“ಅಮರನಾದ ಗುಲಾಮನಾಗುವದಕ್ಕಿಂತ ವಿನಾಶವಾಗುವ ಸ್ವತಂತ್ರ ವ್ಯಕ್ತಿಯಾಗುವುದು ಮೇಲು”
-ಡಾ.ಎಚ್.ನರಸಿಂಹಯ್ಯ.
ಕನ್ನಡ ಸಾಹಿತ್ಯ ಪ್ರಾಚೀನ ಕಾಲದಲ್ಲಿಯೇ ಅತ್ಯಂತ ವೈಚಾರಿಕ ನೆಲೆಗಳಲ್ಲಿ ವಿಜೃಂಭಿಸಿದ್ದನ್ನು ಕಾಣುತ್ತೇವೆ. ಪಂಪನು ಆದಿಕಾಲದಲ್ಲೇ “ಮನುಜ ಕುಲ ತಾನೊಂದೇ ವಲಂ ” ಎಂದು ಘೋಷಿಸುವ ಮೂಲಕ ಈ ನೆಲದ ಸಂಸ್ಕೃತಿಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿದನು. ನಂತರ ಹನ್ನೆರಡನೆಯ ಶತಮಾನದ ವಚನಕಾರರು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಸಮಾಜ ಕಟ್ಟುವ ಮೂಲಕ ಈ ಜಗದಲ್ಲೇ ಮಿಗಿಲಾದ ಸಾಮಾಜಿಕ, ಸಾಂಸ್ಕೃತಿಕ ಲೋಕದ ನಿರ್ಮಾಣ ಮಾಡಿದರು.ತಮ್ಮ ಮೊನಚಾದ ಆಲೋಚನೆಗಳನ್ನು ಜನಮನದ ಆಡು ಮಾತಿನ ಮೂಲಕ,ನಿರಕ್ಷರ ಕುಕ್ಷಿಗಳಿಗೂ ತಲುಪಿಸಿ ಕವಿಮನಸ್ಸುಗಳನ್ನು ಕಟ್ಟಿದರು.
ನಂತರ ಬಂದ ದಾಸ ಸಾಹಿತ್ಯ, ಸ್ವರವಚನ ಸಾಹಿತ್ಯ, ಮತ್ತು ತತ್ವಪದ ಸಾಹಿತ್ಯ ಇವುಗಳು ಜನಜೀವನದಲ್ಲಿ ಅಧ್ಯಾತ್ಮವೆಂಬುದು ಶೋಷಣೆಯ, ಅಜ್ಞಾನಿಗಳನ್ನು ಇನ್ನಷ್ಟು ಅಜ್ಞಾನಿಗಳಾಗಿಸುವ, ಆಯುಧವಲ್ಲ; ಬದಲಾಗಿ ಮೌಢ್ಯದಿಂದ ಜನರನ್ನು ಮೇಲೆತ್ತಿ ಗುರುವಿನ ಮಾರ್ಗದರ್ಶನದಲ್ಲಿ ಮೋಕ್ಷ ಸಾಧಿಸುವುದು ಸಾಧ್ಯವೆಂದು ತೋರಿಸಿ ಕೊಟ್ಟ ಜಗತ್ತಿನ ಅಪರೂಪದ ಸಾಹಿತ್ಯ ಪರಂಪರೆಯಾಗಿದೆ. ಕನ್ನಡದ ಈ ವೈಚಾರಿಕ ನೆಲೆಗಳ ಕುರುಹುಗಳನ್ನು ನಂತರ ಬಂದ ಹಿಂದಿ ಭಾಷೆಯ “ಭಕ್ತಿಕಾಲ”ಸಾಹಿತ್ಯಪರಂಪರೆಯಲ್ಲಿ ಢಾಳಾಗಿ ಗೋಚರವಾಗಿರುವದನ್ನು ಕಾಣಬಹುದು. ಕನ್ನಡದ ಸರ್ವಜ್ಞನ ಆಲೋಚನೆಗಳು ಹಿಂದಿಯ ಕಬೀರದಾಸರಲ್ಲಿ, ಕನ್ನಡದ ಅಕ್ಕಮಹಾದೇವಿಯ ನುಡಿಸೊಬಗನ್ನು ಹಿಂದಿಯ ಮೀರಾಬಾಯಿಯಲ್ಲೂ ಕಾಣಬಹುದು.
ಇನ್ನು ಕನ್ನಡದ ಜನಮನದಲ್ಲಿ ಇಂದಿಗೂ ನೆಲೆ ನಿಂತಿರುವ ತತ್ವಪದಕಾರರು ರಚಿಸಿದ ತತ್ವಪದ ಸಾಹಿತ್ಯ ಕಾಲ-ದೇಶಗಳನ್ನು ಮೀರಿದ್ದಾದರೂ ಹದಿನೆಂಟನೇ ಶತಮಾನದಿಂದ ಇಂದಿಗೂ ನಮ್ಮದೇ ವಿದ್ವಾಂಸರಿಂದ ನಿರ್ಲಕ್ಷ್ಯಕ್ಕೊಳಗಾದ ಸಾಹಿತ್ಯ ಪ್ರಕಾರವಾಗಿದೆ. ಬಹುತ್ವದಲ್ಲಿ ಏಕತೆ ಸಾಧಿಸುವ ಗುರಿ ಹೊಂದಿರುವ ಮತ್ತು ವೈದಿಕ ಪರಂಪರೆಯ ಜಾತಿ ಸಂಕೋಲೆ,ಲಿಂಗ ತಾರತಮ್ಯ, ವೇದ ಪುರಾಣದ ಯಜಮಾನಿಕೆಯನ್ನು ನಿರಾಕರಿಸಿ ವೈಚಾರಿಕತೆಯನ್ನು ಸಾಮಾನ್ಯ ಜನರಿಗೆ ತಲುಪಿಸುವ ಮಹೋನ್ನತ ಕೈಂಕರ್ಯವನ್ನು ಇದು ಸಾಧಿಸಿತು. ವಚನಕಾರರು ನುಡಿದಂತೆ ನಡೆದರು ತತ್ವಪದಕಾರರು ನಡೆದಂತೆ ನುಡಿದರು(ನಡೆದ ನಂತರ ನುಡಿದರು) ಎಂದು ಡಾ.ನಟರಾಜ ಬೂದಾಳು ಹೇಳುತ್ತಾರೆ (ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯರ ತತ್ವಪದಗಳು: ಮುನ್ನುಡಿ) ಈ ತತ್ವಪದಕಾರರ ಪರಂಪರೆಯ ಅತಿದೊಡ್ಡ ಸಾಧಕ ಕಡಕೋಳ ಮಡಿವಾಳಪ್ಪನವರು.
ಅವರ ಕೆಲ ಪದಗಳನ್ನು ಪ್ರಾತಿನಿಧಿಕವಾಗಿ ಇಲ್ಲಿ ಉಲ್ಲೇಖಿಸಬಹುದು.
ಭಕ್ತಿ ಎಂಬ ಭತ್ತ ಕುಟ್ಟವ್ವ!ನೀ
ಖಟ್ಟ ಅಕ್ಕಿ ಹಿಡಿದು ಹೊಟ್ಟ ತೆಗಿಯವ್ವ!
ನಿಷ್ಠೆಯಿಂದ ಅನ್ನ ಮಾಡಿ ಚರಗಂಡ ಗುಣಿಸವ್ವ
ಶ್ರೇಷ್ಠ ಮಹಾಂತೇಶಗೊಲಿಸಿ ಮುಕ್ತಿ ಪಡಿಯವ್ವ.
(ಕೃತಿ:ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯರ ತತ್ವಪದಗಳು,
ಪುಟ:೧೪೪. ಸಂ:ಮೀನಾಕ್ಷಿ ಬಾಳಿ,ಪ್ರ:ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ; ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು)
ಏರಲಾರದ ಗುಡ್ಡ ಏರಿಸಿದನು ಗುರುವಾ!
ಆರಾರರಿಯದ ಮೀರಿದ ಗುರುತಿದು!
ಗುರುವು ತೋರಿದ ಅರುವಾ
(ಕೃತಿ:ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯರ ತತ್ವಪದಗಳು,ಪುಟ:೧೪. ಸಂ:ಮೀನಾಕ್ಷಿ ಬಾಳಿನ,ಪ್ರ:ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ; ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು)
ಇಂಥ ಸಾವಿರಾರು ಪದಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ವಿಭಿನ್ನ ದೃಷ್ಟಿಯಿಂದ ಗುರುತಿಸುವಂತೆ ಮಾಡಿದ ತತ್ವ ಪದಕಾರರಿಗೆ ಕನ್ನಡ ಸಾಹಿತ್ಯಕ್ಷೇತ್ರ ಋಣಿಯಾಗಿದೆ.
ವಿಚಾರ ಸಾಹಿತ್ಯವೆಂಬ ಒಂದು ಪ್ರತ್ಯೇಕ ಪ್ರಕಾರದ ಕಕ್ಷೆಯೊಳಗೆ ಎಂಥ ಕೃತಿಗಳು ಬರುವವು ಎಂಬ ಜಿಜ್ಞಾಸೆ ಬಹಳ ಕಷ್ಟದ್ದು; ವೈಚಾರಿಕತೆ ಇಲ್ಲದ ಕೃತಿ ಇಲ್ಲವೇ ಇಲ್ಲ ಎಂದು ಹೇಳಬಹುದು.ಸೃಜನಶೀಲ ಕೃತಿಗಳಲ್ಲೂ ಎದುರಿಗೆ ಕಾಣದಿದ್ದರೂ ಹಾಲಲ್ಲಿ ಬೆರೆತ ಸಕ್ಕರೆಯಂತೆ ಸುಪ್ತವಾಗಿ ಅದು ಗೋಚರಿಸುತ್ತದೆ. ಸೃಜನ ಸಾಹಿತ್ಯ ಸಂಶ್ಲೇಷಣಾತ್ಮಕವಾದದ್ದಾದರೆ ವಿಚಾರಸಾಹಿತ್ಯ ವಿಶ್ಲೇಷಣಾತ್ಮಕವಾದದ್ದು. ಯಾವದೇ ವಿಷಯವನ್ನು ಕುರಿತಂತೆ ಪ್ರಾಯೋಗಿಕವಾಗಿ ಚಿಕಿತ್ಸಕ ದೃಷ್ಟಿಯಿಂದ ವಿಷಯದ ಸತ್ವವನ್ನು ಗುರುತಿಸಿ ಸಂಗ್ರಹಿಸಿದ ಮಾಹಿತಿಯನ್ನು ವಿಂಗಡಿಸಿ, ವಿವೇಚಿಸಿ ಕರಾರುವಾಕ್ಕಾದ ಫಲಿತಾಂಶ ಪಡೆಯುವುದು ವೈಚಾರಿಕತೆ, ವೈಜ್ಞಾನಿಕತೆ. ಅದನ್ನು ಮನಂಬುಗುವಂತೆ ವಿಚಾರಸಾಹಿತ್ಯ ದಾಖಲಿಸುತ್ತದೆ.
ಆಧುನಿಕ ಕನ್ನಡದ ವಿಚಾರ ಸಾಹಿತ್ಯದ ಮೇರುಗಿರಿ ಕುವೆಂಪು.
ಅವರ ಬಾಲನಾಟಕ ಬೊಮ್ಮನ ಹಳ್ಳಿಯ ಕಿಂದರಿ ಜೋಗಿಯಿಂದ ಮಹಾಕಾವ್ಯ ‘ರಾಮಾಯಣದರ್ಶನಂ’ವರೆಗೆ ಅದುವರೆಗಿನ ಸ್ಥಾಪಿತ ಮೌಲ್ಯಗಳನ್ನು ಪ್ರಶ್ನೆ ಮಾಡುತ್ತ ಚಿಕಿತ್ಸಕ ದೃಷ್ಟಿಯಿಂದ ವಿಶ್ಲೇಷಣೆ ಮಾಡಿದ್ದಾರೆ. ಪ್ರತಿಯೊಂದು ಕೃತಿಯಲ್ಲಿ ಪೌರಾಣಿಕ ವೈದಿಕ ಅಪಮೌಲ್ಯಗಳನ್ನು ಧಿಕ್ಕರಿಸಿ ತಮ್ಮದೇ ವೈಚಾರಿಕ ಒಳನೋಟವನ್ನು ನೀಡಿದ್ದಾರೆ. ಅವರ “ಶ್ರೀರಾಮಾಯಣದರ್ಶನಂ”ನ ಶಂಬೂಕನ ಕತೆ, ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯ ಹೂವಯ್ಯ, ಮುಂತಾದ ಪಾತ್ರಗಳಲ್ಲಿ ಇಂಥ ಉದಾಹರಣೆಗಳನ್ನು ಕಾಣಬಹುದು. ಇದಲ್ಲದೆ ಅವರು ಈ ಅನ್ವಯಿಕ ಕೃತಿಗಳಲ್ಲದೇ ವೈಚಾರಿಕತೆಯನ್ನು ಪ್ರತಿಪಾದಿಸುವ ಸ್ವತಂತ್ರ
ಕೃತಿಗಳನ್ನು ರಚಿಸಿ ಕನ್ನಡ ವಿಚಾರಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಅವರ “ವಿಚಾರ ಕ್ರಾಂತಿಗೆ ಆಹ್ವಾನ” ಕೃತಿ ಹತ್ತಾರು ಮುದ್ರಣ ಕಾಣುವ ಮೂಲಕ ನಾಡಿನ ವಾಚಕ ಸಮುದಾಯದಲ್ಲಿ ವೈಚಾರಿಕ ಸಾಹಿತ್ಯದ ಸಂಚಲನವನ್ನು ಉಂಟು ಮಾಡಿದೆ. ಕುವೆಂಪು ಅವರ ವಿಶ್ವಮಾನವ ಸಂದೇಶ ಜಗತ್ಪ್ರಸಿದ್ಧವಾದದ್ದು. ಅವರ ಮನುಜ ಮತ ವಿಶ್ವ ಪಥ ಘೋಷಣೆ ಆಧುನಿಕ ಜಗತ್ತಿಗೆ ದಾರಿ ದೀಪವಾಗಿದೆ. ಕುವೆಂಪು ಈ ಕೃತಿಯಲ್ಲಿ ವಿಚಾರ ವಾದದ ಅರ್ಥವನ್ನು ಹೀಗೆ ವಿವರಿಸುತ್ತಾರೆ.
“ನಾವು ಬಡತನವನ್ನು ಎಷ್ಟರ ಮಟ್ಟಿಗೆ ಪರಿಹರಿಸಿದ್ದೇವೆ? ಜಾತಿ ಮತಗಳ ಭೇದ ಬುದ್ಧಿಯನ್ನು ಎಷ್ಟರ ಮಟ್ಟಿಗೆ ತೊಡದು ಹಾಕಿದ್ದೇವೆ? ಸಾಮಾನ್ಯರಲ್ಲಿ ಸಮಾಜವಾದೀ ಪ್ರಜಾಪ್ರಭುತ್ವದ ಜ್ಞಾನೋದಯವಾಗಲು ಏನೇನು ಕ್ರಮ ಕೈಗೊಂಡಿದ್ದೇವೆ? ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಇವುಗಳನ್ನು ಸಾರ್ವಜನಿಕ ರ ಮನಸ್ಸಿನಲ್ಲಿ ಯಾವ ಪ್ರಮಾಣದಲ್ಲಿ ಬೆಳೆಸಿದ್ದೇವೆ. ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಂಡಾಗ ನಮ್ಮ ದೇಶದ ವೈಚಾರಿಕತೆಯ ಸ್ಥಿತಿ ಗತಿ ಗೋಚರವಾಗುತ್ತದೆ. (ಲೇ: ಕುವೆಂಪು, ಕೃತಿ:ವಿಚಾರ ಕ್ರಾಂತಿಗೆ ಆಹ್ವಾನ,ಪ್ರ:ಕನ್ನಡ ಸಾಹಿತ್ಯ ಪರಿಷತ್ತು, ಪುಟ:೧೦೮)
ಕುವೆಂಪು ಅವರು ಪ್ರಖರ ವಿಚಾರವಾದವನ್ನು ಪ್ರತಿಪಾದಿಸಿದರೂ ಅಧ್ಯಾತ್ಮವನ್ನು ನಿರಾಕರಿಸಲಿಲ್ಲ. ವಿಚಾರವಾದದಲ್ಲಿರುವ ಅಧ್ಯಾತ್ಮವನ್ನು, ಅಧ್ಯಾತ್ಮದಲ್ಲಿರುವ ವಿಚಾರಗಳನ್ನು ಪರಸ್ಪರ ಮೇಳೈಸುವ ಅವರ ಪರಿಣತಿ ವಿಶಿಷ್ಟ.
“ನಮ್ಮ ಪ್ರಜಾಸತ್ತೆ ಹಾಳಾಗಲು ಹಣವೊಂದೇ ಕಾರಣವೆಂದರೆ ತಪ್ಪಾಗುತ್ತದೆ. ಅದಕ್ಕಿಂತ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯ ಭೂಮಿ ಭಾರತದಲ್ಲಿ! ಅದು ಒಂದು ಅಮೂರ್ತ ವಸ್ತು,ಅದು ಹಾಕಿಕೊಂಡಿರುವ ವೇಷದಿಂದ ತುಂಬ ಸಾಧು ಮತ್ತು ಪೂಜ್ಯ ಎಂಬಂತೆ ತೋರುತ್ತದೆ. ಅದು ಭಾವ ರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯ ಪ್ರವೇಶ ಮಾಡಿ ನಮ್ಮನ್ನು ಆಕ್ರಮಿಸುತ್ತದೆ.ಮತ್ತು ನಮ್ಮಲ್ಲಿ ನಿಜವಾಗಿಯೂ ಇರುವ ಒಂದು ಅನಿರ್ವಚನೀಯ, ಅತ್ಯಂತ ಅಂತರತಮ- ಸತ್ಯಸ್ಯ ಸತ್ಯವಾದ, ಸನಾತನ ತತ್ತ್ವಕ್ಕೆ ಅದು ತನ್ನ ಬಾಂಧವ್ಯವನ್ನು ಘೋಷಿಸಿಸುತ್ತಾ ಬಂದಿರುವುದರಿಂದಲೂ ಮತ್ತು ಅದನ್ನೇ ತಾನು ಪೋಷಿಸುತ್ತಿರುವುದಾಗಿ ಹೇಳುತ್ತಿರುವದರಿಂದಲೂ ಅದರ ಪ್ರಚ್ಛನ್ನ ವಂಚನೆಯ ಕಪಿಮುಷ್ಠಿ ಯಿಂದ ತಪ್ಪಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ.ಅದರ ಹೆಸರೇ “ಮತ”! ಈ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನು ಮುಂದೆಯಾದವರು ನೀವು ಅಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಮತ ಮೌಲ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ ಸಮಾಜವಾದವಾಗಲಿ ಸಮಾನತಾಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ.” ಎಂದು ಅವರು ವಿಶ್ಲೇಷಿಸುತ್ತಾರೆ.
ಅವರ ಕಾವ್ಯದ ವೈಚಾರಿಕ ದನಿ ಅನನ್ಯವಾದುದು.ಭಾರತಾಂಬೆಯ ಪೂಜೆಗೆ
ಮೌಢ್ಯದ ಪರಿಕರಗಳನ್ನೆಲ್ಲ ಕಿತ್ತೆಸೆದು ಸಂಪ್ರದಾಯಶೀಲ ಸ್ಥಾವರಗಳಿಂದ ಹೊರ ನಡೆದು ಹೊಸ ತಾಣವಾದ ಭಾರತಾಂಬೆಯ ಮಡಿಲಿಗೆ ಬರಲು ಹೀಗೆ ಕರೆ ಕೊಡುತ್ತಾರೆ.
“ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರ ಬನ್ನಿ,
ಬಡತನವ ಬುಡಮಟ್ಟ ಕೀಳ ಬನ್ನಿ.
ಮೌಢ್ಯತೆಯ ಮಾರಿಯನು ಹೊರದೂಢಲೈ ತನ್ನಿ,
ವಿಜ್ಞಾನ ದೀವೆಗೆಯ ಹಿಡಿಯಲು ಬನ್ನಿ!
ಓ ಬನ್ನಿ, ಸಹೋದರರೇ ,ಬೇಗ ಬನ್ನಿ!
(ಕೃತಿ: ವಿಚಾರ ಕ್ರಾಂತಿಗೆ ಆಹ್ವಾನ ಲೇ:-ಕುವೆಂಪು,ಪುಟ:೮ ಪ್ರ:-ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು)
ಇಂತಹುದೇ ಇನ್ನೊಂದು ಕವಿತೆಯನ್ನು ಇಲ್ಲಿ ನೋಡಬಹುದು
ಸಿಲುಕದಿರಿ ಮತವೆಂಬ ಮೋಹದದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕ್ಕೆ
ಓ ಬನ್ನಿ, ಸಹೋದರರೇ,ವಿಶ್ವ ಪಥಕೆ!
(ಕೃತಿ: ವಿಚಾರ ಕ್ರಾಂತಿಗೆ ಆಹ್ವಾನ ಲೇ:-ಕುವೆಂಪು,ಪುಟ:೮ ಪ್ರ:-ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು)
ಇಂಥ ನೂರಾರು ಕವನಗಳಲ್ಲಿ ಕುವೆಂಪು ಅವರ ದಿವ್ಯ ಪ್ರತಿಭೆ ವೈಚಾರಿಕತೆಯ ಜ್ಯೋತಿಯನ್ನು ದೀದಿಪ್ಯಮಾನವಾಗಿ ಬೆಳಗಿಸಿದೆ.
ಬರವಣಿಗೆಯ ಈ ಪ್ರಕಾರಕ್ಕೆ ಹೆಸರೇ ಇಲ್ಲದ ಕಾಲದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದ ಡಾ.ಜಿ.ಎಸ್ ಶಿವರುದ್ರಪ್ಪ ಅವರು 1977ರಲ್ಲಿ ಮೊದಲ ಬಾರಿಗೆ ಪದವಿ ಮಟ್ಟದಲ್ಲಿ ಕನ್ನಡ ಸಾಹಿತ್ಯಾಭ್ಯಾಸಿಗರನ್ನು ಗಮನದಲ್ಲಿಟ್ಟುಕೊಂಡು ‘ವಿಚಾರ ಸಾಹಿತ್ಯ’ ಪ್ರಕಾರದ ಪಠ್ಯವನ್ನು ಅನಷ್ಠಾನಗೊಳಿಸಿದರು.ಈ ಸಂದರ್ಭದಲ್ಲಿ ಪ್ರಕಟವಾದ ‘ವಿಚಾರ ಸಾಹಿತ್ಯ-1’ಎಂಬ ಕೃತಿಗೆ ಮುನ್ನುಡಿ ಬರೆಯುವ ಮೂಲಕ ಇದನ್ನು ಒಂದು ವಿಶಿಷ್ಟ ಪ್ರಕಾರವಾಗಿ ಬೆಳೆಯಲು ಕಾರಣರಾದರು. ಇದಕ್ಕೆ ಮೊದಲು ಕುವೆಂಪು, ಕಾರಂತರು ವಿಚಾರಸಾಹಿತ್ಯವನ್ನು ಸಮೃದ್ಧಗೊಳಿಸಿದ್ದರೂ ಅದಕ್ಕೆ ಶಿವರುದ್ರಪ್ಪನವರು ಸಾಂಸ್ಥಿಕ ವ್ಯವಸ್ಥೆ ಕಲ್ಪಿಸಿದರು.
ಇದೇ ಸಂದರ್ಭದಲ್ಲಿ ಮುಂಚೂಣಿಗೆ ಬಂದ ಪ್ರಗತಿಶೀಲ ಸಾಹಿತ್ಯ ಚಳುವಳಿಯಿಂದದಾಗಿ ಅ.ನ.ಕೃ., ತ.ರಾ.ಸು., ಬಸವರಾಜ ಕಟ್ಟೀಮನಿ, ನಿರಂಜನ ಮುಂತಾದವರ ಲೇಖನಗಳು ಸಾಹಿತ್ಯ ಕೃತಿಗಳಲ್ಲಿ ರಾಜಕೀಯ ಪ್ರಜ್ಞೆ, ವೈಚಾರಿಕತೆಯನ್ನು ತುಂಬಿದವು. ಮೊದಲ ಮಹಾಯುಧ್ಧದ ನಂತರ ಸಾಹಿತ್ಯ ಸೃಷ್ಟಿಯಲ್ಲಿ ಹೊಸ ಪರಿಕಲ್ಪನೆ ಮೂಡತೊಡಗಿತು. ಎರಡನೆ ಮಹಾಯುಧ್ಧದ ನಂತರ ಹೊಸ ವಿಮರ್ಶಾ ಮಾನದಂಡಗಳು ಮುಂಚೂಣಿಗೆ ಬಂದವು.1950ರ ದಶಕದಲ್ಲಿ ಸಾಂಪ್ರದಾಯಿಕ ವಿಚರಗಳು ಪಲ್ಲಟವಾಗಿ ಮನೋವಿಜ್ಞಾನ ದೃಷ್ಟಿಕೋನ, ಮಾನವೀಯತೆಯ ಸಿದ್ಧಾಂತಗಳು ಪ್ರಚಲಿತವಾಗತೊಡಗಿದವು. ಕನ್ನಡದಲ್ಲಿ ಗಾಂಧಿವಾದವನ್ನು ಸಿದ್ಧವನಹಳ್ಳಿ ಕೃಷ್ಣಶರ್ಮರು, ಮತ್ತು ರವೀಂದ್ರನಾಥ್ ಠಾಕೂರ್, ಸರೋಜಿನಿ ನಾಯ್ಡು, ಅವರ ಆಲೋಚನೆಗಳನ್ನು ಎಸ್ ಎಸ್ ಒಡೆಯರ್, ಚನ್ನವೀರ ಕಣವಿ, ರಾ.ಯ.ಧಾರವಾಡಕರ,ಎನ್.ಕೆ,ಗೊರೂರು ಅವರು ಕನ್ನಡಕ್ಕೆ ತಂದರು.ಅನುವಾದ ರಂಗದಲ್ಲಿ ಬೇಂದ್ರೆಯವರು, ಕೆ ವಿ ಸುಬ್ಬಣ್ಣ, ಬಿ.ಎಚ್. ಶ್ರೀ.,ಗೌರೀಶ ಕಾಯ್ಕಿಣಿ, ಮತ್ತು ಇನ್ನೂ ಹಲವಾರು ಜನ ಸಾಹಿತ್ಯ ಕೃಷಿಗೈದರು.
ವೈಚಾರಿಕತೆಗೂ ವೈಜ್ಞಾನಿಕತೆಗೂ ಅವಿನಾಭಾವ ಸಂಬಂಧವಿದೆ.ಆಧುನಿಕ ವಿಜ್ಞಾನ ರಂಗದ ಅಭಿವೃದ್ಧಿಪಥದಲ್ಲಿರುವ ಮನೋವಿಜ್ಞಾನ ವಿಷಯ ಕೂಡ ಎಲ್ಲ ಭಾಷೆಗಳ ಮೇಲೆ ಬೀರಿದ ಪ್ರಭಾವವನ್ನೇ ಕನ್ನಡ ಸಾಹಿತ್ಯದ ಮೇಲೆ ಕೂಡ ಬೀರಿತು. ಮನೋವಿಜ್ಞಾನ ಕ್ಷೇತ್ರದಲ್ಲಿ ಕುಪ್ಪುಸ್ವಾಮಿ, ಸಿ.ಆರ್ ಚಂದ್ರಶೇಖರ್, ಎಮ್. ಬಸವಣ್ಣ, ಮೀನಗಂಡಿ ಸುಬ್ರಮಣ್ಯ,ಸೇರಿದಂತೆ ವಿಚಾವಾದಿ ಕೋವೂರರ ಪ್ರಭಾವದಿಂದ ಅನೇಕ ಕನ್ನಡ ಲೇಖಕರು ಕೃತಿಗಳನ್ನು ರಚಿಸಿದರು. ವಿಜ್ಞಾನ ಕುರಿತು ಶಿವರಾಮ ಕಾರಂತರು ಮೂರು ಬೃಹತ್ ವಿಶ್ವಕೋಶ ಸಂಪುಟಗಳನ್ನು ರಚಿಸಿದರು.ಕನ್ನಡಕ್ಕೆ ಹೊಸ ಒಳನೋಟ ಕೊಟ್ಟ “ದೇವರು” ಕೃತಿಯನ್ನು ಡಾ.ಎ.ಎನ್. ಮೂರ್ತಿರಾವ್ ರಚಿಸಿ ಕನ್ನಡ ವಿಚಾರಸಾಹಿತ್ಯದ ದಿಕ್ಕನ್ನೇ ಬದಲಿಸಿದರು. ಅದೇ ಸಂದರ್ಭದಲ್ಲಿ ಆಂಗ್ಲ ನಾಟಕಕಾರ ಶೇಕ್ಸ್ಪಿಯರನ ವೈಚಾರಿಕ ನಾಟಕಗಳ ಪರಿಚಯಾತ್ಮಕ ಗ್ರಂಥ ರಚಿಸಿದರು.
ಕನ್ನಡ ವೈಚಾರಿಕ ಸಾಹಿತ್ಯದ ಪ್ರಕಾಶನದಲ್ಲಿ ನವಕರ್ನಾಟಕ ಪ್ರಕಾಶನದ ಕೊಡುಗೆ ಗಮನಾರ್ಹವಾದದ್ದು. ಸಂಪ್ರದಾಯ ವಿಜ್ಞಾನ ಮತ್ತು ಸಮಾಜ, ವೈಜ್ಞಾನಿಕ ಮನೋಧರ್ಮ,ಮಾರ್ಕ್ಸವಾದ ಮತ್ತು ಭಗವದ್ಗೀತೆ, ಧರ್ಮ ಮತ್ತು ವೈಚಾರಿಕತೆ, ನಾನೇಕೆ ನಾಸ್ತಿಕ? ಮತ್ತಿತರ ಕೃತಿಗಳನ್ನು ಕ್ರಮವಾಗಿ ಎಸ್ ಬಾಲಚಂದರ್, ಜಿ.ಟಿ.ನಾರಾಯಣರಾವ್, ಎಸ್.ಆರ್.ಭಟ್, ಬಿ.ವಿ.ವೀರಭದ್ರಪ್ಪ ರಚಿಸಿದರು. ನಂತರ ಬಂದ ಅವರ ವೇದಾಂತ ರೆಜಿಮೆಂಟ್ ಕೃತಿ ಕನ್ನಡ ವಿಚಾರ ಸಾಹಿತ್ಯದಲ್ಲಿ ಮೈಲುಗಲ್ಲು ಎನಿಸಿತು.
ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿದ ಚಿಂತಕರ ಮಾಲೆ, ವಿಜ್ಞಾನ ಶಿಕ್ಷಣ ಮಾಲೆ, ಅನುವಾದ ಮಾಲೆ, ಜ್ಞಾನ ದೀಪಮಾಲೆ ಮೂಲಭೂತ ಶೈಕ್ಷಣಿಕ ಮಾಲೆ ಮತ್ತು ಅನುವಾದ ಮಾಲೆಗಳಲ್ಲಿ ಪ್ರಕಟವಾದ ಕೃತಿಗಳು ಕನ್ನಡದ ಜನಮನದಲ್ಲಿ ವೈಚಾರಿಕತೆ ಮೂಡಿಸುವಲ್ಲಿ ಯಶಸ್ಸು ಕಂಡವು.
ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳು ಕನ್ನಡ ವಿಚಾರ ಸಾಹಿತ್ಯ ಕ್ಷೇತ್ರ ಕಂಡ ಪರಿವರ್ತನಾ ಪರ್ವಕಾಲ ಎನ್ನಬಹುದು. ನವ್ಯ ನವ್ಯೋತ್ತರದ ಬಂಡಾಯ, ದಲಿತ ಸಾಹಿತ್ಯ ಚಳುವಳಿಗಳು ವೈಚಾರಿಕತೆಯೊಂದಿಗೆ ವೈಜ್ಞಾನಿಕತೆ ಮತ್ತು ಪ್ರಗತಿಪರ ಆಶಯಗಳಿಗೇ ಬದ್ಧವಾಗಿ ಬರೆದದ್ದರಿಂದ ಭಾವನಾಪ್ರಧಾನ ಸಾಹಿತ್ಯ ಪ್ರಕಾರವಾದ ಕಾವ್ಯದಲ್ಲಿ ಕೂಡ ವೈಚಾರಿಕ ನಿಲುವುಗಳನ್ನು ಪ್ರಜ್ಞಾಪೂರ್ವಕವಾಗಿ ಪ್ರತಿಪಾದಿಸಲಾಯಿತು. ಅದರಲ್ಲೂ ದೇವನೂರು ಮಹಾದೇವರ ಕೃತಿಗಳು ” ವೈಚಾರಿಕತೆಯಂದರೆ ಒಣಸಿದ್ಧಾಂತದ ತೌಡು ಕುಟ್ಟುವದು”ಎಂದು ಹೀಗಳಿಸುವವರ ಬಾಯ್ಮುಚ್ಚಿಸಿದವು. ಕಲಾತ್ಮಕ ಮಾಧ್ಯಮ ಬಳಸಿಕೊಂಡು ಜನರನ್ನು ಆಲೋಚನೆಗೆ ಹಚ್ಚಿದ ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಕೃತಿಗಳು ವೈಚಾರಿಕತೆಯನ್ನು ಜನಮನದಲ್ಲಿ
ಬೆರೆಸಿದವು. ಲಂಕೇಶ ರ ಟೀಕೆ ಟಿಪ್ಪಣಿ, ಇಂ ಥ ಇನ್ನೊಂದು ಕೃತಿ. ಸಿಧ್ಧಲಿಂಗಯ್ಯನವರ ಗದ್ಯಕೃತಿಗಳು ಈ ಕಾರ್ಯವನ್ನು ಮಾಡಿದವು.
ಇಷ್ಟಾದರೂ , ತಾತ್ವಿಕತೆ, ತನ್ಮಯತೆ, ತಾಟಸ್ಥ್ಯ ಈ ಮೂರನ್ನು ಸಮನ್ವಯೀಕರಿಸಿ ಸ್ವೋಪಜ್ಞತೆಯಿಂದ ಕೂಡಿದ ವಿಚಾರ ಸಾಹಿತ್ಯದ ಕೃತಿಗೆ ಕಾಯಬೇಕಾಗಿದೆ. ಎನ್ನುತ್ತಾರೆ ವಿದ್ವಾಂಸರು. ಈ ಕ್ಷೇತ್ರದಿಂದ ಇನ್ನಷ್ಟು ಭರವಸೆಯ ಸಾಹಿತ್ಯ ಕೃತಿಗಳು ಹೊರಬರುವ ಭರವಸೆಯನ್ನು ತಾಳಬಹುದು.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…