ಗಗಳನ್ನು ಹೇಳುವ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದವರು ವೈ. ಕೆ.
ರಾಮಯ್ಯನವರು. ಹೆತ್ತ ಮಕ್ಕಳನ್ನು ಬೆಳೆಸುವಂತೆ ಮರಗಿಡಗಳನ್ನು ಬೆಳೆಸಿ ಎಂದು ಸಾಮಾನ್ಯ ಜನರಿಗೆ ಪ್ರೇರಣೆ ನೀಡಿದವರು.
ಹುಲಿಯೂರುದುರ್ಗದ ಎಲೆಕಡಕಲು ಎಂಬ ಗ್ರಾಮದ ಕಂಬೇಗೌಡನ ಮಗನಾಗಿ ರೈತ ಕುಟುಂಬದಲ್ಲಿ ಜನಿಸಿದ ವೈ ಕೆ ರಾಮಯ್ಯನವರು ಕೃಷಿಯ ಬಗ್ಗೆ ತಿಳಿದುಕೊಂಡಿದ್ದವರು. ರಾಜಕೀಯ ಮುತ್ಸದಿಗೆ ಇರಬೇಕಾದ ಒಳನೋಟ, ಸೂಕ್ಷ್ಮಜ್ಞತೆ, ಸಂಯಮ ಹಾಗೂ ಭವಿಷ್ಯದ ಬಗ್ಗೆ ರಾಮಯ್ಯನವರು ಅರಿವನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಕುಣಿಗಲ್ ಕುದುರೆಯ ಕಾಠಿಣ್ಯ ಮತ್ತು ರೇಷ್ಮೆ ಮೃದುತ್ವ ಇವೆರಡನ್ನು ವೈ. ಕೆ. ಆರ್. ವ್ಯಕ್ತಿತ್ವದಲ್ಲಿ ಮೈಗೂಡಿವೆ ಎಂಬುದನ್ನ ಡಾ. ಸಿದ್ದಲಿಂಗಯ್ಯ ಕವಿಗಳು ಹೇಳಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದು.
ಪಿ. ಲಂಕೇಶ್, ಡಾ. ಕಾಳೇಗೌಡ ನಾಗವಾರ, ಡಾ. ಬೀಚನಹಳ್ಳಿ ಕರಿಗೌಡ, ಡಾ. ಹಿ. ಚಿ. ಬೋರಲಿಂಗಯ್ಯ, ಶೂದ್ರ ಶ್ರೀನಿವಾಸ, ಜಿ. ವಿ. ಆನಂದಮೂರ್ತಿ ಮುಂತಾದ ಸಾಹಿತಿಗಳ ಒಡನಾಟವನ್ನು ಇಟ್ಟುಕೊಂಡವರು. ನ್ಯಾಯವಾದಿಯಾಗಿಯೂ ಕೂಡ ವೈ.ಕೆ. ರಾಮಯ್ಯನವರು ಕಾನೂನು ಕಟ್ಟಳೆಗಳನ್ನು ಮನುಷ್ಯ ಮನುಷ್ಯರ ನಡುವೆ ಸ್ನೇಹ ಸೇತುವೆಯ ನಿರ್ಮಾಣಕ್ಕೆ ಬಳಸಿದ್ದನ್ನು ಅನೇಕರು ಗಮನಿಸಿದ್ದಾರೆ. ನಮ್ಮ ರೈತರು ಬೆಳೆಯುವ ಬೆಳೆಗಳಿಗೆ ಬೆಲೆ ನಿಗದಿಯಾಗಬೇಕು, ವಿದೇಶಿ ಆಮದನ್ನು ನಿಲ್ಲಿಸಬೇಕು, ನಮ್ಮ ಕೃಷಿಕರು ಹೆಚ್ಚು ಲಾಭವನ್ನು ಪಡೆಯುವಂತೆ ಆಗಬೇಕು, ಅವರ ಆರ್ಥಿಕ ಸ್ಥಿತಿ ಉತ್ತಮವಾಗಬೇಕು ಎಂಬುದನ್ನು ಮನನಗಂಡ ವೈ. ಕೆ. ರಾಮಯ್ಯನವರು ಇದಕ್ಕಾಗಿ ಸಾಕಷ್ಟು ದುಡಿದವರು. ಹೇಮಾವತಿ ನೀರನ್ನು ತುಮಕೂರಿಗೆ ತರುವ ಹೋರಾಟಗಳಲ್ಲಿ ಜೈಲಿಗೂ ಹೋಗಿ ಬಂದವರು.
ರೈತರಿಗೆ ಸಮಸ್ಯೆಗಳು ನಿವಾರಣೆಗಾಗಿ ಅನೇಕ ರಾಜಕಾರಣಿಗಳ ವೈಷಮ್ಯಗಳನ್ನು ಕಟ್ಟಿಕೊಂಡು, ಯಾವುದೇ ಆಮಿಷಗಳಿಗೆ ಒಳಗಾಗದೆ, ಪ್ರಾಮಾಣಿಕವಾಗಿ ರಾಜಕೀಯ ಮಾಡಿದವರು ವೈ. ಕೆ. ರಾಮಯ್ಯನವರು. ರಾಜಕಾರಣದಲ್ಲಿ ಶಾಸಕರಾಗಿ ಬರುವ ರಾಜಕಾರಣಿಗಳಿಗೆ ಆದರ್ಶವಾಗಿ ವೈ.ಕೆ. ರಾಮಯ್ಯನವರನ್ನು ಓದಿಕೊಳ್ಳಬೇಕಾಗುತ್ತದೆ. ಕೆಲವೇ ಕೆಲವು ರಾಜಕಾರಣಿಗಳ ಸಾಲಿನಲ್ಲಿ ಅಪರೂಪದ ರಾಜಕಾರಣಿಯಾಗಿ ನಿಲ್ಲುತ್ತಾರೆ ವೈ.ಕೆ.ರಾಮಯ್ಯನವರು. ಅವರ ಅನೇಕ ಸಾಧನೆಗಳನ್ನು ಬಹಳ ಅತ್ಯುತ್ತಮವಾಗಿ ಈ ಕೃತಿಯಲ್ಲಿ ಡಾ. ಹಿ. ಚಿ.ಬೋರಲಿಂಗಯ್ಯ ಅವರು ಓದುಗರಿಗೆ ಕಟ್ಟಿ ಕೊಟ್ಟಿದ್ದಾರೆ. ಇಂತಹ ರಾಜಕಾರಣಿ ನಮ್ಮ ನಾಡಿನಲ್ಲಿ ಇದ್ದರು ಎನ್ನುವುದು ಎಲ್ಲರಿಗೂ ಹೆಮ್ಮೆಯ ವಿಷಯ. ಇಂಥ ಕೃತಿಗಳನ್ನು ಓದುವ ಮೂಲಕ ಇವತ್ತಿನ ಕೆಲವು ರಾಜಕಾರಣಿಗಳು ಆದರ್ಶವನ್ನು ರೂಡಿಸಿಕೊಳ್ಳಬೇಕಾಗಿದೆ. ಹುಟ್ಟು ಆಕಸ್ಮಿಕ, ಸಾವು ಖಚಿತ. ಅದರ ನಡುವೆ ಬಾಳಿ ಬದುಕುವ, ಸಾಧಿಸಿ ನಡೆಯುವ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ಈ ಕೃತಿಯ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…