ವಿಮರ್ಶೆಗಳು

ಸುಜಾತಾ ರವೀಶ್ ಅವರು ಬರೆದ ಲೇಖನ ‘ಸ್ವಾತಂತ್ರ್ಯೋತ್ಸವ _ಕಾವ್ಯ ದೃಷ್ಟಿ_ಸೃಷ್ಟಿ’

ಪ್ರತಿವರ್ಷ ಆಗಸ್ಟ್ ಹದಿನೈದರಂದು ಭಾರತದಲ್ಲಿ ಸ್ವಾತಂತ್ರ್ಯ ದಿನೋತ್ಸವ ಆಚರಿಸಲ್ಪಡುತ್ತದೆ.  ೧೫.೦೮.೧೯೪೭ ರಂದು ಬ್ರಿಟಿಷರ ಅಧಿಕಾರ ದಾಸ್ಯದಿಂದ ಹೊರಬಂದು ಸರ್ವತಂತ್ರಸ್ವತಂತ್ರ ವಾಗಿ ಹೊರಹೊಮ್ಮಿದ ಸುದಿನ . ಅಂದಿನ ಸವಿನೆನಪಿಗೆ ಇಂದು ಅಮೃತಮಹೋತ್ಸವ.  ನಾವೆಲ್ಲ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.. ದಾಸ್ಯದ ದಿನಗಳನ್ನು ಕಂಡಿಲ್ಲ. ಅನುಭವಿಸಿಲ್ಲ.  ಈ ಸೌಲಭ್ಯವನ್ನು ಒದಗಿಸಿದ ರಾಷ್ಟ್ರದ ಎಲ್ಲಾ ಸ್ವಾತಂತ್ರ್ಯ ಸೇನಾನಿ ಗಳಿಗೂ ಮನದಾಳದ ಕೃತಜ್ಞತೆಗಳು ಹೃತ್ಪೂರ್ವಕ ವಂದನೆಗಳು.  ಅಹಿಂಸೆಯ ಮಾರ್ಗ ಹಿಡಿದು ರಕ್ತಪಾತವಿಲ್ಲದೆ ಸುದೀರ್ಘ ಸಂಗ್ರಾಮದ ಹಾದಿಯಲ್ಲಿ ಪಡೆದ ಸ್ವಾತಂತ್ರ ಅಷ್ಟೇನೂ ಸುಲಭದ ಗೆಲುವಾಗಿರಲಿಲ್ಲ . ಆದರೆ ಅದನ್ನು ನಾವು ಸಮರ್ಪಕವಾಗಿ ಬಳೆಸಿಕೊಳ್ಳುತ್ತಿದ್ದೇವೆಯೆ ಎಂದಾಗ ಉತ್ತರ ನಕಾರಾತ್ಮಕವೇ ಎಂಬುದು ವಿಷಾದದ ಸಂಗತಿ.

ನಮ್ಮ ತಲೆಮಾರು ಕಂಡಿರದ ಆ ೧೯೪೭ ರ ದಿನದ ಬಗ್ಗೆ ಕವಿಮನಗಳು ಹಾಡಿರಲೇಬೇಕಲ್ಲವೇ? ನಂತರವೂ ಆ ದಿನದ ಸ್ಮರಣೆಯಲ್ಲಿ ಏನಾದರೂ ಬರೆದಿರಲೇಬೇಕಲ್ಲವೆ ಅಂತಹ ಸ್ವಾತಂತ್ರ್ಯ ದಿನದ

ಕವಿತೆಗಳ ಕಿರುಪರಿಚಯ ಈ ಲೇಖನದಲ್ಲಿ.

ಗೋಪಾಲಕೃಷ್ಣ ಅಡಿಗರು:  ಸ್ವಾತಂತ್ರ್ಯ ಗೀತ (೧೯೪೭)

ಅಡಿಗರ “ಕಟ್ಟುವೆವು ನಾವು” ಕವನ ಸಂಗ್ರಹದ ಸ್ವಾತಂತ್ರ್ಯ ಗೀತ ಸ್ವಾತಂತ್ರ್ಯ ಪಡೆದ ದಿನದ ಸವಿ ಸಂಭ್ರಮವನ್ನು ವರ್ಣಿಸುತ್ತದೆ..

ಬದುಕಿರುವೆನು ನಾನು ಆಹಾ ಇಂದು ನಾನೇ ಧನ್ಯನು
ಇಂದು ನಾ ಸ್ವತಂತ್ರನು

ಎಂದು ಆರಂಭವಾಗುವ ಗೀತೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಯುದ್ಧವನ್ನು ಹಡಗಿನಲ್ಲಿ ಸಾಗರ ದಾಟುವ ಪಯಣಕ್ಕೆ ಹೋಲಿಸುತ್ತಾರೆ .ದೇಶಕ್ಕಾಗಿ ಪ್ರಾಣ ತೆತ್ತವರನ್ನು ಕಡಲಾಳಕ್ಕೆ ಬಿದ್ದವರು, ಜಲಚರಗಳಿಗೆ ಆಹಾರವಾದವರು, ಮೌನಕಡಲಿಗಿಳಿದು ನೋಯುವರು ಸಾಯುವವರು ಎನ್ನುವಲ್ಲಿನ ಆ ಆಕ್ರಂದನ ಅಂದಿನವರು ಬಿಟ್ಟ ನಿಟ್ಟುಸಿರಿನ ಸಾಕ್ಷಿಯಾಗುತ್ತದೆ . ಆದರೂ ಕಡೆಗೆ ಸ್ವಾತಂತ್ರ್ಯ ಪಡೆದೆವು ಎಂಬುದನ್ನು

ಆಹಾ! ಅಂತು ಸೇರಿದೆವಿಂದೀ ದಿನ
ನಾವು ಬಯಸಿ ಬೆಂದ ದಡವ
ದೂರ ತೀರವ ಕಂಡೆವುದಯ ತೀರವ

ಎಂಬ ಮಾತುಗಳಲ್ಲಿ ಹಿಡಿದಿಡುತ್ತಾರೆ .ಇನ್ನು ಕಷ್ಟ ಕಳೆಯಿತು ಸುಖದ ದಿನಗಳು ಮುಂದಿವೆ ಎಂಬ ಆಶಾವಾದದ

ಇದೋ ನೋಡು ನಾಡಿನಲ್ಲಿ ಎಲ್ಲೆಲ್ಲೂ ಹೊಸತನ
ಬೆಳಕು ಹರಿಯಿತು  ಆಹಾ ಮುಂದೆ ಎಂಥ ನಂದನ

ಎಂದು ಕಟ್ಟಿಕೊಡುತ್ತಾರೆ . ಇಡೀ ಸ್ವಾತಂತ್ರ್ಯ ಹೋರಾಟವನ್ನು ಬಣ್ಣಿಸುವ ವಿಜಯದ ಸಂಭ್ರಮವನ್ನು ಪ್ರತಿನಿಧಿಸುವ ಆಶಾವಾದದ ನಿರೀಕ್ಷೆ ಬಿತ್ತುವ ಕವನ ಅಂದಿಗೂ ಇಂದಿಗೂ ಸಾರ್ವಕಾಲಿಕ .

ಕೆ ಎಸ್ ನರಸಿಂಹಸ್ವಾಮಿ  ೧೫.೦೮.೧೯೫೦
(ಇರುವಂತಿಗೆ)

ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಬರೆದ ಕವಿತೆ ತಾಯಿ ಭಾರತಿಯನ್ನು ಭಾವನಾತ್ಮಕವಾಗಿ ವರ್ಣಿಸುತ್ತಾರೆ . ಅಹಿಂಸೆ ಶಾಂತಿಗಳ ಬೆಳಕಲ್ಲಿ ಭಾರತವನ್ನು ಕಾಣುವ ಪ್ರಯತ್ನ . ಅದೇತಾನೆ ಸ್ವತಂತ್ರವಾದ ದೇಶದ ಆಲಿಪ್ತ ಗುಣಗಳು ಪ್ರಪಂಚಕ್ಕೆ ತಿಳಿಯಲೆಂಬ ಹೆಬ್ಬಯಕೆ ಕವಿಯದು.  ಭಾರತದ ಪರಂಪರೆ ಸಂಸ್ಕೃತಿಯ ಹಿರಿಮೆಯ ಹಿನ್ನೆಲೆಯಲ್ಲಿ ದೇಶದ ಮುಂದಿನ ನಡೆಯನ್ನು ನೋಡುತ್ತಾರೆ. ಈ ಸಾಲುಗಳನ್ನು ಗಮನಿಸಿ

ನೆತ್ತರಲಿ ಬರೆದ ನಾಗರಿಕತೆಯ ಕುರಿಯದಿದು
ಶಸ್ತ್ರವನು ನಂಬಿ ಶಾಂತಿಯ ಸೋಗನು ಹಾಡದಿದು

ಏಷ್ಯಾದ ಹಿರಿಮಗಳು ಭರತನ ಸಾಕುತಾಯಿ
ಸಾರುತಿಹಳಿಂದು  ಎತ್ತಿದ ಕತ್ತಿಗಳ ತಡೆದು
ಶಾಂತಿ ಮೂಡದು ರಕ್ತಪಾತದಲಿ, ಶಾಂತಿರಸ್ತು

ಜಿ ಎಸ್ ಶಿವರುದ್ರಪ್ಪ
ಬಿಡುಗಡೆಯ ನೆನಪು
(ದೀಪದ ಹೆಜ್ಜೆ) ಆಗಸ್ಠ್ ೧೯೫೮

ಹನ್ನೊಂದು ವರ್ಷಗಳಾದವು ದೇಶಕ್ಕೆ ಸ್ವಾತಂತ್ರ ದೊರೆತು . ಆದರೂ ನಿರೀಕ್ಷಿಸಿದ ಪ್ರಗತಿ ಸಾಧಿಸಿಲ್ಲ ಹಾಗಾಗೇ ಶ್ರೀಸಾಮಾನ್ಯ ಸುಮ್ಮನೆ ದುಡಿಯುತ್ತಿದ್ದಾನೆ . ಸ್ವಾತಂತ್ರ್ಯ ಬಂದ ದಿನವನ್ನು ನೆನೆಯುತ್ತಾ ಸಂಭ್ರಮಪಡಲು ಅವನಿಗೆ ಬಿಡುವಿಲ್ಲ ಎನ್ನುತ್ತಾರೆ.  ಸ್ವಾತಂತ್ರ್ಯ ಸಿಕ್ಕಿದ ಗಳಿಗೆಯ ವರ್ಣನೆ ಮಾಡುತ್ತಾರೆ.  ಇಷ್ಟೆಲ್ಲಾ ಭಾರವಿದ್ದರೂ ಪ್ರತಿಕೂಲ ಸ್ಥಿತಿ ಇದ್ದರೂ ಎಲ್ಲವೂ ಸರಿ ಹೋಗುವುದೆಂದು ಧನಾತ್ಮಕ ಚಿಂತನೆ ಇದೆ ಕವಿಗೆ.  ಕವನದ ಕಡೆಯ ಸಾಲುಗಳು ಅದನ್ನೇ ಪ್ರತಿಧ್ವನಿಸುತ್ತದೆ.

ಹರಿಯುತಿದೆ ನಾಡನಾಡಿಯ ತುಂಬ ನೂತನ ಚೇತನ ಶಕ್ತಿ
ಇಂದಲ್ಲ ನಾಳೆ ಮೈದುಂಬಿಕೊಂಡು ನಿಲ್ಲುವುದು ಈ ನಾಡು
ಸಾವಧಾನದಿ ಕಾದು ನೋಡು

ಯರ್ಮುಂಜ ರಾಮಚಂದ್ರ ಪ್ರಭಾತಫೇರಿ

ಸ್ವಾತಂತ್ರ್ಯ ಸಮರಕ್ಕೂ ಪ್ರಭಾತಫೇರಿಗೂ ಬಿಡಿಸಲಾದ ನಂಟು.  ಬೆಳಗಿನ ಜಾವಕ್ಕೆ ದೇಶಭಕ್ತಿ ಗೀತೆಗಳನ್ನು ಹಾಡಿಕೊಂಡು ಊರಿನ ಬೀದಿ ಬೀದಿಯಲ್ಲಿ ಹೊರಡುವ ಮೆರವಣಿಗೆ ಪ್ರಭಾತಫೇರಿ . ಸ್ವಾತಂತ್ರ್ಯಾ ನಂತರವೂ ಈ ಸಂಭ್ರಮವನ್ನು ಪ್ರಭಾತಫೇರಿಯಲ್ಲಿ ಆಚರಿಸಿ ಹಾಡುತ್ತಾ ಹುತಾತ್ಮರನ್ನು ಸ್ಮರಿಸುತ್ತಾ ದೇಶಭಕ್ತಿಯ ಸೌರಭವನ್ನು ಬೀರುವ ಗೀತೆ ಇದು.  ಆರಂಭದ ಸಾಲುಗಳನ್ನು ನೋಡಿ

ಇದೋ ಭರತಭೂಮಿಯಲ್ಲಿ ಎಳೆಯ ಹಸಿರು ಚಿಗುರಿದೆ
ಮುತ್ತಿದಿರುಳ ಹಿಂದೆ ಮಾಡಿ ನಸು ಬೆಳಕು ಮೂಡಿದೆ
ಬಾರೊ ಬೆಳಕ ವಂದಿಸೊ
ಕವಿದ ಇರುಳ ನಂದಿಸೊ
ಶಾಂತಿ ಸೌಖ್ಯಗಳನ್ನು ನಿನ್ನೆದೆಯೊಳಗೆ ತುಂಬಿಸೊ

ಇವೆಲ್ಲ ಕೆಲವು ಪ್ರಾತಿನಿಧಿಕ ಕವನಗಳಷ್ಟೆ ಇನ್ನೂ ಎಷ್ಟೋ ಕವಿಮನಗಳ ಭಾವದನಾವರಣ ಆಗಿದೆ ಆಗುತ್ತಲಿದೆ ಮುಂದು ಆಗುತ್ತಲೇ ಇರುತ್ತದೆ.  ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿ ಕಂಡುಕೊಳ್ಳುವ ಸುಸಮಯ.  ಹಳತಿನಿಂದ ಹೊಸತರೆಡೆಗೆ ಸಾಗುವ ಮನ್ವಂತರ ಎಂದೆಲ್ಲ ಅಂದುಕೊಂಡಿದ್ದೆವು . ಆದರೆ ಅವೆಲ್ಲ ಸಾಕಾರವಾಯಿತೇ ಎಂಬುದು ಚರ್ಚೆಯ ವಿಷಯ.  ರಜಾದಿನವೆಂದು ವಿರಮಿಸುವುದು ರಾಷ್ಟ್ರಧ್ವಜಾರೋಹಣ ಮಾಡುವುದು ಬಿಟ್ಟರೆ ಇನ್ನೇನು ಮಾಡುತ್ತೇವೆ?  ಹಿರಿಯರ ತ್ಯಾಗ ಬಲಿದಾನದ ದ್ಯೋತಕ ಈ ಸ್ವಾತಂತ್ರ್ಯ. ಉಳಿಸಿಕೊಳ್ಳುವುದರ ಜತೆಗೆ ದೇಶವನ್ನು ಪ್ರಗತಿ ಮಾರ್ಗದಲ್ಲಿ ಮುನ್ನಡೆಸುವ ಬಗ್ಗೆ ಯೋಚನೆ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು.

ಹಿರಿಯರು ಹೊಂದಳಿಗೆಯಲಿ ಇಟ್ಟುಕೊಟ್ಟ ಸ್ವಾತಂತ್ರದ ಕಿರೀಟ ಧರಿಸಿ ಮೆರೆಯುವ ಶಕ್ತಿ ಹೊಂದಬೇಕು ತೋರಬೇಕು.

SHANKAR G

View Comments

  • ನಿರಂತರ ಪ್ರೋತ್ಸಾಹಕ್ಕಾಗಿ ಸಂಪಾದಕರಿಗೆ ಅನಂತ ಧನ್ಯವಾದಗಳು

Share
Published by
SHANKAR G

Recent Posts

ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…

55 years ago

ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ

ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…

55 years ago

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ

ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…

55 years ago