Categories: ಕತೆಗಳು

ಜ್ಯೋತಿ ಕುಮಾರ್.ಎಂ ಅವರು ಬರೆದ ಸಣ್ಣಕತೆ ‘ಕನವರಿಕೆ’

ಅವನು, ಅವಳ ಬರುವಿಕೆಗಾಗಿ, ತುಂಬ ಹೊತ್ತಿನಿಂದ ಕಾಯುತ್ತಿದ್ದ. ಚಡಪಡಿಕೆಯಿಂದಾಗಿ,ಶತಪಥ ತುಳಿಯುತ್ತಿದ್ದ. ಅವಳು ಬಂದ ಹಾಗೆ ಮಾಡುತ್ತಿದ್ದಳು,  ಆದರೆ ಬರುತ್ತಿರಲಿಲ್ಲ. ಕರೆದರೆ, “ಈಗ ಬಂದೆ”, “ಇಗೋ ಬಂದೆ”, “ಬಂದೆ ಬಿಟ್ಟೆ” ಅನ್ನುತ್ತಿದ್ದಳು, ಆದರೆ ಬರುತ್ತಿರಲಿಲ್ಲ. ಹತ್ತಿರ, ಹತ್ತಿರ ಬರುತ್ತಿದ್ದಳು, ಆದರೆ ಕೈಯಿಟ್ಟರೆ, ಕೊಸರಿಕೊಂಡು ಹೋಗುತ್ತಿದ್ದಳು.

ರಮಿಸಲು ಹೋದರೆ ದೂರಾಗುತ್ತಿದ್ದಳು. ಮುದ್ದಿಸಲು ಸೆಳೆದರೆ, ನಾಚಿ ನೀರಾಗುತ್ತಿದ್ದಳು. ಕತ್ತಲೆಯಂತೆ ಅಸ್ಪಷ್ಟವಾಗುತ್ತಿದ್ದಳು. ಮಗ್ಗುಲಿಗೆ ಬರುತ್ತಿರಲಿಲ್ಲ,ಕೈ ಹತ್ತುತ್ತಲೇ ಇರಲಿಲ್ಲ. ಇಡಿಯಲು ಹೋದರೆ, ಎಲ್ಲೋ ಒಂದು ಕಡೆ ಸಿಕ್ಕಂತೆ ಮಾಡುತ್ತಿದ್ದಳು, ಆದರೆ ಪೂರ್ಣವಾಗಿ ದಕ್ಕುತ್ತಿರಲಿಲ್ಲ. ಕೂಡಿಸಿ ಬರೆಯಲು ಹೋದರೆ, ಸೋರಿ ಹೋಗುತ್ತಿದ್ದಳು. ಚಿತ್ರಿಸಲು ಹೋದರೆ, ಚಿತ್ತಾರ ಮೂಡುತ್ತಲೇ ಇರಲಿಲ್ಲ. ಅವಳ ಕನವರಿಕೆಯಲಿ, ಕಾತರಿಕೆಯಲ್ಲಿ ಅವನು ಕನಲಿ ಹೋಗಿದ್ದ.

ಅವನು ಮಾಡುವ ಪ್ರಯತ್ನವೆಲ್ಲ ಮಾಡಿ ಸೋತಿದ್ದ.ಪ್ರಸವಕ್ಕೆ ಕಾತರಿಸಿದ,ಬಸಿರು ಹೆಂಗಸಿನಂತಾಗಿದ್ದ. ಅವಳ ಗುಂಗಿನಲ್ಲೇ ನಿದ್ದೆಯ ಮಂಪರಿಗೆ ಜಾರಿದ್ದ.

ಮಧ್ಯರಾತ್ರಿ ಕಳೆಯುವ ವೇಳೆಗೆ ಏನೋ ಹೊಳೆದಂತಾಗಿ, ದಢಾರನೆ ಎದ್ದು ಕುಳಿತ. ಯಾವುದೋ ಹೊಳವು ಸಿಕ್ಕಂತಾಗಿತ್ತು. ಕತ್ತಲೆಯಲ್ಲಿಂದ ಎದ್ದು ದೀಪ ಮುಡಿಸಿದ. ಕರೆಯದೆ, ಕೈಚಾಚಿದ, ನಿರಮ್ಮಳವಾಗಿ ಬಂದು ತೆಕ್ಕೆಗೆ ಬಿದ್ದಳು. ಕಾಡಿಸದೆ, ಮುದ್ದಿಸಿಕೊಂಡಳು.

ಅವಳೇ ಕೈಹಿಡಿದು ದಾರಿ ತೋರಿಸುತ್ತಾ ಮುನ್ನೆಡೆಸಿದಳು.ಅವನು,ಅವಳನ್ನು ಹಿಂಬಾಲಿಸುತ್ತಾ ಹೋದ. ಕೈ ಇಟ್ಟಲೆಲ್ಲ ಪ್ರತಿಮೆಯಾಗ ತೊಡಗಿದಳು. ಬರೆದಿದ್ದೆಲ್ಲ ಉಪಮೆಯಾಗತೊಡಗಿತು. ಬೆಣ್ಣೆಯಂತೆ ಕರಗಲಾರಂಭಿಸಿದಳು. ಮಲ್ಲಿಗೆಯಂತೆ ಘಮಿಸಲಾರಂಭಿಸಿದಳು.

ಅವನೂ ಮುಂದುವರೆಯುತ್ತಲೇ ಹೋದ. ದೀರ್ಘ ಸಮಯದವರೆಗೆ ಕ್ರಿಯೆಯಲ್ಲಿಯೇ ಇದ್ದ, ಅಂತ್ಯದಲ್ಲಿ ಸ್ಕಲಿಸಿದ. ಪರಿ ಪೂರ್ಣ ತೃಪ್ತಿಗೊಂಡ. ತನ್ನೆದುರಿಗೆ, ತೆರೆದಿದ್ದ ಅವಳನ್ನೊಮ್ಮೆ ಅಡಿಯಿಂದ ಮುಡಿಯವರೆಗೂ ನೋಡಿದ. ಸಂತೋಷದಿಂದ ಮುಗುಳ್ನಕ್ಕ. ಅವಳನ್ನು ಅಲ್ಲಿಯೇ ಬಿಟ್ಟು, ಅವನು ನಿದ್ರೆಗೆ ಜಾರಿದ, ಬಿಡುಗಡೆಯ ಭಾವದೊಂದಿಗೆ. ಬೆಳಗಿನ ಜಾವಕ್ಕೆ ಯಾವಾಗಲೋ, ಅವಳು ಎದ್ದು ಹೋಗಿದ್ದಳು.

ಅಂದ ಹಾಗೆ, ಹೇಳುವುದು ಮರೆತ್ತಿದ್ದೆ,  ಅವನು ಕವಿ, ಮತ್ತವಳು ಕವಿತೆ.

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago