ಚಪ್ಪಾಳೆಯ ಸದ್ದು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿತ್ತು. ಆ ಚಪ್ಪಾಳೆಯಲ್ಲಿ ನನ್ನವರು ಅಂದುಕೊಂಡ ಯಾರ ಕೈಗಳೂ ಜತೆಯಾಗಿಲ್ಲ ಎಂದುಕೊಂಡಾಗ ಎದೆಯೊಳಗೆಲ್ಲಾ ಸಂಕಟವಾಗಿತ್ತು. ಸಾಧನೆಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವಾಗ ನನ್ನವರು ಯಾರಾದರೂ ಇದ್ದಾರೆಯೇ? ಎಂದೊಮ್ಮ ಕಣ್ಣಾಡಿಸಿದೆ… ಇಲ್ಲ. ಒಡಲಲ್ಲಿ ಬೆಂಕಿ ಉರಿಸಿದಂತಾಗಿತ್ತು. ಆಯೋಜಕರಲ್ಲಿ ವಿನಂತಿಸಿಕೊಂಡು ಹೊರನಡೆದೆ. ಬೇಡಬೇಡವೆಂದರೂ ಕಣ್ಣಾಲಿಗಳು ತುಂಬಿಕೊಳ್ಳುತ್ತಿದ್ದವು. ‘ಮುಂದೇನು? ಯಾರಿಗಾಗಿ ಈ ಸಾಧನೆ? ಸಾಧನೆಯನ್ನು ನೋಡಿ ಖುಷಿಯಿಂದ ಸಂಭ್ರಮಿಸಬೇಕಾದವರು ಜತೆಗಿಲ್ಲವಲ್ಲ’ ತುಟಿ ವಿಷಾಧದಿಂದ ಬಿರಿದಿತ್ತು. “ಅರೆ ಮೇಡಂಜೀ” ಯಾರೋ ಕಿರುಚಿದಂತಾಗಿ ತಿರುಗಿ ನೋಡುವಷ್ಟರಲ್ಲಿ ರಭಸದಿಂದ ಬಂದ ಕಾರೊಂದು ನನಗೆ ಗುದ್ದಿಕೊಂಡು ಹೋಗಿತ್ತು. ಕ್ಷಣಾರ್ಧದಲ್ಲಿ ನಾನು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದೆ.
‘ಅಯ್ಯೋ ನನ್ನ ಆಯಸ್ಸು ಮುಗಿಯಿತೇ? ಇಲ್ಲ ನಾನು ಬದುಕಬೇಕು, ಸುತ್ತಲೂ ನಿಂತು ನೋಡ್ತಾ ಇದ್ದೀರಲ್ವಾ? ಬನ್ನಿ ನನಗೆ ಸಹಾಯ ಮಾಡಿ’ ಚೀರಬೇಕೆನಿಸಿತ್ತು. ಆದರೆ ಧ್ವನಿ ಗಂಟಲಿನಿಂದ ಹೊರಬರದೆ ಕಾಡಿಸಿತು. ” ಅರೆ ಎ ಕ್ಯಾ ಹೋಗಯ? ಜಲ್ದಿ ಆಂಬ್ಯುಲನ್ಸ್ ಕೋ ಫೋನ್ ಕರೋ” ಯಾರೋ ಒಬ್ಬ ಹೇಳಿದ. ನನ್ನಲ್ಲಿ ಬದುಕುವ ಆಸೆ ಕೊಂಚ ಚಿಗುರಿತ್ತು. ಯಾರೋ ಕರೆ ಮಾಡಿದ್ದರು ಅನಿಸುತ್ತೆ, ಅ್ಯಂಬುಲೆನ್ಸ್ ಬಂದಿತ್ತು. ಯಾರೋ ಇಬ್ಬರು ಬಂದು ನನ್ನನ್ನು ಎತ್ತಿ ಆ್ಯಂಬುಲೆನ್ಸ್ ಒಳಗೆ ಮಲಗಿಸಿದರು. “ಖೂನ್ ಬಹೂತ್ ನಿಕಲ್ ರಹಿ ಹೇ ಬಾಯ್ ಜಲ್ದಿ ಲೇಕರ್ ಚಲಿಯೇ”
‘ಅಯ್ಯೋ ದೇವ್ರೇ ಮುಂದೇನು’ ಕಣ್ಣುಗಳು ಮಂಜಾಗಿದ್ದವು.
ಅವತ್ತು ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಕಾರಣ ನನ್ನ ಮದುವೆ. “ಎಂತ ಪುಟ್ಟಿ ಬೊಂಬಾಯಿಗೆ ಹೋದಮೇಲೆ ನಮ್ಮ ನೆನಪು ಇರ್ತದಾ?” ಪಕ್ಕದ ಮನೆ ಪದ್ದು ಮಾಮಿ ಕೆನ್ನೆ ಗಿಂಡಿ ಕೇಳಿದ್ದರು. “ಪದ್ದಕ್ಕ ಹಾಗೆಲ್ಲ ಕೇಳ್ಬೇಡಿ, ಹುಡುಗಿ ಕೂಗ್ತದೆ ಮಾರ್ರೆ, ರಾತ್ರಿ ಇಡೀ ಸಮಾಧಾನ ಮಾಡಿ ಸಾಕು ಸಾಕಾಯ್ತು” ಅಮ್ಮ ಆತಂಕದಿಂದ ನುಡಿದಿದ್ದಳು. “ಪುಟ್ಟಿ ಎಲ್ಲ ದೈವಕ್ಕೂ ಕೈ ಮುಗಿದೆಯಾ?” ಅಪ್ಪ ಪ್ರಶ್ನಿಸಿದ್ದರು, “ಗುಡ್ಡದ ಭೂತಕ್ಕೆ ಕೈ ಮುಗಿಲಿಕ್ಕೆ ಬಾಕಿ ಉಂಟು ಪಪ್ಪಾ, ಕೈ ಮುಗಿದು ಬರ್ತೇನೆ” ಎಂದೆ. ” ಒಬ್ಬಳೆ ಹೋಗುದು ಬೇಡ , ನಾನು ಸಹ ಬರ್ತೇನೆ ಹೋಗ್ವಾ” ಅಪ್ಪ ನನ್ನ ಹಿಂದೆ ಹೊರಟಾಗ, ಅಭಿ ತಡೆದ “ಮಾಮ ಅವಳ ಜೊತೆ ನಾವಿದ್ದೇವೆ, ನೀವು ನಿಮ್ಮ ಕೆಲಸ ನೋಡಿಕೊಳ್ಳಿ ಅವಳ ಜೊತೆ ನಾವು ಹೋಗ್ತೇವೆ” ಅಭಿ, ತರುಣ್, ವಿವೇಕ್ , ಮನು, ಪೃಥ್ವಿ ನನ್ನ ಜೊತೆ ಹೊರಟರು.
“ಪುಟ್ಟಿ ದೂರದ ಊರಿಗೆ ಹೋಗ್ತಾ ಇದ್ದಿ, ಎಂತ ಹೆಲ್ಪ್ ಬೇಕಾದ್ರೂ ನಮಗೆ ಫೋನ್ ಮಾಡಾಯ್ತ,” ತರುಣ್ ನುಡಿದಾಗ, ಕಣ್ಣುಗಳು ತುಂಬಿದ್ದವು. “ನಿಮ್ಮಂತ ಫ್ರೆಂಡ್ಸ್ ಇರುವಾಗ ನನಗೆ ಎಂತದೂ ಟೆನ್ಷನ್ ಇಲ್ಲ. ಆದ್ರೆ ಸೂರ್ಯ, ವರ್ಷ ಕೂಡ ನಮ್ಮ ಜೊತೆ ಇರ್ಬೇಕಿತ್ತು ಅಲ್ವಾ?” ನಾನೆಂದೆ. “ಪುಟ್ಟಿ ವರ್ಷಾ ಬಾರದೇ ಇರೋ ಲೋಕಕ್ಕೆ ಹೋಗಿ ಆಗಿದೆ ಆದ್ರೆ ಅಲ್ಲಿಂದಾನೆ ನಿನ್ನನ್ನು ನೋಡಿ ಖುಷಿ ಪಡ್ತಾಳೆ, ಸೂರ್ಯ ತುಂಬಾ ಬ್ಯುಸಿ ಇದ್ದಾನೆ ಹೇಳಿದ. ನೋಡುವ ಮದುವೆ ಹೊತ್ತಿಗೆ ಬರಬಹುದು” ವಿವೇಕ್ ಸಾವಧಾನಿಸಿದ್ದ. “ಇನ್ನು ನನಗೆ ಜಗಳ ಆಡ್ಲಿಕ್ಕೆ ಯಾರು ಸಾ ಇಲ್ಲ” ಮನುವೆಂದಾಗ ಎಲ್ಲರೂ ನಕ್ಕರು. “ಪುಟ್ಟಿ ನೀನು ತುಂಬಾ ಲಕ್ಕಿ ರಾಹುಲ್ ನನ್ನು ಚಿಕ್ಕದಿಂದ ನೋಡಿದ್ದಿ ,ಮೇಲಾಗಿ ನಿನ್ನ ಸಂಬಂಧಿ ಬೇರೆ. ಅವನ ಜೊತೆ ಚೆನ್ನಾಗಿರ್ತಿ” ಪೃಥ್ವಿ ನುಡಿದಾಗ ಎಲ್ಲರೂ ಹೌದೆನ್ನುವಂತೆ ತಲೆದೂಗಿದರು.
“ಮಕ್ಕಳೇ ಎಂತ ಪಂಚಾಯ್ತಿಗೆ ಮುಗಿಲಿಲ್ವ ನಿಮ್ಮದು? ಪುಟ್ಟಿಯ ಮದುವೆ ಇವತ್ತು. ನೆನಪುಂಟಲ್ವಾ? ಬನ್ನಿ ಬೇಗ ಹೊರಡ್ಬೇಕು” ಅಮ್ಮನ ದನಿ ಎಲ್ಲರನ್ನೂ ಎಚ್ಚರಿಸಿತ್ತು. ಫೋಟೋಗ್ರಾಫರ್ ಹೇಳಿದಂತೆಲ್ಲಾ ಪೋಸು ಕೊಟ್ಟು ಕಾರು ಹತ್ತಿ ಕುಳಿತವಳಿಗೆ ತಲೆ ತುಂಬಾ ರಾಹುಲನದೇ ಯೋಚನೆ. ‘ರಾಹುಲ್ ನ ತಾಯಿ ಅಪ್ಪನಿಗೆ ದೂರದ ಸಂಬಂಧಿ. ಸಂಬಂಧದಲ್ಲಿ ತಂಗಿಯಾಗಬೇಕು. ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ಬಂದು ನಾಲ್ಕು ದಿನ ಉಳಿದು ಹೋಗುತ್ತಿದ್ದರು. ಆಗ ನಾನು ಮತ್ತು ರಾಹುಲ್ ಕಾಡು, ತೋಟದಲ್ಲೆಲ್ಲಾ ಓಡಾಡಿಸಿ ಜತೆಯಲ್ಲಿ ಆಟವಾಡುತ್ತಿದ್ದೆವು. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಅವನಿಗೆ ಇದಾವುದೂ ಇಷ್ಟವಾಗುತ್ತಿರಲಿಲ್ಲ. ಕ್ರಮೇಣ ನಮ್ಮ ಮನೆಗೆ ಬರುವುದನ್ನೇ ನಿಲ್ಲಿಸಿಬಿಟ್ಟ. ನನ್ನ ಪದವಿ ಮುಗಿಯುತ್ತಿದ್ದಂತೆ ರಾಹುಲ್ ನ ಅಮ್ಮ ನನ್ನ ಅಪ್ಪನ ಬಳಿ, ನನ್ನನ್ನು ರಾಹುಲನಿಗೆ ತಂದುಕೊಳ್ಳುವ ಕುರಿತು ಮಾತುಕತೆ ನಡೆಸಿದ್ದರು. ರಾಹುಲ್ ನನಗಿಂತ ಐದು ವರ್ಷ ದೊಡ್ಡವನು. ಫ್ಯಾಷನ್ ಡಿಸೈನಿಂಗ್ ನಲ್ಲಿ ಕೋರ್ಸ್ ಮುಗಿಸಿ ದೊಡ್ಡ ಡಿಸೈನರ್ ಆಗಿದ್ದ. ಸಿನಿಮಾ ಮಂದಿಗೆಲ್ಲಾ ಅವನೇ ಡ್ರೆಸ್ ಡಿಸೈನ್ ಮಾಡ್ತಾನೆ ಅಂತ ಅವನ ಅಮ್ಮ ಹೇಳಿದ್ದರು.
ಮಾತುಕತೆ ಮುಂದುವರಿದು ಎಂಗೇಜ್‍ಮೆಂಟ್ ಕೂಡ ಮುಗಿದಿತ್ತು. ರಾಹುಲ್ ಬಹಳ ಕಡಿಮೆ ಮಾತನಾಡುತ್ತಿದ್ದ. ನಾನೆ ಅವನನ್ನು ಪ್ರಶ್ನಿಸಿ ಅದಕ್ಕೆ ನಾನೆ ಉತ್ತರ ಕೊಡುತ್ತಿದ್ದೆ. ಅವನು ಹೂಂಗುಡುತ್ತಿದ್ದನಷ್ಟೆ. ಮೊದಲಿನಿಂದಲೂ ತುಂಬಾ ಮಾತನಾಡುವ ನನಗೆ ರಾಹುಲ್ ನ ವರ್ತನೆ ಕಸಿವಿಸಿ ಎನಿಸಿದರೂ ಮುಂದೆ ಸರಿ ಹೋಗಬಹುದೇನೋ ಎಂದು ನನಗೇ ನಾನೇ ಸಾವಧಾನಿಸಿಕೊಳ್ಳುತ್ತಿದ್ದೆ. ಕಾರಿನ ಬಾಗಿಲು ತೆರೆದ ಸದ್ದು ನನ್ನನ್ನು ಯೋಚನಾ ಲಹರಿಯಿಂದ ಹೊರತಂದಿತು. ಸಕಲ ಶಾಸ್ತ್ರಗಳೊಂದಿಗೆ ನಾನು ರಾಹುಲ್ ನ ಮಡದಿಯಾಗಿ ಮುಂಬಯಿ ಎನ್ನುವ ಮಾಯಾನಗರಿಗೆ ಕಾಲಿರಿಸಿದ್ದೆ. ಊರು ಭಾಷೆ ಎಲ್ಲವೂ ಬೇರೆ. ರಾಹುಲ್ ನನ್ನ ಬಳಿ ಮಾತನಾಡುವುದೇ ಅಪರೂಪ ಅದರಲ್ಲೂ ಬಾಯಿಬಿಟ್ಟರೆ ಸಾಕು ಹಿಂದಿ ಉದುರಿಸುತ್ತಿದ್ದ.
ಅವನ ತಂದೆ ತಾಯಿ ಚೆನ್ನಾಗಿಯೇ ಮಾತನಾಡಿಸುತ್ತಿದ್ದರು. ಆದರೆ ಅವನೇ ಯಾಕೋ ನನ್ನನ್ನು ಕಂಡರೆ ರೇಗುತ್ತಿದ್ದ. ಹೊಸ ಜನ, ಹೊಸ ಊರು , ಹೊಸ ರೀತಿಯ ಜೀವನ ತುಸು ಕಂಗಾಲಾಗಿದ್ದೆ. ರಾಹುಲ್ನ ಮನೆಯಂತೂ ಅರಮನೆಯಂತಿತ್ತು. ಮನೆತುಂಬಾ ಆಳುಕಾಳುಗಳು. ಪಪ್ಪಾ ಹೇಳಿದ್ರಲ್ವಾ? ‘ಅಲ್ಲಿ ನೀನು ರಾಜಕುಮಾರಿಯ ಹಾಗೆ ಇರ್ತಿ ‘ ಅಂತ. ಆಗ ಖುಷಿಯಿಂದ ಸಂಭ್ರಮಿಸಿದ್ದೆ. ಆದರೆ ವಾಸ್ತವ ವಿಚಿತ್ರವೆನಿಸಿತ್ತು. ಎಲ್ಲರೂ ಅವರವರ ಪಾಡಿಗಿದ್ದರು. ಒಂದು ರೂಂನಿಂದ ಇನ್ನೊಂದು ರೂಂಗೆ ಫೋನಾಯಿಸಿ ಮಾತನಾಡುತ್ತಿದ್ದರು.
‘ನನ್ನ ಮನೇಲೆ ನಾನು ರಾಜಕುಮಾರಿ ಥರ ಇದ್ದೆ ಅಲ್ವಾ? ಇಲ್ಲಿ ಹೊತ್ತು ಹೊತ್ತಿಗೆ ಊಟ, ತಿಂಡಿ ಸಿಗುತ್ತೆ ಬಿಟ್ಟರೆ ಬಾಯಿ ತುಂಬಾ ಮಾತನಾಡೋಕೆ ಯಾರೂ ಇಲ್ಲ’ ಮನಸ್ಸು ರೋಧಿಸಿತು.
ಅದೊಂದು ದಿನ ಬಕೆಟ್ಗೆ ಬಿಸಿನೀರು ತುಂಬಿಸುತ್ತಿದ್ದೆ , ರಾಹುಲ್ ಅದನ್ನು ನೋಡಿದವನೇ,”ಏ ಕ್ಯಾ ಕರ್ ರಹೀ ಹೋ?” ಎಂದು ಕೇಳಿದ. “ಸ್ನಾನಕ್ಕೆ ಬಿಸಿನೀರು ತುಂಬಿಸಿ ಕೊಳ್ತಾ ಇದ್ದೇನೆ. ತಲೆ ಸಾ ತೊಳಿಬೇಕು” ಎಂದೆ. “ಅರೆ ಇದನ್ನು ತಿರುಗಿಸು ಶವರ್ ಸೇ ಬಿಸಿನೀರು ಬರ್ತದೆ” ನನಗೆ ಖುಷಿಯಾಗಿತ್ತು ಮದುವೆಯ ನಂತರ ಮೊದಲ ಬಾರಿ ರಾಹುಲ್ ನನ್ನ ಜೊತೆ ಮಾತನಾಡಿದ್ದ. ಅವನೆಂದಂತೆ ಶವರ್ ಆನ್ ಮಾಡಿ ಚೆನ್ನಾಗಿ ಸ್ನಾನ ಮುಗಿಸಿಕೊಂಡು ಹೊರ ಬಂದೆ.
ಕಥೆಗಾರ್ತಿ ತಿಲಕಾ ನಾಗರಾಜ್ ಹಿರಿಯಡಕ
ರಾಹುಲ್ ಬೆಡ್ ಮೇಲೆ ಕುಳಿತು ಲ್ಯಾಪ್‌ಟಾಪ್ ಒತ್ತುತ್ತಿದ್ದ. “ಎಂತ ಗೊತ್ತುಂಟಾ? ನಾನು ಚಿಕ್ಕವಳಿರುವಾಗ ನಮ್ಮ ಊರಲ್ಲಿ ಸೂರ್ಯನ ಮನೆಯಲ್ಲಿ ಮಾತ್ರ ಪಂಪ್ ಸೆಟ್ ಇದ್ದದ್ದು. ಅವರು ಪಂಪ್ ಆನ್ ಮಾಡಿದ್ರೆ ಸಾಕು ತೋಡಲ್ಲಿ ನೀರು ಬರ್ತಿತ್ತು, ಈಗಿನ ಹಾಗೆ ಪೈಪ್ ಇರ್ಲಿಲ್ಲ ಆಗ ಹಾಗಾಗಿ. ಅದು ಮೇಲಿಂದ ಕೆಳಗಿನ ತೋಡಿಗೆ ಜಲಪಾತದ ಹಾಗೆ ಬೀಳ್ತಾ ಇತ್ತು. ಆಗ ನನ್ನ ದೊಡ್ಡ ಅಜ್ಜಿ ಅಲ್ಲಿ ಕರ್ಕೊಂಡು ಹೋಗಿ ಸಮಾ ನೊರೆಕಾಯಿ ಹಾಕಿ ತಲೆ ತೊಳಿಸ್ತಾ ಇದ್ರು. ಈಗ ಶವರ್ ನಲ್ಲಿ ತಲೆ ತೊಳಿವಾಗ ನಂಗೆಲ್ಲಾ ನೆನಪಾಯ್ತು ಹಹ್ಹಹ್ಹಹ್ಹ”
ರಾಹುಲ್ ನನ್ನನ್ನು ದುರುಗುಟ್ಟಿ ನೋಡಿ “ಥೋಡ ಸ್ಟ್ಯಾಂಡರ್ಡ್ ಮೇಂಟೇನ್ ಕರ್‍ನಾ ಸೀಕ್ಲೊ” ಎನ್ನುತ್ತಾ ಹೊರನಡೆದ. ಸ್ವಲ್ಪ ಜಾಸ್ತಿ ಮಾತನಾಡಿದ್ನಾ? ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. ಪರ್ವಾಗಿಲ್ಲ ನನ್ನ ಗಂಡನ ಜೊತೆ ಮಾತಾನಾಡಿದ್ದು ತಾನೆ? ನನಗೆ ನಾನೇ ಸಮಾಧಾನಿಸಿಕೊಂಡೆ. ಅವತ್ತು ರಾಹುಲ್ನ ಗೆಳೆಯನೊಬ್ಬನ ಮದುವೆಗೆಂದ, ತಾಯಿಯ ಒತ್ತಾಯಕ್ಕೆ ಮಣಿದು ನನ್ನನ್ನೂ ಕರೆದುಕೊಂಡು ಹೋದವನೇ ಊಟವೂ ಮಾಡದೆ ನನ್ನನ್ನು ಧರಧರನೆ ಎಳೆದುಕೊಂಡು ಬಂದಿದ್ದ. ಅವನ ತಾಯಿ ಏನಾಯ್ತು ಎಂದು ಪ್ರಶ್ನಿಸಿದಾಗ “ನಿಮ್ಮ ಬಹುಗೇ ಹೇಗೆ ಇರಬೇಕೂಂತ ಕಲಿಸಿ, ಹೋದ ಕಡೆಯಲ್ಲಿ ನನ್ನ ಮರ್ಯಾದೆ ತೆಗಿತಾಳೆ ಪಾಗಲ್” ಎಂದು ಹೇಳಿ ತನ್ನ ರೂಂ ಸೇರಿಕೊಂಡ, “ಏನು ಇಲ್ಲ ಮಾಮಿ, ಮದುವೆಗೆ ಬಂದ ರಾಹುಲನ ಗೆಳತಿಯೊಬ್ಬಳು ಹಾಯ್ ಅಂತ ಹೇಳ್ತಾ ಅವನನ್ನು ಅಪ್ಪಿಕೊಳ್ಳಲಿಕ್ಕೆ ಬಂದಳು, ನನ್ನ ಕಣ್ಣ ಮುಂದೆ ನನ್ನ ಗಂಡನನ್ನು ಇನ್ನೊಬ್ಬಳು ತಬ್ಬಿಕೊಳ್ಳಲಿಕ್ಕೆ ನಾನು ಬಿಡ್ತೇನಾ? ಅವರಿಬ್ಬರ ಮಧ್ಯೆ ಹೋಗಿ ನಿಂತುಕೊಂಡೆ, ಅದಕ್ಕೆ ಇಬ್ಬರಿಗೆ ಸಾ ಸಿಟ್ಟು ಬಂತು. “ನನ್ನ ಮಾತು ಕೇಳಿ ಅತ್ತೆ ಜೋರಾಗಿ ನಕ್ಕಾಗ ನನಗೆ ತುಸು ಸಮಾಧಾನವಾಗಿತ್ತು. ಅದಾರದ್ದೋ ಪಾರ್ಟಿಗೆ ಮನೆಯವರಿಗೆಲ್ಲಾ ಆಹ್ವಾನಿಸಿ ಹೋಗಿದ್ದರು. ನಾನು ಚೆಂದದ ಸೀರೆಯುಟ್ಟು ತಯಾರಾಗಿದ್ದನ್ನು ನೋಡಿ ರಾಹುಲ್ ಬಿದ್ದು ಬಿದ್ದು ನಗತೊಡಗಿದ.
“ಪಾರ್ಟಿ ಮೇ ಐಸೆ ಜಾತೆ ಹೇ ಕ್ಯಾ?”
“ಮತ್ತೆ?” ಏನೂ ಅರಿಯದೆ ಕೇಳಿದೆ.
“ನೀನು ಮೂವೀಸ್ ನೋಡಿಲ್ಲವಾ?” ಅವನು ಪ್ರಶ್ನಿಸಿದ್ದ. “ನೋಡಿದೇನೆ, ನಂಗೆ ತುಂಬಾ ಇಷ್ಟ ಪಿಕ್ಚರ್ ನೋಡುದಂದ್ರೆ…” ಖುಷಿಯಿಂದ ಹೇಳಿದೆ.
“ಬಾಲಿವುಡ್, ಹಾಲಿವುಡ್ ಮೂವೀಸ್ ನೋಡಿದ್ಯಾ?” ಅವನೇನು ಕೇಳಿದನೆಂದು ಅರ್ಥವಾಗದೆ ಮಿಕ ಮಿಕ ನೋಡಿದೆ. “ಅರೆ ಪಾಗಲ್ ಬಾಲಿವುಡ್ ಕಾ ಮತ್ ಲಬ್ ಹಿಂದಿ ಮೂವೀಸ್, ಹಾಲಿವುಡ್ ಅಂದ್ರೆ ಇಂಗ್ಲೀಷ್ ಸಿನಿಮಾಗಳು” ಅವನೆಂದಾಗ ನಾನು ತುಸು ಹರ್ಷದಿಂದಲೇ ನುಡಿದೆ.. “ಹಿಂದಿ ಪಿಕ್ಚರ್ಸ್ ಸುಮಾರ್ ನೋಡಿದೇನೆ… ಇಂಗ್ಲೀಷ್ ಎರಡಾ , ಮೂರಾ ನೋಡಿದ್ದೇನೆ. ಅದರಲ್ಲಿ ಒಂದು ಶಾಲೆಯಲ್ಲಿ ತೋರಿಸಿದ್ರು” ಅವನು ತುಸು ಶಾಕ್ ಆದವನಂತೆ ಕೇಳಿದ ” ವ್ಹಾಟ್? ಇಂಗ್ಲೀಷ್ ಮೂವಿ ಸ್ಕೂಲ್ ಮೇ ..? ಹೇಸರೇನು?” “ಜುರಾಸಿಕ್ ಪಾರ್ಕ್” ನನ್ನ ಉತ್ತರ ಕೇಳಿ ಮತ್ತೆ ನಕ್ಕು ಪ್ರಶ್ನೆ ಮಾಡಿದ,
“ಬೇರೆ”,”ಜುರಾಸಿಕ್ ಪಾರ್ಕ್ ಪಾರ್ಟ್ ೨ ಮತ್ತೆ ನಾರ್ನಿಯಾ ಅಷ್ಟೇ”, “ಅರೆ ಪಾಗಲ್ ಲಡ್ಕೀ ಅದೆಲ್ಲಾ ಮಕ್ಕಳ ಸಿನೇಮಾ, ಛೋಡೋ ಹಿಂದಿ ದೇಕಿ ಹೇನಾ? ಅದರಲ್ಲಿ ಪಾರ್ಟಿಗೆ ಇದೇ ಥರಾ ಹೋಗ್ತಾರಾ?” ಎಂದವನೆ ತನ್ನ ಬೀರುವಿನಲ್ಲಿದ್ದ ಪುಸ್ತಕವೊಂದನ್ನು ತೆರೆದು ಅದರಲ್ಲಿದ್ದ ಫೋಟೋಗಳನ್ನು ತೋರಿಸುತ್ತಾ ” ಈ ಡಿಸೈನ್ಸ್ ನೋಡು ನಾನೇ ಮಾಡಿರೋದು ಈ ಥರಾ ಬಟ್ಟೆ ಇದ್ರೆ ಪೆಹೆನೋ..” ಅವುಗಳನ್ನು ನೋಡಿ ಅಸಹ್ಯದಿಂದ ಮುಖ ಸಿಂಡರಿಸಿದೆ. ಅಂತಹ ಬಟ್ಟೆಗಳು ನನ್ನಲ್ಲಿ ಇಲ್ಲ, ನಾನು ಹಾಕೋದೂ ಇಲ್ಲ ಎಂದು ಖಡಾಖಂಡಿತವಾಗಿ ನುಡಿದಾಗ, ನನ್ನನ್ನು ಬಿಟ್ಟು ಎಲ್ಲರೂ ಪಾರ್ಟಿಗೆ ನಡೆದರು.
ಈ ಮಧ್ಯೆ ಮುಂಬಯಿಯಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿ ರಾಹುಲನ ಮುಡಿಗೇರಿತ್ತು. ಅದೇ ಖುಷಿಗೆ ತನ್ನ ಸ್ನೇಹಿತರಿಗೆಲ್ಲಾ ಮನೆಯಲ್ಲಿಯೇ ಪಾರ್ಟಿ ಇಟ್ಟುಕೊಂಡಿದ್ದ. ನಾನು ಎಂದಿನಂತೆ ಚಂದದ ಸೀರೆ ಉಟ್ಟುಕೊಂಡು ತಯಾರಾಗಿದ್ದೆ. ಎಲ್ಲರ ಆಗಮನವಾಗಿತ್ತು. ರಾಹುಲ್ನ ಸ್ನೇಹ ಬಳಗದಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಜಾಸ್ತಿಯಿತ್ತು. ನನಗೋ ಅವರ ಉಡುಗೆ ತೊಡುಗೆಗಳನ್ನು ನೋಡಿ ವಾಕರಿಕೆ ಬರುವಂತಾಗಿತ್ತು. ಅವರೋ ನನ್ನ ಉಡುಗೆ ಕಂಡು ಮುಸಿ ಮುಸಿ ನಗುತ್ತಿದ್ದರು. ರಾಹುಲ್ನ ಅಪ್ಪ ಅಮ್ಮ ಕೂಡ ಖುಷಿ ಖುಷಿಯಿಂದ ಎಲ್ಲರ ಜೊತೆ ನಗುನಗುತ್ತಾ ಮಾತನಾಡುತ್ತಿದ್ದರು. ನಾನೋ ಒಂದು ಮೂಲೆಯಲ್ಲಿ ಎಲ್ಲವನ್ನೂ ಮೂಕ ಪ್ರೇಕ್ಷಕಿಯಂತೆ ಕುಳಿತು ನೋಡುತ್ತಿದ್ದೆ. ಯಾರೋ ಒಬ್ಬ ನನ್ನ ಮುಂದೆ ಬಂದು ‘ಮೇಡಂ ಜ್ಯೂಸ್ “ಎಂದು ಕೈಚಾಚಿದ. ನಾನು ಬೇಡವೆಂದು ಅಲ್ಲಿಂದೆದ್ದು ಬೇರೆಡೆ ಹೋಗಿ ಕುಳಿತೆ. ರಾಹುಲ್ ನ ಅಪ್ಪ ,ಅಮ್ಮ ಎಲ್ಲರಿಗೂ ವಿದಾಯ ಹೇಳಿ ತಮ್ಮ ಕೋಣೆಯನ್ನು ಸೇರಿಕೊಂಡರು.
ಅವರೂ ಇತ್ತೀಚೆಗೆ ನನ್ನ ಬಳಿ ಮಾತನಾಡುವುದನ್ನು ಕಡಿಮೆಗೊಳಿಸಿದ್ದರು. ಮನಸ್ಸಿಗೆ ಯಾಕೋ ಖೇದವೆನಿಸಿ, ನನ್ನ ರೂಂನತ್ತ ನಡೆದೆ. ಮತ್ತದೇ ಜ್ಯೂಸ್ ಹಿಡಿದ ಆ ವ್ಯಕ್ತಿ ಎದುರಾದ, ” ಬೇಡ ” ಎಂದೆ.
“ಅರೆ ಲೇಲೋನಾ ಬಹುತ್ ಅಚ್ಛಾ ಹೇ” ದುರುಗುಟ್ಟಿ ನೋಡಿ ಪ್ರಶ್ನಿಸಿದೆ “ನಾನ್ಯಾರೂಂತ ಗೊತ್ತಾ?” ಅವನು ವ್ಯಂಗ್ಯವಾಗಿ ನಕ್ಕ. ರಾಹುಲ್ನತ್ತ ಓಡಿ ಹೋಗಿ ” ರಾಹುಲ್ ಅ… ಅ… ವ..ನು” ಎಂದು ತಡವರಿಸಿದಾಗ “ಎ ಕ್ಯಾ ಪಾಗಲ್ ಪನ್ ಹೆ ತೆರಾ?” ಎಂದು ಹಲ್ಲು ಮಸೆದ. ಅವನ ಬಾಯಿಂದ ಬಂದ ಘಾಟಿನಿಂದ ನನಗೆ ವಾಕರಿಕೆ ಬಂದ ಹಾಗಾಯ್ತು. ಅಷ್ಟರಲ್ಲಿ ಆ ವ್ಯಕ್ತಿ ನಮ್ಮತ್ತ ಬಂದಿದ್ದ. “ಅರೆ ರಾಹುಲ್, ಎ ಕೌನ್ ಹೆ? ಸಾಡಿ ಮೆ ತೋ ಮಸ್ತ್ ಲಗ್ ರಹೀ ಹೆ” ಮನದ ತುಂಬಾ ಭಯ ಆವರಿಸಿ ಕೈಕಾಲುಗಳು ನಡುಗಲಾರಂಭಿಸಿದವು. “ಮಸ್ತ್ ಹೆ ತೋ ತೂಹಿ ರಕ್ ಲೋ” ಎಂದ ರಾಹುಲ್ ಜೋರಾಗಿ ನಕ್ಕ. “ರಾಹುಲ್ ನಿನ್ನ ಹೆಂಡತಿ ನಾನು” ನಾನು ಕಿರುಚಿದೆ. “ಹೆಂಡತಿಯ ಹಾಗೆ ನಾನು ನಿನ್ನನ್ನು ಯಾವತ್ತಾದರೂ ಟ್ರೀಟ್ ಮಾಡಿದ್ದೇನಾ? ಮೆ ತೊ ತುಮ್ಹೆ ಚೂವಾ ತಕ್ ನಹಿ ಗಾಂವ್ ವಾಲಿ ಪಾಗಲ್”,’ಹೌದು ರಾಹುಲ್ ನನ್ನನ್ನು ಯಾವತ್ತೂ ಹೆಂಡತಿ ಥರ ನೋಡಿಲ್ಲ, ಹಾಗಂತ ಯಾವನಿಗೋ ನನ್ನನ್ನು ಇಟ್ಟುಕೋ ಅಂತಾನಲ್ಲ ಛೀ’ ಮೊದಲ ಬಾರಿಗೆ ಅವನ ಬಗ್ಗೆ ಅಸಹ್ಯವೆನಿಸಿತ್ತು.
ಆದರೆ ನನ್ನನ್ನು ನಾನು ಕಾಪಾಡಿಕೊಳ್ಳಬೇಕಿತ್ತು. ಓಡಿ ಹೋಗಿ ನನ್ನ ರೂಂ ಸೇರಿಕೊಂಡು ಬಾಗಿಲು ಭದ್ರಪಡಿಸಿಕೊಂಡೆ. ಹೊರಗಿನಿಂದ ಅವನು ಬಾಗಿಲು ಬಡಿಯುತ್ತಿದ್ದ “ಖೋಲೋನ ತುಮ್ಹೆ ದೇಖಕರ್ ಮೆ ಪಾಗಲ್ ಹೋಗಯಾ ಹುಂ”,’ಛಿ ಕಟ್ಟಿಕೊಂಡವನು ಮಾತು ಮಾತಿಗೂ ಹುಚ್ಚಿ ಹುಚ್ಚಿ ಎನ್ನುತ್ತಾ ಚುಚ್ಚುತ್ತಿದ್ದರೆ ಯಾರೋ ಮೂರನೆಯವನಿಗೆ ನನ್ನ ಸೌಂದರ್ಯ ನೋಡಿ ಹುಚ್ಚು ಶುರುವಾಗಿದೆಯಂತೆ, ಭಗವಂತ ಏನು ಮಾಡಲಿ?’ ಬೆಳಗಾಗುವುದನ್ನೇ ಕಾಯತೊಡಗಿದೆ.
“ಎಂತ ಪ್ರಕೃತಿ ನಿಂಗೆ ಮಂಡೆ ಸರಿ ಇಲ್ಲವಾ , ರಾತ್ರಿ ಇಡೀ ನನ್ನ ಮಗ ಬಾಗಿಲು ಬಡಿದರೂ ನೀನು ತೆಗಿಯಲಿಲ್ಲ ಅಂತೆ” ರಾಹುಲ್ನ ಅಮ್ಮ ನನ್ನನ್ನು ತರಾಟೆಗೆ ತೆಗೆದುಕೊಂಡರು. ‘ಅಂದರೆ ಕತೆಯನ್ನು ತಿರುಚಿದ್ದಾನಿವನು. ನಾನಿನ್ನು ಸುಮ್ಮನಿದ್ದರೆ ನನ್ನ ಬದುಕನ್ನು ಇವನು ನುಂಗಿ ನೀರು ಕುಡಿಯುತ್ತಾನೆ’ ಎಂಬುದು ಖಾತ್ರಿಯಾಗಿ ರಾತ್ರಿ ನಡೆದುದೆಲ್ಲವನ್ನೂ ತಿಳಿಸಿದೆ. ಅವನ ಅಮ್ಮ ಅವನತ್ತ ಸಿಟ್ಟಿನಿಂದ ನೋಡಿದಾಗ ” ಬೇಡ ಬೇಡ ಅಂತ ಹೇಳಿದರೂ ಕೇಳದೆ ನನಗೆ ಇಸ್ ಪಾಗಲ್ ಲಡ್ಕಿಯನ್ನ ಕಟ್ಟಿದ್ರಿ. ನನಗೆ ಇವಳು ಇಷ್ಟ ಇಲ್ಲ” ಅವನು ಕಿರುಚಿದ್ದ. “ರಾಹುಲ್” ಅವನ ತಂದೆ ಅವನಿಗಿಂತಲೂ ಜೋರಾಗಿ ಕಿರುಚಿದಾಗ, “ಪಾಪ ಅವಾಜ್ ನೀಚೆ. ಅವಳ ಜೊತೆ ನೀವು ಮನೆಯಿಂದ ಹೊರಗೆ ಹೋಗ್ತೀರಿ ಅಷ್ಟೇ “.
ರಾಹುಲ್ನ ಸಂಪಾದನೆ ಅವನನ್ನು ಇಷ್ಟೆಲ್ಲಾ ಮಾತನಾಡಿಸುತ್ತಿದೆ ಎಂಬುದು ಅರಿವಾಗಿತ್ತು. ಯಾವುದೇ ಅನಾಹುತ ಸಂಭವಿಸುವ ಮುನ್ನ ನಾನೇ ಹೊರಹೋಗಿ ಬಿಡುತ್ತೇನೆ ಎಂದುಕೊಂಡವಳೇ ಕೈಗೆ ಸಿಕ್ಕಿದ ಬಟ್ಟೆಗಳನ್ನು ಬ್ಯಾಗೊಂದರಲ್ಲಿ ತುರುಕಿ ಕೊಂಡು ಹೊರಟವಳನ್ನು ಅವನ ದನಿ ತಡೆಯಿತು. ” ರುಕ್ ಜಾವೋ, ಜಾನೇ ಸೆ ಪೆಹೆಲೆ ಇಸ್ ಕಾಗಜ್ ಪರ್ ಸೈನ್ ಕರ್ ಕೆ ಜಾವೋ” ಡಿವೋರ್ಸ್ ಪೇಪರ್, ಅವನೇ ಅಸಹ್ಯ ಹುಟ್ಟಿಸಿದ್ದಾನೆಂದಾದ ಮೇಲೆ ಗಂಡನೆಂಬ ಸಂಬಂಧದ ಹಂಗು ನನಗೇಕೆ ಸಹಿ ಹಾಕಿ ಅವನ ಮುಖಕ್ಕೆಸೆದು ಹೊರಟೆ.
ಎಲ್ಲಿಗೆ ಹೋಗಲಿ? “ಎಂತ ಹೆಲ್ಪ್ ಬೇಕಾದ್ರೂ ನಮಗೆ ಫೋನ್ ಮಾಡಾಯ್ತ” ಗೆಳೆಯರ ಮಾತು ನೆನಪಾಯ್ತು. ಇಲ್ಲ ಅವರಿಗೆ ಯಾವ ವಿಷಯವೂ ತಿಳಿಯಬಾರದು, ಪ್ರೀತಿಯ ಗೆಳತಿ ವರ್ಷಾ ಬದುಕಲ್ಲಿ ಸೋತಾಗ ಬದುಕನ್ನೇ ಕೊನೆಗಾಣಿಸಿಕೊಂಡಳು. ಈಗ ನಾನು ಅವಳ ಸ್ಥಾನದಲ್ಲಿದ್ದೇನೆ. ಹಾಗಂತ ಅವಳಂತೆ ಪ್ರಾಣ ಕಳೆದುಕೊಳ್ಳಲಾರೆ. ರಾಹುಲ್ನಿಗಿಂತ ಎತ್ತರದ ಸ್ಥಾನಕ್ಕೆ ಏರಬೇಕು. ಬೆಂಗಳೂರಿನ ಬಸ್ ಹತ್ತಿದೆ. ಎರಡು ದಿನಗಳಲ್ಲಿ ಕೈಯಲ್ಲಿದ್ದ ಪುಡಿಗಾಸು ಖರ್ಚಾಗಿತ್ತು. ಸೋಲಬಾರದೆಂದುಕೊಂಡವಳು ಸೋತು ಸಾವಿಗೆ ಶರಣಾಗ ಹೊರಟವಳನ್ನು ಕಾಪಾಡಿದ್ದು ಗೆಳೆಯ ಸೂರ್ಯ. ಕಣ್ಣುಗಳು ಕಿಟಕಿಯಾಚಿನ ಪ್ರಪಂಚದಲ್ಲಿ ಲೀನವಾಗಿತ್ತು. ಸೋಲಿನ ಹೊಡೆತಕ್ಕೆ ಸಿಲುಕಿದ ಮನಸ್ಸು ಮುಂದೇನು? ಎಂಬ ತಾಕಲಾಟದ ಅಲೆಗಳೊಂದಿಗೆ ಹೋರಾಟಕ್ಕೆ ನಿಂತಿತ್ತು. ಅದಾಗಲೇ ಕುಡಿದು ಮುಗಿಸಿದ್ದ ಚಹಾದ ಲೋಟ ಕೈಜಾರಿ ಬಿದ್ದ ಸದ್ದಿಗೆ ಸೂರ್ಯ “ಏನಾಯ್ತು” ಎನ್ನತ್ತಾ ಒಳಬಂದ. ಥಟ್ಟನೆ ನನ್ನ ದೃಷ್ಟಿ ಅವನ ಕೈಲಿದ್ದ ದಿನಪತ್ರಿಕೆಯತ್ತ ಹೊರಳಿತ್ತು.
“ಲಾರಿ ಡಿಕ್ಕಿ:ಸ್ಥಳದಲ್ಲೇ ಯುವತಿಯ ದುರ್ಮರಣ” ಅರಿವಿಲ್ಲದೆ ತುಟಿಗಳು ವಿಷಾದದ ನಗೆ ಸೂಸಿತ್ತು. “ಯಾಕೆ ನಗ್ತಿದ್ದೀಯಾ?” ಸೂರ್ಯ ಅರ್ಥವಾಗದೆ ಕೇಳಿದ್ದ. “ಏನಿಲ್ಲವಾ.. ನೀನು ನಿನ್ನೆ ಸರಿಯಾದ ಸಮಯಕ್ಕೆ ಬರದೆ ಇದ್ದಿದ್ದರೆ ಇವತ್ತು ನನ್ನ ಸುದ್ದಿ ಸಾ ಪೇಪರಲ್ಲಿ ಬರ್ತಿತ್ತು. ‘ರೈಲ್ವೆ ಹಳಿಯ ಮೇಲೆ ಅಪರಿಚಿತ ಯುವತಿಯ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ ‘ ಅಂತಾ… ಹ್ಹಹ್ಹಹ್ಹ” ಜೋರಾಗಿ ನಕ್ಕಿದ್ದನ್ನು ನೋಡಿ ಸೂರ್ಯ. ” ಕಪಾಳಕ್ಕೆರಡು ಬಾರಿಸ್ತೀನಿ ನೋಡು” ಎನ್ನುತ್ತಾ ಹೊರನಡೆದ. ಸ್ವಲ್ಪ ಸಮಯದ ನಂತರ ಮೆಲ್ಲನೆದ್ದು ಹೊರಬಂದೆ.
“ಏನು ಡಿಸೈಡ್ ಮಾಡಿದೆ?” ಪೇಪರಿನಿಂದ ತಲೆ ಎತ್ತದೆ ಕೇಳಿದ್ದನವನು. “ಅವನಿಗಿಂತ ಒಳ್ಳೆ ಫ್ಯಾಷನ್ ಡಿಸೈನರ್ ಆಗ್ಬೇಕು ನಾನು. ನೀನು ಸಹಾಯ ಮಾಡ್ತೀಯ ನನಗೆ?” ನನ್ನ ನಿರ್ಧಾರ ಕೇಳಿ ಸೂರ್ಯನ ಕಂಗಳು ಹೊಳೆದವು.
ಮರುದಿನವೆ ನನ್ನ ಕನಸಿಗೆ ಚಾಲನೆ ಸಿಕ್ಕಿತ್ತು. ಅತೀ ಸಣ್ಣ ವಯಸ್ಸಿನಲ್ಲಿಯೇ ಊರ ತೊರೆದಿದ್ದ ಸೂರ್ಯ ಬೆಂಗಳೂರು ಸೇರಿ ಒಳ್ಳೆಯ ಫೋಟೋಗ್ರಾಫರ್ ಆಗಿ ಹೆಸರು ಗಳಿಸಿದ್ದ. ಅವನು ಹೇಳಿದಂತೆ ಮನಸ್ಸಿಟ್ಟು ಕಲಿತೆ. ನಡುನಡುವೆ ಅಪ್ಪ, ಅಮ್ಮನ ನೆನಪು ಬಂದಾಗ ಸೂರ್ಯನೇ ಧೈರ್ಯ ತುಂಬಿ “ನೀನು ಒಳ್ಳೆ ಡಿಸೈನರ್ ಆಗು , ನಾನೇ ನಿನ್ನನ್ನ ಊರಿಗೆ ಕರ್ಕೊಂಡು ಹೋಗ್ತೀನಿ ” ಎನ್ನುತ್ತಿದ್ದ. ಆದರೂ ಒಂದು ಬಾರಿ ನನ್ನ ಒತ್ತಾಯಕ್ಕೆ ಸೂರ್ಯ ಊರಿಗೆ ಹೋಗಿದ್ದ. ನಮ್ಮ ಮನೆಗೆ ಹೋಗಿದ್ದಾಗ ಅಲ್ಲಿ ತುಂಬಾ ಜನ ನೆರೆದಿದ್ದನ್ನು ಕಂಡು ಆತಂಕದಿಂದ ಒಳ ನುಗ್ಗಿದಾಗ ಅಲ್ಲಿ ಪಂಜುರ್ಲಿ ದೈವದ ದರ್ಶನ ನಡೆಯುತ್ತಿತ್ತಂತೆ. ಅಪ್ಪ “ಮಗಳು ಪರವೂರು ಸೇರಿದ್ದಾಳೆ, ಅವಳ ಸುದ್ದಿ ಇಲ್ಲ ಅದೇನು? , ನನ್ನ ಮಗು ಹೇಗಿದೆ? ಅಂತ ನೀನೆ ಹೇಳಬೇಕು ಪಂಜುರ್ಲಿ” ಎಂದು ಕೈ ಮುಗಿದಾಗ ದೈವ ಸೂರ್ಯನತ್ತ ಒಮ್ಮೆ ನೋಡಿ ” ಮಗು ಸೇರಬೇಕಾದ ಕಡೆಗೇ ಸೇರಿದೆ. ಕಾಲ ಬಂದಾಗ ನಿಮಗೆ ಅದರ ಗೋಚರವಾಗುತ್ತದೆ ” ಎಂಬ ಅಭಯವನ್ನಿತ್ತಾಗ ಅಪ್ಪ ನಿರಾಳರಾಗಿದ್ದರಂತೆ.
ಸೂರ್ಯನಿಂದ ವಿಷಯ ತಿಳಿದು ಕಂಗಳು ಹನಿಗೂಡಿದ್ದವು.ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ನಾನು ಡಿಸೈನ್ ಮಾಡಿದ ಡ್ರೆಸ್ ಗೆ ಪ್ರಥಮ ಬಹುಮಾನ ಬಂದಾಗ ಸೂರ್ಯ ನನಗಿಂತಲೂ ಹೆಚ್ಚು ಸಂಭ್ರಮಿಸಿದ್ದ. ಸಿನೆಮಾ ತಾರೆಯರಿಗೂ ಡಿಸೈನ್ ಮಾಡುವ ಅವಕಾಶ ಸಿಕ್ಕಿತ್ತು. ನನ್ನ ಕೆಲಸ ಕಂಡು ಬಾಲಿವುಡ್ ನಿಂದಲೂ ಆಫರ್ ಹುಡುಕಿಕೊಂಡು ಬಂದವು. ಎಲ್ಲರಿಗೂ ಫೆವರಿಟ್ ಡಿಸೈನರ್ ಆಗಿದ್ದ ರಾಹುಲನನ್ನು ಹಿಂದಿಕ್ಕಿ ನಾನು ಮುಂದುವರೆದಿದ್ದೆ. ನ್ಯಾಷನಲ್ ಅವಾರ್ಡ್ ಕೂಡ ನನ್ನನ್ನು ಹುಡುಕಿಕೊಂಡು ಬಂದಿತ್ತು. ನಾನು ದಿಲ್ಲಿಗೆ ಹೋಗಬೇಕಾಗಿತ್ತು. ಸೂರ್ಯ ಸಂಭ್ರಮದಿಂದ ನನ್ನನ್ನು ಕಳುಹಿಸಿದ್ದ, ಆದರೆ ನನಗೋ ಬಹಳ ಬೇಸರವಾಗುತ್ತಿತ್ತು. ಪ್ರಶಸ್ತಿ ಸ್ವೀಕರಿಸುವಾಗ ನನ್ನವರು ಎನಿಸಿಕೊಂಡ ಯಾವ ವ್ಯಕ್ತಿಯೂ ಇಲ್ಲವಲ್ಲ ಎಂಬ ದುಗುಡದಿಂದಲೇ ಹೊರಬಂದವಳಿಗೆ ವಾಹನವೊಂದು ಗುದ್ದಿತ್ತು.
ಮೆಲ್ಲನೆ ಕಣ್ಣು ತೆರೆದೆ. ಅಪ್ಪ, ಅಮ್ಮ ಸೂರ್ಯ, ಅಭಿ, ತರುಣ್,ವಿವೇಕ್,ಮನು ಎಲ್ಲರೂ ಕಂಡರು. ‘ಎಲ್ಲವೂ ಭ್ರಮೆ’ ಎನ್ನುತ್ತಾ ನಿಟ್ಟುಸಿರೊಂದ ಹೊರದಬ್ಬಿ ಕಣ್ಮುಚ್ಚಿದೆ. “ಪುಟ್ಟಿ” ಅಪ್ಪನ ದನಿ. ಅಂದರೆ ಕಣ್ಣ ಮುಂದೆ ಕಂಡಿದ್ದು ಸುಳ್ಳಲ್ಲ , ನಿಜ ಮತ್ತೆ ಕಣ್ತೆರೆದೆ. ಎಲ್ಲರೂ ನಗುತ್ತಿದ್ದರು. “ನಿಂಗೇನು ಆಗಿಲ್ವೆ, ಸ್ವಲ್ಪ ರಕ್ತ ಹೋಗಿದೆ ಅಷ್ಟೇ, ಆ ಭಯಕ್ಕೆ ಮೂರ್ಚೆ ತಪ್ಪಿದಿಯಾ ಅಂತೆ ಡಾಕ್ಟರ್ ಹೇಳಿದ್ರು” ಎನ್ನುತ್ತಾ ಸೂರ್ಯ ನಕ್ಕಾಗ ಉಳಿದವರೂ ನಕ್ಕರು. “ನೀವೆಲ್ಲಾ” ನಾನೆಂದಾಗ ಸೂರ್ಯನೇ ಮಾತು ಮುಂದುವರೆಸಿ “ನೀನು ಪ್ರಶಸ್ತಿ ಸ್ವೀಕಾರ ಮಾಡೋದನ್ನು ಎಲ್ಲರೂ ನೋಡ್ಲಿ ಅಂತ ಕರ್ಕೊಂಡ್ ಬಂದಿದ್ದೆ. ನಾವು ಬರೋಷ್ಟರಲ್ಲಿ ನೀನೋ ಹೊರ್ಗಡೆ ಬಂದು ಈ ಅವಾಂತರ ಮಾಡ್ಕೊಂಡೆ. ಆದ್ರೂ ಒಂದು ಅವಿಸ್ಮರಣೀಯ ಘಟನೆ ನಡೀತು ಗೊತ್ತಾ?” ‘ಏನು? ‘ ಎಂಬಂತೆ ಸನ್ನೆ ಮಾಡಿದೆ. “ನಿನ್ನ ಪ್ರಶಸ್ತಿನಾ ನಿನ್ನ ಅಪ್ಪ, ಅಮ್ಮ ತಗೊಳ್ಳೋ ಹಾಗಾಯ್ತು ” ಅಪ್ಪ ಅಮ್ಮನನ್ನು ದಿಟ್ಟಿಸಿದೆ ಅವರೂ ಹೌದೆಂದರು.
ಎರಡು ವರ್ಷಗಳಲ್ಲಿ ಎಷ್ಟೊಂದು ಬದಲಾವಣೆಗಳಾಗಿದ್ದವು, ಬಾಲ್ಯದ ಗೆಳೆಯರಾದ ವಿವೇಕ್, ತರುಣ್, ಅಭಿ ಎಲ್ಲರೂ ಮದುವೆಯಾಗಿದ್ದರು. ಅವರ ಪತ್ನಿಯರೂ ನನ್ನನ್ನು ನೋಡಲು ಬಂದಿದ್ದರು. ಪೃಥ್ವಿಯೂ ಮದುವೆಯಾಗಿ ಶಿವಮೊಗ್ಗ ಸೇರಿದ್ದಳು. ಮನುವಿಗೂ ನಿಶ್ಚಿತಾರ್ಥವಾಗಿತ್ತು. ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಕೂಡಲೆ ಎಲ್ಲರೂ ಫ್ಲೈಟ್ ಏರಿ ಬೆಂಗಳೂರು ಸೇರಿದ್ದೆವು. ನನ್ನ ಬದುಕಿನ ಕತೆಯನ್ನು ಸೂರ್ಯ ಅದಾಗಲೇ ಎಲ್ಲರಿಗೂ ತಿಳಿಸಿದಿದ್ದ. ಆದ್ದರಿಂದ ಯಾರೂ ನನ್ನನ್ನು ಆ ಕುರಿತು ಕೇಳಲಿಲ್ಲ.
“ನಾನು ಊರಿಗೆ ಹೋಗ್ಬೇಕು ಸೂರ್ಯ” ಹಾಡೊಂದನ್ನು ಗುನುಗುತ್ತಾ ಆಕಾಶ ದಿಟ್ಟಿಸುತ್ತಾ ನಿಂತಿದ್ದ ಸೂರ್ಯನನ್ನು ಕೇಳಿದೆ. “ನಿನ್ನ ಬದುಕು ನಿನ್ನಿಚ್ಛೆ” ಅವನೆಂದಾಗ “ಇಷ್ಟರತನಕ ನಿನ್ನ ಮಾತನ್ನೆ ಕೇಳಿದ್ದು ಅಲ್ವಾ ನಾನು” ಎಂದೆ. “ಹಾಗಾದರೆ ಇನ್ನು ಮುಂದೆನೂ ಕೇಳ್ತೀಯಾ?” ಮತ್ತೆ ಪ್ರಶ್ನೆ ಎಸಗಿದ್ದನವನು. ಅರ್ಥವಾಗದೆ ದಿಟ್ಟಿಸಿದೆ.
“ಪ್ರಕೃತಿ ಈ ಎರಡು ವರ್ಷಗಳಲ್ಲಿ, ಅಂದ್ರೆ ನೀನು ನನ್ನ ಬದುಕಲ್ಲಿ ಬಂದಮೇಲೆ ಜವಾಬ್ದಾರಿ ಅಂದರೆ ಏನೂಂತ ನನಗೆ ಅರ್ಥ ಆಯ್ತು , ಜೀವನ ಅಂದರೆ ಏನೂಂತ ಗೊತ್ತಾಯ್ತು. ಇದಕ್ಕೆ ಕಾರಣ ನೀನು. ಸದಾ ನಂಜೊತೆ ಇರ್ತೀಯಾ?” “ಅಂದರೆ?” ಅವನ ಪ್ರಶ್ನೆಗೆ ನಾನೂ ಮರುಪ್ರಶ್ನೆ ಎಸಗಿದೆ.
“ಪೆದ್ದುಗುಂಡಿ ಅವ ನಿನ್ನನ್ನು ಇಷ್ಟಪಡ್ತಾ ಇದ್ದಾನೆ, ನೀನು ಅವನನ್ನು ಮದುವೆ ಆಗ್ತೀಯಾ?’ ಅಂತ ಹಿಂದಿನಿಂದ ಬಂದ ಅಭಿ, ಜೋರಾಗಿ ನಗುತ್ತಾ ಕೇಳಿದಾಗ ಸೂರ್ಯ ಕಸಿವಿಸಿಗೊಂಡವನಂತೆ ನನ್ನತ್ತ ನೋಡಿದ. ನಾನು ‘ಹೌದೇ’ ಎಂಬಂತೆ ಹುಬ್ಬೇರಿಸಿದೆ. ಅವನು ‘ಹೌದು’ ಎಂಬಂತೆ ಕಣ್ಮುಚ್ಚಿದ. ಮನಸ್ಸಿಗೆ ಖುಷಿಯಾಗಿತ್ತು. ಆದರೆ ಹಿಂದಿನದೆಲ್ಲಾ ನೆನಪಾಗಿ “ಎಲ್ಲಾ ಗೊತ್ತಿದ್ದೂ….” ಏನೋ ಹೇಳ ಹೊರಟವಳನ್ನು ಸೂರ್ಯ ತಡೆದು “ಅಭಿ ಯಾವಾಗ್ಲೂ ಹೇಳೋ ಮಾತನ್ನ ನೆನಪ್ ಮಾಡ್ಕೊ… ನಿನ್ನೆ ನಿನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ? ನಿನ್ನೆದೆಲ್ಲಾ ಬಿಟ್ಹಾಕು, ಇನ್ಮುಂದೆ ನನ್ ಜೊತೆ ನನ್ನ ಹೆಂಡ್ತಿಯಾಗಿ ಇರ್ತೀಯಾ?” ಎಂದಾಗ ಅಭಿಯೂ ದನಿಗೂಡಿಸಿ “ಒಪ್ಪಿಕೋ ಪುಟ್ಟಿ” ಎಂದ. ನಾನು ಸೂರ್ಯನತ್ತ ನೋಡಿ ತುಟಿಯರಳಿಸಿ ನಕ್ಕೆ. ಅವನ ಕಂಗಳು ಅರಳಿದವು.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…