“ಯಾಕೋ ನೀನು ಬಹಳ ಆತುರ ಪಟ್ಟೆ. ಒಂದಷ್ಟು ದಿನ ವಿಚಾರ ಮಾಡಿ ನಿರ್ಧಾರಕ್ಕೆ ಬಂದಿದ್ರೆ ಚೆನ್ನಾಗಿರೋದು” ಹಾಗಂತ ಗೆಳೆಯ ಅನ್ನುತ್ತಾನೆ.
ನಿಮಗೂ ಎಲ್ಲೊ ಒಂದು ಕಡೆ ಹಾಗೆಯೇ ಅನ್ನಿಸುತ್ತಿರುತ್ತೆ. “ಆದ್ರೆ ನಾನೆಲ್ಲಿ ಆತುರ ಪಟ್ಟೆ. ಯೋಚಿಸಿಯೇ ನಿರ್ಧಾರಕ್ಕೆ ಬಂದಿದ್ನಲ್ಲ, ಇನ್ನೇನು ವಿಚಾರ ಮಾಡೋದು…? ಇನ್ನೊಂದಿಷ್ಟು ದಿನ ಯೋಚ್ನೆ ಮಾಡಿದಿದ್ರೆ ನಿರ್ಧಾರ ಸರಿಯಾಗಿರ್ತಿತ್ತಾ…?”
ಇದು ಪ್ರಶ್ನೆ. ಇನ್ನೊಂದಿಷ್ಟು ದಿನ ಸಮಯವನ್ನು ತೆಗೆದುಕೊಂಡಿದ್ರೆ ನಿರ್ಧಾರ ಸರಿಯಾಗಿ ಇರುತ್ತಿತ್ತಾ ಅನ್ನೋದು ಪ್ರಶ್ನೆ.
ಒಂದ್ ವಿಷ್ಯ ಗೊತ್ತಾ..? ನಿಮ್ಮೆದುರಿಗೆ ಬಗೆಬಗೆಯ ಭಕ್ಷ್ಯ ತರಹೇವಾರಿ ತಿನಿಸುಗಳನ್ನು ಇಟ್ಟು ತಿನ್ನಿ ಅಂತ ಬಿಟ್ಟರೆ ಎಷ್ಟು ಹೊತ್ತಿನವರೆಗೆ ತಿನ್ನಬಲ್ಲಿರಿ..? ಅಮ್ಮಾಮ್ಮಾ ಅಂದ್ರೆ ಅರ್ಧ ಗಂಟೆ. ಅದರ ಮೇಲೆ ನಿಮ್ಮೆದುರು ನಿಮಗೆ ಇಷ್ಟ ಅಂತ ಏನೇ ತಂದಿಟ್ಟರೂ ತಿನ್ನೋಕೆ ಸಾಧ್ಯವಾ..? ಇಲ್ಲ ಅಲ್ಲವಾ. ಹಾಗೆ ಒಂದು ನಿರ್ಧಾರಕ್ಕೆ ಬರೋದರಲ್ಲೂ ಕೂಡ. ಅದು ಎಂತಹ ಗಹನವಾದ ವಿಚಾರವೇ ಇರಲಿ. ಅಮ್ಮಾಮ್ಮಾ ಅಂದ್ರೆ ಒಂದ್ ಹದಿನೈದು ನಿಮಿಷ ಅದರ ಎಡ ಬಲ ಯೋಚಿಸಿ ನಿರ್ಧಾರಕ್ಕೆ ಬರೋದು ಬಿಟ್ಟರೆ ದಿನಪೂರ್ತಿ ಅದನ್ನ ಯೋಚಿಸುವುದಕ್ಕಾಗುವುದಿಲ್ಲ. ಹಾಗೂ ದಿನಪೂರ್ತಿ ಯೋಚಿಸುತ್ತೆನೆಂದು ಹೊರಟರೂ ಬಹಳ ಏನು ಬದಲಾವಣೆಯಾಗುವುದಿಲ್ಲ. ಮೊದಲ ಹತ್ತು ನಿಮಿಷ ಯೋಚಿಸಿ ಏನು ನಿರ್ಧಾರಕ್ಕೆ ಬಂದಿದ್ದಿರೋ ಎರಡು ದಿನ ತಲೆ ಕೆರಕೊಂಡು ಯೋಚಿಸಿದ ಮೇಲೂ ಹೆಚ್ಚು ಕಡಿಮೆ ಅದೇ ನಿರ್ಧಾರ.
ಇಷ್ಟಕ್ಕೂ ನಿಮ್ಮ ತಲೆಯಲ್ಲಿ ತುಂಬಾನೇ ವಿಚಾರಗಳಿರಬಹುದು. ಸಮಸ್ಯೆ ಏನೆಂದರೆ ಹೇಗೆ ನಿಮ್ಮೆದುರು ಭಕ್ಷ ತಿನಿಸುಗಳನ್ನೆ ಇಟ್ಟರೆ ನಿಮ್ಮ ಕೆಪಾಸಿಟಿ ಅರ್ಧ ಗಂಟೆಯೋ, ಹಾಗೆ ಯಾರೋ ಒಬ್ಬರು ನಿಮ್ಮೆದುರು ದಿಢೀರ್ ಅಂತ ಪ್ರಸ್ತಾಪ ಇಟ್ಟಾಗ ನಿಮ್ಮ ವಿಚಾರಗಳೆಲ್ಲ ಆ ಕ್ಷಣಕ್ಕೆ ಅದರೊಳಗೆ ತರೋದಕ್ಕಾಗುವುದಿಲ್ಲ. ಏಕೆಂದರೆ ಆ ಕ್ಷಣಕ್ಕೆ ನೀವು ಒಂದು ನಿರ್ಧಾರಕ್ಕೆ ಬರಬೇಕು. ಎಸ್ ಅಥವಾ ನೋ ಅಂತ ಹೇಳಬೇಕು. ನಿರ್ಧಾರ ಮಾಡಲಿಕ್ಕೆ ನಿಮಗೆ ಕೆಲ ಸಮಯ ಸಿಗಬಹುದು. ಆದ್ರೆ ಎಸ್ ಅಥವಾ ನೋ ಹೇಳೋದು ಕೆಲವೇ ಸೆಕೆಂಡ್ ಗಳಲ್ಲೆ ಅಲ್ವಾ. ಅಂದ ಮೇಲೆ ಏನೇ ನಿರ್ಧಾರ ತಗೋಳೊದಿದ್ರು ಒಂದೆರಡು ಸೆಕೆಂಡ್ ಗಳಲ್ಲೆ ತಾನೆ.? ಮತ್ತ್ಯಾಕೆ ನಿರ್ಧಾರ ತಗೊಳ್ಳೊಕೆ ದಿನಗಟ್ಟಲೆ ಯೋಚಿಸಬೇಕು ಅಂತ ಅನ್ನಿಸುತ್ತೆ..? ಏನೇ ವಿಚಾರ ಮಾಡೋದಿದ್ದರೂ ಒಂದ್ ಹದಿನೈದು ನಿಮಿಷ ಬಿಟ್ಟರೆ ತುಂಬಾ ಸಮಯ ತೆಗೆದುಕೊಂಡಾಕ್ಷಣ ವಿಶೇಷವಾದದ್ದೇನು ನಡೆಯೋದಿಲ್ಲ ಅಂತ ಗೊತ್ತಿದ್ದರೂ ಮತ್ತ್ಯಾಕೆ ಟೈಂ ತಗೋಬೇಕು ಅನಿಸುತ್ತೆ…?
ಯಾಕಂದ್ರೆ ಏನೇ ನಿರ್ಧಾರಕ್ಕೆ ಬಂದ್ರು ಒಂದು ಫರ್ಫೆಕ್ಟ್ ಆದ ನಿರ್ಧಾರಕ್ಕೆ ಬರಬೇಕು ಅನ್ನೋದು ತಲೆಲಿರುತ್ತೆ. ಹಾಗೊಂದು ಒಳ್ಳೆ ನಿರ್ಧಾರಕ್ಕೆ ಬರಬೇಕಾದರೆ ಒಂದಷ್ಟು ಸಮಯ ತಗೋಬೇಕು ಅನ್ನೊ ವಿಚಾರ ಮನಸ್ಸಲ್ಲಿರುತ್ತೆ. ಹಾಗೆ ಸಮಯ ತಗೊಂಡು ನಿರ್ಧಾರ ಮಾಡಿದ್ರೆನೆ ಆ ನಿರ್ಧಾರ ಸರಿಯಾಗಿರುತ್ತೆ ಅನ್ನೋ ಭ್ರಮೆ.
ಹೀಗನ್ನಿಸೋಕೆ ಕಾರಣ, ಈ ಹಿಂದೆ ಗಡಿಬಿಡಿಯಲ್ಲಿ ತೆಗೆದುಕೊಂಡ ನಿರ್ಧಾರದಿಂದ ಆದ ಎಡವಟ್ಟಿನ ಅನುಭವಗಳಿರಬಹುದು. ಒಮ್ಮೊಮ್ಮೆ ಅನಿರೀಕ್ಷಿತವಾದ ಪ್ರಸ್ತಾಪದಿಂದ ಆ ಕ್ಷಣಕ್ಕೆ ಒಂದು ಸ್ಪಷ್ಟತೆಗೆ ಬರಲಾಗದೆ, ಅಥವಾ ವಿಷಯವೇ ಏನು ಅಂತ ಅರ್ಥವಾಗದೇ ಹೆಚ್ಚಿನ ಸಮಯ ಬೇಕೆನ್ನಿಸಬಹುದು. ಹಾಗಂತ ದಿನಪೂರ್ತಿ ಅದನ್ನೆ ಯೋಚಿಸುವುದಕ್ಕಾಗುವುದಿಲ್ಲವಲ್ಲ. ಹಾಗೆ ಯೋಚಿಸಿದರೆ ಮಾತ್ರ ಸರಿ ಅಂತ ನೀವಂದುಕೊಂಡರೆ ನೀವು ಬರೀ ಕಂಬ ಸುತ್ತುತ್ತಿದ್ದೀರಿ ಬಿಟ್ಟರೆ ಬೇರೆನೂ ಮಾಡುತ್ತಿಲ್ಲವೆಂದೆ ಅರ್ಥ ಅಲ್ಲವಾ.? ಹೀಗ್ ಮಾಡಿದ್ರೆ ಹೇಗೆ, ಮಾಡದೇ ಇದ್ದರೆ ಏನು ಅಂತ ಪದೇಪದೇ ಅದದನ್ನೆ ಕೇಳಿಕೊಳ್ಳುತ್ತೀರಿ ಬಿಟ್ಟರೆ ಬೇರೆನಿಲ್ಲವಲ್ಲ. ಅಂದರೆ ನೀವು ತೆಗೆದುಕೊಳ್ಳುವ ನಿರ್ಧಾರದ ಪರಿಣಾಮವನ್ನು ಯೋಚಿಸುತ್ತಲೋ ಇಲ್ಲಾ ಅದರಿಂದಾಗುವ ಲಾಭ ನಷ್ಟ ಕಲ್ಪನೆಯಲ್ಲೊ ಅಥವಾ ಇನ್ಯಾವುದೋ ನಿರೀಕ್ಷೆಯಲ್ಲೊ ಸುತ್ತು ಹೊಡೆಯುತ್ತಿದ್ದೀರಿ ಅಂತ ಅರ್ಥ ತಾನೆ..? ಕೊನೆಗೆ ಇಂತಹ ದುರಾಲೋಚನೆಯಲ್ಲಿ ತೊಡಗಿದರೆ ನಿಮಗೆ ಎರಡು ದಿನವಲ್ಲ ಎರಡು ತಿಂಗಳಾದ್ರು ಒಂದು ನಿರ್ಧಾರಕ್ಕೆ ಬರಲಿಕ್ಕಾಗುವುದಿಲ್ಲ.
ಖಂಡಿತ, ಒಂದು ನಿರ್ಧಾರಕ್ಕೆ ಬರಬೇಕಾದರೆ ಎರಡೆರಡು ಬಾರಿ ಪರಾಮರ್ಶಿಸುವುದು ಒಳ್ಳೆಯದೇ. ಹಾಗೆ ನಾಲ್ಕು ಜನರ ಸಲಹೆ ಅನುಭವವನ್ನು ಪಡೆಯುವುದು ಕೂಡ ಒಮ್ಮೊಮ್ಮೆ ಮಾಡಬೇಕಾಗುತ್ತೆ. ಆದರೆ ಕೊನೆಗೊಂದು ನಿರ್ಧಾರಕ್ಕೆ ಬರಲೇಬೇಕಲ್ಲವಾ. ನಿರ್ಧಾರ ಅನ್ನೋದು ಎಸ್ ಅಥವಾ ನೋ ಅಂತಷ್ಟೇ ಅಲ್ಲವಾ..? ತುಂಬಾ ಯೋಚಿಸಿಯೂ ಏನೂ ಹೊಳೆಯದೆ ಈಗ ಸದ್ಯ ಬೇಡ ಮುಂದೆ ಬೇಕಾದರೆ ನೋಡೋಣ ಅಂದ್ರೆ, ಅದು ಕೂಡ ಆ ಕ್ಷಣಕ್ಕೆ ನೋ ಅಂದಾಗೆ ಅಲ್ಲವಾ..? ಅಷ್ಟು ಸಮಯ ತೆಗೆದುಕೊಂಡು ನೀವೇನು ಮಹಾ ನಿರ್ಧಾರಕ್ಕೆ ಬಂದಂತಾಯಿತು..? ಅಥವಾ ಅಷ್ಟೊಂದು ಸಮಯ ತೆಗೆದುಕೊಂಡು ಯಾವುದರಲ್ಲೂ ಸ್ಪಷ್ಟತೆ ಇರದೇ, ಸುಮ್ಮನೆ ಅದೃಷ್ಟ ಪರೀಕ್ಷೆ ಮಾಡೋಣ ಅಂತ ಎಸ್ ಅಂದರೂ ನಂತರ ನೀವಂದುಕೊಂಡಂತೆ ನಡೆಯದಿದ್ದರೆ ಏನಾದಂತಾಯಿತು..? ನಿಮಗೆ ವಿಷಯವೇ ಅರ್ಥವಾಗದಿದ್ದರೆ, ಅದರ ಬಗ್ಗೆ ಸ್ಪಷ್ಟತೆಯೇ ಇರದಿದ್ದರೆ, ಅಷ್ಟೊಂದು ಯೋಚಿಸಿಯೂ ಎಸ್ ಅಂತ ಹೇಳಿ ಏನು ಸಾಧಿಸಿದಂತಾಯಿತು.?
ಎಲ್ಲಿಯೂ ಕೂಡ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಗುರಿ, ಕನಸು, ಪ್ರೀಯಾರಿಟಿನ್ನು ಅವಲಂಬಿಸಿರಬೇಕೆ ವಿನಃ, ಹೆಚ್ಚು ಸಮಯ ತೆಗೆದುಕೊಂಡಾಕ್ಷಣ ಒಳ್ಳೆ ನಿರ್ಧಾರಕ್ಕೆ ಬರ್ತೆವೆ ಅನ್ನೊದು ಭ್ರಮೆ.
ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರು ತಮ್ಮ ಶಿಷ್ಯಂದಿರಾದ ಪಾಂಡವರು ಹಾಗೂ ಕೌರವರಿಗೆ ಒಂದು ಚಿಕ್ಕ ಪರೀಕ್ಷೆಯನ್ನು ಇಟ್ಟಿರುತ್ತಾರೆ. ಮರದ ಮೇಲೆ ಒಂದು ಕೃತಕ ಗಿಳಿಯನ್ನು ಇರಿಸಿ ಅದರ ಕಣ್ಣಿಗೆ ಗುರಿ ಇಟ್ಟು ಹೊಡೆಯುವ ಪರೀಕ್ಷೆ. ಶಿಷ್ಯಂದಿರು ಎಷ್ಟರ ಮಟ್ಟಿಗೆ ಗುರಿಯನ್ನು ಹೊಂದಿದ್ದಾರೆ ಅಂತ ತಿಳಿಯುವ ಒಂದು ಚಿಕ್ಕ ಪರೀಕ್ಷೆ. ಮೊದಲಿಗೆ ಬಿಲ್ಲಿಗೆ ಬಾಣ ಹೂಡಿ ಗುರಿ ಇಟ್ಟ ದೂರ್ಯೋಧನನನ್ನು ದ್ರೋಣರು ಪ್ರಶ್ನಿಸುತ್ತಾರೆ. ನಿನಗೀಗ ಏನು ಕಾಣುತ್ತಿದೆ ಎಂದು. ದೂರ್ಯೋಧನ ನನಗೆ ಮರ, ಮರದ ಮೇಲೆ ಕುಳಿತ ಗಿಳಿ ಕಾಣುತ್ತಿದೆ ಎನ್ನುತ್ತಾನೆ. ನಂತರ ಬಂದ ಧರ್ಮರಾಯನಿಗೂ ಅದೇ ಪ್ರಶ್ನೆ ಹಾಕುತ್ತಾರೆ. ನನಗೆ ಮರದ ರೆಂಬೆ ಅದರ ಮೇಲೆ ಕುಳಿತ ಗಿಳಿ ಕಾಣುತ್ತಿದೆ ಎನ್ನುತ್ತಾನೆ. ತದನಂತರ ಬಂದ ಅರ್ಜುನನಿಗೂ ಅದೇ ಪ್ರಶ್ನೆ ಹಾಕುತ್ತಾರೆ. ಅರ್ಜುನ ಮಾತ್ರ ತನಗೆ ಗಿಳಿಯ ಕಣ್ಣು ಬಿಟ್ಟರೆ ಬೇರೆನೂ ಕಾಣುವುದಿಲ್ಲ ಎನ್ನುತ್ತಾನೆ. ಸೋ, ಇದು ಅವನ ಗುರಿಗಿರುವ ನಿಖರತೆ. ಅವನ ಗುರಿಯಲ್ಲಿ ಅವನು ತುಂಬಾ ಸ್ಪಷ್ಟವಾಗಿದ್ದರಿಂದ ಹೆಚ್ಚಿನ ಸಮಯ ಬೇಕಿಲ್ಲವಾಗುತ್ತದೆ. ಅದೇ ದೂರ್ಯೋಧನ ಧರ್ಮರಾಯರಿಬ್ಬರಿಗೂ ಇನ್ನೊಂದಿಷ್ಟು ಸಮಯ ನೀಡಿದ್ದರೆ ಅವರ ಗುರಿ ಸರಿಯಾಗಿರ್ತಿತ್ತಾ..? ಇಲ್ಲ ಅಲ್ಲವಾ..? ಹಾಗೆ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಒಂದಕ್ಕಿಂತ ಒಂದು ಭಿನ್ನವಾಗಿರೋದು ಬಿಟ್ಟರೆ, ಅದಕ್ಕಾಗಿಯೇ ತುಂಬಾ ಸಮಯ ತೆಗೆದುಕೊಳ್ಳುವುದರಿಂದ ಅದರಲ್ಲೇನು ವ್ಯತ್ಯಾಸವಾಗುವುದಿಲ್ಲ. ಹಾಗೆ ಪ್ರತಿಯೊಂದು ವಿಷಯವನ್ನು ನಿರ್ಧಾರ ಮಾಡುವುದಕ್ಕೆ ಅದರದ್ದೆ ಆದ ಸಮಯ ಇರುತ್ತದೆ ಅನ್ನೊದು ಬಿಟ್ಟರೆ ತುಂಬಾ ಯೋಚಿಸುವುದರಿಂದ ನಿಮ್ಮ ನಿರ್ಧಾರ ಚೆನ್ನಾಗಿರುತ್ತದೆ ಅಂತ ಅಂದುಕೊಳ್ಳೋದು ಭ್ರಮೆ.
ಅಂತಿಮವಾಗಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಕನಸು, ಗುರಿ, ನಿಮಗಿರುವ ಆದ್ಯತೆಗಳ ಮೇಲೆ ನೋಡುವಂತಾಗಬೇಕೆ ವಿನಃ, ಇನ್ನೊಂದಿಷ್ಟು ಸಮಯ ತೆಗೆದುಕೊಂಡರೆ ಸರಿ ಇರುತ್ತದೆ ಅಂದುಕೊಳ್ಳುವುದರಲಲ್ಲ. ತೀರಾ ಸಮಯ ತೆಗೆದುಕೊಂಡು ಯೋಚಿಸುತ್ತಾ ಹೋದರೆ, ಮರ ಸುತ್ತೊದಷ್ಟೇ ಆಗುತ್ತದೆ ಬಿಟ್ಟರೆ ಮುಂದೆ ಹೋಗಲಾರಿರಿ.
೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು…
೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…
ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…