ಸಂದರ್ಶನ: ಸೂರ್ಯಕೀರ್ತಿ
ಎಲ್.ಜಿ.ಮೀರಾ ಅವರ ಬದುಕು-ಬರೆಹ:
ಪೂರ್ಣ ಹೆಸರು: ಲಕ್ಷಣಸಂದ್ರ ಗುರುರಾಜರಾವ್ ಮೀರಾ
ವೃತ್ತಿ: ಕನ್ನಡ ಪ್ರಾಧ್ಯಾಪಕರು, ಮಹಾರಾಣಿ ವಿಜ್ಞಾನ ಕಾಲೇಜು, ಬೆಂಗಳೂರು.
ಮೇ ೫, ೧೯೭೧ರಂದು ಜನಿಸಿದ ಲೇಖಕಿ, ವಿಮರ್ಶಕಿ, ಭರತನಾಟ್ಯ ವಿದ್ವತ್ ಎಲ್.ಜಿ.ಮೀರಾ ಅವರು ಮೂಲತಃ ಕೊಡಗಿನವರು. ಇವರ ತಾಯಿ ಯು.ಕೆ ಚಿತ್ರಾವತಿ, ತಂದೆ ಎಲ್.ಜಿ.ಗುರುರಾಜ್. ಬಿ.ಎಸ್ಸಿ, ಎಂ.ಎ ಮತ್ತು ಪಿ.ಎಚ್ ಡಿ ಪದವಿಯನ್ನೂ ಪಡೆದಿದ್ದಾರೆ. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಈ ಹಿಂದೆ ಕನ್ನಡ ವಿಭಾಗದ ಮುಖ್ಯಸ್ಥರಾಗಿಯು ಕಾರ್ಯ ನಿರ್ವಹಿಸಿದ್ದಾರೆ. ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಭರತನಾಟ್ಯವನ್ನು ಹೇಳಿಕೊಡುತ್ತಿದ್ದಾರೆ.
ಮಾನುಷಿಯ ಮಾತು, ಬಹುಮುಖ, ತಮಿಳ್ ಕಾವ್ಯ ಮೀಮಾಂಸೆ, ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ), ರಂಗಶಾಲೆ ಎಂಬ ಮಕ್ಕಳ ನಾಟಕ ಸಂಕಲನ, ಆಕಾಶಮಲ್ಲಿಗೆಯ ಘಮ, ಆದಿಶಕ್ತಿಯ ಲೇಖನಿ – ವಿಮರ್ಶಾ ಸಂಕಲನ, ನೋಟ ಮತ್ತು ನದಿ, ಎಂ.ಎಚ್.ಕೃಷ್ಣಯ್ಯ – ಬದುಕು ಬರಹ, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
ಪ್ರಕಟಿತ ಧ್ವನಿ ಸುರುಳಿಗಳು
೧ ಕನಸುಗಣ್ಣಿನ ಹುಡುಗಿ
೨ ಕೆಂಪುಬಲೂನು
೩ ಭರವಸೆಯ ಕೊರಳುಗಳು
ಇವರ ಬಹುಮುಖ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ. ಗುಡಿಬಂಡೆ ಪೂರ್ಣಿಮಾ ದತ್ತನಿಧಿ ಬಹುಮಾನ ಕರ್ನಾಟಕ ಲೇಖಕಿಯರ ಸಂಘದಿಂದ ದೊರಕಿದೆ. ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ (2007), ಕರ್ನಾಟಕ ಬಾಲವಿಕಾಸ ಅಕಾಡೆಮಿ ಬಹುಮಾನ (2010), ಬುದ್ದ ಪ್ರಶಸ್ತಿ (2011), ಸಂಕ್ರಮಣ ಕಾವ್ಯ ಬಹುಮಾನ (2007), ಕಲೇಸಂ ಗುಣಸಾಗರಿ ನಾಗರಾಜು ದತ್ತಿ ಬಹುಮಾನ ರಂಗಶಾಲೆ ಕೃತಿಗೆ 2010ರಲ್ಲಿ ಪ್ರಶಸ್ತಿ ಲಭಿಸಿವೆ.
೧. ನಿಮ್ಮ ಬಾಲ್ಯ ಜೀವನದ ಬಗ್ಗೆ ಹೇಳುವುದಾದರೆ?
ನನ್ನ ಬಾಲ್ಯವು ಹೆಚ್ಚಾಗಿ ಕಳೆದದ್ದು ಮಂಗಳೂರಿನಲ್ಲಿ. ಬೈಕಂಪಾಡಿಯ ಸಮುದ್ರದ ಬಳಿ ಇದ್ದ ನಮ್ಮ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ, ಅಲ್ಲಿ ಅಧ್ಯಾಪಕಿಯಾಗಿದ್ದ ನನ್ನ ಅಮ್ಮ ಚಿತ್ರಾವತಿ, ಏಳನೇ ತರಗತಿಯಲ್ಲಿದ್ದಾಗ ನನ್ನನ್ನು `ಕನ್ನಡ ಪದ್ಯ’ ಬರೆಯಲು ಹಚ್ಚಿದ ನನ್ನ ಪಾರ್ವತಿ ಟೀಚರ್, ನನ್ನ ಓದುಗುಳಿ ಸ್ವಭಾವ, ನಮ್ಮ ಮನೆಯಲ್ಲಿರುತ್ತಿದ್ದ ರಾಮಕೃಷ್ಣಾಶ್ರಮದ ಅನೇಕ ಪುಸ್ತಕಗಳು, ಮನೆಗೆ ವಾರವಾರ ಬರುತ್ತಿದ್ದ ತರಂಗ ಪತ್ರಿಕೆ, ಮಂಗಳೂರಿನ ಉರ್ವಸ್ಟೋರಿನ ನಮ್ಮ ಕ್ವಾಟ್ರಸ್ನಲ್ಲಿದ್ದ ಹಳದಿ ಹೂ ಸುರಿಸುತ್ತಿದ್ದ ರತ್ನಗಂಧಿ ಮರ, ಅಲ್ಲಿಗೆ ತುಂಬ ಹತ್ತಿರದಲ್ಲಿದ್ದ ಪಣಂಬೂರು ರಸ್ತೆಯಲ್ಲಿದ್ದಂತಹ `ಲಲಿತ ಕಲಾ ಸದನ’ದ ಮಾಳಿಗೆಯಲ್ಲಿ ನಾನು ಕರ್ನಾಟಕ ಸಂಗೀತ, ಭರತನಾಟ್ಯಗಳನ್ನು ಕಲಿಯಲಾರಂಭಿಸಿದ್ದು… ಈ ನೆನಪುಗಳ ಸುರುಳಿ ಬಿಚ್ಚಿಕೊಳ್ಳುತ್ತದೆ. ಮಂಗಳೂರಿನ ಗುಡ್ಡೆಗಳು, ಕೇಪಳ ಹೂವು, ಕರಂಡೆಕಾಯಿ, ಗೆಳತಿಯರೊಡನೆ ಗೊರಟೆ ಹೂ ಕಿತ್ತು ಮಾಲೆ ಮಾಡಿ ಮುಡಿದು ಸಂಭ್ರಮಿಸುತ್ತಿದ್ದ ಆ ದಿನಗಳು. `ಅಯ್ಯೋ, ಎಲ್ಲಿ ಹೋದಾವೋ .. ಆ ಕಾಲ’ ಅನ್ನಿಸುತ್ತದೆ.
೨. ಸಾಹಿತ್ಯದ ಬಗ್ಗೆ ಒಲವು ಬರಲು ಸ್ಫೂರ್ತಿ ಯಾರು?
ನಾನು ಸಂಗೀತ ಮತ್ತು ನೃತ್ಯಗಳ ಸೇತುವೆ ಮೇಲೆ ನಡೆದು ಸಾಹಿತ್ಯದ ಕ್ಷೇತ್ರಕ್ಕೆ ಕಾಲಿಟ್ಟವಳು. ವಿದ್ಯಾನುಕೂಲಿಯಾಗಿದ್ದ ಅಮ್ಮ ಹಾಗೂ ಸಂಗೀತ ಪ್ರಿಯರಾಗಿದ್ದ ಅಪ್ಪ ನನ್ನ ಬಾಲ್ಯಜೀವನದ ಬಹುದೊಡ್ಡ ಪ್ರಭಾವಗಳು ಅನ್ನಬಹುದು. ಬೇಸಿಗೆ ರಜೆಯಲ್ಲಿ ನನಗೆ ಸಾಕಷ್ಟು ಆಡಲು ಬಿಡದೆ ಇಂಗ್ಲಿಷ್ ವ್ಯಾಕರಣ ಹೇಳಿಕೊಡುತ್ತಿದ್ದ ಅಮ್ಮ, ಮತ್ತು ಪ್ರತಿ ಶನಿವಾರ ಸುತ್ತ ಮುತ್ತಲ ಮಕ್ಕಳನ್ನು ಸೇರಿಸಿ ಭಜನೆ ಹೇಳಿಕೊಟ್ಟು ಸಿಹಿ ಚರುಪು ಕೊಡುತ್ತಿದ್ದ ಅಪ್ಪ, ಉದ್ದ ಹೂವಿನ ಜಡೆ ಹಾಕಿಕೊಂಡು ನಮ್ಮ ಮನೆ ಹತ್ತಿರದ ಗಣಪತಿ ದೇವಸ್ಥಾನದಲ್ಲಿ ನಾನು ಮಾಡಿದ ಆ ಮೊಟ್ಟಮೊದಲ ಭರತನಾಟ್ಯ ನೃತ್ಯಬಂಧ – ಈ ಚಿತ್ರಗಳು ಮನಸ್ಸಿನಲ್ಲಿ ಅಚ್ಚೊತ್ತಿವೆ. ಮತ್ತು ಇವೇ ಮುಂದೆ ನನ್ನನ್ನು ಸಾಹಿತ್ಯದ ಹಾಗೂ ಪ್ರದರ್ಶನ ಕಲೆಯ ಆರಾಧಕಿಯಾಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿದವು ಅನ್ನಿಸುತ್ತೆ. ನನಗೆ ಏಳು ವರ್ಷವಾಗಿದ್ದಾಗ ನನ್ನ ತಂದೆಯವರು ಬೆಂಗಳೂರಿನಲ್ಲಿ ಕಟ್ಟಿದ ಮನೆಯ ಗೃಹಪವೇಶವಾಯಿತು. ಆ ಸಮಾರಂಭಕ್ಕೆ ಅತಿಥಿಗಳಾಗಿ ಬಂದಿದ್ದ ಯಾರೋ ಪುಣ್ಯಾತ್ಮ ಪುಸ್ತಕ ಪ್ರೇಮಿಗಳು ಉಷಾ ನವರತ್ನರಾಮ್ ಅವರ `ಆಂದೋಲನ’, `ಆಶ್ವಾಸನ’, `ಬಂಧನ’ ಎಂಬ ಮೂರು ಕಾದಂಬರಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಆ ಹೊತ್ತಿಗೇ ಪುಸ್ತಕಪ್ರೇಮಿಯಾಗಿಬಿಟ್ಟಿದ್ದ ನಾನು ಆ ಮೂರೂ ಕಾದಂಬರಿಗಳನ್ನು ಒಂದೇ ಉಸಿರಿನಲ್ಲಿ ಓದಿ ಮುಗಿಸಿದ್ದೆನೆಂದು ನೆನಪು. ನನ್ನ ತಂದೆ, ತಾಯಿಗಳೂ ಪುಸ್ತಕ ಓದುವುದನ್ನು ಇಷ್ಟ ಪಡುತ್ತಿದ್ದರು ಹಾಗೂ ಆ ಕಾಲವು ವಿದ್ಯುನ್ಮಾನ ಮಾಧ್ಯಮಗಳ ಕಾಲವಾಗಿರಲಿಲ್ಲ. ಹೀಗಾಗಿ ಸಹಜವಾಗಿಯೇ ಪುಸ್ತಕಗಳ ಓದು ನನ್ನ ಸಂಗಾತಿಯಾಯಿತು. ಇದರೊಂದಿಗೆ ನನಗೆ ಕನ್ನಡ ಪಾಠ ಮಾಡಿದ ಪ್ರೌಢಶಾಲಾ ಅಧ್ಯಾಪಕಿ ಸರೋಜಿನಿ ಟೀಚರ್, ಪದವಿ ತರಗತಿಗಳಲ್ಲಿ ತುಂಬ ಪ್ರೋತ್ಸಾಹ ನೀಡಿದ ನನ್ನ ಕನ್ನಡ ಅಧ್ಯಾಪಕರಾದ ಡಾ.ಮಂಗಳಾ ಪ್ರಿಯದರ್ಶಿನಿ, ಡಾ.ಬಿ.ಯು.ಗೀತಾ, ಡಾ.ಶಾಂತಾ ನಾಗರಾಜ್ ಇವರನ್ನು ಹೇಗೆ ಮರೆಯಲಿ? ನನ್ನ ಪದವಿ ಸಮಯದಲ್ಲಿ ವಿದ್ಯಾವರ್ಧಕ ಸಂಘ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಗುರುರಾಜ ಕರ್ಜಗಿ ಅವರ ನಿರಂತರ ಬೆಂಬಲವಂತೂ ಅಮೂಲ್ಯವಾದದ್ದು.
೩. ಸಾಹಿತ್ಯ ಮತ್ತು ಜೀವನ ವಿಭಿನ್ನವೇ?
ಜೀವನದ ಗತಿಬಿಂಬ ಮತ್ತು ಪ್ರತಿಬಿಂಬ ಸಾಹಿತ್ಯವೆಂಬುದು ಹಿರಿಯರ ಅನುಭವದ ಮಾತು. ಬರಹಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಸಾಹಿತ್ಯವು ಜೀವನದ ಅರ್ಥ ಕಂಡುಕೊಳ್ಳುವ ಪ್ರಯತ್ನದಲ್ಲಿನ ಅವರ ಸಂಗಾತಿ. ಅವರು ಅಕ್ಷರದ ಮೂಲಕವೇ ತಮ್ಮ ಹಾಗೂ ಜೀವನದ ಆತ್ಮವನ್ನು ಅರಿಯಲು ಪ್ರಯತ್ನಿಸುತ್ತಾರೆ. ಹೀಗಾಗಿ ಸಾಹಿತಿಗಳ ನಿಜ ಅರ್ಥದ `ಜೀವನ’ ಸಾಹಿತ್ಯವೇ ಇರಬಹುದು. ಜಯಂತ್ ಕಾಯ್ಕಿಣಿ ಹೇಳಿದಂತೆ ‘ಬರೆಯುವಾಗ ತಾನು ನಿಜವಾಗಿ ಜೀವಿಸುತ್ತೇನೆ, ಉಳಿದದ್ದು ಸಮಾಜ ನಿರ್ದೇಶಿತ ಕಾರಕೂನಿ’ ಎಂಬ ಭಾವನೆಯನ್ನು ವ್ಯಕ್ತಪಡಿಸುವ ಸಾಹಿತಿಗಳಿದ್ದಾರೆ. ಆದರೆ ಇದು ಈ ಪ್ರಶ್ನೆಗೆ ಭಾಗಶಃ ಉತ್ತರ ಅಷ್ಟೇ. ಜೀವನ ಬಹು ವ್ಯಾಪಕವಾದುದು. ಸಾಹಿತ್ಯವು ಜೀವನವನ್ನು ಅರ್ಥ ಮಾಡಿಕೊಳ್ಳಲು ಸದಾ ಪ್ರಯತ್ನಿಸುತ್ತದೆ, ಜೀವನವು ಬೊಗಸೆಯ ಬೆರಳ ಸಂದಿನಿಂದ ಹರಿದು ಹೋಗುವ ನೀರಿನಂತೆ ಬರೆವ ಲೇಖನಿಗೆ ಸವಾಲಾಗುತ್ತಲೇ ಇರುತ್ತದೆ.
೪. ಇವತ್ತಿನ ಸಂದರ್ಭದಲ್ಲಿ ಕನ್ನಡವನ್ನು ಉಳಿಸುವ ಬಗೆ?
ನನ್ನ ಅಭಿಪ್ರಾಯದಲ್ಲಿ ಇದಕ್ಕೆ ವ್ಯಕ್ತಿ, ಸಮಾಜ ಮತ್ತು ಸರ್ಕಾರಗಳ ಸಂಘಟಿತ ಪ್ರಯತ್ನಗಳ ಅವಶ್ಯಕತೆ ಇದೆ. ಏನು ಮಾಡಬಹುದು ಅಂದರೆ,
ಅ. ಕನ್ನಡ ಅಧ್ಯಾಪಕರ ಸಾಮರ್ಥ್ಯ, ಕೌಶಲ್ಯಗಳನ್ನು ಹೆಚ್ಚು ಮಾಡಲು ಕ್ರಿಯಾಯೋಜನೆಗಳನ್ನು ರೂಪಿಸುವುದು.
ಆ. ಕನ್ನಡಕ್ಕೆ ಬೇರೆ ಭಾಷೆಗಳಿಂದ ಹೊಸ ಜ್ಞಾನಶಿಸ್ತುಗಳನ್ನು ಅನುವಾದಿಸುವುದರ ಮೂಲಕ ನವಪದ, ನವಜ್ಞಾನ ನಿರ್ಮಾಣ.
ಇ. ಅಂಕರೂಪೀ(ಡಿಜಿಟಲ್) ಲೋಕದಲ್ಲಿ ಕನ್ನಡದ ಇರವನ್ನು ಹೆಚ್ಚಿಸುವುದು ಮತ್ತು ಅದನ್ನು ಸಶಕ್ತಗೊಳಿಸುವುದು.
ಈ. ಚಿಕ್ಕಮಕ್ಕಳು ಮತ್ತು ಹದಿಹರೆಯದವರಿಗೆ ಕನ್ನಡದ ಉಲ್ಲಾಸಕರ ಅಂಶಗಳನ್ನು ಸೃಜನಶೀಲ ರೀತಿಯಲ್ಲಿ ಪರಿಚಯಿಸುವ ವ್ಯವಸ್ಥಿತ ಕಾರ್ಯಕ್ರಮಗಳನ್ನು ಮಾಡುವುದು.
೫. ನಿಮ್ಮ ಜೀವನದಲ್ಲಿ ಮರೆಯಲಾಗದ ನೆನಪು
ಮರೆಯಲಾಗದ ಅನೇಕ ನೆನಪುಗಳಿವೆ. ಅವುಗಳಲ್ಲಿ ಒಂದು ನೆನಪು ಅಂದರೆ ನಾನು ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ವಿಜಯಾ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ನಮ್ಮ ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಭಾವಗೀತೆಯನ್ನು ಹಾಡುತ್ತಿದ್ದಾಗ ಅವರ ಪತ್ನಿ ವೆಂಕಮ್ಮನವರು ಸಭಾ ಭವನದೊಳಕ್ಕೆ ನಡೆದುಬಂದದ್ದು.
೬. ನಿಮ್ಮ ಪ್ರಕಾರ ಕನ್ನಡ ಅಂದ್ರೆ …
ವಿಶ್ವಕ್ಕೆ ಕನ್ನಡಿಗರು ಕಟ್ಟಿದ, ಕಟ್ಟಿಕೊಳ್ಳುತ್ತಿರುವ, ಕಟ್ಟಬೇಕಾದ ಸೇತುವೆ. ಅದಕ್ಕಾಗಿಯೇ, ನನ್ನ ಜಾಲಪುಟ(ಬ್ಲಾಗ್)ದ ಹೆಸರು `ಕನ್ನಡ ಸೇತು’. ಬೇಂದ್ರೆಯವರ ಅಮರ ನುಡಿ `ಕನ್ನಡವು ಕನ್ನಡವ ಕನ್ನಡಿಸುತಿರಲಿ’ ಎಂಬುದು ನಾನೂ ಸೇರಿದಂತೆ ಎಲ್ಲ ಕನ್ನಡಿಗರಿಗೂ ಸ್ಫೂರ್ತಿ.
೭. ಪ್ರಸ್ತುತ ಕನ್ನಡ ಸಾಹಿತ್ಯ ಬೆಳವಣಿಗೆಯ ಬಗ್ಗೆ ನಿಮ್ಮ ಅನಿಸಿಕೆ
ಕನ್ನಡವು ವೈವಿಧ್ಯಮಯವಾಗಿ ಬೆಳೆಯುತ್ತಿದೆ. ಮೂರನೇ ಲಿಂಗಿಗಳೂ ಸೇರಿದಂತೆ ಸಮಾಜದ ವಿವಿಧ ಸಮುದಾಯಗಳ ಸದಸ್ಯರು ಈಗ ಉತ್ಸಾಹದಿಂದ ಬರೆಯತ್ತಿದ್ದಾರೆ. ಭಾಷಾ ಬಳಕೆಯಲ್ಲೂ ತುಂಬ ಪ್ರಯೋಗಗಳಾಗುತ್ತಿವೆ. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ ಪರಭಾಷಿಕರಿಗೆ ಕನ್ನಡ ಕಲಿಸುವ ವ್ಯವಸ್ಥೆ ನಮ್ಮಲ್ಲಿ ಇನ್ನೂ ಅಚ್ಚುಕಟ್ಟಾಗಿ ಆಗಬೇಕು ಮತ್ತು ಎಲ್ಲ ಜ್ಞಾನಶಿಸ್ತುಗಳೂ ಕನ್ನಡದಲ್ಲಿ ಸರಾಗವಾಗಿ ಸಂವಹನಗೊಳ್ಳುವಂತೆ ನಾವು ಕನ್ನಡವನ್ನು ವ್ಯಾಪಕವಾಗಿ ಬಳಸಬೇಕು, ಮತ್ತು ಸಶಕ್ತಗೊಳಿಸಬೇಕು. ನಮ್ಮ ದಿನಪತ್ರಿಕೆಗಳು ಸೃಜನಶೀಲ ಬರವಣಿಗೆಗೆ ಇನ್ನಷ್ಟು ಪ್ರಾಮುಖ್ಯ ಕೊಡಬೇಕು. ಏಕೆಂದರೆ ಸೃಜನಶೀಲ ಬರವಣಿಗೆಯು ಭಾಷೆಯನ್ನು ತುಂಬ ಆಪ್ತ, ಆಕರ್ಷಕ ಮತ್ತು ಆಹ್ಲಾದಕರ ರೀತಿಯಲ್ಲಿ ಬಳಸುತ್ತದೆ ಮತ್ತು ಬೆಳೆಸುತ್ತದೆ.
೮. ನಿಮ್ಮ ಮುಂದಿನ ಸಾಹಿತ್ಯ ಕೃತಿ
ಅ. `ಕೊನೆಯ ಬಿಳಿ ಬೇಟೆಗಾರ’ ಎಂಬ ನನ್ನ ಅನುವಾದ ಕೃತಿ ಇಷ್ಟರಲ್ಲೇ ಬಿಡುಗಡೆಯಾಗುತ್ತದೆ. ಇದು ವಸಾಹತು ಕಾಲದ ಬೇಟೆಗಾರ ಹಾಗೂ ಬರಹಗಾರರಾಗಿದ್ದ ಕೆನೆತ್ ಆಂಡರ್‌ಸನ್ ಅವರ ಮಗ ಡೊನಾಲ್ಡ್ ಆಂಡರ್‌ಸನ್ ಅವರ ಪರಿಸರ ನೆನಪುಗಳ ಕಥನ. ಇದನ್ನು ಶ್ರೀಯುತ ಜೋಷುವಾ ಮ್ಯಾಥ್ಯೂ ಎಂಬವರು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ನಾನು ಅದನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ.
ಆ. `ಭೌತ ಕನ್ನಡಿ’ ಎಂಬ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪದಕೋಶ – ಪ್ರಸ್ತುತ ನಾನು ಈ ಕೃತಿಯನ್ನು ಬರೆಯುತ್ತಿದ್ದು ಇದು ೭೫% ಮುಗಿದಿದೆ. ಇದರಲ್ಲಿ ಇಂಗ್ಲೀಷಿನ ಎ ಇಂದ ಜೆಡ್ ತನಕದ ಭೌತಶಾಸ್ತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳು ಮತ್ತು ಅದಕ್ಕೆ ಕಿರು ವಿವರಣೆ ಇರುತ್ತದೆ. ಕನ್ನಡದಲ್ಲಿ ಲಘು ಅಥವಾ ಗಂಭೀರ ಭೌತಶಾಸ್ತ್ರ ಲೇಖನ ಅಥವಾ ಗ್ರಂಥಗಳನ್ನು ಬರೆಯುವವರಿಗೆ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಸಹಾಯವಾಗಲಿ ಎಂಬ ಉದ್ದೇಶವು ಈ ಕೃತಿ ರಚನೆಯ ಹಿಂದಿದೆ.
ಇ. ೧೯-೧೦-೨೦೨೨ರಂದು ಪ್ರಾರಂಭಿಸಿರುವ ನನ್ನ ಜಾಲಪುಟ `ಕನ್ನಡ ಸೇತು’ವನ್ನು ಪ್ರತಿ ಬುಧವಾರವೂ ನವೀಕರಿಸುತ್ತೇನೆ. ಇದರಲ್ಲಿ ಕನ್ನಡ ಪ್ರಸಂಗ (ಕನ್ನಡಕ್ಕೆ ಸಂಬಂಧಿಸಿದ ಅನುಭವಗಳ ಕಿರು ಕಥನ) , ಕನ್ನಡ ವಿವೇಕ (ವಾರಕ್ಕೊಂದು ಕನ್ನಡ ಗಾದೆಮಾತು ಅಥವಾ ಕನ್ನಡ ಕವಿನುಡಿಯ ವಿವರಣೆ) ಹಾಗೂ ಕನ್ನಡ ಕನ್ನಡಿ (ಇತರ ಜ್ಞಾನಶಿಸ್ತುಗಳಿಂದ ಕನ್ನಡಕ್ಕೆ ತಂದ ಐದು ಪದಗಳ ಪಟ್ಟಿ ಮತ್ತು ಅವುಗಳಿಗೆ ಕಿರುವಿವರಣೆ) ಎಂಬ ಮೂರು ಭಾಗಗಳಿರುತ್ತವೆ.
೯. ನಿಮ್ಮ ಕುಟುಂಬದ ಬಗ್ಗೆ ಹೇಳುವುದಾದರೆ
ನನ್ನ ಕುಟುಂಬದಲ್ಲಿ ನಾನು, ನನ್ನ ಇಪ್ಪತ್ತೊಂಬತ್ತು ವರ್ಷಗಳ ಬಾಳಸಂಗಾತಿ ಎ.ವಿ.ರವಿಕುಮಾರ್, ಮಕ್ಕಳು ರಶ್ಮಿ ರವಿಕುಮಾರ್ ಹಾಗೂ ಪ್ರಣತಿ ರವಿಕುಮಾರ್, ಮತ್ತು ನನ್ನ ತಂದೆ ಎಲ್.ಜಿ.ಗುರುರಾಜರಾವ್ ಇರುತ್ತೇವೆ. ನಮ್ಮ ಮನೆ ಬೆಂಗಳೂರಿನ ಹಂಪಿನಗರದಲ್ಲಿದೆ. ಕಳೆದ ಮೂರು ದಶಕಗಳಿಂದ ನಮ್ಮ ಕುಟಂಬದ ಮನೆವಾಳ್ತೆ ನಡೆಸಲು ನನಗೆ ಸಹಕರಿಸುವ ಯಲ್ಲಮ್ಮ ನಮ್ಮ ಕುಟುಂಬದ ಭಾಗವಾಗಿಬಿಟ್ಟಿದ್ದಾರೆ. ನಾನು ೧೯೯೧ರಲ್ಲಿ ಪ್ರಾರಂಭಿಸಿದ ನಮ್ಮ ಭರತನಾಟ್ಯ ಶಾಲೆ `ಚಿತ್ರನಾಟ್ಯ ಫೌಂಡೇಷನ್’ ನಮ್ಮ ಮನೆಯ ನೆಲಮಹಡಿಯಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ನಡೆಯುತ್ತಿದೆ. ನನ್ನ ಸಾಹಿತ್ಯ ಕೃಷಿಯ ಮತ್ತು ಸಂಗೀತ-ನೃತ್ಯಕಲಾ ವಿಷಯದ ಎಲ್ಲ ಕಾರ್ಯಗಳಿಗೂ ನನ್ನ ಕುಟುಂಬ ಸಂಪೂರ್ಣ ಸಹಕಾರ ನೀಡುತ್ತಿದ್ದು ಅದಕ್ಕಾಗಿ ನಾನು ಅವರಿಗೆ ತುಂಬ ಆಭಾರಿಯಾಗಿದ್ದೇನೆ.
೧೦. ನಿಮ್ಮ ಸಾಹಿತ್ಯ ಕೃಷಿ ನಡೆದು ಬಂದ ದಾರಿ
ನಾನು ಚಿಕ್ಕ ಹುಡುಗಿಯಾಗಿದ್ದಾಗಲಿಂದಲೂ ಬರೆಯುತ್ತಲೇ ಇದ್ದೇನೆ. ಬರವಣಿಗೆ ನನ್ನ ಜೀವನದ ಅವಿಭಾಜ್ಯ ಅಂಗವೆಂಬಷ್ಟು ಇಷ್ಟವಾದ ಚಟುವಟಿಕೆ ನನಗೆ. ಶುರು ಮಾಡಿದ್ದು ಶಾಲೆ, ಕಾಲೇಜುಗಳ ಮಟ್ಟದಲ್ಲಿ ಕವಿತೆ, ಪ್ರಬಂಧ, ಕಥೆ ಮುಂತಾದವನ್ನು ಬರೆಯುವ ಮೂಲಕ. ಅವು ಆ ಸಂಸ್ಥೆಗಳ ವಾರ್ಷಿಕ ಸಂಚಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಮುಂದೆ ೧೯೯೩ರಲ್ಲಿ ನಾನು ಅನುವಾದದ ಮೂಲಕ ಸಾಹಿತ್ಯ ಕ್ಷೇತ್ರವನ್ನು ಅಧಿಕೃತವಾಗಿ ಪ್ರವೇಶಿಸಿದೆ. ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಯ ಬರವಣಿಗೆ ನನ್ನ ಮುಂದಿನ ಹೆಜ್ಜೆಯಾಯಿತು. ಪಿ.ಎಚ್.ಡಿ. ಸಂಶೋಧನೆ ಪ್ರಕಟಗೊಂಡಿತು ಹಾಗೂ `ಹಂಪಿ ಕನ್ನಡ ವಿಶ್ವವಿದ್ಯಾಲಯ’ದ `ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ’ಯ ಸಂಪಾದನೆಯ ಕಾರ್ಯದಲ್ಲಿ ಭಾಗವಹಿಸಿದೆ. ಮುಂದೆ ಕಥಾ ಸಂಕಲನ, ವಿಮರ್ಶಾ ಸಂಕಲನ, ಮಕ್ಕಳ ನಾಟಕಗಳು, ಹಾಗೂ ಕವನ ಸಂಕಲನಗಳನ್ನು ಪ್ರಕಟಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಎಂ.ಎಚ್.ಕೃಷ್ಣಯ್ಯನವರ ಜೀವನ ಚರಿತ್ರೆಯನ್ನು ಬರೆದೆ. ನಾನೇ ಹಾಡಿದ ಸ್ವರಚಿತ ಭಾವಗೀತೆಗಳ ಮತ್ತು ಸ್ವರಚಿತ ಶಿಶುಗೀತೆಗಳ ಧ್ವನಿಸುರುಳಿಗಳನ್ನು ಹೊರತಂದೆ. ನನ್ನ ಭರತನಾಟ್ಯ ಶಾಲೆಗಾಗಿ ನಾಟ್ಯದ ಹಾಡುಗಳನ್ನು ಮತ್ತು ನೃತ್ಯನಾಟಕಗಳನ್ನು ಬರೆದೆ. ಈವರೆಗೆ ನನ್ನ ಹನ್ನೊಂದು ಕೃತಿಗಳು ಮತ್ತು ನೂರಾರು ಲೇಖನಗಳು ಪ್ರಕಟಗೊಂಡಿವೆ. ಕಳೆದ ಆರು ತಿಂಗಳುಗಳಿಂದ ‘ಕನ್ನಡ ಸೇತು’ ಎಂಬ ಜಾಲಪುಟದ ಬರವಣಿಗೆ ಮಾಡುತ್ತಿದ್ದೇನೆ. ನನ್ನ ಅಧ್ಯಾಪನ ಹಾಗೂ ಭರತನಾಟ್ಯ ಶಾಲೆಗಳ ನಿರ್ವಹಣಾ ಕರ್ತವ್ಯಗಳ ಜೊತೆಯಲ್ಲಿ ಇಷ್ಟು ಬರೆಯಲು ಸಾಧ್ಯವಾಯಿತಲ್ಲಾ ಎಂಬ ಸಮಾಧಾನ ಇದೆ. ಮುಂದೆ ಇನ್ನಷ್ಟು ಸಮಯವನ್ನು ಬರವಣಿಗೆಗೆ ಕೊಡಬೇಕೆಂಬ ಆಸೆ ಇದೆ ಹಾಗೂ ಆರೋಗ್ಯ ಮತ್ತು ವಿಶ್ವಶಕ್ತಿಗಳು ಅವಕಾಶ ಕೊಟ್ಟರೆ ನನ್ನ ಜೀವನದ ಕೊನೆಯ ತನಕ ಬರೆಯುವ ಆಸೆಯಿದೆ ನನಗೆ.
೧೧. ಭರತನಾಟ್ಯ ಮತ್ತು ಸಾಹಿತ್ಯದ ಬಗ್ಗೆ ಒಲವು ಮೂಡಲು ಕಾರಣ?
ಸಾಹಿತ್ಯದ ಬಗೆಗೆ ಒಲವು ಮೂಡಲು ಕಾರಣಗಳನ್ನು ಹಿಂದಿನ ಪ್ರಶ್ನೆಯೊಂದರಲ್ಲಿ ಹೇಳಿದ್ದೇನೆ. ಇನ್ನು ಭರತನಾಟ್ಯದ ಬಗ್ಗೆ ಹೇಳುವುದಾದರೆ ಇದಕ್ಕೆ ಮುಖ್ಯ ಕಾರಣ ನನ್ನ ತಾಯಿಯವರಾದ ದಿವಂಗತ ಶ್ರೀಮತಿ ಯು.ಕೆ.ಚಿತ್ರಾವತಿ. ಅವರಿಗೆ ತನ್ನ ಮಗಳು ಅಂದರೆ ನಾನು ಚೆನ್ನಾಗಿ ಓದಬೇಕು, ಜೊತೆಗೆ ಸಂಗೀತ, ನೃತ್ಯಗಳನ್ನು ಕಲಿಯಬೇಕು ಎಂಬ ಗಾಢವಾದ ಆಸೆ ಇತ್ತು. ಅದೃಷ್ಟವಶಾತ್ ನಾವು ಮಂಗಳೂರಿನ ಉರ್ವಸ್ಟೋರ್‌ನಲ್ಲಿ ವಾಸವಾಗಿದ್ದಾಗ ಮನೆಗೆ ತುಂಬ ಹತ್ತಿರದಲ್ಲಿ `ಲಲಿತಕಲಾ ಸದನ’ ಎಂಬ ಕಲಾಶಾಲೆಯಿದ್ದು ಕರ್ನಾಟಕ ಸಂಗೀತ ಹಾಗೂ ಭರತನಾಟ್ಯವನ್ನು ಅಲ್ಲಿ ಕಲಿಸುತ್ತಿದ್ದರು. ಅಲ್ಲಿ ನನ್ನ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತದ ಕಲಿಕೆಯು ಪ್ರಾರಂಭವಾದವು. ನನಗೆ ಸಂಗೀತ ಹಾಗೂ ಭರತನಾಟ್ಯ ಕಲಿಸಿದ ಗುರುಗಳಾದ ದಿ.ಸುಂದರಾಚರ‍್ಯರು, ಶ್ರೀಮತಿ ಭಾಗ್ಯಲಕ್ಷ್ಮಿ ಗುಂಡೂರಾವ್, ಶ್ರೀ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಶ್ರೀ.ಬಿ.ಪ್ರೇಮನಾಥ್, ಶ್ರೀಮತಿ ಪ್ರಸನ್ನ ಲಕ್ಷ್ಮಿ, ಕಲಾಮಂಡಲಂ ಶ್ರೀಮತಿ ಉಷಾ ದಾತಾರ್ – ಇವರನ್ನು ಸದಾ ಕೃತಜ್ಞತೆಯಿಂದ ಸ್ಮರಿಸುತ್ತೇನೆ.
೧೨. ತಮಿಳು ಕಾವ್ಯ ಮೀಮಾಂಸೆ ಕನ್ನಡಕ್ಕೆ ತಂದ ಸಂದರ್ಭ
ಕನ್ನಡ ಎಂ.ಎ.ನಲ್ಲಿ ನನಗೆ ವಿದ್ಯಾಗುರುಗಳಾಗಿದ್ದ ಡಾ.ಡಿ.ಆರ್.ನಾಗರಾಜ್ ಅವರು ೧೯೯೩ರಲ್ಲಿ, ಅಕ್ಷರ ಪ್ರಕಾಶನವು ಪ್ರಕಟಿಸಿದಂತಹ `ಅಕ್ಷರ ಚಿಂತನ ಮಾಲೆ’ ಎಂಬ ಮಹಾತ್ವಾಕಾಂಕ್ಷೀ ಕ್ರಿಯಾಯೋಜನೆಯ ಪ್ರಧಾನ ಸಂಪಾದಕರಾಗಿದ್ದರು. ನಾನು ಬಿ.ಎಸ್ಸಿ. ಪದವಿಯ ನಂತರ ಕನ್ನಡ ಎಂ.ಎ. ಓದಿದವಳಾದ್ದರಿಂದ ಹಾಗೂ ಒಂದಷ್ಟು ಲೇಖನಗಳನ್ನು ಬರೆಯುತ್ತಿದ್ದವಳಾದ್ದರಿಂದ ಮೇಷ್ಟ್ರಿಗೆ ನಾನು ಅನುವಾದ ಮಾಡಬಲ್ಲೆ ಅನ್ನಿಸಿರಬೇಕು. ಹೀಗಾಗಿ ನನ್ನ ಮೇಲೆ ನಂಬಿಕೆ ಇಟ್ಟು ಡಾ.ಕರ‍್ಲೋಸ್‌ರು ತಮಿಳಿನಲ್ಲಿ ಬರೆದು ಸುಚಿತ್ರಲತ ಅವರು ಇಂಗ್ಲೀಷಿಗೆ ಅನುವಾದಿಸಿದ ಕೃತಿಯನ್ನು ಕನ್ನಡಕ್ಕೆ ತರಲು ಅವಕಾಶವಾಯಿತು. ಅದೇ `ತಮಿಳು ಕಾವ್ಯ ಮೀಮಾಂಸೆ’.
೧೩. ನಿಮಗೆ ಖುಷಿ ತಂದ ಪ್ರಶಸ್ತಿ
ನನಗೆ ಬಂದ ಪ್ರತಿಯೊಂದು ಪ್ರಶಸ್ತಿಯೂ ಸಂತೋಷ ತಂದಿದೆ. ಏಕೆಂದರೆ ಪ್ರತಿಯೊಂದು ಪ್ರಶಸ್ತಿಯೂ ಕೊಟ್ಟವರ ಸುಮನಸ್ಸನ್ನು ಪ್ರಕಟಿಸಿವೆ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ.
೧೪. ಇವತ್ತಿನ ಮಹಿಳಾ ಲೋಕದ ಬಗ್ಗೆ ಹೇಳುವುದಾದರೆ
ಮಹಿಳಾ ಲೋಕಕ್ಕೆ ಇಡೀ ಮನುಕುಲದ ಚರಿತ್ರೆಯಲ್ಲೇ ಅತಿ ಹೆಚ್ಚು ಅವಕಾಶಗಳು ಮತ್ತು ಅತಿ ಹೆಚ್ಚು ಸವಾಲುಗಳು ಎದುರಾಗಿರುವ ಕಾಲ ಇದು. ಒಂದು ಕಡೆ, ಈವರೆಗೂ ಕಂಡು ಕೇಳರಿಯದ ಕ್ಷೇತ್ರಗಳಿಗೆ ಮಹಿಳೆಯರು ಕಾಲಿಡುವುದು ಮಾತ್ರವಲ್ಲ, ಅವುಗಳಲ್ಲಿ ಉತ್ತಮ ಸಾಧನೆಗಳನ್ನು ಸಹ ಮಾಡುತ್ತಿದ್ದಾರೆ, ಉದಾಹರಣೆಗೆ – ವಾಯುಸೇನೆ. ಆದರೆ ಜಾಗತೀಕರಣ ಹಾಗೂ ಅಗಾಧ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನಗಳು ಅನೇಕ ಕೌಟುಂಬಿಕ ಹಾಗೂ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗಿದ್ದು ಇದರಿಂದ ಮಹಿಳೆಯ ಬದುಕು ಹೇಳಲು ಅಸಾಧ್ಯವಾದ ಬದಲಾವಣೆಗಳನ್ನು ಕಾಣುತ್ತಿದೆ. ರಾತ್ರಿ ಪಾಳಿ ಕೆಲಸಗಳು, ಉದ್ಯೋಗಕ್ಕೋಸ್ಕರ ಒಂಟಿಯಾಗಿ ಮಾಡಬೇಕಾದ ವಿದೇಶ ಪ್ರಯಾಣಗಳು, ನಗರಗಳಲ್ಲಿ ಮದುವೆಗೆ ಪರ್ಯಾಯವಾಗಿ ಕಾಣಿಸಿಕೊಳ್ಳುತ್ತಿರುವ ಸಹ-ಜೀವನ(ಲಿವ್ ಇನ್), ಅಂಡಗಳನ್ನು ಶೇಖರಿಸುವುದು, ಬಾಡಿಗೆ ತಾಯ್ತನ, ಮೂರನೇ ಲಿಂಗಿಗಳ ಪ್ರಶ್ನೆ .. ಹೀಗೆ ಹತ್ತು ಹಲವು ಹೊಸ ರೀತಿಯ ಸವಾಲುಗಳು ನಗರದ ವಿದ್ಯಾವಂತ ಹೆಣ್ಣಿಗೆ ಎದುರಾಗಿವೆ. ‘ಹೆಣ್ಣು ಅಂದರೆ ಯಾರು?, ದೈಹಿಕ ಸ್ತ್ರೀಲಿಂಗಿಗಳೇ? ಅಥವಾ ಪುರುಷ ದೇಹದಲ್ಲಿದ್ದು ಹೆಣ್ಣಾಗ ಬಯಸುವವರೇ? ಎಂಬಂತಹ ಹೊಸ ಪ್ರಶ್ನೆಗಳು ಇಂದು ಎದುರಾಗಿವೆ. ನಿಧಾನವಾಗಿ ನಗರೀಕರಣಕ್ಕೆ ಒಳಗಾಗುತ್ತಿರುವ ಗ್ರಾಮೀಣ ಹೆಣ್ಣುಮಕ್ಕಳ ಮುಂದೆ ಹಳೆಯ (ಭ್ಯೂಣ ಹತ್ಯೆ, ಲಿಂಗ ಅಸಮಾನತೆ, ವಿದ್ಯಾಭ್ಯಾಸದಲ್ಲಿ ತಾರತಮ್ಯ, ವರದಕ್ಷಿಣೆ, ಮನೆಯಲ್ಲಿ ಹಿಂಸೆ ಮುಂತಾದವು) ಹಾಗೂ ಹೊಸ – ಎರಡೂ ರೀತಿಯ ಸವಾಲುಗಳಿವೆ. ಮಹಿಳೆಯ ಬದುಕೂ ಸೇರಿದಂತೆ ಎಲ್ಲವೂ ಬದಲಾಗುತ್ತಿರುವ ಕಾಲ ಇದು.
೧೫. ನಿಮ್ಮನ್ನು ಲೇಖಕಿ/ಕವಿ/ ವಿಮರ್ಶಕಿ ಎಂದು ಕರೆಸಿಕೊಳ್ಳಲು ಇಷ್ಟ ಪಡುತ್ತೀರಾ?
ನಾನು ಬರೆದದ್ದು ಅರ್ಥಪೂರ್ಣ ಎಂದು ಓದುಗರಿಗೆ ಅನ್ನಿಸಿದರೆ ಸಾಕು. ಬರೆಯುವವರೆಲ್ಲರ ಆಸೆಯೂ ಇದೇ ಅಲ್ಲವೇ? ನಾನು ಕವಿತೆ, ಕಥೆ, ವಿಮರ್ಶೆ ಏನು ಬರೆದರೂ ನನ್ನ ಮೂಲ ಉದ್ದೇಶ ಇದೇ ಆಗಿರುತ್ತದೆ. ನನ್ನನ್ನು ಹೇಗೆ ಕರೆಯುತ್ತಾರೆ ಎಂಬುದಕ್ಕಿಂತ ನಾನು ಬರೆದದ್ದು ಮನಸ್ಸುಗಳನ್ನು ತಲುಪಿದೆಯೇ ಎಂಬ ಪ್ರಶ್ನೆ ನನ್ನನ್ನು ಹೆಚ್ಚು ಕಾಡುತ್ತದೆ.
೧೬. ನಿಮ್ಮನ್ನು ಹೆಚ್ಚಾಗಿ ವಿಮರ್ಶಕಿ ಎಂದು ಕರೆಯಲು ಕಾರಣ?
ನಾನು ಪ್ರಾರಂಭದಲ್ಲಿ ಅನುವಾದ ಮತ್ತು ಪುಸ್ತಕ ವಿಮರ್ಶೆಯಿಂದ ಅಧಿಕೃತ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದವಳು. ಹೀಗಾಗಿ ವಿಮರ್ಶಕಿ ಎಂದು ಕರೆದರು ಅನ್ನಿಸುತ್ತೆ.
೧೭. ಅಧ್ಯಾಪನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?
ಚಿಕ್ಕಂದಿನಿಂದಲೂ ನನಗೆ ಯಾರಿಗಾದರೂ ಏನನ್ನಾದರೂ ಕಷ್ಟವಿರುವುದನ್ನು ಸರಳವಾಗಿ ವಿವರಿಸುವುದು ಅಂದರೆ ತುಂಬ ಇಷ್ಟವಿತ್ತು. ತರಗತಿಯ ಗೆಳತಿಯರಿಗೆ ಲೆಕ್ಕ ಹೇಳಿಕೊಡುವುದು, ವಿಜ್ಞಾನದ ಸೂತ್ರಗಳನ್ನು ವಿವರಿಸುವುದು, ಪದ್ಯಗಳನ್ನು ವಿವರಿಸುವುದು ಇವನ್ನೆಲ್ಲ ನಾನು ಮಾಡುತ್ತಿದ್ದೆ. ಹೀಗಾಗಿ ನನ್ನ ಮೂಲ ಆಸಕ್ತಿ ಅಧ್ಯಾಪನವೇ ಆಗಿತ್ತೆಂದು ಕಾಣುತ್ತದೆ. ನಾನು ಭರತನಾಟ್ಯ ಶಾಲೆಯನ್ನು ಪ್ರಾರಂಭಿಸಿದಾಗ ಕೇವಲ ಹತ್ತೊಂಬತ್ತು ವರ್ಷ ವಯಸ್ಸು ನನಗೆ. ಕನ್ನಡ ಎಂ.ಎ. ಫಲಿತಾಂಶ ಬರುವ ಮುಂಚೆಯೇ ನಾನು ಪದವಿಪೂರ್ವ ಕಾಲೇಜೊಂದರಲ್ಲಿ ಕನ್ನಡ ಪಾಠ ಮಾಡಲು ಪ್ರಾರಂಭಿಸಿದ್ದೆ. ನಾನು ಅಧ್ಯಾಪಕಿ ಆದದ್ದು ಆ ವೃತ್ತಿಯ ಬಗೆಗೆ ನನ್ನಲ್ಲಿದ್ದ ಆಳವಾದ ಆಸೆಯಿಂದ. ಸರ್ಕಾರಿ ಪದವಿ ಕಾಲೇಜಿಗೆ ನಾನು ಅಧ್ಯಾಪಕಿಯಾಗಿ ಸೇರಿ ಇಪ್ಪತ್ತೇಳು ವರ್ಷಗಳಾಗುತ್ತಾ ಬಂತು. ಅಂದಿನಿಂದ ಇಂದಿನವರೆಗೂ ನಾನು ತರಗತಿಗಳಲ್ಲಿ ಪಾಠ ಮಾಡುತ್ತಾ ತುಂಬ ಸಂತೋಷ ಪಟ್ಟಿದ್ದೇನೆ. ಆರನೇ ತರಗತಿಯ ಮಕ್ಕಳಿಂದ ಹಿಡಿದು ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳ ತನಕ ಅನೇಕ ಹಂತಗಳ ವಿದ್ಯಾರ್ಥಿಗಳಿಗೆ ನಾನು ಪಾಠ ಮಾಡುತ್ತೇನೆ. ನನ್ನ ತಂದೆಯ ತಂದೆ, ನನ್ನ ಸೋದರತ್ತೆ, ನನ್ನ ತಾಯಿ, ಚಿಕ್ಕಮ್ಮಂದಿರು ಇವರೆಲ್ಲರೂ ಅಧ್ಯಾಪಕರೇ ಆಗಿದ್ದರು. ಹೀಗಾಗಿ ಪಾಠ ಮಾಡುವುದು ನನ್ನ ವಂಶವಾಹಿಗಳಲ್ಲೇ ಇದೆ ಅನ್ನಿಸುತ್ತೆ. ಏನನ್ನಾದರೂ ವಿದ್ಯಾರ್ಥಿಗಳಿಗೆ ವಿವರಿಸಿದಾಗ ಅವರು ಅದನ್ನು ಅರ್ಥ ಮಾಡಿಕೊಂಡರು ಎಂಬುದು ಅಧ್ಯಾಪಕರಿಗೆ ಅರಿವಾದಾಗ ಉಂಟಾಗುವ ಸಂತೋಷ ತುಂಬ ದೊಡ್ಡದು. ನಾನೂ ಇದಕ್ಕೆ ಹೊರತಲ್ಲ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
Meeera adbhutha baragaarti, vimsrshaki, kalaaraadhaki, kalaaavide uttama praadhyaapaki
Ellakkinta migilaagi maanaveeya moulyagalanna ettihididuruvavaru.
Shubhawaagali
ನಾ ಕಂಡ ಅದ್ಭುತ ಅಧ್ಯಾಪಕರು. ನನ್ನ ನೆಚ್ಚಿನ ಗುರುಗಳು. ನಿಮ್ಮ ಕನ್ನಡ ತರಗತಿಗಳು ಈಗಲು ಕಣ್ಣಿಗೆ ಕಟ್ಟಿವೆ. ನಿಮ್ಮ ಆದರ್ಶಗಳು , ಸಮಯ ಪಾಲನೆ, ಹುಮಸ್ಸು , ಸರಳತೆ, ಕಲೆಯ ಮೇಲಿನ ಅಭಿಮಾನ ಯಾವಾಗಲು ನನ್ನನ್ನು ಹುರಿದುಂಬಿಸುತ್ತದೆ. ಧನ್ಯವಾದಗಳು ಮೀರಾ ಮೇಡಂ.
My favourite teacher.... Madam treat like her child ...no wards to say about Meera madam ......I really now miss u Madam.....I learn so many things ....
ಸಂಗೀತ,ಸಾಹಿತ್ಯ,ನಾಟ್ಯಗಳ ಅಪೂರ್ವ ಸಮ್ಮಿಲನದ ವ್ಯಕ್ತಿ ತ್ವ ಹೊಂದಿರುವ ಪ್ರತಿಭೆ ಡಾ..ಎಲ್.ಜಿ.ಮೀರಾ ಮೇಡಂ ಅವರ ಬದುಕು ಬರಹಗಳ ಕುರಿತ, ಸೂರ್ಯಕೀರ್ತಿಯವರ ಸಂದರ್ಶನ ಸೊಗಸಾಗಿದೆ. ಅಭಿನಂದನೆಗಳು.
I feel proud to be a dance student of Meera mam, She is my inspiration, I have learnt a lot from our madam.
All the best Meera mam💐💐
I feel very blessed to be student of Meera ma'am...she was the one who was always there with me when I was in degree..still I remember the gift she gave me..
Very good 👍 All the best Meera madam 😊😊
ಮೀರಾ ಮೇಡಮ್ ಅವರ ಬದುಕು ಬರಹ
ಇತರ ಹೆಣ್ಣು ಮಕ್ಕಳಿಗೆ ಮಾದರಿಯಾಗಿದೆ.
ಬಹುಮುಖ ಪ್ರತಿಭೆಯಾದ ಇವರ ಸಾಧನೆ
ಶ್ಲಾಘನೀಯ. ಸೂರ್ಯ ಕೀರ್ತಿ ಅವರ ಸಂದರ್ಶನವೂ
ತುಂಬಾ ಅರ್ಥಪೂರ್ಣವಾಗಿದೆ. ಈರ್ವರಿಗೂ ಅಭಿನಂದನೆಗಳು.
Very nice..
ಸೂರ್ಯಕೀರ್ತಿ ಮೀರಾ ಅವರ ಸಂದರ್ಶನ ಅತ್ಯಂತ ಮಾಹಿತಿಪೂರ್ಣವಾಗಿದೆ .ಅವರ ಬದುಕ ಬರಹಗಳ ಸಮಗ್ರ ಚಿತ್ರಣವನ್ನು ನಿಮ್ಮ ಪ್ರಶ್ನೆಗಳು ಕೊಡುವಂತೆ ಮಾಡಿವೆ .ನಿಮಗೆ ,ಮೀರಾ ಅವರಿಗೆ,ಮಿಂಚುಳ್ಳಿ ಎಂಬ ಸಾಹಿತ್ಯ ಪತ್ರಿಕೆಯ ಹೊಸ ಸಂಚಲನಕ್ಕೆಅಭಿನಂದನೆಗಳು
ಪ್ರೊ.ಟಿ.ಯಲ್ಲಪ್ಪ