ವಿಮರ್ಶೆಗಳು

ಲೀಲಾವತಿ ವಿಜಯಕುಮಾರ ಅವರು ಬರೆದ ಲೇಖನ ‘ಮಣ್ಣೆತ್ತಿನ ಅಮವಾಸ್ಯೆ’

ಆಷಾಡ ಅಮವಾಸ್ಯೆ. ನಾವೆಲ್ಲಾ ಕರೆಯುವುದು,”ಮಣ್ಣೆತ್ತಿನ ಅಮವಾಸ್ಯೆ”ಎಂದು.

ಜರಡಿ ಹಿಡಿದ ನುಣುಪಾದ ಮಣ್ಣಿನಿಂದ ತಿದ್ದಿ ತೀಡಿದ ಬಸವಣ್ಣನನ್ನು ಮಾಡಿ,ಕಡ್ಡಾಯವಾಗಿ ಮೇವು‌(ಇಲ್ಲಿ ಪೂಜೆಯಲ್ಲಿ ಜೋಳ) ಹಾಕುವ,ಗೋದಲಿ ಮಾಡಿ.ಪೂಜಿಸುವುದು.ಆ ಮೂಲಕ,ರೈತರ ಬಂಧು,ನಿಜಮಿತ್ರ,ಬಸವಣ್ಣ ಅಂದರೆ,ಎತ್ತುಗಳನ್ನು,ಆಕಳುಗಳನ್ನು ಪೂಜಿಸುವುದು.ಸಿಹಿ ಮಾಡಿ,ಪ್ರಸಾದ ರೂಪದಲ್ಲಿ ಸೇವಿಸುವುದು.ನಮ್ಮದು ಕೃಷಿ ಪ್ರಧಾನ ಸಮಾಜ.ಅನಾದಿ ಕಲಾದಿಂದಲೂ ಭೂಮಿ ಊಳಲು,ಎತ್ತುಗಳ ಆವಶ್ಯಕತೆ ಇದೆ.ಈಗಲೂ ಕೃಷಿಕರ ಮನೆಯ ಕೊಟ್ಟಿಗೆಯಲ್ಲಿ,ಹಿತ್ತಲಲ್ಲಿ ಅಥವಾ ಮನೆ ಮುಂದೆ ಎತ್ತುಗಳನ್ನು ನಾವು ಕಾಣುತ್ತೇವೆ.ಹೈನಿಗಂತೂ ಆಕಳು,ಎಮ್ಮೆ ಬೇಕೇಬೇಕು.ಅದನ್ನೆಲ್ಲಾ ನಾವು ಇಂದೂ ಸಹ ಹಳ್ಳಿಗಳಲ್ಲಿ ನೋಡಲು ಸಾಧ್ಯ.ಒಂದಾದರೂ ಆಕಳು,ಎಮ್ಮೆ ,ಅಥವಾ ಎರಡು ಎತ್ತು ಇದ್ದೇ ಇರುತ್ತದೆ. ಆಷಾಡ ಎಂದರೆ ಮುಂಗಾರಿನ ಕೃಷಿ ಚಟುವಟಿಕೆಗಳು ಆರಂಭವಾಗಿವೆ ಎಂದರ್ಥ.

ಅಷಾಡಕ್ಕೂ ಮುನ್ನ ಬರುವುದು ,”ಕಾರ ಹುಣ್ಣಿಮೆ”.ಇದು ಬಿತ್ತನೆಗೂ ಮೊದಲಿದುಹುಣ್ಣಿಮೆಯ ಹಿಂದಿನ ಸಾಯಂಕಾಲ,ಎಲ್ಲಾ ಜಾನುವಾರುಗಳನ್ನು ಸ್ನಾನ ಮಾಡಿಸಿ,ಪೂಜಿಸಿ,”ಹೊನ್ನುಗ್ಗಿ”,ಬೆಲ್ಲದ ಹಾಲು ತಿನ್ನಿಸುವರು.ಹೊನ್ನುಗ್ಗಿ ಎಂದರೆ,ಜೋಳವನ್ನು ಒಂದು ಹಂತದವರೆಗೂ ಹದಮಾಡಿ,ನೆನೆಸಿ ಮಾಡಿದ ಹುಗ್ಗಿ.ಅದೇ ಕಾರಹುಣ್ಣಿಮೆಯ ಹಿಂದಿನ ದಿನದ ಎತ್ತುಗಳಿಗೆ ಪ್ರಸಾದವಾಗಿ ಕೊಡುವುದು.ನಂತರ ದಿನದ ಹುಣ್ಣಿಮೆಯಲ್ಲಿ ಎತ್ತು,ಜಾನುವಾರುಗಳನ್ನು ಪೂಜಿಸುವುದರ ಜೊತೆಗೆ,ಅವುಗಳನ್ನು ಊರಿನ ಬಸವಣ್ಣ ಗುಡಿಗೆ ಕರೆದುಕೊಂಡು ಹೋಗಿ,ಪೂಜೆ ಮಾಡಿಸಿಕೊಂಡು ಬರುವ ಪದ್ದತಿ. ಕೆಲವು ಊರುಗಳಲ್ಲಿ,”ಕರಿ ಹರಿಯುವುದು”ಎಂಬ ಆಚರಣೆ ನಡೆಯುತ್ತದೆ. ಅಂದರೆ ಊರಮುಂದಿನ ಎಲ್ಲರೂ ಸೇರುವ ಜಾಗದಲ್ಲಿ ಫಸಲುಗಳನ್ನು ಕಟ್ಟುವರು.ಎತ್ತುಗಳು ಯಾವ ಫಸಲನ್ನು ಹರಿಯುವುದೋ,ಆ ಫಸಲು ಆ ವರ್ಷ ಬರುವುವುದೆಂಬ ದೃಢ ನಂಬಿಕೆ.ಇದಕ್ಕೆ “ಕರಿ ಹರಿಯುವುದು” ಎಂಬ ಹೆಸರು.

ನಂತರ ಬರುವುದೇ,”ಮಣ್ಣೆತ್ತಿನ‌ ಅಮವಾಸ್ಯೆ”.ಇದೊಂದು‌ ಬಾಲ್ಯದ ನೆನಪಿನ ಸರಮಾಲೆಯೇ ಹೌದು.ಅಂದು ಮುಂಜಾನೆ ಅಥವಾ ಹಿಂದಿನ ದಿನ,ಹೊಲದ ಸ್ವಚ್ಛಮಣ್ಣು ತಂದು,ಎಲ್ಲಾ ಪುಡಿ ಮಾಡಿ,ಜರಡಿ ಹಿಡಿಯಬೇಕು.ಆಗ ಸಿಗುವ ನುಣುಪಾದ ಮಣ್ಣಿಗೆ,ಹಬ್ಬದ ಮುಂಜಾನೆ, ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ಕಲೆಸಬೇಕು.ನಂತರ ಬಸವಣ್ಣನನ್ನು ರೂಪಿಸುವುದು.ಆಗ ಇದನ್ನು ನಾವೇ ಚಿಕ್ಕ ಮಕ್ಕಳೆಲ್ಲಾ ಸೇರಿ ಮಾಡುತ್ತಿದ್ದೆವು.ಹೇಗೆ ಮಾಡಿದರ ಬಸವಣ್ಣ ತಯಾರಾಗುತ್ತಿದ್ದ.ಹೊಂದಿಕೊಳ್ಳುವ ಸ್ವಭಾವವಲ್ಲವೇ!!ಜೊತೆಗ ಗೋದಲಿ‌ ಮಾಡಿ,ನಂತರ ಕಣ್ಣು,ಮೂಗಿಗೆ ಜೋಳದ ಕಾಳನ್ನು ಅಂಟಿಸಿದರೆ,ಸಾಕ್ಷಾತ್ ಬಸವಣ್ಣ (ಎತ್ತು)ಕಣ್ಮುಂದೆಯೇ ಇರುತ್ತಿದ್ದ.ಇದೇ ಬಸವಣ್ಣನಿಗೆ ಅಲಂಕಾರ.ಗೋದಲಿಗೆ ಜೋಳ ಹಾಕುವ ರೂಡಿ.

ಹೀಗೆ ತಯಾರಾದ ಬಸವಣ್ಣನನ್ನು,ದೇವರ ಮನೆಯ ಜಗುಲಿಯಲ್ಲಿ ಕೂಡಿಸಿ,ಪೂಜಿಸಿ,ಸಿಹಿಯ ಅಡುಗೆಯ ನೈವೇದ್ಯ ಮಾಡುವರು.ಕೆಲವು ಮನೆಗಳಲ್ಲಿ,ಮನೆಯ ಕೊಟ್ಟಿಗೆಯ ಗೋದಲಿಯ ಬಳಿಯೇ,ಮಣ್ಣೆತ್ತನ್ನು ಇರಿಸಿ,ಪೂಜಿಸುವ ಸಂಪ್ರದಾಯ. ಅದು ಹಿರಿಯರು ಹಾಕಿಕೊಟ್ಟ ಸತ್ಸಂಪ್ರದಾಯ. ನಂತರ ೩ ದಿನ ಅಥವಾ ೫ದಿನ ಪೂಜಿಸಿ,ಊರಲ್ಲಿರುವ ಬಾವಿ ಅಥವಾ ಹೊಳೆಯಲ್ಲಿ ಪೂಜೆ ಮಾಡಿ ಕಳಿಸಿಬರುವುದು.ಅಲ್ಲಿಗೆ ಆ ವರ್ಷದ ಮಣ್ಣೆತ್ತಿನ ಪೂಜೆಯಾಗುವುದು. ಆಷಾಡ ಎಂದರೆ,ಜಿನುಗುವ ಮಳೆಯ ನಡುವೆ,ಮುಂಗಾರಿನ ಬಿತ್ತನೆಯು ಅರಂಭಗೊಂಡಿದೆ ಎಂದರ್ಥ.

ಯಾವುದೇ ಕೆಲಸದ ಆರಂಭಕ್ಕೂ ಮುನ್ನ,ಪೂಜೆ ಮಾಡಿ,ಗೌರವ ಸಲ್ಲಿಸುವಂತೆ,ಅನ್ನದಾತನ ಮಿತ್ರನಾದ,ಎತ್ತುಗಳಿಗೂ ಪೂಜಿಸಿ,ಗೌರವ ಸಲ್ಲಿಸುವುದು.ಆ ಮೂಲಕ ಮೂಕಜೀವಿಗಳಿಗೆ ಘನತೆ ಕೊಡುವುದು.ಮತ್ತು ಜಾನುವಾರುಗಳಿಗೆ ಯಾವುದೇ ರೋಗಬಾಧೆ ತಟ್ಟದಂತೆ ಪ್ರಾರ್ಥನೆ ಮಾಡುವುದು. ಇದು ವರ್ಷದ ಆಯಾಕಾಲಕ್ಕೆ ರೈತನ ಮಿತ್ರರಾದ,ಎತ್ತುಗಳಿಗೆ ಈ ಗೌರವಾಧರಗಳು,ಪೂಜೆಗಳನ್ನು ಮಾಡಿಯೇ ಮಾಡುವರು.

ಉದಾಹರಣೆಗೆ,

*ಸಂಕ್ರಾಂತಿಯಲ್ಲಿ ಜಾನುವಾರುಗಳಿಗೆ,ಕಿಚ್ಚು ಹಾಯಿಸಿ,ಚಳಿಗಾಲದ ಕ್ರಿಮಿಕೀಟಣುಗಳನ್ನು ಹೋಗಲಾಡಿಸುವರು.

*ಬಸವ ಜಯಂತಿಯಲ್ಲಿ,ಎತ್ತುಗಳಿಗೆ ಸ್ನಾನ,ಪೂಜೆ ಮಾಡಿ,ಅಂದಿನ ಸಿಹಿಯೂಟವಾದ ಹೋಳಿಗೆಯನ್ನು ತಿನ್ನಿಸಿ,ಸಾಯಂಕಾಲ,ಅಲಂಕೃತ “ಎತ್ತನ್ನು ಮೆರೆಸುವರು”.ಅಂದರೆ ಗುಡಿಯಿಂದ ಊರಲೆಲ್ಲಾ ಮೆರವಣಿಗೆ ಮಾಡುವುದು.

*ಕಾರ ಹುಣ್ಣಿಮೆಯಲ್ಲೂ ಸಹ,ವರ್ಷ ಫಸಲಿನ ಆಯ್ಕೆಯನ್ನು ಬಸವನಿಗೆ ಬಿಡುವುದು.

*ಮಣ್ಣೆತ್ತಿನ‌ ಅಮಾವಾಸ್ಯೆಯಲ್ಲಿ,ಅದರ ಪ್ರತಿರೂಪಗಳನ್ನೇ ಇರಿಸಿ,ಪೂಜಿಸಿ,ಗೌರವಿಸುವುದು.

ಈಗ ಮಣ್ಣೆತ್ತುಗಳು ಸುಲಭವಾಗಿ ಪೇಟೆಯಲ್ಲಿ ದೊರಕುವುದು.ಬಗೆಬಗೆಯಾಗಿ ಬಣ್ಣ ಬಣ್ಣದಿಂದ ಕಂಗೊಳಿಸುವುದು!!.ನಾವು ಮಾಡಿದರೆ ಮಣ್ಣು ಬಣ್ಣವೇ.ಆದರಿಲ್ಲಿ ವಿವಿಧತೆ,ಹೆಚ್ಚು ಎತ್ತರದ ಬಸವಣ್ಣ ಲಭ್ಯ.ಆದರೆ ಕೈಯಿಂದ ಮಾಡಿದಷ್ಟು ಆಪ್ತತೆ,ಬೇರೆಲೂ ಖರೀದಿಸಿದಲ್ಲಿ ಸಿಗುವುದಿಲ್ಲ ಎಂಬುದು ಸತ್ಯ,ಮೊದಲು ಖರೀದಿಸುವಾಗ ಯಾವ ಮಣ್ಣಿನಿಂದ ಮಾಡಿರುತ್ತಾರೋ?ಎನಿಸಿದ್ದಂತೂ ನಿಜ.ಹೇಗೆ ಪೂಜಿಸಿವುದು ಎಂಬ ಪ್ರಶ್ನಾರ್ಥಕ ಭಾವ ಬಂದಿದ್ದೂ ನಿಜ.ನಮ್ಮ ಪೀಳಿಗೆಗೂ ಮಣ್ಣೆತ್ತು ಮಾಡುವುದರ ಅರಿವಿಲ್ಲ.ಮಣ್ಣು ಜರಡಿ ಹಿಡಿಯುವುದೂ ಸಹ ತಿಳಿದಿಲ್ಲ.ಬದಲಾದ ಕಾಲಕ್ಕೆ ಬದಲಾಗಲೇಬೇಕೆಂಬುದು,ಜಗದ ನಿಯಮವೇ ಇದೆಯಲ್ಲಾ!.

‌‌‌ಮಣ್ಣೆತ್ತಿನ ಅಮವಾಸ್ಯೆಯಿಂದ ಸತತವಾಗಿ ನಾಗರ ಪಂಚಮಿ ಹಬ್ಬ,ನಂತರದ ಗಣೇಶ ಚತುರ್ಥಿಯಲ್ಲಿ,ನಂತರದ ಸೀಗೆ ಹುಣ್ಣಿಮೆಯಲ್ಲಿ,ಮಣ್ಣಿನ ಮೂರ್ತಿಗಳನ್ನೇ ಪೂಜಿಸುವುದು ಸಂಪ್ರದಾಯ, ಆಚರಣೆ.ಇದು ಮನುಜನಿಗೆ ಮಣ್ಣಿನೊಂದಿಗೆ ಬೆಳೆದ ಅನುಬಂಧ.ಎಷ್ಟಾದರೂ‌ ನಾವೆಲ್ಲಾ ಮಣ್ಣಿಮ ಮಕ್ಕಳು.ಎಲ್ಲೇ‌ ಇರಲಿ,ನಮ್ಮ ಬೇರಿರುವುದು ಹಳ್ಳಿಯ ಸೊಗಡಿನಲ್ಲಿ,ಮಣ್ಣಿನಲ್ಲಿಯೇ ಬೇರು.ಹಾಗಾಗಿಯೇ ಇಂತಹ ಆಚರಣೆಗಳನ್ನು ಎಲ್ಲಿ ಇದ್ದರೂ ಸಹ ಆಚರಿಸಿಯೇ ಆಚರಿಸುವುವೆವು.ನಮ್ಮ‌ ನಮ್ಮ ಮನೆಗಳ ಸಂಪ್ರದಾಯ ಪಾಲಿಸಲು.ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಲು…

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago