ಬಿದಿರ ತಡಿಕೆ (ಲಲಿತ ಪ್ರಬಂಧಗಳು)
ಲೇಖಕರು :- ಡಾ.ಎಚ್.ಎಸ್.ಸತ್ಯನಾರಾಯಣ
ಪ್ರಕಾಶಕರು :- ಮಿಂಚುಳ್ಳಿ ಪ್ರಕಾಶನ(೨೦೨೩)
ನಾಡಿನ ಪ್ರಖ್ಯಾತ ವಿಮರ್ಶಕರಾದ ಡಾ.ಎಚ್.ಎಸ್.ಸತ್ಯನಾರಾಯಣ ಸರ್‌ರವರ ಹೊಸ ಪುಸ್ತಕ “ಬಿದಿರ ತಡಿಕೆ”. ಇದೊಂದು ಲಲಿತ ಪ್ರಬಂಧಗಳ ಪ್ರಕಾರವೇ ಆದರೂ ನನ್ನ ಪ್ರಕಾರ ಇದು ಲೇಖಕರ ಅನುಭವ ಕಥನ. ಎಂದಿನಂತೆ ಅವರ ಸಹಜ ಸ್ವಭಾವವಾದ ಪ್ರಸನ್ನತೆ, ಲವಲವಿಕೆ ಇಲ್ಲಿನ ಬರಹಗಳ ಪ್ರಧಾನಗುಣ. “ದೊಡ್ಡ ಪುಸ್ತಕವನ್ನು ಓದುವ ವ್ಯವಧಾನವನ್ನೇ ನಮ್ಮ ಕಾಲ ಕಿತ್ತುಕೊಂಡಿದೆ” ಎಂಬ ಬೇಸರವನ್ನು ತೋರುತ್ತಲೇ “ಸಂಖ್ಯೆಗೆ ಮಹತ್ವ ಕೊಡದ ನಾನು ಇರುವಷ್ಟನ್ನೇ ಪುಸ್ತಕ ರೂಪದಲ್ಲಿ ಹೊರತರುತ್ತಿದ್ದೇನೆ” ಎನ್ನುತ್ತಾರೆ.
ಇಲ್ಲಿನ ಪ್ರಬಂಧಗಳ ಒಟ್ಟು ಸಂಖ್ಯೆ ಒಂಬತ್ತು. ಒಂಬತ್ತು ಪ್ರಬಂಧಗಳೆಂಬ ಗ್ರಹಗಳ ನಡುವಿನ ತೇಜಸ್ವಿಪ್ರಭಾವದ ನಗುಮೊಗದ ಲೇಖಕರು ನೇಸರನಂತೆ ಪ್ರಜ್ವಲಿಸುತ್ತಿರುವ ಕೃತಿ ಇದು. ನೇಸರ ಪದವನ್ನೇ ಏಕೆ ಬಳಸಿದೆನೆಂದರೆ ಪುಸ್ತಕದ ಎಂಟನೇ ಪ್ರಬಂಧದಲ್ಲಿ ಈ ಪದ ಕುರಿತು ಲೇಖಕರು ಹಾಡೊಂದನ್ನು ನೆನಪಿಕೊಳ್ಳುತ್ತಾರೆ. ಇಂದು ಲೇಖಕರ ಮನೆಯಲ್ಲಿ ಅತ್ಯುತ್ತಮವಾದ ಗ್ರಂಥಸಂಗ್ರಹವಿರುವುದಕ್ಕೆ ಈ ಪದವೇ ಮೂಲಕಾರಣ ಹೇಗಾಯ್ತು ಎಂದು ಬಹಳ ಆದರ-ಗೌರವಗಳಿಂದ ನೆನಪಿಸಿಕೊಳ್ಳುತ್ತಾರೆ.
“ಕಿರಿದರೊಳ್‌ಪಿರಿದನ್ನು ಹಿಡಿದು ತೋರುವ ಗುಣ” ಹೊಂದಿರುವ ಈ ಪುಸ್ತಕದ ಪ್ರಕಟಣಾ ಪೂರ್ವ ಮಾತುಕತೆಯಿಂದ ಪುಸ್ತಕ ಬಿಡುಗಡೆ ಸಮಾರಂಭದವರೆಗಿನ ವಿವಿಧ ಹಂತಗಳ “ಐ ವಿಟ್ನೆಸ್” ನಾನು. ಅಷ್ಟೇ ಅಲ್ಲ , ಇಲ್ಲಿನ ಪ್ರಬಂಧಗಳಲ್ಲಿ ಪ್ರಸ್ತಾಪವಾಗಿರುವ ಹಲವು ವಸ್ತುವಿಚಾರಗಳ ಕುರಿತು ಲೇಖಕರೊಂದಿಗೆ ಆಗಾಗ್ಗೆ ಚರ್ಚೆ ಮಾಡುತ್ತಾ ಇದರೊಂದಿಗೆ ಪೂರಕವಾದ ವಿನೋದ ಪ್ರಸಂಗಗಳನ್ನು, ಬೇಸರದ ಅಂಶಗಳನ್ನು ಮಾತನಾಡಿರುವುದಕ್ಕೆ ಪ್ರಮುಖ ಸಾಕ್ಷಿದಾರನೂ ನಾನಾಗಿದ್ದೇನೆ.
ನಿತ್ಯವೂ ನಾವು ನೋಡುವ, ಒಡನಾಡುವ ಅದದೇ ಪಾತ್ರಗಳನ್ನು ಲೇಖಕರು ನೋಡುವ ದೃಷ್ಟಿಯೇ ವಿಭಿನ್ನ. ರವಿ ಕಾಣದನ್ನು ಕವಿ ಕಂಡ ಎಂಬ ಮಾತಿನಂತೆ ಲೇಖಕರು ಸ್ವತ: ವಿಮರ್ಶಕರೂ ಆಗಿರುವುದರಿಂದ ಕವಿ ಕಾಣದನ್ನೂ ವಿಮರ್ಶಕ ಕಾಣುವ ಸಾಧ್ಯತೆಗಳನ್ನು ನಾವಿಲ್ಲಿ ಗುರುತಿಸಬಹುದು. ಮಗುಸಹಜ ಮುಗ್ಧತೆ ಲೇಖಕರ ಪ್ರಧಾನಗುಣ. ಆ ಗುಣದ ಪ್ರತಿಫಲವೇ ಇಲ್ಲಿನ ಬರಹಗಳು.
ಈ ಬರಹಗಳೊಂದಿಗೆ ನನಗೆ ಒಂದುರೀತಿಯ ಆತ್ಮೀಯ ನಂಟು. ಅದಕ್ಕೆ ಕಾರಣ ನನ್ನ ಮತ್ತು ಲೇಖಕರ ಊರು ಒಂದೇ ಆಗಿರುವುದು. ಪ್ರಬಂಧಗಳಲ್ಲಿ ಅಲ್ಲಲ್ಲಿ ಬರುವ ಪ್ರದೇಶಗಳಲ್ಲಿ ನಾನೂ ಓಡಾಡಿರುವ ಜೊತೆಗೆ ಹಲವು ಘಟನೆಗಳ ವ್ಯಕ್ತಿಗಳು, ಪ್ರಸಂಗಗಳು ಲೇಖಕರ ಒಡನಾಟದಿಂದಾಗಿ ಸ್ವಾನುಭವಕ್ಕೆ ಬಂದಿರುವುದು ಸಹ ನನಗೆ ಸಂತಸದ ವಿಚಾರ.
ಪ್ರಾತ:ಕಾಲದ ದನಿಗಳು ಪ್ರಬಂಧದಲ್ಲಿ ಲೇಖಕರು ಬೀದಿಬೀದಿಗಳಲ್ಲಿ , ರಸ್ತೆ ಬದಿಗಳಲ್ಲಿ ಮಾರಾಟ ಮಾಡುವವರ ಕುರಿತು ತುಂಬು ಆತ್ಮೀಯತೆಯಿಂದ ಮಾತನಾಡುವ- ಒಡನಾಡುವ ಪರಿ ನನಗೆ ಹೊಟ್ಟೆಉರಿಸುತ್ತದೆ. ಒಂದೇ ಊರಿನ ನೀರು ಕುಡಿದು,ಗಾಳಿ ಉಸಿರಾಡುವ ನನಗೇಕೆ ಹಿರಿಜೀವಗಳೊಂದಿಗೆ ಅವರಷ್ಟು ಆತ್ಮೀಯವಾಗಿ ಮಾತನಾಡಲು ಆಗುವುದಿಲ್ಲವೆಂದು ಬಹಳ ಸಲ ಚಿಂತಿಸಿದ್ದೇನೆ. ಅವರ ಮನೆಯ ಪಾತ್ರೆಗಳಿಗೆ ಕಲಾಯಿ ಹಾಕಿದ ಅದೇ ಕಲಾಯಿ ಸಾಬರು ನಮ್ಮನೆಯ ಪಾತ್ರೆಗಳಿಗೂ ಕಲಾಯಿ ಹಾಕಿರಬಹುದೆಂಬ ಕಲ್ಪನೆಯೂ ಜೊತೆಗೆ ಹೆಮ್ಮೆಯೂ ನನಗಿದೆ.
“ಕಾಲವೆಂಬ ರೈಲುಗಾಡಿ” ಪ್ರಬಂಧ ದೀರ್ಘವಾಗಿರುವ ಜೊತೆಗೆ ನಮ್ಮ ಜೀವನ ರೈಲಿನೊಂದಿಗೆ ತಳಕು ಹಾಕಿಕೊಂಡಿರುವ ವಿಸ್ಮಯವನ್ನು ತೆರೆದು ತೋರುತ್ತದೆ. ಹತ್ತಾರು ಬಾರಿ ನಾಡಿನ ಹಲವು ಊರುಗಳಿಗೆ ಲೇಖಕರೊಂದಿಗೆ ರೈಲು ಪ್ರಯಾಣ ಮಾಡಿರುವ ನನಗೆ ಈ ಬರಹ ಓದುತ್ತಿದ್ದಂತೆ ಆ ಎಲ್ಲಾ ಪ್ರಯಾಣದ ನೆನಪುಗಳು ಕಣ್ಣೆದುರಿಗೆ ಹಾದುಹೋದಂತಾಯಿತು. ಪ್ರವಾಸದ ಸಂದರ್ಭದಲ್ಲಿ ಏನಾದರೂ ತಿಂಡಿ ತಿನ್ನುವ ಅಭ್ಯಾಸ ಇರುವ ಲೇಖಕರು ತಮ್ಮ ಸಹಪ್ರಯಾಣಿಕರಿಗೆ ತಿಂಡಿ ಹಂಚದೇ ತಿನ್ನುವುದೇ ಇಲ್ಲ. ಲೇಖಕರು ತಮ್ಮ ಬಳಿ ಇದ್ದ ಅವಲಕ್ಕಿಯನ್ನು ಪಕ್ಕದಲ್ಲಿದ್ದ ಹಿರಿಯ ಸಹಪ್ರಯಾಣಿಕರಿಗೆ ತೆಗೆದುಕೊಳ್ಳಿ ಎಂದರು. ಅವರೋ ಜಪ್ಪಯ್ಯ ಎಂದರೂ ಪಡೆಯಲೊಪ್ಪದವರು. ಆದರೆ ನಮ್ಮ ಲೇಖಕರು ಎಳೆಮಕ್ಕಳಂತೆ ಒತ್ತಾಯಿಸಿ ಅವರಿಗೂ ಎರಡು ಹಿಡಿ ಅವಲಕ್ಕಿ ಕೊಟ್ಟ ಮೇಲೆನೇ ತಾವು ಅವಲಕ್ಕಿ ತಿಂದದ್ದು. ಹೀಗೆ ಎಲ್ಲೇ ಇದ್ದರೂ ತಮ್ಮ ಮಾತೃಹೃದಯದಿಂದ ಗೆಲ್ಲಬಲ್ಲ ಹಸನ್ಮುಖಿಗಳು ಸತ್ಯನಾರಾಯಣ ಸರ್.
“ಪರೀಕ್ಷೆಗಳು ಸಾರ್ ಪರೀಕ್ಷೆಗಳು” ಮಕ್ಕಳು ಮತ್ತು ಶಿಕ್ಷಕರ ಸಂಬಂಧಗಳ ಕುರಿತು ಬೆಳಕು ಚೆಲ್ಲುತ್ತಾ, ಶಿಕ್ಷಕರ ವಿಭಿನ್ನ ಅವತಾರಗಳನ್ನು ಬಹಳ ಸೊಗಸಾಗಿ, ಹಾಸ್ಯಭರಿತವಾಗಿ ನಮ್ಮುಂದೆ ತೆರೆದಿಡುತ್ತಾರೆ. ನಾನೊಬ್ಬ ಶಿಕ್ಷಕನಾಗಿ ಇಲ್ಲಿನ ಸಂದರ್ಭಗಳನ್ನು ಖುಶಿಯಿಂದ ಓದಿದೆನಾದರೂ ಕೆಲವು ವಿಚಾರಗಳ ಬಗ್ಗೆ ಬೇಸರವಾಗುತ್ತದೆ. ಶಿಕ್ಷಣ ಕ್ಷೇತ್ರದ ಹಲವು ಓರೆಕೋರೆಗಳನ್ನು ತೋರಿಸುತ್ತಾ ಅದರ ಪರಿಹಾರದ ಬಗ್ಗೆಯೂ ದಾರಿ ತೋರುತ್ತಾರೆ.
“ಭೀಮಸೇನ ನಳಮಹಾರಾಜರು ಗಂಡಸರಲ್ಲವೇ” ಪ್ರಬಂಧದಲ್ಲಿ ಊಟ ತಿಂಡಿಗಳ ಬಗ್ಗೆ ಬಹಳ ರಸವತ್ತಾಗಿ ವರ್ಣಿಸುತ್ತಾರೆ. ನಿಜವಾಗಿಯೂ ಓದುಗರು ಈ ಪ್ರಬಂಧ ಅರ್ಥೈಸಿಕೊಳ್ಳಬೇಕೆಂದರೆ ಆಳವಾಗಿ ಓದುವುದನ್ನು ಬಿಟ್ಟು ಅವರ ಮನೆಗೇ ಬಂದು ಅವರ ಕೈಯಾರೆ ತಯಾರಾದ ಅಡುಗೆಯನ್ನು ಸವಿಯಬೇಕು. ಆಗ ಈ ಪ್ರಬಂಧದ ಹಿರಿಮೆ-ಗರಿಮೆ ಇನ್ನು ಹೆಚ್ಚಾಗಿ ಮನದಟ್ಟಾಗುತ್ತಾದೆ. ಎಲ್ಲ ಪ್ರಕಾರದ ಅಡುಗೆ ತಯಾರಿಕೆಯಲ್ಲಿ ಲೇಖಕರು ಸಿಧ್ಧಹಸ್ತರು. ಅದಕ್ಕೆ ಈ ತಿಂಗಳ ಹುಣ್ಣಿಮೆ ಬೆಳದಿಂಗಳೂಟಕ್ಕೆ ಲೇಖಕರನ್ನು ಅಡುಗೆ ಮಾಡಲು ಕರೆದಿದ್ದಾರೆ. ರುಚಿಕಟ್ಟಾಗಿ ಅಡುಗೆ ಮಾಡುವ ಜೊತೆಗೆ ಅದಕ್ಕೂ ಹೆಚ್ಚು ಪ್ರೀತಿಯಿಂದ ಅದನ್ನು ತಮ್ಮ ಕೈಯಾರೆ ಹೊಟ್ಟೆ ತುಂಬುವವರೆಗೂ ಒತ್ತಾಯಪೂರ್ವಕವಾಗಿ ಉಣಬಡಿಸುತ್ತಾರೆ.
ಲೇಖಕರ ಮನೆಗೆ ನೀವು ಯಾವಾಗಲೇ ಭೇಟಿ ಕೊಡಿ, ನಿಮ್ಮನ್ನು ಸ್ವಾಗತಿಸುವುದು ಅವರ ಮನೆಯ ತುಂಬಾ ಹರಡಿಕೊಂಡಿರುವ ಪ್ರಕಟಿತ ಮತ್ತು ಅಪ್ರಕಟಿತ ಪುಸ್ತಕಗಳ ರಾಶಿ. ಮುನ್ನುಡಿ ಅಥವಾ ಬೆನ್ನುಡಿಗಾಗಿ ಬಂದಂತಹ ಹಸ್ತಪ್ರತಿಗಳು, ಆಗಿನ್ನು ಪ್ರಕಟಗೊಂಡು ಶ್ರೀಯುತರ ವಿಮರ್ಶೆ ಕೋರಿ ಬಂದಂತಹ, ಗೌರವಪ್ರತಿಯಾಗಿ ಬಂದಂತಹ ಪುಸ್ತಕಗಳು ಮನೆ ತುಂಬಾ ಹರಡಿಕೊಂಡು ನಿಮ್ಮನ್ನು ಒಳಕರೆಯುತ್ತವೆ. ಹೀಗೆ ಸದಾ ಪುಸ್ತಕಗಳ ನಡುವೆ ಓಡಾಡಿಕೊಂಡು ಹಿರಿಯರನ್ನು ಓದಿಕೊಳ್ಳುತ್ತಾ, ಕಿರಿಯರಿಗೆ ಮುನ್ನುಡಿ-ಬೆನ್ನುಡಿ ಬರೆದುಕೊಡುತ್ತಾ ತಮಗಾದ ಅನುಭವಗಳನ್ನು “ಮುನ್ನುಡಿ-ಬೆನ್ನುಡಿಗಳೆಂಬ ಬೆಂಬಲದ ದಾರಿ” ಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾರೆ.
ಬಾಲ್ಯದ ಸಿಹಿನೆನಪುಗಳ ಜೊತೆಗೆ ಕನ್ನಡ ಭಾಷೆಯ ಒಲವನ್ನು- ಕನ್ನಡಿಗರ ಭಾಷಾ ಉದಾಸೀನತೆಯನ್ನು ನವಿರಾಗಿ ಬಿಡಿಸಿ ತೋರುವ ಪ್ರಬಂಧ “ಬಿದಿರ ತಡಿಕೆಯ ಹಿಂದೆ ಬಿಚ್ಚಲಾಗದ ಕಣ್ಣು”. ನೂರಾರು ಕನ್ನಡದ ಹಾಡುಗಳನ್ನು ಸದಾ ಗುನುಗತ್ತಲೇ ಇರುವ ಲೇಖಕರು ತಮ್ಮ ಬಾಲ್ಯದಲ್ಲಿ ಹೇಗೆಲ್ಲಾ ಹಾಡು ಕಲಿತರು ಎಂಬುದನ್ನು ತಿಳಿಸುತ್ತಾ ಅಂದಿನ ಸಿನಿಮಾ ಹಾಡುಗಳ ಶಕ್ತಿಯನ್ನು ನೆನೆಯುತ್ತಾರೆ. ಉಚ್ಛಾರಣೆ ದೋಷಗಳಿಂದ ಸಂಭವಿಸುವ ಅವಘಡಗಳನ್ನು, ಅದರಿಂದ ನಿರ್ಮಾಣವಾಗುವ ಹಾಸ್ಯ ಸನ್ನಿವೇಶಗಳನ್ನು ಪ್ರಸ್ತಾಪಿಸುತ್ತಾ ಕನ್ನಡ ಕವಿಗಣಗಳ ಸಾಲು ಮೆರವಣಿಗೆಯನ್ನು ನಮ್ಮುಂದೆ ಸಾಗುವಂತೆ ಮಾಡಿದ್ದಾರೆ.
ಮಕ್ಕಳಿರಲವ್ವ ಮನೆ ತುಂಬಾ…. ಎಂಬ ಹಿರಿಯರ ಮಾತನ್ನು ನೆನಪಿಸುವಂತಹ ಬರಹ “ಮಕ್ಕಳ ಮನವೆಂಬ ಮಾಯಾಲೋಕ”. ಪುಟ್ಟ ಮಕ್ಕಳಿಂದ ಮನೆಯಲ್ಲಿ ತುಂಬುವ ಸಂಭ್ರಮ-ಸಡಗರಗಳನ್ನು ಮಕ್ಕಳಂತೇ ಖುಶಿಯಿಂದ ಹಂಚಿಕೊಳ್ಳುತ್ತಾರೆ ಲೇಖಕರು. ಮಕ್ಕಳಿಗೆ ಇಡುವ ಹೆಸರುಗಳ ಆಧಾರದಲ್ಲಿ ನಡೆಯುವ ಅವಾಂತರಗಳು ಬಲು ಮೋಜಿನ ಸಂಗತಿಗಳಾಗಿ ಕಾಣಬರುತ್ತವೆ. ಮಕ್ಕಳು ಕೊಡುವ ಕಾಟ, ನೀಡುವ ತರ್ಲೆ ತಾಪತ್ರಯಗಳನ್ನು ಅನುಭವಿಸುವ ಹಿರಿಯರು “ದೇವರೇ ಇಂತಹ ಮಕ್ಕಳನ್ನು ಯಾಕಪ್ಪಾ ಕೊಟ್ಟೆ” ಎಂದು ಹೇಳಿ ಮುಗಿಸುವುದರೋಳಗೆ , ಆ ಮಕ್ಕಳು ತಮ್ಮ ಸುತ್ತಲೂ ಎಬ್ಬಿಸುವ ನಗೆಯಲೆಯೊಳಗೆ ತಾವು ತೇಲಿ ಸುಖ ಅನುಭವಿಸುವುದನ್ನು ನಾವೆಲ್ಲಾ ಕಂಡವರೇ ಅಲ್ಲವೇ ?
ತಮ್ಮ ಮನೆಗೆ ತಂದ ಹೊಸ ರೇಡಿಯೋ ಸಂದರ್ಭವನ್ನು ನೆನಪಿಸಿಕೊಳ್ಳುವ ಲೇಖಕರು, ಆ ನೆಪದಲ್ಲಿ “ಹಾಡು ಹಳೆಯದಾದರೇನು ?” ಪ್ರಬಂಧ ಬರೆಯುತ್ತಾರೆ. ಎಂಬತ್ತು-ತೊಂಬತ್ತರ ದಶಕದಲ್ಲಿ ಮನೆಗೆ ಹೊಸ ವಸ್ತು ತಂದಾಗ ಮಕ್ಕಳು, ನೆರೆ-ಹೊರೆಯವರು ಪಡುತ್ತಿದ್ದ ಸಂಭ್ರಮ-ಸಡಗರವನ್ನು ಎಷ್ಟೇ ವರ್ಣಿಸಿದರೂ ಈಗಿನ ಮಕ್ಕಳಿಗೆ ಅರ್ಥೈಸುವುದು ಬಲುಕಷ್ಟ. ಅಂತಹ ಸಡಗರದ ತಮ್ಮ ಬಾಲ್ಯದ ದಿನವನ್ನು ಪ್ರಸ್ತಾಪಿಸುವ ಈ ಬರಹ ಓದುಗರಿಗೂ ಆ ಸಡಗರವನ್ನು ದಾಟಿಸುತ್ತದೆ. ಅಂದಿನ ಸಿನಿಮಾ ಹಾಡುಗಳಲ್ಲಿ ಇರುತ್ತಿದ್ದ ಮೌಲ್ಯಗಳು ಹೇಗೆ ಒಂದಿಡೀ ಸಮುದಾಯವನ್ನು ಪ್ರಭಾವಿಸುತ್ತಿದ್ದವು ಎಂಬುದನ್ನು ಇಲ್ಲಿ ಪರೋಕ್ಷವಾಗಿ ಸೂಚಿಸುತ್ತಾರೆ.
ಕೊನೆಯ ಹಾಗೂ ಅಷ್ಟೇ ಪ್ರಮುಖವಾದ ಬರಹ ” ಸ್ನೇಹಲೋಕವೆಂಬ ಪರಿಮಳದ ಹಾದಿ”. ಒಮ್ಮೆಯಾದರೂ ಲೇಖಕರ ಸ್ನೇಹವಲಯದೊಳಗೆ ಬಂದವರಿಗೆ ಅವರ ಸ್ನೇಹದ ಮಾಧುರ್ಯವನ್ನು ಬಿಡಿಸಿ ಹೇಳಬೇಕಾಗಿಲ್ಲ. ಸಾಮಾನ್ಯ ದಾರಿಹೋಕರನ್ನು ಸಹ ಕೆಲವೇ ನಿಮಿಷಗಳಲ್ಲಿ ಮಾತನಾಡಿಸಿ ತಮ್ಮ ಸ್ನೇಹಲೋಕದ ಸದಸ್ಯರನ್ನಾಗಿ ಮಾಡಿಕೊಳ್ಳುವಂತಹ ಮುಗ್ಧತೆ-ಸ್ನೇಹಪರತೆ ನಮ್ಮ ಗುರುಗಳ ನರನಾಡಿಗಳಲ್ಲಿದೆ. ಬೇರೆ ರಾಜ್ಯದ , ಬೇರೆ ಭಾಷೆಯ ಜನರೊಂದಿಗೆ ಎಷ್ಟು ಆತ್ಮೀಯವಾಗಿ ಬೆರೆಯಬಲ್ಲರು ಎಂಬುದಕ್ಕೆ ಸಾಕ್ಷಿ ಈ ಬರಹ, ಮೊದಲ ಬರಹಕ್ಕೂ ಈ ಬರಹಕ್ಕೂ ಸಾಮ್ಯವಿದೆಯೆನಿಸಿದರೂ ಸಮಯ-ಸಂದರ್ಭಗಳು ಸಂಪೂರ್ಣ ಭಿನ್ನ.
ತಮ್ಮ ಅನುಭವಗಳನ್ನೇ ಬರಹವಾಗಿಸಿದ್ದರೂ ಅದರಲ್ಲಿನ ಪ್ರಾಮಾಣಿಕತೆ, ಖಚಿತತೆ ಮತ್ತು ಲವಲವಿಕೆ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಲೇಖಕರ ಜೀವನ ಪ್ರೀತಿ ಮತ್ತು ಜೀವಪರ ನಿಲುವುಗಳು ಇಲ್ಲಿನ ಮೂಲಸೆಲೆಯಾಗಿರುವುದನ್ನು ನಾವು ಗುರುತಿಸಬಹುದಾಗಿದೆ. ಬಾಲ್ಯದ ಅನುಭವಗಳನ್ನು ವರ್ತಮಾನಕ್ಕೆ ತಂದರೂ ಅದಕ್ಕೊಂದು ತಾಜಾತನದ ಮೆರಗು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಉತ್ತಮ ಪುಸ್ತಕಾವಲೋಕನ. ಪ್ರತಿ ಪ್ರಬಂಧದ ಒಳಬಂಧವನ್ನು
ಅದರ ಹೂರಣ ಸಮೇತ ಉಣಬಡಿಸಿದೆ. ಧನ್ಯವಾದ ಮತ್ತು ಅಭಿನಂದನೆ
ಲೇಖಕರಿಗೆ.