ಮೇ ತಿಂಗಳು ಎಂದರೆ ಮರೆಯಲಾಗದಂತಹ ನೂರಾರು ನೆನಪುಗಳ ಸಾಲು, ಶಾಲೆಗೆ ರಜೆ.. ತೋಟ ಕಾಡು ಬೆಟ್ಟ ಗುಡ್ಡಗಳಲ್ಲಿ ಸುತ್ತಾಟ, ಹರಿವ ನೀರು, ಜಿಗಿಯುವ ಝರಿಯಲ್ಲಿ ನೀರಾಟ, ಅದರ ನಡುವೆ ಬಣ್ಣ ಬಣ್ಣದ ಮೇ ಹೂಗಳ ನೋಡುವುದೇ ಒಂದು ಹೊಸ ನೋಟ. ಕಣ್ಣಿಗೆ ಮನಸ್ಸಿಗೆ ಹಬ್ಬದ ಊಟ.
ಹಳದಿ, ಕೆಂಪು, ನೀಲಿ, ಚಿತ್ತಾರದ ಹೂಗಳನ್ನು ನೋಡುವುದು, ಅದರ ನವಿರಾದ ಸ್ಪರ್ಶ, ಮೃದು ಮಧುರ ಅನುಭೂತಿ.. ಅದು ಮಾತಿನಲ್ಲಿ ಲೇಖನಿಯಲ್ಲಿ ವರ್ಣಿಸಲಸದಳ. ಅಷ್ಟೇನೂ ಕಂಪು ಬೀರದಿದ್ದರೂ ತನ್ನ ಬಣ್ಣ ಸೌಂದರ್ಯದಿಂದ ಮನಸೆಳೆವ ಮೇ ಹೂವುಗಳು ನನಗಂತೂ ನೆನಪಿನ ಪುಸ್ತಕದಲ್ಲಿ ಮರೆಯಲಾಗದ ಹಾಳೆಗಳು.
ನಮ್ಮೂರಲ್ಲಿ ರಜೆ ಎಂದರೆ, ನೆಂಟರಿಷ್ಟರ ಮನೆ ಮಕ್ಕಳೆಲ್ಲಾ ಪಟ್ಟಣದಿಂದ ಊರಿಗೆ ಬರುತ್ತಿದ್ದರು. ಎಲ್ಲರೂ ಸೇರಿ ಆಡಲು ಪ್ರಶಸ್ತ ಜಾಗ ಶಾಲೆ, ಶಾಲೆಯ ಎದುರು ಕೆಂಪು ಹೂ ಬಿಡುವ ಮೇ ಹೂವಿನ ಮರ, ಅಷ್ಟೇನೂ ದೊಡ್ಡದಲ್ಲದ ಅದನ್ನು ಸಲೀಸಾಗಿ ಹತ್ತಿ ಬಿಡುತ್ತಿದ್ದೆ.. ಹತ್ತಿ ಟೊಂಗೆಯ ಮೇಲೆ ಕುಳಿತು ಅದರ ಹೂವನ್ನು ಕಿತ್ತು ಪಕಳೆಗಳ (ಕೆಂಪು, ಬಿಳಿ) ಬಣ್ಣ ವಿನ್ಯಾಸ ನೋಡುವುದು ನನಗೆ ಪ್ರೀತಿ. ಕಿತ್ತು ತಂದ ಹೂವಿನ ಎಸಳು ಪುಸ್ತಕದ ಮಧ್ಯ ಭದ್ರ. ಹಳ್ಳಿಯ ಮಕ್ಕಳು ಮರ ಹತ್ತುವುದು ಅದರಲ್ಲೂ ಹೆಣ್ಣು ಮಕ್ಕಳು ಮರ ಹತ್ತುವುದು ನೋಡಲು ಪಟ್ಟಣದ ಮಕ್ಕಳಿಗೆ ಕೌತುಕ. ಅವರ ಮುಂದೆ ನಮ್ಮ ಸಾಹಸ ಪ್ರದರ್ಶನ ಬಾಲ್ಯದಲ್ಲಿ.
ನಂತರ ನಮ್ಮ ಪದವಿ ಓದುವಾಗ ಕಾಲೇಜಿನ ದಾರಿಯ ಬದಿಯಲ್ಲಿ ದಾರಿಯುದ್ದಕ್ಕೂ ಈ ಮೇ ಹೂವಿನ ಮರಗಳ ಸಾಲು, ದಾರಿ ಹೂವಿನ ಹಾಸಿಗೆ ಉಳಿದ ಸಮಯ ನೆರಳಿನ ಚಪ್ಪರ.. ರಾಶಿ ರಾಶಿ ಹಳದಿ ಬಣ್ಣದ ಹಾಸಿಗೆಯ ಹಾಗೆ ಕಾಣುತ್ತಿತ್ತು. ಬೀಸುವ ಗಾಳಿಗೆ ಮೇಲಿಂದ ಉದುರುವ, ಹೂವು ತಲೆ, ಮೈಮೇಲೆ ಬಿದ್ದಾಗ ನವಿರಾದ ಪುಳಕ. ಅದರ ಬಣ್ಣ ಹಳದಿ ಬುಡದಲ್ಲಿ ತುಸು ಕಂದು.. ಮನಮೋಹಕ ಪುಟ್ಟ ಹೂಗಳು, ಅದು ಹಳದಿ ಬಣ್ಣ ಆದ ಕಾರಣ ಸ್ನೇಹದ ಬಣ್ಣದ ಸಂಕೇತ ಎಂದೂ, ಸ್ನೇಹಿತೆಯರ ನಡುವೆ… ಅರಳಿ ನಗುವ ಹೂವುಗಳ ವಿನಿಮಯ. ನಮ್ಮ ಪುಸ್ತದಲ್ಲಿ ಅದರ ಸ್ಥಾನ.. ಪುಟ ತಿರುಗಿಸುವಾಗ ಮಧ್ಯೆ ಮಧ್ಯೆ ಸಿಗುವ ಹೂಗಳನ್ನು ಜತನ ಮಾಡುವ ಕೆಲಸ..
ಮೇ ಫ್ಲವರ್ ಇದರ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೇಜಿಯಾ. ಬೀನ್ ಕುಟುಂಬದ ಪ್ಯಾಬಾಸೇಯ ಹಾಗೂ ಸೀಸಲ್ಪಿನಿಯೊಡೈ ಉಪ ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯವಾಗಿದೆ. ಇದನ್ನು ಅನೇಕ ಕಡೆಗಳಲ್ಲಿ ಹಾಗೂ ದೇಶ ವಿದೇಶದಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತ್ತದೆ. ಉದ್ಯಾನವನ ರಸ್ತೆ ಬದಿ ಮತ್ತು ಅನೇಕ ದೊಡ್ಡ ಕಟ್ಟಡಗಳ ಮುಂದೆ ವಿವಿಧ ಬಣ್ಣ ಮತ್ತು ವಿನ್ಯಾಸದ ಗಿಡಗಳನ್ನು ಬೆಳೆಸುತ್ತಾರೆ. ಉಷ್ಣವಲಯ ದೇಶಗಳಲ್ಲಿ ಮೇ ಹೂಗಿಡಗಳು ಕಾಣ ಸಿಗುತ್ತವೆ.
ಇಂತಿಪ್ಪ ಮೇ ಹೂಗಳು ಇಂದು ಕಂಡಾಗ ಏನೋ ಸಂಮ್ಮೋಹನ ಸೆಳೆತ, ಮಗನ ಜೊತೆ ಸಂಜೆ ವಾಯು ವಿಹಾರಕ್ಕೆ ಹೊರಟಾಗ.. ಕಣ್ಮನ ಸೆಳೆದು ನೂರು ನೆನಪುಗಳಲ್ಲಿ ತೇಲಿಸುವುದು ಈ ಮೇ ಫ್ಲವರ್. ಮಗನ ಅಮ್ಮ….ಅಮ್ಮ, ಎಂಬ ಜೋರಾದ ಕರೆ ವಾಸ್ತವ ಲೋಕಕ್ಕೆ ಬರುವಂತೆ ಮಾಡಿತ್ತು. ಒಂದಷ್ಟು ಫೋಟೋ ತೆಗೆದು ಜತನ ಗೊಳಿಸುವುದು ಈಗಿನ ಕೆಲಸ. ಮೇ ತಿಂಗಳ ನೆನಪಿನ ಗರಿಗಳ ನಡುವೆ, ಮೇ ಹೂವುಗಳ ಜೊತೆ ನನ್ನ ಬದುಕಿನ ವರ್ಣಮಯ ದಿನಗಳ, ಸ್ನೇಹಿತರ ಒಂದಷ್ಟು ಸವಿ ನೆನಪು ಸದಾ ಅಮರ ಮಧುರ..
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…