ಕನಕದಾಸ ಜಯಂತಿಯ ಶುಭಾಶಯಗಳು
ಕನಕದಾಸರು ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಜಗತ್ತಿನ ಕಣ್ಣು ತೆರೆಸಲು ಶ್ರಮಿಸಿದ ದಾಸ ಶ್ರೇಷ್ಠರು. ಸಮಾಜದಲ್ಲಿ ಬೇರೂರಿದ್ದ ಸಾಂಸ್ಕೃತಿಕ ಅಸಮಾನತೆಯ ವಿರುದ್ಧ ಸಿಡಿದೆದ್ದು ಸಮಾನತೆಯ ತೊಟ್ಟಿಲು ತೂಗಲು ಹಂಬಲಿಸಿದರು. ಕನಕದಾಸರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು ಅವರ ಕನಸುಗಳು ಇನ್ನೂ ಸಾಕಾರಗೊಳ್ಳುವ ದಾರಿಯಲ್ಲಿಯೇ ಇರುವುದು ನಮ್ಮೆಲ್ಲರಿಗೂ ಇರಬೇಕಾದ ಎಚ್ಚರಿಕೆಯ ದನಿಯಾಗಿದೆ. ಇಂದು ಕನಕದಾಸರ ಹುಟ್ಟುಹಬ್ಬ ಅವರ ಬದುಕು ಬರಹ ಕುರಿತ ಒಂದು ಸೂಕ್ಷ್ಮ ಅವಲೋಕನವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
* ಕರ್ನಾಟಕ ಶ್ರೀಗಂಧದ ಬೀಡು. ಸಾಧು ಸಂತರು.. ಶರಣರು.. ದಾಸರ ತವರೂರು.ಭಕ್ತಿಯ ಅಖಂಡ ಬೀಡು. ಈ ನೆಲ ರಾಮ ಶಬರಿಯ ಭಕ್ತಿ ಪರೀಕ್ಷೆಗೆ ಸಾಕ್ಷಿ..ಹನುಮಂತನ ಭಕ್ತಿಯ ಅಖಂಡ ಅಗೋಚರ ನಿತ್ಯನೂತನವಾಗಿ ನಲಿದಾಡಿದ ಪವಿತ್ರ ಧರೆ.
* 12 ನೇ ಶತಮಾನದ ಬಸವಾದಿ ಶರಣರ ಕಾಲಮಾನ.. ಜಗತ್ತಿಗೆ ಮೊದಲ ಸಂಸತ್ತು ಪ್ರಜಾಪ್ರಭುತ್ವದ ಬುನಾದಿ ಹಾಕಿಕೊಟ್ಟ ಪಾವನ ನೆಲದಲ್ಲಿ ಹರಿಭಕ್ತಿಯ ರಸ ಗಂಗೆ ಹರಿಸಿದ ದಾಸರ ಕೀರ್ತನೆಗಳಿಗೆ ಸಾಕ್ಷಿಯಾದ ಕರುನಾಡು ಎಂಬ ಹೆಮ್ಮೆ ನಮ್ಮದು . ಅಂತಹ ಕೀರ್ತನೆಗಳನ್ನು ರಚಿಸಿ ಭಗವಂತನ ಒಲಿಸಿಕೊಂಡಿದ್ದಕ್ಕೆ ನೆಲೆ ನಿಂತ ಉಡುಪಿಯ ಕನಕನ ಕಿಂಡಿ ಸೂರ್ಯನಂತೆ ಬೆಳಗುತಿದ್ದಾನೆ .
* ಇಂದು ಕರ್ನಾಟಕದ ಪ್ರಸಿದ್ದ ಕೀರ್ತನಾಕಾರರು, ಹರಿಭಕ್ತ ದಾಸರು, ಶ್ರೀಕೃಷ್ಣನ ಪರಮ ಭಕ್ತರು, ವ್ಯಾಸರಾಯರ ಪರಮ ಭಕ್ತರು, ಕನ್ನಡ ಕೀರ್ತನಾ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾದ ಕನಕದಾಸರ ಜಯಂತಿಯನ್ನು ಆಚರಿಸುತ್ತಿದ್ದೇವೆ.
* ಇವರು 15 ನೇ ಶತಮಾನದ ಜನಪ್ರಿಯ ಭಕ್ತಿಪಂಥದ ದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250 ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೆ ಶೂದ್ರದಾಸರು.
* ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಾಡ ಎಂಬ ಗ್ರಾಮದಲ್ಲಿ 1486 ರಲ್ಲಿ ಜನಿಸಿದರು.ತಂದೆ ಬೀರಪ್ಪನಾಯಕ ತಾಯಿ ಬಚ್ಚಮ್ಮ. ತುಂಬಾ ದಿನಗಳ ನಂತರ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಜನಿಸಿದ ಮಗನಿಗೆ ತಿಮ್ಮಪ್ಪನಾಯಕ ಎಂದು ಹೆಸರಿಟ್ಟರು. ಇವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, 15 ಮತ್ತು 16 ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ದ ಸಮರ ಸಾರಿ, ದೇವರನ್ನು ಒಲಿಸಿಕೊಂಡು, ಭಕ್ತ ಕನಕದಾಸರೆಂಬ ಬಿರುದಾಂಕಿತನಾದರು.
* ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೀರ್ತನೆಗಳ ಮೂಲಕ ಅನರ್ಘ ಕೊಡುಗೆಯನ್ನು ನೀಡಿದವರು . ದಾಸ ಸಾಹಿತ್ಯದ ಶ್ರೇಷ್ಟದಾಸರಲ್ಲಿ ಕನಕದಾಸರು ಒಬ್ಬರು. ಇವರು ತಮ್ಮ ಕೀರ್ತನೆಗಳ ಮೂಲಕ ಮನುಜ ಕುಲವನ್ನು ಸನ್ಮಾರ್ಗದತ್ತಾ ಕೊಂಡೊಯ್ದು ವಿಶ್ವಮಾನವರೆನಿಸಿಕೊಂಡರು.
* ವಿಜಯನಗರ ಸಾಮ್ರಾಜ್ಯದಲ್ಲಿ ಬೀರಪ್ಪ ನಾಯಕ ಡಣ್ಣಾಯಕರಾಗಿದ್ದರು.ಅಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ಸೈನ್ಯಾಧಿಪತಿಯಾಗಿದ್ದರು. ಇವರು ತನ್ನ ಮಗ ತಿಮ್ಮಪ್ಪನಿಗೆ ಅಕ್ಷರಾಭ್ಯಾಸ ವ್ಯಾಕರಣಗಳ ಜೊತೆಗೆ ಕುದುರೆ ಸವಾರಿ ಕಲಿಸಿದ್ದರು. ತಂದೆಯ ಮರಣ ನಂತರ ಇವರು ಬಂಕಾಪುರದಲ್ಲಿ ಡಣ್ಣಾಯಕರಾದರು.ಯುದ್ಧವೊಂದರಲ್ಲಿ ಸೋತ ನಂತರ ಇವರಲ್ಲಿ ವೈರಾಗ್ಯ ಉಂಟಾಗಿ, ವ್ಯಾಸರಾಯರಿಂದ ದೀಕ್ಷೆ ಪಡೆದು, ಹರಿಭಕ್ತರಾಗಿ ಕನಕದಾಸರಾದರು. ಇವರು ಬಾಡ ಗ್ರಾಮದಲ್ಲಿ ಆದಿಕೇಶವನ ಮೂರ್ತಿ ತಂದು ಪ್ರತಿಸ್ಟಾಪನೆ ಮಾಡಿ ದೇವಾಲಯ ಕಟ್ಟಿಸಿದರು.
* ವ್ಯಾಸರಾಯರ ಮದ್ವ ತತ್ವವನ್ನು ಕಲಿತು ಅದನ್ನು ಅನುಸರಿಸಿದ ಕನಕದಾಸರು ಉಡುಪಿ ಶ್ರೀಕೃಷ್ಣನ ಅನನ್ಯ ಭಕ್ತರು.ಅನೇಕರ ಅಭಿಪ್ರಾಯದಂತೆ ಉಡುಪಿಯ ದೇವಾಲಯದಲ್ಲಿ ಕನಕರಿಗೆ ಪ್ರವೇಶ ದೊರೆಯದೇ ಹೋದಾಗ ದೇವಾಸ್ಥಾನದ ಹಿಂದೆ ನಿಂತು ಹಾಡ ತೊಡಗಿದರಂತೆ. ಇವರ “ಬಾಗಿಲನು ತೆಗೆದು ಸೇವೆಯನು ಕೊಡು ಹರಿಯೇ” ಎಂಬ ಭಕ್ತಿಸುಧೆಗೆ ಶ್ರೀಕೃಷ್ಣನು ಒಲಿದು ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮಖವಾಗಿ ತಿರುಗಿ ಕನಕನಿಗೆ ದರ್ಶನ ನೀಡಿದನಂತೆ. ಆ ಕಿಂಡಿಯನ್ನು *ಕನಕ ಕಿಂಡಿ *ಎಂದೇ ಕರೆಯಲಾಗುತ್ತದೆ . ಈಗಲೂ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕೃಷ್ಣ ದರ್ಶನ ನೀಡಿದ ಹಿಂಬಾಗ ಗೋಡೆಯ ಕಡೆಯಿಂದಲೇ ಪೂಜೆಗಳು ನಡೆಯುತ್ತವೆ.
*ನಾವು ಕುರುಬರು.
ನಮ್ಮ ದೇವರು ಬೀರಯ್ಯ .
ಕಾವ ನಮ್ಮಜ್ಜ
ನರಕುರಿ ಹಿಂಡುಗಳ.
ಎಂದು ವಿನೀತ ಜಾತಿ ಭಾವನೆಯನ್ನು ತೋರಿದ್ದ ಕನಕದಾಸರು ವ್ಯಾಸರಾಯರ ಶಿಷ್ಯರಾದ ನಂತರ ಕುಲ ಕುಲವೆಂದು ಹೊಡೆದಾಡದಿರಿ..ಕುಲದ ನೆಲೆಯ ನೀವೆನಾದರೂ ಬಲ್ಲಿರಾ… ಎಂದು ಜಾತಿ ಪದ್ದತಿಯನ್ನು ಜಂಕಿಸಿ ಕೇಳುವಂತಾದರು.
* ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟಿಗಾಗಿ, ತುತ್ತು ಹಿಟ್ಟಿಗಾಗಿ ಎಂಬ ಇವರ ಕಾವ್ಯ ಭಾವಾರ್ಥವು ಯುವಕರ ಮನ ಮಿಡಿಯುವ ಮೂಲಕ ಅವರನ್ನು ಗುರಿ ಸಾಧನೆಯೆಡೆಗೆ ಒಯ್ಯುವಂತೆ ಮಾಡಿದ ನಮ್ಮ ಶ್ರೇಷ್ಠ ಸಂತ ಕವಿಯೇ ಕನಕದಾಸರು .
* ಇವರ ಹೆಸರು ಕನಕ. ಕನಕ ಎಂದರೇ ಬಂಗಾರ. ಮಣ್ಣಿನಲ್ಲಿನ ಅದಿರು ಸೋಸಿ ಅಪ್ಪಟ ಕನಕ ಆಗುವಂತೆ …ಕನಕರು ಕೂಡ ಈ ಸಮಾಜದ ಬದಲಾವಣೆಯ ಉರಿಗೆ ತನು ಮನವನ್ನು ದಾರೆಯೆರೆದು ಅಪ್ಪಟ ಕನಕವಾಗಿ ಪುಟಿದೆದ್ದರು .
*ಕಾಗಿನೆಲೆ ಆದಿಕೇಶವ ಎಂಬುದು ಇವರ ಕೀರ್ತನೆಗಳ ಅಂಕಿತನಾಮ.
ಕನಕದಾಸರ ಸಾಹಿತ್ಯದ ಪ್ರಮುಖ ಪ್ರಕಾರಗಳೆಂದರೇ…
(1) ಮೋಹನ ತರಂಗಿಣಿ .
42 ಸಂದಿಗಳಿಂದ ಕೂಡಿ ಸಾಂಗತ್ಯದಲ್ಲಿ 2798 ಪದ್ಯಗಳಿವೆ. ಇಲ್ಲಿ ಕೃಷ್ಣ ಚರಿತ್ರೆಯನ್ನು ತನ್ನ ರಾಜ ಕೃಷ್ಣದೇವರಾಯನಿಗೆ ಹೋಲಿಸಿ ರಚಿಸಿರುವರು.
(2) ನಳ ಚರಿತ್ರೆ
ನಳ ಚರಿತ್ರೆಯಲ್ಲಿ 9 ಸಂದಿಗಳಿಂದ ಕೂಡಿದ್ದು, 481 ಪದ್ಯಗಳು, ಭಾಮಿನಿ ಷಟ್ಫದಿಯಲ್ಲಿ ರಚನೆಯಾಗಿವೆ. ಇದು ನಳ ದಮಯಂತಿರ ಪ್ರೇಮ ಕಥೆಯಾಗಿದೆ .
(3) ರಾಮಧಾನ್ಯ ಚರಿತೆ .
ಇದು ಭಾಮಿನಿ ಷಟ್ಪದಿಯಲ್ಲಿ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಧಾನ್ಯ ಅಕ್ಕ ಹಾಗೂ ಬಡವರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯ ರೂಪದಲ್ಲಿವೆ.
(4) ಹರಿಭಕ್ತಸಾರ
ಹರಿಭಕ್ತಸಾರವು 110 ಭಕ್ತಿಪದ್ಯಗಳಿರುವ ಗ್ರಂಥವಾಗಿದ್ದು, ಸರಳ ಕನ್ನಡದಲ್ಲಿ ರಚಿತವಾಗಿರುವ ಭಗವಧ್ಗೀತೆಯಂತಿದೆ.
(5) ನೃಸಿಂಹಸ್ತವ
*ಕನಕದಾಸರು ವ್ಯಾಸರಾಯರ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ನಡೆದ ಘಟನೆಯನ್ನು ತಿಳಿಯೋಣ.
*ಕನಕನು ವ್ಯಾಸರಾಯರ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಗುರುಗಳಿಗೆ ತನ್ನ ಶಿಷ್ಯರ ಬುದ್ಧಿವಂತಿಕೆಯನ್ನು ಹಾಗೂ ತನ್ನ ಬೋಧನೆಯ ಪ್ರತಿಫಲವನ್ನು ಅರಿಯಬೇಕೆಂಬ ಮನಸ್ಸಾಯಿತು. ಅದಕ್ಕಾಗಿ ಅವರು ತನ್ನ ಎಲ್ಲಾ ಶಿಕ್ಷಕರನ್ನು ಕರೆದು ಒಂದೊಂದು ಬಾಳೆಹಣ್ಣು ಕೊಟ್ಟು ಈ ಬಾಳೆಹಣ್ಣನ್ನು ನೀವು ಯಾರು ಇಲ್ಲದ ಸ್ಥಳದಲ್ಲಿ ತಿಂದು ಬರಬೇಕೆಂದು ಆಜ್ಞಾಪಿಸಿದರು. ಎಲ್ಲಾ ಮಕ್ಕಳು ಯಾರೂ ಇಲ್ಲದ ಜಾಗ ಹುಡುಕಿ ಬಾಳೆಹಣ್ಣು ತಿಂದರು. ಮರುದಿನ ಗುರುಗಳು ತನ್ನೆಲ್ಲಾ ಶಿಷ್ಯರನ್ನು ನಿನ್ನೆ ಕೊಟ್ಟ ಹಣ್ಣು ಯಾರ್ಯಾರು ಹೇಗೆ ಎಲ್ಲಿ ತಿಂದಿರಿ ಯಾರು ನೋಡಲಿಲ್ಲಾ ತಾನೆ ಎಂದು ಹೇಳಿದರು. ಆಗ ಶ್ರೀಪಾದನೆಂಬ ಶಿಷ್ಯನು ಗುರುಗಳೇ ನಾನು ಎಲ್ಲರೂ ಮಲಗಿದ ಮೇಲೆ ಮೆಲ್ಲನೆ ಎದ್ದು ಕತ್ತಲೆ ಕೋಣೆಯಲ್ಲಿ ಬಾಳೆಹಣ್ಣು ತಿಂದೆನು ಎಂದನು. ಶ್ರೀವಲ್ಲಭನು ನಾನು ಮಾಳಿಗೆಯ ಹೊರಗೆ ಹೋಗಿ ಯಾರೂ ನೋಡದಂತೆ ತಿಂದೆನು ಗುರುಗಳೇ ಎಂದನು. ಕೇಶವನ ಸರಧಿ ಬಂತು. ಆಗ ಅವನು ನಮ್ಮ ಹಿತ್ತಲಿನಲ್ಲಿ ದೊಡ್ಡದೊಂದು ಬೇವಿನಮರವಿದೆ. ಅದರ ಏರಿ ಕುಳಿತು ಹಣ್ಢು ತಿಂದೆನು. ಯಾರಿಗೂ ಕಾಣಲಿಲ್ಲಾ ಗುರುಗಳೆ ಎಂದನು. ನಾರಾಯಣ ನೀನು ಎಲ್ಲಿ ಬಾಳೆಹಣ್ಣು ತಿಂದೆ ಎಂದು ಗುರುಗಳು ಕೇಳಲು ಅವನು ಗುರುಗಳೇ ನಾನು ದೇವರ ಮನೆಯಲ್ಲಿ ಬಾಗಿಲು ಮುಚ್ಚಿಕೊಂಡು ಗಬಗಬನೆ ತಿಂದು ಮುಗಿಸಿದೆ ಎಂದನು. ನೋಡೀ ಮಕ್ಕಳೇ ನೀವೆಲ್ಲರೂ ಯಾರು ಇಲ್ಲದ ಸ್ಥಳ ಹುಡುಕಿ ಬಾಳಹಣ್ಣು ತಿಂದು ಬಂದಿರುವಿರಿ. ಆದರೆ ಈ ಕನಕನ ಕೈಯಲ್ಲಿ ಬಾಳೆಹಣ್ಣು ಹಾಗೆ ಇದೆ ಎಂದರು. ಆಗ ಎಲ್ಲಾ ಶಿಷ್ಯರು ನಗಲಾರಂಬಿಸಿದರು. ಆಗ ಗುರುಗಳು ಇಲ್ಲಿ ಬಾ ಕನಕ .ನೀನೇಕೆ ಬಾಳೆಹಣ್ಣು ತಿನ್ನಲಿಲ್ಲಾ .ನಿನಗೆ ಈ ಭೂಮಿಯ ಮೇಲೆ ಯಾರು ಇಲ್ಲದ ಜಾಗ ಸಿಗಲಿಲ್ಲವೇ ಎಂದರು.
ಆಗ ಕನಕನು ಇಲ್ಲಾ ಗುರುಗಳೇ ನನ್ನನ್ನು ಕ್ಷಮಿಸಿ ನನಗೆ ಯಾರು ಇಲ್ಲದ ಸ್ಥಳವೇ ಸಿಗಲಿಲ್ಲಾ. ದೇವರು ಎಲ್ಲಾ ಕಡೆಗೂ ಇದ್ದಾನೆ. ನಮ್ಮ ಎಲ್ಲಾ ಕೆಲಸಗಳನ್ನು ನೋಡುತ್ತಿರುತ್ತಾನೆ. ಅದಕ್ಕಾಗಿ ನನಗೆ ಮನೂಷ್ಯರ ಕಣ್ಮು ತಪ್ಪಿಸಿದರು ದೇವರ ಕಣ್ಣು ತಪ್ಪಿಸಿ ಹಣ್ಣು ತಿನ್ನಲು ಸಾಧ್ಯವಾಗಲಿಲ್ಲಾ ಎಂದರು . ಆಗ ವ್ಯಾಸರಾಯರಿಗೆ ಕನಕನ ಉತ್ತರ ಕೇಳಿ ಬಹಳ ಸಂತಸವಾಯಿತು. ನಿನ್ನ ಮಾತು ಸತ್ಯ ಕನಕ ಆ ದೇವನು ಸರ್ವಂತರ್ಯಾಮಿ ಎಂದು ಹೇಳಿ ಇತರ ಮಕ್ಕಳಿಗೂ ಕನಕನಂತೆ ಯೋಚಿಸಿರಿ ಎಂದು ಹೇಳಿದರು .
* ಕನಕದಾಸ ಅಂದು ನಡೆದು ತೋರಿದ ದಾರಿಯು ಇಂದು ನಮಗೂ ಗಗನ ಕುಸುಮವಾಗಿದೆ.ಮಂಗಳ ಗ್ರಹ ಸಮೀಪ ಆಗಿದೆ.ಆದರೆ ಅವರು ನಡೆದು ಬಂದ ಹೆಜ್ಜೆ ಗುರುತಿನ ಮೇಲೆ ನಾವು ನಡೆಯಲು ಆಗದಷ್ಟು ದೂರವಾಗಿದ್ದೇವೆ ಎಂಬ ವಿಪರ್ಯಾಸದ ಮಧ್ಯದಲ್ಲಿ ಬಾಳು ಬೆಳದಿಂಗಳ ಹಂದರ ಆಗಿಸಬೇಕಾಗಿದೆ. ಕನಕದಾಸರ ನಡೆ ನುಡಿಗಳನ್ನು ಪಾಲಿಸಿ ಅವರ ಜಯಂತಿ ಸಾರ್ಥಕ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ .
* ಇಂತಹ ಮಹಾನ್ ದೈವಭಕ್ತನ ಹುಟ್ಟು ಹಬ್ಬವನ್ನು ನಾವು ಇಂದು ಬಹಳ ಸಡಗರ ಸಂಭ್ರಮದಿಂದ ಆಚರಿಸೋಣ . ಮತ್ತೊಮ್ಮೆ ಎಲ್ಲರಿಗೂ ಕನಕದಾಸ ಜಯಂತಿಯ ಶುಭಾಶಯಗಳು.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…