ವಿಮರ್ಶೆಗಳು

ಮಂಜುಳಾ ಗೌಡ ಕಾರವಾರ ಅವರು ಬರೆದ ಲೇಖನ ‘ದುಃಖದಗ್ನಿಯ ದಾಟುವ ಕಲೆಯ ಕಲಿಯಿರಿ’

ಸುತ್ತ ನಾವಿರುವ ಪ್ರಕೃತಿಯನ್ನೊಮ್ಮೆ ಆಳವಾಗಿ ಅವಲೋಕಿಸಿದಾಗ ನಮಗೆ ಗೋಚರವಾಗುತ್ತದೆ ಅವುಗಳಿಂದ ನಾವು ಕಲಿಯಬೇಕಾದ ಹಲವು ವಿಷಯಗಳು, ಉದಯಿಸುವ ಸೂರ್ಯನ ಕಾರ್ಯ ತತ್ಪರತೆ, ಅರಳುವ ಹೂಗಳ ಉತ್ಸಾಹ, ಝರಿತೊರೆಗಳ ಲವಲವಿಕೆ, ಪ್ರಾಣಿ ಪಕ್ಷಿಗಳ ಜೀವನೋತ್ಸಾಹ ಹೀಗೆ ಪ್ರಕೃತಿಯ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಅವುಗಳೆಲ್ಲದರಿಂದ ಹೊಸತನ್ನು ನಾವು ಕಲಿಯಲೇಬೇಕು.ಆಗಲೇ ಜೀವನದಿ ಎದುರಾಗುವ ಘಟನೆಗಳೆಲ್ಲವನ್ನು ಎದುರಿಸುವ ಧೈರ್ಯ ಬರುವುದು.

ಮೂಡಣದಿ ದಿನಕರನು ಬೆಳಕನ್ನು ಹೊತ್ತು ತಂದು ಸಂಜೆ ಅಸ್ತಮಿಸಿದಾಗ ಕತ್ತಲು ಆವರಿಸುವ ಪ್ರಕೃತಿ ನಿಯಮದಂತೆ ನಮ್ಮ ಬಾಳಿನಲ್ಲೂ ಬೆಳಕಿನ ಹಿಂದೆ ಕತ್ತಲು ಬರುವುದು ಸಹಜ. ಬರಿ ಬೆಳಕೆ ಬೇಕೆಂದರೆ ಸಾಧ್ಯವಾಗದ ಮಾತು. ಹಗಲು ಇರುಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಒಪ್ಪಿಕೊಂಡಂತೆ, ಸುಖ ದುಃಖಗಳನ್ನು ಬೇವು ಬೆಲ್ಲದಂತೆ ಸವಿಯಬೇಕು.

ಹೊಳೆಯುವ ರವಿಯು ಗ್ರಹಣ ಹಿಡಿದಿದೆ ಎಂದು ಅಳುತ್ತಾ ಕುಳಿತರೆ ಕಾಲ ನಿಲ್ಲುವುದಿಲ್ಲ. ಹಾಗೆಯೇ ಬೇಸಿಗೆಯಲ್ಲಿ ಬರಡಾದ ನೆಲಕ್ಕೆ ಮಳೆಯ ಸಿಂಚನವಾದೊಡನೆ ಹಸಿರುಟ್ಟು ನಲಿಯುತ್ತದೆ.ಮಳೆಯೇ ಇರಲಿ ಬಿಸಿಲು ಬೇಡ ಎನ್ನಲಾಗುತ್ತದೆಯೆ? ಬಿಸಿಲಿಗೆ ಬಾಡಲೇಬೇಕು. ಮತ್ತೆ ಮಳೆಗೆ ಹಸಿರಾಗಲೇಬೇಕು ಹಾಗೆ ಲೋಕದ ಜಂಜಾಟಗಳೆಲ್ಲವನ್ನು ಎದುರಿಸಿ ಜೈಸುವ ಕಲೆ ನಮ್ಮದಾದಾಗ ನಮ್ಮ ಮುನ್ನಡೆ ಸಾಧ್ಯ

ಬಾಳಿನಲ್ಲಿ ಬವಣೆಗಳು ಬಂದಾಗ ಅದನ್ನು ದಾಟುವ ಜಾಣ್ಮೆಯೊಂದಿದ್ದರೆ ಜೀವನ ಸಲೀಸು. ನಗು,ತಾಳ್ಮೆ ಧೈರ್ಯ, ದೃಢವಾದ ಆತ್ಮವಿಶ್ವಾಸಗಳನ್ನು ನೀರಿನಂತೆ ಬಳಸಿ ದುಃಖದಗ್ನಿಯನ್ನು ಆರಿಸಿ ನಿರಾಳವಾಗಿ ದಾಟಬಹುದು.ಖುಷಿ ಎನ್ನುವುದನ್ನು ನಮಗೆ ಯಾರು ತಂದು ಕೊಡುವುದಿಲ್ಲ. ನಮ್ಮ ಒಳ ಮನಸ್ಸಿನ ದೃಢ ನಿಲುವಿನ ಮೇಲೆ ನಮ್ಮ ಸಂತೋಷ ನಿಂತಿರುತ್ತದೆ.ಹೀಗಿರಲು ಕಲಿತುಬಿಟ್ಟರೆ ಎಂತಹ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿಬಿಡಬಹುದು. ಉದಾರಣೆಗೆ ಸಿಮೆಂಟ್ ಕಟ್ಟಡ, ರಸ್ತೆಗಳ ಮಧ್ಯೆ ಬೆಳೆಯುವ ಕೆಲವು ಗಿಡಗಳನ್ನು ನೋಡಿದರೆ ಅವು ಮಳೆ,ಚಳಿ, ಗಾಳಿ,ಬಿಸಿಲು ಯಾವುದಕ್ಕೂ ಅಂಜದೆ ಎದೆಯೊಡ್ಡಿ ಅಷ್ಟು ಚೆನ್ನಾಗಿ ಬೆಳೆದಿರುತ್ತದೆ. ಆ ಛಾತಿ ನಮ್ಮಲ್ಲಿರಬೇಕು.

ದೇವರು ಧರೆಯ ಮೇಲೆ ಮನುಜನನ್ನು ಬುದ್ಧಿ ಜೀವಿಯಾಗಿ ಸೃಷ್ಟಿಸಿದ್ದಾನೆ. ಆ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಬದುಕನ್ನ ಕಟ್ಟಿಕೊಳ್ಳಬೇಕು, ಯಾರ ವ್ಯಂಗ್ಯದ ಮಾತಿಗೂ ತಲೆ ಕೆಡಿಸಿಕೊಳ್ಳದೆ ಆತ್ಮ ಸಾಕ್ಷಿ ಮೆಚ್ಚುವಂತ ಕೆಲಸವನ್ನು ಮಾಡಲು ಹಿಂಜರಿಯಬಾರದು.ಮೊಲ ಆಮೆಯ ಕಥೆಯಲ್ಲಿ ಆಮೆಯಿಂದ ಗೆಲ್ಲಲು ಅಸಾಧ್ಯ ಎಂದು ಮೂದಲಿಸಿದ ಮೊಲ ಕೊನೆಗೆ ಸೋಲಪ್ಪಿಕೊಳ್ಳುವಂತೆ ಆಮೆ ಗೆದ್ದು ತೋರಿಸಲಿಲ್ಲವೇ? ಹಾಗೆ ನಿಧಾನವಾದರೂ ಸರಿ ಪ್ರಯತ್ನಿಸಿ ಜಯವನ್ನು ಗಳಿಸಬೇಕು.ಸಿಂಹ ಮತ್ತು ನೊಣದ ಕಥೆಯಲ್ಲಿ ಓದಿರುವಂತೆ ಒಂದು ಚಿಕ್ಕ ನೊಣವು ಕೂಡ ಹೇಗೆ ಸಿಂಹದಂತ ಕ್ರೂರ ಪ್ರಾಣಿಯನ್ನು ಸೋಲಿಸಿತೊ ಹಾಗೆ ಮನಸ್ಸು ಮಾಡಿದರೆ ಮನುಜ ದುಃಖವನ್ನು ಎದುರಿಸುವುದು ದೊಡ್ಡ ವಿಷಯವಲ್ಲ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿಯೆ ಸುರಿಯೇ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ -ಡಿ.ವಿ.ಜಿ ಯವರ ಈ ಕಗ್ಗ ಎಷ್ಟೊಂದು ಅರ್ಥಪೂರ್ಣವಾಗಿದೆ. ಇದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಯಾನದ ಕಲೆ ಕರಗತವಾಗುತ್ತದೆ.ನಾವು ಎಷ್ಟು ಸಹಜವಾಗಿ ಸರಳವಾಗಿರುತ್ತೇವೆಯೋ ಅಷ್ಟು ಹೆಚ್ಚಿನ ಜನರ ಬಾಂಧವ್ಯ ನಮಗೆ ಸಿಗುತ್ತದೆ. ಪರರ ಕಷ್ಟಗಳಲ್ಲಿ ಭಾಗಿಯಾದಾಗ ನಮಗೆ ಬರುವಂತಹ ಕಷ್ಟಗಳನ್ನು ಎದುರಿಸಲು ಛಲ ಬೆಳೆಯುತ್ತದೆ.ಸಿಹಿ ಹೆಚ್ಚಿದೊಡೆ ಕಾಯಿಲೆಗಳು ಹೆಚ್ಚುವಂತೆ,ಬರಿಯ ನಲಿವನ್ನು ನಿರೀಕ್ಷೆ ಮಾಡಿದರೆ ನೋವು ಅದನ್ನು ಹಿಂಬಾಲಿಸಿಯೇ ಇರುತ್ತದೆ.

ಉನ್ನತಿಯನ್ನು ಹೊಂದಿದ ಸಾಧಕರ ಜೀವನವನ್ನು ಗಮನಿಸಿದಾಗ ಅವರ ಅಚಲವಾದ ಮನೋಭಾವ ಅಂದುಕೊಂಡ ಕಾರ್ಯ ಸಿದ್ದಿಗೆ ಕಾರಣವಾಗಿರುವುದನ್ನು ನೋಡುತ್ತೇವೆ.ಉದಾಹರಣೆಗೆ ಭಾರತೀಯ ಪ್ರಸಿದ್ಧ ಪರ್ವತಾರೋಹಿ ಅರುಣಿಮಾ ಸಿನ್ನಾ ರೈಲು ಅಪಘಾತದಿಂದ ತನ್ನೊಂದು ಕಾಲನ್ನು ಕಳೆದುಕೊಂಡರು ತನ್ನ ಗುರಿ ಸೇರುವ ಅಚಲ ಬಯಕೆಯಿಂದ ಅಂದುಕೊಂಡಿದ್ದನ್ನು ಸಾಧಿಸಿ ಎಲ್ಲರಿಗೂ ಮಾದರಿಯಾದಳು. ಹೀಗೆ ಸಾಧ್ಯವಿಲ್ಲ ಎನ್ನುವುದು ಯಾವುದು ಇಲ್ಲ. ಕಂಟಕಗಳನ್ನು ದಾಟುವ ಕಲೆ ನಮ್ಮದಾಗಿರಬೇಕು ಅಷ್ಟೆ.

SHANKAR G

View Comments

  • ಪ್ರಕಟಿಸಿದ್ದಕ್ಕೆ ಸಂಪಾದಕರಿಗೆ ಧನ್ಯವಾದಗಳು 🙏🌺🌷

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago