ಸರಳಾ ಒಬ್ಬ ಮಧ್ಯ ವಯಸ್ಸಿನ ಗೃಹಿಣಿ. ಗಂಡ ರೋಷನ್ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ . ಮಗ ಮಗಳು ಇಬ್ಬರೂ ಕಾಲೇಜು ಓದುತ್ತಿದ್ದರು . ಸುಖೀ ಸಂಸಾರ
ಬೆಳಗ್ಗೆಯೆಲ್ಲ ಸರಳಾಗೆ ಮನೆ ಕೆಲಸದಲ್ಲಿ ಬಿಡುವೇ ಇರುತ್ತಿರಲಿಲ್ಲ . ಮಕ್ಕಳಿಬ್ಬರೂ ತಿಂಡಿ ತಿಂದು ಕಾಲೇಜಿಗೆ ಹೋಗಿ ಗಂಡನಿಗೆ ಊಟ ಕಟ್ಟಿಕೊಟ್ಟು ಕಳುಹಿಸುವಷ್ಟರಲ್ಲಿ ಸಮಯ ಕಳೆದು ಹೋಗುತ್ತಿತ್ತು . ಆದರೂ ಸರಳ ಆಯಾಸ ತೋರಗೊಡದೆ ಮೆಲು ದನಿಯಲ್ಲಿ ಹಾಡು ಗುನುಗುತ್ತ ಮನೆಯನ್ನು ಓರಣಗೊಳಿಸಿ ಮನೆಯವರೆಲ್ಲಾ ಸಂಜೆ ಬರುವಷ್ಟರಲ್ಲಿ ತಿಂಡಿ ಮಾಡಲು ತಯಾರಾಗುತ್ತಿದ್ದಳು . ಹೀಗೆ ಜೀವನ ಬಂಡಿ ಸಾಗುತ್ತಿತ್ತು .
ಇತ್ತೀಚಿಗೆ ಸರಳಾಗೆ ಮನೆಗೆಲಸ ಮಾಡುವಾಗ ವಿಪರೀತ ಆಯಾಸವಾಗುತ್ತಿತ್ತು . ತಲೆಸುತ್ತಿದ ಅನುಭವ ಹಾಗೂ ಕೆಲವೊಮ್ಮೆ ವಾಂತಿ ಆಗುತ್ತಿತ್ತು . ಪರಿಚಯವಿದ್ದ ವೈದ್ಯರಿಗೆ ತೋರಿಸಿ ಹಲವು ಪರೀಕ್ಷೆಗಳನ್ನು ಮಾಡಿ ಅದರ ಫಲಿತಾಂಶ ನೋಡಿದಾಗ ರೋಷನ್ ಗೆ ಹಾಗೂ ಮಕ್ಕಳಿಗೆ ಆಘಾತವಾಯಿತು .
ಸರಳಾಗೆ ರಕ್ತದ ಕ್ಯಾನ್ಸರ್ 3 ನೇ ಹಂತಕ್ಕೆ ಕಾಲಿಟ್ಟಿದೆ . ಹೆಚ್ಚು ದಿನ ಬದುಕುವ ಸಂಭವವಿಲ್ಲ ಎಂದು ಡಾಕ್ಟರ್ ಹೇಳಿದರು. ಆದರೆ ರೋಷನ್ ಹಾಗೂ ಮಕ್ಕಳಿಬ್ಬರೂ ಮಾತಾಡಿ ಒಂದು ನಿರ್ಧಾರಕ್ಕೆ ಬಂದು ಸರಳಾಳಿಗೆ ಸತ್ಯ ಹೇಳದೆ ವಿಷಯವನ್ನು ಮರೆಮಾಚಿದರು ಹಾಗೂ ಆಕೆಗೆ ಮನೋಧೈರ್ಯ ತುಂಬುತ್ತ ಔಷಧೋಪಚಾರ ಮಾಡುತ್ತಾ, ಯಾವ ದೊಡ್ಡ ಖಾಯಿಲೆ ಇಲ್ಲ ವೈದ್ಯರ ಸಲಹೆಯಂತೆ ನಡೆದುಕೊಂಡು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡರೆ ಎಲ್ಲವೂ ಸರಿಹೋಗತ್ತದೆ ಭಯಪಡುವ ಅಗತ್ಯವೇ ಇಲ್ಲ ಎಂದು ಸುಳ್ಳು ಹೇಳಿದರು.
ಹಲವು ಉದಾಹರಣೆಗಳನ್ನು ಕೊಟ್ಟು ಮಾರಣಾಂತಿಕ ಖಾಯಿಲೆಗಳಿಂದ ಎದುರಿಸಿ ಬಂದವರ ಕಥೆಗಳನ್ನ ಹೇಳುತ್ತಾ, ಅವೆಲ್ಲದರ ಮುಂದೆ ನಿನಗೆ ಬಂದಿರುವ ಖಾಯಿಲೆ ಏನೂ ಅಲ್ಲ. ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಆದರೆ ಚಿಕಿತ್ಸೆ ಮಾತ್ರ ವೈದ್ಯರು ಹೇಳಿದ್ದರಿಂದ ಮಾಡಲೇ ಬೇಕು ಎಂದೆಲ್ಲಾ ಹೇಳಿ ತಮ್ಮ ಪಾಲಿನ ಎಲ್ಲಾ ಕೆಲಸಗಳನ್ನು ತಾವೇ ಮಾಡುತ್ತಿದ್ದರು . ತನ್ಮೂಲಕ ಸರಳಾಳನ್ನು ಸದಾ ಖುಷಿಯಾಗಿ ಆತಂಕಕ್ಕೆ ಈಡಾಗದಂತೆ ನೋಡಿಕೊಳ್ಳುತ್ತಿದ್ದರು.
ಇದರಿಂದ ಅವಳು ತನ್ನ ಖಾಯಿಲೆಯ ಬಗ್ಗೆ ಅರಿವೇ ಇಲ್ಲದೆ,ಮಾನಸಿಕವಾಗಿ ಕುಗ್ಗದೆ ಚಿಕಿತ್ಸೆ ತೆಗೆದುಕೊಳ್ಳುತ್ತಾ ಎಂದಿನಂತೆ ಸಹಜ ಜೀವನವನ್ನು ನಡೆಸುತ್ತಿದ್ದಳು.ಯಾವ ಧಾವಂತ ಇಲ್ಲದಿರುವುದರಿಂದ ಅವಳ ದೇಹವು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿತ್ತು.
ಕೊನೆ ಕೊನೆಗೆ ನಾನು ಚೆನ್ನಾಗಿದ್ದೇನೆ ವೈದ್ಯರ ಬಳಿ ಪರೀಕ್ಷಿಸುವ ಅಗತ್ಯ ಇಲ್ಲ ಎಂದು ತನ್ನ ಗಂಡನ ಬಳಿ ಮನವಿ ಮಾಡತೊಡಗಿದಳು ಆದರೆ ಇವಳ ಖಾಯಿಲೆಯ ಅರಿವಿದ್ದ ಅವಳ ಗಂಡ ಸ್ವಲ್ಪ ದಿನದ ಮಟ್ಟಿಗೆ ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು ಎಂದು ಒಪ್ಪಿಸಿದನು.
ಸುಳ್ಳಿಗೆ ಆಯಸ್ಸು ಕಮ್ಮಿ ಅಲ್ಲವೇ ಒಂದಲ್ಲ ಒಂದು ದಿನ ಸತ್ಯ ಹೊರಬಂದೇ ಬರುತ್ತದೆ. ಅದರಲ್ಲಂತೂ ರೋಗಿಗಳ ಬಳಿ ಅವರಿಗೆ ಬಂದಿರುವ ರೋಗವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಾಗುವುದಿಲ್ಲ.
ಹೀಗಿರಲು ಒಂದು ದಿನ ಪರೀಕ್ಷೆಗೆಂದು ಹೋದಾಗ ಒಬ್ಬ ದಾದಿಯು ಮಾತಾಡುತ್ತ ನಿಮ್ಮದು ತುಂಬು ಕುಟುಂಬ , ಮಕ್ಕಳ ಮದುವೆಯನ್ನು ಮಾಡಿ ಮೊಮ್ಮಕ್ಕಳನ್ನು ನೀಡುವ ಭಾಗ್ಯವು ಇದೆಯೋ ಇಲ್ಲವೋ ಎಂದು ಮಾತನಾಡಿದಳು . ನಿಜ ವಿಷಯವನ್ನು ಕೇಳಿದಾಗ ತನ್ನ ಕ್ಯಾನ್ಸರ್ ರೋಗ ಅಂತಿಮ ಹಂತದಲ್ಲಿರುವ ವಿಷಯ ಗೊತ್ತಾಯಿತು . ಮನೆಯವರೆಲ್ಲಾ ತನಗಿರುವ ಖಾಯಿಲೆ ಬಗ್ಗೆ ಸುಳ್ಳು ಹೇಳಿ ಈ ವಿಷಯ ಮುಚ್ಚಿಟ್ಟು ನಾಟಕ ಮಾಡಿದಕ್ಕೆ ಕೋಪ ಬಂದು ಮಕ್ಕಳ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಬಿಡದೆ ಕಾಯುತ್ತಿರುವ ವಿಧಿಯನ್ನು ಹಳಿದಳು .
ವಿಷಯ ತಿಳಿದ ರೋಷನ್ ಮತ್ತು ಮಕ್ಕಳು ಕೊಂಚವೂ ಧೈರ್ಯಗೆಡದೆ ಕ್ಯಾನ್ಸರ್ ರೋಗವನ್ನು ಗೆದ್ದು ಬಂದ ವ್ಯಕ್ತಿಗಳ ಬಗ್ಗೆ ಹೇಳಿದರು . ಹಾಗೆಯೇ ವೈದ್ಯ ಮಿತ್ರರಿಂದ ನೆರವು ತೆಗೆದುಕೊಳ್ಳುತ್ತಾ ಕ್ಯಾನ್ಸರ್ ಗೆದ್ದು ಬರುವ ಬಗೆಗೆ ಚರ್ಚಿಸುತ್ತಿದ್ದರು. ಯೋಗ ಧ್ಯಾನ ಮಂತ್ರಗಳೇ ಮುಖಾಂತರ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕತೆ ತುಂಬಿರುವ ಹಾಗೆ ನೋಡಿಕೊಳ್ಳುತ್ತಿದ್ದರು . ಮನೆಯವರೆಲ್ಲರ ಈ ನೆರವು ಸಹಕಾರ ನೋಡಿ ಸರಳಾಗೂ ತಾನು ಕ್ಯಾನ್ಸರ್ ಗೆಲ್ಲಬಲ್ಲನೆಂಬ ವಿಶ್ವಾಸ ಮೂಡಿತು . ಕೆಲವು ತಿಂಗಳ ಬಳಿಕ ಪರೀಕ್ಷೆಗಳಲ್ಲಿ ವೈದ್ಯರಿಗೇ ಅಚ್ಚರಿಯಾಗುವಂತೆ ಕ್ಯಾನ್ಸರ್ ಗುಣಮುಖವಾಗತೊಡಗಿತ್ತು . ಇದರಿಂದ ಮತ್ತೂ ಉತ್ಸಾಹಗೊಂಡ ಸರಳಾ ತನ್ನ ಉದಾಹರಣೆಯನ್ನೇ ಹೇಳುತ್ತಾ ಕ್ಯಾನ್ಸರ್ ರೋಗಿಗಳ ಮನೋಸ್ಥೈರ್ಯ ಹೆಚ್ಚಿಸುವ ಕೆಲಸಕ್ಕೆ ತೊಡಗಿದಳು . ಹೀಗೆ ಕ್ರಮೇಣ ಕ್ಯಾನ್ಸರ್ ನಿಂದ ಪೂರ್ಣ ಗುಣಮುಖಳಾಗಿ ಈಗ ನಗರದಲ್ಲಿ ಪ್ರಖ್ಯಾತ ಕ್ಯಾನ್ಸರ್ ಸಹಾಯ ಕೇಂದ್ರವನ್ನು ನಡೆಸುವಳಾದಳು . ಹೀಗೆ ಮನೆಯವರ ಮುಚ್ಚಿಟ್ಟ ಸತ್ಯ ಹಾಗೂ ಸಿಹಿಯಾದ ಮಿಥ್ಯವು ಸರಳಾಳನ್ನು ಸಾವಿನ ದವಡೆಯಿಂದ ಪಾರುಮಾಡಿದ್ದಲ್ಲದೆ ತನ್ನಂತೆ ನೂರಾರು ಜನರನ್ನು ಪಾರುಮಾಡುವ ಪುಣ್ಯ ಕಾರ್ಯಕ್ಕೂ ಪ್ರೇರೇಪಣೆ ನೀಡಿತು.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಒಳ್ಳೆಯ ಸಕಾರಾತ್ಮಕ ಸಂದೇಶ ಸಾರುವ ಕಥೆ. ಎಲ್ಲ ಕ್ಯಾನ್ಸರ್ ಮಾತೆಯರು ಸರಳ ಳ ಹಾಗೆ ಭಾಗ್ಯಶಾಲಿಗಳಾಗಿ ರೋಗ ಗೆದ್ದು ಬರಲಿ
ಕಥೆ ಚೆನ್ನಾಗಿ ಮೂಡಿ ಬಂದಿದೆ. ಮನುಷ್ಯನ ಆತ್ಮಬಲ ಹೆಚ್ಚಾದಂತೆ ಚಿಂತೆ ಚಿತೆಗೆ ಹಾಕಿ
ಚಿಂತನೆಯ ಮೌಲ್ಯ ಹೆಚ್ಚಿಸಿಕೊಂಡಾಗ ಕೆಲುವೊಮ್ಮೆ
ಜೀವನದಲ್ಲಿ ಪವಾಡಗಳೆ ಘಟಿಸುತ್ತವೆ.