ವಿನಯ ಮತ್ತು ವಿವೇಕವನ್ನ ಮೈಗೂಡಿಸಿಕೊಂಡ ಗಜಲ್ಕಾರ
ಗಜಲ್ ಸಂಕಲನ : ‘ನೆರಳಿಗಂಟಿದ ನೆನಪು’
ಕವಿ : ಶಿವಕುಮಾರ ಕರನಂದಿ
ಬೆಲೆ : 99 ರೂಪಾಯಿಗಳು
ಪ್ರಕಾಶನ : ಕರನಂದಿ ಪ್ರಕಾಶನ
ಗಜಲ್ ಎಂದರೆ ಅದೊಂದು ಹೇಳತೀರದ ಮಧುರಾನುಭೂತಿ. ಹೂವಿನೆದೆಯಲ್ಲರಳಿದ ಮಧುಘಮದ ರಸಾನುಭಾವ. ಗಜಲ್ ಎಂದರೆ ಮೋಹಕˌ ಚುಂಬಕ ಕಥನಗಳ ಮುಗ್ಧ ಮಗುವಿನ ನಗೆ. ನೋವುಂಡ ಭಗ್ನ ಪ್ರಣಯ ಗೀತೆಗಳ ಕಾವ್ಯಪ್ರಕಾರವೂ ಹೌದು.
ಇತ್ತೀಚಿನ ಗಜಲ್ಕಾರರು ಪ್ರೀತಿ ಸದ್ದಿನ ಲೋಕವನ್ನು ಸೃಷ್ಟಿಸುವುದರ ಜೊತೆಗೆˌ ಮರುಕವಿಲ್ಲದ ಮನುಜ ಪಥ ಗರ್ಭದೊಳಗಿನ ನೋವುˌ ಹತಾಶೆ ಬಸವಳಿದು ಬೆವರುವ ಬಡವರ ಬದುಕುˌ ಸಾಮಾಜಿಕ ಅನಿಷ್ಟಗಳಾದ ಜಾತೀಯತೆˌ ಕೋಮುವಾದˌ ಜನಾಂಗೀಯ ತಾರತಮ್ಯದ ಭೀಬಿತ್ಸ ಘಟನಾವಳಿಗಳಿಗೆ ತಮ್ಮನ್ನ ತಾವು ತೆರೆದುಕೊಳ್ಳುತ್ತಿರುವುದು ಕನ್ನಡ ಗಜಲ್ ಲೋಕದ ಅದ್ಭುತವೇ ಸರಿ. ಈ ದೆಸೆಯ ಪ್ರಯತ್ನದಲ್ಲಿ ಬಾಧೆ ಬದುವುಗಳಿಗಪ್ಪುವ ಮೃದು ಮನಸೇ ಬಾಗಲಕೋಟೆಯ ಯುವ ಗಜಲ್ಕಾರ *ಶಿವಕುಮಾರ ಕರನಂದಿ* ಯವರಾಗಿರುವುದು ಸಂತೋಷದ ಸಂಗತಿ.
ಕರನಂದಿಯವರು ಸೌಂದರ್ಯ ಪ್ರಜ್ಞೆಯನ್ನ ಸಾಪೇಕ್ಷ ನೆಲೆಗೆ ಅಣಿಗೊಳಿಸುವ ಕ್ರಿಯಾಶೀಲ ಕವಿ. ತನ್ನನ್ನು ತಾನು ಸದಾ ಅನ್ವೇಷಣೆಗೆ ಒಳಪಡಿಸಿಕೊಳ್ಳುತ್ತಾˌ ಹೊಸತನದೆಡೆಗೆ ಹಾಯುತ್ತಾ ಕಲಿತ ಫಲಿತವೇ *ನೆರಳಿಗಂಟಿದ ನೆನಪು* ಗಜಲ್ ಸಂಕಲದ ಹುಟ್ಟಿಗೆ ಕಾರಣವೆನ್ನಬೇಕು. ಪರಿಣಾಮ ಪ್ರೀತಿ-ನೀತಿˌ ಅನುಭಾವ- ಅನುರಾಗˌ ಭಕ್ತಿ- ಭಾವಗಳಿಂದಾವೃತವಾದ ಬಹು ಸುಂದರ ಗಜಲ್ ಗುಚ್ಚವನ್ನ ಓದುಗರ ಒಡಲಿಗೆ ಒಡ್ಡಿದ್ದಾರೆ.
ಈ ಗಜಲ್ ತಾರೆಗಳ ತೋಟದಲ್ಲಿ ವಿಹರಿಸಿದಾಗ ಈ ಕ್ಷೇತ್ರದ ಮಾಧುರ್ಯಕ್ಕೆ ಒಪ್ಪುವ ಛಂದಸ್ಸನ್ನು ಹಿಡಿದಿಟ್ಟುಕೊಂಡೇˌ ಅಲಂಕಾರಿಕತೆಯನ್ನ ಹೆಣೆದು ಗೇಯತೆಗೆ ಭಂಗ ಬರದಂತೆ ಒಗ್ಗಿಸಿˌ ಬಗ್ಗಿಸಿ ಬರೆಯುತ್ತಾ ಮುಗಿಲನಗೆ ಮಿಂಚಿನಲಿ ಮಿನುಗಿದ್ದಾರೆ. ಜೀವ ತಂತಿಯ ಮೀಟಿ ಜನ ಯಾತನೆಯ ದಿಗಿಲುಗಳಿಗೆ ಧ್ವನಿಯಾಗುತ್ತಾ ಹೊಸ ಪ್ರಯೋಗಕ್ಕೆ ಅಣಿಯಾಗಿದ್ದಾರೆ. ಬದುಕ ಬಯಲಲಿ ಬೆಳೆದ ಹುಸಿ ಕೊಯ್ಲನ್ನು ಕಿತ್ತಿ ಮಾನವೀಯತೆಯ ಬೇರನ್ನು ಸಂಕಲನದುದ್ದಕ್ಕೂ ನೆಟ್ಟಿದ್ದಾರೆ. ಸ್ವಾಸ್ಥ್ಯ ಸಮಾಜದ ಹವಣಿಕೆಗೆ ಕಾತರಿಸುವ ಇವರ ಗಜಲ್ಗಳು ಬೆಳಕ ಹಡೆವ ಸೂರ್ಯನನ್ನು ಹುಡುಕಿ ಆ ಕಿರಣ ಕಾಂತಿಯನ್ನ ಕತ್ತಲೆಗೆ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ಕಾರಣಕ್ಕಾಗಿ ದೂರ ಭಾರಗಳ ದಣಿವಿಗೆ ಇವರ ಗಜಲ್ ಗಳು ಹೆಗಲಾಗಿ ಮನ ತಣಿಸುತ್ತವೆಂಬುದು ನನ್ನ ಬಲವಾದ ನಂಬುಗೆಯಾಗಿದೆ. *ಮೈ ಮನದ ತುಂಬೆಲ್ಲಾ ಭಾವನೆಗಳ ಹೋಯ್ದಾಟ ಹೊತ್ತು ˌ ಅಲೆವ ಮಾತಿನಲಿ ಪಿಸುಧ್ವನಿಯ ಆಟವನು ಹೆತ್ತು ˌ ಹೃನ್ಮನ ಸೆಳೆಯುವ ಗಂಭೀರ ಗತ್ತು ˌ ಇವೆಲ್ಲಾ ಇವರ ಗಜಲಿನ ಸೊತ್ತು* ಇದನ್ನ ಮೆಲ್ಲುತ್ತಾ ಮುಂದಡಿ ಇಡುತ್ತಾ ಈ ಕೆಳಗಿನ ಶೇರನ್ನು ಅವಲೋಕಿಸಿದಾಗ ಕವಿಯ ಆಂತರ್ಯದ ಸೊಗಸನ್ನು ಆಸ್ವಾದಿಸಿದಂತಾಗುತ್ತೆ.
*ಬಂದೂಕು ತುಪಾಕಿಯನ್ನ ಬೇರು ಸಮೇತ ತೆಗೆಯಬೇಕಿದೆ*
*ಶಾಂತಿಮಂತ್ರವನು ಸಹನೆಯಲಿ ಜಪಿಸುತ ಬೆಳಗಲಿ ಭಾರತ*
ಬಂದೂಕು ಮತ್ತು ತುಪಾಕಿಯು ಏನನ್ನು ಪ್ರತಿನಿಧಿಸುತ್ತವೆ.? ಇವುಗಳ ಕಾರ್ಯವೇನು? ಇವೆರಡು ಗಾತ್ರದಲಿ ದೊಡ್ಡದು – ಚಿಕ್ಕದು ಹೌದಾದರೂ ಇವು ಕೊಲೆ ಬೆಸೆವ ಸಾಧನಗಳೇ ಹೌದು. ಮನುಕುಲಕ್ಕೆ ಮಾರಕವಾಗಿರುವ ಇವುಗಳು ಮಾಡುವ ಹಾನಿಯನ್ನು ಎಚ್ಚರಿಸುತ್ತಾ ಬಂದೂಕಿನ ಬಾಯಿಗೆ ಬೀಗ ಜಡೆದು ಬುದ್ಧನ ಭಾರತˌ ಗಾಂಧಿಯ ಗುಡಿಯಲಿ ಶಾಂತಿ ಸಹನೆಯ ಝರಿ ಉಕ್ಕಿ ಹರಿಯಲೆಂದು ಆಶಿಸುತ್ತಾ… ಮನುಜ ಮತವು ನೆಮ್ಮದಿಯ ನೆರಳಲ್ಲಿ ನಡೆಯಲೆಂಬ ಮಹದಾಸೆಯನ್ನು ಮೇಲಿನ ಶೇರ್ ಮೂಲಕ ಸಾದರ ಪಡಿಸುತ್ತಾರೆ.
*ಕಲ್ಲು ದೇವರ ಮರೆತು ಕಣ್ಣೆದುರಿಗಿನ ಶಿವಾಲಯವನ್ನೊಮ್ಮೆ ನೋಡಿಬಿಡು*
*ಜಗದ ಹಸಿವು ಉಣಿಸುವ ಲೋಕಪಾಲನಿಗೆ ಪೂಜೆ ಸಲ್ಲಬೇಕಲ್ಲ*
ಕಲ್ಲು ದೇವರು ಮತ್ತು ಕಣ್ಣೆದುರಿನ ದೇವರ ಕಲ್ಪನೆಯು ಅಮ್ಮನ ಪಾದದಡಿಯ ಸ್ವರ್ಗದ ಪರಿಕಲ್ಪನೆಗೆ ತಳುಕಿಸಿ ಬದುಕಿನ ಸತ್ಯ ದರ್ಶನ ಮಾಡಿಸುತ್ತಾ ನಕಲಿ ನಡೆ ಮತ್ತು ಒಜ್ಜೆಯಲ್ಲದ ಹೆಜ್ಜೆಗೆ ತಡೆಯೊಡ್ಡಿ ˌ ಸಜ್ಜ ನಡಿಗೆಯನ್ನು ಗಜಲೆಂಬ ಲೋಕಗೀತೆಯಲ್ಲಿ ಹಿಡಿದಿಡುವಾಗ ಕಣ್ಣೆದುರಿನ ದೇವರಾದ ಹಡೆದವ್ವನ ಆಪ್ತತೆ…ಹಸಿವು ನೀಗಿಸಿ ಬದುಕು ಕಟ್ಟುವ ಅಪ್ಪನ ಅಪ್ಯಾಯತೆ…ಅವರ ತ್ಯಾಗ ಬಲಿದಾನವನ್ನೆಂದೂ ಮರೆಯಕೂಡದೆಂದು ನೆನಪಿಸುತ್ತಾ… ಕಲ್ಲು ದೇವರಿಗೆ ಕೈ ಮುಗಿವ ಮೂರ್ಖತನಕ್ಕೆ ಪರೋಕ್ಷ ಪೆಟ್ಟು ಕೊಟ್ಟಿದ್ದಾರೆ. ಜೊತೆಗೆ ಸಕಲ ಜಲಚರ ˌಪಶುˌ ಪಕ್ಷಿ ˌ ಪ್ರಾಣಿಗಳು ˌಜೀವ ಜಂತುಗಳಿಗೆ ಅನ್ನ ಆಹಾರವ ನೀಡಿ ಜಗ ಬೆಳಗುವ ಜಗದೀಶನಿಗೆ ನೀನೇನು ಕೊಡಬಲ್ಲೆ ಎಂದು ಪ್ರಶ್ನಿಸುತ್ತಾ ನಿರಾಕಾರ ನಿರೀಶ್ವರ ಸರ್ವಂತರ್ಯಾಮಿ ಆಗಿರುವ ಅವನಿಗೆ ಭಕ್ತಿಯ ಫಲವಲ್ಲದೇ ಮತ್ತೇನು ಕೊಡಲು ಸಾಧ್ಯವೆಂದು ತಮಗೆ ತಾವೇ ಪ್ರಶ್ನಿಸಿಕೊಳ್ಳುತ್ತಾರೆ. ಹಾಗಾಗಿ ನಿನ್ನ ಸಕಲವೂ ನಿನ್ನಲ್ಲೇ ಇರಲಿ ಭಕ್ತಿಯಲ್ಲದೇ ಮತ್ತೇನು ಬೇಡ ಎಂಬುದನ್ನು ಕವಿಯು ತನ್ನ ಗಜಲಿನ ಮೂಲಕ ಸಾರುತ್ತಾನೆ.
ಇಲ್ಲಿ ಭಕ್ತಿ ಮತ್ತು ಪ್ರೀತಿಯನ್ನ ಸ್ಥಾಯಿ ಭಾವವಾಗಿ ಚಿತ್ರಿಸಿˌ ಉಳಿದೆಲ್ಲವೂ ನಶ್ವರವೆಂಬ ಲೌಕಿಕ ಸತ್ಯವನ್ನ ಸಾಕ್ಷೀಕರಿಸುತ್ತಾ ಸಾಗುವ ಕವಿˌ ಸತ್ಯ ಮಿಥ್ಯಗಳ ಸಂಘರ್ಷದಲ್ಲಿ ಸತ್ಯವೇ ಅಂತಿಮವೆಂಬ ನೀತಿಯೆಡೆ ನಿಲ್ಲುತ್ತಾರೆ.
ಹೀಗೆ ವಿಭಿನ್ನ ರೀತಿಯ ಗಜಲುಗಳನ್ನು ಕಟ್ಟುತ್ತಾ ಪ್ರೀತಿ- ಪ್ರಣಯˌ ಭಕ್ತಿ – ಅನುರಾಗದ ಜೊತೆಯಲ್ಲಿ ನಡೆಯುತ್ತಾ ವರ್ತಮಾನ ಸಂಕಟಗಳಿಗೆ ಮುಖಾಮುಖಿಯಾಗಿ ನೋವುಗಳಿಗೆ ಮಿಡಿಯುತ್ತಾ ˌ ಮಾನವೀಯತೆಯ ತೆಳುಪದರಿಗೆ ಧಕ್ಕೆಯಾಗದಂತೆ ಕಾಪಿಟ್ಟುಕೊಂಡು ಮೂರ್ತ ಮತ್ತು ಅಮೂರ್ತದ ಸಂಗಮಿತ ಭಾವಗಳಿಂದ ಗಜಲ್ ಗಳನ್ನು ಹೆಣೆದು ಓದುಗರೆದೆಗೆ ದಾಟಿಸುತ್ತಾ ಅಪರಿಮಿತ ಆನಂದˌ ಅನನ್ಯ ಅಲ್ಹಾದವನ್ನು ನೀಡುತ್ತಾ ಗಜಲ್ ರಚನೆಯ ನಿಯಮಗಳಿಗೆ ಒಗ್ಗುತ್ತಾ ಇಡಿ ಸಂಕಲನ ನಡಿಸಿದ ಪರಿಗೆ ಬೆರಗೇ ಸರಿ.
ಈ ಬೆರಗನ್ನ ಕಾಪಿಟ್ಟುಕೊಂಡೇ ಜಗತ್ತನ್ನ *ಕ್ಷ ಕಿರಣ* ನೋಟದಲಿ ನೋಡಬೇಕಿದೆ. ಅನುಭವ ಮತ್ತು ಅನುಭಾವಿಕ ನೆಲೆಗಳಿಗೆ ತನ್ನ ತಾ ಟಂಕಿಸಿಕೊಂಡು ಉಳ್ಳವರ ನಾಲಿಗೆಗೆ ಉಳುವವನು ತುತ್ತಾದಾಗ ಇವರ ಕಾವ್ಯಕ್ಕೆ ರೆಕ್ಕೆ ಕಟ್ಟಿ ಹಾರಿಸಬೇಕಿದೆ. ಕೊಲೆಬೆಸೆವ ಕಲೆಯೊಳಗಿನ ಕುತಂತ್ರವನ್ನ ಭೇದಿಸಿˌ ಸತ್ಯ ದರ್ಶನ ಮಾಡಿಸುವುದು ಕವಿಯ ಕಾಯಕವಾಗಬೇಕಿದೆ. ಜೊತೆಗೆ
ಪ್ರೇಮಮಯ ಭಾವ ಹೊಸೆದು ಮನತಣಿಸುವ ಗಜಲ್ ಗಳು ಇವರಿಂದ ಇನ್ನೂ ಅವಿರ್ಭವಿಸಲೆಂದು ಆಶಿಸುತ್ತೇನೆ. ಈ ದಿಶೆಯ ಪ್ರಯತ್ನದಲ್ಲಿ ಕರನಂದಿಯವರು ಯಶಸ್ಸು ಕಾಣಲಿ. ಈ ಮುಖೇನ ಗಜಲ್ ಲೋಕದಲ್ಲಿ ಇವರು ಸ್ಥಾಯಿಯಾಗಿ ನೆಲೆಸಲೆಂದು ಮನದುಂಬಿ ಹಾರೈಸುವೆ.
ಅಬ್ದುಲ್ ಹೈ.ತೋರಣಗಲ್ಲು
ಸಾಹಿತಿಗಳು ˌಬಳ್ಳಾರಿ
ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟಿಸಿರುವ "ಇನ್ನು…
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…