“ಒಂದೇ ಅವಧಿಯಲ್ಲಿ ವಿವಿಧ ವಯೋಮಾನದ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ತರಗತಿಗಳ ಮಕ್ಕಳನ್ನು ಒಂದೇ ಅಥವಾ ವಿವಿಧ ವಿಷಯಗಳನ್ನು ಒಬ್ಬನೇ ಶಿಕ್ಷಕ ನಿಗದಿತ ಅವಧಿಯಲ್ಲಿ ಒಂದೇ ವರ್ಗ ಕೋಣೆಯಲ್ಲಿ ಪರಿಣಾಮಕಾರಿಯಾಗಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸುವುದೇ ಬಹುವರ್ಗ ಬೋಧನೆಯಾಗಿದೆ “
ಬಹುವರ್ಗೀಯ ಬೋಧನೆ ಎಂಬುದು ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾದ ಬೋಧನಾ ಪದ್ಧತಿಯಲ್ಲ , ಬದಲಾಗಿ ಇದು ಪ್ರಾಚೀನ ಕಾಲದಿಂದಲೂ ಆಶ್ರಮಗಳ ಗುರುಕುಲ ಪದ್ಧತಿಯಲ್ಲಿಯೂ ಪ್ರಾಯೋಗಿಕವಾಗಿ ನಡೆದು ಬಂದ ನಡೆಯಾಗಿದೆ . ಅಂದಿನ ಕಾಲದಿಂದ ಸುಮಾರು ವರ್ಷಗಳವರೆಗೆ ಇದು ‘ಶಿಕ್ಷಕ ಕೇಂದ್ರಿತ ಪದ್ಧತಿ ‘ ಯಾಗಿತ್ತು. ಅಲ್ಲದೆ ಅಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಬಹುತೇಕ ಎಲ್ಲಾ ವಿಷಯಗಳನ್ನು ಬೋಧನೆ ಮಾಡುವಂತಹವರು ಆಗಿದ್ದರು . ಕಂಠಪಾಠ ಮತ್ತು ಕಲಿಕಾ ಒತ್ತಡ ಮಕ್ಕಳನ್ನು ನಿರಂತರ ಒತ್ತಡಕ್ಕೆ ಒಳಪಡಿಸುತ್ತಿತ್ತು . ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಗುರುಗಳಿಗೆ ಪ್ರತಿಕ್ರಿಯೆಗಳು ಸರಿಯಾಗಿ ಬರದಿದ್ದಾಗ ಶಿಕ್ಷೆ ನೀಡಲು ಮುಕ್ತ ಅವಕಾಶವಿತ್ತು( ಛಡಿ ಚಮ್ ಚಮ್ ,ವಿದ್ಯಾ ಘಮ್ ಘಮ್ ) . ಇದಲ್ಲದೆ ಇನ್ನೊಂದು ದುರಾದೃಷ್ಟಕರ ಸಂಗತಿ ಏನೆಂದರೆ, ಕೆಲವೇ ವರ್ಗದ ಜನರಿಗೆ ಶಿಕ್ಷಣ ನೀಡಲು ಅವಕಾಶವಿತ್ತು . ಆದರೆ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯೇ ಸೃಷ್ಟಿಯಾಗಿದೆ . ವಿಶೇಷವಾಗಿ ಭಾರತದಲ್ಲಿ ಶಿಕ್ಷಣ ಪಡೆದ ಪ್ರತಿಭಾವಂತರಿಗೆ ಇಂದು ಇಡೀ ವಿಶ್ವವೇ ಸ್ವರ್ಣ ಗಂಬಳಿ ಹಾಸಿ ಸ್ವಾಗತ ಕೋರುತ್ತಿದೆ ಎಂಬುದು ಜಗಜ್ಜಾಹೀರಾಗಿದೆ. ಇಷ್ಟೇ ಅಲ್ಲದೆ ಜಗತ್ತಿನ ವಿವಿಧ ದೇಶಗಳಲ್ಲಿ ಭಾರತೀಯರು ,ಆಡಳಿತಾತ್ಮಕ ದೃಷ್ಟಿಯಿಂದ ವಿವಿಧ ದೇಶಗಳ ಚುಕ್ಕಾಣಿ ಹಿಡಿದಿದ್ದು ಸಾಕಷ್ಟು ಉದಾಹರಣೆಗಳಿವೆ . ಇದಕ್ಕೆ ಭಾರತದಲ್ಲಿ ದೊರಕುತ್ತಿರುವ ಕಾಲಕಾಲಕ್ಕೆ ಬದಲಾಗುತ್ತಿರುವ ಶಿಕ್ಷಣ ಪದ್ಧತಿಯೇ ಮುಖ್ಯ ಕಾರಣ ಎಂದು ಹೇಳಿದರೆ ಎರಡು ಮಾತಿಲ್ಲ .
ಇನ್ನು ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಾತ್ರ ಬಹು ವರ್ಗೀಯ ಬೋಧನೆ ಹೆಚ್ಚಾಗಿ ಕಂಡುಬರುತ್ತದೆ . ಇದಕ್ಕೆ ಮುಖ್ಯ ಕಾರಣ ಮಕ್ಕಳ ಶಿಕ್ಷಕರ ಅನುಪಾತ ಎಂಬ ಇಲಾಖಾ ನಿಯಮ (30 ಮಕ್ಕಳಿಗೆ 1 ಶಿಕ್ಷಕ ). ಒಂದು ಕಾರಣವಾದರೆ ಇನ್ನೊಂದು ಮುಖ್ಯ ಕಾರಣ ಸರಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ಅತ್ಯಾಧುನಿಕ ನಲಿ ಕಲಿ ಎಂಬ 1 ರಿಂದ 3ನೆಯ ವರ್ಗದ ಮಕ್ಕಳ ಶಿಕ್ಷಣ ಪದ್ಧತಿ . ಇದು ಬಹು ವರ್ಗೀಯ ಬೋಧನೆಯಾಗಿದ್ದರೂ ಸಹ ಸೃಜನಾತ್ಮಕ ಹಾಗೂ ಶಾಶ್ವತ ಕಲಿಕೆಗೆ ದಾರಿ ದೀಪವಾಗಿದೆ .ಪ್ರಾಚೀನ ಕಾಲದಂತೆ ಅಥವಾ ಹಳೆಯ ಪದ್ಧತಿಯಂತೆ ಇಲ್ಲಿ ಕಂಠಪಾಠ ಹಾಗೂ ಒತ್ತಡದ ಕಲಿಕೆ ಇರುವುದಿಲ್ಲ . ಗುರುಗಳಿಗೆ ಮಕ್ಕಳಿಂದ ಶೈಕ್ಷಣಿಕ ಪ್ರತಿಕ್ರಿಯೆಗಳು ಸರಿಯಾಗಿ ಬರದಿದ್ದಾಗಲೂ ಮಕ್ಕಳಿಗೆ ಶಿಕ್ಷೆ ನೀಡಲು ಕಿಂಚಿತ್ತು ಅವಕಾಶವಿಲ್ಲ . ಇಲ್ಲಿ ಶಿಕ್ಷಕ ಕೇಂದ್ರಿತ ಪದ್ಧತಿ ಯಾಗಿರದೆ ‘ಶಿಶು ಕೇಂದ್ರಿತ ಪದ್ಧತಿ’ ಯಾಗಿರುತ್ತದೆ .ಇಲ್ಲಿ ಶಿಕ್ಷಕ ಕೇವಲ ಸುಗಮಕಾರರಾಗಿರುತ್ತಾರೆ . ಹೀಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಕೆಲವೊಮ್ಮೆ ಬಹು ವರ್ಗ ಬೋಧನೆ ಅನಿವಾರ್ಯವಾಗುತ್ತದೆ . ಬಹುವರ್ಗ ಬೋಧನೆ ಎಂಬುದು ಅತ್ಯಂತ ಕ್ಲಿಷ್ಟ ಪದ್ಧತಿಯಾಗಿರದೆ ವಿಶೇಷ ಬೋಧನಾ ವಿಧಾನವಾಗಿದೆ .ಈ ವಿಧಾನವನ್ನು ಕರಗತ ಮಾಡಿಕೊಂಡ ಶಿಕ್ಷಕರು ಎಷ್ಟೇ ಮಕ್ಕಳಿದ್ದರೂ ಅವರನ್ನು ಅತ್ಯಂತ ಕಡಿಮೆ ಸಮಯದಲ್ಲಿ ಪರಿಣಾಮಕಾರಿಯಾಗಿ ಕಲಿಕೆಗೆ ಸಿದ್ಧಗೊಳಿಸಿಕೊಳ್ಳಬಹುದು .
ಬಹುವರ್ಗ ಬೋಧನೆಯ ಯಶಸ್ಸಿನ ಮಂತ್ರಗಳು:
1. ಶಿಕ್ಷಕರು ವರ್ಗ ಕೋಣೆ ಪ್ರವೇಶಕ್ಕಿಂತಲೂ ಮೊದಲು ಪಾಠಗಳ ಪೂರ್ವ ತಯಾರಿ ಮಾಡಿಕೊಂಡಿರಬೇಕು .
2. ಸಂಸಾರಿಕ ಅಥವಾ ಇನ್ನಿತರೆ ಮಾನಸಿಕ ಒತ್ತಡಗಳನ್ನು ವರ್ಗಕೋಣೆಯ ಹೊರಗೆ ತ್ಯಜಿಸಿ ಹಸನ್ಮುಖಿಯಾಗಿ ತರಗತಯೊಳಗೆ ಪ್ರವೇಶಿಸಬೇಕು.
3. ವರ್ಗ ಕೋಣೆಯ ಒಳಗೆ ಮಕ್ಕಳಿಗೆ ಕುಳಿತುಕೊಳ್ಳಲು ಸೂಕ್ತ ಸ್ಥಳಾವಕಾಶ , ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು.
4. ವರ್ಗವಾರು ಬೇರೆ-ಬೇರೆ ಗುಂಪುಗಳ ಸೃಷ್ಟಿಸಿಕೊಳ್ಳಬೇಕು .
5. ಗುಂಪುಗಳ ನಿಯಂತ್ರಣಕ್ಕೆ ಪ್ರತಿ ಗುಂಪಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು .
6. ಗುಂಪಿನಲ್ಲಿ ಪರಸ್ಪರ ಕಲಿಕಾ ಸಹಕಾರದ ಭಾವನೆಯ ವೃದ್ಧಿ.
7. ಒಂದು ಗುಂಪಿನಲ್ಲಿ ( ತರಗತಿ )ಬೋಧಿಸುವಾಗ ಇತರೆ ಗುಂಪು (ತರಗತಿ) ಗಳಿಗೆ ಶಿಕ್ಷಕರು ನಿಗದಿತ ಕಾರ್ಯ ನೀಡಿರುವುದು .
8. ಒಂದು ತರಗತಿಗೆ ಬೋಧಿಸುವಾಗ ಶಿಕ್ಷಕರ ಧ್ವನಿ ಏರಿಳಿತಗಳು ,ಇತರೆ ಗುಂಪುಗಳಿಗೆ ತೊಂದರೆಯಾಗದಂತೆ ಜಾಗೃತಿ ವಹಿಸಬೇಕು .
9.ಪ್ರತಿ ಗುಂಪುಗಳಿಗೆ ಬೋಧನಾ ಕಲಿಕಾ ಪ್ರಕ್ರಿಯೆಗೆ ನಿಗದಿಪಡಿಸಿದ ಸಮಯ ಸಮಾನ ಹಂಚಿಕೆಯಾಗಿರಲಿ.
10. ಇಲಾಖೆಯ ನಿರ್ದೇಶನ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಂತೆ ( NCF) ನಿರ್ದಿಷ್ಟ ಹಾಗೂ ನಿಗದಿತ ವಿಷಯಗಳನ್ನು ಎಲ್ಲಿಯೂ ಕಡಿತಗೊಳಿಸದಂತೆ ಬೋಧಿಸುವುದು .
11. ನಿಮ್ಮ ಮಕ್ಕಳ ಬೋಧನೆಗೆ ಸರಿಹೊಂದುವ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು.
12. ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಬೋಧನೋಪಕರಣಗಳ ತಯಾರಿ ಹಾಗೂ ಸೂಕ್ತ ಬಳಕೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು .
13. ಗುಂಪುಗಳಲ್ಲಿ ಓದು,ಬರವಣಿಗೆ,ಲೆಕ್ಕಗಳ ಪರಿಶೀಲನೆ ವಿಷಯದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಸಾಮರ್ಥ್ಯ ಸಾಧಿಸಿದ ವಿದ್ಯಾರ್ಥಿಗಳ ಸಹಕಾರ ಪಡೆಯುವುದು.
14. ಯಾವುದೇ ಕಾರಣಕ್ಕೂ ಕಲಿಕೆಯಲ್ಲಿ ಹಿಂದುಳಿದ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಎಡವಿದ ಮಕ್ಕಳನ್ನು ಭಯಪಡಿಸುವುದಾಗಲಿ ,ದೈಹಿಕವಾಗಿ ಹಿಂಸುವುದಾಗಲಿ ,ಮಾನಸಿಕ ಒತ್ತಡಗಳಲ್ಲಿ ಸಿಲುಕಿಸುವುದಾಗಲಿ ಮಾಡದಂತೆ ಜಾಗೃತಿ ವಹಿಸಿ ಅವರನ್ನು ಪ್ರೇರಣೆ ಎಂಬ ಬ್ರಹ್ಮಾಸ್ತ್ರಕ್ಕೆ ಒಳಪಡಿಸುವುದು .
15. ನಲಿ-ಕಲಿಯಲ್ಲಿ ಬಹು ವರ್ಗ ಬೋಧನೆಗೆ ಇಲಾಖಾ ಮಾರ್ಗದರ್ಶನ ಹಲವು ಬಾರಿ ಓದಿ ತಿಳಿದುಕೊಳ್ಳುವುದು , ಸಂಪನ್ಮೂಲ ವ್ಯಕ್ತಿಗಳ ಸಹಕಾರ ಪಡೆದುಕೊಳ್ಳುವುದು ,ನಲಿ ಕಲಿ ವಿಷಯದ ವಾಟ್ಸಪ್ ಗ್ರೂಪ್ ಗಳಲ್ಲಿ ಸೇರುವುದು .
16. ಶಿಕ್ಷಕರಿಗೆ ಸಮಯ ಪ್ರಜ್ಞೆ .
17. ಬಹು ವರ್ಗ ಬೋಧನೆ ಯಶಸ್ವಿಯಾಗಲು ಕೊನೆಯ ಹಾಗೂ ಅತ್ಯಂತ ಮಹತ್ವಪೂರ್ಣ ಸಂಗತಿ ಎಂದರೆ ‘ಶಿಕ್ಷಕನ ಸಕಾರಾತ್ಮಕ ಭಾವನೆ ‘.
ಹೀಗೆ ಹಲವು ಬಗೆಯ ತಂತ್ರಗಳನ್ನು ಅಳವಡಿಸಿಕೊಂಡು ಬಹು ವರ್ಗೀಯ ಬೋಧನೆಯಲ್ಲಿ ಶಿಕ್ಷಕರು ವರ್ಗ ಕೋಣೆಯಲ್ಲಿ ಯಶಸ್ವಿಯಾಗಬಹುದು . ಕೆಲವು ಶಾಲೆಗಳಲ್ಲಿ ಏಕಕಾಲದಲ್ಲಿ ಅನೇಕ ಶಿಕ್ಷಕರು ವರ್ಗವಾಗಿ ಹೋದಾಗ ಅನಿವಾರ್ಯವಾಗಿ ಮಕ್ಕಳ ಭವಿಷ್ಯಕ್ಕೆ ಕುತ್ತು ಬರದಂತೆ ಈ ವಿಧಾನದ ಬಳಕೆಯು ಮಕ್ಕಳ ಪಾಲಿಗೆ ಶೈಕ್ಷಣಿಕ ಸಂಜೀವಿನಿಯಾಗಲಿದೆ.
ಈ ವಿಧಾನದ ನ್ಯೂನ್ಯತೆಗಳು:
1. ಶಿಕ್ಷಕರು ಎಲ್ಲಾ ವರ್ಗದ ಪಾಠಗಳ ಪೂರ್ವ ತಯಾರಿ ಇಲ್ಲದೇ ವರ್ಗ ಕೋಣೆ ಪ್ರವೇಶಿಸಿದಾಗ ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಆಗದಿರಬಹುದು .
2. ಶಿಕ್ಷಕರು ಒಂದು ವರ್ಗಕ್ಕೆ ಬೋಧಿಸುತ್ತಿರುವಾಗ ಇನ್ನೊಂದು ವರ್ಗದ ವಿದ್ಯಾರ್ಥಿಗಳ ಮನಸ್ಸು ವಿಚಲನೆ ಗೊಳ್ಳಬಹುದು .
3. ನಿರಂತರವಾಗಿ ಶಿಕ್ಷಕರು ಎಲ್ಲಾ ವರ್ಗಗಳನ್ನು ಹತೋಟಿಯಲ್ಲಿ ಇಡುವುದು ನಿಗದಿತ ಸಮಯದವರೆಗೆ ಮಾತ್ರ ಸಾಧ್ಯ .ನಂತರ ಶಿಕ್ಷಕರು ಸಹ ಬೇಸರಗೊಳ್ಳಬಹುದು .
4. ಬಹುವರ್ಗ ಬೋಧನೆಯಲ್ಲಿ ಬೇರೆ ಬೇರೆ ವಯೋಮಾನದ ಮಕ್ಕಳು ಇರುವುದರಿಂದ ಕಲಿಕೆಯಲ್ಲಿ ಹಿಂದುಳಿದ ಕೆಲವು ಮಕ್ಕಳು ತಮ್ಮ ಭಾವನೆಗಳನ್ನು ಅಭಿವ್ಯಕ್ತ ಪಡಿಸಲು ಹಿಂಜರಿಯಬಹುದು .
5. ನಿರ್ದಿಷ್ಟ ಸ್ಥಳಾವಕಾಶ ,ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದಿದ್ದಲ್ಲಿ ಈ ಬೋಧನಾ ವಿಧಾನ ಪರಿಣಾಮಕಾರಿಯಾಗಿ ಜಾರಿಯಾಗಲು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ .
6.ಇನ್ನಿತರ ವರ್ಗಗಳಿಗೂ ಭೋದಿಸ ಬೇಕಾಗಿರುವುದರಿಂದ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಬೋಧನಾ ಕಲಿಕಾ ಒತ್ತಡ ಉಂಟಾಗಬಹುದು .
7. ಶಿಕ್ಷಕರಿಗೆ ಕಾಲ ಕಾಲಕ್ಕೆ ತರಬೇತಿ ಅವಶ್ಯಕತೆ ಇರುತ್ತದೆ , ಅಲ್ಲದೆ ಕೆಲವೊಮ್ಮೆ ಶಿಕ್ಷಕರು ರಜೆಯಲ್ಲಿದ್ದಾಗ ಇವರ ಬಹುವರ್ಗ ತರಗತಿಗಳನ್ನ ಇನ್ನುಳಿದ ಶಿಕ್ಷಕರು ನಿಭಾಯಿಸಲು ಹರಸಾಹಸ ಪಡಬೇಕಾಗುತ್ತದೆ .
ಹೀಗೆ ಈ ವಿಧಾನವು ಇನ್ನುಳಿದ ಹಲವಾರು ಬೋಧನಾ ವಿಧಾನಗಳಂತೆ ಅನುಕೂಲತೆ ಹಾಗೂ ಅನಾನುಕೂಲತೆಗಳನ್ನೂ ಹೊಂದಿದೆ. ಯಾವುದಾದರೂ ವಿಧಾನಗಳಿರಲಿ ‘ಒಂದು ಹುದ್ದೆಗೆ ತಲುಪಿದ ವ್ಯಕ್ತಿ ಆ ಹುದ್ದೆಗೆ ಬೇಕಾಗುವ ಎಲ್ಲಾ ಯೋಗ್ಯತೆಗಳನ್ನು ನಿರ್ದಿಷ್ಟ ಅವಧಿಯಲ್ಲಿ ಬೆಳೆಸಿಕೊಳ್ಳಲೇಬೇಕು. ಇಲ್ಲವಾದಲ್ಲಿ ಇಂದಿನ ವೈಜ್ಞಾನಿಕ ಯುಗದಲ್ಲಿ ಆತ ಅವಧಿ ಮುಗಿದ ಔಷಧವಿದ್ದಂತೆ ‘ ಅಷ್ಟೆ. ಅಲ್ಲದೆ ನಿರಂತರ ಓದು ಶಿಕ್ಷಕನನ್ನು ಸದಾ ಸಂಪನ್ಮೂಲ ಭರಿತರನ್ನಾಗಿ ಮಾಡುತ್ತಿರುತ್ತದೆ ಹಾಗೂ ಆಂಡ್ರಾಯ್ಡ್ ಮೊಬೈಲ್ ಆಪ್ ನಂತೆ ಅಪ್ಡೇಟ್ ಮಾಡುತ್ತಿರುತ್ತದೆ . ಬನ್ನಿರಿ ಜಗತ್ತಿನ ಶ್ರೇಷ್ಠ, ಸರ್ವ ಶ್ರೇಷ್ಠ ,ಉನ್ನತ, ಉತ್ಕೃಷ್ಟವಾದ ಹುದ್ದೆಯಲ್ಲಿದ್ದ ನಾವು ನೀವುಗಳು ಹುದ್ದೆಯ ಗೌರವವನ್ನು ಸದಾ ಉಳಿಸಿ ,ಬೆಳೆಸಿ , ಸುಶಿಕ್ಷಿತ, ಸಮೃದ್ಧ ನಾಡಕಟ್ಟೋಣ.
ಶ್ರೀ ಎಮ್ ಎಚ್ ಲಷ್ಕರಿ
ಶಿಕ್ಷಕರು , ವಿಜಯಪುರ ಜಿಲ್ಲೆ
೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…
ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…
View Comments
🙏🙏👌👌💐💐💐