ಈಗಂತೂ ಎಲ್ಲಿ ನೋಡಿದರೂ ಗಿಫ್ಟ್ಗಳದ್ದೇ ಹವಾ ಎನ್ನಬಹುದು. ಮದುವೆ, ಮುಂಜಿ, ಹುಟ್ಟುಹಬ್ಬ, ಗೃಹಪ್ರವೇಶ, ಹಬ್ಬ ಹರಿದಿನ ಹೀಗೆ… ಒಂದೇ ಎರಡೇ ಗಿಫ್ಟ್ ಅಥವಾ ಉಡುಗೊರೆಯನ್ನು ಕೊಡಲು ಆ ದಿನ ಈ ದಿನ ಎನ್ನುವುದಿಲ್ಲ. ವರ್ಷದ ಎಲ್ಲಾ ದಿನವೂ, ಯಾವುದೇ ಸಮಯದಲ್ಲೂ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಕೊಡಬಹುದು. ಆದರೆ ಈ ಗಿಫ್ಟ್ ಸೆಲೆಕ್ಷನ್ ಇದೆಯಲ್ಲ, ನಿಜಕ್ಕೂ ಒಂದು ರೀತಿಯ ಸವಾಲಿನ ಸಂಗತಿಯೇ ಸರಿ..!
ಈ ಬಗ್ಗೆ ಒಂದು ಪ್ರಸಿದ್ಧವಾದ ಪುಟ್ಟ ಕಥೆಯೂ ಸಹ ಇದೆ. ಕಥೆಯ ಪ್ರಕಾರ ನಾಯಕ ನಾಯಕಿ ಇದ್ದಾರೆ. ಆದರೆ ಅವರಿಬ್ಬರೂ ಗಂಡ ಹೆಂಡತಿಯರೇ..! ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ. ಹಾಗಾಗಿ ಕ್ರಿಸ್ಮಸ್ ಉಡುಗೊರೆಯಾಗಿ ಇಬ್ಬರೂ ತಮ್ಮ ಇನಿಯನಿಗೆ ಮತ್ತು ಮನದರಸಿಗೆ ಏನು ಕೊಡಬಹುದೆಂದು ಅವರವರೇ ಯೋಚಿಸಿ, ಒಂದೊಳ್ಳೆಯ ಉಡುಗೊರೆ ತಂದಿದ್ದಾರೆ.
ತನ್ನ ಮನದನ್ನೆಯ ರೇಷ್ಮೆ ಅಂತಹ ನುಣುಪಾದ, ಉದ್ದವಾದ ಕೂದಲನ್ನು ಬಾಚಲು ಅವಳ ಗಂಡ ಬೆಲೆ ಬಾಳುವ ಬಾಚಣಿಕೆ ತಂದಿದ್ದಾನೆ. ಕೊಡಲು ಹೋದರೆ ಹೆಂಡತಿಯ ಉದ್ದ ಕೂದಲು ಪೂರ್ತಿ ಗಿಡ್ಡವಾಗಿದೆ..! ಆಶ್ಚರ್ಯಗೊಂಡ ಗಂಡ ಕಾರಣ ಕೇಳಿದರೆ, “ನಿಮ್ಮ ವಾಚಿಗೆ ಸುಂದರವಾದ ಚೈನ್ ಅನ್ನು ಕೊಂಡುಕೊಳ್ಳಲು ನನ್ನ ಕೂದಲನ್ನು ಮಾರಿದೆ” ಎಂದು ಉಸುರುತ್ತಾಳೆ ಪ್ರೀತಿಯ ಮಡದಿ.
ಮತ್ತೊಮ್ಮೆ ಶಾಕ್ ಆಗುವ ಸರದಿ ಗಂಡನದ್ದು. ಜೊತೆಗೆ ಬೇಸರಗೊಳ್ಳುವ ಸರದಿ ಇಬ್ಬರದ್ದು..! ಕಾರಣ ಗಂಡ ಹೆಂಡತಿಗೆ ಗಿಫ್ಟ್ ಕೊಡಬೇಕೆಂದು ತನ್ನ ವಾಚನ್ನು ಮಾರಿ, ಬಂದ ಹಣದಲ್ಲಿ ಅವಳಿಗೆ ಬಾಚಣಿಕೆ ಖರೀದಿಸಿದ್ದಾನೆ. ಇಬ್ಬರ ಗಿಫ್ಟ್ಗಳನ್ನು ಸದ್ಯಕ್ಕೆ ಉಪಯೋಗಿಸುವುದಕ್ಕೆ ಆಗುವುದಿಲ್ಲ. ಕಾಯಬೇಕು..! ಅಲ್ಲಿಯವರೆಗೂ ಅದು ಸುಸ್ಥಿತಿಯಲ್ಲಿರಬೇಕು. ಜೊತೆಗೆ ಧೂಳು ಹಿಡಿದು, ಎಲ್ಲಿ ಇಟ್ಟೆನೆಂದು ಮರೆತು ಹೋಗಬಾರದು. ಅಲ್ಲಿಗೆ ಈ ಚೆಂದದ, ನೀತಿಯುಳ್ಳ ಕಥೆ ಅಂತ್ಯವಾಗುತ್ತದೆ.
ಇನ್ನು ಭಾರತದಲ್ಲಿ ನೋಡುವುದಾದರೆ, ಯಾವುದೇ ಶುಭ ಸಮಾರಂಭಗಳಿಗೆ ಉಡುಗೊರೆ ಕೊಡಬಹುದು. ಆದರೆ “ಗಿಫ್ಟ್ ಟ್ಯಾಕ್ಸ್” ಎಂಬುವ ಟ್ಯಾಕ್ಸ್ ಇದೆ. 50,000 ಕ್ಕಿಂತ ಮೇಲ್ಪಟ್ಟ ಗಿಫ್ಟ್ ಅಥವಾ ಹಣವನ್ನು ಕೊಟ್ಟರೆ, ತೆಗೆದುಕೊಳ್ಳುವಾತ ಒಂದಷ್ಟು ಟ್ಯಾಕ್ಸ್ ಅನ್ನು ಸರಕಾರಕ್ಕೆ ಕಟ್ಟಬೇಕು. ಆದರೆ ಹತ್ತಿರದ ಸಂಬಂಧಿಗಳಾದ ಅಪ್ಪಅಮ್ಮ, ಮಕ್ಕಳ ನಡುವೆ ಕೊಟ್ಟುಕೊಳ್ಳುವ ಹಣ, ಅಭರಣ, ಆಸ್ತಿ ಇವೆಲ್ಲವೂ ಟ್ಯಾಕ್ಸ್ ಗೆ ಒಳಪಡುವುದಿಲ್ಲ.
ನೂತನ ವಧು ವರರು, ಆಗಷ್ಟೇ ಪ್ರೀತಿಯಲ್ಲಿ ಬಿದ್ದವರು, ಇವರ ಮಧ್ಯೆ ಗಿಫ್ಟ್ ವಿನಿಮಯ ಜಾಸ್ತಿ ಎಂದೇ ಹೇಳಬಹುದು..! ಚಾಕಲೇಟ್, ಟೆಡ್ಡಿ ಬೇರ್, ಬಟ್ಟೆ, ವಾಚ್, ಆಭರಣ, ಕಪಲ್ ರಿಂಗ್, ಹೀಗೆ… ಏನೇನೋ ವಸ್ತುಗಳನ್ನು ಇಬ್ಬರೂ ಪರಸ್ಪರ ಗಿಫ್ಟ್ ಮಾಡಿಕೊಳ್ಳುತ್ತಾರೆ. ಆದರೆ ಯಾವುದೂ ಅತಿಯಾಗದೇ, ದುಡ್ಡು ಪೋಲಾಗದಂತೆ, ಇಬ್ಬರ ನಡುವಿನ ಪ್ರೀತಿ ಹಾಗೆಯೇ ಇದ್ದರೆ ಬಹಳ ಚೆಂದ..!
ದೊಡ್ಡ ದೊಡ್ಡ ಹುಟ್ಟುಹಬ್ಬ, ಮದುವೆಗಳಿಗೆ ಕೆಲವು ಜನರು ಹೂವಿನ ಗೊಂಚಲನ್ನು ಹಿಡಿದುಕೊಂಡು ಹೋಗುತ್ತಾರೆ. ಹೇಳಬೇಕೆಂದರೆ ಹಾಗೆ ಹಿಡಿದುಕೊಂಡು, ಒಳ್ಳೆಯ ಬಟ್ಟೆ, ಮೇಕಪ್ ಧರಿಸಿ ಹೋಗುತ್ತಿದ್ದಾಗ, ನಿಜಕ್ಕೂ ಅವರು ತುಂಬಾ ಸುಂದರವಾಗಿ ಕಾಣುತ್ತಾರೆ..! ಪರಿಣಾಮವಾಗಿ ಸೆಲ್ಫಿ ಮತ್ತು ಫೋಟೋವನ್ನು ತೆಗೆಸಿಕೊಂಡು ಖುಷಿಪಡುತ್ತಾರೆ. ಆದರೆ ಕೊಡುವವರಿಗೆ ಆ ಹೂವು ಗೊಂಚಲನ್ನು ತಲುಪಿಸಿದ ಮೇಲೆ, ಆ ಹೂವುಗಳ ಗತಿ ದೇವರಿಗೆ ಪ್ರೀತಿ..! ಏನೋ ಒಂದಷ್ಟು ಹೊತ್ತು ನಳನಳಿಸಿ ಕೊನೆಗೆ ಸೋತು ಸುಣ್ಣವಾಗುತ್ತವೆ. ಮುದುಡಿದಾಗ ಕಸದ ಬುಟ್ಟಿಗೆ ಸೇರುತ್ತವೆ..!
ಹೂವಿನ ಬೊಕೆಯನ್ನು ಗಿಫ್ಟ್ ಆಗಿ ತೆಗೆದುಕೊಂಡವರಿಗೆ, ಇದು ಇಂತಹವರು ಕೊಟ್ಟಿದ್ದು ಎಂದು ಖಂಡಿತ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಕೊಟ್ಟವನ ದುಡ್ಡು ಮಾತ್ರ ದಂಡ..! ಅದರ ಬದಲು ಪುಸ್ತಕವನ್ನೋ ಅಥವಾ ಒಂದು ಚಿಕ್ಕ ಗಿಡದ ಸಸಿಯನ್ನೋ ಕೊಟ್ಟರೆ, ಅದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಈ ಗಿಫ್ಟ್ ಸೆಲೆಕ್ಷನ್ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಏಕೆಂದರೆ ಅಂಗಡಿಗೆ ಹೋದರೆ ತರಹೇವಾರಿ ವಸ್ತುಗಳು ನಮ್ಮ ಕಣ್ಣು ಕೋರೈಸುತ್ತವೆ. ಯಾವುದನ್ನು ತೆಗೆದುಕೊಳ್ಳುವುದು, ಯಾವುದನ್ನು ಬಿಡುವುದು ಎಂದು ನಿಜಕ್ಕೂ ಗೊಂದಲವಾಗುತ್ತದೆ. ಆದಾಯಕ್ಕೆ ತಕ್ಕಂತೆ ಉಡುಗೊರೆಗಳನ್ನು ಖರೀದಿಸಿದರೆ ಉತ್ತಮ. ಬೇರೆಯವರ ಮುಂದೆ ತಮ್ಮ ಗಿಫ್ಟ್ ಸಾಧಾರಣವಾಗಿ ಕಾಣಬಾರದು, ಕೊಟ್ಟವರು ಏನೆಂದುಕೊಳ್ಳುತ್ತಾರೋ ಎಂದು ತೀರಾ ದುಬಾರಿಯಾದ, ನಮ್ಮ ಆದಾಯಕ್ಕೆ ಕೈಗೆಟುಕಲು ಕಷ್ಟವಾದ ಗಿಫ್ಟ್ಗಳನ್ನು ಕೊಡುವುದು ಸರಿಯಲ್ಲ.
ಇದ್ದುದ್ದರಲ್ಲೇ ಉತ್ತಮವಾದ, ಹೋಗುವ ಶುಭ ಸಮಾರಂಭಕ್ಕೆ ತಕ್ಕುದಾದ ಗಿಫ್ಟನ್ನು ಕೊಟ್ಟರೆ ಒಳ್ಳೆಯದು. ಎಲ್ಲರೂ ಗಡಿಯಾರ, ಫೋಟೋ ಫ್ರೇಮ್, ಟೀ ಸೆಟ್, ದೇವರ ಪಟ, ದೇವರ ವಿಗ್ರಹ, ಬೆಳ್ಳಿ ಸಾಮಾನು, ಕುಕ್ಕರ್, ಪಾತ್ರೆಗಳು, ಇಂತವುಗಳನ್ನೇ ಕೊಡುತ್ತಾರೆ, ನಾವೇನಾದರೂ ಬೇರೆ ರೀತಿ ಡಿಫರೆಂಟಾಗಿ ಕೊಡಬೇಕೆಂದು ತುಂಬಾ ಯೋಚಿಸಿ, ತೀರಾ ಅಸಮರ್ಪಕವಾದ ವಸ್ತುವನ್ನು ಕೊಟ್ಟು, ನಗೆ ಪಾಟಲಿಗೆ ಗುರಿಯಾಗುವ ಬದಲು, ಏನೂ ಕೊಡದಿದ್ದರೇನೇ ಸರಿ..!
ಕೊಡಲೇಬೇಕು ಎಂದಿದ್ದರೆ ಹಣವನ್ನು ಒಂದೊಳ್ಳೆಯ ಕವರ್ ನಲ್ಲಿ ಹಾಕಿ, ಅಂಟಿಸಿ ಕೊಟ್ಟರೆ, ತೆಗೆದುಕೊಂಡವರು ಅವಶ್ಯವಿರುವ ಕಡೆ ಆ ಹಣವನ್ನು ವಿನಿಯೋಗಿಸುತ್ತಾರೆ. ಹತ್ತಿರದವರಾದರೆ ಡೈರೆಕ್ಟ್ ಆಗಿ ಡಿಜಿಟಲ್ ಪೇಮೆಂಟ್ ಕೂಡ ಮಾಡಬಹುದು. ಆದರೆ ಎಲ್ಲರ ಮುಂದೆ ಗಿಫ್ಟ್ ಆಗಿ ಕೊಡಲು ಏನು ಇರುವುದಿಲ್ಲ ಅಷ್ಟೇ..!
ಹಿಂದಿನ ಕಾಲದಲ್ಲಿ ಕೊಡುತ್ತಿದ್ದ ಮುಯ್ಯಿ ಈಗ ಗಿಫ್ಟ್ ಆಗಿ ಬದಲಾವಣೆ ಕಂಡಿದೆ. ಆಗ ಮುಯ್ಯಿ ಕೊಡುತ್ತಿದ್ದ ಕಾರಣವೆಂದರೆ ಮದುವೆ ಮುಂಜಿ ಮಾಡಿ ಹಣ ಖರ್ಚಾಗಿರುತ್ತದೆ. ಬಂದ ಸಂಬಂಧಿಗಳು, ಅತಿಥಿಗಳು ಹಣದ ರೂಪದಲ್ಲೋ ಅಥವಾ ಮನೆಗೆ ಅಗತ್ಯವಾದ ಸಾಮಗ್ರಿಗಳ ರೂಪದಲ್ಲೋ ಉಡುಗೊರೆ ಕೊಟ್ಟರೆ, ಆ ಕುಟುಂಬಕ್ಕೂ ಹೊರೆ ಕಡಿಮೆಯಾಗುತ್ತದೆ. ಮಾಡಿದ ಸಾಲವೂ ತೀರುತ್ತದೆ. ಮುಂದೆ ತಾವು ಅಂತಹ ಶುಭ ಸಮಾರಂಭ ಮಾಡಿದಾಗ, ಮತ್ತೆ ಅವರುಗಳು ಮುಯ್ಯಿ ಕೊಟ್ಟು ತಮ್ಮ ಹೊರೆ ಕಡಿಮೆ ಮಾಡುತ್ತಾರೆ ಎಂಬುದಾಗಿತ್ತು.
ಹಾಗಾಗಿ “ನೋ ಲಾಸ್, ನೋ ಗೇನ್ ” ರೀತಿಯ ನಿಯಮವಾಗಿತ್ತು..! ಆದರೆ ಇಂದು ಗಿಫ್ಟ್ ಕೊಡುವುದು ಪ್ರತಿಷ್ಠೆಯ ಸಂಕೇತವಾಗಿದೆ ಎಂದರೂ ತಪ್ಪಲ್ಲ. ಕೆಲವು ವರ್ಗದ ಜನರಲ್ಲಿ ಗಿಫ್ಟ್ ಕೊಡುವುದು ಒಂದು ರೀತಿಯ ಫ್ಯಾಷನ್, ಅಂತಸ್ತು ತೋರಿಸುವಿಕೆಯಾಗಿದೆ. ಗಿಫ್ಟ್ ಡಬ್ಬ ತೆಗೆದುಕೊಂಡು ಹೋದರೆ ಚೆನ್ನ ಎಂಬ ಭಾವನೆಯು ಕೆಲವರಲ್ಲಿ ಇದೆ.
ಆದರೆ ಪುಟ್ಟ ಕವರ್ ನಲ್ಲಿ ಕೊಟ್ಟ ಹಣವೂ ಸಹ, ಆ ದೊಡ್ಡ ಡಬ್ಬಕಿಂತ ಜಾಸ್ತಿ ಮೌಲ್ಯ ಹೊಂದಿರುತ್ತದೆ ಎಂದು ಅಂಥವರಿಗೆ ತಿಳಿದಿರುವುದಿಲ್ಲ ಅನಿಸುತ್ತೆ..! ದೊಡ್ಡ ಬಾಗಿಲನ್ನು ಓಪನ್ ಮಾಡುವುದು ಸಣ್ಣ ಬೀಗದ ಕೈಯಿಂದಲೇ ಅಲ್ಲವೇ..? ಹಾಗೆಯೇ ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಮೌಲ್ಯ ಅದರ ಗಾತ್ರದಿಂದ ಅಂದಾಜಿಸುವುದಕ್ಕೆ ಆಗುವುದಿಲ್ಲ. ಅದರ ಒಳಹೊಕ್ಕು ನೋಡಿದಾಗ ಮಾತ್ರ, ಅದರ ನಿಜ ಚಿತ್ರಣ ನಮಗೆ ಅರಿವಾಗುವುದು. ಅದಕ್ಕೇ ಅಲ್ಲವೇ ಹೇಳುವುದು “ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು” ಎಂದು..!
ಪ್ರಿಯ ಓದುಗರೇ, ಮುಂದಿನ ದಿನಗಳಲ್ಲಿ ನೀವೂ ಸಹ ಗಿಫ್ಟ್ ಸೆಲೆಕ್ಟ್ ಮಾಡುವಾಗ ವಿಚಾರ ಮಾಡಿ, ಜಾಗರೂಕರಾಗಿ, ಕಾಟಾಚಾರಕ್ಕೆ ಕೊಡದಂತೆ, ಕೊಟ್ಟ ಹಣಕ್ಕೆ ಅಪಚಾರವಾಗದಂತೆ, ಚೆನ್ನಾಗಿ ಆಯ್ಕೆ ಮಾಡಿ ಉಡುಗೊರೆ ಕೊಡುತ್ತೀರಾ ಅಲ್ಲವೇ…?
ರಚನೆ: ಅಚಲ ಬಿ ಹೆನ್ಲಿ
ಗೃಹಿಣಿ, ಬೆಂಗಳೂರು
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…