‘ಅಯ್ಯೋ! ಇರೋದೊಂದ್ ಮಗ ಅಲ್ಲಾ ನಿಂಗೆ? ಅವನ್ ಹಾಸ್ಟೆಲ್ ನ್ಯಾಗ ಓದಾಕ್ ಬಿಟ್ ನೀ ಹೆಂಗ್ ಇರ್ತಿ? ನಾ ಅಂತೂ ನನ್ ಮಗನ್ ಬಿಟ್ ಒಂದ್ ದಿನಾನೂ ಇರುದಿಲ್ಲ ನೋಡವ್ವ….’ ಒಂದೇ ಓಣಿಯಲ್ಲಿರುವ ಅಕ್ಕಪಕ್ಕದ ಮನೆಗಳ ಹೆಂಗಸರ ನಡುವಿನ ಮಾತುಕತೆ ಇದು.
ಹೌದು. ಹಾಸ್ಟೆಲ್ ಎಂದ ತಕ್ಷಣ ಅದು ಒಂದು ತರಹದ ಜೈಲು ಎನ್ನುವ ಪೂರ್ವಾಗ್ರಹ ಪೀಡಿತ ಪರಿಕಲ್ಪನೆ ನಮ್ಮ ಇಂದಿನ ಅನೇಕ ಪಾಲಕರಲ್ಲಿ ಆಳವಾಗಿ ಬೇರೂರಿದೆ.ಮೊದಲಿನ ಕಾಲದಲ್ಲಿ ಹಾಸ್ಟೆಲ್ ಗೆ ಸೇರುತ್ತಿದ್ದ ವಿದ್ಯಾರ್ಥಿಗಳಿಗೆ ಕಾರಣಗಳು ಬೇರೆ ಬೇರೆ ತರಹದಾಗಿದ್ದವು.ಆದರೆ ಈಗ ಹಾಸ್ಟೆಲ್ ನಲ್ಲಿ ಇಟ್ಟು ಓದಿಸಬೇಕೆನ್ನಲು ನೂರಾರು ಕಾರಣಗಳು ಸೋಜಿಗ ಎನ್ನುವಂತೆ ಹುಟ್ಟಿಕೊಂಡಿವೆ.ಏನಾದರಾಗಲಿ ಹಾಸ್ಟೆಲ್ ಜೀವನ ಬಹಳ ಚಂದ ರೀ……
ತಲಿ ಮ್ಯಾಲ ಒಂದ್ ಟ್ರಂಕ್,ಅದ್ರಾಗ ಒಂದ್ ಜಮಖಾನ,ಒಂದ್ ಚಾದಾರ,ಕೈಯಾಗ ಒಂದು ಬಕೀಟು,ಅದ್ರಾಗ ಒಂದ್ ಮಗ್,ಒಂದ್ ಅರಬಿ ತುಂಬಿದ ಚೀಲ,ಜೊತಿಗಿ ಅವ್ವ ಮಾಡಿದ ಖಡಕ್ ರೊಟ್ಟಿ,ಚಟ್ನಿ,ಉಪ್ಪಿನಕಾಯಿ, ಚುರುಮುರಿ(ಚೂಡಾ),ಚಕ್ಲಿ,ರವಾ ದುಂಡಿ ಇವೆಲ್ಲ ತುಂಬಿಕೊಂಡಿರೋ ಮತ್ತೊಂದು ಚೀಲ.ಇವಿಷ್ಟ ನೋಡ್ರಿ ಹಾಸ್ಟೆಲ್ ಗೆ ಹೋಗ್ಬೇಕಾದರೆ ಮೊದಲ್ನೇ ದಿನ ಹುಡುಗರ್ ಜೊತಿ ಇರೋ ಆಸ್ತಿ ಅಂದ್ರ.
ಇವೆಲ್ಲ ಸಾಮಾನು ತಗೊಂಡು ಅವ್ವಗ ಟಾಟಾ ಹೇಳಿ,ಅಕಿ ಕಾಲಿಗ್ ನಮಸ್ಕಾರ ಮಾಡಿ,ಅಪ್ಪನ ಕರ್ಕೊಂಡು ಬಸ್ನ್ಯಾಗ ಹತ್ತಿ ಸಾಲಿ ಕಲಿಯಾಕ ಅಂತ ಪಟ್ನಕ್ ಹೋಗೋ ಸಂಭ್ರಮ.ಅಂತೂ ಇಂತೂ ಹಾಸ್ಟೆಲ್ ಮುಟ್ಟುತ್ಲೆ ಅರ್ಧ ಮರ್ಧ ಸೋತು ಸುಣ್ಣ ಆಗಿರ್ತಾರ ಅಪ್ಪ-ಮಗ ಇಬ್ರೂ.ತಗೊಂಡ್ ಹೋಗಿರೋ ಸಾಮಾನೆಲ್ಲ ಒಂದ್ ಮೂಲ್ಯಾಗ್ ಇಟ್ಟು,ಸೀದಾ ಹಾಸ್ಟೆಲ್ ವಾರ್ಡನ್ಗ ಭೆಟ್ಟಿ ಆಗಿ ರೂಮ್ ಕೇಳೋದು.ಅವ್ರು ರೂಮ್ ಕೊಟ್ ಮ್ಯಾಲ್ ಮತ್ತ ಸಾಮಾನೆಲ್ಲ ಕತ್ತಿ ಹೊತ್ತಂಗ ಹೊತಗೊಂಡು ರೂಮ್ ನಲ್ಲಿ ಇಡೋದು.ಆತ…ಅಲ್ಲಿಗೆ ಹಾಸ್ಟೆಲ್ ಗೆ ಕಳಸಾಕ ಬಂದಿದ್ದ ಅಪ್ಪನ ಕೆಲಸ ಮುಗೀತ.ಆತಪಾ….ನಾನ್ ಹೊಕ್ಕೀನಿ ಇನ್ ಊರಿಗೆ,ನಿಮ್ ಅವ್ವ ಒಬ್ಬೇಕೆ ಅದಾಳ.ಬಸ್ ಬ್ಯಾರೆ ಐದು ಗಂಟೆಕ್ ಕಡೆ ಬಸ್,ಚಂದಗ ಓದು,ರೊಕ್ಕ ಬೇಕಾದ್ರ ಫೋನ್ ಮಾಡ್,ಉಣ್ಣಾಕ ತಿನ್ನಾಕ ಏನೂ ಶಾಣ್ಯಾತನ ಮಾಡಬ್ಯಾಡ.ನಾನು ಯಾರರ ಕೈಯಾಗ್ ಒಟ್ಟ ರೊಕ್ಕ ಮುಟ್ಟಸ್ತೀನಿ ನಿಂಗ ಅಂತ ಹೇಳಿ ಕೈಯಾಗ್ ಒಂದ್ ಐದು ನೂರು ರೂಪಾಯಿ ನೋಟ್ ಇಟ್ಟು ಅಪ್ಪ ಹೋಗೋಕೆ ರೆಡಿ ಆಕ್ಕಾನ.ಎಂದೂ ಅಪ್ಪ-ಅವ್ವನ ಬಿಟ್ ಇರದ ಆ ಹುಡುಗಗ ಈಗ ಶುರುವಾಯ್ತು ನೋಡ್ರಿ ಟೆನ್ಶನ್.ಅಪ್ಪ ಹೊಕ್ಕೀನಿ ಅನ್ನುತ್ಲೆ ಕಣ್ಣಾಗ್ ನೀರು ಧಳ-ಧಳ ಅಂತ ಉದುರಾಕ್ ಶುರು ಮಾಡ್ತಾವ್.ಹಂಗೂ ಹಿಂಗೂ ಅಪ್ಪ ಮಗನ್ ಸಮಾಧಾನ ಮಾಡಿ ಊರಿಗೆ ಮುಖ ಮಾಡ್ತಾನ.
ಹಾಸ್ಟೆಲ್ ನ ಒಂದ್ ರೂಮ್ ನ್ಯಾಗ ಅನುಕೂಲ ಆದಂಗ ಮೂರು,ನಾಲ್ಕು,ಐದು…..ಹೀಗೆ ಹುಡುಗ್ರು ಇರ್ತಾರ.ಎಲ್ಲಾರೂ ಬ್ಯಾರೆ ಬ್ಯಾರೆ ಕಡಿಂದ ಬಂದಾವ್ರ.ಬ್ಯಾರೆ ಬ್ಯಾರೆ ಧರ್ಮ,ಬ್ಯಾರೆ ಬ್ಯಾರೆ ಜಾತಿ,ಬ್ಯಾರೆ ಬ್ಯಾರೆ ಮನೆತನದ ಪರಿಸ್ಥಿತಿ….ಇವ್ಯಾವೂ ಅವ್ರಿಗೆ ಲೆಕ್ಕಕ್ ಬರಲ್ಲ.ಲೆಕ್ಕಕ್ ಬರೋದು ಅಂದ್ರ ಒಂದ.ಅವ ನಮ್ ಗೆಳೆಯ ಅನ್ನೋದು.ಇದೇ ಸೆಂಟಿಮೆಂಟೇ ನೋಡ್ರಿ ಫ್ರೆಂಡ್ ಶಿಪ್ ಬಾಂಡಿಂಗ್ ನ ಮೊದಲನೇ ಕೊಂಡಿ.ಮಾರನೇ ದಿನ ಎಲ್ಲಾರೂ ಬೇಗ ಎದ್ದು ರೆಡಿ ಆಗಿ ಕ್ಲಾಸ್ ಗೆ ಹೋಗಿ ಬರ್ತಾರ.ಅಲ್ಲಿ ಹೊಸ ಹೊಸ ಗೆಳೆಯಾರ್ ಪರಿಚಯ ಆಕ್ಕಾರ್.ಹೊಸ ಹೊಸ ಟೀಚರ್ ಗಳು,ಸರ್ ಗಳು ಎಲ್ಲಾರೂ ಪರಿಚಯ ಆಕ್ಕಾರ್.
ಹಾಸ್ಟೆಲ್ ಒಳಗಿನ ಲೈಫ್ ಎಲ್ಲಾನೂ ಚಂದ ರೀ… ಬೆಳಿಗ್ಗೆ ಎದ್ದ ಕೂಡ್ಲೇ ಶೌಚಾಲಯಕ್ಕೆ ಹೋಗಾಕ್ ಪಾಳೆ ಹಚ್ಚುದು,ಹೋದೋರು ಲಘುನ ಬರ್ಲಿಕ್ ಅಂದ್ರ ಕದ ಬಾರಸೋದು.ಜಳಕಕ್ ಪಾಳೆ ಹಚ್ಚುದು,ಪಾಳೆ ಭಾಳ ಇದ್ರ ಮುಖ ತಕ್ಕೊಂಡು ಕ್ಲಾಸ್ ಗೆ ಹೋಗೋದು.ಊಟ ಮಾಡಾಕ,ಬಟ್ಟೆ ತೊಳಿಯಾಕ,ಚಾ ಕುಡಿಯಾಕ ಹೀಗೆ ಎಲ್ಲಾದಕ್ಕೂ ಪಾಳೆ.ಆ ಪಾಳೆ ನಿಂತಾಗನ ಅರ್ಧಮರ್ಧ ಮಾತುಕತಿ ಮುಗದ ಹೊಕ್ಕತಿ.ಗೆಳೆಯಾರೆಲ್ಲ ಕೂಡ್ಕೊಂಡು ಒಂದ್ ತಾಟನ್ಯಾಗ ಉಣ್ಣುದು ಭಾಳ ಖುಷಿ ಇರತ್ತ.ಲೇ,ನೀ ತಿನ್ಲಿಕ್ ಬಿಡ್ಲೇ,ನಾ ತಿಂತೀನಿ ಅಂತ ತಾಟನ್ಯಾಗ ಒಂದ್ ಅಗಳು ಉಳಿಲಾರದಂಗ್ ಖಾಲಿ ಮಾಡ್ತಾರ ಹುಡುಗ್ರು.ಇನ್ ದಿನ ಸಂಜಿ ಆದ್ರ ಸಾಕು,ಅವ್ವ ಕಟ್ಟಿದ ಚುರುಮುರಿ(ಚೂಡಾ),ಉಂಡಿ,ಚಕ್ಲಿ ಎಲ್ಲಾರದೂ ಚೀಲ ಬಿಚ್ಚಿ ಸುತ್ತಾಲಕ ಇಟ್ಟ ಎಲ್ಲಾರೂ ಕೈ ಹಾಕಿ ತಿನ್ನುದ.ಸಂಜಿ ಸ್ನಾಕ್ಸ್ ಗೆ ಅವೇ ಆಧಾರ.
ಕನೂಡಿ,ಬಾಚಣಿಕಿ,ಪೌಡರ್,ಪೇಸ್ಟ್,ಸಾಬೂನು ಇದರಾಗ ಏನ ಬಳಸಬೇಕಂದ್ರೂ ಮುಲಾಜಿಲ್ಲದೇ ಯಾರಗೂ ಹೇಳದ ಕೇಳದ ಎಲ್ಲಾರದೂ ಎಲ್ಲಾರೂ ಬಳಸ್ತಾರ.ಹೆಚ್ಚು ಕಮ್ಮಿ ಬಿದ್ರ ಟೀ-ಶರ್ಟು,ನೈಟ್ ಪ್ಯಾಂಟ್ ಕೂಡ ಹೇಳದಂಗ ಹಾಕ್ಕೋತಾರ.ಅಪ್ಪಿತಪ್ಪಿ ರೂಮ್ ನ್ಯಾಗ ಇರೋ ಯಾವ್ನ ಒಬ್ಬ ದೋಸ್ತ್ ಗ ಹುಷಾರಿಲ್ಲ ಅಂದ್ರ ಸಾಕು,ನೈಟ್ ವಾಚ್ ಮ್ಯಾನ್ ಅಂಕಲ್ ಗೆ ಹೇಳಿ,ತಾವ ಆಟೋ ತಂದ,ದವಾಖಾನಿಗೆ ಕರ್ಕೊಂಡ್ ಹೋಗಿ ವಾಪಸ್ ಆರಾಮ ಮಾಡಿಸೇ ಕರ್ಕೊಂಡ್ ಬರ್ತಾರ. ಎಲ್ಲಾರೂ ಕೂಡಿ 100,200……ಅಂತ ಪಟ್ಟಿ ಹಾಕಿ ದವಾಖಾನಿ ಬಿಲ್ ನೂ ಕಟ್ಟಿ ಬಿಡ್ತಾರ.ಅಷ್ಟು ದಿಟ್ಟರು ನಮ್ಮ ಹಾಸ್ಟೆಲ್ ಹುಡುಗ್ರು.
ಹೀಗೆ ಒಂದಲ್ಲ…ಎರಡಲ್ಲ….ರೀ… ಹಾಸ್ಟೆಲ್ ಜೀವ್ನದಾಗ ಇರೋವಷ್ಟು ನೆನಪುಗಳು ಮತ್ತೆಲ್ಲೂ ಸಿಗುದಿಲ್ಲ ರೀ….ಯಾವ ಮಕ್ಕಳು ಹಾಸ್ಟೆಲ್ ನ್ಯಾಗ ಇದ್ದು ಓದಿ ಜೀವ್ನ ಕಳೆದಿರ್ತಾರೋ ಅಂತ ಮಕ್ಕಳಿಗೆ ಆತ್ಮವಿಶ್ವಾಸ ಜಾಸ್ತಿ ಇರ್ತದ.ಜೀವನದಾಗ ಬರೋ ಎಂಥಾ ಕಠಿಣ ಪರಿಸ್ಥಿತಿಗಳಿಗೂ ಅವರು ಜಗ್ಗಲ್ಲ.ಕುಗ್ಗಲ್ಲ.ಸಿಟಿ ಮಕ್ಕಳ ತರಹ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.ಹಾಸ್ಟೆಲ್ ನಲ್ಲಿ ಅನೇಕ ಮೌಲ್ಯಗಳನ್ನು ಕೂಡ ಕಲೀತಾರ ಮಕ್ಕಳು.ಹಾಸ್ಟೆಲ್ ಅಂದ್ರ ಕಡೆಗಣಿಸಿ ನೋಡಬ್ಯಾಡ್ರಿ.ಯಾವ ತಂದೆ-ತಾಯಿಗೆ ಮಕ್ಕಳನ್ನ ನೋಡ್ಕೋಳಾಕ್ ಆಗುದಿಲ್ಲೋ ಅವ್ರು ಹಾಸ್ಟೆಲ್ ನಲ್ಲಿ ತಮ್ಮ ಮಕ್ಕಳನ್ನು ಇಡತಾರ ಅನ್ನೋದು ತಪ್ಪು ಕಲ್ಪನೆ.ಜೀವನದಲ್ಲಿ ಎದುರಾಗುವ ಕೆಲವು ಸಂಘರ್ಷಗಳನ್ನು ತಮ್ಮ ಮಗು ಸರಳವಾಗಿ ನಿಭಾಯಿಸಲಿ ಎಂದು ಹಾಸ್ಟೆಲ್ ನ್ಯಾಗ ಬಿಟ್ಟು ಓದಸ್ತಾರ.ಮುಂದ ನೀವು ನಿಮ್ಮ ಮಕ್ಕಳಿಗೆ ಕೋಟಿಗಟ್ಟಲೆ ಆಸ್ತಿ ಮಾಡಿ ಕೊಡಬಹುದು.ಆದ್ರೆ ಜೀವನದಲ್ಲಿ ಕೆಲವು ಮಧುರ ನೆನಪುಗಳನ್ನು ಅವರಿಗೆ ಕಟ್ಟಿ ಕೊಡಲು ಮರೆಯದಿರಿ.ಹಾಸ್ಟೆಲ್ ಅಂದ್ರ ಜೈಲು ಅಲ್ಲ ರೀ,ಅದು ಜೀವ್ನದ ಪಾಠ ಕಲಿಸೋ ಗುಡಿ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಧನ್ಯವಾದಗಳು