ಡಾ. ಶಿವರಾಜ್ ಬ್ಯಾಡರಹಳ್ಳಿ ರವರು ಬರೆದಿರುವ “ಗುಡಿಸಿಲೊಳಗೊಂದು ಬೆಳ್ಳಿಚುಕ್ಕಿ” ಕವನ ಸಂಕಲನದಲ್ಲಿ ಒಟ್ಟು 37 ಕವಿತೆಗಳಿವೆ. ಇದು ಇವರ ಮೊದಲ ಕವನ ಸಂಕಲನವಾಗಿದೆ. ಬದಲಾಗುತ್ತಿರುವ ಸಮಾಜದ ಕಾಲ ಗತಿಯನ್ನು ಎಚ್ಚರದಿಂದ ವೀಕ್ಷಿಸುವ ನೋವುಂಡ ಮನಸ್ಸು, ಒಂದು ವ್ಯವಸ್ಥೆಯ ಬಗ್ಗೆ ತುಡಿಯುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಜಾತಿ ಸಂಘರ್ಷ ಮತ್ತು ಭ್ರಷ್ಟಾಚಾರದ ವ್ಯವಸ್ಥೆಯನ್ನು ವಿರೋಧಿಸುವ ಇಲ್ಲಿನ ಅನೇಕ ಕವಿತೆಗಳು ನಮ್ಮೊಂದಿಗೆ ಮಾತನಾಡುತ್ತವೆ.
ಹುಲಿಯೂರುದುರ್ಗದ ಬ್ಯಾಡರಹಳ್ಳಿಯಲ್ಲಿ ಜನಿಸಿ ಬಾಲ್ಯವನ್ನು ಕಳೆದ ಡಾ. ಶಿವರಾಜ್ ಬ್ಯಾಡರಹಳ್ಳಿ ರವರು ನಗರ ಹಾಗೂ ಗ್ರಾಮೀಣ ಜೀವನದ ಸಂಘರ್ಷಗಳನ್ನು ಇಲ್ಲಿನ ಹಲವು ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅಂದಿನ ಮತ್ತು ಇಂದಿನ ಕಾಲಘಟ್ಟದಲ್ಲಿ ನಡೆದ ಕಗ್ಗೊಲೆಗಳು, ದೇವಸ್ಥಾನ ಪ್ರವೇಶ ನಿರಾಕರಣೆ, ಕಂಬಾಲಪಲ್ಲಿಯ ದುರಂತ, ಮಲ ಹೊರುವ ಹೀನ ಕೃತ್ಯ, ಅಂಗರಹಳ್ಳಿಯ ಜೀತದ ಪ್ರಕರಣಗಳು ಹಾಗು ಅಸ್ಪೃಶ್ಯತೆ ಇವೆಲ್ಲವುಗಳ ಘಟನೆಗಳು ಕವನಗಳ ರೂಪವಾಗಿ ಈ ಸಂಕಲನದಲ್ಲಿ ಮೂಡಿ ಬಂದಿವೆ.
ಜಾತಿ ದ್ವೇಷದ ದಳ್ಳುರಿಯ ಬೆಂಕಿಯಲ್ಲಿ ಬೆಂದು ಹೋದ ಜೀವಗಳಿಗೆ ಮುಕ್ತಿಯೂ ಸಿಗಲಿಲ್ಲ ಕೊನೆಗೆ ನ್ಯಾಯವೂ ಸಿಗಲಿಲ್ಲ ಎನ್ನುವುದು “ನಪುಂಸಕರು” ಕವಿತೆಯಲ್ಲಿ ತಿಳಿಸಿದರೆ, ನಗರೀಕರಣದ ನಾಜೂಕಿನಲ್ಲಿ ಪಳೆಯುಳಿಕೆಯು ಪವಿತ್ರವಾಗುತ್ತದೆ, ಮೌಢ್ಯಕೂಮೆರಗು ಬರುತ್ತದೆ ಎಂಬುದನ್ನು “ಮಹಾದೇವಮ್ಮ” ಕವಿತೆಯಲ್ಲಿ ತೋರಿದ್ದಾರೆ. ಬದುಕಿಗಾಗಿ ಹೋರಾಟಗಳಲ್ಲೂ ಕಣ್ಣ ಮುಚ್ಚಾಲೆ ಆಟ ಆಡುವ ಕತ್ತಲೆಯಲ್ಲಿನ ಸಂಚನ್ನು “ಮುಷ್ಕರ” ಕವಿತೆಯಲ್ಲಿ ಮತ್ತು ಊರ ಯುಗಾದಿಯ ಸಂಭ್ರಮದೊಳಗೂ ಬೇವು ಬೆಲ್ಲದಂತೆ, ನೋವು ನಲಿವುಗಳನ್ನು ತೆರೆದಿಡುವ “ಯುಗಾದಿ” ಕವಿತೆಯಲ್ಲಿ ಹಾಗೂ ಉದ್ಯೋಗವೆಂಬ ಬಿಕ್ಷಾಪಾತ್ರೆ ಹಿಡಿದು ಹೊರಟ ತಿರುಕ ಅನುಭವದ ಕೊರತೆಯೊಳಗೆ ನರಳುವ ವಿಚಾರವನ್ನು ” ಉದ್ಯೋಗವೆಂಬ ಬಿಕ್ಷಾಪಾತ್ರೆ” ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
ನಮ್ಮವಳು ಎನಿಸಿಕೊಳ್ಳುವ ಕನಸಿನಲ್ಲಿ ತಂಗಿ ಹೊರಟಿದ್ದು ಬೆಳಕಿನೆಡೆಗೆ, ಬಾನು ಬೆಳಕಾಯಿತು ಆದರೆ ಬರೀ ಕತ್ತಲು ಎನ್ನುವ ವಿಚಾರವನ್ನು “ಬರೀ ಕತ್ತಲು” ಕವಿತೆಯಲ್ಲಿ, ಮನೆ ಕಟ್ಟಿದರೂ, ಮಹಲು ಕಟ್ಟಿದರೂ, ಮಂದಿರ ಕಟ್ಟಿದರೂ ಹೊರಗೆ ನಿಲ್ಲುವ ಪರಿಪಾಠ ನಿಲ್ಲಲೇ ಇಲ್ಲ. ಮನಸು ಮನಸುಗಳನ್ನು ಬೆಸೆಯಲಾಗಲೇ ಇಲ್ಲ ಎನ್ನುವುದನ್ನು “ಮನಸು” ಕವಿತೆಯಲ್ಲಿ ಮತ್ತು ಜಾತಿಯೆಂಬ ಮರದ ಕುತ್ತಿಗೆ ಸುತ್ತಿ ಹಿಚುಕ ಬಾರದೆ ಸುಂಟರಗಾಳಿ ಎನ್ನುವುದನ್ನು “ಸುಂಟರಗಾಳಿ” ಎನ್ನುವ ಕವಿತೆಯಲ್ಲಿ ಹಾಗೂ ಹಲವು ಜಾತಿ ಮತಗಳ ಹೆಸರಿನಲ್ಲಿ ತಲೆಯೆತ್ತಿರುವ ಸಂಘರ್ಷ ಸಮಿತಿಗಳು ಗಂಭೀರವಾದ ಕಾಳಜಿಗಳನ್ನು ಆಳದಲ್ಲಿ ಹೊಂದಿದ್ದರು ಸ್ವಹಿತಾಶಕ್ತಿಯ ಹೆಸರಿನಲ್ಲಿ ಚಿದ್ರಗೊಳ್ಳುತ್ತಿರುವುದನ್ನು “ಈಡುಗಾಯಿ” ಕವಿತೆಯ ಮೂಲಕ ಕವಿ ತನ್ನ ಪ್ರಾಮಾಣಿಕತೆಯನ್ನು ತೋರಿದ್ದಾರೆ.
ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ವೈಚಾರಿಕ ಸಂಘರ್ಷವನ್ನು ಹಿಡಿದಿಡುವಲ್ಲಿ “ಗುಡಿಸಿಲಿನೊಳಗೊಂದು ಬೆಳ್ಳಿಚುಕ್ಕಿ” ಕವನದಲ್ಲಿ ಕವಿ ಚಂದವಾದ ವಿವರಣೆಯನ್ನು ನೀಡಿದ್ದಾರೆ. ಬಡತನ ಮತ್ತು ಹಸಿವು ಬೇಡುವಂತೆ ಮಾಡುವುದು ಸಾಮಾನ್ಯವಾಗಿದೆ. ಸವರ್ಣಿಯರ ಮನೆಗಳಲ್ಲಿ, ಹಬ್ಬ ಹರಿ ದಿನಗಳಲ್ಲಿ, ಊಟ ಬೇಡುವ ಸಂದರ್ಭದಲ್ಲಿ ಮಂಕರಿ ಒಳಗಿನ ಪಾತ್ರೆ ಪಗಡೆಗಳು ಒಂದು ಪುಟ್ಟ ಅಂಗಡಿಯೆ ಸರಿ ಎನ್ನುವ ಸತ್ಯವನ್ನು ಕವಿ “ಪುಟ್ಟ ಅಂಗಡಿ” ಕವಿತೆಯಲ್ಲಿ ಸ್ವತಃ ಅನುಭವಿಸಿದ್ದಾರೆ. ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿ ಎಂದು ವೈಚಾರಿಕವಾಗಿ ಬದುಕಿ ತೋರಿಸಿದ ಎಚ್ ಎನ್ ನರಸಿಂಹಯ್ಯ ಅವರ ಅನುಪಸ್ಥಿತಿಯನ್ನು ನೆನೆಯುತ್ತಾ ಲಾಲ್ ಬಾಗ್ ನ “ಮುಂಜಾನೆ ಗೆಳೆಯ” ಎಂದು ಕವಿ ತನ್ನ ಕವಿತೆಯಲ್ಲಿ ವ್ಯಕ್ತಪಡಿಸಿದ್ದಾರೆ.
ವ್ಯವಸಾಯ ಮನೆ ಮಂದಿ ಎಲ್ಲ ಸಾಯ ಎಂದು ಹೇಳುವಂತೆ ಗೀಚಿದ ಭೂಮಿಗೆರೆ ನಿನ್ನದಾಗಲಿಲ್ಲವಲ್ಲ ಎಂದು ಕವಿ “ನೇಗಿಲ ಯೋಗಿ” ಕವಿತೆಯ ಮೂಲಕ ಮರುಕ ಪಡುವುದನ್ನು ನಾವು ಗಮನಿಸಬಹುದು. ದುಡಿಮೆ ಯಾರದೋ ಪ್ರತಿಫಲ ಇನ್ನಾರದೋ ಎನ್ನುವ ಜೀತ ಪದ್ಧತಿಯನ್ನು ನೆನಪಿಗೆ ತರುವ “ಕೆಬ್ಬೆನೆಲ” ಕವಿತೆ ಮನಮುಟ್ಟುತ್ತದೆ. ನೀರಿಗಾಗಿ ಕಾದು ನಿಲ್ಲುವ, ಕಾದು ಕಾದು ಕಡೆಗೆ ಜೀವಕ್ಕಾಗಿ ಜೀವ ಉಳಿಸಿಕೊಳ್ಳಲು ತಾವೇ ನೀರು ಸೇದಿ ಹೊಸ ಬದಲಾವಣೆಗೆ ನಾಂದಿಯಾಗುವ ಹೆಂಗಸರ ಹೋರಾಟ ನಿಜಕ್ಕೂ “ಕಪಲೇಬಾವಿ” ಕವಿತೆಯನ್ನು ಓದಿದಾಗ ಮೈನವಿರೇಳುತ್ತದೆ.
ಹೀಗೆ ಕವಿ ಡಾ. ಶಿವರಾಜ್ ಬ್ಯಾಡರಹಳ್ಳಿ ಅವರು ತಮ್ಮ ಕವಿತೆಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ಕನ್ನಡಿಯಂತೆ ತೋರಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಇದಲ್ಲದೆ ಮೂಕ, ಚಿತ್ರಾನ್ನ, ನನ್ನ ಕೇರಿ, ನೀಚ ಬುದ್ಧಿಯ ಬಿಡು ನಾಲಿಗೆ, ಮೊಗ್ಗು, ಹಸಿರು ಟವೆಲ್, ಎಂಥ ಚಂದದ ಹೆಸರು ಸುನಾಮಿ, ಮುಂತಾದ ಕವಿತೆಗಳ ಮೂಲಕ ಬದಲಾವಣೆಗೆ ತುಡಿಯುವ ಮನಸ್ಸನ್ನು ತೋರಿದ್ದಾರೆ. ಡಾ ಶಿವರಾಜ್ ಬ್ಯಾಡರಹಳ್ಳಿ ಅವರ ಕವಿತೆಗಳಲ್ಲಿ ವಿಷಾದವಿದೆ, ಸ್ಥಗಿತಗೊಂಡ ಸಮಾಜದಲ್ಲಿ ಬೆಳವಣಿಗೆಗಾಗಿ, ಬದಲಾವಣೆಗಾಗಿ ತಹತಹಿಸುವ ಪ್ರಾಮಾಣಿಕ ಮನಸ್ಸು ಕವಿಯದಾಗಿದೆ. ಡಾ. ಶಿವರಾಜ್ ಬ್ಯಾಡರಹಳ್ಳಿ ಅವರು ಈ ದಿಸೆಯಲ್ಲಿ ಮುಂದುವರೆಯಲಿ ಎಂದು ಹಾರೈಸೋಣ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…