ನವಿಲುಕಲ್ಲು ಗುಡ್ಡ ಅದು ಮಾನ್ಯ ಕುವೆಂಪುರವರ ತಾಯಿಯ ತವರೂರು ಹಿರೇಕೊಡಿಗೆಗೆ ಸಮೀಪದ ನಿಸರ್ಗದ ಮಡಿಲು. ಅಲ್ಲಿ ಆಡಿ ಬೆಳೆದವರು ಮಾನ್ಯ ಕುವೆಂಪುರವರು. ಅಲ್ಲಿಗೆ ಸಮೀಪವಿರುವ ನವಿಲುಕಲ್ಲು ಪ್ರದೇಶ ನಮ್ಮ ರಾಷ್ಟ್ರಕವಿಯವರ, ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಗಳಿಸಿದ ಕವಿವರ್ಯರ ಅಚ್ಚುಮೆಚ್ಚಿನ ಮತ್ತು ಅವರ ಉತ್ಸಾಹಕ್ಕೆ ಕಾರಣವಾದ ನಿಸರ್ಗದ ತಾಣವದು. ಆ ತಾಣದ ಸವಿ ಸವಿಯಲು ಮತ್ತು ನೋಡಬೇಕೆಂಬ ತವಕದಿಂದ ನಮ್ಮ ಮಿಂಚುಳ್ಳಿ ತಂಡವು ಶ್ರೀ ಶಂಕರ ಸಿಹಿಮೊಗ್ಗೆ ಹಾಗೂ ಶ್ರೀ ಸೂರ್ಯಕೀರ್ತಿ ಅವರ ಸಾರಥ್ಯದಲ್ಲಿ ಸಜ್ಜಾದದ್ದು. ಅಲ್ಲಿಗೆ ಹೋಗಲು ಕಾಲ್ನಡಿಗೆಯ ಚಾರಣಕ್ಕೆ ಬೆಳಗಿನ ಜಾವವೇ ಪ್ರಶಸ್ತವಾದ ಸಮಯ. ಹಾಗಾಗಿ ‘ನವಿಲುಕಲ್ಲು’ ಎಂಬ ರಮ್ಯ ತಾಣದ ಸೊಬಗು ಕಣ್ತುಂಬಿಕೊಳ್ಳಲು ಮಿಂಚುಳ್ಳಿ ಸಾಹಿತ್ಯ ಬಳಗವು ದಿನಾಂಕ 11.08.2024ರ ನಸುಕಿನ ಜಾವ ತೀರ್ಥಹಳ್ಳಿ ತಾಲ್ಲೂಕಿನ ನವಿಲುಕಲ್ಲು ಗುಡ್ಡಕ್ಕೆ ಹೊರಟ್ಟಿತ್ತು.
ಸುಮಾರು 2.20ಕಿ.ಮೀ. ಕಾಡಲ್ಲಿ ಕಾಲ್ನಡಿಗೆ. ಅಲ್ಪ ಸ್ವಲ್ಪ ಶ್ರಮದೊಂದಿಗೆ ನಡೆದೆವು. ದಟ್ಟ ಕಾಡು ಅಲ್ಲಲ್ಲಿ ಜಾರುವ, ದಟ್ಟಕಾಡನ್ನು ಸೀಳಿಕೊಂಡು ಹೋಗಬಹುದಾದ ಕಾಲು ರಸ್ತೆ ಮಾತ್ರ. ಸ್ವಲ್ಪ ದೂರ ಸಾಗುತ್ತಿದ್ದಂತೆ ಇರುವ ಚಿಕ್ಕರಸ್ತೆಗೆ ಅಡ್ಡಲಾಗಿ ಮುಳ್ಳಿನ ಮರ ಬಿದ್ದಿತ್ತು. ಆಗ ಸಮಯ ಬೆಳಗಿನ 4.30 ಆಗಿತ್ತು. ಎಲ್ಲಿ ಚಾರಣ ಮೊಟಕಾಗುವುದೋ ಎಂದು ಮನದಲ್ಲಿ ದುಗುಡ ಉಂಟಾಗಿತ್ತು, ಗಾಢ ಕತ್ತಲು ಬೇರೆ, ಅಷ್ಟರಲ್ಲಿ ಪೊದೆಗಳ ಮಧ್ಯೆದಲ್ಲಿಯೇ ದಾರಿಗಾಗಿ ಹುಡುಕಾಟ, ಆಗಲ್ಲಿ ಸಹಾಯಕ್ಕೆ ಬಂದವರು ಚಾರಣದ ಸಮನ್ವಯಕಾರರಾದ ಡಾ. ಹಕೀಮ್ ಅವರು ಬೇರೆ ದಾರಿ ಹುಡುಕಿ ಚಾರಣ ಮತ್ತೆ ಮುಂದೆ ಸಾಗಿತು. ನಮ್ಮ ಮಿಂಚುಳ್ಳಿ ಸಾಹಿತ್ಯ ಬಳಗದ ಉತ್ಸಾಹಿ ಪಡೆಯಲ್ಲಿನ ಯುವಕರ ಸಹಾಯದಿಂದ ನಮ್ಮ ಚಾರಣ ಮತ್ತೆ ಮುಂದುವರಿದು ಮನದಲ್ಲಿ ಎದ್ದಿದ್ದ ದುಗುಡ ಮರೆಗೆ ಸರಿಯಿತು. ಹೀಗೆ ಮಧ್ಯದಲ್ಲಿ ಆಗಾಗ್ಗೆ ರಸ್ತೆಯಿಂದ ದಿನ್ನೆಗೆ, ದಿನ್ನೆಯಿಂದ ರಸ್ತೆಗೆ ನೆಗೆತಗಳು, ದಾರಿ ಉದ್ದಕ್ಕೂ ತುಸು ಸಾಹಸದ, ಮೋಜಿನ ನಡಿಗೆಯೂ ಅದಾಗಿತ್ತು, ಆಗಲ್ಲಿ ಯುವಕರ ನೆರವು ಸಿಕ್ಕು ಮೆಚ್ಚುಗೆಯಾಯ್ತು. ಕಾಲ್ನಡಿಗೆಯ ನಮ್ಮ ತಂಡಕ್ಕೆ ಜಿಗಣೆಗಳಿವೆ ಎಂಬ ಮುನ್ನೆಚ್ಚರಿಕೆ ಬೇರೆ. ಒಂದು ತಾಸು ಹೀಗೆ ಸಾಗಿದ ನಂತರ ಬೆಳಗಿನ ಜಾವ 5.30ಕ್ಕೆ ನವಿಲುಕಲ್ಲು ಗುಡ್ಡದ ಮೇಲೇರಿ ನಿಂತಿದ್ದೆವು, ಆಗಿನ್ನೂ ಕತ್ತಲು ತುಂಬಿದ ವಾತಾವರಣ. ನವಿಲುಕಲ್ಲು ನೆತ್ತಿಗೆ ತಲುಪಿದ ಮೇಲೆ (ಯುವಕರು, ಹಿರಿಯರು, ಹೆಣ್ಣುಮಕ್ಕಳು ಒಟ್ಟಾರೆ 50 ಜನರು) ಅಲ್ಲಿ ಹತ್ತು ನಿಮಿಷಗಳ ಕಾಲ ಎಲ್ಲರು ಮೌನವಹಿಸಿ ನಿಶ್ಯಬ್ದತೆಯನ್ನು ಕಾಪಾಡಿ ಕೊಂಡೆವು.
ಪ್ರಕೃತಿಯ ಮಡಿಲಿನಲ್ಲಿ ಇಡೀ ತಂಡ, ಅದಾಗಲೆ ಮಂದ್ರಗತಿಯಿಂದ ಕೇಳಿಬರುತ್ತಿದ್ದ ಹಕ್ಕಿ-ಪುಕ್ಕ, ಜೀರುಂಡೆಗಳ ನಿನಾದ, ವಿಶಿಷ್ಠ ಹಾಗೂ ಹೊಸ ಅನುಭವದೊಂದಿಗೆ ಎಲ್ಲರ ಮನಸ್ಸು ಗರಿಗೆದರಿತು. ಅಲ್ಲಿದ್ದಷ್ಟು ಅವಧಿ ನಾವೆಲ್ಲರೂ ರಮ್ಯ ತಾಣದಲ್ಲಿನ ಸವಿ ಸವಿಯಲು ಕಾತುರವಾಗಿದ್ದೆವು. ಕತ್ತಲು ನಿಧಾನವಾಗಿ ಜಾರುತ್ತಿದ್ದಂತೆ ಬೆಳಕು ಮೂಡಿ ನಮ್ಮ ಕಣ್ಣ ಮುಂದೆ ವಿಸ್ಮಯದ ನೋಟ, ಮಂಜು-ಮುಸುಕಿನ ಆಟ ಅನಾವರಣ. ಸಂಪೂರ್ಣ ಕತ್ತಲು ಸರಿದು ನೇಸರನ ಆಸರೆಯಿಂದ ಕಂಡದ್ದು ಹಸಿರು ಕಾಡು ಹೊತ್ತು ನಿಂತ ಸಾಲು ಸಾಲು ಬೆಟ್ಟ-ಕೊಳ್ಳಗಳು, ಅಂಕು ಡೊಂಕಾಗಿ ಸಾಗುತ್ತಿರುವ ತುಂಗೆಯ ದರ್ಶನ, ಅನತಿ ದೂರದಲ್ಲಿ. ಒಂದಷ್ಟು ಸ್ಮೃತಿಯಲ್ಲಿ ಉಳಿದದ್ದು. ಮಳೆಗಾಲದ ಚಾರಣ, ನೀಡಿದ ಆನಂದ ಅಗೋಚರ. ಮನಕ್ಕೆ ಚೆತೋಹಾರಿ ತಂದದ್ದು, ಅದೊಂದು ಅವರ್ಣನೀಯ. ಆಗಾಗ್ಗೆ ಮೆಲುಕು ಹಾಕಬಹುದಾದ ಅಚ್ಚಳಿಯದ ಸವಿ ನೆನಪಿನ, ಬುತ್ತಿಯಾಗಿ ನಮಗೆ ಸಿಕ್ಕದ್ದು ದಕ್ಕಿದ್ದು ಎಂದು ಹೇಳಬಹುದಷ್ಟೆ.
#ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಸಂಪಾದಕ ಬಳಗ ಶ್ರೀ ಶಂಕರ ಸಿಹಿಮೊಗ್ಗೆ ಹಾಗೂ ಸೂರ್ಯಕೀರ್ತಿ ಮತ್ತು ಮಿಂಚುಳ್ಳಿ ಬಳಗಕ್ಕೆಲ್ಲ ಧನ್ಯವಾದಗಳು.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…