“ಲೇ ಜಾನಕಿ, ಕಾಫಿ ತೊಗೊಂಡ್ಬಾ.” ಗಂಡನ ಅಬ್ಬರದ ಧ್ವನಿ ಕೇಳುತ್ತಲೇ ಗಡಿಬಿಡಿಯಿಂದ ಕಾಫಿ ತಯಾರಿಸಿಕೊಂಡು, ಹಿತ್ತಾಳೆಯ ಲೋಟದಲ್ಲಿ ಕಾಫಿ ತಂದು ಪ್ರಭಾಕರನ ಮುಂದಿಟ್ಟಳು ಜಾನಕಿ.
ಅವಳತ್ತ ಕಣ್ಣೆತ್ತಿಯೂ ನೋಡದೇ, ಕಾಫಿ ಗುಟುಕರಿಸುತ್ತ..”ಹುಂ, ಇನ್ನೂ ಯಾಕೆ ಇಲ್ಲೇ ನಿಂತಿದ್ದೀಯಾ? ಈಗ್ಯಾರೋ ಬರೋವ್ರಿದ್ದಾರೆ, ನೀನ್ ಒಳಗ್ಹೋಗು.” ಸೇವಕರಿಗೆ ಕಟ್ಟಾಜ್ಞೆ ನೀಡುವಂತಿತ್ತು.
ಸದ್ದಿಲ್ಲದೇ ಒಳಗೆ ಸರಿದ ಜಾನಕಿಗೆ ಇದೇನೂ ಹೊಸದಲ್ಲ. ಹೆಂಡತಿಯೆಂದರೆ….ತಮ್ಮ ಸೇವೆಗಾಗಿಯೇ ಇರುವ ದಾಸಿ ಎಂದು ತಿಳಿದವರಿಗೆ, ಜಾನಕಿಯ ಜೊತೆ ಪ್ರೀತಿಯಿಂದ ಮಾತಾಡುವುದು, ಸರಸದ ಸಂಭಾಷಣೆ ಎಲ್ಲ ಗೊತ್ತೇ ಇಲ್ಲ.
ಅವಳಾದರೂ ಏನು ಮಾಡಿಯಾಳು? ಬಡತನದ ಕುಟುಂಬದಿಂದ ಬಂದವಳು, ಮೊದಲಿಂದಲೂ ತನಗೆ ಇಂಥದ್ದೇ ಬೇಕೆನ್ನುವ ಆಸೆಪಟ್ಟಿದ್ದೇ ಇಲ್ಲ.
ಊರಿಗೇ ದೊಡ್ಡವರೆನಿಸಿಕೊಂಡ ಪ್ರಭಾಕರನ ತಂದೆ ತಾಯಿ ಕನ್ಯಾರ್ಥಿಯಾಗಿ ಬಂದಾಗ….ಪಿಯುಸಿ ಮುಗಿದು, ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣದ ಮುಗ್ಗಟ್ಟು ಎದುರಿಸುತ್ತಿರುವ ತಂದೆಯಲ್ಲಿ ಕಾಲೇಜಿಗೆ ಸೇರಿಸಿ ಎಂದು ಕೇಳಲಾಗದೇ…ಅವರು ತೋರಿಸಿದ , ಪ್ರಭಾಕರ ತೊಡಿಸಿದ ಮಾಂಗಲ್ಯಕ್ಕೆ ಕೊರಳೊಡ್ಡಿದಾಗ….ಶಿಕ್ಷಣವನ್ನಂತೂ ಮುಂದುವರೆಸಲಾಗಲಿಲ್ಲ, ವೈವಾಹಿಕ ಬದುಕಾದರೂ ಸುಂದರವಾಗಿರಲಿ ಎಂದು ಜೀವನದಲ್ಲಿ ಮೊದಲಬಾರಿ ದೇವರಲ್ಲಿ ತನಗಾಗಿ ವರವನ್ನು ಕೇಳಿದ್ದಳವಳು. ಆದರೆ ಅವಳ ದೇವರು ಅದ್ಯಾವ ಮಹತ್ಕಾರ್ಯದಲ್ಲಿ ನಿರತನಾಗಿದ್ದನೋ, ಅವಳ ಬದುಕನ್ನು ಬಾಣಲೆಯಿಂದ ನೇರವಾಗಿ ಬೆಂಕಿಗೇ ಹಾಕಿಬಿಟ್ಟಿದ್ದ!
ಹೆಣ್ಣೆಂದು ತಾತ್ಸಾರ ಮಾಡುತ್ತಿದ್ದ ಅಪ್ಪನ ಮನೆಯಲ್ಲಿ…ಅಮ್ಮ, ಇಬ್ಬರು ತಮ್ಮಂದಿರು, ತಂಗಿಯ ಪ್ರೀತಿ ಅಕ್ಕರೆಯಾದರೂ ಇತ್ತು. ಆದರೆ…ಇಲ್ಲಿ? ಬಡವರ ಮನೆಯಿಂದ ಹೆಣ್ಣು ತಂದು ಲೋಕವನ್ನೇ ಉದ್ಧಾರ ಮಾಡಿದ ಧೋರಣೆ ಅತ್ತೆಯದಾದರೆ, ಹಣ ಸಂಪಾದನೆಯೊಂದೇ ಜೀವನದ ಪರಮ ಗುರಿ ಎನ್ನುವ ಪ್ರಭಾಕರ, ಕತ್ತಲೆ ಕವಿದಮೇಲೆ…ದೇಹದ ಹಸಿವು ತೀರಿಸುವುದಕ್ಕಷ್ಟೇ ದಾಂಪತ್ಯ ಸೀಮಿತವೆಂದು ಬಗೆದವರು. ಹಾಗಾಗಿ…ವರ್ಷ ಕಳೆಯುವಷ್ಟರಲ್ಲಿ ಜಾನಕಿ, ಗಂಡುಮಗುವಿನ ತಾಯಾದಳು.
‘ಮಗನನ್ನು ಹೆತ್ತುಕೊಟ್ಟಮೇಲೆ…ನಿನ್ನ ಕರ್ತವ್ಯ ಮುಗಿಯಿತು’ ಎನ್ನುವಂತೆ…ಸಂತೋಷನಿಗೆ ತಾಯಿಯೇ ಮೊದಲ ಗುರುವಾಗುವುದಕ್ಕೂ ಅವಕಾಶವಿಲ್ಲದಂತೆ ಅವಳ ಅತ್ತೆ ನೋಡಿಕೊಂಡರು. ಅಜ್ಜಿಯ ಸುಪರ್ದಿಯಲ್ಲಿ ಬೆಳೆಯುತ್ತಿದ್ದ ಸಂತೋಷನಿಗೆ ಬಟ್ಟೆ ಕೊಳ್ಳುವುದರಿಂದ ಹಿಡಿದು….ಅವನ ಬೇಕು ಬೇಡಗಳ ಎಲ್ಲ ತೀರ್ಮಾನವೂ ಅಜ್ಜಿ ಮತ್ತು ಅಪ್ಪನದು.
ಜಾನಕಿಯದೇನಿದ್ದರೂ ಮೂರು ಹೊತ್ತು ಅಡುಗೆಮನೆ, ಬರುವ ಹೋಗುವವರಿಗೆ ಬೇಯಿಸಿ ಹಾಕುವುದು, ಅತ್ತೆ- ಮಾವ, ಗಂಡನ ಸೇವೆ ಮಾಡುವುದಷ್ಟೇ.
ತನ್ನ ಬದುಕಿನ ಬಗ್ಗೆ ಹೇಳಿಕೊಳ್ಳುವಂಥ ಕಲ್ಪನೆಯನ್ನೂ ಕಾಣದಿದ್ದ ಜಾನಕಿಗೆ….ದೇವರು ಅವಳು ಕನಸುಕಾಣುವುದನ್ನು ನಿಷೇಧಿಸಿದ್ದ! ಹೋಗಲಿ, ಮಗ ಹುಟ್ಟಿದಮೇಲಾದರೂ, ಅವನ ಆಟಪಾಠದಲ್ಲಿ ನೆಮ್ಮದಿ ಕಾಣಬಹುದೆನ್ನುವ ಒಂದು ದೂರದ ನಿರೀಕ್ಷೆಯೂ ಸುಳ್ಳಾಯಿತು.
ದಿನವಿಡೀ ದುಡಿಯುವ ಯಂತ್ರವಾದ ಜಾನಕಿಗೆ….ಮಗನನ್ನು ಮುದ್ದಾಡಲು ಸಹ ಸಮಯ ಸಿಗುತ್ತಿರಲಿಲ್ಲ. ಅಜ್ಜಿಯ ಜೊತೆಯಲ್ಲೇ ಊಟ, ಆಟ, ನಿದ್ದೆ ಎಲ್ಲವನ್ನೂ ಮಾಡುತ್ತಿದ್ದವನ ಬಾಲ್ಯವನ್ನು ಹತ್ತಿರದಿಂದ ನೋಡಲು ಪುರುಸೊತ್ತಿಲ್ಲದಷ್ಟು ಜಮೀನ್ದಾರರ ಮನೆ ಸೊಸೆಯ ಕೆಲಸ.
ಮೊದಲು ಮಾವ, ಮುಂದೆ ನಾಲ್ಕು ವರ್ಷಗಳಲ್ಲಿ ಅತ್ತೆಯೂ ಕಾಲನ ಕರೆಗೆ ಓಗೊಟ್ಟು ಎದ್ದು ನಡೆದಾಗ…ಮಗನಾಗಲೇ ಹೈಸ್ಕೂಲು ಮುಗಿಸಿ, ಕಾಲೇಜು ಮೆಟ್ಟಿಲು ಹತ್ತಿಯಾಗಿತ್ತು.
ಮುಂದಿನ ಶಿಕ್ಷಣಕ್ಕಾಗಿ ದೂರದೂರಿಗೆ ಹೋಗಿಬಂದ ಮಗನಿಗೆ, ಊರಿನಲ್ಲೇ ಟೈಲ್ಸ್ ಫ್ಯಾಕ್ಟರಿ ಹಾಕಿಕೊಡುವ ಇರಾದೆ ಪ್ರಭಾಕರರದು.
ಫ್ಯಾಕ್ಟರಿಗಾಗಿ ಜಮೀನು ಖರೀದಿಯ ಪ್ರಕ್ರಿಯೆ ಮುಗಿದು, ಅದಕ್ಕಾಗಿ ಕಟ್ಟಡ ನಿರ್ಮಾಣದ ಕೆಲಸವೂ ಆರಂಭವಾಯಿತು.
ಊರು ಬಿಟ್ಟು ಹೋಗುವವರೆಗೂ ಸಂತೋಷ್, ತಾಯಿಯತ್ತ ಹೆಚ್ಚು ಗಮನವಿತ್ತಿರಲಿಲ್ಲ. ಅಮ್ಮನದೇನಿದ್ದರೂ ಎಲ್ಲರ ಚಾಕರಿ ಮಾಡುವುದಷ್ಟೇ ಕೆಲಸವೆಂದು ತಿಳಿದವನಿಗೆ….ನಗರದಲ್ಲಿ ತನ್ನ ಸ್ನೇಹಿತರ ತಾಯಂದಿರನ್ನು ಕಂಡಮೇಲೆ…..ಊರಿನಲ್ಲಿರುವ ತನ್ನಮ್ಮನ ಬದುಕಿನ ರೀತಿಯನ್ನು ಅವರೊಂದಿಗೆ ತುಲನೆ ಮಾಡತೊಡಗಿದ್ದ. ಅಮ್ಮನ ಬಗ್ಗೆ ಅವನಲ್ಲಿ ಕಳಕಳಿ, ಪ್ರೀತಿ, ಕಾಳಜಿ ಎಲ್ಲವೂ ಚಿಗುರೊಡೆಯತೊಡಗಿದ್ದವು.
ಬದುಕಿನಲ್ಲಿ ಉದಾಸೀನತೆಯನ್ನೇ ಕಾಣುತ್ತಾ ಬಂದವಳಿಗೆ….ಈಗಲೂ ಗಂಡನಿಂದ “ಮಗನ ಭವಿಷ್ಯಕ್ಕಾಗಿ ಹೀಗೆ ಮಾಡೋಣ್ವಾ?” ಎನ್ನುವ ಒಂದು ಮಾತಿನ ನಿರೀಕ್ಷೆಯಿರಲಿಲ್ಲ.
ಫ್ಯಾಕ್ಟರಿ ಕಟ್ಟಡದ ನಿರ್ಮಾಣಕಾರ್ಯ ಮುಗಿದು, ಉದ್ಯಮವನ್ನು ಪ್ರಾರಂಭಿಸುವ ಸಮಯವೂ ಹತ್ತಿರವಾಯಿತು.
ಸಂತೋಷ ಅಮ್ಮನ ಹತ್ತಿರ ತಾನು ನಡೆಸುವ ಉದ್ಯಮದ ಬಗ್ಗೆ ಹೇಳತೊಡಗಿದ್ದ.
ಫ್ಯಾಕ್ಟರಿಯ ಉದ್ಘಾಟನೆಯ ದಿನ…..ಅಪ್ಪನಿಗೆ ಅಮ್ಮ ಜೊತೆಯಾಗಿರುವಂತೆ ನೋಡಿಕೊಂಡು, ಅಮ್ಮನೂ ಪೂಜೆ ನೆರವೇರಿಸುವಂತೆ ಕೋರಿದಮೇಲೆ…ಎಲ್ಲ ಕಾರ್ಯಗಳಲ್ಲಿ ಜಾನಕಿಗೆ ಕೊಂಚ ಆದ್ಯತೆ ನೀಡಲಾಗಿತ್ತು.
“ಸಂತೋಷ, ಈಗೆಲ್ಲಾ ಒಂದು ಸ್ಟೇಜ್ ಗೆ ಬಂದಾಯ್ತಲ್ಲಾ ಇನ್ನು ನಿನ್ ಮದ್ವೆ ಬಗ್ಗೆ ಯೋಚ್ನೆ ಮಾಡು.” ಪ್ರಭಾಕರ ಹೇಳಿದಾಗ…”ಅಪ್ಪಾ, ನೀವಿಬ್ರೂ ತೋರಿಸ್ದೋಳನ್ನೇ ಮದ್ವೆ ಆಗ್ತೀನಪ್ಪಾ. ಆದರೆ ಅದಕ್ಮುಂಚೆ ನಾವು ಮೂರು ಜನ ಎಲ್ಲಾದ್ರೂ ಒಳ್ಳೆ ಟೂರ್ ಮಾಡ್ಕೊಂಡು ಬರೋಣ್ವಾ?”
ಪ್ರಭಾಕರರಿಗೆ ಮಗನ ಕೋರಿಕೆಯನ್ನು ಅಲ್ಲಗಳೆಯಲಾಗಲಿಲ್ಲ. ಆದರೂ, “ನಿಮ್ಮಮ್ಮನ್ಗೆ ಟೂರ್ ಗೀರ್ ಎಲ್ಲಾ ಆಗ್ಬರಲ್ಲ, ಈವರ್ಗೂ ಅವ್ಳು ಎಲ್ಲೂ ಹೋಗೇ ಇಲ್ವಲ್ಲಾ” ಎಂದ ತಂದೆಯನ್ನು ದೀರ್ಘವಾಗಿ ನೋಡಿದ ಸಂತೋಷ್, “ಅಪ್ಪಾ, ತಪ್ಪು ತಿಳೀಬೇಡಿ. ನೀವು ಯಾವತ್ತಾದ್ರೂ ಅಮ್ಮನ್ನ ಹೊರಗೆ ಕರ್ಕೊಂಡು ಹೋಗಿದ್ದೀರಾ? ಮನೆನೇ ಅವರ ಜಗತ್ತು ಅನ್ನೋ ಹಾಗೆ ಮಾಡಿರೋವ್ರು ನೀವೇ ಅಲ್ವೇನಪ್ಪಾ? ಎಟ್ ಲೀಸ್ಟ್ ಈಗ್ಲಾದ್ರೂ……ಅಮ್ಮನ್ನ ಜೀವಿಸೋಕೆ ಬಿಡಿ ಅಪ್ಪಾ.” ಅವನದು ಕಳಕಳಿಯ ಪ್ರಾರ್ಥನೆಯಾಗಿತ್ತು.
ಏನೋ ಹೇಳಲು ಬಾಯಿ ತೆರೆದವರು ಗೋಡೆಗೊರಗಿ ನಿಂತ ಜಾನಕಿಯನ್ನು ನೋಡಿ, ಮೌನವಹಿಸಿದರು. ಪ್ರಭಾಕರರ ಮುಖದಲ್ಲಿ ಪಶ್ಚಾತ್ತಾಪದ ಸಣ್ಣ ಎಳೆಯೊಂದು ಹಾದುಹೋದಂತಾಯ್ತು. ಕಣ್ಣು ಮಂಜಾದ ಜಾನಕಿಗೆ…ಅಲ್ಲಿ ನಿಲ್ಲಲಾಗಲಿಲ್ಲ.
ಅಲ್ಲಿ ನೆಲೆಸಿದ ನೀರವತೆಯಲ್ಲಿ ಪ್ರಭಾಕರರ ಮನಸ್ಸು ಮಂಥನ ನಡೆಸಿತ್ತು. ಹತ್ತು ನಿಮಿಷದ ಸುದೀರ್ಘ ಮೌನದ ನಂತರ…”ಸಂತೋಷ್, ನೀನ್ಹೇಳೋದು ಒಂದು ಅರ್ಥದಲ್ಲಿ ನಿಜಾ ಕಣೋ. ನಿಮ್ಮಮ್ಮನ ಬಗ್ಗೆ…ನಾನ್ಯಾವತ್ತೂ ಈ ಥರ ಯೋಚಿಸ್ಲೇ ಇಲ್ಲ ನೋಡು. ಆಯ್ತು, ನೀನ್ಹೇಳಿದ್ಹಾಗೇ ಆಗ್ಲಿ ಹೋಗ್ಬರೋಣ. ಬಂದ್ಮೇಲೆ…..ಈ ಮನೆಗೆ ಎಂಥಾ ಸೊಸೆ ಬೇಕು ಅನ್ನೋ ಆಯ್ಕೆನೂ…ನಿಮ್ಮಮ್ಮಂದೇ ಆಗ್ಲಿ.”
ಒಳಗಿದ್ದ ಜಾನಕಿ, ‘ತಾನು ಕೇಳ್ತಿರೋದು ನಿಜಾನಾ? ಇದು…. ಇವರ ಬಾಯಿಂದ ಬಂದ ಮಾತಾ?’ ಪ್ರಭಾಕರರ ಮಾತು ಕೇಳಿ….ಇದು ಕನಸಲ್ಲ ತಾನೇ?’ ಭ್ರಮೆಗೆ ಒಳಗಾದಳು.
‘ತನ್ನ ಬದುಕು ಇಷ್ಟೇ ಅಲ್ಲ, ಬೇಲಿಯಾಚೆ ಇನ್ನೂ ಸುಂದರ ಬದುಕಿದೆ. ಎಲ್ಲರೂ ಸೇರಿ ನನ್ನ ಸುತ್ತಲೂ ಹಾಕಿದ್ದ ಬೇಲಿಯನ್ನು ಮಗ ಕಿತ್ತೆಸೆಯುತ್ತಿದ್ದಾನೆ’ ಎನ್ನುವ ಭಾವ ಆವರಿಸಿ…ಮನಸ್ಸು ಹಗುರಾಗಿ, ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟಳು.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ತುಂಬಾ ಚೆನ್ನಾಗಿದೆ
ಸುಂದರವಾದ ಕಥೆ
ಧನ್ಯವಾದಗಳು.