ಪ್ರಪಂಚದಲ್ಲಿ ಅನೇಕ ಧರ್ಮಗಳು ಹುಟ್ಟಿ ಬೆಳೆದಿವೆ. ಒಂದೊಂದು ಧರ್ಮಕ್ಕೆ ಸಂಬಂಧಿಸಿದಂತೆ ಪವಿತ್ರ ಗ್ರಂಥಗಳಿವೆ. ಮನುಷ್ಯನ ನಂಬಿಕೆಗಳನ್ನು, ದೇವರು ಮತ್ತು ಮಾನವ ಹಾಗೂ ಮಾನವ-ಮಾನವರ ಪರಸ್ಪರ ಸಂಬಂಧಗಳನ್ನು ನಿರೂಪಿಸುವುದು ಧಾರ್ಮಿಕ ಸಾಹಿತ್ಯದ ಗುರಿ. ಕೆಲವು ಧಾರ್ಮಿಕ ಸಾಹಿತ್ಯ ಕೃತಿಗಳಲ್ಲಿ ಉತ್ತಮ ಕಾವ್ಯಾಂಶಗಳನ್ನು ನಾವು ಕಾಣಬಹುದು.
ಅತ್ಯಂತ ಪ್ರಾಚೀನ ಧಾರ್ಮಿಕ ಸಾಹಿತ್ಯದ ಸುಳುಹು ಈಜಿಪ್ಟಿನ ಸಮಾಧಿಗಳಾದ ಪಿರಿಮಿಡ್ ಗಳಲ್ಲಿ ದೊರಕುತ್ತವೆ. ಕ್ರಿಸ್ತಪೂರ್ವ 2600 ವರ್ಷಗಳ ಹಿಂದೆ ರಚಿತವಾದ ಈ ಪಿರಿಮಿಡ್ ಗಳ ಒಳಗೋಡೆ ಶವದ ಪೆಟ್ಟಿಗೆಗಳ ಮುಚ್ಚಳ ಮತ್ತು ಬದಿಗಳಲ್ಲಿ ಪ್ರಾರ್ಥನಾ ಶ್ಲೋಕಗಳನ್ನು ಕೆತ್ತಿರುವುದು ಕಂಡುಬರುತ್ತದೆ.
ಹಿಂದುಗಳಿಗೆ ಅತ್ಯಂತ ಪವಿತ್ರವೂ, ಪ್ರಾಚೀನವೂ ಆದ ವೇದಗಳು ಜಗತ್ತಿನ ಮೊಟ್ಟ ಮೊದಲನೆಯ ಧಾರ್ಮಿಕ ಸಾಹಿತ್ಯ ಸಂಕಲನ ಎನ್ನಬಹುದು. ವೇದ ಎಂದರೆ ತಿಳುವಳಿಕೆ, ಜ್ಞಾನ ಎಂದರ್ಥ. ವೇದಗಳಲ್ಲಿ ಸ್ತೋತ್ರ, ಆರಾಧನ ವಿಧಾನ, ಮಂತ್ರ, ಹಾಡುಗಳಿವೆ. ವೇದಗಳ ಒಂದು ಭಾಗವಾದ ಉಪನಿಷತ್ತುಗಳಲ್ಲಿ ತತ್ವ ವಿವೇಚನೆಯಿದೆ. ಈ ಸಂಬಂಧದಲ್ಲಿ ಬರುವ ಕಥೆಗಳು ಮೋಹಕವಾಗಿವೆ. ಪ್ರಾಚೀನ ಭಾರತದ ಜನರ ಧಾರ್ಮಿಕ ನಂಬಿಕೆಗಳ ಮೇಲೆ ಬೆಳಕು ಚೆಲ್ಲುವ ವೇದಗಳು ಪ್ರಪಂಚದ ಧಾರ್ಮಿಕ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಗಳಿಸಿವೆ.
ಧಾರ್ಮಿಕ ಸಾಹಿತ್ಯವಾದ ಭಗವದ್ಗೀತೆ ಹಿಂದೂ ಧರ್ಮದ ಆಧಾರ ಗ್ರಂಥಗಳಲ್ಲಿ ಒಂದು. ಇದು ಮಹಾಕಾವ್ಯವಾದ ಮಹಾಭಾರತದ ಒಂದು ಭಾಗ. ತನ್ನ ಗುರುಗಳು ಹಿರಿಯರು ಬಂಧುಗಳ ಮೇಲೆ ಯುದ್ಧ ಮಾಡಿ ಅವರನ್ನು ಕೊಲ್ಲುವುದು ಅಧರ್ಮವೆಂದು ಭಾವಿಸಿದ ಅರ್ಜುನ ಯುದ್ಧ ಮಾಡುವುದಿಲ್ಲವೆಂದು ಹಠ ಹಿಡಿಯುತ್ತಾನೆ. ಆಗ ನಿಜವಾದ ಧರ್ಮ ಯಾವುದು ಎಂಬುದನ್ನು ತಿಳಿಸಲು ಶ್ರೀಕೃಷ್ಣ ಅವನಿಗೆ ಮಾಡಿದ ಉಪದೇಶವೇ ಭಗವದ್ಗೀತೆ.
ಬೌದ್ಧರ ಧರ್ಮ ಗ್ರಂಥಗಳಾದ ತ್ರಿಪಿಟಿಕಗಳು, ಬೌದ್ಧರ ಧಾರ್ಮಿಕ ಸಾಹಿತ್ಯದಲ್ಲಿ ಪ್ರಧಾನವಾದವು. ಬುದ್ಧನು ತನ್ನ ಶಿಷ್ಯರಿಗೆ ಮಾಡಿದ ಉಪದೇಶ. ಬೌದ್ಧ ಬಿಕ್ಷುಗಳು ಅನುಸರಿಸಬೇಕಾದ ಧಾರ್ಮಿಕ ವಿಧಿಗಳು, ಮತ್ತು ಬೌದ್ಧ ಧರ್ಮದ ಸಿದ್ಧಾಂತಗಳನ್ನು ತ್ರಿಪಿಟಿಕಗಳು ಒಳಗೊಂಡಿವೆ. ಇವು ಬೌದ್ಧ ಧರ್ಮ ಆಧಾರ ಗ್ರಂಥಗಳು. “ದಮ್ಮಪದ” ಬೌದ್ಧರ ಇನ್ನೊಂದು ಧಾರ್ಮಿಕ ಗ್ರಂಥ.
ಉತ್ತರ ಭಾರತದ ಚೈತನ್ಯ ಮಹಾಪ್ರಭು, ಕಬೀರ್, ಮೀರಾಬಾಯಿ, ಮಹಾರಾಷ್ಟ್ರದ ನಾಮದೇವ, ಜ್ಞಾನದೇವ, ತುಕಾರಾಂ ಮುಂತಾದವರ ಭಕ್ತಿಗೀತೆಗಳು ಜನರಲ್ಲಿ ಧಾರ್ಮಿಕ ಭಾವನೆಯನ್ನು ಬೆಳೆಸಲೆಂದೇ ರಚಿತವಾದವು. ಕರ್ನಾಟಕದ ದಾಸರ ಪದಗಳು ಶಿವಶರಣ ಶರಣೆಯರ ವಚನಗಳು, ತಮಿಳುನಾಡಿನ ನಾಯನಾರರು, ಆಳ್ವಾರರ ಕೃತಿಗಳು ಉತ್ತಮವಾದ ಧಾರ್ಮಿಕ ಸಾಹಿತ್ಯ. ” ಗ್ರಂಥ ಸಾಹೇಬ್” ಶಿಕ್ಖರ ಧಾರ್ಮಿಕ ಗ್ರಂಥ.
“ಬೈಬಲ್” ಜಗತ್ತಿನ ಧಾರ್ಮಿಕ ಸಾಹಿತ್ಯದಲ್ಲಿ ಗಣ್ಯ ಸ್ಥಾನ ಪಡೆದಿರುವ ಗ್ರಂಥ ಇದರಲ್ಲಿ ಹಳೆಯ ಒಡಂಬಡಿಕೆ, ಹೊಸ ಒಡಂಬಡಿಕೆ ಎಂದು ಎರಡು ಭಾಗಗಳು. ಹಳೆಯ ಒಡಂಬಡಿಕೆ ಯಹೂದಿಗಳ ಧರ್ಮಕ್ಕೆ ಸಂಬಂಧಿಸಿದ್ದು, ಹೊಸ ಒಡಂಬಡಿಕೆ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ್ದು. ಬೈಬಲ್ ನಲ್ಲಿ ಕ್ರೈಸ್ತರ ಧಾರ್ಮಿಕ ವಿಚಾರಗಳಲ್ಲದೆ, ಐತಿಹಾಸಿಕ ಅಂಶಗಳು ಸೇರಿವೆ. ಈ ಗ್ರಂಥದ ಹಲವು ಭಾಗಗಳು ಉತ್ತಮ ಸಾಹಿತ್ಯ ಅಂಶದಿಂದ ಕೂಡಿವೆ.
ಮಹಮ್ಮದಿಯರ ಪ್ರಧಾನ ಧಾರ್ಮಿಕ ಗ್ರಂಥ “ಕುರಾನ್” ಅಂದರೆ ನಿರೂಪಣೆ, ಕಥನ ಉಪದೇಶಗಳು ಇದರಲ್ಲಿವೆ. “ಜೆಂಡ ಅವೆಸ್ತಾ”ಪಾರಸಿಕರ ಧರ್ಮ ಗ್ರಂಥ. ಅವೆಸ್ತಾ ಎಂದರೆ ಜ್ಞಾನ, ಜರಿತುಷ್ಟ ಬೋಧಿಸಿದ ಧಾರ್ಮಿಕ ತತ್ವಗಳು ಇದರಲ್ಲಿವೆ. “ಟಾಲ್ಮೂಡ್” ಯೆಹೂದಿಗಳ ಪವಿತ್ರ ಗ್ರಂಥ. ಟಾಲ್ಮೂಡ್ ಎಂದರೆ ಹಿಬ್ರೂ ಭಾಷೆಯಲ್ಲಿ ಶಿಕ್ಷಣ ಅಥವಾ ಅಧ್ಯಯನ. ಟಾಲ್ಮೂಡ್ ನಲ್ಲಿ ಮಿಶ್ ನಾ ಮತ್ತು ಗೆಮಾರ ಎಂದು ಎರಡು ಭಾಗಗಳು. ಇವುಗಳಲ್ಲಿ ಮೊದಲನೆಯದರಲ್ಲಿ ಪರಂಪರಾಗತ ಧಾರ್ಮಿಕ ಕರ್ತವ್ಯಗಳು ಮತ್ತು ಕಾನೂನುಗಳು ಇವೆ. ಎರಡನೆಯ ಭಾಗದಲ್ಲಿ ವ್ಯಾಖ್ಯಾನಗಳಿವೆ. ಇದು ಯಹೂದ್ಯರ ಧರ್ಮವನ್ನು ಅದರ ಆಚರಣೆಯನ್ನು ಇತಿಹಾಸವನ್ನು ಒಳಗೊಂಡಿದೆ.
ಚೀನಾ ದೇಶದಲ್ಲಿ ಪರಂಪರಾಗತವಾಗಿ ಬಂದ ಧಾರ್ಮಿಕ ವಿಚಾರಗಳನ್ನು ಕನ್ಫ್ಯೂಸಿಯಸ್ ಅನ್ನು ರೂಪಿಸಿದ ಗ್ರಂಥದಲ್ಲಿ ಕಾಣಬಹುದು. ಚೀನಾದ ಇನ್ನೊಬ್ಬ ಧೀಮಂತ ವ್ಯಕ್ತಿ ಲಾವೋ ತ್ಸೆ ರಚಿಸಿದ “ತಾವೊ ಚಿಯಾಂಗ್” ಚೀನಾದ ಇನ್ನೊಂದು ಧಾರ್ಮಿಕ ಸಾಹಿತ್ಯ ಗ್ರಂಥ.
ಜಗತ್ತಿನ ಎಲ್ಲಾ ಜನಾಂಗಗಳಲ್ಲೂ ಒಂದಲ್ಲ ಒಂದು ರೀತಿಯ ಧಾರ್ಮಿಕ ಸಾಹಿತ್ಯ ಇದ್ದೇ ಇದೆ. ಇದು ಆ ಪ್ರದೇಶಗಳ ಜನರ ಮೇಲೆ ಮಾತ್ರವಲ್ಲದೆ ಆ ಧರ್ಮವನ್ನು ಅವಲಂಬಿಸಿದ ಇತರ ಪ್ರದೇಶಗಳವರ ಮೇಲೂ ಪರಿಣಾಮ ಉಂಟುಮಾಡುತ್ತದೆ. ಒಟ್ಟಿನಲ್ಲಿ ಧಾರ್ಮಿಕ ಸಾಹಿತ್ಯ, ಅದರಲ್ಲಿ ಶ್ರದ್ಧೆ ಇರುವ ಜನರ ಜೀವನವನ್ನು ಸನ್ಮಾರ್ಗದಲ್ಲಿ ನಡೆಸಲು ಸಹಕಾರಿಯಾಗುತ್ತದೆ. ಒಂದು ಧರ್ಮದ ತತ್ವಗಳು ಆಚರಣೆಗಳು ಆ ಧರ್ಮಕ್ಕೆ ಸಂಬಂಧಿಸಿದ ಮಹಾಪುರುಷರು ಆ ಧರ್ಮವನ್ನು ಅವಲಂಬಿಸಿದ ಸಮಾಜದ ಸ್ಥಿತಿಗಳು ಮುಂತಾದ ಅಂಶಗಳನ್ನು ಧಾರ್ಮಿಕ ಸಾಹಿತ್ಯದ ಅಧ್ಯಯನದಿಂದ ತಿಳಿದುಕೊಳ್ಳಬಹುದು.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…