ಮೊದಲನೆಯದಾಗಿ ಮಿಂಚುಳ್ಳಿ ಸಾಹಿತ್ಯ ಬಳಗದ ರೂವಾರಿಗಳಾದ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿ ತಮ್ಮೀರ್ವರಿಗೂ ಮನದಾಳದ ಧನ್ಯವಾದಗಳ ಜೊತೆಗೆ ಅಭಿನಂದನೆಗಳು.
2024 ಆಗಸ್ಟ್ 10 ಮತ್ತು 11ನೆಯ ತಾರೀಕುಗಳು ನನ್ನ ಜೀವನದಲ್ಲಿ ವಿಶೇಷ ದಿನಗಳಾಗಿದ್ದು, ಅಚ್ಚಳಿಯದೆ ಸದಾ ನೆನಪಿನಾಳದೊಳಗೆ ಉಳಿಯುತ್ತವೆ. ಮಿಂಚುಳ್ಳಿ ಬಳಗ ಹಮ್ಮಿಕೊಂಡ ಎರಡು ದಿನಗಳ ಕಥಾ-ಕಾವ್ಯ ಕಮ್ಮಟವು ಬಹು ಅರ್ಥಪೂರ್ಣವಾಗಿ ನೆರವೇರಿತು. ಹಿರಿಯ ಸಾಹಿತಿಗಳು ತಮ್ಮ ಅನುಭವಗಳ ಬುತ್ತಿಯ ಸವಿ ಹೂರಣವನ್ನು ಉಣಬಡಿಸಿದ ಪರಿ ಅಮೋಘ.
ಮೊದಲ ದಿನದ ಕಮ್ಮಟವು ಸೂರ್ಯಕೀರ್ತಿಯವರ ನಿರೂಪಣೆಯೊಂದಿಗೆ ಆರಂಭಗೊಂಡು, ಶ್ರೀಯುತ ಎಲ್.ಎನ್ . ಮುಕುಂದರಾಜ್ ಅವರು ಉದ್ಘಾಟನಾ ಭಾಷಣದೊಂದಿಗೆ ರಸವತ್ತಾಗಿ ಕಾರ್ಯಕ್ರಮ ಮುಂದುವರೆಯಿತು. ಇವರು ತಮ್ಮ ಭಾಷಣದುದ್ದಕ್ಕೂ “ಕವಿಯಾಗಬೇಕಾದವನು ಹಿರಿಯರ ಬರಹಗಳನ್ನು ಓದಬೇಕು. ಆದರೆ ಯಥಾವತ್ತಾಗಿ ಅವರನ್ನು ಅನುಸರಿಸದೆ, ವಿಭಿನ್ನ ರೀತಿಯಲ್ಲಿ ನಾಲ್ಕು ಜನ ಓದಿ ಗುರುತಿಸುವಂತೆ ಬರೆಯಬೇಕೆಂದು ತಿಳಿಸಿದ ರೀತಿ ನಿಜಕ್ಕೂ ವಿಶೇಷ”. ಜೊತೆಗೆ ಹಳಗನ್ನಡದ ಕವಿಗಳ ಬರಹಗಳನ್ನು ಮೆಲಕು ಹಾಕುತ್ತಾ, ಹಾಸ್ಯಮಯವಾಗಿ ಪ್ರಸ್ತುತಪಡಿಸುತ್ತಾ, ಎಲ್ಲರನ್ನೂ ನಗೆಗಡಲಿನೊಳಗೆ ತೇಲಿಸುವುದರ ಜೊತೆಗೆ “ಕವಿಯಾಗಬೇಕಾದವನು ಎಲ್ಲರೊಳಗೆ ಬೆರೆತು, ಅವರ ಭಾವನೆಗಳನ್ನು ಮತ್ತು ಅವರ ಭಾಷೆಯನ್ನು ಕಲಿಯಬೇಕೆಂದು ತಿಳಿಸಿದರು”.
ಕಮ್ಮಟ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಯುತ ಕಡಿದಾಳ್ ಪ್ರಕಾಶ್ ಅವರು ಕಮ್ಮಟದ ಲಾಭವನ್ನು ಎಲ್ಲರೂ ತಪ್ಪದೇ ಪಡೆದುಕೊಳ್ಳಬೇಕು. ನುರಿತ ವಿದ್ವಾಂಸರಿಂದ ಎಲ್ಲಾ ರೀತಿಯ ಕತೆ ಕಾವ್ಯ ಕಟ್ಟುವ ಕೌಶಲ್ಯಗಳನ್ನು ಕಲಿತುಕೊಂಡು, ಮುಂದೆ ನೀವು ಸಹ ಉತ್ತಮ ಕವಿಗಳಾಗಿ ಎಂದು ಹರಿಸಿ ಹಾರೈಸಿದರು.
ನಂತರ ನಾಡಿನ ಹೆಸರಾಂತ ಸಾಹಿತಿಗಳಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ಕಾವ್ಯ ಪ್ರವೇಶದ ಕುರಿತು ಹಲವಾರು ಮೌಲ್ಯಯುತ ಅಂಶಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಅಷ್ಟೇ ಅಲ್ಲದೆ “ಕವಿಯಾಗಬೇಕಾದವನು ಇಡೀ ಸಮಷ್ಟಿಯ ಲೋಕಾನುಭವವನ್ನು ತನ್ನ ಎದೆಯೊಳಗೆ ತಂದುಕೊಂಡು ಬರೆಯಬೇಕು. ಜೊತೆಗೆ ಸೂಕ್ಷ್ಮಪ್ರಜ್ಞೆ, ಸಂವೇದನಾಶೀಲ ಪ್ರಜ್ಞೆ ಕವಿಗೆ ಮುಖ್ಯವಾಗಿ ಬೇಕೇ ಬೇಕು” ಎಂದು ಹೇಳುತ್ತಾ, “ಬದುಕಿಗಿಂತ ಹೊರತಾದದ್ದಲ್ಲ ಸಾಹಿತ್ಯ” ಎಂದು ತಿಳಿಸಿದರು.
ನಂತರ ಕಥಾಗೋಷ್ಠಿ ಕುರಿತು ಶ್ರೀಯುತ ಡಾ. ಕರೀಗೌಡ ಬೀಚನಹಳ್ಳಿ ಅವರು ನಾನೇಕೆ ಕಥೆ ಬರೆದೆ? ಎಂಬ ವಿಷಯದ ಮೇಲೆ ಭಾಷಣವನ್ನು ಮಾಡುತ್ತಾ, ತಾವು ಕಥೆ ಬರೆಯಲು ಪ್ರೇರಣೆಯಾದ ಹಲವು ಅಂಶಗಳ ಕುರಿತು ಬೆಳಕು ಚೆಲ್ಲುವುದರ ಜೊತೆಗೆ ತಮ್ಮ ಜೀವನಾನುಭವಗಳನ್ನು ಹೇಳುತ್ತಾ, ನಮ್ಮಲ್ಲಿ ಕಥೆಗಳನ್ನು ಹೀಗೂ ಸರಳವಾಗಿ ಬರೆಯಬಹುದು ಎಂದು ತಿಳಿಸಿಕೊಟ್ಟರು.
ಆಯ್ದ ಕವಿತೆಗಳ ಓದು ಮತ್ತು ಸಂವಾದದಲ್ಲಿ ಹಲವು ಕವಿ ಮತ್ತು ಕವಯಿತ್ರಿಯರ ರಚಿಸಿದ ಕವಿತೆಗಳನ್ನು ವಾಚಿಸುವುದರ ಜೊತೆಗೆ ನಡೆಸಿದ ಚರ್ಚೆ ರಸದೌತಣವನ್ನು ಉಣಬಡಿಸಿತು. ಡಾ. ರವಿಕುಮಾರ್ ಪಿ.ಜಿ. ಸರ್ ಮತ್ತು ಪ್ರೊ. ಜಿ.ಎಸ್ ಸಿದ್ದರಾಮಯ್ಯ ಅವರು ಕಥೆಗಳ ಒಳ ತಿರುಳನ್ನು ಪ್ರಸ್ತುತಪಡಿಸಿದ ರೀತಿ ಬರೆಯುವ ಯುವ ಕವಿಗಳಿಗೆ ಉತ್ತಮ ಪ್ರೇರಣಾದಾಯಿಯಾಗಿತ್ತು.
ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ನವಿಲು ಕಲ್ಲು ಪ್ರದೇಶಕ್ಕೆ ಬಸ್ಸನ್ನು ಹತ್ತಿ ಹೋಗಿ, ನಂತರ ಕಾಲ್ನಡಿಗೆಯಲ್ಲಿ ಅಂದಾಜು ಮೂರ್ನಾಲ್ಕು ಕಿಲೋಮೀಟರ್ ಗಳವರೆಗೆ ಕಗ್ಗತ್ತಲಲ್ಲಿ ನಡೆದ ರೀತಿ ವರ್ಣಿಸಲಸದಳ. ಈ ಒಂದು ಕಾರ್ಯ ಯಶಸ್ವಿಯಾಗಲು ಮುಖ್ಯ ಕಾರಣಕರ್ತರು ಡಾ. ಹಕೀಮ್ ಅವರು. ಇವರು ಎಲ್ಲರನ್ನು ಒಟ್ಟಿಗೆ ಕಾಡಿನಲ್ಲಿ ಕರೆದುಕೊಂಡು ಹೋಗಿ ನವಿಲು ಕಲ್ಲು ಗುಡ್ಡವನ್ನು ಹತ್ತಿಸಿದರು. ಎಲ್ಲರೂ 10 ನಿಮಿಷಗಳವರೆಗೆ ಧ್ಯಾನಸ್ಥ ಸ್ಥಿತಿಯಲ್ಲಿ ಮೌನವನ್ನು ಪಾಲಿಸಿ, ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿದ್ದು, ಮಧುರಾನುಭೂತಿಯನ್ನು ನೀಡಿದೆ. ಪಶ್ಚಿಮ ಘಟ್ಟಗಳ ಸುಂದರ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಇರುವೆರಡು ಕಂಗಳು ಸಾಕಾಗಲಿಲ್ಲ. ಹಲವರು ಆ ಪ್ರಕೃತಿಗೆ ಮನ ಸೋತು ಭಾವಚಿತ್ರಗಳನ್ನು ತೆಗೆಸಿಕೊಳ್ಳುವುದು ಒಂದು ಕಡೆಯಾದರೆ, ಮತ್ತೆ ಕೆಲವರು ತಮ್ಮಲ್ಲಿರುವಂತಹ ಪ್ರತಿಭೆಯನ್ನು ಗಾಯನದ ಮೂಲಕ ಕವಿತೆಗಳನ್ನು ಓದುವುದರ ಮೂಲಕ ಹೊರ ಹಾಕಿದ ಪರಿ ಖುಷಿ ಕೊಟ್ಟಿತು. ರಾಷ್ಟ್ರಕವಿ ಕುವೆಂಪುರವರು ಬರೆದ ನಾಡಗೀತೆಯನ್ನು ಎಲ್ಲರೂ ಒಟ್ಟುಗೂಡಿ ಹಾಡಿದ ಸುಮಧುರ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಆ ಗುಡ್ಡದ ಮೇಲಿಂದಲೇ ಸೂರ್ಯೋದಯವನ್ನು ಕಣ್ತುಂಬಿಕೊಂಡು ಆನಂದದ ಸಾಗರದೊಳಗೆ ತೇಲಾಡಿದ ಅನುಭವ ಉಂಟಾಯಿತು.
ಅಲ್ಲಿಂದ ಮರಳಿ ಬಸ್ಸು ಹತ್ತಿ ಚಿಬ್ಬಲುಗುಡ್ಡೆಯ ಪ್ರಕೃತಿ ದೇವರಗುಡಿ ಮತ್ತು ನದಿಯನ್ನು ಕಣ್ತುಂಬಿಕೊಂಡು, ಕುವೆಂಪುರವರ ಹುಟ್ಟಿ ಬೆಳೆದ ಮನೆಯನ್ನು ಸಂದರ್ಶಿಸಿ, ಅಲ್ಲಿನ ಹಲವು ವಿಚಾರಗಳ ಕುರಿತು ಹಿರಿಯ ಸಾಹಿತಿಗಳೊಂದಿಗೆ ಚರ್ಚಿಸಿ, ಹೇಮಾಂಗಣಕ್ಕೆ ಬರಲಾಯಿತು. ಮತ್ತೆ ಹೇಮಾಂಗಣ ಮಂಟಪದಲ್ಲಿ ನಾಡಿನ ಹೆಸರಾಂತ ಕತೆಗಾರರಾದ ಮತ್ತು ನಮ್ಮ ರಾಯಚೂರಿನವರಾದ ಶ್ರೀಯುತ ಡಾ. ಅಮರೇಶ ನುಗಡೋಣಿ ಅವರು ಕಥಾ ರಚನೆಯ ಹಲವು ಮಜಲುಗಳನ್ನು ತಿಳಿಸಿಕೊಡುವುದರ ಜೊತೆಗೆ “ಸೂಕ್ಷ್ಮ ಪ್ರಜ್ಞೆ ಮತ್ತು ಬಾಲ್ಯದ ಅನುಭವಗಳೇ ಉತ್ತಮ ಕಥಾ ರಚನೆಗೆ ಬೇಕಾದ ಕಥಾವಸ್ತುಗಳೆಂದು” ತಿಳಿಸಿದ ರೀತಿ ನಮ್ಮ ಕಥೆಯ ರಚನೆಗಳಿಗೆ ಪ್ರೇರಣೆಯಾಯಿತು. ಡಾ. ಎಲ್.ಎನ್. ಮುಕುಂದರಾಜ್ ಅವರು ಕನ್ನಡ ಕಾವ್ಯ ಪರಂಪರೆಯ ವೈಶಿಷ್ಟತೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವುದರ ಜೊತೆಗೆ ಹಳಗನ್ನಡದ ಕಾವ್ಯಗಳನ್ನು ತಿಳಿ ಹಾಸ್ಯದೊಂದಿಗೆ ಹೇಳಿ ಕೊಟ್ಟ ಅವರ ಪಾಠಗಳನ್ನು ಮರೆಯಲು ಸಾಧ್ಯವಿಲ್ಲ.
ನಂತರ ಕವಿಶೈಲಕ್ಕೆ ಹೋಗಲು ಅಣಿಯಾದೆವು. ನಾಲ್ಕೈದು ಜನ ಶ್ರೀ ಅಮರೇಗೌಡ ಪಾಟೀಲ್ ಅವರ ಕಾರಿನಲ್ಲಿ ಕವಿಶೈಲವನ್ನು ತಲುಪಿದೆವು. ಅಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಆ ಕವಿಗೋಷ್ಠಿಯಲ್ಲಿ ಹಲವಾರು ಯುವಕವಿ ಮತ್ತು ಯುವಕವಿಯಿತ್ರಿಯರು ತಮ್ಮ ಸ್ವರಚಿತ ಕವನಗಳನ್ನು ವಾಚನ ಮಾಡಿ, ತಾವು ಕವಿತೆಯನ್ನು ಕಟ್ಟುವುದರಲ್ಲಿ ಸೈ ಎನಿಸಿಕೊಂಡರು. ಹಿರಿಯ ಕವಿವರ್ಯರಿಂದ ಮೆಚ್ಚುಗೆಯನ್ನೂ ಪಡೆದರು. ನಮ್ಮ ರಾಯಚೂರಿನ ಹಿರಿಯ ಸಾಹಿತಿಗಳಾದ ಶ್ರೀಯುತ ಶಂಭೋಜಿ ಅವರ ನೇತೃತ್ವದಲ್ಲಿ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿ ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು. ಅವರ ಸಾಧನೆಗೆ ಈ ಸನ್ಮಾನ ಕಿರೀಟಪ್ರಾಯವೆಂದು ಹೇಳಬಹುದು. ಅಲ್ಲಿಂದ ನೇರವಾಗಿ ಕುವೆಂಪುರವರ ಕವಿಮನೆಯನ್ನು ವೀಕ್ಷಣೆ ಮಾಡಿ, ಮತ್ತೆ ಮರಳಿ ಹೇಮಾಂಗಣಕ್ಕೆ ಬಂದು ತಲುಪಿದೆವು.
ಎರಡು ದಿನಗಳವರೆಗೆ ಹೇಮಾಂಗಣದಲ್ಲಿ ಉಳಿದುಕೊಳ್ಳಲು ಮಾಡಿದ ವ್ಯವಸ್ಥೆ ಎಲ್ಲಾ ರೀತಿಯಿಂದಲೂ ಅಚ್ಚುಕಟ್ಟಾಗಿತ್ತು. ಸ್ನಾನಕ್ಕೆ ಬಿಸಿ ನೀರು, ಬೆಳಿಗ್ಗೆ ಉಪಹಾರದ ಜೊತೆಗೆ ಕುಡಿಯಲು ಚಹಾ ಮತ್ತು ಕಾಫಿ, ಮಧ್ಯಾಹ್ನ ವಿವಿಧ ಬಗೆಯ ಊಟ, ರಾತ್ರಿಯ ರುಚಿಕರವಾದ ಊಟವನ್ನು ಹೇಗೆ ತಾನೆ ಮರೆಯಲು ಸಾಧ್ಯ?.
ನಾಡಿನಾದ್ಯಂತ ಹಲವು ಜಿಲ್ಲೆಗಳಿಂದ ಆಗಮಿಸಿದ ಕವಿಗಳ ಸಮಾಗಮ ಹಲವು ಆನಂದದ ಕ್ಷಣಗಳನ್ನು ಕೊಟ್ಟಿದೆ. ಹಿರಿಯರು, ಕಿರಿಯರೆನ್ನದೆ ಪರಸ್ಪರ ಒಂದುಗೂಡಿ ಆನಂದದ ಕಡಲಿನಲ್ಲಿ ಮಲೆನಾಡು ಪ್ರಕೃತಿಯ ಮಡಿಲಿನಲ್ಲಿ ತೇಲಿದ ಕ್ಷಣಗಳನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಗೆಳೆಯ ಶ್ರೀಶೈಲ ಅವರ ಒತ್ತಾಯದ ಮೇರೆಗೆ, ಒಲ್ಲದ ಮನಸ್ಸಿನಿಂದ ಸಿಹಿಮೊಗ್ಗೆಗೆ ಬಂದ ನನಗೆ, ಹಲವು ಸಿಹಿ ಅನುಭವಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ನಿಸರ್ಗಭರಿತ ರಮಣೀಯ ದೃಶ್ಯಗಳು ನೀಡಿವೆ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಇಂತಹ ಕಾರ್ಯಕ್ರಮಗಳನ್ನು ಮತ್ತೆ ಮತ್ತೆ ತಾವು ಮಾಡಲು ತಾಯಿ ಭುವನೇಶ್ವರಿ ದೇವಿ ತಮಗೆ ಶಕ್ತಿ, ಸಾಮರ್ಥ್ಯ, ಆಯುರಾರೋಗ್ಯವನ್ನು ನೀಡಿ ಹಾರೈಸಲಿ ಎಂದು ಮನಃಪೂರ್ವಕವಾಗಿ ಆಶಿಸುತ್ತೇನೆ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಎರಡು ದಿನಗಳ ಕಮ್ಮಟದ ವರದಿ ತುಂಬ ಸೊಗಸಾಗಿದೆ. ಪ್ರಕೃತಿಯ ಮಡಿಲಲ್ಲಿ ನಡೆಯುವ ಇಂತಹ ಸೃಜನಾತ್ಮಕ ಚಟುವಟಿಕೆಗಳು ನಿಜಕ್ಕೂ ಉಲ್ಲಾಸದಾಯಕವೂ, ಅರ್ಥಪೂರ್ಣವೂ ಆಗಿರುತ್ತವೆ. ಕಮ್ಮಟವನ್ನು ಆಯೋಜಿಸಿದವರಿಗೂ ಮತ್ತು ಆ ಕುರಿತು ಸಮಗ್ರ ವಿವರವನ್ನು ನೀಡಿದ ಶಂಕುಸುತ ಮಹಾದೇವ ಅವರಿಗೂ ಧನ್ಯವಾದಗಳು.