“ಮನಸ್ಸಿನ ತೊಳಲಾಟಗಳಿಗೆ ಸಾಂತ್ವಾನ ಸಿಗದೆ ಇಲ್ಲಿಂದ ಓಡಿ ಹೋಗಿದ್ದು ನಿಜ, ಆದ್ರೆ ಯಾರದ್ದೋ ತಲೆ ಉರುಳಿಸಿ ಇಲ್ಲಿಂದ ಓಡಿ ಹೋದೆ, ಅನ್ನೋ ಮಾತು ಸುಳ್ಳು… ನೀನು ಅದನ್ನು ಬಿಟ್ಟು ಬೇರೇನಾದ್ರೂ ಕೇಳೋದಿದ್ರೆ ಕೇಳು..” ಸಂಜೆಯ ತಂಗಾಳಿಗೆ ಮೈಯೊಡ್ಡಿ ಇನ್ನೂ ಬಿಸಿಲ ಕಾವು ಆರದ ಬಂಡೆಯ ಮೇಲೆ ಕೂತು ನೀಲಾಗಸವನ್ನೇ ದಿಟ್ಟಿಸುತ್ತಾ ಕುಳಿತಿದ್ದವನು ನನ್ನ ನಡಿಗೆಯ ಸದ್ದಿಗೆ ಪಕ್ಕನೆ ಹಿಂದಿರುಗಿ ನೋಡಿ ಈ ಮಾತುಗಳನ್ನು ಆಡಿದ್ದ.
“ಅದು ಹಾಗಲ್ಲ ಸೂರ್ಯ…” ಅವನ ಪಕ್ಕದಲ್ಲಿ ಕುಳಿತು ಕೊಳುತ್ತಾ ನುಡಿದವಳ ಮಾತಿಗೆ ಪ್ರತ್ಯುತ್ತರವಾಗಿ..”ಮತ್ತೆ ಹೇಗೆ ನಮ್ಮನೆವ್ರು ಗೂಢಚಾರಿಕೆ ಕೆಲ್ಸಾನ ನಿಂಗೊಪ್ಪಿಸಿದಾರಾ?” ಎನ್ನತ್ತಾ ಮೇಲೆದ್ದ. “ಸೂರ್ಯ ನೀನು ಯಾಕೆ ಹೀಗಾದೆ. ನಂಗೂ ಮಾತಾಡ್ಲಿಕ್ಕೆ ಬಿಡು ಮಾರಾಯ” ನನ್ನ ಮಾತು ಮುಗಿಯುವಷ್ಟರಲ್ಲಿ ಅವನು ಬಂಡೆಯಿಳಿದು ಹೊರಟಾಗಿತ್ತು.
‘ಛೆ ಏನಾಗಿದೆ ಇವನಿಗೆ?’
“ಓ ವೇಸ್ಟ್ ಬಾಡಿ…. ನೀನೆಂತ ಮಾಡುದಾ ಇಲ್ಲಿ? ನಿನ್ನನ್ನು ನಾವು ಕಳಿಸಿದ್ದು ಪಾದೆಕಲ್ಲಿನ ಮೇಲೆ ಕೂತು ಕನಸು ಕಾಣು ಅಂತನಾ?” ಮನುವಿನ ದನಿ ನನ್ನನ್ನು ಯೋಚನಾ ಲಹರಿಯಿಂದ ಎಚ್ಚರಿಸಿತು.
“ಏ ಮನು ಯಾರಾ ವೇಸ್ಟ್ ಬಾಡಿ? ಹಾಗೆಲ್ಲ ಹೇಳಿದ್ರೆ ಸಾಯ್ಸಿ ಬಿಡ್ತೆ ನೋಡು” ನಾನು ಸಿಟ್ಟಿನಿಂದ ಮೇಲೆದ್ದೆ.
“ಮತ್ತೆಂತಾ ಆ ಸೂರ್ಯ ಕರಿತಿದ್ದಲಾ ಪಿರ್ಕಿ ಅಂತ ಹಾಗೆ ಕರಿಬೇಕಾ?” ಮನುವಿನ ಮಾತು ನನ್ನನ್ನು ಮತ್ತಷ್ಟು ಕೆರಳಿಸಿತು…
“ಅಮ್ಮಾ ತಾಯಿ ಕೂಲ್ ಸೂರ್ಯನ ಹತ್ತಿರ ಮಾತಾಡು ಅಂತ ಕಳಿಸಿದ್ರೆ ನೀನು ಇಲ್ಲಿ ಬಂದು ಕೂತಿದ್ದೀಯ ಅಲಾ , ಅವಾ ಬೈಕ್ ಹತ್ತಿ ಪೇಟೆ ಕಡೆ ಹೋದ ಮಾರಾಯ್ತಿ” ಇದನ್ನು ಕೇಳಿ ಬಂದ ಕೋಪವೆಲ್ಲಾ ಜರ್ರನೆ ಇಳಿಯಿತು.
“ಅಲ್ಲವಾ ಅವನ ಹತ್ತಿರ ಮಾತಾಡ್ಲಿಕ್ಕೇಂತಾನೆ ಬಂದೆ ಅವಾ ಎಂತ ಹೇಳಿದ ಗೊತ್ತಾ? ನನ್ನ ಮನೇವ್ರು ಗೂಢಚಾರಿಕೆ ಮಾಡ್ಲಿಕ್ಕೆ ಕಳಿಸಿದ್ರಾ? ಅಂತ.. ಅಲ್ಲವಾ ಇವನ ಮನೆಯವರ ದೊಡ್ಡಸ್ತಿಕೆಗೆ ಊರಿನ ಜನ ಬಿಡು ಒಂದು ಹುಳ ಕೂಡ ಅವ್ರ ಮನೆಯಾಚೆ ಹೋಗಲ್ಲ. ಇನ್ನು ನನ್ನನ್ನ ಇವನ ವಿಷಯ ತಿಳ್ಕೊಂಡು ಬಾ ಅಂತಾ ಕಳಿಸ್ತಾರನಾ? ನಂಗೆ ಎಷ್ಟು ಬೆಚ್ಚ ಆಯ್ತು ಗೊತ್ತಾ? ಅವನ ಜಾಗದಲ್ಲಿ ನೀನಿದ್ದಿದ್ರೆ ಕೆಪ್ಪೆಗೆರಡು ಇಡ್ತಿದ್ದೆ” ನನ್ನ ಮಾತು ಕೇಳಿ ತನ್ನ ಕೆನ್ನೆ ಸವರಿಕೊಂಡ ಮನು ” ಎಬ್ಬೆ! ನೀನೆಂತದಾ? ನನ್ನ ಕೆಪ್ಪೆ ಅಷ್ಟು ಅಗ್ಗದ್ದಾ ನಿನಗೆ? ಬಾ ಅಲ್ಲಿ ಎಲ್ಲಾ ಕಾಯ್ತಾ ಇರ್ತಾರೆ” ಇಬ್ಬರೂ ಬಂಡೆಯಿಳಿದು ಮೈದಾನದತ್ತ ನಡೆದೆವು.
ನಡೆದ ವಿಷಯಗಳನ್ನು ಅಭಿ, ವರ್ಷಾ, ತರುಣ್, ಪೃಥ್ವಿ, ವಿವೇಕ್ ಎಲ್ಲರಲ್ಲೂ ಅರುಹಿದೆ. “ಹೋಗಿ ಹೋಗಿ ಇವಳಿಗೆ ಈ ಕೆಲಸ ಒಪ್ಪಿಸಿದ್ದೀರಲ್ಲಾ ಇದು ಆಗ್ತದಂತವಾ?” ಮನು ತಲೆ ಚಚ್ಚಿಕೊಂಡ ನಾನು ಅಸಹಾಯಕಳಂತೆ ಎಲ್ಲರ ಮುಖ ನೋಡಿದೆ. ಎಲ್ಲರೂ ಕೋಪದಿಂದ ನನ್ನತ್ತಲೇ ನೋಡುತ್ತಿದ್ದರು. ” ಎಂತಕ್ಕ ನೀವೆಲ್ಲಾ ಹಾಗೆ ನೋಡುದು ನನ್ನನ್ನು” ಕಣ್ತುಂಬಿಸಿಕೊಂಡು ಕೇಳಿದೆ. ” ನಾವೇ ಏನಾದ್ರು ಮಾಡ್ವಾ, ಇನ್ನು ಇವಳನ್ನು ನಂಬಿ ಕೂತ್ರೆ ಎಂತಸ ಆಗಲ್ಲಾ” ಎಲ್ಲರೂ ಹೊರಡುತ್ತಿರುವುದನ್ನು ಕಂಡು ಮನಸ್ಸಿಗೆ ನೋವಾಯಿತು, ಕಣ್ಣೀರು ಕೆನ್ನೆಯ ದಾರಿ ಹಿಡಿದಿತ್ತು. ಅವರೆಲ್ಲಾ ನಂಬಿ ಒಪ್ಪಿಸಿದ ಕೆಲಸವನ್ನು ಮಾಡಲಾಗದ ಬೇಸರದೊಂದಿಗೇ ಮನೆ ತಲುಪಿದೆ.
ರಾತ್ರಿ ಊಟದ ಬಳಿಕ ಥಟ್ಟನೆ ಏನೋ ಹೊಳೆದಂತಾಗಿ ಅಭಿಗೆ ಫೋನಾಯಿಸಿದೆ. “ಎಂತ ಪುಟ್ಟಿ ನಿದ್ದೆ ಮಾಡ್ಲಿಲ್ವಾ? ನಾವೆಲ್ಲಾ ಬೈದದಕ್ಕೆ ಬೇಸರ ಆಯ್ತಾ?” ನನ್ನ ದನಿ ಕೇಳುತ್ತಲೇ ಅಭಿ ಪ್ರಶ್ನಿಸಿದ್ದ “ಹೆ! ಅಭಿ ಬೇಜಾರಿಲ್ಲ ಮಾರಾಯ. ನಂಗೆ ಸೂರ್ಯನ ಬಗ್ಗೆ ಒಂದು ವಿಷಯ ಗೊತ್ತಾಯ್ತು, ಅದನ್ನು ಹೇಳ್ಲಿಕ್ಕೆ ಫೋನ್ ಮಾಡಿದ್ದ”ಅಭಿ ಕುತೂಹಲದಿಂದ “ಎಂತ ಗೊತ್ತಾಯ್ತು? ಬೇಗ ಹೇಳು” “ಸೂರ್ಯ ಇಷ್ಟು ದಿನ ಬೆಂಗಳೂರು ಕಡೆ ಇದ್ದ ಅನಿಸ್ತನಾ ನಂಗೆ” ನಾನು ಉತ್ಸಾಹದಿಂದ ನುಡಿದೆ. ” ಅದು ಹೇಗೆ ಅನಿಸ್ತಾ ನಿಂಗೆ? ಅದು ಹೇಳು” ” ಅವ ಆ ಬೆಂಗಳೂರಿನ ಜನ ಮಾತಾಡುವ ಕನ್ನಡ ಮಾತಾಡಿದವ ಹಾಗೆ ” “ಓಹ್! ಸರಿ ಪುಟ್ಟಿ ಈಗ ಮಲಗು ನಾಳೆ ಇದರ ಬಗ್ಗೆ ಡಿಸ್ಕಸ್ ಮಾಡ್ವಾ” ಅದೇನೋ ಸಾಧಿಸಿದ ನೆಮ್ಮದಿ ಕಂಗಳಿಗೆ ತಣ್ಣನೆಯ ನಿದ್ದೆಯ ಉಣಬಡಿಸಿತ್ತು.
ಗೆಳೆಯರನ್ನ ಕೂಡಿಕೊಳ್ಳುವ ಭರದಲ್ಲಿ ಬಿರುಸಾಗಿ ನಡೆಯುತ್ತಿದ್ದವಳನ್ನು ಪರಿಚಿತ ದನಿಯೊಂದು ತಡೆದಿತ್ತು. “ಏನೇ ಅಷ್ಟೊಂದು ಫಾಸ್ಟಾಗಿ ನಡಿತಿದ್ದೀಯಾ? ಬಿದ್ದುಗಿದ್ದು ಏಟಾದ್ರೆ ಅಷ್ಟೇ ಮತ್ತೆ” ಧ್ವನಿ ಬಂದತ್ತಾ ತಿರುಗಿದೆ “ಅರೆ ಸೂರ್ಯ ನೀನಾ? ನಾನು ಹೀಗೆ ಅಲ್ವನಾ ನಡಿಯುದು,ಯಾಕೆ ಮರೆತು ಹೋಯ್ತಾ ನಿಂಗೆ?” ಸೂರ್ಯನ ಕಂಡ ಖುಷಿ ಮಾತಲ್ಲಿ ಇಣುಕಿತ್ತು. ” ಎಲ್ ಹರ‍್ಟೆ? ಅಭಿ , ತರುಣ್ ಎಲ್ಲಾ ಸಿಗ್ತಾರಾ?” ಅವನ ಬಾಯಲ್ಲಿ ಗೆಳೆಯರ ಹೆಸರು ಕೇಳಿ ಖುಷಿಯಾಗಿ ಮನಸ್ಸು ಹಿಗ್ಗಿತ್ತು.
“ಹೌದು, ಅವರ ಹತ್ತಿರವೇ ಹೊರಟದ್ದು ನಾನೀಗ. ನೀನು ಸಾರ‍್ತೀಯಾ?
“ಹುಬ್ಬೇರಿಸಿ ಕೇಳಿದೆ, “ಸರಿ ನಡಿ”
‘ಸೂರ್ಯ ಸಿಕ್ಕಿದ್ರೆ ಎಂತಸ ಅಧಿಕ ಪ್ರಸಂಗ ಮಾತಾಡ್ಲಿಕ್ಕೆ ಹೋಗ್ಬೇಡ ಆಯ್ತಾ? ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡು’ ಅಭಿಯ ಕಟ್ಟಪ್ಪಣೆ ಮೀರಲಾಗದೆ ಮನಸ್ಸು ಚಡಪಡಿಸುತ್ತಿತ್ತು.
“ಕಿರಣ್, ಮನು, ವರ್ಷಾ,ವಿವೇಕ್ ಎಲ್ಲರೂ ಹೇಗಿದಾರೆ? ಇವಾಗ ಎಲ್ರೂ ಸಿಗ್ತಾರಾ?” ಅವನೇ ಮಾತು ಪ್ರಾರಂಭಿಸಿದ, ಆದರೆ ಅವನ ಬಾಯಲ್ಲಿ ಕಿರಣ್ ಹೆಸ್ರು ಕೇಳಿ ಒಂದು ಸಾರಿ ಸುತ್ತಲೂ ಕಣ್ಣಾಡಿಸಿ
“ಎಲ್ಲರೂ ಸಿಗ್ತಾರೆ.. ಕಿರಣ ಒಬ್ಬ ಬಿಟ್ಟು” ಯಾಕೆಂಬಂತೆ ನನ್ನನ್ನೇ ದಿಟ್ಟಿಸಿದ ” ಕಿರಣನ ಹೆಸರು ಹೇಳ್ಬೇಡ ಮಾರಾಯಾ? ಮತ್ತೆ ಪೋಲಿಸರ ಚಂಬೊಡಿ ತಿನ್ಬೇಕಾದೀತು… ಅವ ಸರಿಯಿಲ್ಲ ಈಗ, ನಿಂಗೊತ್ತಿಲ್ಲವಾ? ಪೇಪರಲ್ಲೆಲ್ಲಾ ಅವನ ಫೋಟೋ ಬಂದಿತ್ತು… ಅವ ಚೆನ್ನೈ ನಲ್ಲಿ ಯಾರನ್ನಾ ಕೊಲೆ ಮಾಡಿದ್ದ ಅಂತೆ ಪೋಲಿಸ್ ಬಂದು ನಮ್ಮನ್ನೆಲ್ಲಾ ವಿಚಾರಿಸಿದ್ದಲ್ವಾ? ಆಮೇಲೆ ಅವನಿಗೆ ಅದೇ ಕಸುಬಾಯ್ತು.. ಅವ ಎಲ್ಲೋ ಕೊಲೆ ಮಾಡುದು ಇಲ್ಲಿ ಪೋಲೀಸ್ ಬಂದು ಅವನ ಅಪ್ಪ,ಅಮ್ಮನನ್ನು ಜೊತೆಗೆ ನಮ್ಮನ್ನು ಅಡಿಮೇಲ್ ಮಾಡುದು ಕರ್ಮ” ನಾನು ತಲೆ ಚಚ್ಚಿಕೊಂಡೆ. “ಮತ್ತೆ ಶೀತಲ್?” ಮೆಲ್ಲನೆ ಕೇಳಿದ…
“ಅವಳ ಪತ್ತೆ ಇಲ್ಲ”
“ಅಂದಹಾಗೆ ಉಳಿದವ್ರೆಲ್ಲಾ ಎಲ್ ಸಿಗ್ತಾರೆ” ಸೂರ್ಯನೇ ಮಾತು ಮುಂದುವರೆಸಿದ. “ಅಭಿಯ ಹೋಟೆಲ್ ಉಂಟಲಾ ಅಲ್ಲಿಯೇ ” ನನ್ನ ಮಾತು ಕೇಳಿ ಸೂರ್ಯ ಅಚ್ಚರಿಯಿಂದ ಹುಬ್ಬೇರಿಸಿ ಕೇಳಿದ, “ಏನು ಅಭಿ ಹೋಟೆಲ್ ಮಾಡಿದಾನಾ?” “ಹೋಟೆಲ್ ಅಂದ್ರೆ ಪೇಟೆಲೆಲ್ಲಾ ಇರ್ತದಲಾ ಆ ತರದ್ದಲ್ಲವಾ, ಟಾರ್ಪಾಲ್, ತಗಡೆಲ್ಲಾ ಹಾಕಿ ಮಾಡಿದ್ದು. ಎರಡು ವರ್ಷ ಆಯ್ತು. ನಮಗೆ ದಿನಾ ಸಂಜೆ ಧರ್ಮಕ್ಕೆ ಅರ್ಧ ಲೋಟೆ ಚಾ ಕೊಡ್ತಾನೆ ಅದ್ರ ಜೊತೆ ಒಂದೊಂದ್ಸಲ ಒಂದೊಂದು ನೀರುಳ್ಳಿ ಬಜೆ ಇಲ್ಲಾದ್ರೆ ಗೋಳಿಬಜೆ ಸಾ ಇರ್ತದೆ ಅದ್ರ ಜೊತೆ ನಮ್ಮ ಸಣ್ಣ ಮೀಟಿಂಗ್. ಇವತ್ತು ನಿಂಗೆ ಸಾ ಅವನ ಚಾದ ರುಚಿ ನೋಡೋ ಭಾಗ್ಯ” ಒಂದೇ ಸಮನೆ ಬಡಬಡಿಸಿ ನಕ್ಕೆ. ಸೂರ್ಯ ಗಂಭೀರವಾಗಿ ಹೆಜ್ಜೆಗಳನ್ನಿಡುತ್ತಿದ್ದುದು ಕಂಡು ಸುಮ್ಮನಾದೆ.
“ಅಗಾ ಓ ಅಲ್ಲಿ ಕಾಣ್ತದಲಾ ನೀಲಿ ಬಣ್ಣದ ಟಾರ್ಪಾಲ್ ಮಾಡು ಅದೇ ಅಭಿಯ ಹೋಟೆಲ್” ಸೂರ್ಯನ ಜೊತೆಯಲ್ಲೇ ಅಭಿಯ ಹೋಟೆಲ್ ಪ್ರವೇಶಿಸಿದ್ದನ್ನು ಕಂಡು ಗೆಳೆಯರೆಲ್ಲರೂ ಸಂತೋಷ, ಅಚ್ಚರಿಯಿಂದ ನಮ್ಮತ್ತಲೇ ದಿಟ್ಟಿಸುತ್ತಿದ್ದರು. ” ಅಭಿ ಮಸಾಲೆ ದೋಸೆ ಉಂಟನಾ? ನಮ್ಮ ಸೂರ್ಯನ ಫೆವರೆಟ್ ಅಲಾ?” ನಾನು ಅಭಿಯನ್ನು ಕೇಳಿದಾಗ,” ಹೆ ನಿಂಗ್ ನೆನ್‍ಪಿದ್ಯಾ ಅದೆಲ್ಲಾ” ಎಂದ ಸೂರ್ಯ ಅಚ್ಚರಿಯಿಂದ ” ಮತ್ತೆ ಎಂತ ಅಂದ್ಕೊಂಡಿದ್ದೀ ನನ್ನನ್ನಾ? ಈಗೆಂತಾ ನಿಂಗ್ ಬೇಡ್ವಾ ಮಸಾಲೆ ದೋಸೆ? ನಿನ್ ಫೆವರೆಟ್ ಚೇಂಜ್ ಆಯ್ತಾ? ನಾವಾದ್ರೂ ತಿಂತೇವೆ ಬಿಡು ಮಾರಾಯ” ನಾನು ನಾಟಕೀಯವಾಗಿ ಕೈಮುಗಿಯುತ್ತಾ ಸೂರ್ಯನನ್ನು ಕೇಳಿಕೊಂಡಾಗ, “ಇವತ್ತು ಎಲ್ಲರಿಗೂ ಮಾಸಾಲೆ ದೋಸೆ ಉಂಟು, ಸೂರ್ಯ ಬಂದ ಖುಷಿಗೆ” ಎಂದ ಅಭಿ. ಅವನ ಮಾತಿಗೆ ಮನು ಜೋರಾಗಿ ಚಪ್ಪಾಳೆ ತಟ್ಟುತ್ತಾ” ಸೂರ್ಯ ದಿನಾ ಸಂಜೆ ಬಾ ಮಾರಾಯ ” ಎಂದಾಗ ಎಲ್ಲರೂ ನಕ್ಕೆವು.
ಎಲ್ಲರಿಗೂ ಸೂರ್ಯ ನ ಬಗ್ಗೆ ತಿಳಿದುಕೊಳ್ಳವ ಕುತೂಹಲ. ಆದರೆ ‘ಅವನಾಗಿಯೇ ಏನಾದರೂ ಹೇಳುವ ಮುನ್ನ ನಾವಾಗಿ ಅವನನ್ನು ಕೇಳಿ ಅವನ ಮನಸ್ಸು ಹಾಳು ಮಾಡುವುದು ಬೇಡ’ ಎಂಬ ಅಭಿಯ ಮಾತು ಎಲ್ಲರನ್ನೂ ಸುಮ್ಮನಾಗಿಸಿತ್ತು. ಸೂರ್ಯ ಮಾತ್ರ ಏನೂ ಆಗೇ ಇಲ್ಲ ಅನ್ನೋ ಹಾಗೆ ಹರಟಿದ.
“ಅಂದ ಹಾಗೆ ಇವರ್ಯಾರು ಅಂತ ಗೊತ್ತಾಗಿಲ್ಲ” ಪೃಥ್ವಿ ಯ ಕಡೆಗೆ ಕೈ ತೋರಿಸಿ ಕೇಳಿದ. ” ಇವಳು ಪೃಥ್ವಿ ಅಂತ ನನ್ನ ಕಸಿನ್. ನಮ್ಮ ಪುಟ್ಟಿಯ ಕ್ಲಾಸ್‍ಮೇಟ್. ಮೊದ್ಲು ಗುಲ್ಬರ್ಗದಲ್ಲಿದ್ರು ಈಗ ಇಲ್ಲಿಯೇ ಸೆಟಲ್ ಆಗಿದಾರೆ” ವಿವೇಕ್ ಅವಳನ್ನು ಪರಿಚಯಿಸಿದ. “ಅದ್ಸರಿ ನೀವೆಲ್ಲಾ ಇವಾಗ ಏನೇನ್ ಮಾಡ್ಕೊಂಡಿದ್ದೀರಾ ಅಂತ ತಿಳ್ಕೋಬೋದಾ? ” ಸೂರ್ಯ ಪ್ರಶ್ನಿಸಿದಾಗ, “ಅಯ್ಯ ಎಂತದಾ ನೀನು? ಹಾಗೆ ಕೇಳ್ತಿ.. ನಾನು ಈ ಸಣ್ಣ ಹೋಟೆಲ್ ಯಜಮಾನ, ವಿವೇಕ್ ಶಿವಮೊಗ್ಗ ದಲ್ಲಿ ಇಂಜಿನಿಯರಿಂಗ್ ಮಾಡ್ತಿದಾನೆ, ಅದೇನೋ ಪ್ರಾಜೆಕ್ಟ್ ವರ್ಕ್ಗಂತ ಊರಿಗೆ ಬಂದಿದ್ದಾನೆ. ತರುಣ್, ಮನು, ಪುಟ್ಟಿ,ಪೃಥ್ವಿ ಡಿಗ್ರಿ ಮಾಡ್ತಿದಾರೆ ಪರೀಕ್ಷೆಗೆ ಓದಲಿಕ್ಕಂತ ರಜೆ ಆದರೆ ಒಬ್ಬರೂ ಪುಸ್ತಕ ಮುಟ್ಟಿದ್ದನ್ನು ನಾನು ನೋಡಿಲ್ಲ. ಕೊನೆ ಸೆಮ್ ಅಂತೆ ನಂಗೆ ತಲೆ ಬುಡ ಗೊತ್ತಿಲ್ಲ ನಾನು ಎಸ್.ಎಸ್.ಎಲ್.ಸಿ ಪಾಸಾದದ್ದೇ ಪವಾಡ… ಇನ್ನೂ ನಮ್ಮ ವರ್ಷಾ ಬರುವ ತಿಂಗಳು ೨೯ ಕ್ಕೆ ಅವಳ ಮದುವೆ ಫಿಕ್ಸ್ ಆಗಿದೆ” ಅಭಿ ಎಲ್ಲರ ಕುರಿತು ಕಿರು ಪರಿಚಯ ಮಾಡಿದ. ನಾನು ಸೂರ್ಯನ ಬಗ್ಗೆ ವಿಚಾರಿಸುವಂತೆ ಸನ್ನೆ ಮಾಡಿದೆ. ಅವನು ಕಣ್ಣಲ್ಲೇ ನನ್ನನ್ನು ಗದರಿ ಸುಮ್ಮನಾದ.
ಮರುದಿನ ನಾನು, ಮನು, ಪೃಥ್ವಿ ಕಂಬೈನ್ಡ್ ಸ್ಟೆಡಿ ನೆಪದಲ್ಲಿ ತರುಣನ ತೋಟದತ್ತ ನಡೆದೆವು. “ಎಲ್ಲಿಗ್ರೋ ನಿಮ್ ಸವಾರಿ? ತೆಪ್ಪಗೆ ಮನೇಲಿ ಓದ್ಕೋಬಾರ್ದಾ?” ಧುತ್ತನೆ ಎದುರಾದ ಸೂರ್ಯ ಪ್ರಶ್ನಿಸಿದಾಗ ನಾನು “ಕೈಯಲ್ಲಿ ಪುಸ್ತಕ ಹಿಡ್ಕೊಂಡದ್ದು ಕಾಣಿಸಲ್ವ ನಿಂಗೆ?” ಠೀವಿಯಿಂದ ಕೇಳಿದ್ದೆ. “ಅಲ್ರೋ ಈ ತರ ತಿರುಗ್ತಾನೆ ಇರ್ತಿರಲ್ವ, ಮನೆಲೇನು ಹೇಳೋರು ಕೇಳೋರು ಯಾರು ಇಲ್ವಾ?” ಅವನು ಮತ್ತೆ ಗದರಿದ. “ನಿಂಗೆಂತ ಕಿಚ್ಚಾಗ್ತದಾ ನಮ್ಮನ್ನು ನೋಡ್ವಾಗ?” ಮನು ಮೂತಿ ಸೊಟ್ಟ ಮಾಡಿಕೊಂಡು ಕೇಳಿದ. ” ಅಲ್ಲವಾ ಚಿಕ್ಕದಿರುವಾಗ ರೇಡಿಯೋ ದಲ್ಲಿ ಕೇಳಿದ್ದು ನೆನಪಿಲ್ವಾ? ಈಗ ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಹಾಡಿರುವ ಯುಗಳ ಗೀತೆ ನಿಮಗಾಗಿ ಅಂತಾ.. ಅದೇ ತರ ನಮ್ಮ ಅಪ್ಪ ಅಮ್ಮ ದಿನಾ ಬೈಗುಳ ಗೀತೆ ಹಾಡ್ತಾನೆ ಇರ್ತಾರೆ ನಾವು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡ್ತೇವೆ” ನನ್ನ ಮಾತು ಕೇಳಿ ಬಂದ ನಗು ತಡೆದುಕೊಂಡ ಸೂರ್ಯ ” ಅದ್ಸರಿ ನೀವೆಲ್ಲಾ ಓದೋದು ಅಷ್ಟರಲ್ಲೇ ಇದೆ.. ಬನ್ನಿ ಒಂದು ರೌಂಡ್ ಸುತ್ತಾಡ್ಕೊಂಡು ಬರೋಣ” ನಮಗೂ ಅದೇ ಬೇಕಾಗಿದ್ದು ಎನ್ನುವಂತೆ ಅವನನ್ನು ಹಿಂಬಾಲಿಸಿದೆವು. ” ಹೇ ಸೂರ್ಯ ನಿಂಗೆ ನೆನಪುಂಟನಾ ಇಲ್ಲೊಂದು ಪೇರಳೆ ಗಿಡ ಇತ್ತು ತುಂಬಾ ಪೇರಾಳೆ ಬಿಡ್ತಾ ಇತ್ತು ಒಂದು ದಿನ ನೀನು ಆ ಗಿಡ ಹತ್ತಿ ಪೇರಳೆ ಕೊಯ್ದು ಈ ಪುಟ್ಟಿ ಹತ್ರ ಕೊಡ್ತಾಯಿದ್ದೆ. ಅವಳು ಲಂಗದಲ್ಲಿ ಎಲ್ಲವನ್ನೂ ಹಿಡ್ಕೊಂಡು ನಿಂತಿದ್ಲು ನಾನು ಓಡಿ ಬಂದು ಇವಳಿಗೆ ಡಿಕ್ಕಿಯಾಗಿ ಇವಳು ಕೆಳಗಿನ ಕೆಸರಿಗೆ ಬಿದ್ದದ್ದು” ಮನು ಬಾಲ್ಯದತ್ತ ಹೊರಳಿದ. ” ಹೌದ ನೀವೆಲ್ಲಾ ಪೇರಳೆ ಹೆಕ್ಕೊದ್ರಲ್ಲಿ ಬ್ಯುಸಿ ನಾನು ಕೆಸರಲ್ಲಿ ಒದ್ದಾಡಿ ಒದ್ದಾಡಿ ಕೊನೆಗೆ ಸುಬ್ಬಯ್ಯ ಭಟ್ರು ನನ್ನನ್ನು ಎತ್ತಿದ್ದು ಅಲ್ಲವಾ ಅವರ ತೋಟದ ಬಾಳೆ ಹಣ್ಣನ್ನೆಲ್ಲಾ ನಾವೇ ಕದ್ದದ್ದಂತ ಗೊತ್ತಾಗಿದ್ದಿದ್ರೆ ನಾನು ಕೆಸರಲ್ಲೆ ಪಡ್ಚ ಆಗ್ತಿದ್ದೆ” ಬಾಲ್ಯದ ನೆನಪು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತ್ತು. “ಸಣ್ಣೋರಿರೋವಾಗ ಸುಬ್ಬಯ್ಯ ಭಟ್ರ ಮನೆಗೆ ಕಾರ್ಯ ದ ಊಟಕ್ಕೆ ಹೋಗ್ತಿದ್ದಿದ್ದು ಮರೆಯೋಕಾಗಲ್ಲ ಅಲ್ವಾ?” ಸೂರ್ಯನೂ ತಾನೇನು ಮರೆತಿಲ್ಲ ಎಂಬಂತೆ ಮತ್ತೊಂದು ನೆನಪ ಬುತ್ತಿಯನ್ನು ನಮ್ಮ ಮುಂದೆ ಬಿಚ್ಚಿಟ್ಟ.” ವಾಹ್ ನೆನಪುಂಟಾ ಅದು, ಎಷ್ಟು ಗಮ್ಮತಿತ್ತಲಾ? ಗಮ ಗಮ ರುಚಿ ರುಚಿ ಊಟ ಸಿಕ್ತಾ ಇತ್ತಲಾ, ಇವಾಗ ಹಾಗೆಲ್ಲಾ ಹೋಗ್ಲಿಕ್ಕೆ ನಾಚಿಗೆ ಆಗ್ತದೆ” ನಾನು ದನಿಗೂಡಿಸಿದೆ.
ದಿನಗಳು ಉರುಳಿ ಪರೀಕ್ಷೆಗಳು ಹತ್ತಿರ ಬಂದವು.. ಒಂದೊಂದೇ ಪರೀಕ್ಷೆ ಮುಗಿಸುತ್ತಾ ಮದ್ಯದಲ್ಲೇ ವರ್ಷಾಳ ಮದುವೆಯನ್ನು ಸಂಭ್ರಮಿಸಿ ಕೊನೆಯ ಪರೀಕ್ಷೆಯನ್ನು ಮುಗಿಸಿಕೊಂಡು ಮನೆಯಂಗಳಕ್ಕೆ ಕಾಲಿರಿಸಿದವಳ ಕಿವಿಗೆ ಅಪ್ಪ- ಅಮ್ಮನ ಗಹನವಾದ ಚರ್ಚೆ ಕೇಳಿಸಿತು. “ಅಲ್ಲಾ ಆ ಹುಡುಗ ಸೂರ್ಯ ಮತ್ತೆ ಕಾಣಿಸ್ತಾ ಇಲ್ಲಾಂತೆ ಮಾರಾಯ್ತಿ..”, “ಹೌದ! ಪುಟ್ಟಿ ಮತ್ತೆ ಏನೂ ಹೇಳ್ಲಿಲ್ಲ.” ಅಮ್ಮ ಕೇಳಿದಾಗ “ಅದಕ್ಕೆಂತ ಗೊತ್ತಾಗ್ತದಾ? ಪ್ರಕೃತಿ ಅಂತ ಹೆಸರಿಟ್ಟಿದ್ದೇವೆ ಅದಕ್ಕೆ ಸರಿಯಾಗಿ ಪ್ರಕೃತಿಯಲ್ಲಿ ಬಲಿ ಬರ್ತದೆ.. ಅವಾ ಓಡಿ ಹೋದದ್ದು ಯಾಕೆಂತಸಾ ಗೊತ್ತಿಲ್ಲ ಅದಕ್ಕೆ ಪಾಪ” ಅಂದ್ರೆ ಅಪ್ಪ- ಅಮ್ಮನಿಗೆ ಎಲ್ಲಾ ವಿಷಯ ಗೊತ್ತು ಹಾಗಾದ್ರೆ.. ಓಹೋ! ಹೇಗಾದರೂ ಸರಿ ಅಪ್ಪ ಇಲ್ಲದಾಗ ಅಮ್ಮನ ಬಾಯಿ ಬಿಡಿಸ್ಬೇಕು.
ನಾನು ಆರನೇ ತರಗತಿಗೆ ಕಾಲಿಡುವ ಹೊತ್ತಿಗೆ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಹೆಗ್ಗಳಿಕೆಯೊಂದಿಗೆ ನ್ಯೂಸ್ ಪೇಪರ್ ಗಳೆಲ್ಲಾ ರಾರಾಜಿಸಿದ್ದ ಸೂರ್ಯ,ನಮಗೆಲ್ಲಾ ಬಗೆಬಗೆಯ ಚಾಕೊಲೇಟ್‍ಗಳನ್ನು ನೀಡಿ ಸಂಭ್ರಮಿಸಿದ್ದ. ಮುಂದೆ ಅವನ ತಂದೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿಗೆ ಅವನನ್ನು ಸೇರಿಸಿದ್ದರು. ನಮ್ಮ ಗೆಳೆಯರ ಬಳಗದಲ್ಲಿ ಸೂರ್ಯ ಸಿರಿವಂತ ಮನೆತನದವನಾದ್ದರಿಂದ ವಾರಕ್ಕೊಮ್ಮೆ ಐಸ್ ಕ್ಯಾಂಡಿ ಪಾರ್ಟಿ ಕೊಡಿಸುತ್ತಿದ್ದ.
ಅವನೇನು ಕಲಿಯುತ್ತಿದ್ದ ಅನ್ನೋದು ನಮಗೆ ತಿಳಿಯದ ವಯಸ್ಸದು. ಅಭಿ ಓದಿಗೆ ಅರ್ಧಕ್ಕೆ ತಿಲಾಂಜಲಿಯಿತ್ತ ಕಾರಣ ಅವನಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ಸೂರ್ಯ ಬರುಬರುತ್ತಾ ಮಂಕಾಗ ತೊಡಗಿದ್ದ. ಕೊನೆಗೆ ನಮ್ಮನ್ನು ಭೇಟಿಯಾಗೋದನ್ನೂ ನಿಲ್ಲಿಸಿದ. ಕಿರಣನ ಅಮ್ಮ ಸೂರ್ಯನ ಮನೆಯಲ್ಲೇ ಮನೆಗೆಲಸ ಮಾಡುತ್ತಿದ್ದ ಕಾರಣ “ಸೂರ್ಯನಿಗೆ ಎಂತದ ಪ್ರೇತ ಬಾಧೆ ಅಂತೆ, ಇವತ್ತು ಯಾರೋ ಪ್ರೇತ ಓಡಿಸಲಿಕ್ಕೆ ಬರ್ತಾರಂತೆ ” ಎಂಬ ಮಾಹಿತಿ ಕೊಟ್ಟರು ನಾವೆಲ್ಲರೂ ಸೇರಿ ಸೂರ್ಯನ ಮನೆಯತ್ತ ಹೆಜ್ಜೆ ಹಾಕಿದೆವು. ಇನ್ನೇನು ಅವನ ಮನೆಯ ಅಂಗಳಕ್ಕೆ ಕಾಲಿಡಬೇಕು ಅನ್ನುವಷ್ಟರಲ್ಲಿ ಸೂರ್ಯನ ತಾಯಿ ಓಡಿ ಬಂದು ” ಯಾಕೆ ಬಂದದ್ದಾ ನೀವೆಲ್ಲಾ? ನಿಮ್ಮಿಂದಲೆ ನನ್ನ ಮಗ ಹೀಗಾದದ್ದು ಹೋಗಿ ಇಲ್ಲಿಂದ” ಎನ್ನುತ್ತಾ ನಮ್ಮನ್ನು ಓಡಿಸಿಬಿಟ್ಟರು. ಇದಾದ ಕೆಲವೇ ದಿನಕ್ಕೆ ಕಿರಣನ ಅಕ್ಕ ಶೀತಲ್ ಕಾಣೆಯಾಗಿದ್ದಳು ನಂತರ ಒಂದೇ ವಾರದ ಅಂತರದಲ್ಲಿ ಸೂರ್ಯ ನಾಪತ್ತೆಯಾಗಿದ್ದ.
ಸೂರ್ಯ ಶೀತಲ್ ಅವಳನ್ನು ಕೊಂದು ಊರು ಬಿಟ್ಟು ಓಡಿಹೋಗಿದ್ದಾನೆ ಅಂತ ಊರೆಲ್ಲಾ ಗುಲ್ಲೆದ್ದಿತ್ತು. ಕಿರಣನ ತಾಯಿಯನ್ನು ಕೆಲಸದಿಂದ ತೆಗೆದುಹಾಕಿದರು. ಕಿರಣ ಯಾರ್‍ಯಾರೋ ಪುಂಡರ ಸ್ನೇಹ ಬೆಳೆಸಿಕೊಂಡು ರೌಡಿ, ಕೊಲೆಗಟುಕ ಅನ್ನೋ ಪಟ್ಟಿಯಲ್ಲಿ ಸೇರಿಕೊಂಡ. “ಸೂರ್ಯ ಹಾಗೆಲ್ಲಾ ಮಾಡ್ಲಿಕ್ಕಿಲ್ಲವಾ. ಅವನು ಒಳ್ಳೆಯವನು” ಅಭಿಯ ಮಾತು ನಿಜಮಾಡಲೆಂಬಂತೆ ಶೀತಲ್ ಇದ್ದಕ್ಕಿದ್ದಂತೆ ಪ್ರತ್ಯಕ್ಷಳಾಗಿ ಎಲ್ಲರ ಊಹಾಪೋಹಗಳಿಗೆ ತೆರೆ ಎಳೆದಿದ್ದಳು. ಒಂದು ದಿನ ಮನೆಯಲ್ಲಿ ಯಾರೂ ಇರದಿದ್ದ ಸಂದರ್ಭ ನೋಡಿಕೊಂಡು ನೇಣಿಗೆ ಕೊರಳೊಡ್ಡಿದ್ದ ಶೀತಲ್ ಸತ್ಯವನ್ನು ಅಭಿಯೇ ಹೇಳಿದ್ದ.
“ಯಾರದ್ದಾ ಜೊತೆ ಓಡಿಹೋಗಿದ್ದಳಂತೆ. ಅವ ಸರಿಯಿರಲಿಲ್ಲ ಅಂತೆ ಇವಳಿಗೆ ಭಯಂಕರ ಉಪದ್ರ ಕೊಡ್ತಾ ಇದ್ದಂತೆ. ತಡಿಲಿಕ್ಕೆ ಆಗದೆ, ವಾಪಾಸು ಬಂದು ಜೀವ ಬಿಟ್ಳು”ಫೋನಿನ ರಿಂಗಣ ನನ್ನನ್ನು ಯೋಚನಾ ಲಹರಿಯಿಂದ ಹೊರಬರುವಂತೆ ಮಾಡಿತ್ತು. “ಯಾರಿದು ಬೆಳಿಗ್ಗೆ ಬೆಳಿಗ್ಗೆ ಫೋನು ಮಾಡಿದ್ದು? ಪುಟ್ಟಿಗೆ ಇರ್ಬೇಕು ಭಾನುವಾರದ ತಿರುಗಾಟಕ್ಕೆ ಕರಿಯಲಿಕ್ಕೆ ಮಾಡಿರ್ತಾರೆ ಕೆಲಸ ಇಲ್ಲದ ಬಿಲಾಸು ಬಿಟ್ಟವು.
“ಅಮ್ಮಾ ಗೊಣಗುತ್ತಾ ಫೋನ್ ರಿಸೀವ್ ಮಾಡಿದವರೆ ಶಾಕ್ ನಿಂದ ” ಎಂತಾ? ನಿಜವನಾ ನೀನು ಹೇಳಿದ್ದು? ಮಾರಿ ಹೋಯ್ತು ಮಗಾ ಅದಕ್ಕೆಲ್ಲಾ ಮಂಡೆಬೆಚ್ಚ ಮಾಡ್ಬೇಡಾ ವಿವೇಕಾ, ಆಯ್ತ ಪುಟ್ಟಿಗೆ ಹೇಳ್ತೇನೆ. ನೀನು ಅಳುದೆಂತಕ್ಕಾ? ನೀನು ಅತ್ತದ್ದು ಗೊತ್ತಾದ್ರೆ ಪುಟ್ಟಿಸಾ ಅಳ್ತಾಳೆ, ಅಳ್ಬೇಡಾ ಮಗಾ”
“ಅಮ್ಮಾ ಯಾರು? ವಿವೇಕನಾ? ಏನಾಯ್ತು” ನನ್ನ ದನಿ ಕೇಳಿ ಅಮ್ಮಾ ಫೋನಿಟ್ಟರು. “ಇವತ್ತು ಬೆಳಿಗ್ಗೆ ಮಧ್ಯ ಪೇಟೆಯಲ್ಲಿ ಕಿರಣನನ್ನು ಯಾರ ಹೊಡೆದು ಕೊಂದಿದಾರಂತೆ ಮಗಾ…”ಯಾಕೋ ಸಂಕಟದಂತಾಗಿ ದುಃಖ ಉಮ್ಮಳಿಸಿ ಜೋರಾಗಿ ಅತ್ತೆ, ಅಮ್ಮನ ಸಮಾಧಾನದ ಮಾತುಗಳು ನನ್ನ ದುಃಖದ ಬೇಗೆಗೆ ತಂಪೆರೆಯಲಿಲ್ಲ. ” ಅಮ್ಮಾ ಅವ ಒಳ್ಳೆಯವ ಅಮ್ಮಾ, ಚಿಕ್ಕದಿರುವಾಗ ಒಮ್ಮೆ ಲಗೋರಿ ಆಡುವಾಗ ಬಾಲು ನನ್ನ ಮಂಡೆಗೆ ಬಿದ್ದು ನಾನು ಜೋರಾಗಿ ಅತ್ತಾಗ ಅವನೆ ಅಮ್ಮಾ ಓಡಿ ಬಂದು ನನ್ನ ಮಂಡೆ ತಿಕ್ಕಿ ಇನ್ನು ನಾವು ಲಗೋರಿ ಆಡುವುದೇ ಬೇಡ ಅಂತ ಸಮಾಧಾನ ಮಾಡಿದ್ದ. ಅಷ್ಟೇ ಅಲ್ಲಮ್ಮಾ ಆವತ್ತೊಂದು ದಿನ ಮನು, ಪೃಥ್ವಿ ಇಬ್ಬರೂ ಕಾಲೇಜಿಗೆ ಬಂದಿರ್ಲಿಲ್ಲ ನಾನು ಒಬ್ಬಳೇ ಕಾಲೇಜಿಂದ ಬರ್ತಾ ಇದ್ದೆ ಯಾರ ನನ್ನನ್ನು ಫಾಲೋ ಮಾಡ್ಕೊಂಡು ಬರ್ತಾ ಇದ್ರು ಆಗ ಕಿರಣ ಎದುರಿಂದ ಬಂದದ್ದು ನೋಡಿ ಫಾಲೋ ಮಾಡ್ಕೊಂಡು ಬಂದವ ಪಿಡ್ಚ. ಕಿರಣ ಹತ್ತಿರ ಬಂದು ‘ಎಂತ ಪುಟ್ಟಿ ಒಬ್ಬಳೆ ಬಂದಿದ್ದೀಯಾ? ಮನು ರಜೆಯಾ? ಅವ ಇಲ್ಲದಿದ್ದರೆ ಒಬ್ಬಳೇ ಬರಬೇಡ. ಅಭಿಯ ಹತ್ತಿರ ಬೈಕುಂಟಲಾ ಅದರಲ್ಲಿ ಬಿಡ್ಲಿಕ್ಕೆ ಹೇಳು.’ ಅಂತ ನಂಗೆ ಬುದ್ದಿ ಹೇಳಿದ್ದ. ಅವ ಒಳ್ಳೆಯವನೇ ಅಮ್ಮಾ ಪಾಪ ಯಾಕೆ ಹೀಗೆ ಮಾಡಿಕೊಂಡವಾ ಏನಾ” ನನ್ನ ಕೂಗಾಟಕ್ಕೆ ಪಪ್ಪ ಓಡಿ ಬಂದು ಏನಾಯ್ತೆಂದು ಆತಂಕದಿಂದ ಕೇಳಿದರು. “ಪಪ್ಪಾ ಕಿರಣನನ್ನು ಯಾರ ಕೊಂದರಂತೆ ಪಪ್ಪಾ “ಕೊಲೆಗಾರನ ಅಂತ್ಯ ಇದೇ ಮಗಾ” ಎಂದು ಸಮಧಾನಿಸಿದರು.
ಸ್ನೇಹದ ಕೋಟೆಯೊಳಗಿಂದ ಸ್ನೇಹಿತರೆಲ್ಲಾ ಒಬ್ಬೊಬ್ಬರಾಗಿ ದೂರವಾಗತೊಡಗಿದ್ದು ಮನಸ್ಸಿಗೇಕೋ ಖೇದವೆನಿಸಿತ್ತು. ಒಬ್ಬಳೇ ಬಂಡೆಯನೇರಿ ಕುಳಿತು ಹಳೆಯ ದಿನಗಳನ್ನು ಮೆಲುಕು ಹಾಕತೊಡಗಿದೆ. “ಹೊ ಪಿರ್ಕಿ ನೀನು ಇಲ್ಲೆಂತ ಮಾಡುದಾ? ನಾವು ನಿನ್ನನ್ನು ಊರಿಡಿ ಹುಡುಕಿದ್ದು ಗೊತ್ತುಂಟಾ?” ಮನುವಿನ ಧ್ವನಿ ನನ್ನನ್ನು ಎಚ್ಚರಿಸಿತು. “ಎಂತದಾ ಪುಟ್ಟಿ? ನಮ್ಮ ಮೇಲೆ ಬೇಸರವಾ?” ಅಭಿ ದನಿಗೂಡಿಸಿದ್ದ. ನನಗರಿವಿಲ್ಲದೆಯೆ ಕಂಗಳು ತುಂಬಿ ಬಂದವು. “ಎಂತ ಆಯ್ತಾ? ಅಳುದ್ಯಾಕೆಯಾ? “, “ಎಂತ ಹೇಳುದಾ ನಾನು ಎಲ್ಲರೂ ಎಷ್ಟು ಗಮ್ಮತ್ ಮಾಡಿಕೊಂಡು ಇದ್ದದ್ದಲಾ ನಾವು… ಈಗ ಎಲ್ಲರೂ ದೂರ ಹೋಗ್ತಾ ಇದಾರೆ ಬೇಜಾರಗಲ್ಲವಾ?” ” ಓಹ್! ಪೃಥ್ವಿ ಬಗ್ಗೆ ಹೇಳುದಾ? ಅವಳ ದೊಡ್ಡಪ್ಪ ಅವಳನ್ನು ಎಂ.ಬಿ.ಎ. ಓದ್ಲಿಕ್ಕೆ ಬೆಂಗಳೂರಿಗೆ ಕರೆಸಿಕೊಂಡದ್ದಂತೆ ಮಾರಾಯ್ತಿ. ಅಲ್ಲಾ ನಿನ್ನನ್ನು ಸಾ ಕರೆದಳಂತೆಲ್ವಾ ನಿಂಗೇನು ಹೋಗ್ಲಿಕ್ಕೆ?”, “ನನ್ನನ್ನು ಅಷ್ಟು ದೂರ ಕಳಿಸಲ್ಲವಾ ನನ್ನ ಪಪ್ಪಾ. ಅದು ನಂಗೆ ತಲೆಗೆಸಾ ಹೋಗ್ಲಿಕ್ಕಿಲ್ಲಾ. ಸೂರ್ಯ ಬಂದವ ಪುನಾ ಎಲ್ಲಿಗಾ ಹೋದ. ನೀವಿಬ್ಬರೂ ಬೈಯ್ಯದಿದ್ರೆ ಒಂದು ವಿಷಯ ಹೇಳುದಾ?” ” ಹೇಳು” “ಸೂರ್ಯ ಮೊದಲು ಹೋದದ್ದು ಯಾಕೇಂತ ಗೊತ್ತಿಲ್ಲ, ಆದ್ರೆ ಈಗ ಹೋಗಲಿಕ್ಕೆ ಕಾರಣ ನಾನೆಯ” “ನೀನಾ? ಅದು ಹೇಗೆ ಮಾರಾಯ್ತಿ?” ” ಅವನಿಗೆ ಶೀತಲ್ ತೀರಿಹೋದ ವಿಷಯ ಹೇಳದೆ ಅವಳ ಪತ್ತೆ ಇಲ್ಲ ಅಂತ ಸುಳ್ಳು ಹೇಳಿದೆಯಾ, ಅದಕ್ಕೆ ಸತ್ಯ ಗೊತ್ತಾದ ಮೇಲೆ ಹೋಗಿದ್ದಾನೆ”
“ಮರ್ಲ್ ಮಾರಾಯ್ತಿ ನಿಂಗೆ ಸೂರ್ಯನ ವಿಷಯ ಗೊತ್ತುಂಟಾ ನಿಂಗೆ? ಅವ ಮೊದಲೊಮ್ಮೆ ಹೋಗಿ ನಾಪತ್ತೆ ಆದದ್ದು ಯಾಕೆ ಗೊತ್ತುಂಟಾ” ನಾನು ಇಲ್ಲವೆಂದು ತಲೆಯಾಡಿಸಿದೆ. “ಸೂರ್ಯನ ಅಮ್ಮ ಬಜೀ ಚೊರೆಪಟ್ ಅಂತೆ. ಕಿರಣನ ಅಮ್ಮ ಅವನ ಮನೆಗೆಲಸಕ್ಕೆ ಹೋಗ್ತಾ ಇದ್ದದಲ್ವ? ಅದಕ್ಕೆ ಸೂರ್ಯನ ಅಮ್ಮ ಯಾವಾಗಲೂ ಡೌಟಿಂದ ನೋಡುದಂತೆ, ಗಂಡನಿಗೆ ಕೆಲಸದವಳ ಜೊತೆ ಸಂಬಂಧ ಇದೆ ಅಂತಾ ಊರಿಡಿ ಹೇಳಿಕೊಂಡು ಬಂದಿದೆ. ಮನೆಯಲ್ಲಿ ದಿನಾ ಜಗಳಂತೆ ಬುದ್ದಿ ಬಂದ ಮೇಲೆ ಸೂರ್ಯ ಈ ಕಿರಿ ಕಿರಿ ಹೇಗೆ ಸಹಿಸಿಕೊಂಡಾನು? ಅದಕ್ಕೆ ಯಾವುದೂ ಬೇಡಾಂತ ಊರೇ ಬಿಟ್ಟದ್ದು. ಅದಕ್ಕೆ ಸರಿಯಾಗಿ ಶೀತಲ್ ನಾಪತ್ತೆಯಾಗಿ ಕತೆಯೇ ಬೇರೆ ಆದದ್ದು ಕರ್ಮ”
“ಇದನ್ನೆಲ್ಲಾ ಯಾರ ಹೇಳಿದ್ದು? ಈಗ ಯಾಕೆಯಾ ಅವ ಹೋದದ್ದು?” ಸೂರ್ಯನ ಕತೆ ಅಭಿಯ ಬಾಯಲ್ಲಿ ಕೇಳಿ ಆಘಾತವಾದರೂ ಚೇತರಿಸಿಕೊಂಡು ಕೇಳಿದೆ. “ಅವನೇ ಹೇಳಿದ್ದಾ. ಅವ ಊರು ಬಿಟ್ಟು ಹೋದವಾ ಅಲ್ಲಿ ಇಲ್ಲಿ ಕೆಲಸ ಮಾಡಿ ಫೋಟೋಗ್ರಫಿ ಕಲಿತ ಅಂತೆ. ಈಗ ಬೆಂಗಳೂರಿನಲ್ಲಿ ಸ್ವಂತ ಸ್ಟುಡಿಯೋಗೆ ಪ್ಲಾನ್ ಮಾಡಿದ್ದಾನೆ ನಾಡಿದ್ದು ಭಾನುವಾರ ಅವನ ಸ್ಟುಡಿಯೋದ ಓಪನಿಂಗ್ ನಿಮ್ಮನ್ನೆಲ್ಲಾ ಕರ್ಕೊಂಡು ಬರ್ಲಿಕ್ಕೆ ಹೇಳಿದಾನೆ. ಎಂತಾ ಬರ್ತೀಯಾ?”
ನಾನು ಪಿಳಿ ಪಿಳಿ ಕಣ್ಣಾಡಿಸಿದೆ. “ನೋಡು ಪುಟ್ಟಿ ನಿನ್ನೆ ಆದದ್ದು ಬಿಟ್ಟು ಬಿಡಬೇಕು, ನಾಳೆ ಎಂತ ಆಗ್ತದೆ ಅದು ನಮಗೆ ಗೊತ್ತಿಲ್ಲಾ… ಇವತ್ತು ಮಾತ್ರ ನಮ್ಮದು ಅಂತ ನಾವು ಬದುಕಬೇಕು ” ಅಭಿಯ ಬಾಯಲ್ಲಿ ಏನಿದು ವೇದಾಂತ? ಅಚ್ಚರಿಯಿಂದ ಅವನನ್ನೇ ನೋಡಿದೆ. ” ಈ ಡೈಲಾಗ್ ನನ್ನ ಸ್ವಂತದ್ದಲ್ಲಾ, ಚಿ.ಉದಯ ಶಂಕರ್ ಬರೆದದ್ದು ಅಲ್ವನಾ? ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ…? ಅಂತಾ ಹಾಗೆ ನಾವು ಬದುಕ್ ಬೇಕು. ಶನಿವಾರ ರಾತ್ರಿ ಬಸ್ಸಿಗೆ ಟಿಕೆಟ್ ಬುಕ್ ಮಾಡ್ತೇನೆ. ಬರ್ತಿಯಲ್ವಾ? ” “ಪಪ್ಪಾ ಎಂತಾ ಹೇಳ್ತಾರಾ ಏನವಾ” ಅನುಮಾನದಿಂದ ಹೇಳಿದೆ. “ಬರುವಾಗ ನಿನ್ನ ಮನೆಗೆ ಹೋಗಿಯೇ ಬಂದದ್ದು ಮಂಗಾ, ಅವರಿಗೆ ಹೇಳಿದೆ ಬೆಂಗಳೂರಿಗೆ ಹೋಗುವ ವಿಚಾರ.
‘ಪುಟ್ಟಿ ತುಂಬಾ ಬೇಜಾರು ಮಾಡಿಕೊಂಡಿದ್ದಾಳೆ. ಅವಳನ್ನು ಕರ್ಕೊಂಡು ಹೋಗಿ’ ಅಂದ್ರು”
“ಕತ್ತಲೆ ಆಯ್ತು ಮನೆಗೆ ಬಿಡ್ತೇನೆ ಬಾ” ಅಭಿ ಕೈಚಾಚಿದ. “ಬರ್ತೇನೆ ಆ ಸೂರ್ಯನ ಜುಟ್ಟು ಹಿಡ್ಕೊಂಡು ಕೇಳ್ತೇನೆ ಅಭಿಗೆ ಮಾತ್ರ ಯಾಕೆ ಇದನ್ನು ಹೇಳಿದ್ದು? ನಾನು ಫ್ರೆಂಡ್ ಅಲ್ವಾ ನಿಂದು ಅಂತ”ನಾನು ಕೆನ್ನೆಯುಬ್ಬಿಸಿ ನುಡಿದಾಗ, ” ಪುಟ್ಟಿ ನೀನು ಇನ್ನೂ ಚಿಕ್ಕವಳು ಅದಕ್ಕೆ ನಿಂಗೆ ಹೇಳಿಲ್ಲ, ಸರಿ ಬೆಂಗಳೂರಿಗೆ ಬರ್ತಿಯಲ್ವಾ ಆಗ ಅವನನ್ನೇ ಕೇಳು ಈಗ ಬಾ” ನಾನು ಆಯ್ತೆಂಬಂತೆ ತಲೆಯಾಡಿಸುತ್ತಾ, ಬೆಂಗಳೂರಿಗೆ ಹೊರಡುವ ಖುಷಿ, ಸ್ನೇಹಿತರೆಲ್ಲಾ ಮತ್ತೆ ಒಂದಾಗಿ ಸೇರುವ ಸಂತೋಷದಿಂದ ಮೇಲೆದ್ದೆ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಕಡಲೂರಿನ ಕತೆ ನಮ್ಮ ಜೀವನದ ಬಾಲ್ಯದ ಸಹಪಾಠಿಗಳ ಸ್ನೇಹ ಸಂಬಂಧಗಳ ನೆನಪಿಸುವಂತಿದೆ.ಮಾನವೀಯ ಮೌಲ್ಯವನ್ನು ಮರೆತು ಕೇವಲ ದುಡ್ಡಿಗಾಗಿ ಹಪಹಪಿಸುವ ಇಂದಿನ ದಿನಗಳಲ್ಲಿನಮ್ಮ ಬಾಲ್ಯದ ಸಿಹಿಕಹಿಗಳನ್ನು ಮೆಲುಕು ಹಾಕುವುದಕ್ಕೆ ಅವಕಾಶ ದೊರೆತಂತಾಯಿತು.
Congratulations Tilaka... Glad to see you writing amazing things. May Kadaloorina Geleyaru...lead the way many more memorable stories from you