‘ಪಲ್ ಪಲ್ ದಿಲ್ ಕೇ ಸಾಥ್
ತುಮ್ ರಹತೀ ಹೋ…’
ಚಲನಚಿತ್ರದಲ್ಲಿ ನಾಯಕ ಬರೆದ ಪತ್ರಗಳನ್ನೋದುತ್ತಾ…ನಾಯಕಿ ತನ್ನ ಇರುವನ್ನೇ ಮರೆತು ಪ್ರೇಮಲೋಕದಲ್ಲಿ ವಿಹರಿಸುವ ದೃಶ್ಯದಲ್ಲಿ ತಮ್ಮಿಬ್ಬರನ್ನು ಕಲ್ಪಿಸಿಕೊಂಡು ಸುಖಿಸಿದ ಪ್ರೇಮಿಗಳೆಷ್ಟಿಲ್ಲ!
ಹೃದಯದಲ್ಲಿ ಗೂಡು ಕಟ್ಟಿದ ಒಲವನ್ನು, ಅಕ್ಷರಗಳೆಂಬ ಮಣಿಗಳಾಗಿಸಿ, ಪ್ರೀತಿಯೆಂಬ ದಾರದಲ್ಲಿ ಪೋಣಿಸಿ, ಅನುರಾಗದ ಭಾವದಲೆಯ ಪದಗಳ ಹಾರವಾಗಿಸಿ ಬರೆವ ಒಲವಿನ ಓಲೆಗೆ ಲಿಂಗಬೇಧವಿಲ್ಲ.
ನಳನು ದಮಯಂತಿಗೆ ಬರೆದ ಒಲವಿನೋಲೆ, ಶಾಕುಂತಲೆಯು ಕಮಲದ ಪತ್ರಗಳ ಮೇಲೆ ದುಶ್ಯಂತನಿಗೆ ವಿರಹದ ಬೇಗುದಿಯನ್ನು ವಿವರಿಸಿ ಬರೆಯುವ ಪ್ರೇಮ ಪತ್ರ. ಹೀಗೆ ಪುರಾಣದ ಹಲವು ಕಥೆಗಳಲ್ಲಿ ಗಂಡು ಹೆಣ್ಣುಗಳ ಒಲವಿನೋಲೆಯ ಉಲ್ಲೇಖಗಳನ್ನು ಕಾಣುತ್ತೇವೆ. ಅದರಲ್ಲೂ ಹುಟ್ಟು ಭಾವುಕಳಾದ ಹೆಣ್ಣು, ತನ್ನ ಒಲವಿನ ಗೆಳೆಯನಿಂದ ಬಂದ ಪತ್ರವನ್ನೋದುವ ಸಂದರ್ಭವನ್ನೇ ಕಾವ್ಯಗಳಾಗಿ ಬರೆದ ಕವಿಗಳೆಷ್ಟಿಲ್ಲ?
‘ಯೆ ಮೇರಾ ಪ್ರೇಮ ಪತ್ರ ಪಡಕರ್
ಕಿ ತುಮ್ ನಾರಾಜ಼್ ನಾ ಹೋನಾ
ಕಿ ತುಮ್ ಮೆರೆ ಜಿ಼ಂದಗೀ ಹೋ
ಕಿ ತುಮ್ ಮೆರೆ ಬಂದಗೀ ಹೋ’
ಆಹಾ, ನಾಲ್ಕೈದು ದಶಕಗಳ ಹಿಂದಿನ ಈ ಹಾಡನ್ನು ಕೇಳುತ್ತಿದ್ದರೆ ಪ್ರೇಮಿಗಳಿಗೆ ಪ್ರೇಮ ಪತ್ರ ಬರೆಯುವ ಉಮೇದು ಬಂದೇಬಿಡುತ್ತಿತ್ತು. ಹಾಗೆಂದು ಒಲವಿನ ಓಲೆ ಅಥವಾ ಪ್ರೇಮ ಪತ್ರ ಬರೆಯುವುದು ಸುಲಭದ ಕೆಲಸವಲ್ಲ. ಎಂತಹ ಮೇಧಾವಿಯೇ ಆದರೂ ತನ್ನ ಪ್ರೀತಿಯನ್ನು ನಿವೇದಿಸುವ ಮೊದಲ ಪತ್ರವನ್ನು ಬರೆಯುವುದು ಅಂದುಕೊಂಡಷ್ಟು ಸುಲಭವಲ್ಲವೆಂದು ಬರೆದವರೇ ಹೇಳುತ್ತಾರೆ.
‘ನಲ್ಲಾ ಎನ್ನಲೆ ನಿನ್ನಾ,
ಇನಿಯಾ ಎಂದು ಕೂಗಲೆ ನಿನ್ನಾ
ಎನ್ನೆದೆಯಾಳದಲೀ ನೆಲೆಸಿರುವ ದೇವನೆ ನಿನ್ನಾ,
ಏನೆಂದು ಕರೆಯಲಿ? ಏನೆಂದು ಬರೆಯಲಿ?’
ಪ್ರೇಮ ಪತ್ರ ಬರೆಯುವ ಆರಂಭವೇ ಎಷ್ಟು ಕಷ್ಟದ್ದೆಂದು ಇದರಲ್ಲೇ ತಿಳಿಯುತ್ತದೆ. ರಾತ್ರಿಯೆಲ್ಲ ನಿದ್ದೆಗೆಟ್ಟು, ಒಂದೊಂದು ಪದವೋ, ಒಂದೊಂದು ಸಾಲೋ ಬರೆದು ಅವು ಮನಸ್ಸಿಗೆ ಹಿಡಿಸದೇ, ಮುದುರಿ ಮುದ್ದೆ ಮಾಡಿ ಎಸೆದ ಕಾಗದದ ರಾಶಿಯೇ ಹೇಳುತ್ತದೆ ಇದೆಂತಹ ಕಷ್ಟದ ಕೆಲಸವೆಂದು.
ಅವಳ(ನ)ನ್ನು ಉದ್ದೇಶಿಸಿ ಬರೆಯುವ ಆರಂಭದ ಒಕ್ಕಣೆಯಲ್ಲೇ ಭಾವ ತರಂಗಗಳು ರಿಂಗಣಿಸಬೇಕು. ಅವುಗಳ ಕಂಪನಗಳು ಪ್ರೇಮಿಯ ಹೃದಯವನ್ನು ಇನ್ನೆಂದೂ ವಿಶ್ರಮಿಸದಂತೆ ಚುರುಕಾಗಿಸಬೇಕು. ಹೀಗೆಲ್ಲ ಬಯಸುವ ಯುವ ಪ್ರೇಮಿಗಳು ಪತ್ರವನ್ನು ಬರೆಯಲು ಆರಂಭಿಸುವ ಪದದ ಬಗ್ಗೆ ಯೊಚಿಸುವುದರಲ್ಲೇ ಮುದುಕರಾದ ಉದಾಹರಣೆಗಳು ಸಾಕಷ್ಟಿವೆ!
ಮುಂದೆಂದೋ ಇನ್ನೊಬ್ಬರ ಬದುಕು ಹಂಚಿಕೊಂಡ ಅವನು(ಳು) ಎದುರಾದಾಗ, ಕೈ ಕೈ ಹಿಸುಕಿಕೊಳ್ಳದೇ ಬೇರೆ ದಾರಿಯೇ ಅವರಿಗೆ ಇರುವುದಿಲ್ಲ.
ಹಿಂದಿನ ದಿನಗಳಲ್ಲಿ ಮಡಿವಂತಿಕೆ ಹೆಚ್ಚಾಗಿದ್ದ ಕುಟುಂಬಗಳಲ್ಲಿ, ಹೆಣ್ಣಿಗೆ ಪತ್ರ ಬರುವುದು ಬಹಳ ದೊಡ್ಡ ವಿಷಯವೇ ಆಗಿರುತ್ತಿತ್ತು. ಅಂಚೆಯಣ್ಣನ ಮನವೊಲಿಸಿ, ತನ್ನ ಕೈಗೇ ಪತ್ರ ತಂದುಕೊಡಬೇಕೆಂದು ಬಿನ್ನವಿಸಿ, ಇನಿಯನಿಂದ ಬಂದ ಪತ್ರವನ್ನು ಮನೆಯ ಇತರ ಸದಸ್ಯರಿಗೆ ಕಾಣದಂತೆ ಓದುವುದು, ಓದಿದ ಪತ್ರವನ್ನು ಅಡಗಿಸಿಡುವುದೆಲ್ಲ ಸಾಮಾನ್ಯದ ವಿಷಯವಾಗಿರಲಿಲ್ಲ. ತನಗೆ ಬಂದ ಪ್ರೇಮ ನಿವೇದನೆಯ ಪತ್ರವನ್ನೋದಲು ಹಿತ್ತಿಲ ಬಾವಿ ಕಟ್ಟೆಯನ್ನೋ, ಬಟ್ಟೆ ಒಗೆಯುವ ಹೊಳೆದಂಡೆಯಂಥ ಪ್ರಶಸ್ತ ಸ್ಥಳವನ್ನು ಹುಡುಕಿಕೊಳ್ಳಬೇಕಿತ್ತು. ಅಲ್ಲಿಯೂ ಆಕೆಗೆ ಏಕಾಂತ ಸಿಗುವ ಖಾತರಿ ಇರುತ್ತಿರಲಿಲ್ಲ. ವಯಸ್ಸಿಗೆ ಬಂದ ಮೊಮ್ಮಗಳ ಮೇಲೆ ಹದ್ದಿನ ಕಣ್ಣಿಡುವ ಅಜ್ಜಿಯ ಕಣ್ತಪ್ಪಿಸಿ, ಅವಳು ಅದನ್ನೋದಿ ಕನಸಿನ ಲೋಕದಲ್ಲಿ ವಿಹರಿಸಲು ತನ್ನ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಿತ್ತು!
ಇವೆಲ್ಲ ಹಳೆಯ ಮಾತಾಯಿತು. ಇಂದಿನ ಪ್ರೇಮಿಗಳಿಗೆ ಪತ್ರ ಬರೆಯುವ ಅಗತ್ಯವೇ ಇಲ್ಲ. ಈಗೇನಿದ್ದರೂ ಹೃದಯದ ಚಿತ್ರ, ನವರಸಗಳನ್ನು ವ್ಯಕ್ತಪಡಿಸುವ ಗೊಂಬೆಗಳ (ಎಮೋಜಿ) ವಿ-ಚಿತ್ರಗಳನ್ನು ಟೈಪಿಸಿದರೆ ಸಾಕು! ಮೂಲೋಕವನ್ನು ಮರೆತು, ತಲೆತಗ್ಗಿಸಿ, ಎರಡೂ ಕೈಗಳ ಹೆಬ್ಬೆರಳುಗಳನ್ನು ಬಳಸಿ, ಕಣ್ರೆಪ್ಪೆ ಮಿಟುಕಿಸುವ ವೇಗದಲ್ಲಿ ಸಂದೇಶಗಳನ್ನು ವಿನಿಮಯ ಮಾಡುವ ಯುವ ಪ್ರೇಮಿಗಳ ವೇಗದ ಜಮಾನಾ. ಅಂಗೈಯಲ್ಲಿರುವ ಫೋನ್, ಹೃದಯಗಳ ಪಿಸುಮಾತನ್ನೇನೋ ರವಾನಿಸುತ್ತವೆ. ಆದರೆ…ಟ್ರಂಕಿನ ತಳದಲ್ಲಿರುವ ಪ್ರೇಮ ಪತ್ರದ ಅಕ್ಷರಗಳಲ್ಲಿ ಬಂಧಿಸಿಟ್ಟ ಪ್ರೀತಿಯನ್ನು ಆಗಾಗ ಸ್ವತಂತ್ರಗೊಳಿಸಿ, ಅವುಗಳ ಸಾಂಗತ್ಯದಲ್ಲಿ ಒಂದಷ್ಟು ಕಾಲ ಕಾಲಾತೀತವಾಗುವ ರಸನಿಮಿಷಗಳ ಅನುಭೂತಿ ಸಾಧ್ಯವಿಲ್ಲ. ಕಾಲಕ್ರಮೇಣ ಡಿಲೀಟ್ ಆಗುವ ಸಂದೇಶಗಳಂತೆ..ಪ್ರೀತಿಯ ಬಾಂಧವ್ಯವೂ ತೆಳ್ಳಗಾಗುತ್ತಿದೆ.
ಕಾಲ ಬದಲಾಗಬಹುದು, ಪ್ರೀತಿ ಎಂದಿಗೂ ನವ ನವೀನ. ಪ್ರೀತಿಯ ಆಳಗಲವನ್ನು ತಿಳಿಯದ, ವಿರಹದ ತಾಪವನ್ನು ಅನುಭವಿಸಿ, ಪಕ್ವಗೊಂಡ ಪ್ರೀತಿಯನ್ನು ಬಿನ್ನವಿಸಿಕೊಳ್ಳದ ಇಂದಿನ ಮತ್ತು ಮುಂದಿನ ತಲೆಮಾರಿನವರಿಗೆ ಒಲವಿನೋಲೆಯ ಒಲವು ಅರಿವಾದೀತೇ?
ಅಕ್ಷರಗಳಲ್ಲಿ ಅಭಿವ್ಯಕ್ತಗೊಂಡ ಪ್ರೀತಿಯ ಒಲವಿನೋಲೆಯನ್ನು ಎದೆಯ ಮೇಲಿಟ್ಟುಕೊಂಡು ಸುಖಿಸುವ ಪ್ರೇಮಿಗಳು ಈಗೆಲ್ಲಿ?
ಒಲವಿನೋಲೆಯ ಬರೆಯುವ ಪ್ರೇಮಿಗಳು, ಪತ್ರವನ್ನೋದಿ ಕೆನ್ನೆಯಲ್ಲಿ ಕೆಂಪು ರಂಗನ್ನು ತುಂಬಿಕೊಳ್ಳುವ ಪ್ರಿಯತಮೆಯನ್ನು ನೀವೇನಾದರೂ ಕಂಡಿರುವಿರಾ?
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…